ಮೂರ್ತಿ ಪೂಜೆ
ಕಳೆದ ವಾರ ಪಣಜಿಗೆ ಹೋದ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್
ಸಾವಂತ್ ಅವರನ್ನು ಭೇಟಿ ಮಾಡಿದರು. ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿ ಗಟ್ಟಿಯಾಗಲು ಜಲ್ಲಿ, ಮರಳು, ಸಿಮೆಂಟನ್ನು ಹದವಾಗಿ ಬೆರೆಸುತ್ತಿರುವ ಪ್ರಮೋದ್ ಸಾವಂತ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೆಡಿಎಸ್ ಬಗ್ಗೆ ಅತೀವ ನಂಬಿಕೆ ಬರುವಂತೆ ಮಾಡಿದ್ದಾರಂತೆ.
ಅಷ್ಟೇ ಅಲ್ಲ, ಉಭಯ ಪಕ್ಷಗಳ ನಡುವಣ ಮೈತ್ರಿಗೆ ಪೂರಕವಾಗಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜೆಡಿಎಸ್ಗೆ ೬ ಸೀಟುಗಳನ್ನು ಬಿಟ್ಟುಕೊಡಲು ವೇದಿಕೆ ರೆಡಿ ಮಾಡಿರುವ ಪ್ರಮೋದ್ ಸಾವಂತ್ ಈ ಕುರಿತು ಚರ್ಚಿಸಲು ಕುಮಾರಸ್ವಾಮಿ ಅವರನ್ನು ಪಣಜಿಗೆ ಆಹ್ವಾನಿಸಿದ್ದರು. ಈ ಆಹ್ವಾನದ ಮೇರೆಗೆ ಪಣಜಿಗೆ ಹೋದ ಕುಮಾರಸ್ವಾಮಿಯವರು ಪ್ರಮೋದ್ ಸಾವಂತ್ ಅವರು ತೋರಿಸಿದ ಕಕ್ಕುಲತೆಯನ್ನು ಕಂಡು ಫುಲ್ ಫಿದಾ ಆಗಿಹೋಗಿ ದ್ದಾರೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿಗೆ ಒಳ್ಳೆಯ ಮೈತ್ರಿಪಕ್ಷ ಜತೆಯಾಗದ ಕಾರಣಕ್ಕಾಗಿ ಅನುಭವಿಸಿದ ನಿರಾಸೆಯನ್ನು ಅವತ್ತು ಕುಮಾರಸ್ವಾಮಿ ಅವರಿಗೆ ವಿವರಿಸಿದ ಪ್ರಮೋದ್ ಸಾವಂತ್, ‘ಕರ್ನಾಟಕದಲ್ಲಿ ಈ ಕೊರತೆ ಯನ್ನು ನೀವು ನೀಗಿಸಿದ್ದೀರಿ’ ಎಂದು ತಾರೀಫ್ ಮಾಡಿದರಂತೆ.
ಇದಾದ ನಂತರ ವಿಷಯಕ್ಕೆ ಬಂದ ಪ್ರಮೋದ್ ಸಾವಂತ್, ‘ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಾವು ಎರಡು ಸುತ್ತಿನ ಸರ್ವೆ ಮಾಡಿಸಿದ್ದೇವೆ. ಅದರ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮಿನಿಮಮ್ ೨೨ ಸ್ಥಾನಗಳಲ್ಲಿ ಗೆಲ್ಲಲಿದೆ. ಇನ್ನಷ್ಟು ವರ್ಕ್ಔಟ್ ಮಾಡಿದರೆ ೨೫ ಸೀಟುಗಳ ಗಡಿ ತಲುಪಬಹುದು. ಇದೇ ರೀತಿ ಹಾಸನ, ಮಂಡ್ಯ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಜೆಡಿಎಸ್ ಪಕ್ಷಕ್ಕೆ ೬ ಸೀಟುಗಳನ್ನು ಬಿಟ್ಟುಕೊಡುವುದು ಸೂಕ್ತ ಎಂದು ಕೇಂದ್ರ ಗೃಹ ಸಚಿವರಿಗೆ ನಾನು ಮೆಸೇಜು ತಲುಪಿಸಿದ್ದೇನೆ ಎಂದು ಹೇಳಿದಾಗ, ಕುಮಾರ ಸ್ವಾಮಿ ಅವರು ‘ನೀವು ಆರು ಸೀಟು ಕೊಟ್ಟರೂ ಓಕೆ, ನಾಲ್ಕೇ ಸೀಟು ಕೊಟ್ಟರೂ ಓಕೆ. ಕಳೆದ ವಿಧಾನಸಭೆ ಚುನಾವಣೆಯ ಮತ ಹಂಚಿಕೆ ಪ್ರಮಾಣ ವನ್ನು ಗಮನಿಸಿದರೆ ನಾವು ಹಾಸನ, ಮಂಡ್ಯ, ತುಮಕೂರು ಮತ್ತು ಕೋಲಾರಗಳಲ್ಲಿ ನಿರಾಯಾಸವಾಗಿ ಜಯಗಳಿಸುತ್ತೇವೆ.
ಉಳಿದಂತೆ ಚಿಕ್ಕಬಳ್ಳಾಪುರದಲ್ಲಿ ನಮಗೆ ಪವರ್ ಇದೆಯಾದರೂ ಟಿಕೆಟ್ಟಿಗಾಗಿ ನಿಮ್ಮ ಪಕ್ಷದವರ ಒತ್ತಡ ಜಾಸ್ತಿಯಾಗಬಹುದು. ಹೀಗಾಗಿ ನೀವೇ ಚಿಕ್ಕಬಳ್ಳಾಪುರವನ್ನು ಇಟ್ಟು ಕೊಂಡರೆ ಓಕೆ. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವಿಷಯದಲ್ಲಿ ನಾನೇ ನಿಮಗೆ ಒಂದು
ಮಾತು ಹೇಳಲು ಬಯಸುತ್ತೇನೆ. ಅದೆಂದರೆ ಅಲ್ಲಿ ಮಾಜಿ ಸಚಿವ, ಬಿಜೆಪಿಯ ಸಿ.ಪಿ.ಯೋಗೀಶ್ವರ್ ಅವರಿಗೆ ಬಿಜೆಪಿ ಟಿಕೆಟ್ ಕೊಡುವುದು ಬೆಸ್ಟು. ನೀವು ಹಾಗೆ ಮಾಡಿದರೆ ನಾನೇ ಮುಂದೆ ನಿಂತು ಯೋಗೀಶ್ವರ್ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ’ ಎಂದರು.
ಅದಕ್ಕೆ ಪ್ರಮೋದ್ ಸಾವಂತ್ ಹಸನ್ಮುಖಿಯಾಗಿ, ‘ನನಗೆ ಗೊತ್ತಿದೆ ಮಿಸ್ಟರ್ ಕುಮಾರ ಮಿ, ನೀವು ನಮ್ಮ ಪಕ್ಷಕ್ಕೆ ಪ್ಲಸ್ ಆಗಿ ಕೆಲಸ ಮಾಡುತ್ತೀರಿ.
ಅದೇ ನಂಬಿಕೆ ಅಮಿತ್ ಶಾ ಮತ್ತು ಮೋದಿಯವರಿಗೂ ಇದೆ’ ಎಂದಾಗ, ‘ನಮ್ಮ ಪಕ್ಷಕ್ಕೆ ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ಮೈಸೂರು ಸೇರಿದಂತೆ ಹತ್ತಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಪವರ್ ಇದೆ. ಅಲ್ಲೆಲ್ಲ ಬಿಜೆಪಿ ಕ್ಯಾಂಡಿಡೇಟುಗಳನ್ನು ಗೆಲ್ಲಿಸಿ ಪ್ರೂವ್ ಮಾಡುತ್ತೇವೆ’ ಎಂದರಂತೆ ಕುಮಾರಸ್ವಾಮಿ. ‘ಈ ಮಧ್ಯೆ ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಲು ದಿಲ್ಲಿಯಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರು ರೆಡಿಯಾಗಿದ್ದಾರೆ’ ಎಂದು ಪ್ರಮೋದ್ ಸಾವಂತ್ ಹೇಳಿದಾಗ, ‘ಇರಲಿ ಸರ್, ಐದು ರಾಜ್ಯಗಳ ಚುನಾವಣೆಯಲ್ಲಿ ಅವರೆಲ್ಲ ಬ್ಯುಸಿಯಾಗಿದ್ದಾರೆ. ಆ
ಪ್ರೊಸೆಸ್ಸು ಮುಗಿಯಲಿ, ನಂತರ ಘೋಷಿಸಿದರಾಯಿತು’ ಎಂದರಂತೆ ಕುಮಾರಸ್ವಾಮಿ.
ಅಂದ ಹಾಗೆ, ಪ್ರಮೋದ್ ಸಾವಂತ್ ಅವರಿಗೆ ದಿಲ್ಲಿಯ ಬಿಜೆಪಿ ಪಡಸಾಲೆಯಲ್ಲಿ ದೊಡ್ಡ ಮಟ್ಟದ ಪವರ್ ಇದೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವನ್ನು ಅಲುಗಾಡಿಸುವ ಕಾರ್ಯದ ಒಂದೊಂದು ಬೆಳವಣಿಗೆ ಯೂ ಪ್ರಮದ್ ಸಾವಂತ್ ಅವರ ಕಿವಿಗೆ ತಲುಪುತ್ತಿದೆ. ಅರ್ಥಾತ್, ಕರ್ನಾಟಕ ಸರಕಾರವನ್ನು ಅಲುಗಾಡಿಸುವ ‘ಆಪರೇಷನ್ ಪಣಜಿ’ಯ ಕಿಂಗ್ಪಿನ್ ಬೇರೆ ಯಾರೂ ಅಲ್ಲ, ಇದೇ ಪ್ರಮೋದ್ ಸಾವಂತ್. ಒಂದು ಮೂಲದ ಪ್ರಕಾರ, ಈಗಾಗಲೇ ಮುಂಬಯಿ-ಕರ್ನಾಟಕ ಮತ್ತು ಮಧ್ಯ-ಕರ್ನಾಟಕದ ೩೦ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಪ್ರಮೋದ್ ಸಾವಂತ್ ಸಂಪರ್ಕದಲ್ಲಿದ್ದಾರೆ.
ಶೋಭಾ ಓಕೆ, ಪ್ರಾಬ್ಲಂ ಯಾಕೆ?
ಅಂದ ಹಾಗೆ, ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬರುವುದು ಬಹುತೇಕ ಖಚಿತವಾಗಿದೆ. ಕರ್ನಾಟಕದಲ್ಲಿ ಪಕ್ಷದ ಬಹುತೇಕ ಜಿಲ್ಲಾ ಘಟಕಗಳ ಅಭಿಪ್ರಾಯ, ಯಡಿಯೂರಪ್ಪ ಮತ್ತು ಯಡಿಯೂರಪ್ಪ ವಿರೋಧಿ ಬಣಗಳ ಅಭಿಪ್ರಾಯ ಅಂತಿಮವಾಗಿ ಶೋಭಾ ಕರಂದ್ಲಾಜೆ ಅವರ ಪರವಾಗಿರುವುದರಿಂದ ಖುದ್ದು ಪ್ರಧಾನಿ ನರೇಂದ್ರ ಮೋದಿ ಈ ಹೆಸರಿಗೆ ಕ್ಲಿಯರೆನ್ಸ್ ಕೊಟ್ಟಿದ್ದಾರಂತೆ.
ಅವರು ಕ್ಲಿಯರ್ ಮಾಡಿದ -ಲು ಸದ್ಯಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಟೇಬಲ್ಲಿನ ಮೇಲಿದ್ದು ಅಕ್ಟೋಬರ್ ೨೯ರ ಚಂದ್ರಗ್ರಹಣ
ಮುಗಿದಿರುವುದರಿಂದ ಯಾವ ಕ್ಷಣದಲ್ಲಾದರೂ ಅನೌನ್ಸ್ ಆಗಬಹುದು ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಆದರೆ ಶೋಭಾ ಕರಂದ್ಲಾಜೆ ಪಕ್ಷದ ಅಧ್ಯಕ್ಷರಾಗುವ ವಿಷಯ ರಾಜ್ಯ ಬಿಜೆಪಿಯ ಒಕ್ಕಲಿಗ ಪಾಳಯಕ್ಕೆ ಕಿರಿಕಿರಿ ಉಂಟುಮಾಡಿದೆ. ಈಗಾಗಲೇ ಈ ಪಾಳಯದಲ್ಲಿರುವ ಇಬ್ಬರು ಸಿಎಂ ಕ್ಯಾಂಡಿಡೇಟುಗಳು, ‘ಈ ತೀರ್ಮಾನ ಪಕ್ಷಕ್ಕೆ ಹೊರೆಯಾಗಬಹುದು’ ಅಂತ ನಡ್ಡಾ ಅವರಿಗೆ ಸಂದೇಶ ಕಳಿಸಿದ್ದಾರೆ. ಇದೇ ರೀತಿ ಒಕ್ಕಲಿಗ ಪಾಳಯದ ಹಿರಿಯ ನಾಯಕರೊಬ್ಬರಿಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶೋಭಾ ಬರುವ ಸೂಚನೆ ಸಿಗುತ್ತಿದ್ದಂತೆಯೇ, ಬಸವರಾಜ ಪಾಟೀಲ್ ಸೇಡಂ ಅವರು ರಾಜ್ಯಾಧ್ಯಕ್ಷರಾಗಿದ್ದ ಕಾಲದಲ್ಲಿ ಪಕ್ಷದ ಕಚೇರಿಗೆ ಬಂದ ಅಮಾಯಕ ಮುಖಭಾವದ ಶೋಭಾ ಕರಂದ್ಲಾಜೆಯವರ ಚಿತ್ರ ಕಣ್ಣ ಮುಂದೆ ಬರುತ್ತಿದೆ ಯಂತೆ.
ಹೀಗಾಗಿ ಒಕ್ಕಲಿಗ ಪಾಳಯದ ಬಹುತೇಕ ನಾಯಕರು, ಒಂದೋ ತಮ್ಮಲ್ಲೇ ಯಾರಿಗಾದರೂ ಒಬ್ಬರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಸಿಗಲಿ, ಇಲ್ಲವೇ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗಾದರೂ ಪಟ್ಟ ಕಟ್ಟಿ ಎಂಬ ಸಂದೇಶ ದೆಹಲಿ ತಲುಪುವಂತೆ ಮಾಡಿದ್ದಾರೆ.
ವಿಜಯಣ್ಣನ ಕೈಗೆ ಅಂಟಿನುಂಡೆ?
ಈ ಮಧ್ಯೆ ಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಲು ಸತತ ಕಸರತ್ತು ನಡೆಸಿದ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಟಿನುಂಡೆ ಕೊಟ್ಟಿದ್ದಾರೆ. ‘ನೀವು ಪಕ್ಷದ ರಾಜ್ಯಾಧ್ಯಕ್ಷರಾಗಲು ಅರ್ಹರಿದ್ದೀರಿ ಅಂತ ನನಗೆ ಗೊತ್ತಿದೆ. ಆದರೆ ಕೆಲವು
ಕಾರಣಗಳಿಗಾಗಿ ಈ ಜಾಗಕ್ಕೆ ಬರಲು ಒಂದಷ್ಟು ಕಾಲ ಕಾಯುವುದು ಒಳ್ಳೆಯದು. ಮುಂದಿನ ಅಸೆಂಬ್ಲಿ ಎಲೆಕ್ಷನ್ ಟೈಮಿನಲ್ಲಿ ನೀವು ಅಧ್ಯಕ್ಷರಾದರೆ ಪಕ್ಷಕ್ಕೂ ಒಳ್ಳೆಯದು, ನಿಮ್ಮ ನಾಯಕತ್ವಕ್ಕೂ ಒಳ್ಳೆಯದು’ ಅಂತ ಅಮಿತ್ ಶಾ ಅವರು ವಿಜಯೇಂದ್ರರಿಗೆ ಹೇಳಿದ್ದಾರಂತೆ.
‘ಕಳೆದ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಕರ್ನಾಟಕದ ಲಿಂಗಾಯತರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿರುವುದು ನಿಜ. ಆದರೆ ನಮಗೆ ಬರುತ್ತಿರುವ ಫೀಡ್ಬ್ಯಾಕು ಗಳ ಪ್ರಕಾರ ಕಾಂಗ್ರೆಸ್ ಬಗ್ಗೆ ಲಿಂಗಾಯತರಿಗೆ ಈಗಾಗಲೇ ಭ್ರಮನಿರಸನ ಶುರುವಾಗಿದೆ. ಮುಂದಿನ ಅಸೆಂಬ್ಲಿ ಎಲೆಕ್ಷನ್ ಟೈಮಿಗೆ ಇದು ಮತ್ತಷ್ಟು ಹೆಚ್ಚಾಗುತ್ತದೆ. ಅಂಥ ಸಂದರ್ಭದಲ್ಲಿ ನೀವು ಕರ್ನಾಟಕದ ಬಿಜೆಪಿ ಅಧ್ಯಕ್ಷರಾದರೆ ಕಾಂಗ್ರೆಸ್ ಕಡೆ ಹೋಗಿರುವ ಲಿಂಗಾಯತರಿಗೆ ಒಂದು ಔಟ್ಲೆಟ್ಟು ಸಿಕ್ಕಂತಾಗುತ್ತದೆ.
ಆ ಮೂಲಕ ನಿಮ್ಮ ಲೀಡರ್ಷಿಪ್ಪಿಗೆ ಶಕ್ತಿ ಬರುತ್ತದೆ’ ಎಂದು ಅಮಿತ್ ಶಾ ಅವರು ವಿಜಯೇಂದ್ರರಿಗೆ ವಿವರಿಸಿದ್ದಾರೆ. ಅಮಿತ್ ಶಾ ಮಾತುಗಳಲ್ಲಿ ಸತ್ಯ ಇದೆ ಎಂಬುದು ವಿಜಯೇಂದ್ರ ಅವರಿಗೂ ಗೊತ್ತು. ಆದರೂ ರಾಜ್ಯ ಬಿಜೆಪಿಯ ಮೇಲೆ ಈಗಿನಿಂದಲೇ ಹಿಡಿತ ಸಾಧಿಸಬೇಕು ಎಂಬುದು ವಿಜಯೇಂದ್ರ ಅವರ ಆಕಾಂಕ್ಷೆ. ಇವತ್ತು ರಾಜ್ಯಾಧ್ಯಕ್ಷರಾದರೆ ಮುಂದಿನ ಎಲೆಕ್ಷನ್ ಟೈಮಿಗೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಎಂಬುದು ಅವರ
ಯೋಚನೆ. ಹೀಗಾಗಿ ಅಮಿತ್ ಶಾ ಕೊಟ್ಟ ಅಂಟಿನುಂಡೆಯನ್ನು ಸ್ವೀಕರಿಸಿದರೂ ಆಳದಲ್ಲಿ ರಾಜ್ಯಾಧ್ಯಕ್ಷರಾಗುವ ತಮ್ಮ ಆಸೆಯನ್ನು ವಿಜಯೇಂದ್ರ ಈ ಕ್ಷಣದವರೆಗೆ ಕೈಬಿಟ್ಟಿಲ್ಲ.
ರೆಡಿಯಾಗುತ್ತಿದೆಯಾ ಸೂಸೈಡ್ ಸ್ಕ್ವಾಡು?
ಇನ್ನು ರಾಜ್ಯ ಕಾಂಗ್ರೆಸ್ನಲ್ಲಿ ಸದ್ದಿಲ್ಲದೆ ಸೂಸೈಡ್ ಸ್ಕ್ವಾಡು ರೆಡಿ ಆಗುತ್ತಿದೆ. ಅಷ್ಟೇ ಅಲ್ಲ, ಈಗಾಗಲೇ ಹಲವು ಸುತ್ತಿನ ಚರ್ಚೆ ನಡೆಸಿ ಮುಂದಿಡಬೇಕಾದ ಹೆಜ್ಜೆಗಳ ರೂಪುರೇಷೆಯನ್ನೂ ಅದು ತಯಾರಿಸಿದೆ. ಅಂದ ಹಾಗೆ ಈ ಸೂಸೈಡ್ ಸ್ಕ್ವಾಡಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರ ಸಂಪುಟದಲ್ಲಿರುವ ಹಲವು ನಾಯಕರಿದ್ದಾರೆ. ಅವರ ಅಜೆಂಡಾ ಎಂದರೆ ಸಿದ್ದರಾಮಯ್ಯ ಅವರೇ ಮುಂದಿನ ನಾಲ್ಕೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಬೇಕು, ಇಲ್ಲದಿದ್ದರೆ ನಾವೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಬೇಕು ಎಂಬುದು. ಸಿದ್ದರಾಮಯ್ಯ ಅವರು ಸಿಎಂ ಆದ ದಿನದಿಂದ ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸುತ್ತಾರೆ, ನಂತರ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತು ಪದೇ ಪದೆ ಕೇಳುತ್ತಿದೆ. ಆದರೆ ಈಗ ರೆಡಿ ಆಗುತ್ತಿರುವ ಸೂಸೈಡ್ ಸ್ಕ್ವಾಡಿಗೆ ಈ ಮಾತನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.
ಹೀಗಾಗಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬಾರದು. ಐದು ವರ್ಷಗಳ ಕಾಲ ಅವರೇ ಸಿಎಂ
ಆಗಿ ಮುಂದುವರಿಯಬೇಕು ಅಂತ ಅದು ವಾದಿಸುತ್ತಿದೆ.
ಇಷ್ಟಾದ ಮೇಲೂ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸಜ್ಜಾಗುತ್ತದೆ ಎಂದಾದರೆ ಕಾಂಗ್ರೆಸ್ ಪಕ್ಷ ತೊರೆದು ನಮ್ಮ ದಾರಿ ನೋಡಿಕೊಳ್ಳುವುದು ಅನಿವಾರ್ಯ ಎಂಬುದು ಅದರ ಲೇಟೆಸ್ಟ್ ವಾನಿಂಗು. ಈ ವಾನಿಂಗು ಕಾಂಗ್ರೆಸ್ ವರಿಷ್ಠರಾದ ಕೆ.ಸಿ.ವೇಣು ಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರ ಕಿವಿಗೂ ತಲುಪಿದೆಯಂತೆ. ಮುಂದೇನು ಕತೆಯೋ?