ಕಳಕಳಿ
ಪ್ರಕಾಶ್ ಕೆ.ನಾಡಿಗ್, ತುಮಕೂರು
ಪ್ರಪಂಚದಲ್ಲಿ ಕೇವಲ ಭಾಷೆಗಾಗಿಯೇ ಹುಟ್ಟಿಕೊಂಡ ವಿಶ್ವವಿದ್ಯಾಲಯ ಏನಾದರೂ ಇದ್ದರೆ ಅದು ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ ಮಾತ್ರವೇ. ಇಂಥ ಹೆಮ್ಮೆಗೆ ಕಾರಣವಾಗಿದ್ದ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಇಂದು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂಗತಿಯನ್ನು ಪತ್ರಿಕೆಗಳಲ್ಲಿ ಓದಿ ಬೇಸರವಾಯಿತು.
‘ಕರ್ನಾಟಕ ಸಂಭ್ರಮ 50’ರ ಹೊಸ್ತಿಲಲ್ಲಿರುವ ಈ ಸಮಯದಲ್ಲಿ ಹಂಪಿ ಕನ್ನಡ ವಿ.ವಿ.ಯು ಇಂಥ ಸಂಕಷ್ಟವನ್ನು ಎದುರಿಸುತ್ತಿರುವುದು ಸರಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಇದು ಬರೀ ವಿಶ್ವವಿದ್ಯಾಲಯವಾಗಿರದೆ ಕನ್ನಡದ ಮತ್ತು ಕನ್ನಡಿಗರ ಅಸ್ಮಿತೆಯಾಗಿದ್ದು ಹಣಕಾಸಿನ ಒತ್ತಾಸೆಗೆ ಸರಕಾರವನ್ನೇ ಅವಲಂಬಿಸಿದೆ. ಆದರೆ ಸಮಯಕ್ಕೆ ಸರಿಯಾಗಿ ಅನುದಾನ ಸಿಗದೆ ಅದು ಬಡಕಲಾಗಿರುವುದು ನಿಜಕ್ಕೂ ಖೇದಕರ ಸಂಗತಿ.
ಇಲ್ಲಿ ಓದುತ್ತಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಿಕ್ಕೂ ಹಣವಿಲ್ಲದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಎರಡು ವರ್ಷಗಳ ವಿದ್ಯುಚ್ಛಕ್ತಿ ಬಿಲ್ ಪಾವತಿಸದ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವಂತಾದ ಅಪಸವ್ಯವೂ ಘಟಿಸಿದೆ. ಗುತ್ತಿಗೆ ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ, ಅನುದಾನವಿಲ್ಲದೆ ಹಲವಾರು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎನ್ನಲಾಗಿದೆ. ಯಥೋಚಿತವಾಗಿ ಅನುದಾ
ನವನ್ನು ನೀಡಲಾಗದಿದ್ದಲ್ಲಿ ಕನ್ನಡಕ್ಕಾಗೇ ಒಂದು ವಿ.ವಿ.ಯನ್ನು ಕಟ್ಟಿದ್ಯಾಕೆ, ಅದನ್ನು ಈ ದುಸ್ಥಿತಿಯಲ್ಲಿ ಇಟ್ಟಿದ್ಯಾಕೆ? ‘ಗ್ಯಾರಂಟಿ’ ಯೋಜನೆಗಳಿಗಾಗಿ ವರ್ಷಕ್ಕೆ 56000 ಕೋಟಿ ರುಪಾಯಿ ಖರ್ಚು ಮಾಡುತ್ತಿದ್ದೇವೆಂದು ಬೀಗುವ ಸರಕಾರಕ್ಕೆ ಕನ್ನಡ ವಿ.ವಿ.ಯ ದುಸ್ಥಿತಿ ಕಾಣುತ್ತಿಲ್ಲವೇ? ಸಾಹಿತಿಗಳು, ಕನ್ನಡ ಪರ ಸಂಘಟನೆಗಳು ಮತ್ತು ಹೋರಾಟಗಾರರು ಈ ವಿಷಯದಲ್ಲಿ ಮೌನವಾಗಿರುವುದು ನಿಜಕ್ಕೂ ಆಶ್ಚರ್ಯಕರ.
ಅಕ್ಷರಶಃ ವೆಂಟಿಲೇಟರ್‌ನಲ್ಲಿರುವ ಕನ್ನಡ ವಿ.ವಿ.ಗೆ ಅನುದಾನ ನೀಡಿ, ಕನ್ನಡದ ಅಸ್ಮಿತೆಯನ್ನು ಪುನಶ್ಚೇತನ ಗೊಳಿಸಬೇಕಿದೆ. ಒಂದೊಮ್ಮೆ ಅನುದಾನ ನೀಡಲು ಸರಕಾರ ವಿಫಲವಾದಲ್ಲಿ, ಪ್ರತಿಯೊಬ್ಬ ಕನ್ನಡಿಗರೂ ಕನಿಷ್ಠಪಕ್ಷ 10 ರುಪಾಯಿ ಚಂದಾ ನೀಡುವ ಮೂಲಕ, ಕನ್ನಡದ ಹೆಮ್ಮೆಯಾದ ಈ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳ ಬೇಕಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ