Saturday, 10th May 2025

Rangaswamy Mookanahally Column: ಇಲ್ಲ ಎನ್ನುವ ಕಲೆಯನ್ನು ಕಲಿಯಬೇಕು !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಯೋಚನೆಗಳು ಮನಸ್ಸಿನಲ್ಲಿ ಮಿಂಚಿನಂತೆ ಹುಟ್ಟಿ ಮಾಯವಾಗಿ ಬಿಡುತ್ತವೆ. ಹೌದು, ಬದುಕಿನಲ್ಲಿ ನಿತ್ಯವೂ ಸಾವಿರಾರು ಆಲೋಚನೆಗಳು ಬರುತ್ತವೆ. ಅವುಗಳಲ್ಲಿ ಒಂದು ಪ್ರತಿಶತವಾದರೂ ಕಾರ್ಯರೂಪಕ್ಕೆ ತರಬಲ್ಲ, ಬದುಕಿನ ದಾರಿಯನ್ನು ಬದಲಿಸಬಲ್ಲ ಯೋಚನೆಗಳಾಗಿರುತ್ತವೆ. ಹೊಸ ಹೊಸ ಆಲೋಚನೆಗಳು ನಮ್ಮ ಮಿದುಳಿನಲ್ಲಿ ಸುರಿಸುತ್ತಲೇ ಇರುವ ಕಾರಣ, ನಿನ್ನೆಯ ಆಲೋಚನೆಗಳು ಸರಿದು ಹೋಗುತ್ತವೆ. ಹೀಗಾಗಿ ಆ ಕ್ಷಣದಲ್ಲಿ ಮೂಡಿದ, ನಮಗೆಅಚ್ಚರಿಯೆನ್ನಿಸಿದ ಕೆಲ ಆಲೋಚನೆಗಳನ್ನು ನಾವು ದಾಖಲಿಸಿಡಬೇಕಾದ ಅವಶ್ಯಕತೆಯಿದೆ. ನೆನಪಿರಲಿ ಬದುಕನ್ನು ಬದಲಿಸಲು ಸಾವಿರ ಯೋಚನೆ ಬೇಕಿಲ್ಲ, ಕೇವಲ ಒಂದು ಸಾಕು.

ನಮ್ಮಲ್ಲಿ ಬಹುತೇಕರಿಗೆ ತಮ್ಮ ಜ್ಞಾಪಕಶಕ್ತಿಯ ಮೇಲೆ ಅಪಾರ ನಂಬಿಕೆ; ಆದರೆ ಒಂದು ದಿನದಲ್ಲಿ ಬರುವ ಆಲೋಚನೆಗಳು, ವಾರ-ತಿಂಗಳು- ವರ್ಷದಲ್ಲಿ ಬಂದುಹೋಗುವ ಆಲೋಚನೆಗಳ ಪಟ್ಟಿ ಮಾಡುತ್ತಾ ಹೋದರೆ ಅವು 50ರಿಂದ 60 ಸಾವಿರ ವಾಗುತ್ತವೆ. ಅವೆಲ್ಲವೂ ಉತ್ತಮವೆಂದೂ, ಬರೆದಿಡಬೇಕಾದವುಗಳೆಂದೂ ಹೇಳುತ್ತಿಲ್ಲ. ಆದರೆ ಅವುಗಳಲ್ಲಿ ಮುಖ್ಯವಾದವು ಕೂಡ ಇತರ ಆಲೋಚನೆಗಳ ಜತೆಗೆ ಮರೆಯಾಗುತ್ತವೆ. ಮರೆಯುವುದು ಮನುಷ್ಯನ ಸಹಜಗುಣ. ಹೀಗಾಗಿ, ನಮಗೆ ಒಂದಷ್ಟು ಅಚ್ಚರಿ ಹುಟ್ಟಿಸಿದ ಯೋಚನೆಗಳನ್ನು ಬರೆದಿಡಬೇಕು. ಯಾವ ಪರಿಸ್ಥಿತಿ ಯಲ್ಲಿ ಮತ್ತು ಯಾವ ಸನ್ನಿವೇಶಕ್ಕೆ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಆಧಾರದ ಮೇಲೆ ಹುಟ್ಟಿದ ಆ ಆಲೋಚನೆಯನ್ನು ಹಾಗೇ ಬರೆದಿಡಬೇಕು.

ಮುಂದೊಂದು ದಿನ ಅದನ್ನು ನೋಡಿದಾಗ ಅದರ ಹುಟ್ಟು ಇತ್ಯಾದಿಗಳ ನೆನಪಾಗುತ್ತದೆ. ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಮೊದಲ ಹೆಜ್ಜೆಯೆಂದರೆ ಯೋಚನೆಗಳನ್ನು, ಕನಸುಗಳನ್ನು ದಾಖಲಿಸಿಡುವುದು.

People with clear, written goals, accomplish far more in a shorter period of time than people without
them could ever imagine ಎನ್ನುತ್ತಾರೆ ಕೆನಡಿಯನ್ ಅಮೆರಿಕನ್ ಮೋಟಿವೇಶನಲ್ ಬರಹಗಾರ ಬ್ರಿಯಾನ್ ಟ್ರೇಸಿ. ಅಂದರೆ, ಯಾರೆಲ್ಲಾ ತಮ್ಮ ಕನಸುಗಳನ್ನು, ಯೋಚನೆಗಳನ್ನು, ಗುರಿಯನ್ನು ಬರೆದಿಟ್ಟುಕೊಳ್ಳುತ್ತಾರೋ ಅವರು ಅಲ್ಪಾವಧಿಯಲ್ಲಿ ಸಾಧಿಸುವ ಕೆಲಸವನ್ನು ಬೇರೆ ಯವರು ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರ್ಥ. ನಮಗೇನು ಬೇಕು ಎನ್ನುವುದನ್ನು ಬರೆದಿಟ್ಟುಕೊಳ್ಳುವುದು ಅತಿಮುಖ್ಯ. ಹೀಗೆ ನಮ್ಮ ಯೋಚನೆ, ಗುರಿಗಳನ್ನು ಬರೆದಿಟ್ಟುಕೊಳ್ಳುವುದು ಮುಖ್ಯ ಎನ್ನುವುದಕ್ಕೆ ಮುಂದೆ ನೀಡಲಾಗಿರುವ ಕಾರಣಗಳು ಇನ್ನಷ್ಟು ಪುಷ್ಟಿ ನೀಡುತ್ತವೆ: ನಿಮ್ಮಲ್ಲಿ ಬಂದಿರಬಹುದಾದ ೫೦-೬೦ ಸಾವಿರ ಆಲೋಚನೆಗಳಲ್ಲಿ ಕೆಲವೇ ಕೆಲವು ಬರವಣಿಗೆಯ ರೂಪದಲ್ಲಿವೆ ಎಂದರೆ, ಅವು ಬಹಳ ಮುಖ್ಯವಾದವು ಎನ್ನುವುದು ಎಷ್ಟೇ ಸಮಯದ ನಂತರ ಕೂಡ ಅದನ್ನು ಅವಲೋಕಿಸಿದಾಗ ಗೊತ್ತಾಗುತ್ತದೆ.

ಹೀಗೆ ಬರೆದಿಟ್ಟುಕೊಂಡ ಚಿಂತನೆಗಳಲ್ಲಿ ಬದುಕನ್ನು ಬದಲಿಸಬಲ್ಲ ಶಕ್ತಿಯಿದೆ ಎನ್ನುವ ನಂಬಿಕೆಯು ಅದನ್ನು ಬರೆಯುವಾಗ ನಿಮ್ಮಲ್ಲಿತ್ತು ಎನ್ನುವುದು ಗೊತ್ತಾಗುತ್ತದೆ. ಇದರರ್ಥ, ನಿಜಕ್ಕೂ ಅವುಗಳನ್ನು ಕಾರ್ಯರೂಪಕ್ಕೆ ತಂದರೆ ಬದುಕು ಬದಲಾಗಬಲ್ಲದು.

ಹೀಗೆ ಬರೆದಿಟ್ಟಿರುವ ಆಲೋಚನೆಗಳನ್ನು ಒಂದಷ್ಟು ಸಮಯದ ನಂತರ ಅವಲೋಕಿಸು ವುದರಿಂದ, ಅವುಗಳಲ್ಲಿ ಯಾವುದು ಉತ್ತಮ
ಎನ್ನುವುದನ್ನು ನಿರ್ಧರಿಸಬಹುದು. ಮನಸ್ಸಿನಲ್ಲಿ ಆಲೋಚನೆಗಳು ಬದಲಾಗುತ್ತಿರುತ್ತವೆ; ಬರೆದಿಟ್ಟ ಆಲೋಚನೆಗಳು ನಮ್ಮ ಗುರಿಯ
ಬಗ್ಗೆ ಪದೇಪದೆ ನಮ್ಮನ್ನು ಎಚ್ಚರಿಸುತ್ತವೆ. ನಾವು ಆಯ್ಕೆಮಾಡಿಕೊಂಡ ಗುರಿ, ಆಲೋಚನೆಯ ಮೇಲೆ ಪೂರ್ಣಪ್ರಮಾಣದ ಗಮನ ಹರಿಸಲು ಕೂಡ ಇದು ಸಹಾಯಕ.

‘ಹತ್ತು ಬಾರಿ ಓದುವುದಕ್ಕಿಂತ ಒಂದು ಬಾರಿ ಬರೆಯುವುದು ಮೇಲು’ ಎನ್ನುವ ಮಾತನ್ನು ನಾವೆಲ್ಲಾ ಚಿಕ್ಕವರಿದ್ದಾಗ ಕೇಳಿಕೊಂಡು ಬೆಳೆದಿದ್ದೇವೆ,
ಅಲ್ಲವೇ? ಆ ಸೂತ್ರ ಇಲ್ಲಿಯೂ ಲಾಗೂ ಆಗುತ್ತದೆ. ಮನಸ್ಸಿನ ಭಾವನೆಯನ್ನು, ಚಿಂತನೆಯನ್ನು ಬರೆದಿಡುವುದರಿಂದ ಅದು ನಮ್ಮ ಸುಪ್ತಮನಸ್ಸಿ ನಲ್ಲಿ ದಾಖಲಾಗುತ್ತದೆ. ಮೇಲ್ನೋಟಕ್ಕೆ ನಾವು ಕೇವಲ ಕಾಗದದ ಮೇಲೆ ಬರೆದಿದ್ದೇವೆ ಅನ್ನಿಸುತ್ತದೆ, ಆದರೆ ನಾವು ಅದನ್ನು ನಮ್ಮ ಮನಸ್ಸಿನ ಆಳಕ್ಕೆ ಇಳಿಸಿರುತ್ತೇವೆ. ಹೀಗಾಗಿ ಬರೆಯಬೇಕು, ಬರೆದದ್ದು ಉಳಿದುಕೊಳ್ಳುತ್ತದೆ.

A dream written down with a date becomes a GOAL ಎನ್ನುವ ಮಾತಿದೆ. ನಾವು ಕೇವಲ ಬರೆದಿಟ್ಟರೆ ಸಾಲದು, ಅದನ್ನು ಎಷ್ಟು ದಿನದಲ್ಲಿ, ತಿಂಗಳಲ್ಲಿ ಅಥವಾ ವರ್ಷದಲ್ಲಿ ಸಾಕಾರಗೊಳಿಸುವ ಇರಾದೆಯಿದೆ ಎಂಬುದನ್ನೂ ಬರೆದಿಟ್ಟುಕೊಳ್ಳಬೇಕಾಗುತ್ತದೆ. ಹೀಗೆ ನಮಗೆ ನಾವು ಡೆಡ್‌ಲೈನ್ ಹಾಕಿಕೊಳ್ಳದಿದ್ದರೆ, ನಮ್ಮ ಕನಸುಗಳು ಕೇವಲ ಕನಸುಗಳಾಗಿಯೇ ಉಳಿದುಕೊಳ್ಳುತ್ತವೆ. ನಾವು ಎಷ್ಟೇ ದೊಡ್ಡ ಕನಸು ಕಾಣಲಿ ಅವೆಲ್ಲವೂ ಸಾಧ್ಯವಾಗುತ್ತವೆ. ದೊಡ್ಡ ಕನಸುಗಳನ್ನು ಸಣ್ಣ ಪುಟ್ಟ ಕನಸುಗಳಾಗಿ, ಸಾಧಿಸಲು ಅನುಕೂಲವಾಗುವಂತೆ ವಿಭಜಿಸಿಕೊಳ್ಳಬೇಕು. ಆಗ ಎಲ್ಲವೂ ಸುಲಭವಾಗುತ್ತವೆ. ಉದಾಹರಣೆಗೆ, ಮುಂದಿನ 10 ವರ್ಷದಲ್ಲಿ ಏನಾಗಿರಬೇಕು ಎನ್ನುವುದು ದೊಡ್ಡ ಕನಸು, 10 ವರ್ಷದಲ್ಲಿ ಆಗುವ ಬದಲಾವಣೆಯನ್ನು ನಾವು ಇಂದೇ ಊಹಿಸಲು ಕೂಡ ಅಸಾಧ್ಯ. ಹೀಗಾಗಿ ಮುಖ್ಯ ಗುರಿಯನ್ನು ಇಟ್ಟುಕೊಂಡು ವಾರ್ಷಿಕ ಯೋಜನೆಗಳನ್ನು ಹಾಕಿ ಕೊಳ್ಳಬೇಕು. ಅವುಗಳನ್ನು ಮಾಸಿಕ ಯೋಜನೆಗಳ ಅಡಿಯಲ್ಲಿ ಸಾಕಾರಗೊಳಿಸುತ್ತ ಹೋಗಬೇಕು. ಆಗ ದಶಕದಲ್ಲಿ ಏನಾಗಬೇಕು ಎಂದು ನಾವು ಅಂದು ಕೊಂಡಿರುತ್ತೇವೋ ಅದು ಖಂಡಿತ ಆಗಿರುತ್ತದೆ. ಬರೆಯುವುದು ಉತ್ತಮ ಅಭ್ಯಾಸ, ನಮ್ಮ ಗುರಿಗಳನ್ನು ಸರಳವಾಗಿ ಬರೆದಿಟ್ಟುಕೊಳ್ಳ ಬೇಕು.

ದೀರ್ಘಕಾಲದ ಗುರಿಗಳನ್ನು, ಸಾಧಿಸಲು ಸಾಧ್ಯವಾಗುವಂಥ ಸಣ್ಣಪುಟ್ಟ ಅಲ್ಪಾವಽ ಗುರಿಗಳನ್ನಾಗಿ ಮಾರ್ಪಡಿಸಿ ಬರೆದಿಟ್ಟುಕೊಳ್ಳಬೇಕು. ಗುರಿಗಳ
ಪಟ್ಟಿಯನ್ನು ನಿತ್ಯವೂ ನೋಡುತ್ತಿರಬೇಕು. ನಾವು ಸದಾ ಏನನ್ನು ಧ್ಯಾನಿಸುತ್ತೇವೋ ಅದೇ ಆಗುತ್ತೇವೆ. ಬರೆದದ್ದು ಹಾಳೆಯ ಮೇಲಾದರೂ ಪರಿಣಾಮ ಆಗುವುದು ಮನಸ್ಸಿನಲ್ಲಿ!

ಮನುಷ್ಯ ಸಂಘಜೀವಿ, ಆತ ಒಂಟಿ ಇರಲಾರ. ಕೊನೇಪಕ್ಷ ಕಿತ್ತಾಡಲಾದರೂ ಜನ ಬೇಕಲ್ಲ! ಹೀಗಾಗಿ ಅವನು ಸಂಘಜೀವಿ. ಈ ರೀತಿ ಸಮುದಾಯದಲ್ಲಿ ಬದುಕುವುದನ್ನು ಮನುಷ್ಯ ಬಹಳ ಬೇಗ ಕಲಿತ, ಆದರೆ ಸಹಜೀವಿಗಳೊಂದಿಗೆ ವ್ಯವಹರಿಸುವ ರೀತಿಯನ್ನು ಇನ್ನೂ ಕಲಿಯುತ್ತಲೇ ಇದ್ದಾನೆ, ಕಲಿಯುವ ಹಂತದಲ್ಲಿ ಎಡವುತ್ತಲೇ ಇದ್ದಾನೆ. ತನ್ನ ಬಹುತೇಕ ಸಮಸ್ಯೆಗಳಿಗೆ ಆತನ ಈ ಗುಣವೇ ಕಾರಣ. ಕೈಲಾ
ಗದಕ್ಕೆ ಒಪ್ಪಿಕೊಳ್ಳುವುದು, ದಾಕ್ಷಿಣ್ಯಕ್ಕೆ ಕಟ್ಟುಬಿದ್ದು, ಅವರಿವರು ಏನಂದುಕೊಂಡಾರು ಎನ್ನುವ ಭಯದಿಂದ, ಮುಕ್ಕಾಲು ಪಾಲು ತನಗಿಷ್ಟ ವಿಲ್ಲದಿದ್ದರೂ ‘ನೋ’, ‘ಸಾಧ್ಯವಿಲ್ಲ’ ಎನ್ನುವ ಕಡೆ, ‘ಯಸ್’, ‘ಆಗಲಿ’ ಎನ್ನುವ ಮಾತುಗಳನ್ನು ಆಡುತ್ತಾನೆ.

ಇದು ಎಂದಿಗೂ ನೋವು ಕೊಡುತ್ತದೆ. ‘ಸಾಧ್ಯವಿಲ್ಲ’, ‘ಬೇಡ’, ‘ನೋ’, ‘ನನ್ನ ಕೈಲಿ ಆಗುವುದಿಲ್ಲ’ ಎನ್ನುವ ಋಣಾತ್ಮಕ ಮಾತುಗಳನ್ನು ಆಡುವಾಗ
ಬಹಳ ಎಚ್ಚರಿಕೆಯನ್ನು ವಹಿಸಬೇಕು. ನಾವು ಇಂಥ ಮಾತುಗಳನ್ನು ಯಾರಿಗೆ ಹೇಳುತ್ತೇವೋ, ಅವರಿಗೆ ಯಾವುದೇ ರೀತಿಯ ನೋವು ಆಗದಂತೆ ಈ ಮಾತುಗಳನ್ನು ಹೇಳಬೇಕಾಗುತ್ತದೆ. ‘ಇಲ್ಲ, ಕ್ಷಮೆ ಯಿರಲಿ’ ಎನ್ನುವ ಪದಗುಚ್ಛವನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಇಲ್ಲವೆನ್ನುವುದನ್ನು ಸರಿಯಾಗಿ ಹೇಳುವುದು ಒಂದು ಕಲೆ, ಆ ಕಲೆಯನ್ನು ನಾವೆಲ್ಲರೂ ಕಲಿಯಬೇಕಿದೆ.

“I don’t know the key to success, but the key to failure is trying to please everybody” ಎಂದಿದ್ದಾರೆ ಆಫ್ರಿಕನ್ ಅಮೆರಿಕನ್ ನಟ, ಕಾಮಿಡಿಯನ್ ಬಿಲ್ ಕೊಸ್ಬೈ. ಅಂದರೆ, ‘ನನಗೆ ಯಶಸ್ಸಿನ ಕೀಲಿಕೈ ಎಲ್ಲಿದೆ ಎನ್ನುವುದು ಗೊತ್ತಿಲ್ಲ, ಆದರೆ ಸೋಲಿನ ಮೂಲವೆಲ್ಲಿದೆ ಎನ್ನುವುದು ಚೆನ್ನಾಗಿ ಗೊತ್ತಿದೆ; ಎಲ್ಲರನ್ನೂ ಮೆಚ್ಚಿಸಬೇಕು ಎನ್ನುವುದು ಸೋಲಿಗೆ ಕಾರಣ’ ಎನ್ನುತ್ತಾರೆ. ಕೆಲವೊಮ್ಮೆ ನಾವು, ‘ಕ್ಷಮಿಸಿ, ಸಾಧ್ಯವಿಲ್ಲ’ ಎನ್ನುವ ಮಾತನ್ನು ಹೇಳುವುದರಿಂದ, ಒಂದು ವರ್ಗದ ಜನರ ಮನಸ್ಸಿನಲ್ಲಿ ನಾವು ಕೆಟ್ಟವರಾಗಬಹುದು. ಅದು ಸಹಜ. ‘ಜನರನ್ನು ಮೆಚ್ಚಿಸಲು ಜನಾರ್ದನ ನಿಂದಲೂ (ಅಂದರೆ ಭಗವಂತನಿಂದಲೂ) ಸಾಧ್ಯವಿಲ್ಲ’ ಎನ್ನುವ ಮಾತಿದೆ. ಹೀಗಾಗಿ ಯಾವಾಗ ‘ನೋ’ ಎನ್ನಬೇಕೋ ಆ ಸಂದರ್ಭದಲ್ಲಿ ‘ನೋ’ ಹೇಳುವುದು ಒಳ್ಳೆಯದು.

ನೀವು ಯಾವಾಗ ಕೆಲವು ವಿಷಯಗಳಿಗೆ ‘ನೋ’ ಎನ್ನುತ್ತೀರಿ, ಆಗ ನಿಮಗೆ ನೀವು ‘ಯಸ್’ ಎಂದು ಹೇಳಿಕೊಳ್ಳುತ್ತಿದ್ದೀರಿ ಎಂದರ್ಥ. ಗಮನಿಸಿ ನೋಡಿ, ‘ನೋ’ ಎನ್ನುವ ಕಡೆ ‘ಯಸ್’ ಎಂದರೆ ಮೊದಲಿಗೆ ನಿಮಗಿಷ್ಟವಿಲ್ಲದ ಕೆಲಸ ಮಾಡಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ನಿಮ್ಮಿಂದ ‘ಯಸ್’ ಪಡೆದು ಕೊಂಡವರು ಕೂಡ ನಿಮ್ಮ ಶಕ್ತಿಯ ಬಳಕೆಯನ್ನು ಪೂರ್ಣವಾಗಿ ಮಾಡಿಕೊಳ್ಳಲಾಗುವುದಿಲ್ಲ. ಹೀಗಾಗಿ ಫಲಿತಾಂಶ ಎಂದಿಗೂ ಪರಿಪೂರ್ಣವಾಗಿರುವುದಿಲ್ಲ. ಇಬ್ಬರಿಗೂ ಇದರಿಂದ ಸಮಯ ವ್ಯರ್ಥ.

ಅದು ನಾನು ಸ್ಪೇನ್ ದೇಶದ ಬಾರ್ಸಿಲೋನಾ ನಗರದಲ್ಲಿ ಕೆಲಸ ಮಾಡುತ್ತಿದ್ದ ಮೊದಲ ದಿನಗಳು. ಅಲ್ಲಿನ ಜನ, ಸಂಸ್ಕೃತಿಯ ಜತೆಗೆ ಹೊಂದಿಕೊಳ್ಳಬೇಕಾದ ಅವಶ್ಯಕತೆ ನನಗೆ ಹೆಚ್ಚಾಗಿತ್ತು. ಅದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು. ಆಗ ನನಗಿನ್ನೂ ಕೇವಲ 23ರ ಹರೆಯ. ಆಗಿನ್ನೂ ‘ನೋ’ ಹೇಳುವುದನ್ನು ಕಲಿತಿರಲಿಲ್ಲ. ಸಹೋದ್ಯೋಗಿಗಳು ಕೇಳುವ ಎಲ್ಲಕ್ಕೂ ನನ್ನ ಉತ್ತರ ‘ಯಸ್’ ಆಗಿರುತ್ತಿತ್ತು. ಇದರಿಂದ ನನ್ನ ಮೇಲೆ ಒತ್ತಡ ಹೆಚ್ಚಾಗುತ್ತಾ ಹೋಯಿತು. ಕೊನೆಗೊಂದು ದಿನ, ‘ನೋ’ ಎನ್ನುವುದನ್ನು ಕಲಿಯದಿದ್ದರೆ ನನಗೇ ನಷ್ಟ ಎನ್ನುವುದು
ತಿಳಿಯಿತು.

ಏಕೆಂದರೆ, ಎಲ್ಲರಿಗೂ ‘ಯಸ್’ ಹೇಳುತ್ತಾ ಅದನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ; ಹೀಗಾಗಿ ಒಂದಲ್ಲಾ ಒಂದು ದಿನ ಅವರು ಬೇಸರ
ಮಾಡಿಕೊಳ್ಳುವುದು ಸಹಜ. ಆ ದಿನ ಬೇಗ ಬಂದೇ ಬರುತ್ತದೆ. ಹೀಗಾಗಿ ನಯವಾಗಿ, “ಸಾರಿ, ಇದು ನನ್ನಿಂದ ಸಾಧ್ಯವಿಲ್ಲ” ಎನ್ನುವುದನ್ನು ಕಲಿತೆ. ನನ್ನ ಅಚ್ಚರಿಗೆ, ಅವರಾರೂ ನನ್ನ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ, ಬದಲಿಗೆ ನನ್ನ ನಿಲುವನ್ನು ಒಪ್ಪಿಕೊಂಡರು. ಇದರಿಂದ ಕಲಿತ ಪಾಠವೆಂದರೆ, ‘ಅವರಿವರು ಏನಂದುಕೊಂಡಾರು?’ ಎನ್ನುವ ಊಹಾಲೋಕದಲ್ಲಿ ನಾವು ಇರುತ್ತೇವೆ. ಯಾರಿಗೂ ನಮ್ಮ ಬಗ್ಗೆ ಹೆಚ್ಚು ಮಾತನಾಡುತ್ತ ಕುಳಿತುಕೊಳ್ಳಲು ಸಮಯವಿಲ್ಲ. ಇನ್ನೊಂದು ವಿಷಯ, ವ್ಯಕ್ತಿ ಸಿಕ್ಕ ನಂತರ ಅಲ್ಲಿಗೆ ಶಿಫ್ಟ್ ಆಗಿಬಿಡುತ್ತಾರೆ. ಹೀಗಾಗಿ‌ ನಮಗನ್ನಿಸಿದ್ದನ್ನು ಹೇಳಲು ಸಂಕೋಚ ಎಂದಿಗೂ ಅಡ್ಡಿ ಬರಬಾರದು. ನಾವು ಇಲ್ಲಿರುವುದು ನಮ್ಮ ಬದುಕನ್ನು ಬದುಕಲು, ಬೇರೆಯವರ ಬದುಕನ್ನು ಬದುಕಲು ಅಲ್ಲ. ‘ಗುಂಪಿನಲ್ಲಿ ಗೋವಿಂದ’ ಎನ್ನುವ ಬುದ್ಧಿಯಿಂದ ನಾವು ಹೊರಬರಬೇಕು. ನಮ್ಮತನ ವನ್ನು ಬೆಳೆಸಿಕೊಳ್ಳಬೇಕು. ಸದಾ ‘ಯಸ್ ಮ್ಯಾನ್’
ಆಗಿರುವುದು, ನಾವು ಬೇರೆಯವರಿಗಿಂತ ನಮಗೆ ಮಾಡಿಕೊಳ್ಳುವ ಮಹಾಮೋಸ. ಹಾಗೆಂದು ಸದಾ ‘ನೋ’ ಹೇಳಬೇಕಂತಲ್ಲ. ಬದುಕಿನಲ್ಲಿ ಆದ್ಯತೆಗಳ ಪಟ್ಟಿಮಾಡಿಕೊಂಡಿದ್ದಾಗ, ಯಾವುದಕ್ಕೆ ‘ಯಸ್’ ಎನ್ನಬೇಕು, ಯಾವುದಕ್ಕೆ ‘ನೋ’ ಎನ್ನಬೇಕು ಎಂಬುದರ ಅರಿವು ನಮಗಾಗುತ್ತದೆ.
‘ನೋ’ ಹೇಳಬೇಕಾದ ಸನ್ನಿವೇಶದಲ್ಲಿ ಸಂಕೋಚ ಬೇಡ.

‘ನೋ’ ಎನ್ನುವುದರಿಂದ ಸಮಯ, ಶಕ್ತಿ ಎರಡೂ ಉಳಿತಾಯವಾಗುತ್ತದೆ. ಜತೆಗೆ ನಿಮ್ಮ ನಿಲುವನ್ನು ಒಪ್ಪುವವರು ಸದಾ ನಿಮ್ಮೊಂದಿಗೆ ಇದ್ದೇ
ಇರುತ್ತಾರೆ. ಕೇವಲ ನಿಮ್ಮ ‘ಯಸ್’ನಿಂದ ಉಪಯೋಗ ಪಡೆದುಕೊಂಡು, ನಿಮ್ಮನ್ನು ಬಳಸಿಕೊಳ್ಳಲು ಬಯಸಿದ್ದವರು ನಿಮ್ಮಿಂದ ದೂರವಾಗು
ತ್ತಾರೆ. ಅದು ಒಳ್ಳೆಯದೇ ಅಲ್ಲವೇ? ಹೀಗಾಗಿ, ‘ಯಸ್’ ಮತ್ತು ‘ನೋ’ ಹೇಳುವ ಮುನ್ನ ನಿಖರತೆಯಿರಲಿ, ಹೇಳುವುದನ್ನು ಇತರರಿಗೆ ನೋವಾಗ
ದಂತೆ ಹೇಳುವುದನ್ನು ನಾವು ಕಲಿಯಬೇಕಿದೆ.

ಇದನ್ನೂ ಓದಿ:Rangaswamy Mookanahalli Column


Leave a Reply

Your email address will not be published. Required fields are marked *