ನಾನು ರವಿಯವರಿಗೆ ಕ್ಲೋಸ್ ಇದ್ದೀನಿ ಅನ್ನುವ ಕಾರಣಕ್ಕೆ ಕಚೇರಿಯ ಸಾಕಷ್ಟು ಚಟುವಟಿಕೆಗಳಿಂದ ನನ್ನನ್ನು ಹೊರಗಿಡ ಲಾಗುತ್ತಿತ್ತು. ಅದರಿಂದ ಆ ಕ್ಷಣಕ್ಕೆ ಬೇಸರವಾದರೂ ಅದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಲಾರಂಭಿಸಿದೆ. ಇದರಿಂದಾಗಿ ನನ್ನೊಂದಿಗೆ ನಿಕಟವಾಗಿದ್ದವರಿಗೆ ಕೆಲವೊಂದು ಸೌಲಭ್ಯ-ಸೌಕರ್ಯಗಳು ಹೆಚ್ಚು ದೊರೆಯುತ್ತಿರಲಿಲ್ಲ.
ಅವತ್ತು ಕೂಡ ಹೀಗೇ ಕುಂಭದ್ರೋಣ ಮಳೆ! ಕಚೇರಿಯಲ್ಲಿ ನಿತ್ಯದ ಕೆಲಸ ಮುಗಿಸಿ ಎಲ್ಲರೂ ಮನೆಗೆ ಹೋಗಿದ್ದರು. ಕಂಪ್ಯೂಟರಿನ ಮುಂದೆ ನಾನೊಬ್ಬಳೇ ಕೂತು ಬಾಕಿ ಉಳಿದಿದ್ದ ಪುಟಗಳ ವಿನ್ಯಾಸ ದಲ್ಲಿ ತೊಡಗಿದ್ದೆ.
ಒಳಗೆ ಕ್ಯಾಬಿನ್ನಿನಲ್ಲಿ ರವಿ ಬರವಣಿಗೆಯಲ್ಲಿ ತಲ್ಲೀನರಾಗಿದ್ದರು. ‘ಓ ಮನಸೇ’ ಪಾಕ್ಷಿಕ ಪತ್ರಿಕೆಗೆ ಆಗ ಅನಂತ ಚಿನಿವಾರ್ ಸಂಪಾದಕರಾಗಿದ್ದರು. ಗೌರವ ಸಂಪಾದಕತ್ವದ ಮೇರುಸ್ಥಾನದಲ್ಲಿದ್ದರು ರವಿ. ಆಗೆಲ್ಲ ಯಾರಾದರೂ ಉದ್ಯೋಗ ಅರಸಿಕೊಂಡು ‘ಹಾಯ್’ ಕಚೇರಿಗೆ ಬಂದರೆ ಅವರನ್ನು ತಂದು ಕಂಪ್ಯೂಟರ್ ಸೆಕ್ಷನ್ನಿಗೆ ಹಾಕಿಬಿಡುತ್ತಿದ್ದರು. ಕಂಪ್ಯೂಟರಿನ ಗಂಧ-ಗಾಳಿ ಅರಿಯದಿದ್ದವರಿಗೆಲ್ಲ ಅದರ ಬಗ್ಗೆ ತಿಳಿಸಿಕೊಡುತ್ತಾ ಅಕ್ಷರ ಕಲಿಸಿಕೊಡುವುದು ಕಂಪ್ಯೂಟರ್ ಸೆಕ್ಷನ್ನಿನ ಮುಖ್ಯಸ್ಥೆಯಾಗಿದ್ದ ನನ್ನ ಕೆಲಸ ವಾಗಿತ್ತು.
ಜತೆಯಲ್ಲಿ ಶಿವಜ್ಯೋತಿ, ನಳಿನಿ, ಮಂಜುನಾಥ್, ಶೈಲಜಾ, ಸಿದ್ದೇಶ್, ಗಣಪತಿ ಭಟ್, ಮಾಧವಿ ಇದ್ದರೆಂಬುದು ಸದ್ಯಕ್ಕೆ ಅಳಿದು ಉಳಿದ ನೆನಪುಗಳು! ಕೆಲವರು ಈಗಲೂ ಸಂಪರ್ಕದಲ್ಲಿzರೆ. ಮತ್ತೆ ಕೆಲವರು ಮರೆತುಹೋಗಿದ್ದಾರೆ. ನಾನು ಬಾಸ್‌ಗೆ ಕ್ಲೋಸ್ ಇದ್ದೀನಿ ಅನ್ನುವ ಕಾರಣಕ್ಕೆ ಕಚೇರಿಯ ಸಾಕಷ್ಟು ಚಟುವಟಿಕೆಗಳಿಂದ ನನ್ನನ್ನು ಹೊರಗಿಡಲಾಗುತ್ತಿತ್ತು. ಅದರಿಂದ ಆ ಕ್ಷಣಕ್ಕೆ ಬೇಸರವಾದರೂ ಅದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಲಾರಂಭಿಸಿದೆ.
ಇದರಿಂದಾಗಿ ನನ್ನೊಂದಿಗೆ ನಿಕಟವಾಗಿದ್ದವರಿಗೆ ಸಂಬಳ ಹೆಚ್ಚಾಗುವುದಾಗಲೀ, ಮುಂಗಡ ಸಾಲವಾಗಲೀ, ಹೆಚ್ಚಿನ ರಜೆಯ ಸೌಲಭ್ಯಗಳಾಗಲೀ, ಕಚೇರಿಯ ಇನ್ನಿತರ ಸೌಕರ್ಯಗಳಾಗಲೀ ಹೆಚ್ಚು ದೊರೆಯುತ್ತಿರಲಿಲ್ಲ. ಹೀಗಾಗಿ ಎಲ್ಲರೂ ಹೆಚ್ಚಾಗಿ ನಿವೇದಿತಾರೊಂದಿಗೇ ನಿಲ್ಲುತ್ತಿದ್ದರು. ಇದರಿಂದಾಗಿ ಕಚೇರಿಯಲ್ಲಿ ಎರಡು ಗುಂಪುಗಳಾಗಿ ಹೋಗಿದ್ದವು. ಕಚೇರಿಯ ಎಷ್ಟೋ ವಿಷಯಗಳನ್ನು ಕ್ರಾಸ್ ಚೆಕ್ ಮಾಡಿಕೊಳ್ಳುವುದಕ್ಕಾಗಿ ರವಿ ನನ್ನನ್ನು ವಿಚಾರಿಸಿದಾಗ, ಅದರ ಬಗ್ಗೆ ನನಗೆ ತಿಳಿದಿರುತ್ತಲೇ ಇರಲಿಲ್ಲ. ಯಾವುದನ್ನೂ ಅನುಮಾನದ ದೃಷ್ಟಿಯಿಂದ ನೋಡದೆ ಎಲ್ಲವನ್ನೂ ನನ್ನದೇ ದೃಷ್ಟಿಕೋನದಲ್ಲಿ ಅಳೆಯುತ್ತ, ಅದೆಷ್ಟೇ ಕಷ್ಟವಾದರೂ ನನಗೆ ಸರಿ ಎನಿಸಿದ ದಾರಿಯಲ್ಲಿ ನಡೆಯುತ್ತ ಬಂದಿದ್ದೇನೆ.
ಹೀಗಾಗಿ ಇನ್ನೂ ಜನಮಾನಸದಲ್ಲಿ ಉಳಿದುಕೊಂಡಿದ್ದೇನೆ. ರವಿಯನ್ನು, ಅವರ ಹೆಸರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಸಾಕಷ್ಟು ಜನ ಕಣ್ಣೆದುರಿಗೇ ಬೆಳೆದದ್ದನ್ನು ಕಂಡಿದ್ದೇನೆ. ಇಷ್ಟೆಲ್ಲ ಕಣ್ಣೆದುರಿಗೇ ಕಂಡರೂ ನಾನ್ಯಾಕೆ ಬದಲಾಗಲು ಸಾಧ್ಯವಾಗ ಲಿಲ್ಲ ಎಂದು ಒಮ್ಮೊಮ್ಮೆ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ಇಷ್ಟು ವರ್ಷ ಬದಲಾಗದವಳು ಇನ್ನು ಬದಲಾಗುವುದು ಸಾಧ್ಯವಿಲ್ಲ ಬಿಡು. ಈ ಜನ್ಮಕ್ಕೆ ಇಷ್ಟೇ ಅಂದುಕೊಂಡು ಸಮಾಧಾನಗೊಳ್ಳುತ್ತೇನೆ.
ಇದೇ ವಿಷಯದ ಬಗ್ಗೆ ಒಮ್ಮೊಮ್ಮೆ ರವಿಯೊಂದಿಗೆ ಚರ್ಚಿಸುತ್ತಿದ್ದೆ- ‘ನಾನು ಸೋಮಾರಿಯಲ್ಲ. ಹಬ್ಬ- ಹರಿ ದಿನಗಳೆಂದು ರಜೆ ಹಾಕಿದ್ದು ನೆನಪೇ ಇಲ್ಲ. ತಿಂಗಳಿಗೊಂದು ಸಿಬ್ಬಂದಿಯ ಬರ್ತ್‌ಡೇ, ಪತ್ರಿಕೆಯ ವಾರ್ಷಿಕೋತ್ಸವ, ನಿಮ್ಮ ಜನ್ಮದಿನದ ಆಚರಣೆ ಹೀಗೆ ಕಚೇರಿಯ ಹಬ್ಬಗಳೇ ನನ್ನ ಹಬ್ಬಗಳೂ ಆಗಿಹೋಗಿ ಮನೆಯಿಂದ ದೂರಾಗಿದ್ದೇನೆ. ನಿಮ್ಮ ಸಂತೋಷದ ನನ್ನ ಸಂತೋಷ ವನ್ನೂ ಕಾಣುತ್ತ, ನಿಮ್ಮ ಸಾಧನೆಯೇ ನನ್ನ ಸಾಧನೆ ಎಂದುಕೊಳ್ಳುತ್ತ ಹಗಲು- ರಾತ್ರಿಯೆನ್ನದೆ ನಿಮ್ಮ ಸರಿಸಮನಾಗಿ ದುಡಿಯುತ್ತೇನೆ.
ಎಲ್ಲೂ ನಿಮ್ಮ ಹೆಸರನ್ನು ಬಳಸಿಕೊಂಡಿಲ್ಲ. ಅಧಿಕಾರದ ದುರುಪಯೋಗ ಮಾಡಿಕೊಂಡಿಲ್ಲ. ನಿಮ್ಮ ಬಗ್ಗೆ ಅಪ ಪ್ರಚಾರ ಮಾಡಿಲ್ಲ. ನಿಮ್ಮ ಹೆಸರಿಗೆ ಧಕ್ಕೆ ತಂದಿಲ್ಲ. ರಾಶಿ ರಾಶಿ ಹಣ ಬಾಚಿಕೊಂಡಿಲ್ಲ. ಉನ್ನತ ಪದವಿಗೇರಿಲ್ಲ. ಆದರೂ ಯಾಕೆ ನನ್ನನ್ನ ಹೀಗೆ ಮೂಲೆಗುಂಪಾಗಿಸುವ ಪ್ರಯತ್ನ ಮಾಡುತ್ತಾರೆ? ಅವರಲ್ಲಿ ನಾನೂ ಒಬ್ಬಳೆಂದು ಯಾಕೆ ಭಾವಿಸುವುದಿಲ್ಲ?’ ಎಂದು.
ಅದಕ್ಕೆ ರವಿ ‘ಹೌದು ಚಿನ್ನಾ, ನನಗೆ ಅರ್ಥ ಆಗುತ್ತೆ. ಎಲ್ಲವೂ ನನ್ನ ಗಮನಕ್ಕೂ ಬರುತ್ತದೆ. ಆದರೆ ನನ್ನ ದುರ್ಭರದ ದಿನಗಳಲ್ಲಿ, ಎಲ್ಲ ವಿರೋಧಗಳ ನಡುವೆಯೂ ನನ್ನೊಂದಿಗೆ ನಿಂತವಳು ನಿವಿ. ಹೀಗಾಗಿ ಅವಳನ್ನು ನೋಯಿಸುವುದು ನನ್ನಿಂದಾಗುವುದಿಲ್ಲ.
ನೀನೇ ಸ್ವಲ್ಪ ಸಹಿಸಿಕೊಂಡುಬಿಡು. ನಿನ್ನಿಂದಾಗಿ ಎಲ್ಲಿ ನನ್ನ ಹೆಸರು ಕೆಡುತ್ತದೋ ಎನ್ನುವ ಅತಿಯಾದ ಕಾಳಜಿಯಿಂದಾಗಿ ಅವಳು ಹೀಗೆ ವರ್ತಿಸುತ್ತಾಳೆ. ಅದರಿಂದ ನೊಂದುಕೊಳ್ಳಬೇಡ. ನಾನಿದ್ದೇನಲ್ಲ ನಿನ್ನೊಂದಿಗೆ? ಎಲ್ಲಿಯೂ ಯಾರ ಮುಂದೆಯೂ
ನಿನ್ನನ್ನು ಚಿಕ್ಕವಳನ್ನಾಗಿ ಮಾಡದೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನನ್ನಲ್ಲಿ ನಿನಗೆ ದೋಷ ಕಂಡರೆ ನೇರವಾಗಿ
ಹೇಳು. ಸರಿಪಡಿಸಿಕೊಳ್ಳುತ್ತೇನೆ’ ಎಂದಾಗ ಮನಸಿನ ದುಗುಡವೆಲ್ಲ ಕಳೆದು ಮತ್ತೆ ಕೆಲಸದೆಡೆಗೆ ಮರಳುತ್ತಿದ್ದೆ.
ಇಡೀ ಜಗತ್ತು ಏನು ಬೇಕಾದರೂ ಮಾತಾಡಿಕೊಳ್ಳಲಿ. ಅವರೊಬ್ಬರಿದ್ದಾರಲ್ಲ ನನ್ನೊಂದಿಗೆ, ಅಷ್ಟು ಸಾಕು ಎಂದು ಸತ್ಯಭಾಮೆಯಂತೆ ಬೀಗುತ್ತಿದ್ದೆ. ನಮ್ಮಿಬ್ಬರ ನಡುವೆಯಿದ್ದ ಈ ಹೊಂದಾಣಿಕೆ ಹೊರಜಗತ್ತಿಗೆ ತಿಳಿದಿರುತ್ತಿರಲಿಲ್ಲವಾದ್ದರಿಂದ ಅದು ನಿರಂತರವಾಗಿ ನಮ್ಮಿಬ್ಬರ ನಡುವೆ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಲೇ ಇರುತ್ತಿತ್ತು. ಕಚೇರಿ ಎಂದ ಮೇಲೆ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಪರಸ್ಪರ ಮಾತಾಡದೆ, ವಿಚಾರ ವಿನಿಮಯ ಮಾಡಿಕೊಳ್ಳದೆ ಇರುವುದು ಹೇಗೆ ಸಾಧ್ಯ? ಹೇಳಿಕೇಳಿ ಅದು ಪತ್ರಿಕಾ ಕಚೇರಿ. ಮಾತನಾಡುವುದಕ್ಕೆ, ತಿಳಿದುಕೊಳ್ಳುವುದಕ್ಕೆ ಸಾಕಷ್ಟು ವಿಷಯಗಳಿದ್ದೇ ಇರುತ್ತವೆ.
ಅವರಿಲ್ಲದಾಗ ನಾನು ಯಾರೊಂದಿಗೆ ಮಾತನಾಡಿದರೂ ಬಂದ ಕೂಡಲೇ ಅದನ್ನು ಅವರ ಕಿವಿಗೆ ಹಾಕುತ್ತ ಅವರಲ್ಲಿ ಅನುಮಾನ ಹೆಡೆಯೆತ್ತುವಂತೆ ಮಾಡುತ್ತಿದ್ದರು. ನನ್ನ ಜಗತ್ತೇ ಅವರಾಗಿzಗ ಅವರೂ ಮುನಿಸಿಕೊಂಡಾಗ ಯಾರ ಸಹವಾಸವೂ ಬೇಡವೆಂದು ನಿರ್ಧರಿಸಿ ನಾನು ಹೆಚ್ಚೆಚ್ಚು ಪುಸ್ತಕಗಳೆಡೆಗೆ, ಬರಹಗಳೆಡೆಗೆ ಆಕರ್ಷಿತಳಾದೆ. ವ್ಯಕ್ತಿಗಳನ್ನು, ವ್ಯಕ್ತಿತ್ವಗಳನ್ನು ಗಮನಿಸಲಾರಂಭಿಸಿದೆ.
ಪತ್ರಿಕೆ, ಮ್ಯಾಗಝೀನು, ಪುಸ್ತಕಗಳ ಪುಟವಿನ್ಯಾಸ ಮಾಡುತ್ತ, ತಪ್ಪುಗಳನ್ನು ತಿದ್ದುತ್ತ, ಅಕ್ಷರ ಸಾಮ್ರಾಜ್ಯದ ತೇಲಿ ಮುಳುಗುತ್ತಿದ್ದ ವಳಿಗೆ, ಖಾಲಿ ಕ್ಯಾನ್ವಾಸಿನಂತಿದ್ದ ಮನದೊಳಗೆ ಸಾವಿರ ಸಾವಿರ ಅಕ್ಷರಗಳು ಮೂಡತೊಡಗಿ ಬರೆಯುವಂತೆ ಒಳಗಿನಿಂದ ತಿದಿಯೊತ್ತತೊಡಗಿದವು. ಅವತ್ತೂ ಆಕಾಶ-ಭೂಮಿ ಒಂದಾಗುವಂತೆ ಸುರಿಯುತ್ತಿದ್ದ ಮಳೆ. ರವಿ ಬರವಣಿಗೆಯಲ್ಲಿ ತಲ್ಲೀನರಾ ಗಿದ್ದರು.
ಕಂಪ್ಯೂಟರ್ ಮುಂದೆ ಕುಳಿತಿದ್ದವಳು ಎದ್ದು ಕಿಟಕಿಯಲ್ಲಿ ಬೀಳುತ್ತಿದ್ದ ಹನಿಗಳೆಡೆಗೆ ಮುಖ ಮಾಡಿದೆ. ಕಿಟಕಿಯಾಚೆಗೆ ಹಿಡಿದ ಬೊಗಸೆಯಲ್ಲಿ ಹನಿಯೊಂದು ಬಿzಗ ಅದು ಕೆಳಗೆ ಬೀಳದಂತೆ ಗಟ್ಟಿಯಾಗಿ ಹಿಡಿದುಕೊಂಡರೂ ಅದು ನನ್ನಿಂದ ಕೊಸರಿಕೊಂಡು ಇತರ ಮಳೆ ಹನಿಗಳೊಂದಿಗೆ ಕುಣಿಯುತ್ತ ನಡೆದುಹೋಗಿದ್ದು ಕಂಡು, ‘ಎಲ್ಲಿ ಹೋಗಿ ತಲುಪಬಹುದು ಈ ಪುಟ್ಟ ಮಳೆಹನಿ?’ ಅನ್ನುವ ಪ್ರಶ್ನೆಯೆದ್ದಾಗ ಅದರ ಹಿಂದೆಯೇ ನಡೆದುಹೋದ ಮನಸು ಸಾಗರವಾಗುವ ಹೆಬ್ಬಯಕೆಯಿಂದ ಮೋಡದಿಂದ ಕಳಚಿ ಉದುರಿದ ಹನಿಗಳೆಲ್ಲವೂ ಸಾಗರ ಸೇರಲಾರದೆ ಅಲ್ಲ ನಿಂತು, ಕೊಳೆತು, ಗಟಾರ ಸೇರಿ, ಭೂಮಿಯಡಿಯಲ್ಲಿ ಇಂಗಿ ಹೋಗುವುದನ್ನು ಕಂಡಾಗ ಛಲ ಬಿಡದೆ ಸಾಗುವ ಆ ಪುಟ್ಟಹನಿ ಹೇಗೆ ಎಲ್ಲಿಯೂ ಕೊಳವಾಗಿ ನಿಲ್ಲದೆ, ಸಿಕ್ಕ ಅವಕಾಶಗಳನ್ನು
ಬಳಸಿಕೊಂಡು ತೊರೆಯಾಗಿ, ನದಿಯಾಗಿ, ಮಹಾನದಿಯಾಗಿ ಹರಿದು, ಜಲಪಾತವಾಗಿ ಧುಮುಕಿ, ಸಾಗರವನ್ನು ಸೇರಿ ಕೊನೆಗೆ ತಾನೇ ಸಾಗರವಾಗಿ ನಿಲ್ಲುವ ಅದ್ಭುತವನ್ನು ಅಕ್ಷರ ರೂಪಕ್ಕಿಳಿಸುವಾಗ ಆ ಪುಟ್ಟಹನಿ ನಾನೇ ಎಂದು ಭಾಸವಾದಾಗ ಒಂದು ರೀತಿಯ ದಿವ್ಯ ರೋಮಾಂಚನ!
ಬರೆದಿದ್ದನ್ನು ಮತ್ತೆ ಮತ್ತೆ ಓದಿದೆ. ನನ್ನಂತೆಯೇ ಗಮ್ಯ ಕಾಣದೆ ಪರಿತಪಿಸುತ್ತಿರುವ ಅದೆಷ್ಟೋ ಮನಸುಗಳ ಭಾವನೆಯೂ ಇದೇ ಆಗಿರಬಹುದು ಎಂದು ತಿಳಿದು ಇದನ್ನು ಪ್ರಕಟಿಸಲು ಸಾಧ್ಯವಾ? ಎಂದು ಅನಂತ ಚಿನಿವಾರರಲ್ಲಿ ಕೇಳಿದೆ. ಓದಿದ ಬಳಿಕ ಅವರು ‘ಬಹಳ ಚೆನ್ನಾಗಿದೆ, ಪ್ರಕಟಿಸೋಣ’ ಎಂದು ಹೇಳಿ, ಆಗ ‘ಓ ಮನಸೆ’ಯ ‘ಲಹರಿ’ ಅನ್ನುವ ಪುಟದಲ್ಲಿ ‘ಹನಿಯ ಕನಸು’ ಅನ್ನುವ ನನ್ನ ಪುಟ್ಟ ಬರಹ ಪ್ರಕಟಿಸಿದರು. ಹೆಸರು ನನ್ನದೇ ಹಾಕುವುದಾ? ಬೇಡವಾ? ಅನ್ನುವ ಸಂದಿಗ್ಧದಲ್ಲಿರುವಾಗ ಅವರು, ‘ಇಷ್ಟು
ಚೆನ್ನಾಗಿ ಬರೆದಿದ್ದೀರಿ, ನಿಮ್ಮ ಹೆಸರೇ ಇರಲಿ ಬಿಡಿ’ ಎಂದಾಗ, ‘ಸರಿ’ ಎಂದು ಸುಮ್ಮನಾದೆ.
ಮಾರನೆಯ ದಿನ ಕಚೇರಿಗೆ ಬರುವಷ್ಟರಲ್ಲಿ ರವಿ ಕೆಂಡಾಮಂಡಲವಾಗಿದ್ದರು. ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಬಯ್ಯುತ್ತಿದ್ದರೆ ಏನಾಗಿದೆ ಅನ್ನುವುದೇ ಅರ್ಥವಾಗದೆ ನಾನೂ ಕೈಕಟ್ಟಿ, ತಲೆ ತಗ್ಗಿಸಿ ನಿಂತೆ. ನನ್ನ ಮುಖ ನೋಡಿದ ಕೂಡಲೇ ರವಿ ‘ಮ್ಯಾಗಝೀನು ಪ್ರಿಂಟಿಗೆ ಕಳಿಸುವ ಮುನ್ನ ಎಲ್ಲವನ್ನೂ ಸರಿಯಾಗಿ ನೋಡಿ ಕಳಿಸಬೇಕು ಅನ್ನುವ ಪ್ರಜ್ಞೆ ಇಲ್ಲವಾ ನಿನಗೆ? ಈ ವಾರದ ಮ್ಯಾಗ ಝೀನಿನಲ್ಲಿ ನಿನ್ನ ಹೆಸರು ಪ್ರಿಂಟಾಗಿದೆ. ಒಂದು ಜವಾಬ್ದಾರಿ ಕೊಟ್ಟಾಗ ಅದನ್ನು ಸರಿಯಾಗಿ ನಿರ್ವಹಿಸುವುದು ಆಗುವುದಿಲ್ಲ ಎಂದಾಗ ಕಳಚಿಕೊಳ್ಳಬಹುದು.
ಯಾರೂ ಅನಿವಾರ್ಯವಲ್ಲ ನನಗೆ’ ಎಂದು ಕೈಲಿದ್ದ ‘ಓ ಮನಸೇ’ ಮ್ಯಾಗಝೀನನ್ನು ಟೇಬಲ್ಲಿನ ಮೇಲೆಸೆದು ಹೋದರು. ಒಂದು ಕ್ಷಣ ಹೇಗೆ ಪ್ರತಿಕ್ರಿಯಿಸಬೇಕು ಅನ್ನುವುದೇ ತೋಚಲಿಲ್ಲ ನನಗೆ. ಪತ್ರಿಕಾ ಕಚೇರಿಯಲ್ಲಿರುವವರ ಬರಹಗಳೇ ಪ್ರಕಟವಾದರೆ ಹೊರಗಿನವರಿಗೆ ಅವಕಾಶ ಸಿಗುವುದಿಲ್ಲವೆಂದು ಸಿಟ್ಟಾಗಿದ್ದಾರಾ? ಅವರಿಗೆ ತಿಳಿಸದೆ, ನಾನು ಅನಂತ ಚಿನಿವಾರರಿಗೆ ಪ್ರಕಟಿಸಲು ಕೊಟ್ಟಿದ್ದಕ್ಕೆ ಸಿಟ್ಟಾಗಿದ್ದಾರಾ? ನನ್ನ ಹೆಸರು ಹಾಗೆಲ್ಲ ಪ್ರಿಂಟಾಗ ಬಾರದಾ? ಅನ್ನುವ ನೂರು ಪ್ರಶ್ನೆಗಳೆದ್ದು ‘ಸರಿಬಿಡು, ಇನ್ನು ಮೇಲೆ ಬರೆಯದಿದ್ದರೆ ಆಯ್ತಲ್ಲ?’ ಅಂದುಕೊಳ್ಳುತ್ತ ಸುಮ್ಮನಾದೆ.
ಅಷ್ಟರಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶಿವಜ್ಯೋತಿ ಕ್ಯಾಬಿನ್ನಿನೊಳಗೆ ಹೋಗಿ ‘ಅದನ್ನು ಮೇಡಮ್ಮೇ ಬರೆದಿರುವುದು’ ಎಂದಾಗ ಅವರು ಆಶ್ಚರ್ಯದಿಂದ ‘ಹೌದಾ?’ ಎಂದು ಹೇಳಿ ಮತ್ತೊಮ್ಮೆ ಮ್ಯಾಗಝೀನು ತರಿಸಿಕೊಂಡು ವಿವರವಾಗಿ ಓದಿ, ‘ನನಗ್ಯಾಕೆ ಹೇಳಲಿಲ್ಲ? ಅಷ್ಟು ಬಯ್ಯುವಾಗ ಯಾಕೆ ಸುಮ್ಮನೆ ನಿಂತಿದ್ದಳು?’ ಎಂದು ಹೇಳಿ ನನ್ನನ್ನು ಕರೆದು ‘ಮೊದಲೇ ಹೇಳುವುದಲ್ಲವಾ? ನೀನೇ ಬರೆದದ್ದು ಅಂತ. ಚೆನ್ನಾಗಿ ಬರೆದಿದ್ದೀಯ.
ಬರೆಯುವುದನ್ನು ರೂಢಿಸಿಕೋ. ಶೈಲಿ ಚೆನ್ನಾಗಿದೆ. ಸುಮ್ಮನೆ ಎಲ್ಲರೆದುರಿಗೆ ಬಯ್ಯಿಸಿಕೊಂಡ್ಯಲ್ಲ ದಡ್ಡೀ…’ ಎನ್ನುತ್ತಾ
ಮುಗುಳು ನಕ್ಕಾಗ, ಹೋದಜೀವ ಬಂದಂತಾಗಿತ್ತು. ಇಂದು ಬರವಣಿಗೆಯ ಆತ್ಮಸಂತೋಷ ಕಂಡುಕೊಂಡಿದ್ದೇನೆ. ಅದಕ್ಕೆ ‘ವಿಶ್ವವಾಣಿ’ ಪತ್ರಿಕೆ ಜೀವ ತುಂಬಿದೆ. ಅದಕ್ಕೆ ನಾನು ಚಿರಋಣಿ.