Saturday, 10th May 2025

Rajendra Bhat Column: ಪ್ರಕೃತಿಗೆ ಮಾತು ಕೊಟ್ಟ ಕತೆಗಾರ ನಾ ಡಿಸೋಜ

Na D'Souza
rajendra bhat
  • ರಾಜೇಂದ್ರ ಭಟ್ ಕೆ.

Rajendra Bhat Column: ಕನ್ನಡದ ಹಿರಿಯ ಸಾಹಿತಿ ಡಾ. ನಾ. ಡಿಸೋಜ (Na D’Souza– 87) ನಿನ್ನೆ ಸಂಜೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಕನ್ನಡ ಮತ್ತು ಮಾತೃಭಾಷೆಯಾದ ಕೊಂಕಣಿಯಲ್ಲಿ ನೂರರಷ್ಟು ಶ್ರೇಷ್ಠ ಕೃತಿಗಳನ್ನು ಶ್ರೀಮಂತವಾಗಿ ಬರೆದವರು ಅವರು. ಒಂದು ಸಣ್ಣ ಗ್ರಾಮದಲ್ಲಿ ಬದುಕಿನ ಉದ್ದಕ್ಕೂ ವಾಸವಾಗಿದ್ದು ಜಾಗತಿಕ ಮಟ್ಟಕ್ಕೆ ಸಂವಾದಿಯಾಗುವ ಹತ್ತಾರು ಮೌಲ್ಯಯುತ ಕಾದಂಬರಿಗಳನ್ನು ಬರೆದದ್ದು ಅವರ ಶ್ರೇಷ್ಠ ಕೊಡುಗೆ ಎಂದು ಖಂಡಿತವಾಗಿ ಹೇಳಬಹುದು.

ಪ್ರಕೃತಿಯ ಹಿನ್ನೆಲೆಯ ಶಕ್ತಿಶಾಲಿ ಕಾದಂಬರಿಗಳು

ವಿಶೇಷವಾಗಿ ಕಾದಂಬರಿಯ ಕ್ಷೇತ್ರವು ಅವರಿಗೆ ಹೃದಯಕ್ಕೆ ಹತ್ತಿರವಾದದ್ದು. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ವಾಸವಿದ್ದು ಅಲ್ಲಿ ಪ್ರಕೃತಿಯಲ್ಲಿ ಆದ ಪಲ್ಲಟಗಳನ್ನು, ಪ್ರಕೃತಿಯ ಮೇಲೆ ಆದ ಆಘಾತಗಳನ್ನು ಕಾದಂಬರಿಗಳ ಮೂಲಕ ಬರೆದು ಸಾತ್ವಿಕ ಪ್ರತಿಭಟನೆ ಮಾಡಿದವರು ಅವರು.

ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ ಹತ್ತಾರು ಗ್ರಾಮಗಳು ಮುಳುಗಡೆಯಾದ ಸಂದರ್ಭದಲ್ಲಿ ಅವರು ಬರೆದದ್ದು ಶ್ರೇಷ್ಟವಾದ ಮುಳುಗಡೆ ಕಾದಂಬರಿ. ಅದು ಹಚ್ಚಿದ ಕ್ರಾಂತಿಯ ಕಿಡಿಯು ಮುಂದೆ ದೊಡ್ಡ ಸಾರ್ವಜನಿಕ ಪ್ರತಿಭಟನೆಗೆ ನಾಂದಿಯಾಯಿತು. ಅದೇ ರೀತಿಯಲ್ಲಿ ಅವರು ಬರೆದ ದ್ವೀಪ ಅವರದೇ ಹಳ್ಳಿಯ ಕಥೆ. ಅದು ಮುಂದೆ ಸಿನೆಮಾವಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು.

ಕಿಚ್ಚು ಹಚ್ಚಿದ ಕಾಡಿನ ಬೆಂಕಿ ಕಾದಂಬರಿ

ಯಾವುದೇ ಸಾಹಿತಿಯು ಸ್ಪರ್ಶಿಸಲು ಹಿಂಜರಿಯುವ ಲೈಂಗಿಕತೆ ಮತ್ತು ಮನೋವಿಜ್ಞಾನಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಅವರು ಬರೆದ ಕಾಡಿನ ಬೆಂಕಿ ಆ ಕಾಲಕ್ಕೆ ತುಂಬಾ ಅಡ್ವಾನ್ಸ್ ಆದ ಕೃತಿ. ಅದು ಸಿನೆಮಾ ಆಗಿ ಕೂಡ ಜನಪ್ರಿಯತೆಯನ್ನು ಪಡೆಯಿತು. ಅವರು ಬರೆದ ಹೆಚ್ಚಿನ ಕಾದಂಬರಿಗಳು ಭಾರತದ ಹಲ ಭಾಷೆಗಳಿಗೆ, ಇಂಗ್ಲಿಷಿಗೆ ಕೂಡ ಅನುವಾದ ಆಗಿವೆ.

ಮರೆಯಲಾಗದ ಮಕ್ಕಳ ನಾಟಕಗಳು

ಅಷ್ಟೇ ಸಲೀಸಾಗಿ ಅವರು ಹಲವು ಮಕ್ಕಳ ನಾಟಕಗಳನ್ನು ಬರೆದಿದ್ದಾರೆ. ಕೊಂಕಣಿ ಕಾದಂಬರಿ ಮತ್ತು ಗೀತೆಗಳನ್ನು ಬರೆದಿದ್ದಾರೆ. ಮಡಿಕೇರಿಯಲ್ಲಿ 2014ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವರ ಸಭಾಧ್ಯಕ್ಷತೆ ಹೆಚ್ಚು ಅರ್ಥಪೂರ್ಣವಾಗಿತ್ತು. ಕನ್ನಡವು ತನ್ನ ಸೋದರ ಭಾಷೆಗಳಾದ ಕೊಂಕಣಿ, ತುಳು, ಕೊಡವ ಭಾಷೆಗಳ ಜೊತೆ ಬೆಳೆಯಬೇಕು ಎಂದು ಅವರು ಹೇಳಿದ್ದು, ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಪರ್ಧಾತ್ಮಕವಾಗಿ ಸರಕಾರವು ಬೆಳೆಸಬೇಕು ಎಂದು ಹೇಳಿದ್ದು ಮರುದಿನ ಎಲ್ಲ ಮಾಧ್ಯಮಗಳಲ್ಲಿ ಹೆಡ್ ಲೈನ್ ಆಗಿದ್ದವು.

ನಾರ್ಬರ್ಟ್ ಮಾಮ್ ತೋರಿದ ಕೊಂಕಣಿ ಪ್ರೀತಿ

ಕಾರ್ಕಳದಲ್ಲಿ ನಡೆದ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣವನ್ನು ಮಾಡಲು ಬಂದದ್ದು, ಸರಸವಾದ ಕೊಂಕಣಿಯಲ್ಲಿ ದೀರ್ಘವಾಗಿ ಮಾತನಾಡಿದ್ದು ನನಗೆ ತುಂಬಾ ಇಷ್ಟವಾಗಿತ್ತು. ಅವರ ಸರಳತೆ, ನೇರ ನುಡಿ, ಕೊಂಕಣಿ ಭಾಷೆಯ ಪ್ರೀತಿಯನ್ನು ನೋಡಿ ಅಚ್ಚರಿ ಆಗಿತ್ತು. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ದೊರೆತಿವೆ.

ಅಂತಹ ಶ್ರೇಷ್ಠ ಸಾಹಿತಿಯು ಇನ್ನಿಲ್ಲ ಅನ್ನುವಾಗ ಕನ್ನಡಿಗರಿಗೆ ನೋವಾಗುತ್ತದೆ, ಕೊಂಕಣಿಗರಿಗೂ ಕೂಡ! ಹೋಗಿ ಬನ್ನಿ ನಾರ್ಬರ್ಟ್ ಮಾಮ್.

Leave a Reply

Your email address will not be published. Required fields are marked *