Sunday, 11th May 2025

Janamejaya Column: ಆಡದ ಮಾತಿಗೆ ಪೇಜಾವರರು ಹೊಣೆಗಾರರೇ ?

ಯಕ್ಷ ಪ್ರಶ್ನೆ

ಜನಮೇಜಯ ಉಮರ್ಜಿ

ಸುಳ್ಳು ಕಥಾನಕಗಳನ್ನು ಸೃಷ್ಟಿಸುವ ವ್ಯವಸ್ಥೆಯನ್ನು ಬ್ರಿಟಿಷರು ಜಾರಿಗೆ ತಂದರೂ, ಅದನ್ನು ಸಂಪ್ರದಾಯವಾಗಿ ಪಾಲಿಸುವ ‘ಎಡ ವ್ಯವಸ್ಥೆ’ ಇನ್ನೂ ಬಲವಾಗಿಯೇ ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಗೂ ಹೋಗುವ, ಜಾತಿ-ಮತ-ಪಂಥಗಳ ಹಂಗಿಲ್ಲದೇ ಮನೆ ಕಟ್ಟಿಕೊಟ್ಟ ಪೇಜಾವರರಿಗೆ ಈ ಹಣೆಪಟ್ಟಿ ಕಟ್ಟುವುದು, ವ್ಯವಸ್ಥಿಕ ಕಥಾನಕವನ್ನು ಹೆಣೆಯುವುದು ಈ‘ಲಘು’ ಉದ್ಯಮದ ಭಾಗ.

ವಕ್ಫ್ ಕಾಯ್ದೆಯ ಅಧ್ವಾನಗಳನ್ನು ವಿರೋಧಿಸಿ ಇತ್ತೀಚೆಗೆ ಕಾವಿಧಾರಿಗಳೆಲ್ಲಾ ಒಂದಾಗಿ ಪ್ರತಿಭಟನೆಗೆ ಇಳಿದಿದ್ದರು. ಪ್ರತಿಭಟನೆಯ ಕಾವು ಎಷ್ಟಿತ್ತು ಎಂದರೆ, ಹಲವು ಸಾಂಸ್ಕೃತಿಕ ಮುಖದ, ಹಿಂದುತ್ವ-ವಿರೋಧಿ ಪಾಳಯದ ಪಿಆರ್‌ಒಗಳು, “ಈ ಎಲ್ಲ ಸ್ವಾಮಿಗಳು ಆ ಪ್ರತಿಭಟನೆಗೆ ಬಂದಿದ್ದಾರಾ? ಈ ಪ್ರತಿಭಟನೆಗೆ ಬಂದಿದ್ದಾರಾ? ಇಲ್ಲಿ ಹೇಗೆ ಬಂದಿದ್ದಾರೆ ನೋಡಿ..!” ಎಂದು ಒರಲಹತ್ತಿದ್ದರು.

ವಿಜಯಪುರದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕನ್ಹೇರಿ ಮಠದ ಪೂಜ್ಯ ಸ್ವಾಮಿಗಳ ಸಿದ್ಧಾಂತ ಬದ್ಧತೆಯನ್ನು ಪ್ರಶ್ನೆ ಮಾಡಿದ್ದರು. ಗಾಳಿಸುದ್ದಿ ಹರಡಲು ಯಾವುದೂ ಗಟ್ಟಿ ಅಂಶ ಸಿಕ್ಕಿರಲಿಲ್ಲ. ಅದೇ ಕಾಲಕ್ಕೆ ಇದೇ ವಿಷಯಕ್ಕೆ ಬೆಂಗಳೂರಿನಲ್ಲಿ ಒಂದಿಷ್ಟು ಸಂತರು ಸೇರಿ ಚರ್ಚಿಸಿ, ರಾಜ್ಯಪಾಲರಿಗೆ ಮನವಿಯೊಂದನ್ನು ಕೊಟ್ಟರು. ಆ ಮನವಿ ಯಲ್ಲಿ ಏನಿತ್ತು? ತದನಂತರ ಸಂತರು ನಿಜವಾಗಿ ಮಾತನಾಡಿದ್ದು ಏನು? ಎಂಬುದರ ಗೋಜಿಗೆ ಹೋಗದ ಕರ್ನಾಟಕ ದಲ್ಲಿಯ ‘ಕಥಾನಕ ತಂಡ’ವು ಪೇಜಾವರ ಸ್ವಾಮಿಗಳು ಸಂವಿಧಾನದ ವಿಷಯವಾಗಿ ಮಾತನಾಡಿದ್ದಾರೆ ಎಂದು ಗುಲ್ಲೆಬ್ಬಿಸಿತು. ಈ ಜಾಲ ಅದೆಷ್ಟು ವ್ಯವಸ್ಥಿತವಾಗಿತ್ತು ಎಂದರೆ, ಎಲ್ಲ ದಿಕ್ಕುಗಳಿಂದಲೂ ಒಂದಿಷ್ಟು ‘ಆಯ’ಕಟ್ಟಿನ ಜನರು ಏಕಕಂಠದಲ್ಲಿ ಇದನ್ನೇ ಪುನರುಚ್ಚರಿಸಿದರು.

ಕೊಟ್ಟ ಮನವಿಯ ಪ್ರತಿ ಸಿಗಬಹುದೇನೋ? ಮಾತಾಡಿದ ವಿಡಿಯೋ ಕೂಡ ಮುಂದೆ ಸಿಗಬಹುದು. ಅದನ್ನು ಮುಂದಿಟ್ಟು ಮಾತನಾಡಿದ್ದರೆ ಶೋಭೆ ಇರುತ್ತಿತ್ತು. ಆದರೆ ಹಾಗಾಗಲಿಲ್ಲ. ಸ್ವತಃ ಪೇಜಾವರರೇ, “ನಾನು ಸಂವಿಧಾನದ
ವಿಷಯ ಮತ್ತು ಅದರ ಬದಲಾವಣೆಯ ಕುರಿತು ಯಾವ ಮಾತನ್ನೂ ಆಡಿಲ್ಲ. ಇಲ್ಲದ, ಸಲ್ಲದ ಮಾತುಗಳನ್ನು ‘ನನ್ನವು’ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಸಂವಿಧಾನದೆಡೆಗಿನ ನನ್ನ ಬದ್ಧತೆ ಅಚಲ” ಎಂದು ಸ್ಪಷ್ಟೀಕರಣ ಕೊಟ್ಟರೂ, ಆ ದನಿಯು ಕೇಳದಷ್ಟು ಈ ಕಥಾನಕವು ದೊಡ್ಡದಾಗಿತ್ತು.

ಒಂದು ಹೇಳಿಕೆ ಬಂತು, ಅದಕ್ಕೆ ಸ್ಪಷ್ಟೀಕರಣ ಬಂತು, ಒಂದಷ್ಟು ದಿನ ಓಡಿ ಸುಮ್ಮನಾಯಿತು ಎಂದು ಕೂಡ್ರುವಂತೆ
ಇಲ್ಲ. ಸುಳ್ಳು ಕಥಾನಕವು ಇಂದು ಉದ್ಯಮದ ರೀತಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದೇ ಕಳವಳಕಾರಿ.
ಸ್ವಾತಂತ್ರ್ಯಾನಂತರದ ಭಾರತದ ಸಮಾಜೋ-ರಾಜಕೀಯ ವ್ಯವಸ್ಥೆಯಲ್ಲಿ ಯಾವಾಗಲೂ ಇಂಥ ಕಥಾನಕದ್ದೇ ಮೇಲುಗೈ. ಸುಳ್ಳು ಕಥೆಗಳನ್ನು ಕಟ್ಟಲು ಶುರುಮಾಡಿದ್ದು ಬ್ರಿಟಿಷರು. ಅದಕ್ಕೆ ಅವರು ಬಳಸಿಕೊಂಡಿದ್ದು ನವ-ವೈಚಾರಿಕ ವಲಯವನ್ನು. ಅವರು ಇಲ್ಲಿಂದ ಬಿಟ್ಟುಹೋದರೂ, ತಮ್ಮ ವೈಚಾರಿಕತೆಯನ್ನು ಹಲವರಲ್ಲಿ ಬಿತ್ತಿಹೋಗಿದ್ದಾರೆ. ಇಲ್ಲಿಯ ವ್ಯವಸ್ಥೆಯ ಪಾಲನೆ-ಪೋಷಣೆ ನಡೆದು, ಈ ‘ಲಘು’ ಉದ್ಯಮ ಜೋರಾಗಿ ಬೆಳೆದಿದೆ. ಆ ಕಾಲದ ಆಂಟಿಕ್ ಕಥಾನಕಗಳನ್ನು ಇಲ್ಲಿಯವರೆಗೂ ಕಾಪಿಟ್ಟುಕೊಂಡು ಬರಲಾಗಿದೆ, ಜತೆಗೆ ಕಾಲಕ್ಕೆ ತಕ್ಕಂಥ ಲೇಟೆಸ್ಟ್ ಮಾಡೆಲ್‌ಗಳೂ ಇವರಲ್ಲಿವೆ.

ನಿರ್ಯಾತ ಆಗಿದ್ದು ಇಲ್ಲವೆನ್ನಬಹುದೇನೋ, ಆದರೆ ‘ಆಮದು’ ಮತ್ತು ‘ಆಮದನಿ’ ಎರಡಕ್ಕೂ ಕೊರತೆಯಿಲ್ಲ!
ಯಾವುದೇ ವಿದ್ಯಮಾನವನ್ನು ಗ್ರಹಿಸುವ, ತಕ್ಕಂತೆ ಒಗ್ಗಿಕೊಳ್ಳುವ ಕೌಶಲ ಮತ್ತು ಸೌಕರ್ಯ ಎರಡೂ ಇವರಲ್ಲಿವೆ.
ಇತಿಹಾಸ, ಸಾಹಿತ್ಯ, ಮಾಧ್ಯಮ, ಮಾರುಕಟ್ಟೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳ ಆಟಗಾರರನ್ನು ಸೇರಿಸಿ ಕೊಂಡಿರುವ ‘ಕಥಾನಕ ವ್ಯವಸ್ಥೆ’ ಇದು!

ಇದಕ್ಕೊಂದು ‘ಪ್ಯಾಟರ್ನ್’ ಇದೆ. ಈ ಕಥಾನಕಗಳು ವಿಷಯ-ವಸ್ತು-ವ್ಯಕ್ತಿಯನ್ನು ಕೇಂದ್ರೀಕರಿಸಿ ಇರುತ್ತವೆ. ಟಾರ್ಗೆಟ್ ಮಾಡಬೇಕಾದ ವಿಚಾರ ಮತ್ತು ವ್ಯಕ್ತಿಗಳನ್ನು ಸದಾ ‘ರಾಡಾರ್’ನಲ್ಲಿ ಇಡಲಾಗಿರುತ್ತದೆ. ಒಂದು ಘಟನೆಯ
ಸುತ್ತಮುತ್ತ ಒಗ್ಗರಣೆ ಹಾಕಿ ಮೊದಲೊಂದು ಕಥೆಯೋ, ದೃಷ್ಟಿಕೋನವೋ ಅಥವಾ ವಿವರಣೆಯೋ ಹೊರಬರು ವಂತೆ ಮಾಡಲಾಗುತ್ತದೆ. ಅದನ್ನು ಮೊದಲೊಬ್ಬರು ಶುರು ಮಾಡಬೇಕು. ಅದು ಹಲವು ಕ್ಷೇತ್ರದ ಹಲವು ಜನರಿಂದ ಮತ್ತೆ ಮತ್ತೆ ಪುನರಾವರ್ತನೆ ಆಗಬೇಕು. ಎಲ್ಲಾ ಕಡೆ ಇದೇ ಆಗಿ ಮನೆಮಾತಾಗಬೇಕು. ಸತ್ಯವು ಹೊರಬರುವುದರ ಒಳಗಾಗಿ, ಆಗುವ ಕೆಲಸ ಮುಗಿದಿರುತ್ತದೆ. ಈ ಜಾಲವು ಸದಾ ಕ್ರಿಯಾಶೀಲವಾಗಿರುತ್ತದೆ. ಕಥೆಯ ಅಗತ್ಯಕ್ಕೆ ತಕ್ಕಂತೆ ತಂತ್ರ!

ಈ ಲೇಖನ ಓದಿದ ನಂತರ ಯಾವುದಾದರೂ ಕಥಾನಕವನ್ನು ಈ ‘ಪ್ಯಾಟರ್ನ್’ನೊಂದಿಗೆ ಹೋಲಿಸಿಕೊಂಡು ನೋಡಿದರೆ, ನಿಮಗೇ ಈ ತಂತ್ರ ಅರ್ಥವಾಗುತ್ತದೆ! ಖಳರ ಪಟ್ಟ ಕಟ್ಟಬೇಕಾದವರ ಪಟ್ಟಿ, ಕಲಾವಿದರ ಪಟ್ಟಿ, ಕಥೆಯ ಎಳೆಗಳು ಇವರಲ್ಲಿ ಸಿದ್ಧವಿರುತ್ತವೆ. ಯಾವ ವಿಷಯವನ್ನು ಅಥವಾ ವ್ಯಕ್ತಿಯನ್ನು ಹೀರೋ ಮಾಡಬೇಕೋ, ಅದಕ್ಕೆ
ತಕ್ಕಂತೆ ಪ್ರಹಸನಗಳ ಹೆಣಿಗೆಯಾಗುತ್ತದೆ. ಸತ್ಯ ಕಥಾನಕಗಳೂ ಇವೆ, ಆದರೆ ಅವಕ್ಕೆ ಮೈಲೇಜು ಕಡಿಮೆ. ಆರಂಭ-ಮಧ್ಯ- ಅಂತ್ಯ ಎಂಬ ತಾರ್ಕಿಕ ಹರಿವನ್ನು ಈ ಕಥಾನಕಗಳು ಹೊಂದಿರುತ್ತವೆ.

‘ಆರಂಭ’ವು ಸಂದರ್ಭವನ್ನು ಹೊಂದಿಸುತ್ತದೆ ಮತ್ತು ಪ್ರಮುಖ ಅಂಶಗಳನ್ನು ಪರಿಚಯಿಸುತ್ತದೆ. ‘ಮಧ್ಯ’ವು ಪ್ರತಿಕ್ರಿಯೆ, ಸಂಘರ್ಷಗಳು ಅಥವಾ ಪುರಾವೆಗಳೊಂದಿಗೆ ಕಥೆ ಅಥವಾ ವಾದವನ್ನು ಅಭಿವೃದ್ಧಿಪಡಿಸುತ್ತದೆ. ‘ಅಂತ್ಯ’ವು ನಿರ್ಣಯ, ತೀರ್ಮಾನ ಅಥವಾ ಕ್ರಮಕ್ಕೆ ಕರೆಯನ್ನು ಒದಗಿಸುತ್ತದೆ. ಪ್ರೇಕ್ಷಕರ ಮನವೊಲಿಸಲು ಅಥವಾ ಅವರನ್ನು ಆಕರ್ಷಿಸಲು, ಭಾವನೆಗಳೊಂದಿಗೆ ಕಥೆ, ದೃಶ್ಯ, ಉತ್ಪ್ರೇಕ್ಷೆಗಳನ್ನು ಬೆರೆಸಿ ಆಟ ಆಡುವುದು ಇದರ ಶೈಲಿ. ಕಥಾನಕದಲ್ಲಿ ‘ತರ್ಕ’ ಇರಲೆಂದು ಸಂಗತಿಗಳು, ದತ್ತಾಂಶ, ವಿಶ್ಲೇಷಣೆಗಳನ್ನು ಜೋಡಿಸಲಾಗುತ್ತದೆ. ಇಲ್ಲದ್ದನ್ನು ಇದ್ದಂತೆ ಹೇಳುವ ‘ಪ್ರತ್ಯಕ್ಷದರ್ಶಿ’ಗಳ ಕರಾಮತ್ತೇ ಇಲ್ಲಿ ರೋಚಕ.

ಯಾರನ್ನಾದರೂ ‘ಸಂವಿಧಾನ-ವಿರೋಧಿ’ ಎಂದು ಟ್ಯಾಗ್ ಮಾಡುವುದು, ಮಿಥ್ಯ ಕಥಾನಕದ ಒಂದು ಅಭಿಜಾತ
ಉದಾಹರಣೆ. ಸತ್ಯವೇ ಇಲ್ಲದಿದ್ದರೂ, ತಮಗೆ ಬೇಡವಾದವರನ್ನು ಇಲ್ಲಿ ಟ್ಯಾಗ್ ಮಾಡಲಾಗುತ್ತದೆ. ವಕ್ಫ್
ಸಮಸ್ಯೆಗೆ ಶಾಸಕಾಂಗದ ಮೂಲಕ, ಕಾನೂನು ತರುವುದರ ಮೂಲಕ ಪರಿಹಾರವನ್ನು ಒದಗಿಸುವಂತೆ ಯಾರು ಆಗ್ರಹಿಸುತ್ತಿದ್ದಾರೋ ಅವರಿಗೆ ಇಲ್ಲದ ‘ಸಂವಿಧಾನ-ವಿರೋಧಿ’ ಹಣೆಪಟ್ಟಿ ಕಟ್ಟಿ, ಇನ್ನು ಮಾತಾಡದಂತೆ ಮಾಡುವುದು ಇವರ ತಂತ್ರ. ಪೇಜಾವರರಂತೆ ‘ಹಿಂದೂ ಪರವಾಗಿ’ ಮಾತನಾಡುವ ಹಲವರನ್ನು ಈ ಜಾಲದಲ್ಲಿ ಸಿಲುಕಿಸಲಾಗಿದೆ. ‘ಸಂವಿಧಾನ -ವಿರೋಧಿ’ ಎಂಬ ಸುಳ್ಳು ಹಣೆಪಟ್ಟಿಯು ಹಲವು ಪ್ರಭಾವಿಗಳಿಗೆ, ಸರಕಾರಗಳಿಗೆ ಕಂಟಕವನ್ನು ತಂದೊಡ್ಡಿದೆ, ಭವಿಷ್ಯವನ್ನು ಮಂಕಾಗಿಸಿದೆ.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಗೂ ಹೋಗುವ, ಜಾತಿ-ಮತ-ಪಂಥಗಳ ಹಂಗಿಲ್ಲದೇ ಮನೆ ಕಟ್ಟಿಕೊಟ್ಟ ಪೇಜಾವವರಿಗೆ ಈ ಹಣೆಪಟ್ಟಿ ಕಟ್ಟುವುದು ವ್ಯವಸ್ಥಿತ ಕಥಾನಕದ ಭಾಗವೇ ಸರಿ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ರಂಗದ ಪ್ರಭಾವಿಗಳು ಇಲ್ಲಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಾರೆ. ಸಾಂಸ್ಕೃತಿಕ ಅಥವಾ ಭಾವನಾತ್ಮಕ ವಿಷಯಗಳ ಸಿದ್ಧಸೂತ್ರ ಇಲ್ಲಿದೆ. ಇದು ಯಾವಾಗಲೂ ಯಶಸ್ವಿಯಾಗುತ್ತದೆ ಅಂತ ಅಲ್ಲ. ಯಾವಾಗಲೂ ಕಲ್ಲು ಒಗೆಯುತ್ತಲೇ ಇರುವುದು, ತಾಕಿದ ಹಣ್ಣುಗಳು ಉದುರುತ್ತವೆ!

ಮೊನ್ನೆ ಮೊನ್ನೆ, ಮಹಾರಾಷ್ಟ್ರದ ಚುನಾವಣೆಯಲ್ಲಿ ಕಿಸೆಯಲ್ಲಿಯ ‘ಕೆಂಪು ಪುಸ್ತಕ’ ಸದ್ದುಮಾಡಿತು. ಅದರಲ್ಲಿ ಬಿಳಿಹಾಳೆಗಳಿವೆ ಎಂಬ ಟೀಕೆಯೂ ಬಂತು. ಜನ ಏನು ಮಾಡಿದರು ಎಂಬ ಫಲಿತಾಂಶವೂ ಸಿಕ್ಕಿತು! ‘ಕಥಾನಕ ತಂಡ’ವು ಹೇಗೆ ಹೊಗೆಯಾಡಿಸಲು ಪ್ರಯತ್ನಿಸುತ್ತದೆಯೋ, ಹೋಗಲಾಡಿಸಲೂ ಹಾಗೆಯೇ ಪ್ರಯತ್ನಿಸುತ್ತದೆ. ಇದಕ್ಕೂ ಎರಡು ಉದಾಹರಣೆ ಕೊಡಬಹುದು. ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಡ ಪಟಾಲಮ್ಮಿನ ಚಿಂತಕರೊಬ್ಬರು, “ಬಸವಣ್ಣನವರು ಕೂಡ ಅಹಂಕಾರದಿಂದ ಹೊರಬರಲಾಗಲಿಲ್ಲ” ಎಂದು ಕದಳೀವನವನ್ನು ಕದಡಿದರು. ವಿರೋಧ ಎದ್ದಿತು.

ಪ್ಯಾಟರ್ನ್ ಪ್ರಕಾರ ಹೋಗಬೇಕಾಗಿತ್ತು. ಆದರೆ ಇದೇ ಕಥಾನಕ ತಂಡದವರು ‘ಪ್ರಚಾರ-ಪುನರಾವರ್ತನ-ನಿರ್ಣಯ’ ಎಂಬ ಮುಂದಿನ ಸರಪಳಿಯ ಕೊಂಡಿಗಳನ್ನು ತುಂಡುಮಾಡಿದರು. ಅದು ಅಲ್ಲಿಗೇ ನಿಂತಿತು. ಸಾಕ್ಷಿಪ್ರಜ್ಞೆಯೊಬ್ಬರು ಕೃಷ್ಣದೇವರಾಯ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಮದಕರಿ ನಾಯಕರು, ವೀರ ಪುಲಿಕೇಶಿಯ ಬದಲಾಗಿ ಔರಂಗಜೇಬನ ಸಮಾಧಿಯನ್ನು ನೋಡಿ ತುಂಬಾ ಚಿಕ್ಕದಿದೆ ಎಂದು ಮರುಕಗೊಂಡಿದ್ದರು.

ಇದು ಕಥಾನಕದ ಸರಪಳಿಯ ಮೊದಲ ಕೊಂಡಿಯ ಅರ್ಹತೆಯನ್ನು ಪಡೆಯಲಿಲ್ಲ. ಆಯಕಟ್ಟಿನ ಇನ್ನೊಬ್ಬರು
ಮೊನ್ನೆ ಕೊಪ್ಪಳದಲ್ಲಿ ಸಾಧಕರೊಬ್ಬರ ಸಂಸ್ಮರಣಾ ಸಭೆಯಲ್ಲಿ, ಇಲ್ಲದ್ದು ಮಾತನಾಡಲು ಹೋಗಿ ಜನರ ವಿರೋಧ
ಎದುರಿಸಿದ್ದೂ ಆಯಿತು, ಎದ್ದು ಹೋಗಿ ಎಂದು ಅಬ್ಬರಿಸಿ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮಾಡಿದ್ದೂ ಸುದ್ದಿ ಯಾಯಿತು.

ಇದು ಈ ಸರಪಳಿಯ ಹತ್ತಿರವೂ ಸುಳಿಯಲಿಲ್ಲ. ಇನ್ನೊಬ್ಬ ರಾಜಧಾನಿಯಲ್ಲೇ ನಿಂತು, “ಸದನ ನಿಮ್ಮದಾದರೆ, ಸಡಕ್ ನಮ್ಮವು” ಎಂದ. ಅಸಲಿಗೆ ಇದು ಸಂವಿಧಾನ-ವಿರೋಧಿ ಹೇಳಿಕೆಯಾಗಿದ್ದರೂ ಈ ಸರಪಳಿ ಮಲಗಿಕೊಂಡೇ ಇತ್ತು! ಡಾ. ಬಾಬಾ ಸಾಹೇಬ್ ಅಂಬೇಡ್ಕರರು ನೀಡಿದ ಭಾರತದ ಸಂವಿಧಾನಕ್ಕೆ ಎಲ್ಲರೂ ಬದ್ಧರಾದಾಗಲೇ ಭಾರತದ ಪ್ರಜೆಯಾಗಲು ಸಾಧ್ಯ. ಇಂಥ ಕಥಾನಕಗಳು ಬರುತ್ತವೆ, ಹೋಗುತ್ತವೆ. ಇವುಗಳ ಬಗ್ಗೆ ಎಚ್ಚರ ವಹಿಸು ವುದು, ಪ್ಯಾಟರ್ನ್‌ಗಳನ್ನು ಗಮನಿಸುವುದು, ಇವುಗಳಿಗೆ ಬಲಿಯಾಗದಿರುವುದೇ ಇಂದಿನ ತುರ್ತು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Janamejaya Umarji Column: ವಿಮೋಚನೆಯನ್ನು ಏಕೀಕರಣವೆನ್ನುವ ಹುನ್ನಾರ