ಮೂರ್ತಿ ಪೂಜೆ
“ಅವನು ಯಾವೂರ ಜಗದ್ಗುರು ಪ್ರಕಾಶ್? ಅರಿಷಡ್ವರ್ಗಗಳನ್ನು ಮೀರಿದವರು ತಮ್ಮ ಜಗತ್ತಿಗೆ ಗುರು. ಆದರೆ ತನಗೆ ಸಂಬಂಧ ವಿಲ್ಲದ ಜಗತ್ತಿಗೆ ತಲೆಹಾಕಿ, ‘ನಿಮ್ಮನ್ನು ಸಿಎಂ ಪಟ್ಟದಲ್ಲಿ ಉಳಿಸುತ್ತೇನೆ, ಬಂದು ನನ್ನನ್ನು ನೋಡಿ’ ಅಂತ ನನಗೇ ಹೇಳುತ್ತಾ ನಲ್ಲ” ಎಂದು ಅವರು ರೇಗಿದರು.
ಎದುರಿದ್ದ ನಾನು ಕಮಕ್-ಕಿಮಕ್ ಎನ್ನದೆ ಕುಳಿತಿದ್ದೆ. ಒಂದೆರಡು ನಿಮಿಷ. ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಎಂ.ಪಿ.ಪ್ರಕಾಶ್ ಬಳಿ ಫೋನಿನಲ್ಲಿ ಹಾಗೆ ರೇಗಿ ಫೋನಿಟ್ಟ ಅವರು ನನ್ನ ಕಡೆ ನೋಡಿ ನಕ್ಕರು. ಅವರ ಹೆಸರು ಜೆ. ಎಚ್. ಪಟೇಲ್. ಆಗ ಅವರು ಕರ್ನಾಟಕದ ಮುಖ್ಯಮಂತ್ರಿ. ಹೀಗೆ ಅವರು ನನ್ನ ಕಡೆ ತಿರುಗಿ ನೋಡಿದಾಗ ನಾನು ಉಗುಳು ನುಂಗಿಕೊಳ್ಳುತ್ತಾ ಪೆಚ್ಚುನಗೆ ನಕ್ಕೆ. ಮನಸ್ಸು ಕದಡಿದಾಗ ಯಾರೇ ಆಗಲಿ ಮಾತನಾಡುವುದು ಕಷ್ಟ ಅಂತ ನನ್ನ ಮನಸ್ಸು ಹೇಳುತ್ತಿತ್ತು. ಆದರೆ ಪಟೇಲರು ಸ್ವಲ್ಪವೂ ವಿಚಲಿತರಾಗಿರಲಿಲ್ಲ.
ಹೀಗಾಗಿಯೇ ಅವರು ನನ್ನನ್ನುದ್ದೇಶಿಸಿ, ‘ಅವನ್ಯಾವನೋ ಸ್ವಾಮಿ ಅಂತೆ. ಆರ್.ಟಿ. ನಗರದಲ್ಲಿರುವ ಅವನ ಮಠಕ್ಕೆ ಹೋದರೆ ನನ್ನ ವಿರುದ್ಧದ ಬಂಡಾಯವನ್ನು ಶಮನಗೊಳಿಸುತ್ತಾನಂತೆ’ ಎಂದರು. ಆಗಲೂ ನಕ್ಕೆ. ಅದಕ್ಕವರು ಸುಮ್ಮನೆ ಮಾತನಾಡು ತ್ತಾ ಹೋದರು. ‘ವಿಠ್ಠಲಮೂರ್ತಿ, ತುಂಬ ಜನ ಪೆದ್ದರಿಗೆ ಒಂದು ವಿಷಯ ಗೊತ್ತಿರುವುದಿಲ್ಲ. ನಾನು ಈ ಜಾಗಕ್ಕೆ ಬಂದು ಕೂರಬೇಕು ಎಂಬುದು ಪ್ರಕೃತಿಯ ಇಚ್ಛೆ, ಮುಖ್ಯಮಂತ್ರಿಯಾದೆ.
ಇಳಿಯಬೇಕು ಎಂದು ಅದು ಬಯಸಿದಾಗ ಇಳಿಯುತ್ತೇನೆ. ಅಂದ ಹಾಗೆ ಈ ಪ್ರಕೃತಿಯ ರೂಪವೇನು ಗೊತ್ತಾ? ಕೆಲವರು ಇದನ್ನು ದೇವರು ಎನ್ನಬಹುದು, ಕೆಲವರು ಇದಕ್ಕೆ ರೂಪ ಕೊಡಬಹುದು. ಆದರೆ ನಾನು ಇದ್ಯಾವುದನ್ನೂ ನಂಬುವುದಿಲ್ಲ. ಪ್ರಕೃತಿಗೆ ತನ್ನದೇ ಆದ ಉದ್ದೇಶಗಳಿರುತ್ತವೆ. ನೀವು ಬಯಸಿ, ಬಯಸದೇ ಇರಿ. ತನಗೆ ಬೇಕಾದಂತೆ ಅದು ನಮ್ಮನ್ನು
ಎಳೆದುಕೊಂಡು ಹೋಗುತ್ತದೆ’ ಎಂದರು ಪಟೇಲ್ ‘ನಿಮಗೆ ಗೊತ್ತಾ? ಭೂಮಿಯೂ ಸೇರಿದಂತೆ ಈ ಜಗತ್ತಿನಲ್ಲಿ ನಮ್ಮ ಕಣ್ಣಿಗೆ ಬಿದ್ದಿರುವುದು ಕೇವಲ ೭ ಪರ್ಸೆಂಟು ಮಾತ್ರ.
ಇನ್ನುಳಿದ ೯೩ ಪರ್ಸೆಂಟನ್ನು ನಾವು ನೋಡಲು ಸಾಧ್ಯವಾಗಿಲ್ಲ. ಅದೆಲ್ಲ ಬ್ಲ್ಯಾಕ್ ಹೋಲ್ಸ್ ಇರಬಹುದು ಎಂದು ನಾಸಾದ ವಿಜ್ಞಾನಿಗಳು ಹೇಳುತ್ತಾರೆ. ಈ ಬ್ಲ್ಯಾಕ್ ಹೋಲ್ಸ್‌ನ ಕೆಲಸವೆಂದರೆ, ಈ ವಿಶ್ವದಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ರೆಕಾರ್ಡ್ ಮಾಡಿ ಕೊಳ್ಳುವುದು. ಇವತ್ತು ವಿಮಾನಗಳಲ್ಲೆಲ್ಲ ಬ್ಲ್ಯಾಕ್ ಬಾಕ್ಸ್ ಅಳವಡಿಸಿರುವುದನ್ನು ಕೇಳಿರುತ್ತೇವಲ್ಲ? ಅವಕ್ಕೆ ಈ ಬ್ಲ್ಯಾಕ್ ಹೋಲ್‌ಗಳೇ ಮೂಲಪ್ರೇರಣೆ. ವಾಸ್ತವವಾಗಿ ಅವು ಕಪ್ಪಗಿರದೆ ಕಿತ್ತಳೆ ಬಣ್ಣದಲ್ಲಿರುತ್ತವೆ, ಆ ಮಾತು ಬೇರೆ.
ಆದರೆ ಬ್ಲ್ಯಾಕ್ ಬಾಕ್ಸ್‌ನ ಕಲ್ಪನೆ ನಮಗೆ ದಕ್ಕಿದ್ದು ಬ್ಲ್ಯಾಕ್ ಹೋಲ್ ಗಳಿಂದ. ಅಂದರೆ, ಈ ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿದ್ಯಮಾನವನ್ನೂ ದಾಖಲಿಸಿಕೊಳ್ಳುವ ಕೆಲಸ ಪ್ರಕೃತಿಯಿಂದ ನಡೆಯುತ್ತಿದೆ. ಇದನ್ನೇ ನಾವು ತುಂಬ ಸಲ ಹೇಳುವುದು, ನ್ಯಾಯ-ಅನ್ಯಾಯ ವನ್ನು ದೇವರು ನೋಡಿಕೊಳ್ಳುತ್ತಾನೆ ಅಂತ. ಹಾಗಂತ ದೇವರಿಗೆ ಒಂದು ರೂಪ ಅಂತಿದೆ ಎಂಬುದನ್ನು ನಾನು ನಂಬುವುದಿಲ್ಲ. ೩೦-೪೦ ಸೈಟಿನಲ್ಲೋ, ಅಥವಾ ಎಕರೆ ಗಟ್ಟಲೆ ಜಾಗದಲ್ಲೋ ನೀವೊಂದು ದೇವಸ್ಥಾನ ಕಟ್ಟಿಸಿ, ದೇವರಿರುವುದು ಇಲ್ಲೇ ಎಂದು ಹೇಳಿದರೆ ಐ ಕಾಂಟ್ ಬಿಲೀವ್.
ಬೇಸಿಕಲಿ, ನಾನು ಕಣಾದನ ವಾದವನ್ನು ಒಪ್ಪುತ್ತೇನೆ. ಈ ಜಗತ್ತು ನಡೆಯುತ್ತಿರುವುದೇ ಕಣಗಳಿಂದ. ಈ ಕಣಗಳೇ ದೇವರು ಎಂದು ಆತ ಹೇಳುತ್ತಾನೆ. ಅಂದರೆ ಇದೊಂದು ಪರಮಾಣು ಶಕ್ತಿ ಅಂತ ನನಗನ್ನಿಸುತ್ತದೆ. ಮತ್ತದನ್ನು ನಾನು ನಂಬುತ್ತೇನೆ. ಹೀಗಿರುವಾಗ ಈ ಪ್ರಕೃತಿ ಬಯಸುವಂತೆ ನಾವು ಬದುಕಬೇಕು. ಅದರ ಇಚ್ಛೆ ಡಿಫರೆಂಟ್. ಹೀಗಾಗಿ ನಾವು ಎಲ್ಲ ವ್ಯಕ್ತಿಗಳೂ ಡಿಫರೆಂಟ್’ ಎಂದರು ಪಟೇಲ್.
ಅವರ ಮಾತಿಗೆ ಪುಷ್ಟಿ ನೀಡುವಂತೆ, ‘ನೀವು ಹೇಳಿದ್ದು ಸರಿಯಾಗಿದೆ ಅಂತ ಅನ್ನಿಸುತ್ತಿದೆ ಸರ್’ ಎಂದೆ. ಅದಕ್ಕವರು ನಕ್ಕು, ‘ಈ ಪ್ರಪಂಚದ ಬಗ್ಗೆ ಅರಿವಿಲ್ಲದವರು, ದುಡ್ಡು ಮಾಡಲೆಂದೇ ಟೊಂಕಕಟ್ಟಿ ನಿಂತವರು ನನ್ನನ್ನು ಸಿಎಂ ಪೋಸ್ಟಿನಲ್ಲಿ ಉಳಿಸುತ್ತೇನೆ ಎಂದರೆ ನಾನು ನಗಬೇಕೋ ಅಳಬೇಕೋ?’ ಎಂದರು. ಅದಕ್ಕೆ ನಾನು, ‘ಸರ್, ಒಂದು ಹಂತಕ್ಕೆ ತಲುಪಿದ ಮೇಲೆ ಮನುಷ್ಯನಿಗೆ ನಿರಾಸಕ್ತಿ ಶುರುವಾಗುತ್ತದೆ. ಆದರೆ ನೀವು ಎಲ್ಲ ವಿಷಯಗಳಲ್ಲೂ ಕ್ರಿಯಾಶೀಲ. ಅನುಭವಿಸುವ ವಿಷಯದಲ್ಲಿ ನೀವು ಬದುಕನ್ನು ನೋಡುವ ರೀತಿಯೇ ವಿಶಿಷ್ಟ ಅನ್ನಿಸುತ್ತದೆ’ ಎಂದೆ.
ಅದಕ್ಕವರು, “ಈ ದೇಶದ ಅಪೂರ್ವ ಲೇಖಕ ರವೀಂದ್ರನಾಥ ಟ್ಯಾಗೋರ್ ಬದುಕಿನಲ್ಲಿ ನಡೆದ ಒಂದು ಕತೆಯಿದೆ. ಯೌವನ ದಲ್ಲಿ ನನ್ನ ಮೇಲೆ ಅಪಾರ ಪ್ರಭಾವ ಬೀರಿದ ಕತೆ ಅದು. ಒಮ್ಮೆ ಟ್ಯಾಗೋರರ ಶಾಂತಿನಿಕೇತನಕ್ಕೆ ಗಾಂಧೀಜಿ ಹೋಗುತ್ತಾರೆ.
ಮರುದಿನ ಬೆಳಗ್ಗೆ ಇಬ್ಬರೂ ವಾಯುವಿಹಾರಕ್ಕೆ ಹೋಗಬೇಕು. ಗಾಂಧೀಜಿ ಸಟ್ಟಂತ ರೆಡಿಯಾದರು. ಆದರೆ ಟ್ಯಾಗೋರರು ಐದು ನಿಮಿಷ ತಡವಾಗಿ ಹೊರಬಂದರು.
ನೋಡಿದರೆ ಟ್ಯಾಗೋರ್ ಶುಭ್ರಶ್ವೇತ ವಸ್ತ್ರಧಾರಿ. ಗಾಂಧೀಜಿಗೆ ಅದರ ಅಗತ್ಯವೇ ಇರಲಿಲ್ಲ. ಹಾಕಿಕೊಂಡ ಲಂಗೋಟಿಯಲ್ಲೇ ಅವರು ರೆಡಿಯಾಗಿದ್ದರು. ಆದರೆ ಟ್ಯಾಗೋರರ ವೇಷ ನೋಡಿ ಅಚ್ಚರಿಗೊಂಡ ಗಾಂಧೀಜಿ, ‘ಗುರುದೇವ, ಬೆಳಗಿನ ಜಾವದ ವಾಯುವಿಹಾರಕ್ಕೂ ಇಷ್ಟೊಂದು ಅಚ್ಚುಕಟ್ಟಾಗಿ ಬಟ್ಟೆ ಹಾಕಿಕೊಂಡು ಬರುವ ಅಗತ್ಯವಿದೆಯೇ?’ ಎಂದು ಕೇಳಿದಾಗ ಟ್ಯಾಗೋರರು ತಣ್ಣಗೆ ನಕ್ಕು, ‘ಇದೆ ಮಹಾತ್ಮ, ನಾನು ಹೀಗೆ ಮೈ ತುಂಬ, ಅಚ್ಚುಕಟ್ಟಾದ ಬಟ್ಟೆ ಹಾಕುವ ಅಗತ್ಯವಿದೆ. ಆದರೆ
ಗಮನಿಸಿ, ಈ ಬಟ್ಟೆಗಳ್ಯಾವುವೂ ಭಾರಿ ವೆಚ್ಚದವಲ್ಲ. ಶುಭ್ರ ಬಟ್ಟೆಗಳಷ್ಟೇ’ ಎಂದರು. ಅದಕ್ಕೆ ಗಾಂಧೀಜಿ, ‘ಅದೇನೋ ಸರಿ. ಆದರೆ ವಾಯುವಿಹಾರಕ್ಕೂ ಹೀಗೆ ಮೈತುಂಬ ಶುಭ್ರ ಬಟ್ಟೆ ಹಾಕಿಕೊಂಡು ಬರಲು ಕಾರಣವೇನು ಗುರುದೇವ?’ ಅಂತ ಪ್ರಶ್ನಿಸಿದರು.
ಆಗ ಟ್ಯಾಗೋರ್, ‘ಮಹಾತ್ಮ, ಮನುಷ್ಯ ಕೂಡಾ ಪ್ರಕೃತಿಯ ಭಾಗ. ನೋಡುವವರಲ್ಲಿ ಪ್ರಕೃತಿಯ ಉತ್ಸಾಹ ತುಂಬುವಂತಿರ ಬೇಕು. ನನ್ನನ್ನು ಯಾರಾದರೂ ನೋಡಿದರೆ, ವಾಹ್ ಎಷ್ಟು ಶುಭ್ರ, ಸುಂದರ ಅನ್ನಿಸಬೇಕು. ಆಗ ಆತನ ಮನಸ್ಸಿಗೆ ನೆಮ್ಮದಿಯಾಗುತ್ತದೆ’ ಎಂದರು” ಎಂದು ವಿವರಿಸಿದ ಪಟೇಲ್, ‘ಈಗ ನೀವೇ ಹೇಳಿ, ಗಾಂಧೀಜಿಯ ವಸ್ತ್ರಸಂಹಿತೆ ಸರಿಯೋ? ಟ್ಯಾಗೋರರ ನಡೆ ಸರಿಯೋ?’ ಎಂದು ಕೇಳಿದರು. ‘ಎರಡೂ ಸರಿ ಎನ್ನಿಸುತ್ತದೆ ಸರ್’ ಎಂದೆ. ಮತ್ತೆ ನಕ್ಕ ಪಟೇಲ್, ‘ನಿಜ, ಗಾಂಽಜಿ ಹಾಗೂ ಟ್ಯಾಗೋರರ ದೃಷ್ಟಿಕೋನಗಳೆರಡೂ ಸರಿ. ಉದ್ದೇಶಗಳೂ ಸರಿ.
ಸಹಜವಾಗಿ ನನಗೆ ಟ್ಯಾಗೋರರ ಮಾತು ತುಂಬ ಇಂಪ್ರೆಸ್ ಮಾಡಿತು. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದವರಿಗೆ ಖುಷಿಯಾಗಬೇಕು, ಏಕೆಂದರೆ ನಾನೂ ಪ್ರಕೃತಿಯ ಭಾಗ ಎಂದುಕೊಂಡೆ. ಯಾವಾಗ ಇದು ನನ್ನ ಮನದ ಮೇಲೆ ಪರಿಣಾಮ ಬೀರಿತೋ? ಅದೇ ರೀತಿ ಬದುಕುವುದು ಅಭ್ಯಾಸವಾಯಿತು. ಇದ್ದುದನ್ನು ಇದ್ದಂತೆ ಹೇಳುವುದು ರೂಢಿಯಾಯಿತು. ಸುಳ್ಳು ಹೇಳಿದರೆ ನೀವು ನಿದ್ರೆ ಕಳೆದುಕೊಳ್ಳುತ್ತೀರಿ. ಇದುವರೆಗೆ ಈ ಸೀಟು ಉರುಳಿಸಲು ಏನೇ ಪ್ರಯತ್ನ ನಡೆದರೂ ನಾನು ಒಂದು ದಿನವೂ ನಿದ್ರೆಗೆಟ್ಟಿಲ್ಲ, ನಂಬ್ತೀರಾ?’ ಎಂದರು ಪಟೇಲ್. ನಾನು ಹೆಚ್ಚು ಮಾತನಾಡಲಿಲ್ಲ.
ಇದೆಲ್ಲ ಏಕೆ ನೆನಪಿಗೆ ಬಂತೆಂದರೆ, ಪಟೇಲರ ಜತೆ ಹೀಗೆ ಮಾತನಾಡಿ ಸುದ್ದಿಯನ್ನೂ ಸ್ಟೋರಿಯನ್ನೂ ಬಾಚಿಕೊಳ್ಳುತ್ತಿದ್ದವರು ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ. ಮೊನ್ನೆ ಹಳೆಯ ಮಿತ್ರರೆಲ್ಲ ಊಟಕ್ಕೆ ಸೇರಿಕೊಂಡಿದ್ದೆವು. ಅಪರೂಪಕ್ಕೆ ಅಂತ ಸೇರಿದರೂ ತುಂಬ ಮಾತನಾಡಿಕೊಳ್ಳುತ್ತೇವೆ. ತುಂಬು ಹೊಳೆಯಲ್ಲಿ ಮೀಯುವಂತೆ, ಆ ದಿನಗಳಲ್ಲಿ ಮೀಯುತ್ತೇವೆ. ಅಂದ ಹಾಗೆ ದಶಕಗಳ ಹಿಂದೆ, ನರಹಂತಕ ವೀರಪ್ಪನ್ ವಿರುದ್ಧ ಆಪರೇಷನ್ ಸ್ಯಾಂಡಲ್ ಫಾಕ್ಸ್ ಎಂಬ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಸೋಟಕ ವಿವರವನ್ನು ಹೊರತೆಗೆದವರು ಸಮೀವುಲ್ಲಾ.
ಅವತ್ತು ಹಿರಿಯ ವರದಿಗಾರರೊಬ್ಬರು, ವೀರಪ್ಪನ್ ವಿರುದ್ಧ ಯಾವುದೋ ಕಾರ್ಯಾಚರಣೆ ನಡೆಯುತ್ತಿದೆಯಂತೆ ಎಂದಾಗ, ಸಮೀವುಲ್ಲಾ ಅವರು ಹೊಸೂರಿನಲ್ಲಿದ್ದ ಆತ್ಮೀಯರೊಬ್ಬರ ಜತೆ ಮಾತನಾಡಿ, ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಪಡೆಯ ಫ್ರಂಟ್‌ಲೈನಿನಲ್ಲಿದ್ದ ತಮಿಳುನಾಡಿನ ಪೊಲೀಸ್ ಅಧಿಕಾರಿ ಕಾಳಿಮುತ್ತು ಅವರ ನಂಬರು ಪಡೆದು ಅವರ ಜತೆ ಮಾತನಾಡಿದರು.
ಆಗ ಕಾಳಿಮುತ್ತು, ‘ನೀವು ಹೇಳಿದ್ದು ನಿಜ. ವೀರಪ್ಪನ್ ಗಂಧಚೋರ, ಹಾಗೆಯೇ ನರಿಯಂಥವನು. ಅದಕ್ಕಾಗಿಯೇ ಅವನ ವಿರುದ್ಧ ಆಪರೇಷನ್ ಸ್ಯಾಂಡಲ್ ಫಾಕ್ಸ್ ನಡೆಸುತ್ತಿದ್ದೇವೆ’ ಎಂದರು. ನಾವೆಲ್ಲ ಈ ಸ್ಟೋರಿಯನ್ನು ಬರೆದೆವು. ಮರುದಿನ ಅದು ಸೂಪರ್‌ಹಿಟ್! ಆದರೆ ಇದನ್ನು ನೋಡಿ ಕೆಲವರಿಗೆ ಸಂಕಟವಾಗಿ, ‘ಇಂಥ ಕಾರ್ಯಾ ಚರಣೆಯೇ ನಡೆಯುತ್ತಿಲ್ಲ’ ಎಂದು ಆಗಿನ
ಅರಣ್ಯ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರಿಂದ ಬಹಿರಂಗವಾಗಿ ಹೇಳಿಸಲು ಹೊರಟರು.
‘ಅರೇ, ನಾವೇನು ಸುಳ್ಳು ಬರೆದಿದ್ದೀವಾ? ಅಥವಾ ಕಾರ್ಯಾಚರಣೆ ಮಾಡುವವರು ಬಹಿರಂಗವಾಗಿ ಹೇಳಿ ಮಾಡುತ್ತಾರಾ?
ಬನ್ನಿ, ನಾಗಮಾರಪಲ್ಲಿ ಅವರ ಬಳಿ ಹೋಗಿ ವಿವರಿಸೋಣ’ ಎಂದರು ಸಮೀವುಲ್ಲಾ. ಸರಿ, ಮಿತ್ರೆಲ್ಲರೂ ವಿಧಾನಸೌಧದಲ್ಲಿದ್ದ ನಾಗಮಾರಪಲ್ಲಿಯವರ ಕಚೇರಿಗೆ ಹೋಗಿ ವಿಷಯ ವಿವರಿಸಿದೆವು. ಅದಕ್ಕವರು ತಕ್ಷಣವೇ ಫೋನು ಮಾಡಿ ಕನ್ ಫರ್ಮ್ ಮಾಡಿಕೊಂಡರು.
ಮರುದಿನ ಸುದ್ದಿಗೋಷ್ಠಿ. ಯಾರೋ ಕೇಳಿದರು, ‘ಸರ್ ವೀರಪ್ಪನ್ ವಿರುದ್ಧ ಆಪರೇಷನ್ ಸ್ಯಾಂಡಲ್ ಫಾಕ್ಸ್ ಕಾರ್ಯಾಚರಣೆ ನಡೆದಿದೆ ಎಂದು ಸುಳ್ಳುಸುದ್ದಿ ಹಬ್ಬಿದೆ. ಇದಕ್ಕೇನು ಕಾರಣ?’ ಎಂದು ಪ್ರಶ್ನಿಸಿದರು. ಆಗ ನಾಗಮಾರಪಲ್ಲಿ, ‘ಇದು ಸುಳ್ಳುಸುದ್ದಿ ಅಂತ ಹೇಳಿದ್ಯಾರು? ಇಟ್ ಈಸ್ ಎ ಫ್ಯಾಕ್ಟ್’ ಎಂದುಬಿಟ್ಟರು. ಪ್ರಶ್ನಿಸಿದವರು ಮಂಕಾದರು!
ಇದನ್ನೆಲ್ಲ ಮೊನ್ನೆ ನೆನಪಿಸಿಕೊಳ್ಳುತ್ತಿದ್ದಾಗ ಸಮೀವುಲ್ಲಾ, ‘ವಿಠ್ಠಲಮೂರ್ತಿ, ಆಪರೇಷನ್ ಸ್ಯಾಂಡಲ್ ಫಾಕ್ಸ್ ಕಾರ್ಯಾಚರಣೆ ನಡೆಯುತ್ತಿದ್ದುದು ನಿಜವಾದರೂ ಅದನ್ನು ಸುಳ್ಳೆಂದು ಸಾಬೀತುಪಡಿಸಲು ಕೆಲವರು ಯಾಕೆ ಮುಂದಾದರು ಅಂತ ಇವತ್ತಿಗೂ ಅರ್ಥವಾಗಿಲ್ಲ ಕಣ್ರೀ’ ಎಂದರು. ‘ಬಹುಶಃ ಅಸಹಿಷ್ಣುತೆ ಇರಬೇಕು’ ಅಂದೆ. ಆಗ ಸಮೀವುಲ್ಲಾ ಜತೆಗೆ ಉಳಿದವರೂ ಗಹಗಹಿಸಿ ನಕ್ಕರು. ಇದ್ದಕ್ಕಿದ್ದಂತೆ ನನಗೆ ಪಟೇಲರ ಮಾತುಗಳು ನೆನಪಾದವು. ಅದಕ್ಕಾಗಿ ನಿಮ್ಮೆದುರು ಇದೆಲ್ಲವನ್ನೂ ಹೇಳಿಕೊಂಡೆ.