ಯಶೋ ಬೆಳಗು
yashomathy@gmail.com
ನೂರಾರು ಜನರಲ್ಲಿ ಒಬ್ಬರಾಗಿ ನಾಯಕನಿಗೆ ಚಪ್ಪಾಳೆ ತಟ್ಟುವುದು ಸುಲಭ. ನಾನು ಭ್ರಷ್ಟ ರಾಜಕಾರಣಿಗಳನ್ನು ಬೈಯ್ಯುವಾಗ ಎಲ್ಲರೂ ಚಪ್ಪಾಳೆ ತಟ್ಟುತ್ತಾ ಏನ್ ಚೆನ್ನಾಗ್ ಬಯ್ತಾನೆ ಗುರೂ? ಎನ್ನುತ್ತ ಖುಷಿ ಪಡುವ ಜನ ತಾವು ಯಾವತ್ತೂ ಆ ಕೆಲಸ ಮಾಡುವುದಿಲ್ಲ. ಅವರಿಗೆ ಬಯ್ಯುವುದಕ್ಕೆ ನನ್ನಂಥಾ ಒಬ್ಬ ನಾಯಕ ಬೇಕು ಅಷ್ಟೆ! ಎಂದು ಹೇಳುತ್ತಿದ್ದ ಮಾಸ್ಟರ್ ಹಿರಣ್ಣಯ್ಯನವರ ಮಾತು ಬಹಳ ಸಲ ನೆನಪಾಗುತ್ತದೆ.
2023 ರ ಆರಂಭದ ಶ್ರೀಗುರು ಸಿದ್ದೇಶ್ವರರ ಅವಸಾನ ನಾಡಿನ ಜನತೆಯನ್ನು ಶೋಕ ಸಾಗರದಲ್ಲಿ ಮುಳುಗಿಸಿತು. ಅದೆಷ್ಟು ಸರಳ ನಡೆ-ನುಡಿ-ವಿಚಾರಧಾರೆ. ನಮಗ್ಯಾಕೆ ಅವರಂತೆ ಬದುಕಲು ಸಾಧ್ಯವಿಲ್ಲ? ಯಾಕಂದ್ರೆ ನಾವು ಸಿದ್ದೇಶ್ವರರಲ್ಲ. ಆದರೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅವರಲ್ಲಿದ್ದ ಕೆಲವಾದರೂ ಸರಳ ನಡೆ-ನುಡಿಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಖಂಡಿತಾ ಇದೆ.
ಎಲ್ಲ ಢೋಂಗೀ ಸ್ವಾಮಿಗಳನ್ನು ನೋಡಿ ರೋಸೆದ್ದು ಹೋಗಿ ನಂಬಿಕೆ ಕಳೆದುಕೊಂಡಿದ್ದ ಮನಸುಗಳಿಗೆ ಆದರ್ಶವಾಗಿ ಎಲ್ಲರ ಮನದಂಗಳದ ದೀಪವಾಗಿ ಬೆಳಗಿದರು. ನಮ್ಮನ್ನು ನಾವು ಇನ್ನಷ್ಟು ಚೆಂದಗಿಟ್ಟುಕೊಳ್ಳಲಿಕ್ಕೆ ನಮಗಿಂಥಾ ಆದರ್ಶಗಳು ಸದಾ ಬೇಕು.
ಹೀಗಾಗಿಯೇ ನಮ್ಮೊಳಗೆ ಒಬ್ಬ ಆದರ್ಶ ನಾಯಕನ ಹುಡುಕಾಟ ನಿರಂತರವಾಗಿ ನಡೆದೇ ಇರುತ್ತದೆ. ನಮ್ಮಿಂದ ಅಸಾಧ್ಯ ವಾದ ಕೆಲಸಗಳನ್ನೆಲ್ಲ ಅವನು ಜಗದೇಕವೀರನಂತೆ ಸುಲಲಿತವಾಗಿ ಮಾಡುವಂಥ ಚಾಣಾಕ್ಷನಾಗಿರಬೇಕು ಎಂಬ ತೀರದ ಬಯಕೆಗಳಿರುತ್ತದೆ.
ನ್ಯಾಯದ ಪರವಾಗಿ ಹೋರಾಡುವವನು, ಅನ್ಯಾಯದ ವಿರುದ್ಧ ಸಿಡಿದೇಳುವವನು, ಕರಗುವ ಮನಸುಳ್ಳವನು. ಸ್ನೇಹಕ್ಕೆ ತಲೆ ಬಾಗುವವನು. ಪ್ರೀತಿಯನ್ನು ಗೆಲ್ಲುವವನು. ಹೀಗೆ…. ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅದಕ್ಕೇ ಸಿನೆಮಾಗಳಲ್ಲಿ ಕಾಣುವ
ಹೀರೋ ಗಳೆಂದರೆ ಅವರ ಡೈಲಾಗುಗಳೆಂದರೆ ಅಷ್ಟು ಅಚ್ಚುಮೆಚ್ಚು. ಆದರೆ ತೋರಿಕೆಯ ಮುಖವಾಡಗಳನ್ನು ಹೊತ್ತು ತಿರುಗು ವುದು ಅದೆಷ್ಟು ಕಷ್ಟ!
ಒಳಗೊಂದು ಹೊರಗೊಂದು ಇಮೇಜುಗಳನ್ನಿಟ್ಟುಕೊಳ್ಳದೆ ಇದ್ದ ಹಾಗೆ ಬದುಕಿಬಿಡುವುದು ಎಲ್ಲರಿಂದಲೂ ಅಷ್ಟು ಸುಲಭಕ್ಕೆ ಸಾಧ್ಯವಿಲ್ಲ. ಸಾಕಷ್ಟು ಬಾರಿ ಮಾನಸಿಕ ಒತ್ತಡಕ್ಕೊಳಗಾಗಿ ಖಿನ್ನತೆಗೆ ಜಾರಿದಾಗ ನಾನು ಕಣ್ಣುಮುಚ್ಚಿ ರವಿ ಹೇಳಿದ್ದ ಒಂದೊಂದೇ ಮಾತುಗಳನ್ನು ನೆನಪು ಮಾಡಿಕೊಳ್ಳುತ್ತಾ ಕೂರುತ್ತೇನೆ. ಜೊತೆಗಿರುತ್ತಿದ್ದ ಕ್ಷಣಗಳಲ್ಲಿ ಅದೆಷ್ಟು ಬದುಕಿನ ಪಾಠಗಳನ್ನು ತಿಳಿಸಿ ಕೊಟ್ಟರಲ್ಲ? ಎಂಬುದು ನೆನದಾಗ ಅವರ ಮಾತುಗಳೇ ನನಗೆ ಆದರ್ಶದ ದಾರಿದೀಪವಾಗುತ್ತದೆ.
‘ನೋಡು, ಈ ಸಮಾಜವೆಂಬುದು ಕೇವಲ ಉಳ್ಳವರಿಂದ ಆದದ್ದಲ್ಲ. ಕಲ್ಲು ಕುಟ್ಟುವವರು, ಹಾಸಿಗೆ ಹೊಲಿಯುವವರು, ಬಣ್ಣ
ಬಳಿಯುವವರು, ಚಪ್ಪರ ಹಾಕುವವರು, ಚಟ್ಟ ಕಟ್ಟುವವರು, ವಾದ್ಯದವರು, ಮಡಿಕೆ ಮಾಡುವವರು, ಮರಗೆಲಸದವರು, ದರ್ಜಿಗಳು, ಮಡಿವಾಳರು, ನೇಯ್ಗೆಯವರು, ಅಕ್ಕಸಾಲಿಗರು, ಕುಶಲಕರ್ಮಿಗಳು, ನಿನ್ನಂತಹ, ನನ್ನಂತಹ ಅನೇಕ ಶ್ರಮಜೀವಿಗಳ ನಿರಂತರ ಪರಿಶ್ರಮದಿಂದಾಗಿದೆ. ಅವರೆಲ್ಲರೆಡೆಗೆ ನಾವು ಸದಾ ಕೃತಜ್ಞರಾಗಿರಬೇಕು… ಯಾವ ಕೆಲಸವೂ ನಿಕೃಷ್ಟದ್ದಲ್ಲ.
ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದಕ್ಕೆ ತಕ್ಕ ಫಲ ಖಂಡಿತಾ ಸಿಕ್ಕೇ ಸಿಗುತ್ತದೆ. ಈ ಪತ್ರಿಕೆ ಮಾಡಲು ಹಗಲೂ ರಾತ್ರಿ ನಾನದೆಷ್ಟು ಶ್ರಮ ಪಡುತ್ತಿದ್ದೇ ನೆಂಬುದು ಪ್ರತಿನಿತ್ಯ ನೀನು ನೋಡುತ್ತಲೇ ಇದ್ದೀಯ. ನಿನಗೆ ನಾನೆಂದರೆ ಇಷ್ಟೇ ಅನ್ನಿಸಬಹುದು. ಆದರೆ ದೂರದ ನಿಂತಿರುವ ಓದುಗನಿಗೆ ನಾನು ಆದರ್ಶವಾಗಿ ಕಾಣುತ್ತೇನೆ. ಯಾಕಂದ್ರೆ, ಅದೆಲ್ಲ ಸೋಲು-
ಅವಮಾನಗಳ ನಡುವೆಯೂ ಛಲ ಬಿಡದೆ ಇಂದು ಗೆಲುವಿನ ಮೆಟ್ಟಿಲಿನ ಮೇಲೆ ನಿಂತಿದ್ದೇನೆ. ಹೀಗಾಗಿ ಸೋಲಿನಿಂದ ಬಳಲಿ ನೊಂದ ಮನಸಿಗೆ ನಾನೂ ಒಂದು ದಿನ ಅವನಂತೆಯೇ ಸಕ್ಸಸ್ ಆಗುತ್ತೇನೆಂಬ ನಂಬಿಕೆ ಹುಟ್ಟಿಸುತ್ತದೆ.
ಇವತ್ತಿಗೂ ಸಾಹಿರ್ ಲುಧಿಯಾನ್ವಿ ಪೊಯೆಟ್ರಿ ಅದೆಷ್ಟು ಸಾವಿರ ಸಲ ಕೇಳಿದರೂ ಸಾಕೆನಿಸುವುದಿಲ್ಲ. ಅವನಂತೆಯೇ ಸಾಕಷ್ಟು ಸಲ ಬರೆಯಬೇಕು, ಯೋಚಿಸಬೇಕು, ಬದುಕಬೇಕು ಎಂದು ಹಂಬಲಿಸುತ್ತಿದ್ದೆ. ಎಷ್ಟೆಂದರೆ ಅವನಂತೆಯೇ ಹೇರ್ ಕಟ್ ಕೂಡಾ ಮಾಡಿಸಿಕೊಳ್ಳಬೇಕೆಂಬಷ್ಟು ಅವನನ್ನು ನಾನು ಆರಾಧಿಸುತ್ತಿದ್ದೆ. ಅವನಂತೆಯೇ ಕುಡಿಯುತ್ತಾ ಕುಳಿತಿರುತ್ತಿದ್ದೆ. ಕಾರ್ಲ್
ಮಾರ್ಕ್ಸ್ ನ ಫೋಟೋ ನೋಡಿ ಅವನಂತೆಯೇ ಗಡ್ಡ ಬೆಳೆಸಿದೆ. ಕೆಲದಿನಗಳ ಕಾಲ ಥೇಟು ಶತ್ರುಘ್ನ ಸಿನ್ಹಾ ಹಾಗೆ ಮಾತನಾಡುವ ಪ್ರಯತ್ನ ಮಾಡುತ್ತಿದ್ದೆ.
ರಜನೀಶ್, ಖುಷ್ವಂತ್, ಚಲಂ, ದಳವಿ, ಮಾರಿಯೋ ಪ್ಯೂಜೋ, ಹೆಮಿಂಗ್ವೆ, ಕೊಂಡಪಲ್ಲಿ ಸೀತಾರಾಮಯ್ಯನವರಿಂದ ಹಿಡಿದು ಭೂಗತ ದೊರೆಗಳ ತನಕ ಎಲ್ಲ ಥರದವರೂ ನನಗೆ ಹೀರೋಗಳಂತೆ ಕಾಣುತ್ತಿದ್ದರು. ನಾನು ಹೆಚ್ಚು ಹೆಚ್ಚು ಓದುತ್ತಾ, ಬೆಳೆಯುತ್ತಾ ಬಂದಂತೆಲ್ಲ ನನ್ನ ಹೀರೋಗಳು ಬದಲಾದರು. ಹಳಬರು ಸ್ಟುಪಿಡ್ ಅನ್ನಿಸತೊಡಗಿದರು. ಮಹಾ ಬಲಿಷ್ಠರೆನ್ನಿಸಿ ಕೊಂಡವರು ತೀರ ಪುಕ್ಕಲರೆನ್ನಿಸಿದರು. ಕೆಲವರ ಭಾವುಕತೆ ಮೊದಲು ಇಷ್ಟವಾಯಿತಾದರೂ ಕ್ರಮೇಣ ಹುಚ್ಚಾಟ ವೆನ್ನಿಸ ತೊಗಿತು. ಯಾವುದೂ ಶಾಶ್ವತವಲ್ಲ.
ಇವತ್ತು ಯಾರ ಕಣ್ಣಿಗೆ ನಾನು ಹೀರೋ ಆಗಿ ಕಾಣುತ್ತಿದ್ದೇನೆಯೋ ಅವನ ಕಣ್ಣಿನಲ್ಲಿ ನಾಳೆ ಮತ್ಯಾರೋ ಹೀರೋ ಆಗಿ ಬಂದು ಕುಳಿತಿರುತ್ತಾರೆ….’ ಎಂದು ಹೇಳುತ್ತಾ ಮೈ ಪಲ್ ದೋ ಪಲ್ ಕಾ ಶಾಯರ್ ಹ್ಙೂ ಹಾಡು ಕೇಳಿಸುತ್ತಿದ್ದರು. ರಾಜಕುಮಾರ್ರಲ್ಲಿ ಬಂಗಾರದ ಮನುಷ್ಯನನ್ನು ಕಾಣುವ ನಾವು ಸದಾ ನಮ್ಮ ಒಳಿತನ್ನು ಬಯಸುತ್ತಾ ನಮ್ಮ ದಿನನಿತ್ಯದ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತ ನಮ್ಮ ಅವಶ್ಯಕತೆಗಳನ್ನು ಪೂರೈಸುವ ನಮ್ಮನ್ನು ಹೆತ್ತ ತಂದೆ-ತಾಯಿಯರನ್ನು ಗೌಣವಾಗಿಸುತ್ತೇವೆ.. ನೂರಾರು ಜನರಲ್ಲಿ ಒಬ್ಬರಾಗಿ ನಾಯಕನಿಗೆ ಚಪ್ಪಾಳೆ ತಟ್ಟುವುದು ಸುಲಭ.
ಆದರೆ ನಿಜದ ಬದುಕಲ್ಲಿ ನಾವೇ ನಾಯಕತ್ವದ ಹೊಣೆಯನ್ನು ಹೊರುವುದು ಚಪ್ಪಾಳೆ ತಟ್ಟಿದಷ್ಟು ಸುಲಭವಲ್ಲ. ನಾನು ಭ್ರಷ್ಟ ರಾಜಕಾರಣಿಗಳನ್ನು ಬೈಯ್ಯುವಾಗ ಎಲ್ಲರೂ ಚಪ್ಪಾಳೆ ತಟ್ಟುತ್ತಾ ಏನ್ ಚೆನ್ನಾಗ್ ಬಯ್ತಾನೆ ಗುರೂ? ಎನ್ನುತ್ತ ಖುಷಿ ಪಡುವ ಜನ ತಾವು ಯಾವತ್ತೂ ಆ ಕೆಲಸ ಮಾಡುವುದಿಲ್ಲ. ಅವರಿಗೆ ಬಯ್ಯುವುದಕ್ಕೆ ನನ್ನಂಥಾ ಒಬ್ಬ ನಾಯಕ ಬೇಕು ಅಷ್ಟೆ! ಎಂದು ಹೇಳು ತ್ತಿದ್ದ ಮಾಸ್ಟರ್ ಹಿರಣ್ಣಯ್ಯನವರ ಮಾತು ಬಹಳ ಸಲ ನೆನಪಾಗುತ್ತದೆ.
ಇಷ್ಟೆಲ್ಲ ಗೊತ್ತಿದ್ರೂ ನಮಗೊಬ್ಬ ಹೀರೋ ಬೇಕು. ನಮ್ಮ ಭಯಗಳನ್ನು ಮೀರಲು. ದುಃಖ-ನೋವುಗಳನ್ನು ಮರೆಯಲು, ಬೇಸರಗಳನ್ನು ಕಳೆಯಲು, ಚಿಂತೆಗಳನ್ನು ಸರಿಸಲು, ಮುನಿಸುಗಳನ್ನು ರಮಿಸಲು, ಮಾತಿಗೆ ಆಸರೆ ಯಾಗಲು ನಮಗೆಲ್ಲ ಒಬ್ಬ ಹೀರೋ ಬೇಕೇ ಬೇಕು. ನಮ್ಮ ಕನಸುಗಳಿಗೆ ರೆಕ್ಕೆ ಮೂಡಿಸುವಂಥ, ನೈಜತೆಗೆ ಹತ್ತಿರವಿರುವಂಥ, ರಾಜಕಾರಣಿಯೋ, ಹೋರಾಟ ಗಾರರೋ, ಸಾಹಿತಿಯೋ, ಸಂಗೀತಗಾರರೋ, ಕಲಾವಿದರೋ, ಹಾಸ್ಯಗಾರರೋ, ಆಟಗಾರರೋ, ಯಾರಾದರೂ ಸರಿ. ಕ್ಯಾಬ್ ಚಲಾಯಿಸುವ ಮಹಿಳೆಯರು, ಆಟೋರಿಕ್ಷಾ, ಬಸ್ಸು ಚಲಾಯಿಸುವ ಮಹಿಳೆಯರು, ಮೆಟ್ರೋ ಟ್ರೇನ್ ಚಲಾಯಿಸುವ ಮಹಿಳೆ ಯರನ್ನು ನೋಡಿದಾಗಲೆಲ್ಲ ಒಂದೇ ಒಂದು ಸಲ ನಾನೂ ಒಮ್ಮೆ ಆ ಸೀಟಿನಲ್ಲಿ ಕುಳಿತು ಚಾಲಕಿಯಾಗಬೇಕು ಅನ್ನುವ ಆಸೆ ತುಂಬ ಸಲ ಕಾಡುತ್ತದೆ.
ಆದರೆ ಪ್ರತಿನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರ ಜೀವದ ನೆನಪಾಗಿ ಆ ಸಾಹಸ ಬೇಡವೆಂದು ದೂರದಿಂದಲೇ ನೋಡಿ ಖುಷಿ ಪಡುತ್ತೇನೆ. ಆದರೆ ನನ್ನಂತೆ ಹೆದರಿ ದೂರ ನಿಲ್ಲದೆ ಆ ಸಾಹಸಕ್ಕೆ ಇಳಿದವರಿಗೆ ಒಂದು ದೊಡ್ಡ ಸಲಾಮ! ಅವರೇ ನಿಜವಾದ ಹೀರೋಗಳು! ಹೀಗೆ ನಮ್ಮ ನಡುವೆ ಕಾಣುವ ಅನೇಕ ಹೀರೋಗಳನ್ನು ಮೆಚ್ಚಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳೋಣ.
ಸಮಯಕ್ಕೆ ಸರಿಯಾಗಿ ನಮ್ಮ ಗಮ್ಯ ತಲುಪಿಸುವ ಆಟೋ ಡ್ರೈವರ್ ಗಳು, ನೋವಾಗದಂತೆ ನಗುನಗುತ್ತಾ ಮಾತಾಡಿಸುತ್ತ
ಇಂಜೆಕ್ಷನ್ ಕೊಡುವ ನರ್ಸ್ಗಳು, ಮನೆಗುಡಿಸಿ, ಒರೆಸಿ ಸ್ವಚ್ಛವಾಗಿಡುವ ಮನೆಗೆಲಸದ ಹೆಣ್ಣುಮಕ್ಕಳು, ಪ್ರತಿದಿನ ಮನೆಮನೆಯ ಕಸ ಶೇಖರಿಸುವ ಪೌರ ಕಾರ್ಮಿಕರು, ಕೆಲಸ-ಕಾರ್ಯಗಳಲ್ಲಿ ಜೊತೆನಿಂತ ಗೆಳೆಯರು, ಹಣಕಾಸಿನ ವಿಷಮ ಪರಿಸ್ಥಿತಿಯಲ್ಲಿದ್ದಾಗ ನಮ್ಮನ್ನು ನಂಬಿ ಹಣ ನೀಡಿದ ಗೆಳತಿಯರು, ಬೆಳ್ಬೆಳಗ್ಗೆ ಎದ್ದು ತಿಂಡಿ ಮಾಡಿಕೊಡುವ ಅಮ್ಮಂದಿರು, ಶಾಲೆಗೆ ಬಿಟ್ಟು ಬರುವ
ಅಪ್ಪಂದಿರು, ಕಡಿಮೆ ಅಂಕ ಗಳಿಸಿದಾಗ ಬೆಟರ್ ಲಕ್ ನೆಕ್ ಟೈಮ್ ಎನ್ನುತ್ತಾ ಬೆನ್ನುತಟ್ಟಿ ಧೈರ್ಯ ಹೇಳುವ ಅಕ್ಕಂದಿರು, ಅಮ್ಮನಂತೆ ಪ್ರೀತಿ ತೋರುವ ಪಕ್ಕದ ಮನೆಯ ಆಂಟಿಯರು, ನಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುವ ಡ್ರೈವರುಗಳು, ಮನೆಕಾಯುವ ವಾಚ್ಮನ್ ಗಳೇ ನಮ್ಮ ನಿಜಬದುಕಿನ ಹೀರೋಗಳು.
ಅವರಿಲ್ಲದೇ ನಾವೆಲ್ಲ ಅದೆಷ್ಟು ಅಧೂರಾ ಅಧೂರಾ! ಅದೆಲ್ಲ ಅವರ ನಿತ್ಯದ ಕಾಯಕವೇ ಆದರೂ ನಮ್ಮ ಸಮಯಕ್ಕೆ ಒದಗಿ, ನಮ್ಮ ಸುರಕ್ಷತೆಗಾಗಿ ದುಡಿಯುವ ಜನರಿಗೆ ಪ್ರೀತಿಯಿಂದ ಮೆಚ್ಚುಗೆ ವ್ಯಕ್ತಪಡಿಸಿದಾಗ ಅವರ ಕಣ್ಣಲ್ಲಿ ಹೊಳೆಯುವ ಬೆಳಕನ್ನು ನೋಡಿ ಆನಂದಿಸೋಣ.
Read E-Paper click here