Tuesday, 13th May 2025

ಲೋಕಾ ಚುನಾವಣೆಗೆ ಅಕ್ಕಿ ರಾಜಕೀಯದ ವೇದಿಕೆ

ವರ್ತಮಾನ

maapala@gmail.com

ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ತಿಂಗ ಳೊಳಗೇ ಜಾರಿಗೊಳಿಸಿರುವ ರಾಜ್ಯದ ಕಾಂಗ್ರೆಸ್ ಸರಕಾರ ಕೆಲವೊಂದು ಷರತ್ತುಗಳ ವಿಚಾರದಲ್ಲಿ ಆಕ್ರೋಶ ಮೂಡಿಸಿದರೂ ಬಹುತೇಕರು ಇದನ್ನು ಬೆಂಬಲಿಸುತ್ತಿದ್ದಾರೆ.

ಈ ಪೈಕಿ ನಾಲ್ಕು ಗ್ಯಾರಂಟಿಗಳ ಜಾರಿ ಸಂಪೂರ್ಣವಾಗಿ ರಾಜ್ಯ ಸರಕಾರದ ಕೈಯ್ಯಲ್ಲಿದ್ದರೂ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ೧೦ ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರದ ಭಾರತೀಯ ಆಹಾರ ನಿಗಮ (ಎಪ್‌ಸಿಐ) ಅಥವಾ ಅನ್ಯ ರಾಜ್ಯಗಳ ನೆರವು ಬೇಕೇ ಬೇಕು. ಏಕೆಂದರೆ, ಪಡಿತರ ವ್ಯವಸ್ಥೆಯಡಿ ಅಷ್ಟೊಂದು ಪ್ರಮಾಣದಲ್ಲಿ ವಿತರಿಸಲು ಬೇಕಾದ ಅಕ್ಕಿ ರಾಜ್ಯದಲ್ಲಿ ಇಲ್ಲ.

ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಾಗಿರುವುದರಿಂದ ಎಫ್ ಸಿಐ ಮೂಲಕ ಖರೀದಿಸುವುದೇ ರಾಜ್ಯಕ್ಕಿರುವ ಏಕೈಕ ಮಾರ್ಗ. ಇತರೆ ರಾಜ್ಯಗಳನ್ನು ಅವಲಂಬಿಸಬಹುದಾದರೂ ಅಷ್ಟೊಂದು ಪ್ರಮಾಣದಲ್ಲಿ ಅಕ್ಕಿ ಹೊಂದಿಸುವುದು ಕಷ್ಟ ಸಾಧ್ಯ. ಮೇಲಾಗಿ ದರ ಕೂಡ ಸ್ವಲ್ಪ ಹೆಚ್ಚಾಗಿ ಸರಕಾರದ ಬೊಕ್ಕಸಕ್ಕೆ ಇನ್ನಷ್ಟು ಹೊರೆಯಾಗಬಹುದು. ಆದರೆ, ಅನ್ನ ಭಾಗ್ಯ ಯೋಜನೆಗೆ ಪೂರೈಸಲು ಬೇಕಾದ ಅಕ್ಕಿ ನಮ್ಮಲ್ಲಿಲ್ಲ. ಅಷ್ಟೊಂದು ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಎಫ್ ಸಿಐ ಹೇಳಿದೆ.

ಇದುವೇ ಈಗ ವಿವಾದಕ್ಕೆ ಕಾರಣವಾಗಿದ್ದು. ಕೇಂದ್ರದ ಈ ತೀರ್ಮಾನ ಈಶಾನ್ಯ ರಾಜ್ಯಗಳು ಮತ್ತು ಪ್ರಕೃತಿ ವಿಕೋಪ
ಎದುರಿಸುತ್ತಿರುವ ರಾಜ್ಯಗಳನ್ನು ಹೊರತುಪಡಿಸಿ ಇತರೆಲ್ಲಾ ರಾಜ್ಯಗಳಿಗೆ ಅನ್ವಯವಾಗುತ್ತದೆಯಾದರೂ ಅನ್ನಭಾಗ್ಯ
ಯೋಜನೆಗೆ ಅಕ್ಕಿ ಹೊಂದಿಸಲು ಪರದಾಡುತ್ತಿರುವ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಇದು ದ್ವೇಷದ ರಾಜ
ಕೀಯವಾಗಿ ಕಾಣುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಈಗ ಕೇಂದ್ರ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ರಾಜ್ಯದಲ್ಲಿ ಜನಾಂದೋಲನಕ್ಕೆ ಮುಂದಾಗಿದೆ.

ಇದಕ್ಕೆ ಮುಖ್ಯ ಕಾರಣ ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸಲು ಮೊದಲು ಒಪ್ಪಿ ನಂತರ ನಿರಾಕರಿಸಿದ್ದ ಎಫ್ ಸಿಐನ ಕ್ರಮ. ಬಿಪಿಎಲ್ ಕುಟುಂಬಗಳಿಗೆ ಈಗಾಗಲೇ ಕೇಂದ್ರ ಸರಕಾರ ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ಒದಗಿಸುತ್ತಿದೆ. ಆದರೆ, ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಬೇಕಾಗಿರುವುದರಿಂದ ರಾಜ್ಯ ಸರಕಾರ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಹೊಂದಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಅಕ್ಕಿ ಕೋರಿ ಜೂ.9ರಂದು ಎಫ್ ಸಿಐನ ಉಪ ಪ್ರಧಾನ ವ್ಯವಸ್ಥಾಪಕರಿಗೆ ಬರೆದ ಪತ್ರಕ್ಕೆ ಜೂ. 12ರಂದು ಸಮ್ಮತಿಯ ಪ್ರತಿಕ್ರಿಯೆ ಬಂದಿತ್ತು.

ಪ್ರತಿ ಕ್ವಿಂಟಾಲ್‌ಗೆ 3400 ರು. ವೆಚ್ಚದಲ್ಲಿ ಅಕ್ಕಿ ಪೂರೈಸುವುದಾಗಿ ಪತ್ರ ಬರೆದಿತ್ತು. ಅದರ ಮಾರನೇ ದಿನವೇ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಮತ್ತು ಗೋಧಿ ಮಾರಾಟ ಸ್ಥಗಿತಗೊಳಿಸಲು ಕೇಂದ್ರ ನಿರ್ಧರಿಸಿತ್ತು. ಇದರ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಕೇಂದ್ರದ ಬಿಜೆಪಿ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಆದರೆ, ಇದನ್ನು ಕೇಂದ್ರ ಆಹಾರ ಮತ್ತು ಗ್ರಾಹಕ ಸಚಿವಾಲಯ ನಿರಾಕರಿಸಿದ್ದು, ಕರ್ನಾಟಕ ಸರಕಾರವು ಬಡವರಿಗೆ ೧೦ ಕೆ.ಜಿ. ಅಕ್ಕಿ ನೀಡುವ ಯೋಜನೆ ಘೋಷಣೆ ಮಾಡುವ ಮುನ್ನ ಕೇಂದ್ರ ಸರಕಾರದ ಜತೆಗೆ ಸಮಾಲೋಚನೆ ನಡೆಸಿಲ್ಲ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಹಾಗೂ ಗೋಧಿ ಮಾರಾಟವನ್ನು ಜೂನ್ 13ರಂದು ಕೇಂದ್ರ ಸರಕಾರ ಸ್ಥಗಿತ ಗೊಳಿಸುವ ನಿರ್ಧಾರವನ್ನು ಏಕಾಏಕಿ ಮತ್ತು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿಲ್ಲ. ವಿವಿಧ ಇಲಾಖೆಗಳ ಜತೆಗೆ ಸಮಾ ಲೋಚನೆ ನಡೆಸಿ ಈ ಆದೇಶ ಹೊರಡಿಸಲಾಗಿದ್ದು, ನಿರ್ದಿಷ್ಟ ರಾಜ್ಯಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಹಠಾತ್ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದೆ.

ಹಾಗೆಂದು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಹಾಗೂ ಗೋಧಿ ಮಾರಾಟ ಸ್ಥಗಿತಗೊಳಿಸುವ ಕೇಂದ್ರದ ಕ್ರಮ ಇದೇ ಮೊದಲ ಬಾರಿಯೇನೂ ಅಲ್ಲ. ಪ್ರಕೃತಿ ವಿಕೋಪದ ಮುನ್ಸೂಚನೆ ಸಿಕ್ಕಿದ ಅನೇಕ ಸಂದರ್ಭದಲ್ಲಿ ಈ ರೀತಿಯ ನಿರ್ಧಾರ ಗಳನ್ನು ಹಲವು ಬಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಆಗ ಈಗಿರುವ ರಾಜಕೀಯ ಪರಿಸ್ಥಿತಿಗಳು ಇರಲಿಲ್ಲ. ಮೇಲಾಗಿ ಎಫ್ ಸಿಐ ಮುಂದಿನ ಆರು ತಿಂಗಳಿಗೆ ಬೇಕಾದ ಅಕ್ಕಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ಏಕಾಏಕಿ ಹೆಚ್ಚುವರಿ ಅಕ್ಕಿ ಕೇಳಿದರೆ ಕೊಡುವ ಪರಿಸ್ಥಿತಿಯಲ್ಲಿ ಅದು ಇರುವುದೂ ಇಲ್ಲ.

ಪಡಿತರ ವ್ಯವಸ್ಥೆಯಡಿ ಕೇಂದ್ರ ನೀಡುವ ಆಹಾರ ಧಾನ್ಯಕ್ಕಿಂತ ಹೆಚ್ಚುವರಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ
ಮೂಲಕ ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸಗಡ, ತೆಲಂಗಾಣ, ಒಡಿಶಾ ಸೇರಿದಂತೆ ಹಲವು ರಾಜ್ಯಗಳು ವಿತರಿಸುತ್ತಿವೆ. ಅವೆಲ್ಲವೂ ಸ್ವತಃ ತಾವೇ ಬೇರೆ ಮೂಲಗಳಿಂದ ಅಕ್ಕಿ ಸಂಗ್ರಹಿಸುತ್ತಿವೆ. ಇದುವರೆಗೆ ಆ ರಾಜ್ಯಗಳು ಯಾವುದೇ ತಕರಾರು ಎತ್ತಿಲ್ಲ. ಇದೆಲ್ಲದ ನಡುವೆ, ಈ ಬಾರಿ ಕರ್ನಾಟಕದಲ್ಲಿ ಆರಂಭ ವಾದ ಅಕ್ಕಿ ರಾಜಕೀಯ ಇದೀಗ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಇತರೆ ರಾಜ್ಯಗಳಿಗೂ ಹಬ್ಬುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಈ ನಿಟ್ಟಿನಲ್ಲಿ ನೇತೃತ್ವ ವಹಿಸಲು ಮುಂದಾಗಿರುವ ಕರ್ನಾಟಕ, ಅನ್ನಭಾಗ್ಯಕ್ಕೆ ಅಕ್ಕಿ ಕೇಳುವ ನೆಪದಲ್ಲಿ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳ ಬೆಂಬಲ ಪಡೆಯಲು ಯತ್ನಿಸುತ್ತಿದೆ. ಅಷ್ಟೇ ಅಲ್ಲ, ಉತ್ತರ ಭಾರತದಲ್ಲಿ ಬಿಜೆಪಿ
ಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಕೂಡ ಸಂಪರ್ಕಿಸಲು ಮುಂದಾಗಿದೆ. ಅನ್ನಭಾಗ್ಯಕ್ಕೆ ಅಕ್ಕಿ ಹೊಂದಿಸಲು ಕರ್ನಾಟಕ ನಡೆಸುತ್ತಿರುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಏಕೆಂದರೆ, ಇತರೆ ರಾಜ್ಯಗಳ ಸರಕಾರಗಳ ಮೂಲಕ ಕಡಿಮೆ ಬೆಲೆಗೆ ಅಕ್ಕಿ ಪಡೆದರೆ ಮಾತ್ರ ರಾಜ್ಯ ಸರಕಾರ ಆರ್ಥಿಕ ಹೊರೆ ಕಮ್ಮಿ ಮಾಡಿಕೊಳ್ಳಬಹುದು. ಒಂದೊಮ್ಮೆ ಖಾಸಗಿಯವರ ಮೊರೆ ಹೋದರೆ ರಾಜ್ಯದ ಬೊಕ್ಕಸ ಬರಿದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕು. ಆದರೆ, ಈಗ ಆರಂಭವಾಗಿರುವ ಅಕ್ಕಿ ರಾಜಕೀಯದಲ್ಲಿ ರಾಜ್ಯ ಸರಕಾರಕ್ಕಿಂತಲೂ ಪ್ರಧಾನ ಭೂಮಿಕೆ ಯಲ್ಲಿರುವುದು ಕಾಂಗ್ರೆಸ್. ೨೦೧೪ರ ಬಳಿಕ ಲೋಕಸಭೆ ಚುನಾವಣೆ ಹತ್ತಿರ ಬಂದಾಗಲೆಲ್ಲಾ ಕೇಂದ್ರ ಸರಕಾರದ ವಿರುದ್ಧ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ನಾನಾ ರೀತಿಯ ಕಸರತ್ತುಗಳನ್ನು ನಡೆಸಿ ಅದು ವಿಫಲವಾಗಿ ಮುಖಭಂಗ ಅನುಭವಿಸುತ್ತಿದ್ದ ಕಾಂಗ್ರೆಸ್‌ಗೆ, ಹಣ ಕೊಡುತ್ತೇವೆ ಎಂದರೂ ಅನ್ನಭಾಗ್ಯಕ್ಕೆ ಅಗತ್ಯ ಅಕ್ಕಿ ಒದಗಿಸಲು ಸಾಧ್ಯವಿಲ್ಲ ಎನ್ನುವ ಕೇಂದ್ರ ಸರಕಾರದ ನಿಲುವು ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯ ಆಸರೆಯಂತೆ ಕಾಣಿಸುತ್ತಿದೆ.

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ತನ್ನ ಬಳಿ ಬರುವಂತೆ ನೋಡಿಕೊಂಡರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಬಹುದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಏಕೆಂದರೆ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಜನ ಬೆಂಬಲಿಸಿ ದ್ದರಿಂದಲೇ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಇದೇ ರೀತಿ ಇತರೆ ಪಕ್ಷಗಳೂ ಈ ರೀತಿಯ ಯೋಜನೆ
ಗಳನ್ನು ಘೋಷಿಸಿದರೆ ರಾಜ್ಯಗಳಲ್ಲಿ ಜನಬೆಂಬಲ ಗಳಿಸಬಹುದು.

ಏಕೆಂದರೆ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಈ ರೀತಿಯ ಉಚಿತ ಯೋಜನೆಗಳೇ ಆ ಪಕ್ಷಗಳ ಕೈಹಿಡಿದಿರುವುದು. ಹೀಗಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿ ವಿಚಾರದಲ್ಲಿ ಅಂತಹ ಪಕ್ಷಗಳ ಬೆಂಬಲ ಪಡೆದರೆ ಅದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೈಹಿಡಿಯದಿದ್ದರೂ ಕೇಂದ್ರದಲ್ಲಿ ಮತ್ತೊಮ್ಮೆ ಯುಪಿಎ ಸರಕಾರ ಅಧಿಕಾ ರಕ್ಕೆ ಬರಬಹುದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ.

ಇದಕ್ಕೆ ಕರ್ನಾಟಕವನ್ನು ಪ್ರಧಾನ ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ ಅಷ್ಟೆ. ಸದ್ಯ ರಾಷ್ಟ್ರ ಮಟ್ಟದಲ್ಲಿ ತನಗಾರೂ ಎದುರಾಳಿ ಗಳಿಲ್ಲ ಎಂದು ಬೀಗುತ್ತಿರುವ ಬಿಜೆಪಿಗೆ ಕಾಂಗ್ರೆಸ್‌ನ ಈ ಪ್ರಯತ್ನ ಒಂದು ಎಚ್ಚರಿಕೆಯ ಗಂಟೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ, ಬಿಜೆಪಿಯೇತರ ಪಕ್ಷಗಳ ಸರಕಾರಗಳಿರುವ ರಾಜ್ಯಗಳಲ್ಲೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಹೆಚ್ಚು ಸ್ಥಾನಗಳು ಲಭಿಸುತ್ತಿವೆ. ಈ ಕಾರಣಕ್ಕಾಗಿಯೇ 2019ರಲ್ಲಿ 2014ರ ಲೋಕಸಭೆ ಚುನಾವಣೆಗಿಂತಲೂ ಹೆಚ್ಚು ಸ್ಥಾನ ಗಳಿಸಲು ಬಿಜೆಪಿ ಯಶಸ್ವಿಯಾಯಿತು.

ಇದೀಗ ಕಾಂಗ್ರೆಸ್‌ನ ಪ್ರಯತ್ನ ಬಿಜೆಪಿ ಮತಬ್ಯಾಂಕ್‌ನ ಬುಡಕ್ಕೆ ಕೊಡಲಿ ಪೆಟ್ಟು ನೀಡುವ ಸಾಧ್ಯತೆ ಕಾಣಿಸಿಕೊಳ್ಳಲಾ ರಂಭಿಸಿದೆ. ಏಕೆಂದರೆ, ಲೋಕಸಭೆ ಚುನಾವಣೆಗೆ ಇನ್ನು ಹೆಚ್ಚು ಸಮಯವೇನೂ ಇಲ್ಲ.

ಲಾಸ್ಟ್ ಸಿಪ್: ಶತ್ರುವಿನ ಶತ್ರು ಮಿತ್ರನಾಗುತ್ತಾನಾದರೂ ಅಽಕಾರ, ಸ್ಥಾನಮಾನದ ವಿಷಯ ಬಂದಾಗ ಅದೇ ಮಿತ್ರ ಮತ್ತೆ ಶತ್ರುವಾಗುತ್ತಾನೆ.