Wednesday, 14th May 2025

ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ

ವೀಕೆಂಡ್ ವಿತ್ ಮೋಹನ್

camohanbn@gmail.com

ಪಾಕಿಸ್ತಾನವೆಂದರೆ ನೆನಪಾಗುವುದು ಭಯೋತ್ಪಾದಕತೆ, ಸೇನಾಡಳಿತ, ಬಡತನ, ಧರ್ಮಾಂಧತೆ ಮತ್ತು ರಾಜಕೀಯ ಅರಾಜಕತೆ. ಹುಟ್ಟಿದಾಗಿನಿಂದಲೂ ರಾಜಕೀಯ ಅರಾಜಕತೆಯಲ್ಲಿ ಮಿಂದೆದ್ದಿರುವ ಪಾಕಿಸ್ತಾನ ತನ್ನನ್ನು ಇನ್ನೂ ತಿದ್ದಿಕೊಂಡಿಲ್ಲ. ಇತ್ತೀಚೆಗೆ ಅಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿ.ಟಿ.ಐ. ಪಕ್ಷ ಸುಮಾರು ೧೦೦ ಸೀಟುಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ನವಾಜ್ ಷರೀಫರ ಪಕ್ಷಕ್ಕೆ ೭೩ ಮತ್ತು ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ‘ಪಿ.ಪಿ.ಪಿ.’ ಪಕ್ಷಕ್ಕೆ ೫೪ ಸೀಟುಗಳು ಬಂದವು. ಉಳಿದವು ಪಕ್ಷೇತರರ ಪಾಲಾದವು. ಇಮ್ರಾನ್ ಖಾನ್ ಜೈಲಿನಲ್ಲಿದ್ದೇ ಚುನಾವಣೆ ಎದುರಿಸಿದರೂ, ಅವರ ಪಕ್ಷಕ್ಕೆ ಜನ ಮತಹಾಕಿ ಅತಿದೊಡ್ಡ ಪಕ್ಷವನ್ನಾಗಿಸಿದ್ದಾರೆ. ಚುನಾವಣೆ ವೇಳೆ ಅಕ್ರಮ ನಡೆದಿರುವುದನ್ನು ಪಾಕಿಸ್ತಾನದ ಚುನಾವಣಾ ಆಯೋಗದ ಅಧ್ಯಕ್ಷರೇ ಬಹಿರಂಗವಾಗಿ ಹೇಳಿದ್ದಾರೆ; ಸುಮಾರು ೧೩ ಸದಸ್ಯರ ಚುನಾ
ವಣಾ ಫಲಿತಾಂಶವನ್ನು ತಿದ್ದಲು ತಮ್ಮ ಮೇಲೆ ಒತ್ತಡವಿದ್ದುದ ರಿಂದ ಅವರ ಪಲಿತಾಂಶವನ್ನು ಬದಲಾಯಿಸಲಾಯಿತೆಂದು ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಆಯೋಗವು ಫಲಿತಾಂಶದ ಕ್ಷಣ ಕ್ಷಣದ ವಿವರವನ್ನು ಮಾಧ್ಯಮಗಳಿಗೆ ನೀಡಿರಲಿಲ್ಲ. ಪೋಲಿಂಗ್ ಏಜೆಂಟರೂ ತಂತಮ್ಮ ಬೂತಿನ ಫಲಿತಾಂಶವನ್ನು ಹೊರಬಿಟ್ಟಿರಲಿಲ್ಲ; ಪೊಲೀಸರೂ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಈಗಾಗಲೇ ಆರ್ಥಿಕ ಅರಾಜಕತೆಯಲ್ಲಿ ಸಿಲುಕಿರುವ
ಪಾಕಿಸ್ತಾನದ ಚುಕ್ಕಾಣಿ ಹಿಡಿಯುವುದು ಸುಲಭದ ಮಾತಲ್ಲ. ಈ ಅರಾಜಕತೆಯಲ್ಲಿ ಪಾಕಿಸ್ತಾನದ ಸೇನೆಯ ಪಾಲೂ ಇದೆ ಎನ್ನಲಾಗುತ್ತಿದೆ. ಅಧಿಕಾರಕ್ಕೆ ಬಂದವರು ಮತ್ತೊಮ್ಮೆ ಚೀನಾ ಅಥವಾ ಅಮೆರಿಕದ ಭಿಕ್ಷೆಯಲ್ಲೇ ಆಡಳಿತ ನಡೆಸಬೇಕು. ಪಾಕಿಸ್ತಾನದ ರಾಜಕೀಯದಲ್ಲಿನ ಅರಾಜಕತೆ ಇದೇ ಮೊದಲಲ್ಲ. ಅಲ್ಲಿನ ರಾಜಕೀಯ ಇತಿಹಾಸ ಕೆದಕಿದರೆ, ಮೊದಲ ಚುನಾವಣೆಯಿಂದಲೂ ಅರಾಜಕತೆ ಎದ್ದು ಕಾಣು ತ್ತದೆ. ಪಾಕಿಸ್ತಾನದಲ್ಲಿ ೧೯೫೬ರಲ್ಲಿ ಮೊದಲ ಬಾರಿಗೆ ಸಂವಿಧಾನದ ಪರಿಚಯವಾಯಿತು.

ಆದರೆ ಸಂವಿಧಾನ ಅಸ್ತಿತ್ವಕ್ಕೆ ಬಂದ ಖುಷಿ ಪಾಕಿಗಳಿಗೆ ಹೆಚ್ಚು ಕಾಲ ಉಳಿಯಲಿಲ್ಲ. ೧೯೫೯ ರಲ್ಲಿ ಚುನಾವಣೆ ನಡೆಯಬೇಕಿತ್ತು, ಆದರೆ ೧೯೫೮ರ
ಅಕ್ಟೋಬರ್‌ನಲ್ಲಿ ಮಿಲಿಟರಿ ಅಧಿಕಾರಿ ಅಯೂಬ್ ಖಾನ್ ಸಂವಿಧಾನವನ್ನು ವಜಾಗೊಳಿಸಿ ಮಿಲಿಟರಿ ಆಡಳಿತವನ್ನು ಜಾರಿಗೆ ತಂದ. ಹೀಗಾಗಿ ೧೯೫೯ರಿಂದ ೭೧ರವರೆಗೆ ಪಾಕ್‌ನಲ್ಲಿ ಸಂವಿಧಾನವಿರಲಿಲ್ಲ, ಅಲ್ಲಿನ ಜನರಿಗೆ ಮತದಾನದ ಹಕ್ಕಿರಲಿಲ್ಲ. ಒಂದು ಸಣ್ಣ ಸಂಖ್ಯೆಯ ಮೂಲಭೂತ ಪ್ರಜಾಪ್ರಭುತ್ವ ವಾದಿಗಳನ್ನು (ಆರಂಭದಲ್ಲಿ ೮೦ ಸಾವಿರ ಮಂದಿ, ನಂತರದಲ್ಲಿ ಇನ್ನೊಂದು ೪೦ ಸಾವಿರ ಮಂದಿ) ಪ್ರಾಂತೀಯ ಮತ್ತು ರಾಷ್ಟ್ರೀಯ ಅಸೆಂಬ್ಲಿಗಳೆರಡರ ಸದಸ್ಯರನ್ನಾಗಿ ಆತ ಆಯ್ಕೆ ಮಾಡಿದ್ದ. ಪರಿಣಾಮ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮಗಿಷ್ಟ ಬಂದ ಅಭ್ಯರ್ಥಿಗಳನ್ನು ಚುನಾಯಿಸಲು ನಾಗರಿಕರಿಗೆ ಅಧಿಕಾರವಿರಲಿಲ್ಲ. ಮತದಾನ ಮಾಡಲು ಸಾಕಷ್ಟು ಸವಲತ್ತು ಹೊಂದಿರುವ ಸೀಮಿತ ಮತದಾರರಿಂದ ಮತಗಳನ್ನು ಲಂಚದ ಮೂಲಕ ಖರೀದಿಸುವ ಅವಕಾಶವನ್ನು ತೆರೆದಿಟ್ಟ.

ಅಯೂಬ್‌ಖಾನ್ ನಂತರ, ಜನರಲ್ ಅಘಾ ಮುಹಮ್ಮದ್ ಯಾಹ್ಯಾ ಖಾನ್ ೧೯೬೯ರಿಂದ ೭೧ರವರೆಗೆ ಎರಡನೇ ಮಿಲಿಟರಿ ಆಡಳಿತದ ನೇತೃತ್ವ ವಹಿಸಿದ್ದ. ಆ ಹೊತ್ತಿಗೆ ದೇಶವು ತನ್ನ ೨೫ ವರ್ಷಗಳ ಅಸ್ತಿತ್ವದಲ್ಲಿ, ೧೩ ವರ್ಷಗಳ ಕಾಲ ಮಿಲಿಟರಿ ಆಳ್ವಿಕೆಯಲ್ಲಿತ್ತು. ಈ ಎರಡನೇ ಮಿಲಿಟರಿ ಆಡಳಿತವು ಅಧಿಕಾರಶಾಹಿ ಮತ್ತು ಮಿಲಿಟರಿ ಶಿಕ್ಷಣದ ಅಡಿಯಲ್ಲಿನ ಕೇಂದ್ರೀಕರಣದ ಪ್ರಕ್ರಿಯೆಯು, ಪಾಕಿಸ್ತಾನಿ ಸಮಾಜ ಮತ್ತು ರಾಜಕೀಯವನ್ನು ಎಷ್ಟು ಛಿದ್ರ
ಗೊಳಿಸಿತ್ತೆಂಬುದನ್ನು ಒತ್ತಿಹೇಳಿತ್ತು. ಅಭಿವೃದ್ಧಿಯ ಯತ್ನಗಳ ಹೊರತಾಗಿಯೂ, ಪ್ರಾದೇಶಿಕತೆ ಮತ್ತು ಸಾಮಾಜಿಕ ಸಂಘರ್ಷವು ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಲು ಹೇಗೆ ಸಾಧ್ಯವಾಯಿತೆಂಬುದನ್ನು ೧೯೭೦ರ ಸಾರ್ವತ್ರಿಕ ಚುನಾವಣೆಗಳು ಮೊದಲ ಬಾರಿಗೆ ಬಹಿರಂಗಪಡಿಸಿದವು.

ಮುಜಿಬುರ್ ರೆಹಮಾನ್ ನೇತೃತ್ವದ ಅವಾಮಿ ಲೀಗ್, ಪ್ರಾಂತೀಯ ಸ್ವಾಯತ್ತತೆಯ ೬ ಅಂಶಗಳ ಕಾರ್ಯಕ್ರಮದ ಮೇಲೆ ಪ್ರಚಾರ ನಡೆಸಿ, ಪೂರ್ವ ಪಾಕಿಸ್ತಾನದಲ್ಲಿ ಒಂದು ಸ್ಥಾನವನ್ನು ಹೊರತುಪಡಿಸಿ ಮಿಕ್ಕವನ್ನು ವಶಪಡಿಸಿಕೊಂಡಿತು ಮತ್ತು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸಂಪೂರ್ಣ ಬಹುಮತ ಪಡೆಯಿತು. ಪಶ್ಚಿಮ ಪಾಕಿಸ್ತಾನದಲ್ಲಿ ಜುಲಿಕರ್ ಅಲಿ ಭುಟ್ಟೊ ನೇತೃತ್ವದ ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ ಅತಿದೊಡ್ಡ ಏಕೈಕ ಬಣವಾಗಿ ಹೊರ ಹೊಮ್ಮಿತು. ಅವಾಮಿ ಲೀಗ್ ಸರಕಾರದ ನಿರೀಕ್ಷೆಯು ಪಶ್ಚಿಮ ಪಾಕಿಸ್ತಾನದ ರಾಜಕಾರಣಿಗಳಿಗೆ ಬೆದರಿಕೆಯಾಗಿತ್ತು. ಮಿಲಿಟರಿ ನಾಯಕತ್ವದ ಪಿತೂರಿ ಮಾಡಿದ ‘ಪಿ.ಪಿ.ಪಿ.’ ಪಕ್ಷದವರು ಅಧಿಕಾರದ ಹಿಡಿತವನ್ನು ತೆಗೆದುಕೊಳ್ಳದಂತೆ ತಡೆದಿದ್ದರು. ಸರಕಾರದ ಎಲ್ಲಾ ಕ್ಷೇತ್ರಗಳಲ್ಲೂ ಕಡಿಮೆ ಪ್ರಾತಿನಿಧ್ಯ, ಆರ್ಥಿಕ ಅಭಾವ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ದಮನದಿಂದ ಬೇಸರಗೊಂಡಿದ್ದ ಪೂರ್ವಭಾಗಕ್ಕೆ ಇದು ಅಂತಿಮ ಹೋರಾಟವಾಗಿತ್ತು. ಪೂರ್ವ ಪಾಕಿಸ್ತಾನದಲ್ಲಿನ ಸಶಸ ದಂಗೆಯು ಈ ಎಲ್ಲಾ ಹತಾಶೆಗಳನ್ನು ಹುಟ್ಟುಹಾಕಿತು. ಭಾರತದೊಂದಿಗಿನ ಮೂರನೇ ಯುದ್ಧದಲ್ಲಿ ಸೋತ ಪಾಕಿಸ್ತಾನವು ೧೯೭೧ರಲ್ಲಿ ಬಾಂಗ್ಲಾದೇಶದ ಸ್ಥಾಪನೆಗೆ ದಾರಿಮಾಡಿಕೊಟ್ಟಿತು.

ಭುಟ್ಟೋ ಅವರ ಪಿ.ಪಿ.ಪಿ. ಪಕ್ಷ ೧೯೭೭ರ ಚುನಾವಣೆ ಯಲ್ಲಿ ಗೆದ್ದರೂ, ಮತವನ್ನು ರಿಗ್ಗಿಂಗ್ ಮಾಡಿದ ಆರೋಪವನ್ನು ಭುಟ್ಟೋ ಮೇಲೆ ಹೊರಿಸಿತು ‘ಪಾಕಿಸ್ತಾನ್ ನ್ಯಾಷನಲ್ ಅಲಯನ್ಸ್’ (ಒಂದು ಪಕ್ಷಗಳ ಒಕ್ಕೂಟ). ಈ ವೇಳೆ ನಡೆದ ಪ್ರತಿಭಟನೆಗಳು, ಹಿಂಸಾತ್ಮಕ ಘಟನೆಗಳು ಜಿಯಾ-ಉಲ್ -ಹಕ್ ನೇತೃತ್ವದ ಮಿಲಿಟರಿಯ ಪುನರಾಗಮನಕ್ಕೆ ವೇದಿಕೆ ಕಲ್ಪಿಸಿದವು. ೧೯೭೭ರ ಜುಲೈ ೫ರಂದು ಪಾಕಿಸ್ತಾನವನ್ನು ಮತ್ತೊಮ್ಮೆ ಮಿಲಿಟರಿ ಆಡಳಿತಕ್ಕೆ ಒಳಪಡಿಸಿ ಸಂವಿಧಾನವನ್ನು ಅಮಾನತುಗೊಳಿಸಲಾಯಿತು. ಅಧಿಕಾರ ವಹಿಸಿಕೊಂಡ ನಂತರ ಜಿಯಾ ಎಲ್ಲಾ ರಾಜಕೀಯ ಪಕ್ಷಗಳನ್ನು ನಿಷೇಧಿಸಿದ
ಮತ್ತು ಪಾಕಿಸ್ತಾನವನ್ನು ಸಂಪೂರ್ಣ ಇಸ್ಲಾಮೀಕರಣ ಗೊಳಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದ. ಕೊಲೆ ಆರೋಪದ ಮೇಲೆ ಭುಟ್ಟೋ ಅವರನ್ನು ೧೯೭೯ರ ಏಪ್ರಿಲ್‌ನಲ್ಲಿ ಗಲ್ಲಿಗೇರಿಸಲಾಯಿತು ಮತ್ತು ‘ಪಿ.ಪಿ.ಪಿ.’ಯ ಉಳಿದ ನಾಯಕರನ್ನು ಜೈಲುಪಾಲು ಅಥವಾ ಗಡಿಪಾರು ಮಾಡಲಾಯಿತು.

ಪಕ್ಷೇತರ ಚುನಾವಣೆಗಳನ್ನು ನಡೆಸುವ ಮತ್ತು ಇಸ್ಲಾಮೀಕರಣ ನೀತಿಗಳ ಸರಣಿಯನ್ನು ಪ್ರಾರಂಭಿಸುವ ಮೂಲಕ, ಪಾಕಿಸ್ತಾನ ರಾಜಕೀಯದಲ್ಲಿ ಮಿಲಿಟರಿಯ ಪಾತ್ರ ವನ್ನು ಕಾನೂನುಬದ್ಧಗೊಳಿಸುವ ಭರವಸೆಯಲ್ಲಿ ಜನಪ್ರಿಯ ಬೆಂಬಲದ ನೆಲೆಯನ್ನು ರಚಿಸಲು ಜಿಯಾ ಪ್ರಯತ್ನಿಸಿದ. ಜಿಯಾ ಉಲ್ ಹಕ್ ೧೧ ವರ್ಷಗಳ ಕಾಲ ಸಾಕಷ್ಟು ಪ್ರಧಾನ ಮಂತ್ರಿಗಳನ್ನು ಕೆಳಗಿಳಿಸಿದ್ದ. ಪಾಕ್ ನಾಗರಿಕರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊರಟು ಹೋಗಿತ್ತು. ೧೯೮೮ರಲ್ಲಿ ಜಿಯಾ ಚುನಾವಣೆ ನಡೆಸಿದ, ನಂತರ ಮುಹಮ್ಮದ್ ಖಾನ್ ಜುನೆಜೊನನ್ನು ಪ್ರಧಾನ ಮಂತ್ರಿ ಯಾಗಿ ನಾಮನಿರ್ದೇಶನ ಮಾಡಲಾಯಿತು. ಅವರು ರಾಷ್ಟ್ರೀಯ ಅಸೆಂಬ್ಲಿಯಿಂದ ಅವಿರೋಧವಾಗಿ ವಿಶ್ವಾಸಮತ ಪಡೆದಿದ್ದರು. ಪಾಕಿಸ್ತಾನ ಸರಕಾರಕ್ಕೆ ಭರವಸೆಯಾಗಿ ಕಂಡಿದ್ದ ಜುನೆಜೊ, ಸೇನೆಯಿಂದ ನಾಗರಿಕ ಅಧಿಕಾರಕ್ಕೆ ಸುಗಮ ಪರಿವರ್ತನೆಯನ್ನು ಬೆಳೆಸಿದರು.

ಇದು ಪಾಕಿಸ್ತಾನದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಬಗ್ಗೆ ಆಶಾವಾದವನ್ನು ಉಂಟು ಮಾಡಿತು. ಅವರ ಅಧಿಕಾರದ ಆರಂಭಿಕ ವರ್ಷಗಳಲ್ಲಿ, ಸಂಸದೀಯ ರುಜುವಾತುಗಳನ್ನು ಪ್ರಜಾಪ್ರಭುತ್ವ ಸಂಸ್ಥೆಯಾಗಿ ಸ್ಥಾಪಿಸುವ ಮತ್ತು ಅಧ್ಯಕ್ಷ ಜಿಯಾ ಆಶೀರ್ವಾದವನ್ನು ನಿರ್ವಹಿಸುವ ನಡುವೆ ಸಮತೋಲನ ಸಾಧಿಸಲಾಯಿತು. ಆದರೆ ಜಿಯಾ, ೧೯೮೮ರ ಮೇ ೨೯ರಂದು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿ ಪ್ರಧಾನಿಯನ್ನು ಕೆಳಗಿಳಿಸಿದ, ತನ್ನ ಸ್ಥಾನವನ್ನು ದುರ್ಬಲಗೊಳಿಸುವ ಸಲು ವಾಗಿ ಜುನೆಜೊ ತನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾನೆಂದು ಹೇಳಿಕೊಂಡ. ಇಸ್ಲಾಮಿಕ್ ಜೀವನ ವಿಧಾನವನ್ನು ಜಾರಿಗೊಳಿ
ಸುವಲ್ಲಿ ರಾಷ್ಟ್ರೀಯ ಅಸೆಂಬ್ಲಿ ವಿಫಲವಾಗಿದೆಯೆಂದ. ೯೦ ದಿನದೊಳಗೆ ಚುನಾವಣೆ ನಡೆಸಬೇಕೆಂದು ವಿಪಕ್ಷಗಳು ಕೇಳಿಕೊಂಡವು. ಇದಕ್ಕೊಪ್ಪದ ಜಿಯಾ, ಇಸ್ಲಾಮಿನ ಹೆಸರಲ್ಲಿ ರಾಜಕೀಯ ಮಾಡಿ ಚುನಾವಣೆ ನಡೆಸಲು ಒಪ್ಪಲಿಲ್ಲ.

ಪಾಕಿಸ್ತಾನದ ರಾಜಕೀಯ ಪಕ್ಷಗಳು ಚುನಾವಣಾ ಗೊಂದಲಗಳ ನಡುವೆ ಇರುವಾಗಲೇ, ೧೯೮೮ರ ಆಗಸ್ಟ್ ೧೭ರಂದು ಜಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ. ನಂತರ ಗುಲಾಮ್ ಇಶಾಕ್ ಖಾನ್ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸಿದ ಮತ್ತು ಚುನಾವಣೆಯನ್ನು ನಡೆಸಿದ. ಸೇನೆಯು ಸುಲಭ ವಾಗಿ ಅಧಿಕಾರವನ್ನು ವಶಪಡಿಸಿ ಕೊಳ್ಳಬಹುದೆಂದು ಹೆದರಿದ್ದವರಿಗೆ ಈತನ ನಡೆ ಅಚ್ಚರಿ ಯುಂಟುಮಾಡಿತು. ೧೫ ವರ್ಷಗಳ ನಂತರ ಮೊದಲ
ಬಾರಿಗೆ, ರಾಜಕೀಯ ಪಕ್ಷದ ವೇದಿಕೆಗಳನ್ನು ಆಧರಿಸಿದ ಚುನಾವಣೆ ನಡೆಯಿತು. ಯಾವುದೇ ಪಕ್ಷಕ್ಕೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತ ದಕ್ಕಲಿಲ್ಲ, ಆದರೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅತಿದೊಡ್ಡ ಪಕ್ಷವಾಗಿ ಹೊಮ್ಮಿತು.

ಸಣ್ಣ ಪಕ್ಷಗಳ ಒಕ್ಕೂಟವನ್ನು ರಚಿಸಿ ಬೆನಜೀರ್ ಭುಟ್ಟೊ ಪ್ರಧಾನ ಮಂತ್ರಿಯಾದರು. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಸರಕಾರದ ಬೊಕ್ಕಸವನ್ನು ಬರಿದುಮಾಡಿದರೆಂಬ ಕಾರಣಕ್ಕೆ ರಾಷ್ಟ್ರಪತಿಗಳು ೧೯೯೦ರಲ್ಲಿ ಭುಟ್ಟೋರನ್ನು ವಜಾಗೊಳಿಸಿ ದರು. ಈ ನಿರ್ಧಾರವನ್ನು ಅಲ್ಲಿನ ಸುಪ್ರೀಂ ಕೋರ್ಟ್
ಎತ್ತಿಹಿಡಿಯಿತು. ಹಾಗಾಗಿ ೨ ವರ್ಷದ ನಂತರ ಮತ್ತೊಮ್ಮೆ ಚುನಾವಣೆಗಳು ನಡೆದವು.

ಆದರೆ ಪಾಕಿಸ್ತಾನೀಯರು ತಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದರು. ೧೯೯೦ರಲ್ಲಿ ನವಾಜ್ ಷರೀಫರನ್ನು ಪ್ರಧಾನಿಯಾಗಿ ನಿಯೋಜಿಸಲಾಯಿತು ಮತ್ತು ೧೯೯೩ರಲ್ಲಿ ವಜಾಗೊಳಿಸಲಾಯಿತು. ನಂತರ ಬೆನಜಿರ್ ಭುಟ್ಟೊ ಮತ್ತೊಮ್ಮೆ ಅಽಕಾರದ ಚುಕ್ಕಾಣಿ ಹಿಡಿದರು. ಆದರೆ ೧೯೯೩ರಲ್ಲಿ ಮತ್ತೊಮ್ಮೆ ನಡೆದ ರಾಜಕೀಯ ಡ್ರಾಮಾದಲ್ಲಿ ಈಕೆಯನ್ನು ಕೆಳಗಿಳಿಸಲಾಯಿತು. ಮತ್ತೊಮ್ಮೆ ಚುನಾವಣೆಗೆ ಹೋಗಲು ಪಾಕ್ ನಿರ್ಧರಿಸಿತ್ತು; ಕಳೆದ ೧೨ ವರ್ಷಗಳಲ್ಲಿ ನಡೆದ ಐದನೆಯ ಚುನಾವಣೆ ಇದಾಗಿತ್ತು. ಇದಾದ ನಂತರ ಚುಕ್ಕಾಣಿ ಹಿಡಿದದ್ದು ಪರ್ವೇಜ್ ಮುಷರಫ್. ಪಾಕಿಗಳಿಗೆ ಕಾಶ್ಮೀರದ ವಿಷಯದಲ್ಲಿ ಆಕ್ರಮಣಕಾರಿಯಾಗಿ ಕಾಣುತ್ತಿದ್ದ ಈತನಿಗೆ ನವಾಜ್ ಷರೀಫ ಸಂಪೂರ್ಣ ಬೆಂಬಲ ನೀಡಲಿಲ್ಲ.

ಇದೇ ಕಾರಣಕ್ಕೆ ಮುಷರ- ೧೯೯೯ರ ಅಕ್ಟೋಬರ್ ೧೨ರಂದು ಷರೀಫ್ ಸರಕಾರವನ್ನು ಕಿತ್ತೊಗೆದು ಮತ್ತೊಮ್ಮೆ ಮಿಲಿಟರಿ ಅಧಿಕಾರವನ್ನು ಸ್ಥಾಪಿಸಿದ. ಇದು ತಾತ್ಕಾಲಿಕವೆಂದುಕೊಂಡಿದ್ದ ಪಾಕ್ ಜನರಿಗೆ ಆಘಾತವಾಗಿತ್ತು, ಕಾರಣ ೨೦೦೮ರವರೆಗೆ ಈತ ಅಧಿಕಾರದಿಂದ ಕೆಳಗಿಳಿಯಲಿಲ್ಲ. ಪಾಕಿಸ್ತಾನ ತನ್ನ ಹುಟ್ಟಿನಿಂದ ಇಂದಿನವರೆಗೂ ಭ್ರಷ್ಟಾಚಾರ ರಹಿತ ಚುನಾವಣೆ ಮತ್ತು ಸ್ಥಿರವಾದ ಆಡಳಿತವನ್ನು ಕಾಣಲಾಗಲೇ ಇಲ್ಲ. ಅಧಿಕಾರದ ಹಪಹಪಿಯ ಮಿಲಿಟರಿ ಸರ್ವಾಧಿಕಾರಿ ಆಡಳಿತ ಒಂದೆಡೆಯಾದರೆ, ಪ್ರಜಾಪ್ರಭುತ್ವ ಸ್ಥಾಪಿಸುತ್ತೇನೆಂದು ಹೇಳಿ ಜನರಿಂದ ಮತ ಪಡೆದು ಗೆದ್ದು ಭ್ರಷ್ಟಾಚಾರದ ಕೂಪದಲ್ಲಿ ಮಿಂದೆದ್ದ ರಾಜಕೀಯ ಪಕ್ಷಗಳು ಮತ್ತೊಂದೆಡೆ. ೭ ದಶಕಗಳ ಪಾಕ್ ರಾಜಕೀಯದಲ್ಲಿ ಮಿಲಿಟರಿ ಮತ್ತು ಸರಕಾರಿ ಅಧಿಕಾರಿಗಳ ಬೆಂಬಲ ವಿಲ್ಲದೆ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ.

Leave a Reply

Your email address will not be published. Required fields are marked *