ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಸರಕಾರಿ ವ್ಯವಸ್ಥೆಯಲ್ಲಿ ಹುದ್ದೆಗಳು ಖಾಲಿಯಾಗುವುದು, ನೇಮಕವಾಗುವುದು ಸಾಮಾನ್ಯ ಪ್ರಕ್ರಿಯೆ. ಪ್ರತಿವರ್ಷ ನೇಮಕ ಪ್ರಕ್ರಿಯೆ ನಡೆಯದೇ ಹೋದರೆ, ಖಾಲಿಯಾದ ಹುದ್ದೆಗಳ ಸಂಖ್ಯೆ ಮಿತಿಮೀರಿ, ಆಡಳಿತಾತ್ಮಕ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲಿಯೂ ಗೆಜೆಟೆಡ್ ಅಧಿಕಾರಿಗಳ ಹುದ್ದೆ ಖಾಲಿಯಾಗುವುದರಿಂದ ಬಹುದೊಡ್ಡ ಸಮಸ್ಯೆ ಯಾಗುತ್ತದೆ. ಇಂಥ ಸಮಸ್ಯೆ ಸೃಷ್ಟಿಯಾಗದಂತೆ, ವರ್ಷದಿಂದ ವರ್ಷಕ್ಕೆ ನೇಮಕ ಪ್ರಕ್ರಿಯೆಗೆ ಪರೀಕ್ಷೆ ನಡೆಸುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿಯೇ ಹಲವು ಗೊಂದಲಗಳಿವೆ ಎನ್ನುವುದು ವಾಸ್ತವ.
ಪ್ರತಿ ವರ್ಷ ಖಾಲಿಯಾಗುವ ಸರಕಾರಿ ಹುದ್ದೆಗಳ ಸಂಖ್ಯೆ ಸಾವಿರದ ಲೆಕ್ಕದಲ್ಲಿದ್ದರೆ, ಉದ್ಯೋಗ ಅರಸಿ ಸ್ಪರ್ಧಾತ್ಮಕ
ಪರೀಕ್ಷೆಗೆ ತಯಾರಿ ನಡೆಸುವವರ ಸಂಖ್ಯೆ ಲಕ್ಷದಲ್ಲಿರುತ್ತದೆ. ಅನೇಕ ಯುವಕರು ವಿದ್ಯಾಭ್ಯಾಸದ ಬಳಿಕ ಸರಕಾರಿ
ನೌಕರಿಯನ್ನೇ ಹಿಡಿಯಬೇಕೆಂಬ ಆಸೆ ಕಟ್ಟಿಕೊಂಡು ವರ್ಷಾನುಗಟ್ಟಲೇ ‘ಶ್ರಮ’ ಹಾಕುವುದನ್ನು ನೋಡುತ್ತೇವೆ.
ಆದರೆ ಈ ರೀತಿ ಶ್ರಮ ಹಾಕಿ ಬರೆದ ಪರೀಕ್ಷೆ ‘ಊರ್ಜಿತವೋ’ ಅನೂರ್ಜಿತವೋ ಎನ್ನುವ ಗೊಂದಲದಲ್ಲಿ ದಿನಗಳೆ
ಯುವುದು ನರಕಯಾತನೆ ಅಲ್ಲದೇ ಮತ್ತೇನೂ ಅಲ್ಲ. ಆ ಕಾರಣಕ್ಕಾಗಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಚ್ಚು ಕಟ್ಟಾಗಿ, ಯಾವುದೇ ವಿವಾದವಿಲ್ಲದೇ, ಪಾರದರ್ಶಕವಾಗಿ ನಡೆಸಬೇಕು ಎನ್ನುವ ಉದ್ದೇಶದಿಂದ ಕೇಂದ್ರದಲ್ಲಿ ಕೇಂದ್ರ ಲೋಕಸೇವಾ ಆಯೋಗವಿದ್ದರೆ, ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ರೂಪುಗೊಂಡಿದೆ.
ಆದರೆ ಕೆಪಿಎಸ್‌ಸಿ ಇತ್ತೀಚಿನ ವರ್ಷಗಳಲ್ಲಿ ನಡೆಸುತ್ತಿರುವ ಪರೀಕ್ಷಾ ಪ್ರಕ್ರಿಯೆಯನ್ನು ನೋಡಿದರೆ, ಪರೀಕ್ಷಾ ಫಲಿತಾಂಶವಷ್ಟೇ ಅಲ್ಲದೇ, ಕೆಲಸ ಸಿಕ್ಕ ಬಳಿಕವೂ ಖಾತ್ರಿಯಿಲ್ಲ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ. ಹೌದು, ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ಅತಿ ಪ್ರಮುಖ ಪರೀಕ್ಷೆಯೆಂದರೆ ಕೆಎಎಸ್ ಅಧಿಕಾರಿಗಳ ನೇಮಕ ಪ್ರಕ್ರಿಯೆ. ಇದರೊಂದಿಗೆ ಲೋಕೋಪಯೋಗಿ ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ.
1951ರಲ್ಲಿ ಆರಂಭಗೊಂಡ ಕೆಪಿಎಸ್‌ಸಿಗೂ ಗೊಂದಲ, ವಿವಾದಗಳಿಗೂ ಬಿಡಲಾಗದ ‘ಬಾಂಧವ್ಯ’ವಿದೆ. ಅದರಲ್ಲಿ ಯೂ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಗೊಂದಲಗಳಿಂದಾಗಿ ಇಡೀ ಆಯೋಗದ ಮೇಲಿನ ನಂಬಿಕೆಯೇ ಕಳೆದುಹೋಗುವಂತಾಗಿದೆ. ಈ ಹಿಂದೆ ಗೆಜೆಟೆಡ್ ಅಧಿಕಾರಿಗಳನ್ನು ನೇಮಿಸುವಾಗ ನಡೆಸುತ್ತಿದ್ದ ಸಂದರ್ಶನದ ಅಂಕಗಳಲ್ಲಿ ಭ್ರಷ್ಟಾಚಾರವಾಗುತ್ತದೆ ಎನ್ನುವ ಆರೋಪವಿತ್ತು. ಅದಾದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆಯಂಥ ವಿವಾದ ಕಾಣಿಸಿಕೊಂಡಿತು. ಕಳೆದ ವರ್ಷ ಪಿಎಸ್‌ಐ ಪರೀಕ್ಷೆಯಲ್ಲಿಯೇ ಭ್ರಷ್ಟಾಚಾರದ ವಾಸನೆ ಹೊಮ್ಮಿತ್ತು. ಈ ವರ್ಷ ಕೆಎಎಸ್ ಶ್ರೇಣಿಯ ಅಧಿಕಾರಿಗಳ ನೇಮಕಕ್ಕೆ ನಡೆದ ಪರೀಕ್ಷೆಯಲ್ಲಿನ ಎಡವಟ್ಟಿನಿಂದ, ಇಡೀ ಪರೀಕ್ಷೆಯನ್ನೇ ರದ್ದುಪಡಿಸಿ ಹೊಸದಾಗಿ ಬರೆಸಲಾಯಿತು. ಭಾನುವಾರ ಮುಕ್ತಾಯಗೊಂಡಿರುವ ಮರುಪರೀಕ್ಷೆಯಲ್ಲಿಯೂ ಸರಣಿ ಎಡವಟ್ಟುಗಳಾಗಿರುವುದು ಆಯೋಗದ ‘ವಿಶ್ವಾಸ’, ‘ಪಾವಿತ್ರ್ಯ’ದ ಬಗ್ಗೆಯೇ ಅನುಮಾನ ಮೂಡುವಂತಾಗಿದೆ.
ಹಾಗೆ ನೋಡಿದರೆ, ಕರ್ನಾಟಕ ಲೋಕಸೇವಾ ಆಯೋಗವನ್ನು ಸರಕಾರಗಳು ರಚಿಸಿರುವುದೇ, ರಾಜ್ಯಕ್ಕೆ ಸಂಬಂಧಿ
ಸಿರುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಅರ್ಹರನ್ನು ಕಾರ್ಯಾಂಗದೊಳಗೆ ಸೇರಿಸಿಕೊಳ್ಳುವುದಕ್ಕೆ.
ಆದರೆ ಪ್ರತಿಬಾರಿ ನಡೆಯುವ ಪರೀಕ್ಷೆಯಲ್ಲಿಯೂ ಒಂದಿಲ್ಲೊಂದು ವಿವಾದವಿಲ್ಲದೇ ಈ ಪ್ರಕ್ರಿಯೆಯನ್ನು ಮುಗಿಸಿದ
ಉದಾಹರಣೆಯಿಲ್ಲ. ಇಡೀ ಪ್ರಕ್ರಿಯೆಗೆ ಕೆಪಿಎಸ್‌ಸಿ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿ ಮಾತ್ರವೇ ಕಾರಣವೆನ್ನ
ಲಾಗುವುದಿಲ್ಲ. ಆದರೆ ತಳಹಂತದಲ್ಲಿ ನಡೆಯುವ ಭ್ರಷ್ಟಾಚಾರ, ಗೊಂದಲವನ್ನು ನಿವಾರಿಸುವಲ್ಲಿ ಈವರೆಗೆ ಈ
ಹುದ್ದೆಯಲ್ಲಿರುವ ಯಾರೊಬ್ಬರಿಂದಲೂ ಸಾಧ್ಯವಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.
ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ವೇಳೆ ಆಗುವ ಎಡವಟ್ಟುಗಳಿಂದ ಆಗುವ ಅನಾಹುತ, ಅಭ್ಯರ್ಥಿಗಳ ಭವಿಷ್ಯದ ಮೇಲೆ ಬೀಳುವ ಹೊಡೆತ ಸಣ್ಣ ಪ್ರಮಾಣದಲ್ಲಿರುವುದಿಲ್ಲ. ಉದಾಹರಣೆಗೆ, ಕಳೆದ ವರ್ಷ ಪಿಎಸ್‌ಐ ಪರೀಕ್ಷೆ ನಡೆಸುವ ವೇಳೆ ನಡೆದ ಅಕ್ರಮದಿಂದಾಗಿ ಇಡೀ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಲಾಗಿತ್ತು. ಸುಮಾರು 542 ಹುದ್ದೆ ಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ ಕೆಲವೊಂದಷ್ಟು ಮಂದಿ ತಪ್ಪು ಮಾಡಿದ್ದರು. ಈ ತಪ್ಪು ಮಾಡುವುದಕ್ಕೆ ಕೆಲ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಕುಮ್ಮಕ್ಕು ಇತ್ತು ಎನ್ನುವುದು ಸ್ಪಷ್ಟ (ಶಾಮೀಲಾದವರು ಜೈಲು ಸೇರಿದ್ದೂ ಉಂಟು). ಆದರೆ ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು, ಪಿಎಸ್‌ಐಗಳಾಗಲು ತುದಿಗಾಲಲ್ಲಿ ನಿಂತಿದ್ದ ನೂರಾರು ಯುವಕರು. ಪರೀಕ್ಷಾ ಪ್ರಕ್ರಿಯೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಮುಂದಾದ ಸಮಯದಲ್ಲಿ ರದ್ದಾದ ಪರೀಕ್ಷೆಯಲ್ಲಿ ಪಾಸಾಗಿದ್ದ ಅನೇಕ ಅಭ್ಯರ್ಥಿಗಳಿಗೆ ‘ಪುನರಾಯ್ಕೆ’ ಯಾಗಲು ಸಾಧ್ಯವಾಗಲಿಲ್ಲ.
‘ಎವೆರಿ ಡೇ ಈಸ್ ನಾಟ್ ಸಂಡೇ’ ಎನ್ನುವ ರೀತಿಯಲ್ಲಿ ಬರೆದ ಪರೀಕ್ಷೆಗಳೆಲ್ಲವನ್ನೂ ‘ಕ್ಲಿಯರ್’ ಮಾಡಲು
ಯಾರಿಂದಲೂ ಆಗುವುದಿಲ್ಲ. ಆದರೆ ಆಯೋಗ ಅಥವಾ ಸರಕಾರಿ ಇಲಾಖೆಗಳು ನಡೆಸುವ ಪರೀಕ್ಷೆಯಲ್ಲಿ ಆಗುವ
ಎಡವಟ್ಟುಗಳಿಂದಾಗಿ ನಡೆಯುವ ಮರುಪರೀಕ್ಷೆಯಿಂದ ಅನೇಕ ಅಭ್ಯರ್ಥಿಗಳಿಗೆ ಕೆಲಸ ಸಿಗದೇ ಹೋಗಬಹುದು.
ಇದರೊಂದಿಗೆ ಒಮ್ಮೆ ಬರೆದು ಮತ್ತೆ ಮರುಪರೀಕ್ಷೆಯೆಂದರೆ ಯಾವುದೇ ಅಭ್ಯರ್ಥಿ ಗೊಂದಲಕ್ಕೆ ಒಳಗಾಗುವುದು ನಿಶ್ಚಿತ. ಈ ಕಾರಣಕ್ಕಾಗಿಯೇ ಅದೆಷ್ಟೋ ಅಭ್ಯರ್ಥಿಗಳು ವರ್ಷಾನುಗಟ್ಟಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರೂ, ಕ್ಲಿಯರ್ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ.
ಮಾನಸಿಕ ಒತ್ತಡವಷ್ಟೇ ಅಲ್ಲದೇ, ವಯಸ್ಸಿನ ಕಾರಣಕ್ಕೂ ಅನೇಕ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅರ್ಹತೆ
ಮೀರುವ ಸಾಧ್ಯತೆ ದಟ್ಟವಾಗಿರುತ್ತದೆ. ಕಳೆದ ಬಾರಿ ನಡೆದ ಪಿಎಸ್‌ಐ ಪರೀಕ್ಷೆಯ ಉದಾಹರಣೆಯನ್ನೇ ತೆಗೆದು ಕೊಂಡರೆ, ಆ ಬಾರಿ ವಿಫಲರಾದ ಅದೆಷ್ಟೋ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ವಯಸ್ಸಿನ ಸಮಸ್ಯೆ ಎದುರಾಗಿತ್ತು. ಅರ್ಹತಾ ವಯಸ್ಸು ಮೀರಿದ್ದರಿಂದ ಪರೀಕ್ಷೆಯನ್ನೇ ಬರೆಯದೇ ವರ್ಷಾನುಗಟ್ಟಲೇ ಕಟ್ಟಿದ ಕನಸು
ನುಚ್ಚುನೂರಾದ ಅನೇಕ ಘಟನೆಗಳಿವೆ.
ಇನ್ನು ಈ ಬಾರಿಯ ಕೆಎಎಸ್ ಪರೀಕ್ಷೆಯ ಗೊಂದಲದ ಬಗ್ಗೆ ಗಮನಿಸುವುದಾದರೆ, ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಶ್ನೆಗಳ ಅನುವಾದ ತಪ್ಪಾಗಿ ಆಗಿದೆ ಎನ್ನುವ ಆರೋಪವಿತ್ತು. ಈ ಆರೋಪ ಸಾಬೀತಾಗಿದ್ದರಿಂದ, ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸುವ ತೀರ್ಮಾ
ನವನ್ನು ರಾಜ್ಯ ಸರಕಾರ ಕೈಗೊಂಡಿತ್ತು. ಇದು ಬಹುದೊಡ್ಡ ವಿವಾದವಾದ ಬಳಿಕ ‘ಕಠಿಣ ಕ್ರಮದ ಎಚ್ಚರಿಕೆ’ ಯೊಂದಿಗೆ ಮರುಪರೀಕ್ಷೆಗೆ ಆಯೋಗ ಮುಂದಾಗಿ, ಈ ಪರೀಕ್ಷೆಯನ್ನು ಡಿ.29ರಂದು ನಡೆಸಿತ್ತು. ಕಳೆದ ಬಾರಿಯ ಎಡವಟ್ಟನ್ನು ಸರಿಪಡಿಸಿಕೊಂಡು ಈ ಬಾರಿಯಾದರೂ ಸರಿಯಾಗಿ ಪರೀಕ್ಷೆ ನಡೆಸುತ್ತಾರೆ ಎಂದೇ ಅನೇಕರು ಭಾವಿಸಿ ದ್ದರು. ಆದರೆ ಈ ಬಾರಿಯೂ ಐದು ಪ್ರಶ್ನೆಗಳ ಅನುವಾದದ ಸಮಸ್ಯೆ ಹಾಗೂ ವಿಜಯಪುರದಲ್ಲಿ ಓಎಂಆರ್ ನೋಂದಣಿ ಬದಲಾವಣೆಯ ಗೊಂದಲದಿಂದ ಮತ್ತೆ ವಿವಾದವಾಗಿ, ಮತ್ತೊಮ್ಮೆ ಮರುಪರೀಕ್ಷೆಗೆ ಕೆಲ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಐದು ಪ್ರಶ್ನೆಯಲ್ಲಿನ ಗೊಂದಲಕ್ಕೆ ಮರುಪರೀಕ್ಷೆ ನಡೆಸುತ್ತಾರೋ ಅಥವಾ ಕೃಪಾಂಕದೊಂದಿಗೆ ಪರೀಕ್ಷಾ ಪ್ರಕ್ರಿಯೆ ಯನ್ನು ಪೂರ್ಣಗೊಳಿಸುವರೋ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಮತ್ತೊಮ್ಮೆ ಈ ರೀತಿಯ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವುದಂತೂ ಸತ್ಯ. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಶ್ನೆಪತ್ರಿಕೆ ರಚಿಸುವುದು ಇಂಗ್ಲಿಷ್‌ನಲ್ಲಿಯೇ ಆದರೂ, ಕನ್ನಡಕ್ಕೆ ಅನುವಾದ ಮಾಡಲು ಅಥವಾ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡಲೆಂದೇ ಪ್ರತ್ಯೇಕ ಘಟಕವಿದೆ. ಅದಕ್ಕಾಗಿಯೇ ಹಲವು ಅಧಿಕಾರಿಗಳಿರುತ್ತಾರೆ. ಹೀಗಿರುವಾಗ, ಅನುವಾದದ ವೇಳೆ ‘ಬಾಲಿಶ’ ತಪ್ಪುಗಳಾಗುವುದಾದರೂ ಹೇಗೆ ಎನ್ನುವುದು ಹಲವರ ಪ್ರಶ್ನೆಯಾಗಿದೆ.
ಹಾಗೆ ನೋಡಿದರೆ, ಕೆಎಎಸ್ ಗೆಜೆಟೆಡ್ ಹುದ್ದೆಗಳಿಗೆ ನಡೆಯುವ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ವರ್ಷಾ
ನುಗಟ್ಟಲೆ ಶ್ರಮ ಹಾಕಿರುತ್ತಾರೆ. ಅದೆಷ್ಟೋ ಅಭ್ಯರ್ಥಿಗಳಿಗೆ ಈ ಪರೀಕ್ಷೆ ಕೊನೆಯ ಪರೀಕ್ಷೆಯಾಗಿರುತ್ತದೆ. ಇಡೀ
ಕುಟುಂಬ ಈ ಪರೀಕ್ಷೆಯ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ. ಪದೇಪದೆ ಪರೀಕ್ಷಾ ಪ್ರಕ್ರಿಯೆ ರದ್ದು ಗೊಂಡರೆ ಅಥವಾ ಮರುಪರೀಕ್ಷೆ ನಡೆಸಿದರೆ ಆ ಅಭ್ಯರ್ಥಿಗಳ ಕುಟುಂಬಗಳು ಅನುಭವಿಸುವ ಆರ್ಥಿಕ ಹಾಗೂ ಮಾನಸಿಕ ಹೊಡೆತ ಅಷ್ಟಿಷ್ಟಲ್ಲ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎಂದರೆ ಅದಕ್ಕೆ ಭಾರಿ ವೆಚ್ಚ ವಾಗುತ್ತದೆ ಎನ್ನುವುದು ಸ್ಪಷ್ಟ. ಅಭ್ಯರ್ಥಿಗಳಿಂದ ಶುಲ್ಕದ ರೂಪದಲ್ಲಿ ಹಣ ಕ್ರೋಡೀಕರಿಸಿದರೂ, ಹೆಚ್ಚುವರಿ ಯಾಗಿ ಅನುದಾನವನ್ನು ನೀಡಬೇಕಾಗುತ್ತದೆ.
ರಾಜ್ಯ ಸರಕಾರವು ಪೂರಕ ಅಂದಾಜಿನಲ್ಲಿ ನೀಡಿರುವಂತೆ ಕೆಪಿಎಸ್‌ಸಿಗೆ ಪರೀಕ್ಷೆ ನಡೆಸುವುದಕ್ಕಾಗಿಯೇ 35.87 ಕೋಟಿ ರು. ಅನುದಾನ ಹಂಚಿಕೆಯನ್ನು 2024-25ನೇ ಸಾಲಿನಲ್ಲಿ ಮಾಡಿದೆ. ಒಂದು ಮರುಪರೀಕ್ಷೆ ನಡೆಸುವುದಕ್ಕೆ ಕನಿಷ್ಠ 15ರಿಂದ 16 ಕೋಟಿ ರು. ಅಗತ್ಯವಿದೆ. ಆದರೆ ಮರುಪರೀಕ್ಷೆಗೆ ಅಭ್ಯರ್ಥಿಗಳು ಶುಲ್ಕ ಮರುಪಾವತಿ ಮಾಡದೇ
ಇರುವುದರಿಂದ ಇಡೀ ಖರ್ಚನ್ನು ಸರಕಾರವೇ ಹೊರಬೇಕಾತ್ತದೆ. ಆದ್ದರಿಂದ ಗೊಂದಲವಿಲ್ಲದೆ, ಮೊದಲ ಬಾರಿಗೇ
ಸರಿಯಾದ ರೀತಿಯಲ್ಲಿ ನಡೆಸಿದರೆ ಈ ರೀತಿಯ ಅನಗತ್ಯ ಹೊಡೆತವನ್ನು ತಡೆಯಬಹುದು.
ಕಾರ್ಯಾಂಗವನ್ನು ಮುನ್ನಡೆಸುವ ಭವಿಷ್ಯದ ಅಧಿಕಾರಿಗಳನ್ನು ನೇಮಿಸುವ ಸಲುವಾಗಿ ನಡೆಸುವ ಪರೀಕ್ಷೆಗಳ
ವಿಷಯದಲ್ಲಿ ಕೆಪಿಎಸ್‌ಸಿ ಮತ್ತಷ್ಟು ಮುತುವರ್ಜಿವಹಿಸುವುದು ಅತ್ಯಗತ್ಯ. ಅದೇ ರೀತಿ ಇಡೀ ಕೆಪಿಎಸ್‌ಸಿ ವ್ಯವಸ್ಥೆ ಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರವೂ ಗಂಭೀರ ಚಿಂತನೆ ನಡೆಸಬೇಕಿದೆ. ಪ್ರತಿಬಾರಿ ಪರೀಕ್ಷೆಯ ಸಮಯ ದಲ್ಲಾಗುವ ಎಡವಟ್ಟಿನ ಬಳಿಕ ಯಾವುದೋ ಒಬ್ಬ ಅಧಿಕಾರಿಯ ‘ತಲೆದಂಡ’ ಮಾಡಿ, ಕೈತೊಳೆದುಕೊಂಡು
‘ಮತ್ತೊಮ್ಮೆ ಹೀಗಾಗದಂತೆ ಎಚ್ಚರವ ಹಿಸುತ್ತೇವೆ’ ಎನ್ನುವ ಬದಲು ಪರೀಕ್ಷೆ ನಡೆಸುವ ವಿಷಯದಲ್ಲಿ ಎಚ್ಚರಿಕೆಯ
ಹೆಜ್ಜೆಯಿಡುವ ನಿಟ್ಟಿನಲ್ಲಿ ಕಠಿಣ ಕ್ರಮ ಇಂದಿನ ಅಗತ್ಯ.
ಪ್ರತಿಬಾರಿ ಆಗುವ ಎಡವಟ್ಟಿನಿಂದ ಕೆಪಿಎಸ್‌ಸಿ ಮೇಲಿನ ‘ನಂಬಿಕೆ’ ಕ್ಷೀಣಿಸುವುದು, ಮರುಪರೀಕ್ಷೆಗೆಂದು
ಕೋಟ್ಯಂತರ ರುಪಾಯಿ ಖರ್ಚಾಗುವುದು ಒಂದು ಭಾಗವಾದರೆ, ಪ್ರತಿಭಾವಂತ ಅಭ್ಯರ್ಥಿಗಳ ‘ಸಮಯ’ ಮೀರಿ ಪರೀಕ್ಷೆ ಬರೆಯಲಾಗದೇ ವರ್ಷಾನು ಗಟ್ಟಲೇ ಪಟ್ಟ ಶ್ರಮ ವ್ಯರ್ಥವಾಗುವ ಮೂಲಕ ಅನೇಕ ಪ್ರತಿಭಾವಂತರೂ
ಸರಕಾರಿ ಕೆಲಸದಿಂದ ವಿಮುಖವಾಗುವ ಆತಂಕವೂ ಇದೆ. ಆದ್ದರಿಂದ ಸರಕಾರವು ಇನ್ನಾದರೂ ಎಚ್ಚೆತ್ತುಕೊಂಡು
ಕೆಪಿಎಸ್‌ಸಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಿರುವುದು ಇಂದಿನ ಅಗತ್ಯವಾಗಿದೆ.
ಇದನ್ನೂ ಓದಿ: Ranjith H Ashwath Column: ಪಾಠ ಮಾಡೋಕೆ ಶಿಕ್ಷಕರಿಗೆ ಟೈಂ ಕೊಡಿ !