ಕನ್ನಡಜಾತ್ರೆ
ಮಿರ್ಲೆ ಚಂದ್ರಶೇಖರ
ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವ ಜಿಲ್ಲೆ ಮಂಡ್ಯ. ಇದು ಗಳಿಸಿಕೊಂಡಿರುವ ಹಿರಿಮೆ-ಗರಿಮೆಗಳಿಗೆ ಕಾರಣವಾಗಿರುವ ಅಂಶಗಳು ಸಾಕಷ್ಟಿವೆ. ಕಲೆ, ಸಾಹಿತ್ಯ, ನಾಟಕದಂಥ ಕ್ಷೇತ್ರಗಳಲ್ಲಿ ಮಾತ್ರ ವಲ್ಲದೆ ಅತಿಥಿ ಸತ್ಕಾರದಲ್ಲೂ ಮುಂಚೂಣಿಯಲ್ಲಿರುವ ಪ್ರದೇಶವಿದು. ಶೇ.91.92ರಷ್ಟು ಪ್ರಮಾಣದ ಕನ್ನಡ ಭಾಷಿಕ ಜನರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ಈ ಭೌಗೋಳಿಕ ನೆಲೆ, ತನ್ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ದಲ್ಲಿರುವ ಹೆಗ್ಗಳಿಕೆಯನ್ನು ಹೊಂದಿದೆ. ಕ್ರಮವಾಗಿ ಶೇ.87.04 ಮತ್ತು ಶೇ86.11ರಷ್ಟು ಕನ್ನಡ ಭಾಷಿಕ ಜನರನ್ನು ಹೊಂದಿರುವ ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳು ಈ ಶ್ರೇಯಾಂಕ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿವೆ.
7 ತಾಲೂಕುಗಳನ್ನು ಒಳಗೊಂಡಿರುವ ಮಂಡ್ಯ ಜಿಲ್ಲೆಯ ಒಟ್ಟಾರೆ ಜನಸಂಖ್ಯೆ 19.25 ಲಕ್ಷ. ಇದರಲ್ಲಿ ಹೆಚ್ಚಿನವರು
ವ್ಯವಸಾಯವನ್ನೇ ವೃತ್ತಿಯನ್ನಾಗಿ ಅವಲಂಬಿಸಿದ್ದಾರೆ. 4,98,244 ಹೆಕ್ಟೇರ್ ಭೂಪ್ರದೇಶವಿರುವ ಜಿಲ್ಲೆಯಲ್ಲಿ ಅರ್ಧ ದಷ್ಟು ಭಾಗದಲ್ಲಿ ವ್ಯವಸಾಯ ಮಾಡಲಾಗುತ್ತಿದ್ದು, 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿದೆ. ‘ಸಹೃದಯಿಗಳಾದ ಇಲ್ಲಿನ ರೈತರು ತಮ್ಮನ್ನು ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ, ನ್ಯಾಯ-ನೀತಿಯಲ್ಲಿ ಮುಂದು. ಅವುಗಳ ಉಳಿವಿಗಾಗಿ ಚಳವಳಿ/ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಜನರು ಅವರು’ ಎಂಬು ದನ್ನು ಚರಿತ್ರೆಯ ಪುಟಗಳೇ ತಿಳಿಸುತ್ತವೆ.
ವರ್ಷ ಪೂರ್ತಿ ನೀರಾವರಿಗೆ ಒಳಪಡುವ ಅಚ್ಚುಕಟ್ಟು ಪ್ರದೇಶ ಇರುವಂತೆಯೇ, ಬೆಳೆ ಬೆಳೆಯುವುದಕ್ಕೆ ಪೂರಕ ವಲ್ಲದ ಬೆಂಗಾಡು ಭೂಮಿಯನ್ನೂ ಮಂಡ್ಯ ಜಿಲ್ಲೆ ಒಳಗೊಂಡಿದೆ. ಬೆಂಗಳೂರಿನಿಂದ 100 ಕಿ.ಮೀ. ಮತ್ತು ಮೈಸೂರಿ ನಿಂದ 40 ಕಿ.ಮೀ. ಅಂತರದಲ್ಲಿ ಸ್ಥಿತವಾಗಿರುವ ಮಂಡ್ಯ ನಗರವು, ಈ ಎರಡೂ ನಗರಗಳಿಗೆ ಸುಸಜ್ಜಿತ ಸಂಪರ್ಕ ಶೀಲತೆಯನ್ನು ಹೊಂದಿದ್ದರೂ ಹೇಳಿಕೊಳ್ಳುವಷ್ಟು ಮಟ್ಟಕ್ಕೆ ಅಭಿವೃದ್ಧಿಯನ್ನು ಕಾಣಲಿಲ್ಲ ಎಂಬುದು ಬೇಸರದ ಸಂಗತಿ; ಮಂಡ್ಯದ ಬಹಳಷ್ಟು ವಿದ್ಯಾವಂತ ಜನರೇ ತಮ್ಮೂರಲ್ಲಿ ನೆಲೆಸದೆ, ಮಕ್ಕಳ ವಿದ್ಯಾಭ್ಯಾಸ, ವೃತ್ತಿ ಇನ್ನಿತರೆ ಕಾರಣಗಳಿಗಾಗಿ ಬೆಂಗಳೂರು-ಮೈಸೂರು ನಗರಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.
ಅಭಿವೃದ್ಧಿಯಲ್ಲಿ ಬಡವಾಗಿದ್ದರೂ, ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಕನ್ನಡ ಭಾಷೆಯನ್ನು ಮನದುಂಬಿ ಮಾತಾಡುವ ವಿಷಯದಲ್ಲಿ ಮಂಡ್ಯ ‘ಸಂಪದ್ಭರಿತ’ ಎಂಬುದು ಖುಷಿಯ ಸಂಗತಿ. ಜಿಲ್ಲೆಯ ತಾಲೂಕು ಕೇಂದ್ರ ಗಳಾದ ಮದ್ದೂರು-ಮಂಡ್ಯ -ಪಾಂಡವಪುರ-ಶ್ರೀರಂಗಪಟ್ಟಣಗಳ ಮೂಲಕ ಸಾಗುವ ರೈಲುಮಾರ್ಗ ಹಾಗೂ ಮದ್ದೂರು-ಮಂಡ್ಯ-ಶ್ರೀರಂಗಪಟ್ಟಣದ ಮೂಲಕ ಸಾಗುವ ದಶಪಥಗಳ ಎಕ್ಸ್‌ಪ್ರೆಸ್ ಹೆದ್ದಾರಿ ಇವು ಬೆಂಗಳೂರು ಮತ್ತು ಮೈಸೂರು ನಗರಗಳನ್ನು ಜೋಡಿಸಿವೆ. ಹೀಗೆ ವಿಶಿಷ್ಟವಾಗಿ ಅಭಿವೃದ್ಧಿಗೊಂಡ ಸಂಪರ್ಕ ಮಾರ್ಗಗಳಿಂದಾಗಿ ಮಂಡ್ಯದಿಂದ ಉಭಯ ನಗರಗಳೆಡೆಗಿನ ಪ್ರಯಾಣದ ಅವಧಿಯು ಗಣನೀಯವಾಗಿ ತಗ್ಗಿ ಅನುಕೂಲವಾಗಿದ್ದರೂ, ಮಂಡ್ಯ ನಗರದ ಬೆಳವಣಿಗೆಗೆ ಅದು ಒಂಥರಾ ಶಾಪವೂ ಆಗಿದೆ.
ಕಾರಣ, ಸಣ್ಣಪುಟ್ಟ ಸಾಮಗ್ರಿಗಳ ಖರೀದಿಗೂ ಜನರು ಬೆಂಗಳೂರು ಅಥವಾ ಮೈಸೂರಿಗೆ ಹೋಗುತ್ತಿರುವುದು!
ಕಾವೇರಿ ಕಣಿವೆಯಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ವೀರವೈಷ್ಣವಿ ಹಾಗೂ ಲೋಕ ಪಾವನಿಯಂಥ ಜೀವನದಿಗಳು ಹರಿಯುತ್ತಿವೆ. ಮೈಸೂರು ಸಂಸ್ಥಾನದ ದೊರೆಗಳು ಕಟ್ಟಿಸಿದ ಶಿಂಷಾ ವಿದ್ಯುತ್ ಉತ್ಪಾದನಾ ಕೇಂದ್ರ, ಕೃಷ್ಣರಾಜಸಾಗರ ಜಲಾಶಯ ಮತ್ತು ನದಿಗಳಿಗೆ ಕಟ್ಟಿರುವ ಬ್ಯಾರೇಜುಗಳು ಜಿಲ್ಲೆಯನ್ನು ಬೆಳಗಿಸಿವೆ, ಆಹಾರೋತ್ಪಾದನೆಯಲ್ಲಿ ಸಮೃದ್ಧಗೊಳಿಸಿವೆ.
ರಂಗಭೂಮಿ ಮತ್ತು ಕಲಾವಿದರ ಪೋಷಣೆಗೆ ಹೆಸರಾಗಿರುವ ಜಿಲ್ಲೆಯು ದಶಕಗಳಷ್ಟು ಹಿಂದಿನಿಂದಲೂ ವರ್ಣ ರಂಜಿತ ಹಾಗೂ ಭವ್ಯವಾದ ನಾಟಕ ದೃಶ್ಯಾವಳಿಗಳಿಗೆ (ಅಂದರೆ ಡ್ರಾಮಾ ಸೀನರಿಗಳಿಗೆ) ರಾಜ್ಯಾದ್ಯಂತ ಖ್ಯಾತ ವಾಗಿದೆ. ಊರಿನಲ್ಲಿ ಆಡುವ ನಾಟಕಕ್ಕೆ ಮಂಡ್ಯದ ಡ್ರಾಮಾ ಸೀನರಿ ಬರುತ್ತಿದೆ ಎಂದರೆ ಅದರ ಖದರ್ರೇ ಬೇರೆ!
ಮಂಡ್ಯ ಜಿಲ್ಲೆ ಪುರಾಣ-ಪ್ರಸಿದ್ಧವೂ ಹೌದು.
ದಂಡಕಾರಣ್ಯದ ಭಾಗವಾಗಿದ್ದ ಇಲ್ಲಿನ ಭೂಪ್ರದೇಶದಲ್ಲಿ ಮಾಂಡವ್ಯ, ಮೈತ್ರೇಯ, ಕದಂಬ, ಕೌಂಡ್ಲಿಯಾ, ಕಣ್ವ,
ಅಗಸ್ತ್ಯ, ಗೌತಮ ಮುಂತಾದ ಋಷಿಗಳು ಹೆಜ್ಜೆಯಿಟ್ಟು ತಪಸ್ಸು ಮಾಡಿದ ಐತಿಹ್ಯಗಳಿವೆ. ಕುಂತಿಬೆಟ್ಟ, ಕರಿಘಟ್ಟ,
ಯದುಗಿರಿ, ನಾರಾಯಣದುರ್ಗ, ಗಜರಾಜಗಿರಿ, ಆದಿ ಚುಂಚನಗಿರಿ ಮತ್ತು ಇತರೆ ಚಿಕ್ಕಪುಟ್ಟ ಬೆಟ್ಟಗಳು ತಮ್ಮ
ರಮಣೀಯ ನೋಟದಿಂದಲೂ, ತಮ್ಮೊಳಗೆ ಹುದುಗಿಸಿ ಕೊಂಡಿರುವ ಪುರಾಣ ಕಥೆಗಳಿಂದಲೂ ಜಿಲ್ಲೆಯ ಪ್ರಾಕೃತಿಕ
ಸೌಂದರ್ಯ ಮತ್ತು ಪೌರಾಣಿಕ ಮಹತ್ವವನ್ನು ಹೆಚ್ಚಿಸಿವೆ.
ಗಗನಚುಕ್ಕಿ, ಭರಚುಕ್ಕಿ ಮತ್ತು ಶಿಂಷಾ ಜಲಪಾತಗಳು, ಗೆಂಡೆ ಹೊಸಹಳ್ಳಿ, ಕೊಕ್ಕರೆ ಬೆಳ್ಳೂರು ಮತ್ತು ರಂಗನತಿಟ್ಟು
ಪಕ್ಷಿಧಾಮಗಳು, ಮೇಲುಕೋಟೆ, ತೊಣ್ಣೂರು, ಆದಿ ಚುಂಚನಗಿರಿ, ನಾಗಮಂಗಲ, ಶ್ರೀರಂಗಪಟ್ಟಣ ಮುಂತಾದ
ಧಾರ್ಮಿಕ ಕ್ಷೇತ್ರಗಳಿಗೆ ಮಡಿಲಾಗಿರುವ ಮಂಡ್ಯ ಜಿಲ್ಲೆಯು, ಪಂಚಕೂಟ ಬಸದಿ, ಕಂಬದಹಳ್ಳಿ ಮತ್ತು ಬಸ್ತಿಕೋಟೆ ಗಳಲ್ಲಿ ಜೈನಧರ್ಮದ, ಶ್ರೀರಂಗಪಟ್ಟಣದಲ್ಲಿ ಇಸ್ಲಾಂ ಧರ್ಮದ, ನಗರದ ಹೃದಯಭಾಗ ಮತ್ತು ಇತರೆಡೆ ಕ್ರೈಸ್ತ ಧರ್ಮದ ಆರಾಧನಾ ಕೇಂದ್ರಗಳಿಗೂ ನೆಲೆಯಾಗಿದೆ. ಜಿಲ್ಲೆಯ ಮಕ್ಕಳು ಭತ್ತ-ಕಬ್ಬುಗಳ ಕೃಷಿಯನ್ನಷ್ಟೇ ಕೈಗೊಳ್ಳ ಲಿಲ್ಲ, ಬಳುವಳಿಯಾಗಿ ಬಂದಿರುವ ಸಾಹಿತ್ಯಕ-ಸಾಂಸ್ಕೃತಿಕ ಪರಂಪರೆಯ ಗುಣದಿಂದಾಗಿ ಸಾಹಿತ್ಯ ಕೃಷಿಯನ್ನೂ ತಲೆತಲಾಂತರದಿಂದ ಮಾಡಿಕೊಂಡು ಬರುತ್ತಿದ್ದಾರೆ.
ಈ ಕಾರಣಕ್ಕಾಗಿಯೇ ಜಿಲ್ಲೆಗೆ ಮೂರನೇ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಸದವಕಾಶ ಸಿಕ್ಕಿರುವುದು. 1971ರಲ್ಲಿ ಜಯದೇವಿ ತಾಯಿ ಲಿಗಾಡೆಯವರ ಅಧ್ಯಕ್ಷತೆಯಲ್ಲಿ 48ನೇ ಸಮ್ಮೇಳನವನ್ನು,
1994ರಲ್ಲಿ ಚದುರಂಗರ ಅಧ್ಯಕ್ಷತೆಯಲ್ಲಿ 63ನೇ ಸಮ್ಮೇಳನವನ್ನು ನಡೆಸಿದ್ದ ಜಿಲ್ಲೆಯು ಪ್ರಸ್ತುತ ನಾಡೋಜ
ಗೊ.ರು.ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ 87ನೇ ಸಮ್ಮೇಳನಕ್ಕೆ ಸಜ್ಜಾಗಿರುವುದು ಹೆಮ್ಮೆಯ ಮತ್ತು ಸಂತಸದ
ಸಂಗತಿ. ಇದು ಮಂಡ್ಯದ ಕನ್ನಡಕ್ಕಿರುವ ತಾಕತ್ತು.
ರಾಜ-ಮಹಾರಾಜರ ಕಾಲದಿಂದ ಇಲ್ಲಿಯವರೆಗೆ ಈ ಪ್ರದೇಶದ ಗಣನೀಯ ಸಂಖ್ಯೆಯ ಕವಿಶ್ರೇಷ್ಠರು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು, ಉತ್ತಮ ಕೃತಿಗಳನ್ನು ಸಮಾಜಕ್ಕೆ ನೀಡಿದ್ದಾರೆ. ನಂಜುಂಡಾರಾಧ್ಯ, ದೇವರಾಜ, ರುದ್ರಕವಿ, ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿದ್ದ ಮಂಡ್ಯದ ಶೃಂಗಾರಮ್ಮ ಮಾತ್ರವಲ್ಲದೆ ದೇವಶಿಖಾಮಣಿ ಅಳಸಿಂಗಾಚಾರ್ಯರು, ಎಂ.ಎಲ್.ಶ್ರೀಕಂಠೇಗೌಡರು, ಬಿಎಂಶ್ರೀ, ಪು.ತಿ.ನರಸಿಂಹಾಚಾರ್, ಬಿಂಡಿಗನವಿಲೆ ವೆಂಕಟಾಚಾರ್ಯ, ದಲಿತ ಲೇಖಕ ಹೆಮ್ಮನಹಳ್ಳಿಯ ಜಿ.ವೆಂಕಟಯ್ಯ, ಎ.ಎನ್.ಮೂರ್ತಿರಾವ್, ಕೆ.ಎಸ್.ನರಸಿಂಹ ಸ್ವಾಮಿ, ಜಾನಪದ ಸಾಹಿತ್ಯದ ಜೀ.ಶಂ.ಪರಮಶಿವಯ್ಯ, ಎಚ್.ಎಲ್.ನಾಗೇಗೌಡ, ವ.ನಂ.ಶಿವರಾಮ್ ಮತ್ತು ನಲ್ಕುಂದಿ ಶ್ರೀರಂಗಮ್ಮ, ನಿಘಂಟುಕಾರ ಜಿ.ವೆಂಕಟಸುಬ್ಬಯ್ಯ, ಜಿ.ನಾರಾಯಣ, ಇತ್ತೀಚಿನ ಕಾವ್ಯರಚನಾಕಾರರಾದ ಲತಾ ರಾಜಶೇಖರ್, ಜಯಪ್ರಕಾಶ ಗೌಡ ಹೀಗೆ ಸಾಹಿತಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕೆ.ವಿ.ಶಂಕರೇಗೌಡ, ಎಸ್. ಎಂ.ಕೃಷ್ಣ, ಎಚ್.ಡಿ.ಚೌಡಯ್ಯನವರಂಥ ಸಭ್ಯ ರಾಜಕಾರಣಿ ಗಳನ್ನು ಕೊಟ್ಟ ಮಂಡ್ಯ ಜಿಲ್ಲೆ, ಆಡಳಿತ- ವಿಜ್ಞಾನ-ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಸಾಧಕರ ನೆಲೆಯೂ ಹೌದು.
ವೈಷ್ಣವ ಸಂಪ್ರದಾಯದ ಪ್ರಮುಖ ಆಚಾರ್ಯರು, ಸಮಾಜ ಸುಧಾರಕರು ಮತ್ತು ಗ್ರಂಥಗಳ ರಚನಾಕಾರರೆನಿಸಿ ಕೊಂಡಿದ್ದ ಶ್ರೀ ರಾಮಾನುಜಾಚಾರ್ಯರು 12ನೇ ಶತಮಾನದಲ್ಲಿ ಜಿಲ್ಲೆಯ ಮೇಲುಕೋಟೆಯಲ್ಲಿ 12 ವರ್ಷಗಳಷ್ಟು ಸುದೀರ್ಘ ಕಾಲ ನೆಲೆಸಿದ್ದು ಕೂಡ ಈ ಜಿಲ್ಲೆಯ ಧಾರ್ಮಿಕ-ಸಾಂಸ್ಕೃತಿಕ-ಸಾಹಿತ್ಯಕ ವಾತಾವರಣದ ಮೇಲೆ ಅಗಾಧ ಪ್ರಭಾವ ಬೀರಿತು ಎನ್ನಲಡ್ಡಿಯಿಲ್ಲ. ಇವರೆಲ್ಲರ ಪರಿಶ್ರಮ ಮತ್ತು ಕೊಡುಗೆಯ ಫಲವಾಗಿ ಮಂಡ್ಯದಲ್ಲಿ ಈಗ ಮೂರನೇ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿದೆ. ಇಂಥ ಅಗಾಧ-ಅನನ್ಯ ಸಮ್ಮೇಳನ ನಡೆಯುವಾಗ ಒಂದಷ್ಟು ಅಸ್ತವ್ಯಸ್ತತೆಗಳು ಆಗುವುದು, ಅಪಸ್ವರಗಳು ಹೊಮ್ಮುವುದು ಸಹಜ.
ಅಂತೆಯೇ, ಈ ಬಾರಿ ಬಾಡೂಟದ ಬೇಡಿಕೆ ಮುನ್ನೆಲೆಗೆ ಬಂದಿದೆ. ನಡೆಯುತ್ತಿರುವುದು ಸಾಹಿತ್ಯ ಸಮ್ಮೇಳನವಾದರೂ,
ಸಾಹಿತ್ಯಕ ಕ್ಷೇತ್ರಕ್ಕಿಂತ ಅನ್ಯ ಕ್ಷೇತ್ರದವರ ಪಾರುಪತ್ಯವೇ ಹೆಚ್ಚು ಕಾಣುತ್ತಿದೆ. ಇಂಥವು ಏನೇ ಇರಲಿ, ಎಲ್ಲವನ್ನೂ
ಗಂಟು-ಮೂಟೆ ಕಟ್ಟಿ ಇಟ್ಟುಬಿಡೋಣ. ಕನ್ನಡಿಗರಾದ ನಾವುಗಳೆಲ್ಲರೂ ಮಂಡ್ಯದಲ್ಲಿ ನಡೆಯುತ್ತಿರುವ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಎಂಬ ‘ಕನ್ನಡ ನುಡಿಜಾತ್ರೆ’ಯಲ್ಲಿ ಭಾಗವಹಿಸಿ ಸಂಭ್ರಮಿಸೋಣ.
(ಲೇಖಕರು ಸಾಹಿತಿ ಮತ್ತು ಅಂಕಣಕಾರರು)
ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ