Thursday, 15th May 2025

ಆರೋಗ್ಯ, ಆಯುಷ್ಯ, ಆನಂದಕ್ಕೆ ಜಪಾನಿಯರ ಗುಟ್ಟು ಇಕಿಗೈ

ಶ್ವೇತಪತ್ರ

shwethabc@gmail.com

‘ಇಕಿಗೈ’ ಇದು ಜಪಾನಿಯರ ಒಂದು ಪರಿಕಲ್ಪನೆ. ಪ್ರೀತಿ, ನಾವು ಯಾವುದರಲ್ಲಿ ಉತ್ತಮವಾಗಿದ್ದೇವೆ ಮತ್ತು ಜಗತ್ತು ನಮ್ಮಿಂದ ಏನನ್ನು ನಿರೀಕ್ಷಿಸುತ್ತದೆ, ಜತೆಗೆ ನಮಗೆ ಬೇಕಾದ ಪುರಸ್ಕಾರಗಳೇನು ಎಂಬೆಲ್ಲವುಗಳ ಕಾಂಬಿನೇಷನ್ನು ಇದು.

‘ಇಕಿ’ ಎಂದರೆ ಬದುಕು, ‘ಗೈ’ ಎಂದರೆ ಉದ್ದೇಶ. ಎರಡನ್ನು ಒಂದುಗೂಡಿಸಿ ನೋಡಿದಾಗ ಇಕಿಗೈ ಎಂದರೆ ಬದುಕಿಗೆ ಮೌಲ್ಯ,  ಅರ್ಥ ಹಾಗೂ ಉದ್ದೇಶ ತುಂಬುವ ಜೀವನ ವಿಧಾನ ಎಂದಾಗುತ್ತದೆ. ಇಕಿಗೈ ಪರಿಕಲ್ಪನೆ ರೂಪುಗೊಂಡಿದ್ದು ಜಪಾನಿಯರ ವೈದ್ಯಕೀಯ ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮ ಸಾಂಪ್ರದಾಯಿಕ ತತ್ವಗಳಿಂದ. ಈ ವೈದ್ಯ ಕೀಯ ತತ್ವ, ದೈಹಿಕ ಆರೋಗ್ಯದ ಮೇಲೆ ಮಾನಸಿಕ ಭಾವನಾತ್ಮಕ ಅಂಶಗಳ ಜತೆಗೆ ಬದುಕಿನ ಉದ್ದೇಶವೆಂಬ ಸಂವೇದನೆಗಳು ಪರಿಣಾಮವನ್ನುಂಟು ಮಾಡುತ್ತವೆ ಎಂಬುದನ್ನು ಪ್ರತಿ ಪಾದಿಸುತ್ತದೆ.

ಜಪಾನ್‌ನ ಮನೋವಿಜ್ಞಾನಿ ಮಿಚಿಕೋ ಕುಮಾನೋ ಮಾತುಗಳಲ್ಲಿ ಹೇಳುವುದಾದರೆ ಇಕಿಗೈ ಯೋಗಕ್ಷೇಮದ ಒಂದು ಸ್ಥಿತಿ ಮತ್ತು ಇದು ಖುಷಿಯ ಚಟುವಟಿಕೆಗಳಲ್ಲಿ ಭಕ್ತಿ ಯಿಂದ ಹುಟ್ಟುವ ಸಂತೃಪ್ತ ಭಾವ. ಮಿಚಿಕೋ ಪ್ರಕಾರ, ಇಕಿಗೈಗೂ ಕ್ಷಣಿಕ ಸುಖಗಳಿಗೂ (ಹೆಡೋನಿಯಾ, ಪುರಾತನ ಗ್ರೀಕ್‌ನ ಸುಖದ ಪರಿಕಲ್ಪನೆ) ವ್ಯತ್ಯಾಸವಿದೆ.

ಸಂಪೂರ್ಣ ಬದುಕಿಗೆ ಅರ್ಥ ತುಂಬಿಕೊಂಡು ಖುಷಿಗಳನ್ನು ಶಾಶ್ವತವಾಗಿಸಿಕೊಳ್ಳುತ್ತಾ ಬದುಕುವುದೇ ಇಕಿಗೈ. ಮನೋ ವಿಜ್ಞಾನದ ಸಂಜ್ಞಾನಾತ್ಮಕ-ವರ್ತನಾ ಚಿಕಿತ್ಸೆಯಲ್ಲೂ (CBT) ಇಕಿಗೈ ಪ್ರತಿಧ್ವನಿಸುತ್ತದೆ. ಎರಡೂ ಧ್ವನಿಸುವುದು ಒಂದನ್ನೇ. ಯಾವ ಕೆಲಸವೂ ನಮಗೆ ಖುಷಿ ಮತ್ತು ತಜ್ಞತೆಯನ್ನು ಮೂಡಿಸುತ್ತದೆಯೋ ಆ ಕೆಲಸದಲ್ಲಿ ತೊಡಗುವುದು ಖಿನ್ನತೆಯನ್ನು ನಿವಾರಿಸಲು ಇರುವ ನಿರ್ದಿಷ್ಟ ಮಾರ್ಗ. ಜಪಾನಿನ ಕೆನ್ ಮೋಗಿ ಎಂಬ ನ್ಯೂರೋ ಸೈಂಟಿಸ್ಟ್ ಬಹಳ ಕಾವ್ಯಮಯವಾಗಿ ಇಕಿಗೈಯನ್ನು ಉಲ್ಲೇಖಿಸುತ್ತಾರೆ.

‘ಬೆಳಗ್ಗೆ ಏಳುವುದಕ್ಕೆ ಒಂದು ಕಾರಣ ಇಕಿಗೈ, ಖುಷಿಗಾಗೇ ಏಳುವುದೇ ಇಕಿಗೈ ಎಂಬುದವರ ವ್ಯಾಖ್ಯಾನ. ಇದು ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿನ ಉದ್ದೇಶ ಮತ್ತು ಸಂತೃಪ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಸಾಮಾಜಿಕ ಒಳಿತಿಗಾಗಿ ನಾವು ಹೇಗೆ ಕನೆಕ್ಟ್ ಆಗುತ್ತ ಬದುಕುತ್ತೇವೆ ಎಂಬುದಕ್ಕೂ ಸಂಬಂಧಿಸಿದೆ. ಎಲ್ಲರೊಳಗೂ ಇಕಿಗೈ ಎಂಬುದಿದೆ. ಆದರೆ ಒಬ್ಬೊಬ್ಬರ ಪ್ಯಾಶನ್ನು, ಪ್ರತಿಭೆ,
ಸಾಮರ್ಥ್ಯಕ್ಕೆ ತಕ್ಕಂತೆ ಅದು ಮೈಗೂಡುತ್ತದೆ. ಏನೇ ಇರಲಿ ನಮ್ಮೊಳಗಿನ ಆ ಇಕಿಗೈ ಅನ್ನು ಹುಡುಕಬೇಕಷ್ಟೇ. ಈ ಹುಡುಕುವ ಪಯಣಕ್ಕೆ ಬೇಕಿರುವುದು ಸಮಯ, ಸ್ವ-ಅರಿವು ಮತ್ತು ಶ್ರಮ.

ಬದುಕಿನ ಎಲ್ಲ ಆಯಾಮಗಳಿಂದಲೂ ನಾವು ಏನನ್ನು ಪ್ರೀತಿಸುತ್ತೇವೆ, ಯಾವುದರಲ್ಲಿ ಉತ್ತಮವಾಗಿದ್ದೇವೆ, ಜಗತ್ತಿಗೆ ನಮ್ಮಿಂದ
ಬೇಕಾಗಿರುವುದಾದರೂ ಏನು, ನಾವು ನಿರೀಕ್ಷಿಸಬಹುದಾದ ಪುರಸ್ಕಾರಗಳೇನು ಎಂಬ ಚಂದದ ಅಧ್ಯಾತ್ಮಿಕ ತತ್ವದ ಇಕಿಗೈ ಅಡಗಿದೆ. ಬದುಕಿನ ನಮ್ಮ ಅನುಭವಗಳನ್ನು, ಜ್ಞಾನವನ್ನು, ಜಗತ್ತನ್ನು ಅರ್ಥೈಸುವ ರೀತಿಯನ್ನು ಮೇಲಿನ ಆಯಾಮಗಳಿಗೆ ತುಂಬುತ್ತ ಹೋದರೆ ಬದುಕು ಪರಿಪೂರ್ಣ.

ಉದಾಹರಣೆಗೆ ನಾವು ಏನನ್ನು ಪ್ರೀತಿಸುತ್ತೇವೆಯೇ ಅದನ್ನು ಮಾಡೋಣ ಸಿಂಪಲ್ – ನಮಗೆ ಖುಷಿ ಕೊಡುವ, ನಮ್ಮನ್ನು ಮತ್ತಷ್ಟು ಜೀವಂತವಾಗಿಸುವ ಎಲ್ಲವನ್ನು ಮಾಡೋಣ. ಹಾಡೋಣ, ಕುಣಿಯೋಣ, ಕವಿತೆ ಬರೆಯೋಣ, ಸುತ್ತಾಡೋಣ, ಓದೋಣ, ಸ್ನೇಹಿತರ ಜತೆ ಹರಟೆ ಕೊಚ್ಚೋಣ. ನಾವು ಏನನ್ನಾದರೂ ಪ್ರೀತಿಸಿದರೆ ಆ ಪ್ರೀತಿಯನ್ನು ಯೋಚಿಸುವುದಕ್ಕಷ್ಟೇ ಸೀಮಿತಗೊಳಿಸುತ್ತೇವೆಯೇ ಹೊರತು ಅದರ ಆಳಕ್ಕೆ ಖುಷಿಯಿಂದ ಇಳಿಯುವುದಿಲ್ಲ.

ಇಕಿಗೈನ ತತ್ವ ಅಡಗಿರುವುದೇ ಇಲ್ಲಿ. ನಾವು ಪ್ರೀತಿಸಿದ್ದನ್ನು ಮಾಡುವಾಗ ಇದರಲ್ಲಿ ನಾನು ಉತ್ತಮವಾಗಿದ್ದೇನೆಯೋ, ಇದು ಜಗತ್ತಿಗೆ ಬೇಕಿದೆಯೇ, ಇದರಿಂದ ನನಗೇನಾದರೂ ದೊರೆಯುತ್ತದೆಯೇ ಎಂಬ ಗ್ಯಾಪ್‌ಗಳನ್ನು ತುಂಬುವುದಕ್ಕೆ ಶುರುವಿಟ್ಟು ಕೊಂಡರೆ ಮನಸ್ಸು ಕಲಸುಮೇಲೋಗರ. ಪುಟ್ಟ ಖುಷಿಗಳನ್ನು ಅಪ್ಪಿ ಕೊಳ್ಳುತ್ತಾ, ಹಳೆಯ ಖುಷಿಯ ನೆನಪುಗಳನ್ನು ಪ್ರತಿಬಿಂಬಿ
ಸುತ್ತಾ, ನಾನು ಖುಷಿಯ ಬದುಕನ್ನು ಕಟ್ಟಬನೆಂಬ ಚೌಕಟ್ಟನ್ನು ಮನಸ್ಸಿಗೆ ಒದಗಿಸಿಕೊಡುವುದೇ ಇಕಿಗೈ.

ಇಕಿಗೈನಾ ಸೂಕ್ತ ವಿವರಣೆ ನಮಗಾಗಬೇಕಾದರೆ ಜಪಾನಿನ ಖಾದ್ಯ ಸೂಶಿ(sushi) ಇದನ್ನು ತಯಾರಿಸುವುದರ ಮೂಲಕ ಸೂಶಿ ಶೆಫ್ ಎಂತಲೇ ಖ್ಯಾತರಾಗಿರುವ ಶೆಫ್ ಜೀಯರೋ ಆನೋನ ಕಥೆಯನ್ನು ತಿಳಿದುಕೊಳ್ಳಲೇಬೇಕು. ಶೆಫ್ ಆನೋ ತನ್ನ ಇಡೀ ಬದುಕನ್ನು ಸೂಶಿ ಎಂಬ ಹೊಸ ಖಾದ್ಯವನ್ನು ತಯಾರಿಸುತ್ತ ಅದನ್ನು ತನ್ನ ಅನೇಕ ತಂತ್ರಗಳಿಂದ ಇನ್ನೂ ಉತ್ತಮಗೊಳಿಸುವು ದಕ್ಕೆ ಅರ್ಪಿಸಿರುತ್ತಾನೆ.

ಆತ ಜಪಾನಿನ ಟೋಕಿಯೋ ನಗರದಲ್ಲಿ ಕೇವಲ ೧೦ ಸೀಟುಗಳ ಒಂದು ಪುಟ್ಟ ರೆಸ್ಟೋರೆಂಟ್ ಒಂದೊಂದು ನಡೆಸುತ್ತಾನೆ. ಶೆ- ಆನೋ ಪ್ರಪಂಚದ ಅತ್ಯುತ್ತಮವಾದ ಸೂಶಿ ತಯಾರಿಸುವ ಶೆಫ್ ಎಂಬ ಹಿರಿಮೆಯ ಜತೆಗೆ ಮೈಕೆಲಿನ್ ರೆಸ್ಟೋರೆಂಟ್ ಗೈಡ್‌ ನಿಂದ ತನ್ನ ೧೦ ಸೀಟುಗಳ ಪುಟ್ಟ ರೆಸ್ಟೋರೆಂಟ್‌ಗೆ ತ್ರೀ ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿರುತ್ತಾನೆ.

‘ಜೀರೋ ಡ್ರೀಮ್ಸ್ ಆನ್ ಸೂಶಿ’ ಎಂಬ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯಲ್ಲಿ ಶೆಫ್ ಆನೋ ಆಡುವ ಮಾತುಗಳು ಇಂತಿವೆ – ನೀವು ಮಾಡುವ ಕೆಲಸದ ಮೇಲೆ ನೀವು ಪ್ರೀತಿಗೆ ಬೀಳಬೇಕು, ಕೆಲಸಕ್ಕೆ ಬೇಕಿರುವ ನೈಪುಣ್ಯವನ್ನು ಗಳಿಸಿಕೊಳ್ಳಬೇಕು. ತುದಿಯನ್ನು ತಲುಪಲು ಪ್ರಯತ್ನಿಸಬೇಕು ಮತ್ತು ಆ ತುದಿ ಎಲ್ಲಿದೆ ಎಂಬುದು ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲ. ಹಾಗಾಗಿ ಪ್ರತಿ ದಿನವೂ ತುದಿ ಮುಟ್ಟಲು ಪ್ರಯತ್ನಿಸುತ್ತಲೇ ಇರಬೇಕು.

ಸೆಕ್ಸ್ ಅನೋಗೆ ತನ್ನ ಕೆಲಸದ ಮೇಲಿನ ಪ್ರೀತಿ ಅದನ್ನು ಉಳಿಸಿಕೊಳ್ಳಲು ಬೇಕಿರುವ ತಯಾರಿ ಮತ್ತು ಎಂದೂ ತೀರದ ಪಯಣದ ಹಾದಿ ಬದುಕಿಗೊಂದು ಸಂತೃಪ್ತಿಯನ್ನು ಒದಗಿಸಿಕೊಟ್ಟಿದೆ. ಇನ್ಟರೆಸ್ಟಿಂಗ್ ವಿಷಯವೆಂದರೆ ಶೆಫ್ ಆನೋ ಕೇವಲ ಸೂಶಿಯನ್ನು ತಯಾರಿಸುವುದಿಲ್ಲ. ಬದಲಿಗೆ ತನ್ನ ಗ್ರಾಹಕರು ತಾನು ತಯಾರಿಸಿದ ಸೂಶಿಯನ್ನು ತಿನ್ನುವಾಗ ಅವರ ಮುಖಚರ್ಯೆಗಳನ್ನು
ಬಹಳ ಶ್ರದ್ಧೆಯಿಂದ ಅವಲೋಕಿಸುತ್ತಾನೆ.

ಗ್ರಾಹಕರ ಮುಖದ ಆಧಾರದ ಮೇಲೆ ತಯಾರಿಕೆಯಲ್ಲಿ ಬದಲಾವಣೆಗಳನ್ನು ಮುಂದಿನ ಬಾರಿಗೆ ಮಾಡಿಕೊಂಡಿರುತ್ತಾನೆ. ಹೀಗೆ ತಾನು ಮಾಡುವ ಕೆಲಸವನ್ನು ಉತ್ಕೃಷ್ಟವಾಗಿ ಪ್ರೀತಿಸುತ್ತ ಅದರೊಳಗೆ ತಲ್ಲೀನವಾಗಿ ಬದುಕಿಗೆ ಅರ್ಥ ಕಂಡುಕೊಳ್ಳುವುದೇ ಆತನ ಪ್ರಕಾರ ಇಕಿಗೈ. ಇಕಿಗೈಗೆ ಮತ್ತೊಂದು ಉದಾಹರಣೆ ಚಿಂಪಾಂಜಿ ತಜ್ಞೆ ಜೇನ್ ಗುಡಾಲ್. ಆಕೆಗೆ ಬಹಳ ಸಣ್ಣ  ವಯಸ್ಸಿ ನಿಂದಲೂ ಪ್ರಾಣಿಗಳೆಂದರೆ ಪ್ರೀತಿ.

ತನ್ನ ೨೦ ನೇ ವಯಸ್ಸಿಗೆ ಜೇನ್ ಗುಡಾಲ್ ಚಿಂಪಾಂಜಿಗಳ ಅಧ್ಯಯನದಲ್ಲಿ ತೊಡಗುತ್ತಾಳೆ. ಚಿಂಪಾಂಜಿಗಳ ಸಂಪೂರ್ಣ ಜೀವಿತಾವಧಿಗೆ ಸಂಬಂಧಪಟ್ಟ ಅಧ್ಯಯನ ಅದಾಗಿರುತ್ತದೆ. ಚಿಂಪಾಂಜಿಗಳ ಜತೆ ಸಲುಗೆಯಿಂದ ವ್ಯವಹರಿಸುವ ಕೌಶಲ
ರೂಢಿಸಿಕೊಳ್ಳುವ ಗುಡಾಲ್, ಅವುಗಳ ಬುದ್ಧಿಶಕ್ತಿ ಹಾಗೂ ಸಾಮಾಜಿಕ ಸಂವಹನ ಕ್ರಿಯೆಗಳ ಮೇಲೆ ಡಾಕ್ಯುಮೆಂಟರಿಯನ್ನು ಮಾಡುತ್ತಾಳೆ.

ಪ್ರಾಣಿಗಳ ಹಕ್ಕಿಗಾಗಿ ಹೋರಾಟ ಮಾಡುವ ಜೇನ್ ಗುಡಾಲ್ ಮಾರಣಾಂತಿಕ ಪ್ರಯೋಗಗಳಿಗೆ ಪ್ರಾಣಿಗಳನ್ನು ಬಳಸಿಕೊಳ್ಳುವುದರ ಕುರಿತು ತೀವ್ರವಾದ ಹೋರಾಟದಲ್ಲಿ ತೊಡಗುತ್ತಾಳೆ. ಚಿಂಪಾಂಜಿಗಳ ಜತೆಗೆ ಹೆಚ್ಚು ಹೆಚ್ಚು ಬೆರೆಯುತ್ತ ಬದುಕುವ, ಅವುಗಳಿಂದ ಕಲಿಯುವ-ಕಲಿಸುವ, ಅವುಗಳ ಹಕ್ಕುಗಳಿಗಾಗಿ ಹೋರಾಡುವುದರಲ್ಲಿ ಜೇನ್ ಗುಡಾಲ್‌ಳ ಇಕಿಗೈ ಸಂಪೂರ್ಣವಾಗುತ್ತದೆ.

ಕಿತ್ತಳೆ ಮಾರಿ ಶಾಲೆ ಕಟ್ಟಿಸುವ ಮಂಗಳೂರಿನ ಹಜನಬ್ಬ, ಸಾವಿರ ಸಾವಿರ ಮರಗಳ ನೆಟ್ಟು ವೃಕ್ಷ ಮಾತೆ ಎನಿಸಿಕೊಳ್ಳುವ ಸಾಲು ಮರದ ತಿಮ್ಮಕ್ಕ, ಕೇವಲ ಐದು ರೂಪಾಯಿಗಳಿಗೆ ವೈದ್ಯಕೀಯ ಸೇವೆ ನೀಡುವ ಮಂಡ್ಯದ ಡಾಕ್ಟರ್ ಶಂಕರೇಗೌಡ, ಸದ್ದಿಲ್ಲದೇ ಮರ ಬೆಳೆಸುವ ಹಾಲಕ್ಕಿ ತುಳಸೀಗೌಡ ನಮ್ಮ ನಡುವೆ ಇಕಿಗೈನ ಜೀವಂತಿಕೆಯಂತೆ ಬದುಕಿರುವ ಖುಷ್ಯಾತ್ಮರು. ಇಕಿಗೈನಿಂದ ನಾವು ಕಲಿಯಬೇಕಾದದ್ದು- 1)ನಮ್ಮ ಜೀವನಶೈಲಿ ಆದರ್ಶವಾಗಿರಲಿ ಎಂಬ ಪಾಠವನ್ನು 2)ಸಾಮಾಜಿಕವಾಗಿ ಗಟ್ಟಿಯಾಗಿ ಬರೆಯೋಣ ಎಂಬ ಸ್ನೇಹಪರತೆಯನ್ನು 3) ಒಬ್ಬರಿಗೊಬ್ಬರು ಕನೆಕ್ಟ್ ಆಗುತ್ತಾ ಬದುಕೋಣ ಎಂಬ ಕೂಡು ಬದುಕುವ ಬೆಸುವ ಸಾಮರಸ್ಯವನ್ನು 4)ಕೆಲಸ ಮತ್ತು ಬದುಕು ಎರಡರ ನಡುವೆ ಮೂಡಿಸಿಕೊಳ್ಳುವ ಬ್ಯಾಲೆನ್ಸ್ ಅನ್ನು ೫)ಕನಸುಗಳನ್ನು ಹುಡುಕು ವುದನ್ನು ಮಾಡುವ ಕೆಲಸವನ್ನು ಪ್ರೀತಿಸುವುದನ್ನು ಪ್ರತಿದಿನದ ಪುಟ್ಟ ಖುಷಿಗಳು ಅರ್ಥ ಪೂರ್ಣ ಬದುಕಿನ ಫಲಿತಾಂಶಗಳೇ ಆಗಿರುತ್ತವೆ. ಅದಕ್ಕೆ ಮತ್ತೊಂದು ಜೀವಂತ ಉದಾಹರಣೆ ಓಕಿನೋವ ಎಂಬ ಜಪಾನಿನ ಒಂದು ಪುಟ್ಟ ದ್ವೀಪ.

ಈ ದ್ವೀಪದಲ್ಲಿ ಬದುಕಿರುವವರೆಲ್ಲರೂ ನೂರು ವರ್ಷದ ಆಜುಬಾಜಿನವರೇ. ಇಕಿಗೈನ ಪರಿಕಲ್ಪನೆ ಹಾಗೂ ಅವರ ಆಹಾರ ಪದ್ಧತಿ ಇಲ್ಲಿನ ಜನರ ದೀರ್ಘಾಯುಷ್ಯಕ್ಕೆ ಕಾರಣ ಎನ್ನುತ್ತದೆ ಸಂಶೋಧನೆ. ಈ ದ್ವೀಪದಲ್ಲಿ ವಯಸ್ಸನ್ನು, ವಯಸ್ಸಾದವರನ್ನು ಸಂಭ್ರಮಿಸುತ್ತಾರೆ. ಇಲ್ಲಿನ ಹಿರಿಯರು ಕಡ್ಡಾಯವಾಗಿ ತಮ್ಮ ನಂತರದ ಪೀಳಿಗೆಗೆ ವಿವೇಕವನ್ನು ದಾಟಿಸುತ್ತಾರೆ. ಈ ಪ್ರಕ್ರಿಯೆ ಅವರಲ್ಲಿ ತಮ್ಮ ಹೊರತಾದ ಮತ್ತೂ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅನುಭೂತಿಯನ್ನುಂಟು ಮಾಡುತ್ತದೆ. ಓಕಿನೋವಾದಲ್ಲಿ
ಬದುಕಿರುವ ೯೨ ವರ್ಷದ ಚಿರಯುವತಿ ಟಾಮಿ ಮನೇಕಾಗೆ ತನ್ನ ಸ್ನೇಹಿತರೊಟ್ಟಿಗೆ KBG84 ಎಂಬ ಡಾನ್ಸ್ ಟ್ರೂಪ್‌ನಲ್ಲಿ ಹಾಡುತ್ತ, ಕುಣಿಯುವುದೇ ಇಕಿಗೈ. ಆಕೆಗೆ ಅದೇ ತಾನು ಇಷ್ಟಪಟ್ಟು ಮಾಡುವ ಕೆಲಸ.

ನಾವೆಲ್ಲ ನಮ್ಮ ನಮ್ಮ ಇಕಿಗೈ ಅನ್ನು ವೈವಿಧ್ಯಮಯಗೊಳಿಸಿಕೊಳ್ಳಬೇಕು ಒಂದು ಉದಾಹರಣೆ ಹೇಳುವುದಾದರೆ ನಾವೆಲ್ಲ ಅನೇಕ ಕೆಲಸಗಳಿಂದ ರಿಟೈರ್ಮೆಂಟ್  ಪಡೆದುಕೊಂಡು ಬಿಟ್ಟಿರುತ್ತೇವೆ .ನಿವೃತ್ತಿ ನಮ್ಮಲ್ಲಿ ಖಾಲಿ ಭಾವವನ್ನು ಮೂಡಿಸುತ್ತದೆ. 2012ರಲ್ಲಿ ಹರ್ಡಲ್ ಚಾಂಪಿಯನ್ ದೈ ತಮಿಸುಯಿ ಕ್ರೀಡೆಯಿಂದ ನಿವೃತ್ತನಾಗುತ್ತಾನೆ. ಆಗ ತನಗೆ ತಾನೇ ಪ್ರಶ್ನೆ ಕೇಳಿಕೊಳ್ಳು ತ್ತಾನೆ – ಆಡುವುದರ ಮೂಲಕ ನಾನು ಸಾಧಿಸಬೇಕೆಂದುಕೊಂಡದ್ದು ಏನನ್ನು ಎಂದು? ಅದಕ್ಕೆ ಉತ್ತರವನ್ನು ಕಂಡುಕೊಳ್ಳುತ್ತಾನೆ – ಟ್ರಾಕ್‌ನಲ್ಲಿ ಸ್ಪರ್ಧಿಸುತ್ತ ಫೀಲ್ಡನಲ್ಲಿ ಜನರ ದೃಷ್ಟಿಕೋನಗಳನ್ನು ಬದಲಾಯಿಸಿದ್ದೇ ನನ್ನ ಸಾಧನೆಯೆಂದು.

ನಿವೃತ್ತಿಯ ನಂತರ ಕ್ರೀಡೆಯನ್ನು ಉತ್ತೇಜಿಸುವುದಕ್ಕಾಗಿ ಕಂಪನಿಯೊಂದನ್ನು ಶುರುಮಾಡುತ್ತಾನೆ. ತಮಿಸುಯಿಯ ಕಥೆ ಆತನೊಳಗಿನ ಮೆದುವಾದ ಇಕಿಗೈಅನ್ನು ನಮಗೆ ಪರಿಚಯಿಸುತ್ತದೆ. ಅದನ್ನು ಹೇಗೆ ಅನ್ವಯಿಸಿಕೊಳ್ಳ ಬೇಕೆಂಬುದನ್ನು ಕೂಡ.
ಇಕಿಗೈ ನಮ್ಮ ಮನಸ್ಸಿನzಗಲಿ ಆ ಮೂಲಕ ಬದುಕಿಗೆ ಅಪೂರ್ಣ ಅರ್ಥಮೂಡುವಂತಾಗಲಿ!