Saturday, 10th May 2025

P. Chidambaram Column: ಡಾ.ಮನಮೋಹನ್‌ ಸಿಂಗ್‌ ಜತೆಗಿನ ಅನುಪಮ ಕ್ಷಣಗಳು

ಸಂಸ್ಮರಣೆ

ಪಿ.ಚಿದಂಬರಂ

ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (92) ಅವರು ಕಳೆದ ಡಿಸೆಂಬರ್ 26 ರಂದು ನಮ್ಮಿಂದ ಕಣ್ಮರೆಯಾದರು. ವೈಯಕ್ತಿಕ
ನೆಲೆಯಲ್ಲಿ ಹಾಗೂ ರಾಜಕೀಯ ವೃತ್ತಿಜೀವನದ ಹಿನ್ನೆಲೆಯಲ್ಲಿ ಹೇಳುವುದಾದರೆ, 1991ರ ಜೂನ್ 21ರಂದು ದೇಶದ ಹಣಕಾಸು ಸಚಿವರಾಗಿ
ಅವರು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಅವರೊಂದಿಗೆ ನಾನು ಹೊಂದಿದ್ದ ‘ಭಾವತಂತು’ ಕಡಿದುಹೋಯಿತು ಎನ್ನಲಡ್ಡಿಯಿಲ್ಲ. ಅವರೇ ಒಂದೆಡೆ ಹೇಳಿಕೊಂಡಂತೆ, ಮನಮೋಹನ್ ಸಿಂಗ್ ‘ಆಕಸ್ಮಿಕವಾಗಿ’ ಹಣಕಾಸು ಮಂತ್ರಿಯಾದವರು. ಏಕೆಂದರೆ, ಈ ಬಾಬತ್ತಿಗೆ
ಅಂದಿನ ಪ್ರಧಾನಿ ನರಸಿಂಹರಾಯರ ಮೊದಲ ಆಯ್ಕೆಯಾಗಿದ್ದವರು ಓರ್ವ ಗೌರವಾನ್ವಿತ ಶಿಕ್ಷಣತಜ್ಞ ಹಾಗೂ ಅರ್ಥಶಾಸ್ತ್ರಜ್ಞ ಐ.ಜಿ.
ಪಟೇಲ್ ಅವರು. ಆದರೆ ಇಂಥದೊಂದು ಹೊಣೆಯ ನೊಗವನ್ನು ಹೆಗಲಿಗೇರಿಸಿಕೊಳ್ಳಲು ಪಟೇಲ್ ನಿರಾಕರಿಸಿದ್ದರ ಜತೆಗೆ, ಮನಮೋಹನ್
ಸಿಂಗ್‌ರ ಹೆಸರನ್ನು ರಾಯರಿಗೆ ಸೂಚಿಸಿದರು.

ತಮಾಷೆಯೆಂದರೆ, ಪ್ರಮಾಣವಚನ ಸ್ವೀಕಾರದ ಸಮಾರಂಭದಂದು, ಹಿರಿಯರಂತೆ ಕಾಣುವ, ನೀಲಿ ಬಣ್ಣದ ಟರ್ಬನ್ ಧರಿಸಿದ್ದ
ಸಂಭಾವಿತ ವ್ಯಕ್ತಿಯೊಬ್ಬರು ಮೊದಲ ಸಾಲಿನಲ್ಲೇ ಉಪಸ್ಥಿತರಾಗಿದ್ದುದು ಕಂಡು ಅನೇಕರಿಗೆ ಅಚ್ಚರಿಯಾಗಿತ್ತು. ಅವರು ಸಂಪುಟ ಸಚಿವರಾಗಿ
ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದ್ದರೂ, ಪ್ರಧಾನ ಮಂತ್ರಿಗಳು ಅವರಿಗೆ ಯಾವ ಖಾತೆಯನ್ನು ನೀಡುತ್ತಾರೆ ಎಂಬುದು
ಯಾರಿಗೂ ಗೊತ್ತಿರಲಿಲ್ಲ. ಕೆಲವೇ ಗಂಟೆಗಳಲ್ಲಿ ಅವರು ನಾರ್ತ್ ಬ್ಲಾಕ್‌ನಲ್ಲಿ ಕಾಣಿಸಿಕೊಂಡರು.

ಭಾರತೀಯ ರಿಸರ್ವ್ ಬ್ಯಾಂಕು 1991ರ ಜುಲೈ 1ರಂದು ರುಪಾಯಿಯ ಅಪಮೌಲ್ಯದ ಕುರಿತು ಘೋಷಿಸಿತು. ಜುಲೈ 3ರಂದು ಮುಂಜಾನೆ ನನ್ನನ್ನು ತಮ್ಮ ಕಾರ್ಯಾಲಯಕ್ಕೆ ಕರೆಸಿಕೊಂಡ ಪ್ರಧಾನಿಯವರು, ಸದರಿ ಅಪಮೌಲ್ಯೀಕರಣದ ಕುರಿತಾದ ತಮ್ಮ ಸಂಪುಟ
ಸಹೋದ್ಯೋಗಿಗಳ ಅನುಮಾನಗಳನ್ನು (ವಾಸ್ತವ ವಾಗಿ, ಅವು ಅವರದೇ ಅನುಮಾನಗಳಾಗಿದ್ದವು ಎನ್ನಿ!) ಹಂಚಿಕೊಂರು. ಆಗ ನಾನು, “ರ-
ಕಾರ್ಯಗಳಿಗೆ ತೊಂದರೆಯಾಗಿದೆ, ವಿದೇಶಿ ವಿನಿಮಯದ ಸಂಗ್ರಹವು ಕುಸಿದಿದೆ, ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರು
ಹಿಂದೇಟು ಹಾಕುತ್ತಿದ್ದಾರೆ, ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿ ರುಪಾಯಿಯ ಮೌಲ್ಯ ಜಾಸ್ತಿಯಾಗಿದೆ” ಎಂಬಿತ್ಯಾದಿ ಚಿರಪರಿಚಿತ ‘ಆಡು
ಗಬ್ಬದ ಮಾತು’ಗಳನ್ನೇ ಅವರಿಗೆ ವಿವರಿಸಿದೆ. ಆಗ ನರಸಿಂಹರಾಯರು, “ಸದ್ಯದಲ್ಲೇ ಇನ್ನೊಂದು ಅಪಮೌಲ್ಯೀಕರಣದ ಕಸರತ್ತಿದೆ” ಎಂದು
ಹೇಳಿದ್ದರ ಜತೆಗೆ, “ನೀವೀಗ ಹಣಕಾಸು ಸಚಿವರ ಬಳಿಗೆ ತೆರಳಿ, ಆ ಎರಡನೇ ಹಂತವನ್ನು ಸ್ಥಗಿತಗೊಳಿಸದಿದ್ದರೂ ಮುಂದೂಡಬಹುದೇ ಅಂತ
ಕೇಳಿ” ಎಂದು ನನಗೆ ಸೂಚಿಸಿದರು.

ರಾಯರಿಂದ ಹೀಗೆ ಈ ಕೆಲಸಕ್ಕೆಂದು ನಿಯೋಜಿಸಲ್ಪಟ್ಟ ದೂತ ನಾನೊಬ್ಬನೇ ಅಲ್ಲ ಎಂಬುದು ನನಗೆ ಖಚಿತವಾಗಿತ್ತು. ನನ್ನಲ್ಲಿ ಒಂದಷ್ಟು ಸಂದೇಹಗಳು ಇದ್ದರೂ, ನಾರ್ತ್ ಬ್ಲಾಕ್‌ನೆಡೆಗೆ ತೆರಳಿ ಹಣಕಾಸು ಸಚಿವರ ಕಾರ್ಯಾಲಯದೊಳಗೆ ಪ್ರವೇಶಿಸಿದೆ. ಅದು ಹಣಕಾಸು ಸಚಿವರೊಂದಿಗಿನ ನನ್ನ ಮೊದಲ ಅಽಕೃತ ಭೇಟಿ ಆಗಿತ್ತು; ಅಲ್ಲಿ ನಾನು ಅವರಿಗೆ ರವಾನಿಸಿದ್ದು ಪ್ರಧಾನಿಯವರ ಮನವಿ ಯನ್ನೇ ವಿನಾ ನಿರ್ದೇಶನವನ್ನಲ್ಲ. ಅದನ್ನು ಕೇಳುತ್ತಿದ್ದಂತೆಯೇ ಡಾ.ಮನಮೋಹನ್ ಸಿಂಗ್ ಗೊಂದಲಕ್ಕೆ ಒಳಗಾದರು, ಅದನ್ನು ಅವರ ಮುಖದಲ್ಲಿ ಕಾಣಬಹುದಾಗಿತ್ತು; ಅವರ ಈ ಗೊಂದಲಕ್ಕೆ ಕಾರಣವಾಗಿದ್ದು ಅವರಿಗೆ ಮುಟ್ಟಿದ ಸಂದೇಶವೋ ಅಥವಾ ಅದನ್ನು ಹೊತ್ತು ತಂದ
ಸಂದೇಶವಾಹಕನೋ ಎಂಬುದನ್ನು ವಿಶ್ಲೇಷಿಸಲು ನಾನು ಯತ್ನಿಸುತ್ತಿದ್ದೆ. ನಾನು ರವಾನಿಸಿದ ಸಂದೇಶವನ್ನು ವಿನೀತರಾಗೇ ಕೇಳಿಸಿಕೊಂಡ ಅವರು, “ಬೆಳಗ್ಗೆ 10 ಗಂಟೆಗೆ ಮಾರುಕಟ್ಟೆಗಳು ತೆರೆದ ಕೆಲವೇ ನಿಮಿಷಗಳಲ್ಲಿ ಎರಡನೇ ಹಂತದ ಕ್ರಮವನ್ನಾಗಲೇ ಕೈಗೊಳ್ಳಲಾಗಿದೆ” ಎಂದರು.

ಈ ಬಾಬತ್ತಿಗೆ ಸಂಬಂಸಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಡಾ.ಆರ್.ಸಿ.ರಂಗರಾಜನ್ ಅವರೊಂದಿಗೆ ಡಾ.ಮನಮೋಹನ್ ಸಿಂಗ್ ಅವರು ‘ಮಾತನಾಡಿದ’ಪರಿ ಹೇಗಿತ್ತು, ಅದಕ್ಕೆ ಡಾ.ರಂಗರಾಜನ್ ಅವರು, “ಈಗಾಗಲೇ ಕ್ರಮ ಕೈಗೊಂಡಿರುವೆ”ಎಂದಿದ್ದು ಇವೆಲ್ಲವೂ ಈಗ ಅಪಮೌಲ್ಯೀಕರಣದ ಕಸರತ್ತಿನ ಸುತ್ತ ಗಿರಕಿ ಹೊಡೆಯುತ್ತಿರುವ ಮಾತುಗಳ ಭಾಗವೇ ಆಗಿ ಬಿಟ್ಟಿವೆ.‘ಆಕಸ್ಮಿಕ ಅರ್ಥ ಸಚಿವ’ ಎಂದೇ ಹಣೆಪಟ್ಟಿ ಕಟ್ಟಲಾಗಿದ್ದ ಡಾ.ಸಿಂಗ್ ಅವರು ಅದೆಂಥ ಬದ್ಧತೆಯುಳ್ಳ ಕಾರ್ಯಪಟುವಾಗಿದ್ದರು ಎಂಬುದಕ್ಕೆ ಇದೊಂದು ನಿದರ್ಶನವೇ ಸಾಕು; ತಮಗೆ ಸರಿ ಎನಿಸಿದ್ದನ್ನು ಮಾಡುವುದಕ್ಕೆ ಬೇಕಾದ ಸಂಕಲ್ಪಶಕ್ತಿಯನ್ನು ಹೊಂದಿದ್ದ ಓರ್ವ ಸಮರ್ಪಣಾ ಭಾವದ ಹಣಕಾಸು ಮಂತ್ರಿಯಾಗಿದ್ದರು ಡಾ.ಸಿಂಗ್ ಎಂಬುದನ್ನು ಈ ಘಟನೆ ಸಾಬೀತು ಪಡಿಸಿಬಿಟ್ಟಿತು. ಕೆಲ ವರ್ಷಗಳ ನಂತರ ಸರಕಾರವು ಅಳಿವು-ಉಳಿವಿನ ನಡುವೆ ತೊಯ್ದಾಡು ತ್ತಿದ್ದಾಗಲೂ ಸಿಂಗ್ ಇದೇ ಬದ್ಧತೆ, ದೃಢತೆ ಮತ್ತು ಸಂಕಲ್ಪ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದರು ಎನ್ನಬೇಕು. ಅದು ಭಾರತ ಮತ್ತು ಅಮೆರಿಕ ನಡುವಿನ ಪ್ರಸ್ತಾವಿತ ನಾಗರಿಕ ಪರಮಾಣು ಒಪ್ಪಂದವು ಎಡಪಕ್ಷಗಳ, ಅದರಲ್ಲೂ ವಿಶೇಷವಾಗಿ ಸಿಪಿಐ(ಎಂ)ನ ತೀವ್ರ ವಿರೋಧಕ್ಕೆ ಒಳಗಾದ ಘಟ್ಟವಾಗಿತ್ತು.

ಈ ಒಡಂಬಡಿಕೆಗೆ ಅಸ್ತು ಎಂದಿದ್ದೇ ಆದಲ್ಲಿ, ಕೇಂದ್ರದ ಯುಪಿಎ ಸರಕಾರಕ್ಕೆ ನೀಡಲಾಗಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಬೆದರಿಕೆಯೊಡ್ಡಿದ್ದರು. ಅನ್ಯಥಾ ಪ್ರಧಾನ ಮಂತ್ರಿ ಯವರನ್ನೂ ಮತ್ತು ಈ ಒಪ್ಪಂದವನ್ನೂ ಬೆಂಬಲಿಸುತ್ತಿದ್ದ ಅನೇಕ ಕಾಂಗ್ರೆಸ್ ನಾಯಕರು, ಈ ಬೆಳವಣಿಗೆಯಿಂದಾಗಿ ಒಂದು ವೇಳೆ ಸರಕಾರವು ತನ್ನ ಬಹುಮತವನ್ನು ಕಳೆದುಕೊಂಡಲ್ಲಿ, ಹೇಗಿದ್ದರೂ ಸ್ಥಗಿತಗೊಳ್ಳುವ ಒಂದು ಒಪ್ಪಂದಕ್ಕಾಗಿ ಸರಕಾರವನ್ನು ತ್ಯಾಗ ಮಾಡುವ ಬಗ್ಗೆ ತಮ್ಮದೇ ಆದ ಅನುಮಾನಗಳು, ಗೊಂದಲಗಳು ಅಥವಾ ಅನಿಶ್ಚಿತತೆಗಳನ್ನು ಹೊಂದಿದ್ದರು. ಆದರೆ ಡಾ.ಸಿಂಗ್ ತಮ್ಮ ಪಟ್ಟು ಸಡಿಲಿಸಲು ಸಿದ್ಧರಿರಲಿಲ್ಲ. ಆಗ ಅವರು, “ಈ ಒಡಂಬಡಿಕೆಯನ್ನು
ಕೈಬಿಡುವಂತೆ ಒಂದು ವೇಳೆ ಕಾಂಗ್ರೆಸ್ ಪಕ್ಷವು ನನ್ನನ್ನು ಒತ್ತಾಯಿಸಿದಲ್ಲಿ, ರಾಜೀನಾಮೆ ನೀಡುವುದನ್ನು ಬಿಟ್ಟರೆ ನನಗೆ ಬೇರೆ ದಾರಿಯಿಲ್ಲ”
ಎಂದು ನನ್ನೊಂದಿಗೆ ಹೇಳಿಕೊಂಡರು. ಅವರ ಅಭಿಪ್ರಾಯ/ದೃಷ್ಟಿಕೋನ ಬಲವಾಗಿದೆ, ವಿವೇಚನಾಯುತವಾಗಿದೆ ಎಂದು ನನಗನಿಸಿ
ದರೂ, ಇತರ ಪಕ್ಷಗಳಿಂದ ಬೆಂಬಲ ಪಡೆಯುವ ಆಯ್ಕೆಯನ್ನು ಪರಿಶೀಲಿಸುವಂತೆ ಅವರನ್ನು ಉತ್ತೇಜಿಸಿದೆ.

ಆಗ ಡಾ.ಸಿಂಗ್ ಅವರಿಂದ ಹೊಮ್ಮಿತು ನೋಡಿ ‘ಮಾಸ್ಟರ್ ಸ್ಟ್ರೋಕ್’. ಬೆಂಬಲದ ಹೇಳಿಕೆಯನ್ನು ನೀಡುವಂತೆ ಮಾಜಿ ರಾಷ್ಟ್ರಪತಿ ಅಬ್ದುಲ್
ಕಲಾಂರ ಮನವೊಲಿಸಿದ ಡಾ.ಸಿಂಗ್ ಅವರು, ಮುಲಾಯಂಸಿಂಗ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಬೆಂಬಲವನ್ನು ಗಳಿಸಲು ಆ ಹೇಳಿಕೆ
ಯನ್ನು ಬಳಸಿಕೊಂಡರು. ಎಡಪಕ್ಷಗಳು ಒಡ್ಡಿದ್ದ ಸವಾಲಿಗೆ ಸರಿಯಾದ ಪ್ರತ್ಯುತ್ತರವೇ ಹೊಮ್ಮಿತು, ಸರಕಾರವು ವಿಶ್ವಾಸ ಮತವನ್ನು ಗೆದ್ದಿದ್ದರ ಜತೆಗೆ, ಅಂದುಕೊಂಡ ಸಮಯದಲ್ಲಿಯೇ ಸದರಿ ಪರಮಾಣು ಒಪ್ಪಂದವನ್ನೂ ಸಂಪನ್ನಗೊಳಿಸಿತು.

ಎಡಪಕ್ಷಗಳು ಸರಕಾರಕ್ಕೆ ನೀಡಿದ್ದ ಬೆಂಬಲ ವನ್ನು ಹಿಂತೆಗೆದುಕೊಂಡ ನಂತರವೂ, ಡಾ.ಸಿಂಗ್ ಅವುಗಳೆಡೆ ಕಹಿ ಕಾರಲಿಲ್ಲ ಎಂಬುದು ಅವರ
ಮೃದುಸ್ವಭಾವಕ್ಕೆ ದ್ಯೋತಕ; ಆ ಪಕ್ಷಗಳ ನಾಯಕರನ್ನು ಗೌರವಯುತವಾಗಿಯೇ ನಡೆಸಿ ಕೊಂಡಿದ್ದರ ಜತೆಗೆ ಅವರೊಂದಿಗೆ ಸೌಹಾರ್ದ
ಯುತ ಸಂಬಂಧವನ್ನೂ ಸಿಂಗ್ ಮುಂದುವರಿಸಿದರು. ಸಂದಿಗ್ಧತೆಗೆ ಆಸ್ಪದವೇ ಇಲ್ಲದ ಡಾ.ಸಿಂಗ್ ಅವರ ಸುಸ್ಪಷ್ಟ ಬೆಂಬಲವಿಲ್ಲದೆ ಹೋಗಿದ್ದರೆ,
ಯುಪಿಎ ಸರಕಾರದ ‘ಹೆಗ್ಗುರುತು’ ಎನಿಸಿಕೊಂಡಿರುವ ಪ್ರಮುಖ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದಕ್ಕಾಗಲೀ ಅಥವಾ ಕಾರ್ಯ
ಗತಗೊಳಿಸುವುದಕ್ಕಾಗಲೀ ಸಾಧ್ಯವೇ ಇರಲಿಲ್ಲ ಎಂಬುದು ಕೆಲವರಷ್ಟೇ ಅರಿತಿರುವ ಸಂಗತಿ.

ಇಂಥ ಕಾರ್ಯಕ್ರಮಗಳ ಸಾಕಷ್ಟು ನಿದರ್ಶನ ಗಳಿವೆಯಾದರೂ ಅವುಗಳ ಪೈಕಿ ಕೃಷಿ ಸಾಲ ಮನ್ನಾ (2008) ಮತ್ತು ರಾಷ್ಟ್ರೀಯ ಆಹಾರ
ಭದ್ರತೆ (2013) ಎಂಬೆರಡು ಉಪಕ್ರಮಗಳನ್ನು ಉಲ್ಲೇಖಿಸಬಹುದು. ಡಾ.ಸಿಂಗ್ ಅವರು ಈ ಎರಡೂ ಜನಕಲ್ಯಾಣ ಕಾರ್ಯಕ್ರಮಗಳೆಡೆಗೆ ಬಲವಾದ ಒತ್ತಾಸೆಯನ್ನು ಹೊಂದಿದ್ದರಾದರೂ, ಅವು ವಿತ್ತೀಯ ಕೊರತೆಯ ಮೇಲೆ ಬೀರಬಹುದಾದ ಪ್ರಭಾವದ ಕುರಿತು ಒಂದು ಕಣ್ಣಿಡುವಂತೆ ನನ್ನನ್ನು ಪದೇಪದೆ ಎಚ್ಚರಿಸುತ್ತಿದ್ದರು. ಸ್ಥೂಲ- ಆರ್ಥಿಕ ಸ್ಥಿರತೆಯು ಒಂದೊಮ್ಮೆ ಕೈತಪ್ಪಿದಲ್ಲಿ, ಮಧ್ಯಮಾವಽಯಲ್ಲಿ ಅಥವಾ ದೀರ್ಘಾವಧಿಯಲ್ಲಿ ಯಾವ ಜನಕಲ್ಯಾಣ ಕಾರ್ಯಕ್ರಮಗಳನ್ನೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂಬ ಸೂಕ್ಷ್ಮ ಸಂಗತಿಯನ್ನು ಅವರು ಬೇರಾವ ರಾಜಕೀಯ ನಾಯಕರಿಗಿಂತಲೂ ಚೆನ್ನಾಗಿ ಅರಿತಿದ್ದರು. ವಿತ್ತೀಯ ಕೊರತೆಯ ಗುರಿಯನ್ನು ಸರಕಾರವು ಪೂರೈಸುತ್ತದೆ ಎಂಬುದು ತಮಗೆ ಖಾತ್ರಿಯಾದಾಗ, ಸದರಿ ಜನಕಲ್ಯಾಣ ಕಾರ್ಯ ಕ್ರಮಗಳನ್ನು ಸಿಂಗ್ ಅನುಮೋದಿಸಿದರು.

ಡಾ.ಸಿಂಗ್ ಒಬ್ಬ ಸಹಜ ಸುಧಾರಕರಾಗಿದ್ದುದು ಹೌದಾದರೂ, ಬಡಜನರ ಪರವಾಗಿ ಅವರು ಪ್ರಜ್ಞಾಪೂರ್ವಕವಾಗಿ ಒಲವು ತೋರಿ
ದರು ಎನ್ನಬೇಕು. ಬಹುಮುಖಿ ಬಾಹ್ಯವೆಚ್ಚ ಗಳನ್ನು ಹೊಂದಿದ್ದ ಜನಕಲ್ಯಾಣ ಕಾರ್ಯಕ್ರಮಗಳ ಪ್ರಬಲ ಸಮರ್ಥಕರಾಗಿದ್ದ ಡಾ.ಸಿಂಗ್,
ಉದಾರವಾದಿ ಜನಕಲ್ಯಾಣದ ಉಪಕ್ರಮ ಜತೆಜತೆಗೆ ಆರ್ಥಿಕ ಸುಧಾರಣೆಗಳನ್ನೂ ಕೈಗೂಡಿಸಿಕೊಳ್ಳಬಹುದು ಎಂಬುದನ್ನು ನಮಗೆ
ಕಲಿಸಿಕೊಟ್ಟರು. ಇಂದು ನಾವು ಕಾಣುತ್ತಿರುವ ಮಧ್ಯಮ ವರ್ಗವನ್ನು ಸೃಷ್ಟಿಸಿದ್ದು ಡಾ.ಸಿಂಗ್ ಅವರ ಕಾರ್ಯನೀತಿಗಳೇ ಎಂಬ ಮಾತನ್ನೂ
ನಾನು ದೃಢವಾಗಿ ನಂಬುತ್ತೇನೆ.

ಇಲ್ಲಿ ಮತ್ತೊಂದು ಸ್ವಾರಸ್ಯಕರ ಸಂಗತಿಯನ್ನು ಹೇಳಬೇಕು. ಒಂದು ಕಾಲಘಟ್ಟದಲ್ಲಿ ಭಾರತವು ಒಂದೇ ಒಂದು ದೂರದರ್ಶನ ವಾಹಿನಿ, ಏಕೈಕ ಕಾರು ತಯಾರಕ ಸಂಸ್ಥೆ, ಒಂದೇ ವಿಮಾನಯಾನ ಸಂಸ್ಥೆ, ಏಕೈಕ ದೂರವಾಣಿ ಸೇವಾದಾತ ಕಂಪನಿಗೆ ಮಾತ್ರವೇ ಸಾಕ್ಷಿಯಾಗಿತ್ತು, ಟ್ರಂಕ್ ಕಾಲ್ ಬುಕ್ ಮಾಡಿ ಕಾಯಬೇಕಾಗಿ ಬರುತ್ತಿತ್ತು, ಪಿಸಿಒ/ಎಸ್ ಟಿಡಿ/ಐಎಸ್‌ಡಿ ಬೂತ್‌ಗಳ ಎದುರು ಸರತಿಸಾಲು ಬಾಲದಂತೆ ಬೆಳೆದಿರುತ್ತಿತ್ತು, ದ್ವಿಚಕ್ರ ವಾಹನ ಗಳಿಂದ ಮೊದಲ್ಗೊಂಡು ಟ್ರೇನಿನ ಟಿಕೆಟ್ಟುಗಳು ಮತ್ತು ಪಾಸ್‌ಪೋರ್ಟ್‌ಗಳವರೆಗಿನ ಪ್ರತಿಯೊಂದಕ್ಕೂ ಸುದೀರ್ಘ ಕಾಲದವರೆಗೆ ಕಾಯಬೇಕಾಗಿ ಬರುತ್ತಿತ್ತು ಎಂಬ ಸಂಗತಿಯನ್ನು ಇಂದಿನ ಪೀಳಿಗೆಯವರು (ಆಂದರೆ 1991ರ ನಂತರ ಹುಟ್ಟಿದವರು) ನಂಬುವುದು ಸ್ವಲ್ಪ
ಕಷ್ಟವೇ! ಆದರೆ, ಡಾ.ಸಿಂಗ್ ಅವರು ಬದಲಾವಣೆಯ ಬೀಜಗಳನ್ನು ಬಿತ್ತಿದ್ದೇ ಬಿತ್ತಿದ್ದು, ಒಂದಿಡೀ ದೇಶದಲ್ಲೇ ಸುಧಾರಣೆಯ ಕ್ರಾಂತಿ
ಯಾಗಿಬಿಟ್ಟಿತು. ಈ ಸತ್ಯವನ್ನು ಪ್ರಧಾನಿ ಮೋದಿಯವರು ತಡವಾಗಿಯಾದರೂ ಒಪ್ಪಿಕೊಂಡಿದ್ದಾರೆ ಎನ್ನಿ.

ಇತಿಹಾಸವು ಡಾ.ಮನಮೋಹನ್ ಸಿಂಗ್ ಅವರಿಗೆ ದಯೆ ತೋರುತ್ತದೋ ಇಲ್ಲವೋ ಎಂಬುದು ಬೇರೆ ವಿಷಯ; ಆದರೆ, ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಎರಡು ಹೆಜ್ಜೆಗುರುತು ಗಳನ್ನಂತೂ ಅವರು ಮೂಡಿಸಿದ್ದಾರೆ ಎಂಬುದನ್ನು ನಾನು ದೃಢವಾಗಿ ನಂಬುತ್ತೇನೆ. ಮೊದಲನೆಯದು- ತಮ್ಮ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಡಾ.ಸಿಂಗ್ ಅವರು ಸರಾಸರಿ 6.8ರಷ್ಟು ಜಿಡಿಪಿ ಬೆಳವಣಿಗೆ ಮಟ್ಟವನ್ನು ದಾಖಲಿಸಿದರು. ಎರಡನೆ ಯದು (ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಪ್ರಕಾರ)- ಈ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಯುಪಿಎ ಸರಕಾರವು ಸುಮಾರು 270 ದಶಲಕ್ಷ ಜನರನ್ನು ಬಡತನದ ಬಿಗಿಮುಷ್ಟಿಯಿಂದ ಹೊರಸೆಳೆದು ಮೇಲಕ್ಕೆತ್ತಿತು. ಈ ಎರಡೂ ಸಾಧನೆಗಳು ಅಭೂತಪೂರ್ವವಾಗಿದ್ದವು ಮತ್ತು ಅಲ್ಲಿಂದೀಚೆಗೆ ಅವುಗಳ ಅನುಸರಣೆಯಾಗಿಲ್ಲ ಎಂಬುದು ಗಮನಾರ್ಹ ಅಂಶ. ಇತಿಹಾಸ ನೀಡಿದ ತೀರ್ಪು ಈಗಾಗಲೇ ನಿಮ್ಮೆದುರಿಗೆ
ಸಾಕ್ಷಿಯಾಗಿದೆ ಎಂದಷ್ಟೇ ಹೇಳಬಲ್ಲೆ.

(ಲೇಖಕರು ಹಿರಿಯ ಕಾಂಗ್ರೆಸ್ಸಿಗರು)

ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ

Leave a Reply

Your email address will not be published. Required fields are marked *