Wednesday, 14th May 2025

Janamejaya Umarji Column: ‘ಡೀಪ್‌ ಸ್ಟೇಟ್ʼ ಆಟ ಬಲ್ಲವರಾರು, ಎದುರು ನಿಲ್ಲವರಾರು ?

ಅಭಿಮತ

ಜನಮೇಜಯ ಉಮರ್ಜಿ

ಅದಾನಿ ಸಮೂಹ ಸಂಸ್ಥೆಗಳ ಮೇಲೆ ಎರಗಿರುವ ಲಂಚದ ಆರೋಪವನ್ನು ಮುಂದಿಟ್ಟುಕೊಂಡು ಆತುರಕ್ಕೆ ಬಿದ್ದವರ ರೀತಿಯಲ್ಲಿ ಕೆಲವರು ಸುದ್ದಿಗೋಷ್ಠಿಗಳನ್ನು ನಡೆಸಿದರು. ಆದರೆ, ಭಾರತೀಯ ನ್ಯಾಯಾಲಯದಲ್ಲಿ ಇಲ್ಲದ ಕೇಸು ಅಮೆರಿಕದಲ್ಲಿ ಹೇಗೆ ಮುನ್ನೆಲೆಗೆ ಬಂತು ಎಂದು ನೋಡಿದರೆ, ‘ಅದಲು ಬದಲು ಕಂಚಿ ಕದಲು, ಡೀಪ್ ಸ್ಟೇಟ್ ಬಿಟ್ಟು ಇನ್ಯಾರು’ ಎಂಬಲ್ಲಿಗೇ ಅದು ಬಂದು ನಿಲ್ಲುತ್ತದೆ.

ಕೆಲ ಆಟಗಳೇ ಹಾಗೆ, ಕೃಷ್ಣ-ಶಕುನಿಯರ ತಂತ್ರಗಳಿಗೂ ಮೀರಿದ್ದು. ಇಲ್ಲಿ ಎರಡೂ ಕಡೆ ದಾಳ ಉರುಳಿಸುವ, ಕಾಯಿ ನಡೆಸುವ ಮೂರನೆಯ
ಆಟಗಾರನೊಬ್ಬನಿರುತ್ತಾನೆ. ಅವನೊಬ್ಬ ಶುದ್ಧ ವ್ಯಾಪಾರಿ, ಜಗತ್ತೇ ಅವನ ಅಂಗಡಿ. ಅವನ ಹೆಸರೇ ‘ಡೀಪ್ ಸ್ಟೇಟ್’. ಇದೊಂದು ವ್ಯವಸ್ಥೆಯೂ ಹೌದು, ವ್ಯವಸ್ಥಿತ ಮಾಯಾಜಾಲವೂ ಹೌದು. ಯಾವುದೇ ದೇಶದ ಮೈದಾನವಿರಲಿ, ಆಟ ಇವರದೇ. ಅಂತಾರಾಷ್ಟ್ರೀಯ ಮಟ್ಟದ ಈ ನಿಗೂಢ ಜಾಲದಲ್ಲಿ ಉದ್ಯಮಿಗಳು, ರಾಜಕಾರಣಿಗಳು, ಅಽಕಾರಿಗಳೂ ಇದ್ದಾರೆ.

ಜಗತ್ತಿನ ಸಂಪತ್ತೆಲ್ಲವೂ ಕೆಲವೇ ಕುಟುಂಬಗಳ ಹತ್ತಿರ ಇರಬೇಕು ಎನ್ನುವ ರಣಹಸಿವು ಈ ಜಾಲದ್ದು. ಇದನ್ನು ತಣಿಸಿಕೊಳ್ಳಲು ರಾಜಕೀಯ, ಸಾಮಾಜಿಕ, ಆರ್ಥಿಕ, ವೈಚಾರಿಕ, ಸಾಂಸ್ಕೃತಿಕ ಹೀಗೆ ಯಾವ ಮಾಧ್ಯಮವನ್ನೂ ಇದು ಬಳಸಿಕೊಳ್ಳದೆ ಬಿಡುವುದಿಲ್ಲ. ಗಾಂಧಾರದ ಶಕುನಿ ಇಂದ್ರಪ್ರಸ್ಥದಲ್ಲಿದ್ದಂತೆ, ಇದರ ದೊಡ್ಡ ತಂಡ ಭಾರತದಲ್ಲಿದೆ. ಇದು ಇಲ್ಲಿನ ಹಣಕಾಸು ಮಾರುಕಟ್ಟೆಯಲ್ಲಿ ಪಗಡೆಯಾಟ ಆಡಿಸುತ್ತದೆ ಎಂಬೆಲ್ಲ ಮಾತುಗಳು ‘ದಲಾಲ್ ಸ್ಟ್ರೀಟ್’ನಲ್ಲಿ ಕೇಳಿಬರುತ್ತವೆ. ಕಳೆದ ದಶಕದಲ್ಲಿ ಭಾರತ ಇಂಥ ಹಲವು ದ್ಯೂತಕ್ಕೆ ಇಳಿಸಲ್ಪಟ್ಟಿದೆ ಮತ್ತು ಅದರಲ್ಲಿ ಗೆದ್ದಿದೆ.

ಈ ಪಗಡೆಯಾಟವು ಭಾರತದ ಮಾರುಕಟ್ಟೆಯ ಹಠಾತ್ ಚಂಚಲತೆ, ವ್ಯವಸ್ಥಿತ ಹಗರಣಗಳು/ನೀತಿ ಬದಲಾವಣೆ ಗಳೊಂದಿಗೆ ಸಂಬಂಧ ಹೊಂದಿದೆ. ಈ ಆಟಗಳು ಸಂಸತ್ತಿನ ಅಧಿವೇಶನದ ಹಿಂದೆ-ಮುಂದೆ ನಡೆಯುತ್ತಿರುವುದು, ರಾಜಕೀಯಕ್ಕೆ ಅನುಕೂಲಕರವಾಗಿ ಬಳಕೆಯಾಗು ತ್ತಿರುವುದು ಕಾಕತಾಳೀಯವಲ್ಲ ಎಂಬ ಗುಮಾನಿಯಿದೆ.

ಹಣಕಾಸು ಮಾರುಕಟ್ಟೆಯಲ್ಲಿ ವದಂತಿಗಳು ಕಾಳ್ಗಿಚ್ಚಿನಂತೆ ಹರಡುತ್ತವೆ. ಇದಕ್ಕೆ ಯಾವುದೋ ಅಪೂರ್ಣ ಮಾಹಿತಿ, ಉಹಾಪೋಹ, ಉದ್ದೇಶ ಪೂರ್ವಕ ತಪ್ಪುಮಾಹಿತಿ, ಯಾವುದೋ ವರದಿ ಇಂಥ ಒಂದು ಸಣ್ಣ ಕಿಡಿ ಸಾಕು. ಗುರಿಯಾಗಿಸಿದ ಷೇರುಗಳು ನೆಲ ಕಚ್ಚುತ್ತವೆ, ಮಾರುಕಟ್ಟೆಯೇ ಅಲ್ಲಾಡುತ್ತದೆ ಈ ‘ಕರಡಿ ಕುಣಿತ’ಕ್ಕೆ. ‘ಹೂಡಿಕೆದಾರರ ಸ್ಥಿತಿ ಅಯೋಮಯ’ ಎಂಬಂಥ ಹಲವು ವದಂತಿಗಳನ್ನು ಸೃಷ್ಟಿಸುವುದರ ಹಿಂದೆ ಮೂರನೇ ಆಟಗಾರರ ಕೈವಾಡವಿರುತ್ತದೆ ಎಂದರೆ ನಂಬಲೇಬೇಕು.

ಅದಾನಿ ಸಮೂಹದ ಮುಖ್ಯಸ್ಥರ ಮೇಲೆ ಅಮೆರಿಕದ ನ್ಯಾಯಾಲಯದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೇಸೊಂದು ನಡೆಯಲಿದೆ ಎಂಬ ಸುದ್ದಿ ಬಂದಿರುವುದು ಬಹುತೇಕರಿಗೆ ಗೊತ್ತಿರುವಂಥದ್ದೇ. ಛತ್ತೀಸ್‌ಗಢ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳಲ್ಲಿ ಯೋಜನೆ ಪಡೆಯಲು ಮತ್ತು ಮುಂದುವರಿಯಲು ಅದಾನಿ ಸಂಸ್ಥೆಯು ಭಾರತದ ಅಧಿಕಾರಿಗಳಿಗೆ ಲಂಚ ನೀಡಿದೆ, ಅದನ್ನು ಅಮೆರಿಕದ ಬ್ಯಾಂಕಿ
ನಿಂದ ಸಾಲ ಪಡೆದು ನೀಡಲಾಗಿದೆ ಎಂಬುದು ಆರೋಪ. ಇದಕ್ಕೆ ಅದಾನಿ ಸಮೂಹದಿಂದ ಸ್ಪಷ್ಟೀಕರಣವೂ ಬಂತು. ಇಲ್ಲಿ ಅದನ್ನೇ ಮುಂದಿಟ್ಟು ಕೊಂಡು ಆತುರಕ್ಕೆ ಬಿದ್ದವರಂತೆ ಸುದ್ದಿಗೋಷ್ಠಿಗಳು ನಡೆದವು.

ಭಾರತೀಯ ನ್ಯಾಯಾಲಯದಲ್ಲಿ ಇಲ್ಲದ ಕೇಸು ಅಮೆರಿಕದಲ್ಲಿ ಹೇಗೆ ಮುನ್ನೆಲೆಗೆ ಬಂತು ಎಂದು ವಿಚಾರಿಸಿ ನೋಡಿದರೆ, ಅದು ‘ಅದಲು ಬದಲು ಕಂಚಿ ಕದಲು, ಡೀಪ್ ಸ್ಟೇಟ್ ಬಿಟ್ಟು ಇನ್ಯಾರು’ ಎಂಬಲ್ಲಿಗೇ ಬಂದು ನಿಲ್ಲುತ್ತದೆ. ಭಾರತದಲ್ಲಿ ಈ ಲಂಚಪ್ರಸಂಗ ನಡೆದಿದೆ ಎನ್ನುವುದಾದರೆ, ಸತ್ಯಾಸತ್ಯತೆಯ ಬಗ್ಗೆ ಇಲ್ಲಿಯೇ ತನಿಖೆಯಾಗಲಿ. ದಾಖಲೆ ಇದ್ದವರಿಗೆ ನ್ಯಾಯಾಲಯದ ದಾರಿ ತೆರೆದೇ ಇದೆ. ಈ ಲೇಖನದ ವಿಷಯ ಅದಲ್ಲ- ಆದರೆ ಇಂಥದೇ ಪಗಡೆಯಾಟಗಳು ಹಿಂದೆಲ್ಲಾ ಹೇಗೆ ನಡೆದಿವೆ, ಅವು ಮಾರುಕಟ್ಟೆಯ ಮೇಲೆ ಬೀರಿದ ಪರಿಣಾಮಗಳೇನು ಎಂಬುದನ್ನು ನೋಡುವುದಷ್ಟೇ ಇಲ್ಲಿನ ಉದ್ದೇಶ!

ಅದಾನಿ ಸಮೂಹ ಸಂಸ್ಥೆಯನ್ನು ಗುರಿಯಾಗಿಸಿ 2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್ ವತಿಯಿಂದ ಕಟುವರದಿಯೊಂದು ಬಂತು. ದೊಡ್ಡ ದೊಡ್ಡ ಸ್ಟಾಕುಗಳು ಬಿದ್ದುಹೋದವು, ಅದಾನಿ ಷೇರುಗಳು ಕುಸಿದವು. ಮಾರುಕಟ್ಟೆಯಲ್ಲಿ 7 ಲಕ್ಷ ಕೋಟಿ ಕೊಚ್ಚಿಕೊಂಡು ಹೋಯಿತು. ಇನ್ನೇನು ಬಜೆಟ್ ಅಧಿವೇಶನ ಶುರುವಾಗುವ ಸಮಯಕ್ಕೆ ಸರಿಯಾಗಿ ಈ ವರದಿ ಬಂದಿತ್ತು. 2020ರಲ್ಲಿ ‘ಯೆಸ್ ಬ್ಯಾಂಕ್’ನ ಕುಸಿತವು ಮಾರುಕಟ್ಟೆಗೆ ಬಿಕ್ಕಟ್ಟು ತಂದಿತು.

ಅಸಮರ್ಪಕ ನಿರ್ವಹಣೆ ಮತ್ತು ಸಮಯೋಚಿತ ಹಸ್ತಕ್ಷೇಪದ ಕೊರತೆಯು ಈ ಚಂಡಮಾರುತಕ್ಕೆ ಕಾರಣ ಎಂದು ವಿಮರ್ಶಕರು ವಾದಿಸಿದರು. ಈ ಸಂದರ್ಭದಲ್ಲಿ ನಿಫ್ಟಿ ಸೂಚ್ಯಂಕವು ಬರೋಬ್ಬರಿ ಶೇ.15ರಷ್ಟು ಕುಸಿದಿತ್ತು. ಸಂಸತ್ತಿನಲ್ಲಿ ಪ್ರಮುಖ ಬ್ಯಾಂಕಿಂಗ್ ಸುಧಾರಣೆಗಳ ಕುರಿತ ಚರ್ಚೆಯ ಸಮಯದಲ್ಲಿ ಈ ಬಿಕ್ಕಟ್ಟು ಭುಗಿಲೆದ್ದಿತು. 2018ರಲ್ಲಿ ರಫೆಲ್ ಫೈಟರ್ ಜೆಟ್ ಒಪ್ಪಂದದಲ್ಲಿನ ಅಕ್ರಮಗಳ ಆರೋಪದ ಹುಯಿಲೆದ್ದಿತು. ಇದರ ಸಮಯ ಕೂಡ ಅಧಿವೇಶನದ ಹಿಂದೆ-ಮುಂದೆ ಹೊಂದಾಣಿಕೆಯಾಯಿತು, ಅದು ರಕ್ಷಣಾ ಷೇರುಗಳ ಮೇಲೆ ಪರಿಣಾಮ ಬೀರಿತು. ಈ ಕುರಿತು ನ್ಯಾಯಾಲಯಕ್ಕೆ ಮೊರೆಹೋಗಲಾಯಿತು, ಅದು ತನ್ನ ಅಭಿಪ್ರಾಯ ಹೇಳಿತು.

2018ರ ಸೆಪ್ಟೆಂಬರ್-ಅಲ್ಟೋಬರ್‌ನಲ್ಲಿ, ಇನ್-ಸ್ಟ್ರಕ್ಚರ್ ಲೀಸಿಂಗ್ ಫೈನಾನ್ಷಿಯಲ್ ಸರ್ವೀಸಸ್ (ಐಎಲ್‌ಎಫ್ಎಸ್) ಇಟ್ಟುಕೊಂಡಿದ್ದ ಬಾಕಿಯು ಹಣಕಾಸು ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿತು. ಈ ಘಟ್ಟದಲ್ಲಿ ನಿಫ್ಟಿ ಶೇ.8ರಷ್ಟು ಕುಸಿಯಿತು. ನಿಯತ ವರದಿಗಳು ಈ ಬಿಕ್ಕಟ್ಟನ್ನು ಮುನ್ಸೂಚಿಸ ಬಹುದಿತ್ತು, ಅಧಿಕಾರಿಶಾಹಿಯ ಉದ್ಧೇಶಪೂರ್ವಕ ನಿಷ್ಕ್ರಿಯತೆ ಇದರ‌ ಹಿಂದಿದೆ ಎಂಬ ಆರೋಪವಿದೆ. ಇದು ಘಟಿಸಿದ ಸಮಯ-2019ರ ಸಾರ್ವತ್ರಿಕ ಚುನಾವಣೆಗೆ ಕೆಲ ತಿಂಗಳು ಹಿಂದೆ- ಮುಂದೆ. 2019ರಲ್ಲಿ, ಟೆಲಿಕಾಂ ನಿಯಂತ್ರಣ ಸಂಸ್ಥೆಗಳು ಜಿಯೋಗೆ ಲಾಭಮಾಡಿಕೊಟ್ಟಿವೆ ಎಂದು ಹುಯಿಲೆದ್ದಿತು.

ಆಗ ಇದು ಸಾಕಷ್ಟು ರಿಲಯನ್ಸ್ ಷೇರುಗಳ ಮಾರಾಟಕ್ಕೆ ಕಾರಣವಾಯಿತು. ಹೊಂದಿಸಿದ ಒಟ್ಟು ಆದಾಯ ಬಾಕಿಗಳ (ಎಜಿಆರ್) ತೀವ್ರ ಪರಿಶೀಲನೆಯು, ಅದರ ಬೆಳವಣಿಗೆ ಯನ್ನು ನಿಗ್ರಹಿಸುವ ಮತ್ತು ಇತರ ದುರ್ಬಲ ಸ್ಪ್ರರ್ಧಿಗಳಿಗೆ ಅವಕಾಶವನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಎಂಬ ಪ್ರತ್ಯಾರೋಪವೂ ಬಂತು. ಎರಡಕ್ಕೂ ತಾತ್ವಿಕ ಅಂತ್ಯ ಸಿಕ್ಕಿಲ್ಲ. ಈ ಎಲ್ಲ ಮಾದರಿಗಳನ್ನು ನೋಡಿದಾಗ, ಬಾಹ್ಯಶಕ್ತಿಗಳ ಕೈವಾಡ ಮತ್ತು ಹಿತಾಸಕ್ತಿ ಇದರಲ್ಲಿದೆ ಎನಿಸದೇ ಇರದು. ಈ ವರದಿಗಳು, ವಿವಾದಗಳ ಮೂಲವನ್ನು ಕೆದಕುತ್ತಾ ಹೋದರೆ, ಮತ್ತದೇ ಅಮೆರಿಕ, ಅದೇ ‘ಡೀಪ್ ಸ್ಟೇಟ್’ ಮನೆಮುಂದೆ ಬಂದು ನಿಲ್ಲುತ್ತದೆ. ಇಲ್ಲಿನ ರಾಜಕೀಯ ಲಾಭಾಲಾಭಕ್ಕೆ ಅವು ಬಳಕೆಯಾದರೂ, ಉದ್ದೇಶ ಬೇರೆಯೇ ಇದೆ. ಅದು ಇಲ್ಲಿನ ಆರ್ಥಿಕ ಪರಿಸ್ಥಿತಿ, ಬ್ಯಾಂಕಿಂಗ್ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ಉದ್ಯಮಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವುದಂತೂ ಸುಳ್ಳಲ್ಲ. ಅದರ ಟೈಮಿಂಗ್ ಮಾತ್ರ, ‘ರಾಜಕೀಯ ವ್ಯವಸ್ಥೆಯು ಇದರ ಟೂಲ್‌ಕಿಟ್‌ನ ಭಾಗವೇ?’ ಎಂಬ ಸಂಶಯವನ್ನು ಹುಟ್ಟಿಸುತ್ತದೆ.

ಡೀಪ್ ಸ್ಟೇಟ್ ಥಿಯರಿ ಪ್ರಕಾರ, ಆಯ್ದ ಕೆಲವರಿಗೆ ಇದು ಪ್ರಯೋಜಕ. ಒಳಸುಳಿ ಮಾಹಿತಿ ಅಥವಾ ಕಾರ್ಯತಂತ್ರದ ಸ್ಥಾನದ ಮೂಲಕ, ಇದು ಕೆಲವು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ತರಬಹುದು. ಇದರ ಪೂರ್ಣಮಾಹಿತಿ ಮೊದಲೇ ದೊರಕಿರುವುದರಿಂದ, ಇದು ಕೆಲ ರಾಜಕೀಯ ಹಿತಾಸಕ್ತಿಗಳಿಗೆ ಲಾಭಕರ. ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸಲು, ಅಧಿಕಾರವನ್ನು ಕ್ರೋಢೀಕರಿಸಲು ಇದು ಅನುಕೂಲಕರವಾಗಬಹುದು.
‘ಹೆಡ್ಜ್ -ಂಡ್’ಗಳು ಮತ್ತು ಜಾಗತಿಕ ಆಟಗಾರರು ಅನಿಶ್ಚಿತತೆಯ ಅವಧಿಯಲ್ಲಿ ಷಾರ್ಟ್ ಸೆಲ್ಲಿಂಗ್‌ನಿಂದ ಲಾಭ ಪಡೆಯಬಹುದು.

ಭಾರತದ ಆರ್ಥಿಕ ಬೆಳವಣಿಗೆಯ ವೇಗ ಮತ್ತು ಹೆಚ್ಚುತ್ತಿರುವ ಜಾಗತಿಕ ಪ್ರಭಾವವು ಹೊಸ ಶಕ್ತಿಯನ್ನು ರೂಪಿಸುತ್ತಿದೆ. ಮೂಲಸೌಕರ್ಯ, ತಂತ್ರಜ್ಞಾನ, ವ್ಯಾಪಾರ ಮತ್ತು ರಕ್ಷಣೆಯಲ್ಲಿ ತ್ವರಿತ ಪ್ರಗತಿಯೊಂದಿಗೆ, ದೇಶವು ತನ್ನನ್ನು ತಾನು ಪ್ರಮುಖ ಭೂರಾಜಕೀಯ ಮತ್ತು ಆರ್ಥಿಕ
ಆಟಗಾರನ ಸ್ಥಾನದಲ್ಲಿರಿಸಿಕೊಂಡಿದೆ. ದೊಡ್ಡಣ್ಣನ ಅಣ್ಣ ‘ಡೀಪ್ ಸ್ಟೇಟ್’ನ ಲಾಭಕ್ಕೆ ಇದು ಪೆಟ್ಟುಕೊಡಲಿದೆ ಎಂದು ಅದಕ್ಕೆ ಅನಿಸಿದೆ. ನಮ್ಮ ಡಿಜಿಟಲ್ ಪಾವತಿ ವ್ಯವಸ್ಥೆ, ನವೀಕರಿಸಬಹುದಾದ ಇಂಧನ ಸ್ವಾವಲಂಬನೆ, ತೆರಿಗೆ ಸುಧಾರಣೆ ಇವೆಲ್ಲವೂ ಕಸಿವಿಸಿ ತಂದಿವೆ. ವಿದೇಶಿ ನೆಲದಲ್ಲಿ ಭಾರತೀಯ ಉದ್ಯಮಿಗಳಿಂದಾಗುತ್ತಿರುವ ಹೂಡಿಕೆಯು ಇದಕ್ಕೆ ಪಥ್ಯವಾಗುತ್ತಿಲ್ಲ.

ಎಲ್ಲದಕ್ಕೂ ‘ಡೀಪ್ ಸ್ಟೇಟ್’ ಕಾರಣ. ಅದು ಪಿತೂರಿಗಳ ಪಿತಾಮಹ ಎಂಬುದಕ್ಕೆ ಖಚಿತ ಪುರಾವೆಗಳು ಸಿಗದಿದ್ದರೂ, ಈ ಮಾದರಿಗಳನ್ನು ನಿರ್ಲಕ್ಷಿಸುವುದು ಕಷ್ಟ. ಹೀಗಾಗಿ ಚಿಂತನೆಗೆ ಒಂದಿಷ್ಟು ಮೇವಂತೂ ಇದೆ. ಸುದ್ದಿ ಏಳುವ ಸಮಯ ಮತ್ತು ಅಧಿವೇಶನಗಳ ಸಮಯದ ಸಂಯೋಗ
ಏನೋ ವಿಚಾರಕ್ಕಂತೂ ಹಚ್ಚುತ್ತದೆ. ನಿರ್ಣಯಕ್ಕೆ ಬರುವ ಮೊದಲು ‘ಡೀಪ್ ಸ್ಟೇಟ್’ ಅನ್ನು ಎಚ್ಚರಿಕೆಯಿಂದ ಪರಿಗಣಿಸುವ ಅಗತ್ಯವಂತೂ ಇದೆ. ಅದರ ‘ಜಗತ್‌ರಾಜಕೀಯ’, ಆರ್ಥಿಕ ಕಾರ್ಯಾಚರಣೆಗಳು ನಿಗೂಢ. ಆತ್ಮಸಾಕ್ಷಿ ಮತ್ತು ಆತ್ಮನಿರ್ಭರತೆಯೇ ಇದರ ಪರಿಣಾಮಗಳನ್ನು ಎದುರಿಸುವ ಮದ್ದು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Kannadacolumn