Tuesday, 13th May 2025

ರಾಜಕೀಯ ತಪ್ಪು ಮಾತನಾಡಿಸುವುದೂ ಕಲೆ

ವರ್ತಮಾನ

maapala@gmail.com

ಚುನಾವಣೆ ಹೇಗೆ ನಡೆಸಬೇಕು ಎಂಬುದನ್ನು ಬಿಜೆಪಿಯಿಂದ ಕಲಿಯಬೇಕು ಎಂದು ಕಳೆದ ವಾರ ಬರೆದಿದ್ದೆ. ಇದೀಗ ಪ್ರತಿಪಕ್ಷ ನಾಯಕರನ್ನು ಕೆರಳಿಸಿ ಯಾವ ರೀತಿ ರಾಜಕೀಯ ಲಾಭ ಪಡೆದುಕೊಳ್ಳಬಹುದು ಎಂಬುದು ಅಮಿತ್ ಶಾ ಅವರ ಇತ್ತೀಚೆಗಿನ ರಾಜ್ಯ ಭೇಟಿ ತೋರಿಸಿದೆ.

ಮನಸ್ಸಿನಲ್ಲಿ ಸಿಟ್ಟು. ಆತಂಕ, ಚಡಪಡಿಕೆ ಹೆಚ್ಚಾದಾಗ ನಾಲಿಗೆ ಮೇಲಿನ ಹಿಡಿತ ಸಡಿಲವಾಗುತ್ತದೆ. ಬುದ್ಧಿಯನ್ನು ಮೀರಿ ಅದು ಮಾತನಾಡತೊಡಗುತ್ತದೆ. ಅದರಲ್ಲೂ ರಾಜಕಾರಣಿ ಗಳು ಅದರಲ್ಲೂ ಮುಖ್ಯವಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ನಾಲಿಗೆ ಹರಿಬಿಟ್ಟರೆ ಅದರ ಪರಿಣಾಮ ಪಕ್ಷದ ಮೇಲೆ ಆಗುತ್ತದೆ.

ಚುನಾವಣೆ ಸಮೀಪಿಸುತ್ತಿರುವಾಗ ಅಂತಹ ಮಾತುಗಳು ಬಂದರಂತೂ ಪ್ರತಿಪಕ್ಷಗಳು ಅದರಿಂದ ರಾಜಕೀಯ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿರುತ್ತಾರೆ. ಹಿಡಿತ ತಪ್ಪಿದ ಮಾತುಗಳನ್ನೇ ಅಸ್ತ್ರವಾಗಿ ಬಳಸಿಕೊಳ್ಳು ತ್ತಾರೆ. ಒಮ್ಮೆ ಲಘು ಮಾತುಗಳು ಹೊರಬಂದರೆ ಮುಂದೆ ಹೇಳಿದ ಎಲ್ಲ ಮಾತು ಗಳಲ್ಲೂ ತಪ್ಪುಗಳನ್ನು ಕಂಡುಹಿಡಿಯುತ್ತಾರೆ. ರಾಜಕಾರಣಿಗಳ ಅಂತಹ ನಡವಳಿಕೆಯಿಂದಾಗಿ ಅಷ್ಟು ದಿನ ಇದ್ದ ರಾಜಕೀಯ ಪರಿಸ್ಥಿತಿ ಕ್ರಮೇಣ ಪರಿವರ್ತನೆಯಾಗುತ್ತ ಇನ್ನೊಂದು ಪಕ್ಷದ ಕಡೆ ವಾಲುತ್ತದೆ.

ಪ್ರಸ್ತುತ ರಾಜ್ಯದಲ್ಲಿ ಅದೇ ಪರಿಸ್ಥಿತಿ ಉದ್ಭವಿಸುವ ಲಕ್ಷಣಗಳು ಕಂಡುಬರುತ್ತಿದೆ. ಕಳೆದ ವರ್ಷಾಂತ್ಯದಲ್ಲಿ ರಾಜ್ಯಕ್ಕೆ ಬಂದು ಹೋದ ‘ಚುನಾವಣಾ ಚಾಣಕ್ಯ’ ಎಂದೇ ಕರೆಸಿಕೊಳ್ಳುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಉರುಳಿಸಿದ ದಾಳ, ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಕೆರಳಿಸಿದೆ. ಅವರಲ್ಲಿ ಒಂದಷ್ಟು ಆತಂಕವನ್ನೂ ಸೃಷ್ಟಿಸಿದೆ. ಇದಕ್ಕೆ ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ನ ಪ್ರಬಲ ಕೋಟೆ ಎಂದೇ ಪರಿಗಣಿಸುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಯನ್ನು ಗಟ್ಟಿಗೊಳಿಸಲು ಅಮಿತ್ ಶಾ ಹೆಣೆದ ಸೂತ್ರ.

ಮುಂಬರುವ ವಿಧಾನಸಭೆ ಚುನಾವಣೆಗೆ ತಂತ್ರಗಾರಿಕೆ ರೂಪಿಸಿ, ಪ್ರಚಾರಕ್ಕೆ ಚಾಲನೆ ನೀಡಲು ಮೂರು ದಿನದ ಪ್ರವಾಸ ಕ್ಕೆಂದು ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ, ಕೇವಲ ಹಳೇ ಮೈಸೂರು ಭಾಗ ದಲ್ಲಿ ಪಕ್ಷದ ಸಂಘಟನೆಗಷ್ಟೇ ತಮ್ಮ ಭೇಟಿಯನ್ನು ಸೀಮಿತಗೊಳಿಸಿದರು. ಹಲವು ಸರಕಾರಿ ಕಾರ್ಯಕ್ರಮಗಳ ನಡುವೆ ಮದ್ದೂರಿನಲ್ಲಿ ಮೆಗಾ ಡೇರಿ ಉದ್ಘಾಟಿಸಿ ದರು. ಅದು ಮೈಸೂರು-ಮಂಡ್ಯ, ರಾಮನಗರ ಭಾಗದಲ್ಲಿ ಹಾಲು ಉತ್ಪಾದಕರನ್ನು ಸೆಳೆಯುವ ತಂತ್ರವಾಗಿತ್ತು. ಅದೇ ರೀತಿ
ಮಂಡ್ಯದಲ್ಲಿ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಗುರಿಯಾಗಿಸಿ ಮಾತನಾಡಿದರು. ಬೆಂಗಳೂರಿನಲ್ಲಿ ಕುಳಿತು ಹಳೇ ಮೈಸೂರು ಭಾಗದಲ್ಲಿ ಸಂಘಟನೆ ಬಲಪಡಿಸಲು ಯಾವ ರೀತಿಯ ಕಾರ್ಯಯೋಜನೆಗಳನ್ನು ರೂಪಿಸಬೇಕು ಎಂಬ ಬಗ್ಗೆ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವನ್ನು ಭೇಟಿಯಾದರು. ಆದರೆ, ಅಮಿತ್ ಶಾ ಏನೆಲ್ಲ ತಂತ್ರಗಾರಿಕೆ ರೂಪಿಸಿದ್ದಾರೋ ಎಂಬುದು ಇನ್ನೂ ಗೊತ್ತಿಲ್ಲ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಮಾತ್ರ ತಮ್ಮ ಮೂಲಕ್ಕೇ ಅಮಿತ್ ಶಾ ಮzರೆಯುತ್ತಿzರೆ ಎಂಬ ಭಾವನೆ ಬಂದಿದೆ. ಏಕೆಂದರೆ, ೨೦೦೮ ಮತ್ತು ೨೦೧೮ರ ವಿಧಾನಸಭಾ ಚುನಾವಣೆ ಗಳಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದಿಂದ ಅಽಕಾರಕ್ಕೆ ಬರಲು ವಿಫಲವಾಗಿದ್ದಕ್ಕೆ ಕಾರಣ
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್, ಕಾಂಗ್ರೆಸ್‌ನ ಭದ್ರಕೋಟೆಯನ್ನು ಭೇದಿಸಲು ಸಾಧ್ಯವಾಗದೇ ಇದ್ದದ್ದು.

ಅದೇ ರೀತಿ ೨೦೧೩ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿದ್ದರಿಂದ. ಅದೇ ರೀತಿ ೨೦೧೮ರಲ್ಲಿ ಸೋಲಲು ಆ ಭಾಗದಲ್ಲಿ ಹಲವು ಸ್ಥಾನಗಳನ್ನು ಕಾಂಗ್ರೆಸ್‌ನಿಂದ ಜೆಡಿಎಸ್ ಕಸಿದುಕೊಂಡಿದ್ದು ಕಾರಣವಾಗಿತ್ತು. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಬೇಕು. ಜೆಡಿಎಸ್‌ಗೆ ರಾಜ್ಯದ ಇತರೆ ಭಾಗಗಳಲ್ಲಿ ಅಷ್ಟೊಂದು ಜನಬೆಂಬಲ ಇಲ್ಲದೇ ಇದ್ದರೂ ಹಳೇ
ಮೈಸೂರು ಭಾಗವನ್ನಷ್ಟೇ ಇಟ್ಟುಕೊಂಡು ಸರಕಾರ ರಚನೆಯಲ್ಲಿ ಆಟವಾಡಲು ಸಾಧ್ಯವಾಯಿತು.

ಹೀಗಿರುವಾಗ ಈ ಭಾಗದಲ್ಲಿ ತಮ್ಮ ಮತಗಳನ್ನು ಕಳೆದುಕೊಂಡರೆ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಕಾಂಗ್ರೆಸ್ಸಿಗೂ, ಇಲ್ಲಿ
ಸೋತರೆ ಸರಕಾರ ರಚನೆಯಲ್ಲಿ ತನ್ನ ಆಟ ನಡೆಯುವುದಿಲ್ಲ ಎಂಬುದು ಜೆಡಿಎಸ್‌ಗೂ ಗೊತ್ತಿದೆ. ಏಕೆಂದರೆ, ಈ ಎರಡೂ
ಪಕ್ಷಗಳು ಇಲ್ಲಿ ಪ್ರಾಬಲ್ಯ ಹೊಂದಲು ಕಾರಣವಾಗಿದ್ದು ಆ ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಮತಗಳಿಂದ. ಹೀಗಾಗಿಯೇ ಹಳೇ ಮೈಸೂರು ಭಾಗಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರ ನಡೆ ಆ ಎರಡೂ ಪಕ್ಷಗಳಲ್ಲಿ ಆತಂಕ ಉಂಟುಮಾಡಿದೆ. ಏಕೆಂದರೆ, ಅಮಿತ್ ಶಾ ಒಮ್ಮೆ ಒಂದು ವಿಷಯದ ಬಗ್ಗೆ ಕಣ್ಣಿಟ್ಟರೆ ಅದು ಯಶಸ್ವಿಯಾಗುವವರೆಗೆ ಸುಮ್ಮನಿರುವುದಿಲ್ಲ ಎಂಬುದು ಇಬ್ಬರಿಗೂ ಗೊತ್ತಿದೆ.

ತಮ್ಮ ಜಾಗದ ಈ ರೀತಿಯ ತಂತ್ರ ಹೆಣೆಯುತ್ತಿರುವ ಅಮಿತ್ ಶಾ ರಾಜ್ಯದ ಇತರ ಕಡೆ ಇನ್ನೇನೇನು ಮಾಡುತ್ತಾರೋ ಎಂಬ ಆತಂಕವೂ ಜತೆಗೆ ಸೇರಿಕೊಂಡಿದೆ. ಈ ಆತಂಕವೇ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಾಯಿಯಿಂದ ಕ್ಷುಲ್ಲಕ ಹೇಳಿಕೆಗಳನ್ನು ಕೊಡಿಸುವಂತೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರಿತು ಸಿದ್ದರಾಮಯ್ಯ ಅವರ ಮಾತನ್ನೇ ಪರಿಗಣಿಸುವುದಾದರೆ, ಅವರು ಬಳಸಿದ ನಾಯಿಮರಿ ಎಂಬ ಒಂದು ಶಬ್ದ ಬಿಟ್ಟರೆ ಉಳಿದಂತೆ ಯಾವುದೇ ಉತ್ಪ್ರೇಕ್ಷೆ ಇಲ್ಲ.

ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು (ಸ್ವಲ್ಪ ಮಟ್ಟಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿ) ಪ್ರಧಾನಿ ನರೇಂದ್ರ ಮೋದಿ ಮುಂದೆ ಮಾತನಾಡಲು ಹೆದರುತ್ತಾರೆ. ಅದನ್ನು ಹೇಳುವಾಗ ಸಿದ್ದರಾಮಯ್ಯ ನಾಯಿಮರಿ ಎಂಬ ಪದ ಬಳಸಿದ್ದಷ್ಟೇ ಇಲ್ಲಿ ತಪ್ಪು. ಆದರೆ, ಆ ಒಂದು ತಪ್ಪಿನಿಂದಾಗಿ ಸಿದ್ದರಾಮಯ್ಯ ಅವರ ಹೇಳಿಕೆಯ ಹಿಂದಿನ ಉದ್ದೇಶವೇ ಬದಿಗೆ ಸರಿದು ನಾಯಿಮರಿ ಎಂಬ ಪದ ಮಾತ್ರ ಮುನ್ನೆಲೆಗೆ ಬಂದು ದೊಡ್ಡ ವಿವಾದವಾಯಿತು. ಬಿಜೆಪಿಗೆ ಬೇಕಾಗಿದ್ದೂ ಇದೇ ಆಗಿತ್ತು.

ಅದನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿ, ಕಾಂಗ್ರೆಸ್ ವಿರುದ್ಧ ಮುಗಿಬಿತ್ತು. ಇದರಿಂದ ಕಾಂಗ್ರೆಸ್‌ಗೆ ಡ್ಯಾಮೇಜ್ ಕೂಡ ಆಯಿತು. ನಾಯಿಮರಿ ಬಗ್ಗೆ ನನಗೆ ಗೌರವವಿದೆ. ನನ್ನ ಮನೆಯಲ್ಲೂ ನಾಯಿ ಇದೆ. ಕಳ್ಳರನ್ನು ಹಿಡಿಯಲು, ರಕ್ಷಣೆಗೆ ನಾಯಿ ಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಹೇಳಿಕೆಯೇ ಇದಕ್ಕೆ ಸಾಕ್ಷಿ. ಆ ಮೂಲಕ ಸ್ವಲ್ಪ ಮಟ್ಟಿಗೆ ಡ್ಯಾಮೇಜ್ ಕಂಟ್ರೋಲ್ ಮಾಡುವ ಕೆಲಸವನ್ನು ಅವರು ಮಾಡಿದರು. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಸೋತಿದ್ದ ಸಿದ್ದರಾಮಯ್ಯ ಈ ಬಾರಿ ಮತ್ತೆ ಆ ಭಾಗದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.

ಹೀಗಾಗಿ ಅಮಿತ್ ಶಾ ಅವರ ತಂತ್ರಗಾರಿಕೆ ಅವರಲ್ಲಿ ಆತಂಕ ಮೂಡಿಸಿದ್ದರಿಂದಲೇ ಟೀಕೆ ವೇಳೆ ತಪ್ಪು ಪದಗಳನ್ನು ಬಳಸುವಂತಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಮುಲ್ ಮತ್ತು ನಂದಿನಿ ಬ್ರ್ಯಾಂಡ್ (ಕೆಎಂಎ-) ಕುರಿತು ಅಮಿತ್ ಶಾ ನೀಡಿದ ಹೇಳಿಕೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.

ದೇಶದ ಮುಂಚೂಣಿಯಲ್ಲಿರುವ ಅಮುಲ್ ಜತೆ ಸಹಯೋಗದಿಂದ ಕಾರ್ಯನಿರ್ವಹಿಸಿದರೆ ಕೆಎಂಎಫ್ ಇನ್ನಷ್ಟು ಬಲಿಷ್ಠವಾಗಿ
ಬೆಳೆಯಬಹುದು ಎಂಬುದು ಅಮಿತ್ ಶಾ ಅವರ ಮಾತಿನ ಇಂಗಿತವಾಗಿತ್ತು. ಆದರೆ, ಅಮುಲ್ ಮತ್ತು ಕೆಎಂಎಫ್ ವಿಲೀನ ಗೊಳಿಸಲು ಬಿಜೆಪಿ ಮುಂದಾಗಿದೆ ಎನ್ನುತ್ತಾ ಬಿಜೆಪಿ ನಾಯಕರ ಬಗ್ಗೆ ಓತಪ್ರೋತವಾಗಿ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಈ ಟೀಕೆ ವೇಳೆ ನಾಲಿಗೆ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿಯ ಮಾತುಗಳು ಮುಂದುವರಿದರೆ ಅದು ಪಕ್ಷಕ್ಕೆ ಸಮಸ್ಯೆಯಾಗಬಹುದು.

ಕುಮಾರಸ್ವಾಮಿ ಅವರ ಸಿಟ್ಟಿಗೂ ಆತಂಕವೇ ಕಾರಣ. ಹಳೇ ಮೈಸೂರು ಭಾಗದ ತನ್ನ ಭದ್ರ ಕೋಟೆಯನ್ನು ಕೆಡವಲು ಒಂದು ಕಡೆ ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿ ಕೂಡ ಆ ಭಾಗದ ಮೇಲೆ ಕಣ್ಣಿಟ್ಟಿರುವುದು ಸಹಜವಾಗಿಯೇ ಅವರಿಗೆ ಸಿಟ್ಟು ಭರಿಸಿದೆ. ಇಂತಹ ಸಂದರ್ಭಕ್ಕಾಗಿಯೇ ಕಾಯುತ್ತಿರುವ ಬಿಜೆಪಿಗೆ ಸಿದ್ದರಾಮಯ್ಯ ಮತ್ತು ಕುಮಾಸ್ವಾಮಿ ಅವರ ಮಾತುಗಳೇ ಪಕ್ಷ ಸಂಘಟಿಸಲು ಅವಕಾಶ ಮಾಡಿಕೊಡುತ್ತಿದೆ. ಅವರ ಆಕ್ರೋಶದ ಹೇಳಿಕೆಗಳನ್ನು ನಯವಾದ ಮಾತು ಗಳಿಂದಲೇ ಖಂಡಿಸುತ್ತಾ ಆ ಎರಡೂ ಪಕ್ಷಗಳಿಗಿಂತ ತಾನೇ ಉತ್ತಮ ಎಂಬುದನ್ನು ನಿರೂಪಿಸಲು ಪ್ರಯತ್ನಿಸುತ್ತಿದೆ.

ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಇಂತಹದ್ದೊಂದು ಪ್ರತಿಕ್ರಿಯೆ ಬರಬೇಕು ಎಂಬ ಉದ್ದೇಶದಿಂದಲೇ ಅಮಿತ್ ಶಾ ತನ್ನ ದಾಳ
ಉರುಳಿಸಿದ್ದಾರೆ. ಮುಂದೆ ಇದು ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕು.

ಲಾಸ್ಟ್‌ಸಿಪ್: ಮಾತಲ್ಲಿ ಮಂಟಪ ಕಟ್ಟಬಹುದು ಎಂಬುದು ಹಳೆಯದಾಯಿತು. ಮಾತಲ್ಲಿ ಮಂಟಪ ಕೆಡವಲೂ ಬಹುದು
ಎಂಬುದು ಈಗಿನ ರಾಜಕೀಯ ಗಾದೆ.