ಪ್ರತಿದೃಷ್ಟಿ
ಪ್ರೊ.ರಾಜಗೋಪಾಲ ನಾಯಕ್
ರಾಜ್ಯದಲ್ಲಿ ಸದೃಢ ಪ್ರಾದೇಶಿಕ ಪಕ್ಷವಿದ್ದರೆ ಕೇಂದ್ರದ ಮೇಲೆ ಪ್ರಭಾವ ಬೀರಿ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳ ಬಹುದು ಎಂಬುದೊಂದು ಗ್ರಹಿಕೆಯಿದೆ. ಆದರೆ ಇದು ಎಲ್ಲ ವೇಳೆಯೂ ಕೈಗೆಟುಕುವ ಕುಸುಮವಲ್ಲ.
ಕರ್ನಾಟಕ ರಾಜ್ಯಕ್ಕೊಂದು ‘ಪ್ರಬಲ- ಪ್ರಭಾವಿ’ ಪ್ರಾದೇಶಿಕ ಪಕ್ಷ ಬೇಕೇ ಬೇಡವೇ? ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವುದಕ್ಕೂ ಮೊದಲು ಅಥವಾ ಈ ಚರ್ಚಾ ವಿಷಯವನ್ನು ವಿಶ್ಲೇಷಿಸುವುದಕ್ಕೂ ಮುನ್ನ, ಪ್ರಾದೇಶಿಕ ಪಕ್ಷಗಳಿಗೆ ಸಂಬಂಧಿಸಿ ನಮ್ಮ ರಾಜ್ಯದ ಜನರು ಇದುವರೆಗೆ ತೋರಿರುವ ಒಲವು- ನಿಲುವಿನ ಕಡೆಗೊಮ್ಮೆ ಪಕ್ಷಿನೋಟ ಬೀರೋಣ… ಅದೇನು ಕಾರಣವೋ ಗೊತ್ತಿಲ್ಲ, ಕರ್ನಾಟಕಕ್ಕೂ ಪ್ರಾದೇಶಿಕ ಪಕ್ಷಗಳಿಗೂ ಆಗಿಬರುತ್ತಿಲ್ಲ.
ಜನತಾದಳದಿಂದ ಉಚ್ಚಾಟನೆಗೊಂಡ ನಂತರ ರಾಮಕೃಷ್ಣ ಹೆಗಡೆಯವರು ಹುಟ್ಟುಹಾಕಿದ ‘ಲೋಕಶಕ್ತಿ’ ಪಕ್ಷ ವಾಗಲೀ, ಎಸ್.ಬಂಗಾರಪ್ಪನವರು ಕಾಂಗ್ರೆಸ್ ನಿಂದ ಸಿಡಿದೆದ್ದು ಜನ್ಮವಿತ್ತ ‘ಕರ್ನಾಟಕ ಕಾಂಗ್ರೆಸ್ ಪಕ್ಷ’ ವಾಗಲೀ, ಯಡಿಯೂರಪ್ಪನವರು ಬಿಜೆಪಿ ಯೊಂದಿಗೆ ಮುನಿಸಿಕೊಂಡು ಶುರುಮಾಡಿದ ‘ಕರ್ನಾಟಕ ಜನತಾ ಪಕ್ಷ’ವಾಗಲೀ, ಉದ್ಯಮಿ ವಿಜಯ ಸಂಕೇಶ್ವರರು ತೊಡೆತಟ್ಟಿ ಪ್ರಾರಂಭಿಸಿದ್ದ ‘ಕನ್ನಡನಾಡು ಪಾರ್ಟಿ’ಯಾಗಲೀ ಹೇಳಿಕೊಳ್ಳುವಂಥ ಸಾಧನೆಯನ್ನು ಮಾಡಲಿಲ್ಲ ಎಂಬುದು ಗೊತ್ತಿರುವಂಥದ್ದೇ. ಚಿತ್ರನಟ ಉಪೇಂದ್ರ ಅವರು ‘ಉತ್ತಮ ಪ್ರಜಾಕೀಯ ಪಾರ್ಟಿ’ ಹೆಸರಲ್ಲಿ ಆಗೊಮ್ಮೆ ಈಗೊಮ್ಮೆ ಕನವರಿಸುತ್ತಾರಾದರೂ ಅದಿನ್ನೂ ನನಸಾಗಿಲ್ಲ.
ಸಾಫ್ಟ್ ವೇರ್ ತಂತ್ರಜ್ಞ ರವಿ ಕೃಷ್ಣಾರೆಡ್ಡಿ ಅವರು ತಮ್ಮ ‘ಕರ್ನಾಟಕ ರಾಷ್ಟ್ರ ಸಮಿತಿ’ ಪಕ್ಷದ ವತಿಯಿಂದ ಒಂದಷ್ಟು ಜನೋಪಯೋಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರಾದರೂ, ಆ ಹೋರಾಟಗಳನ್ನು ರಾಜಕೀಯ
ಅಽಕಾರದ ಸ್ವರೂಪದಲ್ಲಿ ಎನ್‌ಕ್ಯಾಶ್ ಮಾಡಿಕೊಳ್ಳಲು ಅವರಿಗಿನ್ನೂ ಸಾಧ್ಯವಾಗಿಲ್ಲ.
ಸ್ಥೂಲವಾಗಿ ಹೇಳುವುದಾದರೆ, ರಾಷ್ಟ್ರೀಯ ಮಟ್ಟದಲ್ಲಿ ಈಗಿರುವ ‘ಎನ್‌ಡಿಎ’ ಮತ್ತು ‘ಇಂಡಿಯಾ’ ಮೈತ್ರಿಕೂಟಗಳಿಗೆ ಹೊರತಾದ ತೃತೀಯ ರಂಗವೊಂದನ್ನು ಕಟ್ಟಿ ನಿಲ್ಲಿಸುವುದು ಎಷ್ಟು ಹರಸಾಹಸವಾಗಿದೆಯೋ ಕರ್ನಾಟಕದ ಮಟ್ಟಿಗೆ ಪ್ರಾದೇಶಿಕ ಪಕ್ಷಗಳ ಸ್ಥಿತಿಗತಿಯೂ ಬಹುತೇಕ ಹಾಗೇ ಇದೆ. “ಎಷ್ಟೇ ಆಗಲಿ, ನಮ್ಮದು ಪ್ರಾದೇಶಿಕ ಪಕ್ಷ ಸ್ವಾಮೀ” ಎಂದು ಹೇಳಿಕೊಂಡು ಅನುಕೂಲ ಸಿಂಧು ರಾಜಕಾರಣ ಮಾಡಿದವರು ಸರಕಾರದ ರಚನೆಯ ವೇಳೆ ಬಾಹ್ಯ ಬೆಂಬಲದ ರೂಪದ ಅಥವಾ ನೇರವಾಗಿ ತೊಡಗಿಸಿಕೊಳ್ಳುವ ಮೂಲಕವೋ ತಮ್ಮ ಅಸ್ತಿತ್ವಕ್ಕೆ ನೀರೆರೆಸಿ ಕೊಂಡಿರಬಹುದೇ ವಿನಾ, ನನ್ನ ಪ್ರಕಾರ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೇಳಿಕೊಳ್ಳುವಂಥ ಭವಿಷ್ಯವಿಲ್ಲ. ಹಾಗೊಮ್ಮೆ ಇದ್ದಿದ್ದರೆ, ಮೇಲೆ ಉಖಿಸಿದ ಪ್ರಾದೇಶಿಕ ಪಕ್ಷಗಳು ಒಮ್ಮೆಯಾದರೂ (ಸ್ವತಂತ್ರವಾಗಿ) ಅಧಿಕಾರಕ್ಕೆ
ಬರಬಹುದಿತ್ತು.
ಇನ್ನು, ಮುಖ್ಯ ವಿಷಯಕ್ಕೆ ಬರುವುದಾದರೆ, ಪ್ರಾದೇಶಿಕ ಪಕ್ಷಗಳಿಂದ ಮಾತ್ರವೇ ರಾಜ್ಯದ ಹಿತರಕ್ಷಣೆ ಸಾಧ್ಯ ಎಂಬ ಮಾತನ್ನು ಸಾರಾಸಗಟಾಗಿ ಒಪ್ಪಲಾಗದು. ಜತೆಗೆ, ಮೇಲೆ ಉಲ್ಲೇಖಿಸಿರುವ ಪ್ರಾದೇಶಿಕ ಪಕ್ಷಗಳ ಪೈಕಿ ಒಂದೆರಡಕ್ಕಾದರೂ ಜನಹಿತದ ಸಂಕಲ್ಪ ಮತ್ತು ಅಭಿವೃದ್ಧಿಯ ಆಶಯಗಳು ನಿಜವಾಗಿಯೂ ಇದ್ದಿದ್ದರೆ ಪ್ರಾಯಶಃ ರಾಜ್ಯದಲ್ಲಿ ಅವಕ್ಕೆ ಒತ್ತಾಸೆ ಸಿಗುತ್ತಿತ್ತೋ ಏನೋ? ಆದರೆ ಅವು ಜನ್ಮ ತಳೆದ ಸಂದರ್ಭವನ್ನೂ ಒಮ್ಮೆ ಅವಲೋಕಿಸ ಬೇಕಾಗುತ್ತದೆ. ಮೂಲಪಕ್ಷದಲ್ಲಿ ತಮಗೆ ಮಹತ್ವ-ಮರ್ಯಾದೆ-ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಿಡಿದೆದ್ದು ಬಂದು ತಮ್ಮದೇ ಆದ ಪ್ರಾದೇಶಿಕ ಪಕ್ಷಗಳನ್ನು ಹುಟ್ಟುಹಾಕಿದವರನ್ನು ಕಂಡ ಕರ್ನಾಟಕದ ಪ್ರಜ್ಞಾವಂತ ಮತದಾರರು “ಇವರ ಉದ್ದೇಶ ಜನಹಿತವಲ್ಲ, ಸ್ವಾರ್ಥಲಾಲಸೆ” ಎಂದೇ ಪರಿಗಣಿಸಿ ಮೂಲೆಗೆ ತಳ್ಳಿದ್ದಾರಷ್ಟೇ.
ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳು, ಗಡಿವಿವಾದ, ನದಿನೀರು ಹಂಚಿಕೆ ಸಂಬಂಧಿತ ವ್ಯಾಜ್ಯ ಇತ್ಯಾದಿಗಳಿಗೆ ನಿಯತ್ತಾಗಿ ಪರಿಹಾರ ರೂಪದ ಮದ್ದು ಅರೆಯಬಲ್ಲವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ, ರಾಜ್ಯದ ಜನ ಅವರಿಗೆ ಓಗೊಡಬಹುದು. ಆದರೆ ಸದ್ಯೋ ಭವಿಷ್ಯದಲ್ಲಿ ರಾಜ್ಯದಲ್ಲಿ ಅಂಥ ವಾತಾವರಣ ವೇನೂ ಕಾಣುತ್ತಿಲ್ಲ.
ರಾಜ್ಯದಲ್ಲೊಂದು ಪ್ರಭಾವಿ ಪ್ರಾದೇಶಿಕ ಪಕ್ಷ ಇದ್ದುಬಿಟ್ಟರೆ ಕೇಂದ್ರದ ಮಟ್ಟದಲ್ಲಿ ಪ್ರಭಾವ ಬೀರಬಹುದು, ರಾಜ್ಯಕ್ಕೆ ಬೇಕಾಗುವ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂಬುದೊಂದು ಸ್ಥಾಪಿತ ಗ್ರಹಿಕೆಯಿದೆ. ಆದರೆ ಇದು ಎಲ್ಲ
ಸಂದರ್ಭಗಳಲ್ಲೂ ಕೈಗೆಟುಕುವ ಕುಸುಮವಲ್ಲ.
ಇದಕ್ಕೆ ಪುಟ್ಟ ಉದಾಹರಣೆ ನೋಡಿ: ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ; ತಮಿಳುನಾಡಿನ ಜನರು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷವಾದ ಡಿಎಂಕೆಯ ಅಭ್ಯರ್ಥಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರಾಗಿ ಚುನಾಯಿಸಿ ಕಳಿಸಿದ್ದರೂ, ಡಿಎಂಕೆಯು ‘ಎನ್‌ಡಿಎ’ ಮೈತ್ರಿಕೂಟದ ಅಂಗಭಾಗವಲ್ಲ ಎಂಬ ಕಾರಣಕ್ಕೆ ಅಂದುಕೊಂಡಿದ್ದು ನೆರವೇರದಿರುವ ಸಾಧ್ಯತೆಯೂ ಇದೆ!
ಹಾಗೆ ನೋಡಿದರೆ, ಕರ್ನಾಟಕದಲ್ಲಿ ಇದುವರೆಗೂ ಪ್ರಾದೇಶಿಕ ಪಕ್ಷವೊಂದು ಸ್ವತಂತ್ರವಾಗಿ ಆಳಿದ್ದಿಲ್ಲ; ಹಾಗಂತ ರಾಜ್ಯಕ್ಕೇನು ಮಂಕು ಕವಿದಿದೆಯೇ? ಸಾಫ್ಟ್ ವೇರ್ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ಷೇತ್ರಗಳಲ್ಲಿ ಕರ್ನಾ ಟಕವು ಸಾಧಿಸಿರುವ ಪಾರಮ್ಯಕ್ಕೆ ಆಯಾ ಕಾಲಘಟ್ಟದಲ್ಲಿ ಅಧಿಕಾರದಲ್ಲಿದ್ದ ರಾಷ್ಟ್ರೀಯ ಪಕ್ಷಗಳ ರಾಜ್ಯ
ಸರಕಾರಗಳು ಪೂರಕ ವಾತಾವರಣ ಕಲ್ಪಿಸಿದ್ದೂ ಕಾರಣವಾಗಿದೆ. ಇದನ್ನು ಮರೆಯಲಾಗದು.
ಇನ್ನು, ಕಾವೇರಿ ನದಿನೀರು ಹಂಚಿಕೆ ಸಂಬಂಧಿತ ವ್ಯಾಜ್ಯದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಬೇಕೆಂದರೆ ಇಂದು ಪ್ರಾದೇಶಿಕ ಪಕ್ಷ ಬೇಕೇ ಬೇಕು ಎಂಬ ವಾದದಲ್ಲೂ ಹುರುಳಿಲ್ಲ. ವಾಸ್ತವವಾಗಿ ಇಂಥ ಸಮಸ್ಯೆಗಳ ಪರಿಹಾರಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಮಾತ್ರವಷ್ಟೇ. ಗದ್ದುಗೆ ಅಪ್ಪಿರುವವರಲ್ಲಿ (ಅವರು ರಾಷ್ಟ್ರೀಯ ಪಕ್ಷದವರೇ ಇರಲಿ, ಪ್ರಾದೇಶಿಕ ಪಕ್ಷದವರೇ ಆಗಿರಲಿ!) ಇಂಥ ಇಚ್ಛಾಶಕ್ತಿ ಇಲ್ಲದಿದ್ದಾಗ, ರಾಜ್ಯಕ್ಕೆ ದೊರಕಬೇಕಾದ್ದು
ದೊರಕುವುದಿಲ್ಲ, ಅಷ್ಟೇ!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ