ಮೂರ್ತಿಪೂಜೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯಾರಿರಬೇಕು ಎಂಬುದನ್ನು ನಿರ್ಧರಿಸಲು ಕಳೆದ ಶುಕ್ರವಾರ ದಿಲ್ಲಿಯಲ್ಲಿ ಮಹತ್ವದ ಸಭೆ ಸೇರಿತ್ತು. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಸಿದ್ದರಾ ಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸಂಪುಟದಲ್ಲಿ ಯಾರು ಯಾರಿಗೆ ಅವಕಾಶ ಕೊಡಬೇಕು? ಯಾರಿಗೆ ಯಾವ ಖಾತೆ ಕೊಡಬೇಕು ಅಂತ ಮಾತುಕತೆ ಶುರುವಾಯಿತು. ಇಂತವರಿಗೆ, ಇಂತಹ ಖಾತೆ ಕೊಡೋಣ ಎಂದು ಸಿದ್ದರಾಮಯ್ಯ ಹೇಳಿದರೆ, ನೋ ನೋ ಇಂತವರನ್ನು ಸೇರಿಸಿಕೊಂಡು ಇಂತಿಂತಹ ಖಾತೆ ಕೊಡೋಣ ಅಂತ ಡಿ.ಕೆ. ಶಿವಕುಮಾರ್ ಪ್ರತಿಪಟ್ಟು ಹಾಕತೊಡಗಿದರು. ಜಮೀರ್ ಅಹ್ಮದ್ ಅವರನ್ನು ಸಂಪುಟಕ್ಕೆ ಸೇರಿಸೋಣ ಅಂತ ಸಿದ್ದರಾಮಯ್ಯ ಹೇಳಿದರೆ, ಬೇಡ, ಅವರ ಬದಲು ಹ್ಯಾರೀಸ್ ಅವರನ್ನು ಕ್ಯಾಬಿನೆಟ್ಟಿಗೆ ಸೇರಿಸೋಣ ಅಂತ ಶಿವಕುಮಾರ್ ಪಟ್ಟು ಹಿಡಿದರು.
ಆದರೆ ಪ್ರತಿ ಪಟ್ಟು ಹಾಕಿದ ಸಿದ್ದರಾಮಯ್ಯ, ಈ ಇಬ್ಬರಲ್ಲಿ ಯಾರ್ರೀ ಮುಸ್ಲಿಂ ಲೀಡರು? ಜಮೀರ್ ಅಹ್ಮದ್ ತಮ್ಮ ಕ್ಷೇತ್ರ ದಲ್ಲಷ್ಟೇ ಅಲ್ಲ, ಕರ್ನಾಟಕದ ನೂರಾ ಹತ್ತು ಕ್ಷೇತ್ರಗಳಿಗೆ ಹೋಗಿ ಕಾಂಗ್ರೆಸ್ ಕ್ಯಾಂಡಿಡೇಟುಗಳ ಗೆಲುವಿಗೆ ಶ್ರಮಿಸಿದ್ದಾರೆ. ಈಗ ಅವರನ್ನು ಬಿಟ್ಟು ಹ್ಯಾರೀಸ್ ಅವರನ್ನು ಸೇರಿಸಕ್ಕಾಗು ತ್ತೇನ್ರಿ ಎಂದಿದ್ದಾರೆ. ಛಲ ಬಿಡದ ಡಿ.ಕೆ. ಶಿವಕುಮಾರ್ ಉಲ್ಟಾ ಹೊಡೆಯ ತೊಡಗಿದಾಗ ಸಿಟ್ಟಿಗೆದ್ದ ಸಿದ್ದರಾಮಯ್ಯ ರಪ್ಪಂತ ಮೇಲೆದ್ದು ನಿಂತುಬಿಟ್ಟರು.
ರೀ, ಶಿವಕುಮಾರ್, ಮುಖ್ಯಮಂತ್ರಿ ನಾನೋ ನೀವೋ? ನಾಳೆ ಸಂಪುಟ ಸಭೆಗಳನ್ನು ಕರೆಯಬೇಕಾಗಿದ್ದು ನಾನೋ ನೀವೋ? ಇವತ್ತು ಯಾರಿಗೆ ಮಂತ್ರಿ ಸ್ಥಾನ ಕೊಡಬೇಕು? ಯಾವ ಖಾತೆ ಕೊಡಬೇಕು ಅಂತ ನಾನು ನಿರ್ಧರಿಸುತ್ತೇನೆ ಅಂತ ಗುಡುಗಿ ದರು. ಆದರೆ ಕಳೆದೊಂದು ವಾರದ ಬೆಳವಣಿಗೆಯಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಸಿದ್ಧರಾಮಯ್ಯ, ನೋ ಮಿಸ್ಟರ್ ವೇಣುಗೋಪಾಲ್, ಸಹಿಸಿಕೊಳ್ಳುತ್ತೇನೆ ಅಂತ ಇಷ್ಟ ಬಂದಂತೆ ಸವಾರಿ ಮಾಡುವುದಲ್ಲ, ಈ ಸರ್ಕಾರದಲ್ಲಿ ಮುಖ್ಯಮಂತ್ರಿ ನಾನು, ನನ್ನ ಸಹೋದ್ಯೋಗಿಗಳು ಯಾರು? ಅವರಿಗೆ ಯಾವ ಹೊಣೆಗಾರಿಕೆ ಕೊಡಬೇಕು ಅಂತ ನಿರ್ಧರಿಸ ಬೇಕಾದವನು ನಾನು.
ಇವತ್ತು ಹೈಕಮಾಂಡ್ ಏನು ಹೇಳುತ್ತದೋ ಅದನ್ನು ಕೇಳುವುದು ನನ್ನ ಕರ್ತವ್ಯ. ಅದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ಹೇಳಿದಂತೆ ನಾನು ಸರ್ಕಾರ ನಡೆಸಲು ಸಾಧ್ಯವಾ? ಅಂತ ಕೇಳಿದಾಗ ಸಭೆಯಲ್ಲಿದ್ದವರು ಅರೆಕ್ಷಣ ಸ್ತಬ್ಧರಾದರಂತೆ. ಆದರೆ ಆವೇಶದಲ್ಲಿದ್ದ ಸಿದ್ಧರಾಮಯ್ಯ, ನಾನು ಹೇಳಿದಂತೆ ಮಾಡುವುದಾದರೆ ಮಾಡಿ, ಇಲ್ಲದಿದ್ದರೆ ಶಿವಕುಮಾರ್ ಹೇಳಿದಂತೆ ಮಾಡಿ. ಇಂತಲ್ಲಿ ನನಗೇನು ಕೆಲಸ ಅಂತ ಸಭೆಯಿಂದ ಹೊರಗೆ ಹೊರಟೇ ಬಿಟ್ಟರು.
ಆಗ ಸಭೆಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಅವರೆಲ್ಲ ಸಿದ್ದರಾಮಯ್ಯ ಅವರನ್ನು ಸಮಾಧಾನಿಸಿದ್ದಷ್ಟೇ ಅಲ್ಲ, ಯಾರಿಗೆ ಯಾವ ಖಾತೆ ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಹೀಗಾಗಿ ಸಿದ್ದರಾಮಯ್ಯ ಏನು ಬಯಸು ತ್ತಾರೋ? ಅದೇ ಆಗಲಿ ಅಂತ -ನಲೈಸ್ ಮಾಡಿದರು. ಹೀಗೆ ಸಭೆಯಲ್ಲಿ ಸಿದ್ದರಾಮಯ್ಯ ಮಾಡಿದ ತಾಂಡವ ನೃತ್ಯವನ್ನು ನೋಡಿದ ಡಿ.ಕೆ.ಶಿವಕುಮಾರ್ ಅವರು ಹೊರಗೆ ಬಂದ ಮೇಲೆ ಸಿದ್ರಾಮಯ್ಯ ನವರ ಕೈ ಹಿಡಿದು ಸಾರ್, ಬೆಂಗಳೂರಿಗೆ ಹೋಗಿ ಮೊದಲು ವಿಶ್ರಾಂತಿ ತೆಗೆದುಕೊಂಡು ಬಿಡಿ ಅಂತ ಸಮಾಧಾನಿಸಿದರಂತೆ.
ಮರುದಿನ, ಅಂದರೆ ಮೇ ಇಪ್ಪತ್ತರ ಶನಿವಾರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿದ್ಯುಕ್ತವಾಗಿ ಅಸ್ತಿತ್ವಕ್ಕೆ ಬಂತು.
ಶಾಸಕಾಂಗ ಸಭೆಯಲ್ಲಿ ನಡೆದಿದ್ದೇನು? ಅಂದ ಹಾಗೆ ಮೇ ೧೩ ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ ಬಹುಮತವನ್ನೇನೋ ಪಡೆಯಿತು. ಆದರೆ ಮೇ ೧೪ ರಂದು ಪಕ್ಷದ ಶಾಸಕಾಂಗ ಸಭೆ ಕರೆಯುವ ನಿರ್ಧಾರ ಪ್ರಕಟವಾದ ನಂತರ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ನಡೆದಿದ್ದು ಅಕ್ಷರಶಃ ಜುಗಲ್‌ಬಂಧಿ.
ಮುಖ್ಯಮಂತ್ರಿ ಪಟ್ಟ ತಮಗೆ ಸಿಗಲೇಬೇಕು ಎಂಬ ಹೋರಾಟಕ್ಕಿಳಿದ ಈ ಇಬ್ಬರು ನಾಯಕರು ಭೀಮ-ಧುರ್ಯೋಧನರಂತೆ ಹೋರಾಡಿ ಕಾಂಗ್ರೆಸ್ ಪಾಳಯ ಧೂಳಿನಲ್ಲಿ ಮುಳುಗುವಂತೆ ಮಾಡಿಬಿಟ್ಟರು. ಮೇ ಹದಿನಾಲ್ಕು ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ಶಾಸಕಾಂಗ ಸಭೆಯಲ್ಲಿ, ನಾಯಕನ ಆಯ್ಕೆ ಜವಾಬ್ದಾರಿಯನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಡಲು ನಿರ್ಧರಿಸಲಾಗಿದೆ ಎಂಬ ನಿರ್ಣಯ ಕೈಗೊಂಡು ಅದನ್ನು ಬರಖಾಸ್ತು ಮಾಡಲು ದಿಲ್ಲಿಯಿಂದ ಬಂದ ನಾಯಕರು ನಿರ್ಧರಿಸಿದ್ದರು.
ಹಾಗಂತಲೇ ರಾಜ್ಯದ ಜನರಿಗೆ ಥ್ಯಾಂಕ್ಸ್ ಹೇಳುವ ಠರಾವನ್ನು ಡಿಕೆಶಿ ಮಂಡಿಸಲಿ, ನಾಯಕನ ಆಯ್ಕೆ ಜವಾಬ್ದಾರಿಯನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡುವ ಠರಾವನ್ನು ಸಿದ್ರಾಮಯ್ಯ ಮಂಡಿಸಲಿ ಅಂತ ಪಕ್ಷದ ಉಸ್ತುವಾರಿ ಹೊಣೆ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದ ರಂತೆ. ಅದರನುಸಾರ ಡಿಕೆಶಿ ಮತ್ತು ಸಿದ್ದರಾಮಯ್ಯ ಠರಾವು ಮಂಡಿಸಿದ ನಂತರ ಸಭೆಯಲ್ಲಿದ್ದ ಕೆ.ಸಿ. ವೇಣುಗೋಪಾಲ್ ಅವರು ಇದ್ದಕ್ಕಿದ್ದಂತೆ ಸಭೆಯಲ್ಲಿ ಎಲ್ಲ ಶಾಸಕರ ಅಭಿಪ್ರಾಯ ವನ್ನು ಸಂಗ್ರಹಿಸಲು ಪಕ್ಷ ಸೂಚನೆ ನೀಡಿದೆ ಎಂದು ಬಿಟ್ಟರು.
ಒಂದು ವೇಳೆ ಅವರು ಈ ಮಾತನಾಡದೆ ಇದ್ದರೆ, ಸ್ವತ: ಅವರೇ ಮಂಡಿಸಿದ ಠರಾವನ್ನು ವೀಕ್ಷಕರು ದಿಲ್ಲಿಗೆ ಎತ್ತಿಕೊಂಡು ಹೋಗಿದ್ದರೆ, ಡಿಕೆಶಿ ಮತ್ತಷ್ಟು ಪವರ್ ಫುಲ್ಲಾಗಿ ತಮ್ಮ ಹಕ್ಕನ್ನು ಮಂಡಿಸಬಹುದಿತ್ತು. ಆದರೆ ಯಾವಾಗ ವೇಣುಗೋಪಾಲ್ ಈ ಮಾತು ಹೇಳಿದರೋ? ಆಗ ಸಿದ್ರಾಮಯ್ಯ ಬ್ರಿಗೇಡ್‌ನ ನಾಯಕ ಜಮೀರ್ ಅಹ್ಮದ್ ಮೇಲೆದ್ದು ನಿಂತು ಯೆಸ್ ಸಾರ್, ಯಾರು ಶಾಸಕಾಂಗ ನಾಯಕರಾಗಬೇಕು ಅಂತ ಸಭೆಯಲ್ಲಿ ವೋಟಿಂಗ್ ಆಗಲಿ ಅಂತ ಪಟ್ಟು ಹಿಡಿದರು.
ಈ ಹಂತದಲ್ಲಿ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರು, ವೋಟಿಂಗ್ ಎಲ್ಲ ಬೇಡ. ಹಾಗೇನಾದರೂ ವೋಟಿಂಗ್ ಮಾಡಲು ಹೋದರೆ ಶಾಸಕರಲ್ಲೇ ಭಿನ್ನಾಭಿಪ್ರಾಯ ಬೆಳೆಯುತ್ತದೆ ಎಂದರಾದರೂ ಮಧುಗಿರಿಯ ಕೆ.ಎನ್. ರಾಜಣ್ಣ ಮತ್ತಿತರ ಕೆಲ ಶಾಸಕರು, ಇಲ್ಲ, ಇಲ್ಲ ವೋಟಿಂಗ್ ಆಗಲೇಬೇಕು. ಯಾರಿಗೆ ಹೆಚ್ಚು ಮತ ಬೀಳುತ್ತದೋ? ಅವರು ಶಾಸಕಾಂಗ ನಾಯಕರಾಗಲಿ ಎಂದಾಗ ಸಿದ್ರಾಮಯ್ಯ ಕೂಡ ಎಚ್ಚೆತ್ತುಕೊಂಡು ಬಿಟ್ಟರು. ಹಾಗಂತಲೇ, ಬಹುತೇಕ ಶಾಸಕರು ಹೇಳುವ ಹಾಗೆ ವೋಟಿಂಗ್ ಆಗೇ ಬಿಡಲಿ ಎಂದಾಗ ಆಟ ಬೇರೆ ದಿಕ್ಕಿಗೆ ತಿರುಗಿತು.
ಈ ಹಂತದಲ್ಲಿ ವೋಟಿಂಗ್ ಹೇಗಾಗಬೇಕು ಎಂಬ ಪ್ರಶ್ನೆ ಎದ್ದಾಗ, ಶಾಸಕರ ಕೈಗೆ ವೀಕ್ಷಕರಾದ ಸುಶೀಲ್ ಕುಮಾರ್
ಶಿಂಧೆ ಇನಿಷಿಯಲ್ ಇರುವ ಬಿಳಿ ಹಾಳೆ ಕೊಡಬೇಕು. ಅದರಲ್ಲಿ ಶಾಸಕರು ತಮ್ಮ ಅಭಿಪ್ರಾಯ ತಿಳಿಸಬೇಕು. ಆಗ ಗೊಂದಲಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ ಅಂತ ತೀರ್ಮಾನಿಸಲಾಯಿತು. ಅದರ ಪ್ರಕಾರ, ಶಾಸಕಾಂಗ ನಾಯಕನ ಆಯ್ಕೆಗೆ ಎಲ್ಲರೂ ವೋಟ್ ಮಾಡಿದ ಮೇಲೆ ಸಿದ್ದರಾಮಯ್ಯ ಅವರು ಮತಪತ್ರಗಳ ಬಾಕ್ಸ್ ಅನ್ನು ಇಲ್ಲೇ ಓಪನ್ ಮಾಡಿಬಿಡಿ. ಯಾರು ಬಹುಮತ ಪಡೆದಿದ್ದಾರೆ ಅನ್ನೋದು ಕ್ಲಿಯರ್ ಆಗಿ ಸಭೆಗೆ ಗೊತ್ತಾಗಲಿ ಎಂದರಂತೆ.
ಆದರೆ ತಕ್ಷಣ ಸುರ್ಜೇವಾಲಾ, ನೋ ಸಿದ್ರಾಮಯ್ಯಾಜೀ, ಇದು ಹೈಕಮಾಂಡ್ ಗಮನಕ್ಕೆ ಬಂದ ನಂತರ ಪ್ರಕಟವಾಗ
ಬೇಕಾದ ವಿಷಯ. ಹೀಗಾಗಿ ಇಲ್ಲೇ ಬಾಕ್ಸ್ ಓಪನ್ ಮಾಡಬೇಕು ಅಂತ ಪಟ್ಟು ಹಿಡಿಯಬೇಡಿ ಎಂದರು. ಇದಾದ ನಂತರ ಶಾಸಕಾಂಗ ನಾಯಕನ ಆಯ್ಕೆಯ ವಿಷಯ ಸೀದಾ ದಿಲ್ಲಿಯ ಕಾಂಗ್ರೆಸ್ ವರಿಷ್ಠರನ್ನು ತಲುಪಿತು.
ದಿಲ್ಲಿಯಲ್ಲಿ ನಡೆಯಿತು ಹೈಡ್ರಾಮಾ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ವಿಷಯ ಸೆಟ್ಲ್ ಮಾಡೋಣ ದಿಲ್ಲಿಗೆ ಬನ್ನಿ ಅಂತ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಬುಲಾವ್ ನೀಡಿದರಲ್ಲ? ಈ ಹಂತದಲ್ಲಿ ಸಿದ್ದರಾಮಯ್ಯ ಹೆಚ್ಚು ಯೋಚನೆ ಮಾಡದೆ ದಿಲ್ಲಿಯ ವಿಮಾನ ಹತ್ತಿದರು. ಆ ಕ್ಷಣದಲ್ಲಿ ಅವರ ಅತ್ಯಾಪ್ತ ಶಾಸಕರ ಪಡೆ, ಸಾರ್ ಶಾಸಕಾಂಗ ಸಭೆಯಲ್ಲಿ ನಿಮಗೆ ತೊಂಬತ್ತೈದು ಪ್ಲಸ್ ಶಾಸಕರು ಮತ ಹಾಕಿದ್ದಾರೆ.
ಶಿವಕುಮಾರ್ ಅವರಿಗೆ ಹದಿನೇಳು ವೋಟು ಬಿದ್ದಿದೆ. ಉಳಿದಂತೆ ಹಲವರು ತಟಸ್ಥರಾಗಿದ್ದಾರೆ ಅಂತ ಹೇಳಿತ್ತು. ಹೀಗಾಗಿ ಸಿದ್ದರಾಮಯ್ಯ ನಿರಾಳವಾಗಿ ವಿಮಾನ ಹತ್ತಿ ದಿಲ್ಲಿ ತಲುಪಿದರೆ ಇತ್ತ ಡಿಕೆಶಿ ಮಾತ್ರ, ನಾನು ನಂಬುವ ನೊಣವಿನಕೆರೆ ಅಜ್ಜಯ್ಯ ಅವರನ್ನು ಮೊದಲು ದರ್ಶನ ಮಾಡಿಕೊಂಡು ಬರುತ್ತೇನೆ. ಆನಂತರ ದಿಲ್ಲಿಗೆ ಹೋಗುವ ಬಗ್ಗೆ ಯೋಚಿಸುತ್ತೇನೆ ಎನ್ನತೊಡ
ಗಿದರು. ಕೊನೆಗೊಮ್ಮೆ, ನನಗೆ ಹೊಟ್ಟೆ ನೋವಿದೆ. ಹೀಗಾಗಿ ದಿಲ್ಲಿಗೆ ಇವತ್ತು ಹೋಗುವುದಿಲ್ಲ ಎಂದುಬಿಟ್ಟರು.
ಅಷ್ಟೊತ್ತಿನೊಳಗಾಗಿ ಡಿಕೆಶಿ ಆಪ್ತರ ಪಡೆ, ಸಾಹೇಬರ ಪರವಾಗಿ ಎಪ್ಪತ್ತೆಂಟು ಶಾಸಕರು ವೋಟು ಮಾಡಿದ್ದಾರೆ. ಸಿದ್ದರಾ
ಮಯ್ಯ ಅವರಿಗೆ ನಲವತ್ತು ಪ್ಲಸ್ ಶಾಸಕರಷ್ಟೇ ವೋಟು ಹಾಕಿದ್ದಾರೆ ಅಂತ ಸಂದೇಶ ಪ್ರಸರಿಸತೊಡಗಿದರೂ ನಂಬರ್
ಗೇಮ್‌ನಲ್ಲಿ ಸಿದ್ದರಾಮಯ್ಯ ಮುಂದಿದ್ದಾರೆ ಎಂಬುದು ಅಷ್ಟೊತ್ತಿಗೆ ಸ್ಪಷ್ಟವಾಗಿ ಹೋಗಿತ್ತು. ಹೀಗಾಗಿಯೇ ಡಿ.ಕೆ. ಶಿವಕುಮಾರ್ ಅವರು ಕೂಡ, ನನ್ನ ಜತೆ ಯಾರೂ ಇಲ್ಲ, ಪಕ್ಷದ ನೂರಾ ಮೂವತ್ತೈದು ಶಾಸಕರೂ ನನ್ನವರೇ ಎನ್ನತೊಡಗಿದ್ದು.
ಆದರೆ ಕೊನೆಗೊಮ್ಮೆ ಕೆ.ಸಿ. ವೇಣುಗೋಪಾಲ್ ಅವರು ಫೋನು ಮಾಡಿ, ಶಿವಕುಮಾರ್ ಜೀ ತ್ವರಿತವಾಗಿ ದೆಹಲಿಗೆ ಬನ್ನಿ. ವಿಳಂಬವಾಗುವುದನ್ನು ಮೇಡಂ ಬಯಸುವುದಿಲ್ಲ ಎಂದ ಮೇಲೆ ಸೀದಾ ಎದ್ದು ದಿಲ್ಲಿಗೆ ಹೋದರು. ಹೀಗೆ ದಿಲ್ಲಿ ತಲುಪಿದ ಇಬ್ಬರು ನಾಯಕರ ಪೈಕಿ ಒಬ್ಬರ ಕೈಲಿ ಶಾಸಕ ಬಲವಿದ್ದರೆ, ಮತ್ತೊಬ್ಬರ ಕೈಲಿ ಸೋನಿಯಾರ ವಿಶ್ವಾಸ ಇತ್ತು. ಸೋನಿಯಾರ ವಿಶ್ವಾಸ ಇರುವುದರಿಂದ ಶಾಸಕಾಂಗ ಬಲ ಪರಿಗಣನೆಗೆ ಬಾರದೆ ತಾವೇ ಸಿಎಂ ಹುದ್ದೆಗೆ ಸಹಜ ಆಯ್ಕೆ ಆಗಬಹುದು ಎಂಬುದು ಡಿ.ಕೆ. ಶಿವಕುಮಾರ್ ಅವರ ವಿಶ್ವಾಸವಾಗಿತ್ತು.
ಅಂದ ಹಾಗೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಪಕ್ಷವನ್ನು ಕಟ್ಟಿದ ರೀತಿ ರಿಯಲಿ ಎಕ್ಸಲೆಂಟ್ ಎಂಬುದರಲ್ಲಿ ಎರಡು ಮಾತೇ ಇರಲಿಲ್ಲ. ಮತ್ತು ಇದೇ ಕಾರಣಕ್ಕಾಗಿ ಸೋನಿಯಾಗಾಂಧಿ ಅವರಿಗೆ ಡಿಕೆಶಿ ಪರಮಾಪ್ತರಾಗಿದ್ದಾರೆ ಎಂಬುದೂ ನಿಜವೇ. ಹೀಗಾಗಿ ದಿಲ್ಲಿಗೆ ಬಂದ ಡಿಕೆಶಿ, ತಮಗೆ ಸಿಎಂ ಹುದ್ದೆ ಬೇಕೇ ಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಸಿದ್ರಾಮಯ್ಯ ವಲಸಿಗ ಕಾಂಗ್ರೆಸ್ಸಿಗರು.ನಾನು ಮೂಲ ಕಾಂಗ್ರೆಸ್ಸಿಗ.
ಹೀಗಾಗಿ ನನಗೇ ಅವಕಾಶ ಕೊಡಬೇಕು ಅಂತ ಪಟ್ಟಿನ ಮೇಲೆ ಪಟ್ಟು ಹಾಕುತ್ತಾ ಹೋಗಿ ಸಿದ್ದರಾಮಯ್ಯ ಒಂದರ ಹಿಂದೊಂದ ರಂತೆ ಮುಜುಗರ ಅನುಭವಿಸುವಂತೆ ಮಾಡತೊಡಗಿದರು. ಆದರೆ ಇಷ್ಟೆಲ್ಲದರ ನಡುವೆಯೂ ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ವಿರೋಧಿಸುತ್ತಿರುವ ಶರದ್ ಪವಾರ್, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಎಂ.ಕೆ. ಸ್ಟಾಲಿನ್ ಅವರಂತಹ ನಾಯಕರು ಸಿದ್ದರಾಮಯ್ಯ ಅವರು ಸಿಎಂ ಆಗುವುದನ್ನು ಬಯಸುತ್ತಿದ್ದಾರೆ ಎಂಬುದನ್ನು ಬಲ್ಲ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಅಂತಿಮವಾಗಿ ಸಿದ್ರಾಮಯ್ಯ ಅವರೇ ಸಿಎಂ ಆಗಲಿ ಎಂಬ ತೀರ್ಮಾನಕ್ಕೆ ಬಂದರು.
ಈ ಹಂತದಲ್ಲಿ ಡಿಕೆಶಿ, ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗುವುದಾದರೆ, ಎರಡನೇ ಅವಧಿಯಲ್ಲಿ ನನಗೆ ಅವಕಾಶ ಸಿಗಬೇಕು.ನಾನು ಡಿಸಿಎಂ ಆದರೆ ನನಗೆ ಪವರ್ ಫುಲ್ ಖಾತೆಗಳನ್ನು ಕೊಡಬೇಕು. ಅದೇ ರೀತಿ ಈಗ ರಚನೆಯಾಗುವ ಸಂಪುಟದಲ್ಲಿ ನಾನು ಹೇಳಿದವರಿಗೆ ಅವಕಾಶ ಸಿಗಬೇಕು ಎಂದರಂತೆ. ಇದಕ್ಕೆ ಹೈಕಮಾಂಡ್ ವರಿಷ್ಠರು, ನಿಮ್ಮನ್ನು ಡಿಸಿಎಂ ಮಾಡಿ, ನೀವು ಹೇಳಿದ ಖಾತೆ ಕೊಡುತ್ತೇವೆ. ಭವಿಷ್ಯದಲ್ಲಿ ನೀವು ಸಿಎಂ ಆಗುತ್ತೀರಿ ಅಂತ ಪ್ರಾಮಿಸ್ ಮಾಡುತ್ತೇವೆ ಎಂದಿದ್ದಾರೆ.
ಅವರು ಕೊಟ್ಟ ಈ ಭರವಸೆ ರೆಕ್ಕೆ ಪುಕ್ಕಗಳೊಂದಿಗೆ ಈಗ ವಿಜೃಂಭಿಸುತ್ತಿರುವುದೇನೋ ನಿಜ. ಇದರ ಆಧಾರದ ಮೇಲೆ
ಡಿಕೆಶಿ ಅವರನ್ನು ಸಿದ್ದರಾಮಯ್ಯ ಅವರಿಗೆ ಪರ್ಯಾಯ ಶಕ್ತಿ ಕೇಂದ್ರ ಎಂದು ಪ್ರತಿಷ್ಠಾಪಿಸುವ ಪ್ರಯತ್ನ ಆರಂಭ ವಾಗಿರು
ವುದೂ ನಿಜ. ಆದರೆ ಮೇ ೧೯ ರ ಶುಕ್ರವಾರ ರಾತ್ರಿ ಸಚಿವ ಸಂಪುಟದ ಸ್ವರೂಪವನ್ನು ನಿರ್ಧರಿಸಲು ನಡೆದ ಸಭೆ ಇಂತಹ
ಎಲ್ಲ ಮಾತುಗಳಿಗೆ ಬ್ರೇಕ್ ಹಾಕುವಂತಿದೆ. ಅದೇ ಕಾಲಕ್ಕೆ ರಾಜಕಾರಣದಲ್ಲಿ ಮತ್ತೊಮ್ಮೆ ಹೆಗಡೆ-ದೇವೇ ಗೌಡರ ಎಪಿಸೋಡು ಶುರುವಾಗುವ ಆತಂಕವನ್ನೂ ಸೃಷ್ಟಿಸಿದೆ.