Wednesday, 14th May 2025

ಲಿಂಗ ಉರುಳಿತು, ಅಪ್ಪಚ್ಚಿ ಆಯಿತು ಬಿಜೆಪಿ

ಮೂರ್ತಿ ಪೂಜೆ

ದಕ್ಷಿಣ ಭಾರತದ ಹೆಬ್ಬಾಗಿಲಲ್ಲಿ ಬಿಜೆಪಿ ಎಡವಿ ಬಿದ್ದಿದೆ. ಕರ್ನಾಟಕದ ವಿಧಾನ ಸಭಾ ಚುನಾವಣೆಯನ್ನು ಪಶ್ಚಿಮಬಂಗಾಳದ ಮಾದರಿಯಲ್ಲಿ ಎದುರಿಸಿ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಅದಕ್ಕೆ ನಿರಾಸೆಯಾಗಿದೆ. ಪರಿಣಾಮ? ನಿರೀಕ್ಷೆಗೆ ಮೀರಿದ ಯಶಸ್ಸು ಗಳಿಸಿದ ಕಾಂಗ್ರೆಸ್ ಕರ್ನಾಟಕದ ಅಧಿಕಾರ ಸೂತ್ರವನ್ನು ಹಿಡಿದಿದ್ದಷ್ಟೇ ಅಲ್ಲ, ಮುಂದಿನ ವರ್ಷ ದಿಲ್ಲಿ ಗದ್ದುಗೆಗಾಗಿ ನಡೆಯ ಲಿರುವ ಹಣಾಹಣಿಯಲ್ಲಿ ಬಿಜೆಪಿ ವಿರೋಧಿ ಶಕ್ತಿಗಳಿಗೆ ಸೇನಾ ಶಿಬಿರವಾಗಿ ಪರಿವರ್ತನೆಯಾಗಿದೆ.

ಅಂದ ಹಾಗೆ ಕರ್ನಾಟಕದಲ್ಲಿ ಬಿಜೆಪಿಯ ಈ ಸೋಲಿಗೆ ಹಲವಾರು ಕಾರಣ ಗಳಿವೆ. ಇದರಲ್ಲಿ ಲಿಂಗಾಯತ ಮತ ಬ್ಯಾಂಕ್‌ನ ಆಕ್ರೋಶ ಬಹುಮುಖ್ಯ ವಾದುದು. ೧೯೯೦ ರಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ್ದಕ್ಕಿಂತ ದೊಡ್ಡ ತಪ್ಪನ್ನು ಈ ಸಲ ಬಿಜೆಪಿ ಎಗ್ಗು ಸಿಗ್ಗಿಲ್ಲದೆ ಮಾಡಿತು. ೧೯೮೯ ರಲ್ಲಿ ಮುಖ್ಯಮಂತ್ರಿಯಾದ ವೀರೇಂದ್ರ ಪಾಟೀಲರನ್ನು ಮರು ವರ್ಷ ಕಾನೂನು ಸುವ್ಯವಸ್ಥೆ ಹದಗೆಟ್ಟ ಹೆಸರಿನಲ್ಲಿ ಪದಚ್ಯುತಗೊಳಿಸಲಾಯಿತು. ಆ ಸಂದರ್ಭದಲ್ಲಿ ವೀರೇಂದ್ರ ಪಾಟೀಲರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬುದೇನೋ ನಿಜ. ಆದರೆ ಸಿಎಂ ಹುದ್ದೆಯಿಂದ ಕೆಳಗಿಳಿಸುವ ಮುನ್ನ ಅವರ ಮನ ಒಲಿಸುವ ಕೆಲಸ ಕಾಂಗ್ರೆಸ್ ಪಕ್ಷದಿಂದಾಗಬೇಕಿತ್ತು.

ಆದರೆ ಲಿಂಗಾಯತರ ಮಹಾವಲಸೆ ಯಾವ ಯಾವ ಕಾಲಘಟ್ಟದಲ್ಲಿ ಏತಕ್ಕಾಗಿ ನಡೆದಿದೆ? ೧೯೮೯ ರ ಚುನಾವಣೆಯಲ್ಲಿ ತಮ್ಮ ಜತೆ ನಿಂತ ಆ ಸಮುದಾಯದ ನಿರೀಕ್ಷೆಗಳೇನು? ಅನ್ನುವುದನ್ನು ಎಐಸಿಸಿ ಅಧ್ಯಕ್ಷ ರಾಜೀವ್ ಗಾಂಧಿ ಅರ್ಥ ಮಾಡಿ ಕೊಳ್ಳುವ ಗೋಜಿಗೇ ಹೋಗಲಿಲ್ಲ. ಹೀಗಾಗಿಯೇ ಆ ಸಂದರ್ಭದಲ್ಲಿ ಬೆಂಗಳೂರಿಗೆ ಬಂದವರು ಏರ್ ಪೋರ್ಟಿನಲ್ಲೇ ನಿಂತು, ಪಕ್ಷದ ಶಾಸಕಾಂಗ ಸಭೆ ತನ್ನ ಹೊಸ ನಾಯಕ ನನ್ನು ಆಯ್ಕೆ ಮಾಡಿಕೊಳ್ಳಲಿದೆ ಅಂತ ಘೋಷಿಸಿಬಿಟ್ಟರು.

ಅಸಹಾಯಕ ಸ್ಥಿತಿಯಲ್ಲಿದ್ದ ತಮ್ಮ ನಾಯಕ ವೀರೇಂದ್ರ ಪಾಟೀಲರಿಗೆ ಅವತ್ತು ಆದ ಅವಮಾನವನ್ನು ಲಿಂಗಾಯತ ಸಮು ದಾಯ ಸಹಿಸಲಿಲ್ಲ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಬಯಸಿದ ಅದು ೧೯೯೪ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಕಾಬರಲೆ ಬಾರಿಸಿತು. ಅಂದ ಹಾಗೆ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ನಂತರ ಕಾಂಗ್ರೆಸ್ ಮಾಡಿದ ಹಲವು ತಪ್ಪು ನಿರ್ಧಾರಗಳೂ ಅದಕ್ಕೆ ದುಬಾರಿಯಾದವು. ಲಿಂಗಾಯತರ ಆಕ್ರೋಶವೂ ಸೇರಿ ಅದು ೯೪ ರಲ್ಲಿ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು.

೨೦೨೧ ರಲ್ಲಿ ಬಿಜೆಪಿ ಕೂಡ ಇಂತಹ ತಪ್ಪನ್ನೇ ಮಾಡಿತು. ೨೦೧೯ ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ವನ್ನು ಉರುಳಿಸಿ ಬಿಜೆಪಿಯನ್ನು ಗದ್ದುಗೆಯ ಮೇಲೆ ತಂದು ಕೂರಿಸಿದ್ದ ಯಡಿಯೂರಪ್ಪ ಅವರನ್ನು ನಿರ್ದಾಕ್ಷಿಣ್ಯವಾಗಿ ಅದು ಕೆಳಗಿಳಿಸಿತು. ಹಾಗೆ ನೋಡಿದರೆ ಯಡಿಯೂರಪ್ಪ ಅರೇನೂ ಹಾಸಿಗೆ ಹಿಡಿದಿರಲಿಲ್ಲ, ಬದಲಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿ ದ್ದರು. ಆದರೆ ಮೇಲ್ನೋಟಕ್ಕೆ ವಯಸ್ಸಿನ ಕಾರಣ ನೀಡಿ, ಆಂತರಂಗಿಕವಾಗಿ ಅವರನ್ನು ಇಕ್ಕಳದಲ್ಲಿ ಸಿಲುಕಿಸಿದ ಬಿಜೆಪಿ ನಾಯಕರು ಯಡಿಯೂರಪ್ಪ ರಾಜೀನಾಮೆ ಕೊಡುವಂತೆ ಮಾಡಿದರು.

ಅವತ್ತು ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಿಂತ ಯಡಿಯೂರಪ್ಪ ಈಗ ರಾಜ್ಯಪಾಲರನ್ನು ಭೇಟಿ ಮಾಡಿ ನಾನು ರಾಜೀನಾಮೆ ಕೊಡುತ್ತೇನೆ ಅಂತ ಹೇಳಿ ಕಣ್ಣೀರು ಹಾಕಿದ್ದನ್ನು ನೋಡಿ ಲಿಂಗಾಯತ ಸಮುದಾಯದ ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು. ವಸ್ತುಸ್ಥಿತಿ ಎಂದರೆ ಲಿಂಗಾಯತ ಸಮುದಾಯದ ಮಹಾವಲಸೆ ಅಲ್ಲಿಂದಲೇ ಶುರುವಾಯಿತು. ಹೀಗೆ ಯಡಿಯೂರಪ್ಪ ಅವರು ತೆರವು ಮಾಡಿದ ಜಾಗಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ತಂದು ಕೂರಿಸಿ ಬಿಜೆಪಿ ವರಿಷ್ಠರು, ಎಲ್ಲವೂ ಸರಿಯಾಯಿತು ಎಂದು ಭಾವಿಸಿದರಾದರೂ, ಇದು ಕೇವಲ ಭ್ರಮೆ ಎಂಬುದು ಖುದ್ದು ಬಸವರಾಜ ಬೊಮ್ಮಾಯಿ ಅವರಿಗೇ ಗೊತ್ತಿತ್ತು.

ವಿಪರ್ಯಾಸವೆಂದರೆ, ಒಂದು ಸಲ ಪ್ರಬಲ ಲಿಂಗಾಯತ ಸಮುದಾಯಕ್ಕೆ ಘಾಸಿ ಮಾಡಿದ ನಂತರ ಆ ಗಾಯ ಒಣಗಲು ಬಿಜೆಪಿ ಬಿಡಬೇಕಿತ್ತು. ಆದರೆ ಕರ್ನಾಟಕದ ಸೋಷಿಯಲ್ ಎಂಜಿನಿಯರಿಂಗ್ ಅನ್ನೇ ಬದಲಿಸಿಬಿಡುವ ಭರಾಟೆಯಲ್ಲಿ ಬಿಜೆಪಿಯ ಅಪಸವ್ಯಗಳು ಶುರುವಾದವು. ಎಲ್ಲಕ್ಕಿಂತ ಮುಖ್ಯವಾಗಿ ಸಿಎಂ ಬೊಮ್ಮಾಯಿ ಕೇವಲ ಸ್ಟೇಜ್ ಮ್ಯಾನೇಜರ್ ಎಂಬ ಭಾವನೆ ಲಿಂಗಾಯತ ಸಮುದಾಯದಲ್ಲಿರುವಾಗ, ಪಕ್ಷದಲ್ಲಿರುವ ಇನ್ನಷ್ಟು ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುತ್ತೇವೆ ಅಂತ ಬಿಜೆಪಿ ನಾಯಕರು ಹೊರಟರು. ಚುನಾವಣೆಯ ಟಿಕೆಟ್ ನೀಡುವ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಂತವರಿಗೆ ಟಿಕೆಟ್ ನಿರಾಕರಿಸಿದ್ದು ಇದಕ್ಕೆ ಸಾಕ್ಷಿ.

ಹೀಗೆ ಇವರನ್ನೆಲ್ಲ ಸೈಡಿಗೆ ಹಾಕಿದರೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹೆಸರಿನಲ್ಲಿ ದಕ್ಕಿಸಿಕೊಳ್ಳಬಹುದು ಎಂಬುದು ಕೆಲವರ ಲೆಕ್ಕಾಚಾರವಾಗಿತ್ತು. ಆದರೆ ಯಾವಾಗ ತಮ್ಮನ್ನು ನಿರ್ಲಕ್ಷಿಸುವ ಕೆಲಸವಾಯಿತೋ ಆಗ ಶೆಟ್ಟರ್, ಸವದಿ ಅವರಂತಹ ನಾಯಕರು ಕಾಂಗ್ರೆಸ್ ಕಡೆ ಹೋದರು. ಹೀಗೆ ಹೋದ ನಾಯಕರಿಗೆ ಗೊತ್ತಿದ್ದ ಸತ್ಯವೆಂದರೆ ಯಡಿಯೂರಪ್ಪ ಎಪಿಸೋಡಿನ ನಂತರ ಹಬೆಯಾಡುತ್ತಿರುವ ಲಿಂಗಾಯತ ಸಮುದಾಯದ ಆಕ್ರೋಶ ಈಗ ಮತ್ತಷ್ಟು ತಾರಕಕ್ಕೇರುತ್ತದೆ ಎಂಬುದು.

ಇವತ್ತು ಮುಂಬೈ-ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬಿಜೆಪಿ ಹೊಡೆತ ತಿಂದಿದ್ದರೆ,
ಅದಕ್ಕೆ ಇದೇ ಮುಖ್ಯ ಕಾರಣ. ಈ ಮಧ್ಯೆ ಒಕ್ಕಲಿಗ ನಾಯಕ ಅಂತ ಪ್ರೂವ್ ಮಾಡಿ ಎಂದು ಅಶೋಕ್ ಅವರನ್ನು ಡಿಕೆಶಿ
ವಿರುದ್ಧ, ಲಿಂಗಾಯತ ನಾಯಕತ್ವ ಪ್ರೂವ್ ಮಾಡಲು ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ದ ನಿಲ್ಲಿಸಿದ ಬಿಜೆಪಿಯ ಮಾಸ್ಟರ್ ಮೈಂಡ್ ನಾಯಕರ ಕೆಲಸ ಪಕ್ಷಕ್ಕೆ ಉಲ್ಟಾ ಹೊಡೆಯಿತು.

ಹೀಗಿತ್ತು ಬಿಜೆಪಿಯ ಪ್ರಭಾವಳಿ

ಇನ್ನು ಕರ್ನಾಟಕದ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದ ನೆಲೆಯಲ್ಲಿ ಬಿಜೆಪಿಯ ಹಿಂದೆ ಒಂದು ಪ್ರಭಾವಳಿ ಕಾಣಿಸತೊಡಗಿತ್ತು. ಈ ಸಲ ಗೊತ್ತಲ್ಲ? ಚುನಾವಣೆ ಅನೌನ್ಸ್ ಆಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ
ಮೋದಿ, ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರ ದಂಡು ಕರ್ನಾಟಕಕ್ಕೆ ಬಂದು ಕೂರುತ್ತದೆ. ಅವರು ಬರುವ ಮುನ್ನವೇ ದೇಶದ ವಿವಿಧ ಭಾಗಗಳಿಂದ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಕರ್ನಾಟಕಕ್ಕೆ ಬಂದು ೨೨೪ ಕ್ಷೇತ್ರಗಳಲ್ಲೂ ಹರಡಿ ಹೋಗಿದ್ದಾರೆ. ಞಇವರು ದಿನನಿತ್ಯ ಜನ ಸೇರುವ ಟೀ ಅಂಗಡಿಯ ಮುಂದೆ, ಕಟಿಂಗ್ ಷಾಪಿನ ಮುಂದೆ, ಮಹತ್ವದ ರಾಜಕೀಯ ಚರ್ಚೆ ಮಾಡುವವರ ಹಿಂದೆ ಇರುತ್ತಾರೆ.

ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಜನಾಭಿಪ್ರಾಯ ಹೇಗಿದೆ? ಅಂತ ಅವತ್ತೇ ಪಕ್ಷಕ್ಕೆ ವಿವರ ಕೊಡುತ್ತಾರೆ. ಅದರ ಆಧಾರದ ಮೇಲೆ ಮರುದಿನದ ಕಾರ್ಯತಂತ್ರ ನಿರ್ಧಾರವಾಗುತ್ತದೆ. ಇದು ಎಷ್ಟರ ಮಟ್ಟಿಗೆ ಎಫೆಕ್ಟಿವ್ ಆಗಿದೆ ಎಂದರೆ ಪ್ರತಿ ಊರಿನ ಬೀದಿ, ಬೀದಿಗಳಲ್ಲಿ ಎಷ್ಟು ಮನೆಗಳಿವೆ? ಆ ಮನೆಯಲ್ಲಿ ಎಷ್ಟು ಜನ ಇದ್ದಾರೆ? ಅವರ ಪೈಕಿ ಯಾರ‍್ಯಾರು ಯಾವ ಪಕ್ಷದ ಪರ ಇದ್ದಾರೆ ಎಂಬುದೆಲ್ಲ ಈಗ ನಿಕ್ಕಿಯಾಗಿ ಹೋಗಿದೆ. ಹೀಗಾಗಿ ಮೋದಿ-ಷಾ ಗ್ಯಾಂಗು ಬರೋದೇ ತಡ ಕರ್ನಾಟಕದಲ್ಲಿ ಬಿಜೆಪಿಯ ಪ್ರಚಂಡ ಹವಾ ಏಳುತ್ತದೆ. ಪಕ್ಷ ನಿರಾಯಾಸವಾಗಿ ಅಽಕಾರ ಹಿಡಿಯುತ್ತದೆ ಅಂತ ಈ ಪ್ರಭಾವಳಿ ಸೃಷ್ಟಿಸಿದವರು ಕೊಚ್ಚಿಕೊಳ್ಳುತ್ತಿದ್ದರು.

ಇದರ ನಡುವೆಯೇ ಲಿಂಗಾಯತರ ವೋಟು ಯಾರಿಗೆ ಬೇಕು? ಎಂಬ ಅಪಸವ್ಯದಿಂದ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಕೇಳುತ್ತಿದ್ದ ಭ್ರಷ್ಟಾಚಾರದ ಆರೋಪ ಬಿಜೆಪಿ ನಾಯಕರಿಗೆ ಮುಖ್ಯವಾಗಲೇ ಇಲ್ಲ. ಚುನಾವಣೆಯಲ್ಲಿ ಈ ಅಂಶಗಳು ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿನ ಜತೆ ಸೇರಿ ಬಾರಿಸಿದಾಗ ಬಿಜೆಪಿ ಸೃಷ್ಟಿಸಿಕೊಂಡಿದ್ದ ಪ್ರಭಾವಳಿ ಕಳಚಿ ಬಿದ್ದು ಕಣ್ಮರೆಯಾಯಿತು.

ಮುಸ್ಲಿಂ-ಒಕ್ಕಲಿಗ ಮತ ಬ್ಯಾಂಕುಗಳ ಕತೆ

ಈ ಮಧ್ಯೆ ಬಿಜೆಪಿಯ ವಿರುದ್ಧ ಸೆಣಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಬಾರಿಯಂತೆ ಅಲ್ಪಸಂಖ್ಯಾತ ಮತ ಬ್ಯಾಂಕು ಹೊಡೆತ ಕೊಡಲಿಲ್ಲ. ಕಳೆದ ಬಾರಿ ಪಿಎಫ್ಐ ಮತ್ತು ಎಸ್ ಡಿಪಿಐ ಹೆಸರಿನ ಶಕ್ತಿಗಳು ಅಲ್ಪಸಂಖ್ಯಾತ ಮತ ಬ್ಯಾಂಕು ಹೋಳಾಗುವಂತೆ ಮಾಡುತ್ತಿದ್ದವು. ಆದರೆ ಈ ಸಲ ಅಂತಹ ಶಕ್ತಿಗಳ ಎಫೆಕ್ಟು ಕಾಂಗ್ರೆಸ್ ಪಕ್ಷಕ್ಕಾಗಲಿಲ್ಲ. ಇನ್ನು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಟಾನಿಕ್ ನೀಡುತ್ತಿದ್ದ ಒಕ್ಕಲಿಗ ಮತ ಬ್ಯಾಂಕು ಈ ಸಲ ಮೋದಿ ಎಫೆಕ್ಟಿನಿಂದ ಸುಸ್ತಾಯಿತು. ಅರ್ಥಾತ್, ಮೋದಿಯವರು ಕರ್ನಾಟಕಕ್ಕೆ ಬಂದು ಹಳೆಮೈಸೂರು ಭಾಗದಲ್ಲಿ ತಿರುಗಾಡಿದರಲ್ಲ? ಅಲ್ಲಿ ಹಲವು ಕಡೆ ಒಕ್ಕಲಿಗ ಮತಗಳು ಗಮನಾರ್ಹ ಪ್ರಮಾಣದಲ್ಲಿ ಕಮಲದ ಬೆಂಬಲಕ್ಕೆ ನಿಂತವು. ಇದಕ್ಕೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಶೇಕಡಾವಾರು ಮತಗಳು ಹೆಚ್ಚಾಗಿದ್ದೇ ಸಾಕ್ಷಿ. ಆದರೆ ಹೀಗೆ ಬಿಜೆಪಿಗೆ ಒಂದಷ್ಟು ಪ್ರಮಾಣದ ಒಕ್ಕಲಿಗ ಮತಗಳು ದಕ್ಕಿದುವಾದರೂ ಅದರ ಲಾಭ ಬಿಜೆಪಿಗಾಗಲಿಲ್ಲ.

ಬದಲಿಗೆ ಕಾಂಗ್ರೆಸ್ ಪಕ್ಷಕ್ಕಾಯಿತು. ಅಂದರೆ, ಜೆಡಿಎಸ್ ಪಕ್ಷಕ್ಕೆ ಸಿಗುತ್ತಿದ್ದ ಮತಗಳಲ್ಲಿ ಒಂದಷ್ಟನ್ನು ಬಿಜೆಪಿ ಕಿತ್ತುಕೊಂಡಿದ್ದ ರಿಂದ ಜೆಡಿಎಸ್ ನಷ್ಟ ಅನುಭವಿಸಿ ಕಾಂಗ್ರೆಸ್ ಲಾಭ ಪಡೆಯುವಂತಾಯಿತು.

ಬೊಮ್ಮಾಯಿಗೆ ವಿಪಕ್ಷ ನಾಯಕನ ಪಟ್ಟ?
ಅಂದ ಹಾಗೆ ಇದುವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಈಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಲಿದ್ದಾರೆ. ಸದನದಲ್ಲಿ ಬಿಜೆಪಿಯ ಪಕ್ಕ ಕೂರುವ ಜೆಡಿಎಸ್ ಪಕ್ಷಕ್ಕೆ ಎಚ್.ಡಿ. ಕುಮಾರಸ್ವಾಮಿ  ನಾಯಕ ರಾಗುವುದು ಬಹುತೇಕ ಗ್ಯಾರಂಟಿ. ಒಕ್ಕಲಿಗ ನಾಯಕರೊಬ್ಬರು ಜೆಡಿಎಸ್ ಪಕ್ಷವನ್ನು ಮುನ್ನಡೆಸುವಾಗ ಲಿಂಗಾಯತರಿಗೆ ಆದ್ಯತೆ ನೀಡುವುದು ಬಿಜೆಪಿಗೆ ಅನಿವಾರ್ಯವಾಗುತ್ತದೆ.

ಇದೇ ರೀತಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ವಿಪಕ್ಷ ನಾಯಕರ ಬಳಿ ಅಸಗಳಿರಬೇಕು. ಆ ದೃಷ್ಟಿಯಿಂದ ನೋಡಿದರೂ ಬಿಜೆಪಿಯಲ್ಲಿ ಬೊಮ್ಮಾಯಿ ಅವರಷ್ಟು ಶಸ್ತ್ರ ಸಜ್ಜಿತ ನಾಯಕರು ಬೇರೊಬ್ಬರಿಲ್ಲ.