Wednesday, 14th May 2025

ಕುಮಾರಣ್ಣನಿಗೆ ಅಮಿತ್ ಶಾ ಹೇಳಿದ್ದೇನು ?

ಮೂರ್ತಿಪೂಜೆ

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ದೆಹಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿದ್ದ ಅವರು ಸುದೀರ್ಘ ಕಾಲ ಚರ್ಚೆ ನಡೆಸಿದರು.

ಅಂದ ಹಾಗೆ, ಕರ್ನಾಟಕದ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ನಿರಾಸೆ ಉಂಟು ಮಾಡಿರುವುದು ರಹಸ್ಯ ವೇನಲ್ಲ. ಹಾಗಂತ ಫಲಿತಾಂಶದ ಬಗ್ಗೆ ಕೊರಗುತ್ತಾ ಕೂತರೆ ಪ್ರಯೋಜನ ವಿಲ್ಲವಲ್ಲ? ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಉಭಯ ಪಕ್ಷಗಳ ನಾಯಕರು ಪರಸ್ಪರ ಕೈಜೋಡಿಸಲು ಬಯಸಿ ದ್ದಾರೆ. ಆದರೆ ಹೀಗೆ ಕೈಜೋಡಿಸುವು ದಕ್ಕೊಂದು ವಿಧಿ-ವಿಧಾನ ಬೇಕಲ್ಲ? ಎಲ್ಲಕ್ಕಿಂತ ಮುಖ್ಯವಾಗಿ ಉಭಯ ಪಕ್ಷಗಳ ನಡುವಿನ ಸ್ನೇಹ ಯಾವ ರೀತಿ ಇರಬೇಕು ಎಂಬುದು ನಿರ್ಧಾರವಾದರೆ ಉಳಿದಿದ್ದೆಲ್ಲ ಸಲೀಸು.

ಇದೇ ಕಾರಣಕ್ಕಾಗಿ ದಿಲ್ಲಿಗೆ ಹೋಗಿದ್ದ ಕುಮಾರಸ್ವಾಮಿ, ‘ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಎನ್‌ಡಿಎ ಅಂಗಪಕ್ಷವಾಗಲು ನಾವು ಸಿದ್ಧ. ಇದಕ್ಕೆ ಪ್ರತಿಯಾಗಿ ನೀವು ನಮ್ಮ ಎರಡು ಬೇಡಿಕೆಗಳನ್ನು ಈಡೇರಿಸಬೇಕು’ ಅಂತ ಹೇಳಿದ್ದಾರೆ. ಅದರ ಪ್ರಕಾರ, ಮುಂದಿನ ಕೆಲವೇ ಕಾಲದಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ತಮಗೆ ಬೆಂಬಲ ನೀಡಬೇಕು. ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಮಂತ್ರಿ ಮಾಡಬೇಕು ಎಂಬುದು ಕುಮಾರ ಸ್ವಾಮಿ ಮುಂದಿಟ್ಟ ಮೊದಲ ಬೇಡಿಕೆ.

ಎರಡನೆಯದಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಐದು ಸೀಟುಗಳನ್ನು ಬಿಟ್ಟುಕೊಡಬೇಕು ಎಂದು ಕುಮಾರಸ್ವಾಮಿ ಬೇಡಿಕೆ ಇಟ್ಟರಂತೆ. ಶುರುವಿನಲ್ಲಿ ಕುಮಾರಸ್ವಾಮಿ ಜತೆ ಮಾತನಾಡಿದ ಜೆ.ಪಿ.ನಡ್ಡಾ ಅವರು ಈ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರೂ, ‘ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಜತೆ ಚರ್ಚೆ ನಡೆಸಿ ಒಮ್ಮತಕ್ಕೆ ಬರೋಣ’ ಎಂದರಂತೆ. ಆದರೆ ಇದಾದ ನಂತರ ಅಮಿತ್ ಶಾ ಅವರ ಜತೆ ಮಾತನಾಡುವಾಗ ಅವರು ಬೇರೊಂದು ಬಗೆಯಲ್ಲಿ ಸ್ನೇಹ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದರಂತೆ.

‘ಕುಮಾರ್ ಸೋಮೀಜೀ, ನಿಮ್ಮ ಪಕ್ಷ ಎನ್‌ಡಿಎ ಅಂಗಪಕ್ಷವಾಗುವುದಕ್ಕಿಂತ ಬಿಜೆಪಿಯಲ್ಲಿ ವಿಲೀನವಾದರೆ ಹೆಚ್ಚು ಪರಿಣಾಮ ಕಾರಿಯಾಗಿರುತ್ತದೆ. ಯಾಕೆಂದರೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ನಮ್ಮೆರಡು ಪಕ್ಷಗಳು ಸೇರಿ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ಮತ ಗಳಿಸಿವೆ. ಇದರರ್ಥ, ನಾವಿಬ್ಬರೂ ಬೇರೆಬೇರೆಯಾಗಿ ನಿಂತ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿದೆ. ಎನ್‌ಡಿಎ ಅಂಗಪಕ್ಷಗಳಾಗಿ ಜನರ ಮುಂದೆ ಹೋದರೆ ಮತದಾರರಲ್ಲಿ ಗೊಂದಲ ಉಳಿದೇ ಇರುತ್ತದೆ. ಹೀಗಾಗಿ ಪಾರ್ಲಿ ಮೆಂಟ್ ಚುನಾವಣೆಯಲ್ಲಿ ಒಂದೇ ಶಕ್ತಿಯಾಗಿ ನಾವು ಕಣಕ್ಕಿಳಿದರೆ ನಿಶ್ಚಿತವಾಗಿ ಕಾಂಗ್ರೆಸ್ ಪಕ್ಷವನ್ನು ಮಣಿಸಬಹುದು.

ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾಗುವ ಬದಲು ಬಿಜೆಪಿಯಲ್ಲಿ ವಿಲೀನವಾದರೆ ಕಾಂಗ್ರೆಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು. ಒಂದು ವೇಳೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾದರೆ ಕರ್ನಾಟಕದಲ್ಲಿ ನೀವೇ ಅಧಿಕೃತ ವಿರೋಧಪಕ್ಷದ ನಾಯಕರಾಗಬಹುದು’ ಅಂತ ಅಮಿತ್ ಶಾ ಹೇಳಿದಾಗ ಕುಮಾರಸ್ವಾಮಿ ನಿಬ್ಬೆರಗಾದರಂತೆ.
ಮಾತು ಮುಂದುವರಿಸಿದ ಅಮಿತ್ ಶಾ, ‘ಒಂದೊಮ್ಮೆ ನಿಮ್ಮ ಪಕ್ಷ ಬಿಜೆಪಿಯಲ್ಲಿ ವಿಲೀನವಾದರೆ ನಿಮ್ಮವರ ಹಿತ ಕಾಯುವುದು ನಮ್ಮ ಕರ್ತವ್ಯ. ಹಾಗೊಂದು ವೇಳೆ ನೀವು ವಿರೋಧ ಪಕ್ಷದ ನಾಯಕ ಸ್ಥಾನ ಬಯಸದಿದ್ದರೆ ಕೇಂದ್ರ ಮಂತ್ರಿಮಂಡಲಕ್ಕೆ ಸೇರಬಹುದು.

ಪಾರ್ಲಿಮೆಂಟ್ ಚುನಾವಣೆಯಲ್ಲಿ ಟಿಕೆಟ್ ನೀಡುವ ಪ್ರಶ್ನೆ ಬಂದಾಗಲೂ ನಿಮಗೆ ಖಂಡಿತ ಅನ್ಯಾಯವಾಗುವುದಿಲ್ಲ’  ಎಂದಿದ್ದಾರೆ. ಅಷ್ಟೇ ಅಲ್ಲ, ‘ಈ ಕುರಿತು ನಾಳೆಯೇ ನಿಮ್ಮ ನಿರ್ಧಾರ ಹೇಳಬೇಕಿಲ್ಲ. ನಿಮ್ಮ ತಂದೆ ದೇವೇಗೋಡಾಜೀ ಜತೆ
ಮಾತುಕತೆ ನಡೆಸಿ, ನಂತರ ಹೇಳಿದರೆ ಸಾಕು’ ಎಂದಿದ್ದಾರೆ. ಅಲ್ಲಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋಗುವ ವಿಷಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ಒಮ್ಮತ ಮೂಡಿದೆಯಾದರೂ ಬಾಂಧವ್ಯದ ವಿಧಿ-ವಿಧಾನಗಳ ಕುರಿತು ಒಂದು ಸ್ಪಷ್ಟತೆ ಬಂದಿಲ್ಲ.

ಕುಮಾರಸ್ವಾಮಿ ಈಗ ಹಿಂಜರಿಯುತ್ತಿಲ್ಲ ಅಂದ ಹಾಗೆ, ಬಿಜೆಪಿಯ ಜತೆ ಕೈಜೋಡಿಸುವ ವಿಷಯದಲ್ಲಿ ಕುಮಾರಸ್ವಾಮಿ ಅವರಿಗೆ ಈಗ ಯಾವ ಹಿಂಜರಿಕೆಯೂ ಉಳಿದಿಲ್ಲ. ಕಾರಣ? ಕರ್ನಾಟಕದ ಮುಸ್ಲಿಮರು ಈಗ ಜೆಡಿಎಸ್ ಜತೆಗಿಲ್ಲ ಎಂಬುದು ಈಗ ಕಡ್ಡಿ ಮುರಿದಷ್ಟು ಸ್ಪಷ್ಟವಾಗಿದೆ. ಎಲ್ಲಿಯವರೆಗೆ ಮುಸ್ಲಿಮರ ಮತಗಳನ್ನು ನೆಚ್ಚಿಕೊಳ್ಳುವ ಸ್ಥಿತಿ ಇತ್ತೋ, ಅಲ್ಲಿಯವರೆಗೆ
ಜೆಡಿಎಸ್ ಪಕ್ಷ ಸೆಕ್ಯುಲರಿಸಂ ಮಂತ್ರವನ್ನು ಜಪಿಸುವುದು ಅನಿವಾರ್ಯವಾಗಿತ್ತು.

ಆದರೆ ಕರ್ನಾಟಕದ ನೆಲೆಯಲ್ಲಿ ಬಿಜೆಪಿಯ ಹೊಡೆತದಿಂದ ಮುಸ್ಲಿಮರು ಎಷ್ಟು ಕಂಗೆಟ್ಟಿದ್ದರೆಂದರೆ, ಈ ಸಲ ಬಿಜೆಪಿಯೇ ನಾದರೂ ಮರಳಿ ಅಧಿಕಾರಕ್ಕೆ ಬಂದರೆ ತಾವು ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ಕರ್ನಾಟಕದ ನಾಲ್ಕಾರು ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟರೆ ಉಳಿದಂತೆ ಎಲ್ಲ ಕಡೆ ಸಾಲಿಡ್ಡಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು.

ಅಷ್ಟೇ ಅಲ್ಲ, ಈ ದಾರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವುದು ಎಂದರೆ ಪರೋಕ್ಷವಾಗಿ ಬಿಜೆಪಿಯನ್ನೇ ಬೆಂಬಲಿಸಿದಂತೆ ಎಂಬ ತೀರ್ಮಾನಕ್ಕೂ ಬಂದರು. ಪರಿಣಾಮ? ಸಿ.ಎಂ. ಇಬ್ರಾಹಿಂ ಅವರಂಥ ಮುಸ್ಲಿಂ ನಾಯಕನನ್ನು ಮುಂದಿಟ್ಟು ಕೊಂಡು ಚುನಾವಣೆಗೆ ಹೋದರೂ ಜೆಡಿಎಸ್ ಮಕಾಡೆ ಮಲಗುವ ಸ್ಥಿತಿ ಬಂತು. ಹೀಗೆ ರಾಜ್ಯದ ಮುಸ್ಲಿಮರು ಸಾರಾಸಗಟಾಗಿ ಕಾಂಗ್ರೆಸ್ ಜತೆ ನಿಂತ ಮೇಲೆ ಇನ್ನು ಅವರನ್ನು ನಂಬಿ ರಾಜಕಾರಣ ಮಾಡುವುದರಲ್ಲಿ ಅರ್ಥವೇ ಇಲ್ಲ ಅಂತ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಆ ದೃಷ್ಟಿಯಿಂದ ಕರ್ನಾಟಕದ ನೆಲೆಯಲ್ಲಿ ಬಿಜೆಪಿಯ ಜತೆ ಕೈಜೋಡಿಸದಿದ್ದರೆ ಜೆಡಿಎಸ್ ಪರಿಸ್ಥಿತಿ ಮತ್ತಷ್ಟು
ಕಷ್ಟಕರವಾಗಬಹುದು ಎಂಬುದು ಅವರ ಯೋಚನೆ.

ಅವರ ಈ ಯೋಚನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಹಮತವೂ ಇದೆ. ಎಲ್ಲಿಯವರೆಗೆ ಜೆಡಿಎಸ್ ವಿಷಯದಲ್ಲಿ ಮುಸ್ಲಿಮರಿಗೆ ವಿಶ್ವಾಸವಿತ್ತೋ, ಅಲ್ಲಿಯವರೆಗೆ ತಮ್ಮ ಪಕ್ಷಕ್ಕಿರುವ ಸೆಕ್ಯುಲರ್ ಫೇಸ್‌ಕಟ್ಟನ್ನು ಉಳಿಸಿಕೊಳ್ಳುವುದು ಅನಿವಾರ್ಯ ವಾಗಿತ್ತು. ಆದರೆ ಮುಸ್ಲಿಮರಿಗೀಗ ಜೆಡಿಎಸ್ ವಿಷಯದಲ್ಲಿ ನಂಬಿಕೆ ಇಲ್ಲದಿರುವುದರಿಂದ ಈ ಫೇಸ್‌ಕಟ್ಟನ್ನು ನೆಚ್ಚಿಕೊಂಡು ಇರುವ ಫೇಸ್‌ನ್ನೇ ಹಾಳು ಮಾಡಿಕೊಳ್ಳುವುದು ಗೌಡರಿಗೂ ಇಷ್ಟವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಮತ್ತು ಆ ಮೂಲಕ ಮುಸ್ಲಿಮರು ರಾಜಕಾರಣದ ಮುಖ್ಯವಾಹಿನಿಗೆ ಬಂದಿರುವುದರಿಂದ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಾ ಬಂದಿರುವ ಬಹುಸಂಖ್ಯಾತ ಒಕ್ಕಲಿಗ ಮತದಾರರಲ್ಲಿ ಒಂದು ಬಗೆಯ ಅಸಹನೆ ಮನೆಮಾಡಿದೆ.

ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬಲ್ಲ ಪರ್ಯಾಯ ಶಕ್ತಿಯನ್ನು ಗುರುತಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಮತದಾರರಲ್ಲಿರುವ ಇಂಥ ಮನಸ್ಥಿತಿಯನ್ನು ಎನ್‌ಕ್ಯಾಶ್ ಮಾಡಿಕೊಳ್ಳಬೇಕು ಎಂದರೆ ಈಗ ಬಿಜೆಪಿ ಜತೆ ಕೈಜೋಡಿಸುವುದು ಅನಿವಾರ್ಯ ಎಂಬುದು ಕುಮಾರಸ್ವಾಮಿ ಮತ್ತು ದೇವೇಗೌಡರ ಯೋಚನೆ. ಈ ಹಿನ್ನೆಲೆಯಲ್ಲಿ ದೇವೇಗೌಡರ ಸಮ್ಮತಿಯೊಂದಿಗೆ ಕುಮಾರಸ್ವಾಮಿ ಅವರು ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿ ಚರ್ಚಿಸಿದ್ದಾರೆ.

ಈ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ನಾಯಕರ ಮನಸ್ಥಿತಿ ಸ್ಪಷ್ಟವಾಗಿರುವುದರಿಂದ ತಮ್ಮ ಮುಂದಿನ ಹೆಜ್ಜೆ ಹೇಗಿರಬೇಕು
ಅಂತ ಅವರು ಯೋಚಿಸುತ್ತಿದ್ದಾರೆ. ಅಂದ ಹಾಗೆ, ಇಂಥ ಯೋಚನೆಗಳೆಲ್ಲದರ ನಡುವೆಯೂ ಅವರಿಗೆ ಒಂದು ವಿಷಯ ಸ್ಪಷ್ಟವಾಗಿದೆ. ಅದೆಂದರೆ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಬೇಕೆಂದರೆ ಜೆಡಿಎಸ್ ಮತ್ತು ಬಿಜೆಪಿ ಪರಸ್ಪರ ಕೈಜೋಡಿಸಲೇಬೇಕು ಎಂಬುದು.

ಎರಡು ಬಾರಿ ಆಫರ್ ಕೊಟ್ಟಿದ್ದರು ಮೋದಿ ಅಂದ ಹಾಗೆ, ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲೋತ್ಪಾಟನೆ ಮಾಡಬೇಕೆಂದರೆ ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡುವುದು ಅನಿವಾರ್ಯ ಅಂತ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆಯೇ ಕುಮಾರಸ್ವಾಮಿ ಅವರಿಗೆ ಹೇಳಿದ್ದರಂತೆ. ನಾಲ್ಕು ವರ್ಷದ ಹಿಂದೆ ಕುಮಾರ ಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರಕಾರ ಅಸ್ತಿತ್ವದಲ್ಲಿತ್ತಲ್ಲ, ಆ ಸಂದರ್ಭದಲ್ಲಿ ಅವರ ಸರಕಾರ ಅಲುಗಾಡುತ್ತಿರುವುದನ್ನು ಅರಿತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಗೆ ಬರುವಂತೆ ಕುಮಾರಸ್ವಾಮಿ ಅವರಿಗೆ ಹೇಳಿದ್ದರು.

ಅಂತೆಯೇ ಬಂದ ಕುಮಾರಸ್ವಾಮಿ ತಮ್ಮನ್ನು ಭೇಟಿಯಾದಾಗ ಮೋದಿಯವರು ನೇರವಾಗಿಯೇ ವಿಷಯ ಪ್ರಸ್ತಾಪಿಸಿದ್ದರು. ‘ಅರೇ, ಕುಮಾರ್ ಜೀ, ಕರ್ನಾಟಕದಲ್ಲಿ ನಿಮ್ಮ ನೇತೃತ್ವದ ಸರಕಾರವನ್ನು ಬೀಳಿಸಲು ಕಾಂಗ್ರೆಸ್ ನಾಯಕರು ಕಸರತ್ತು ಮಾಡುತ್ತಿದ್ದಾರೆ. ಈಗಿನ ಸ್ಥಿತಿ ನೋಡಿದರೆ ನಿಮ್ಮ ಸರಕಾರ ತುಂಬ ದಿನ ಉಳಿಯುವ ಸಾಧ್ಯತೆಯಿಲ್ಲ. ಹೀಗಾಗಿ ನೀವು ಬಿಜೆಪಿ ಜತೆ ಬಂದುಬಿಡಿ. ಮುಂದೆ ಅಧಿಕಾರ ಹಂಚಿಕೆಯ ಟರ್ಮ್ಸ್ ಆಂಡ್ ಕಂಡೀಷನ್ಸ್ ಬಗ್ಗೆ ಮಾತನಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನೀವು ಸಿಎಂ ಹುದ್ದೆಯಲ್ಲಿ ಕಂಟಿನ್ಯೂ ಆಗುತ್ತೀರಿ’ ಎಂದು ಮೋದಿಯವರು ಹೇಳಿದಾಗ, ತಂದೆಯವರ ಜತೆ ಮಾತನಾಡಿ ಹೇಳುತ್ತೇನೆ ಅಂತ ವಾಪಸ್ಸಾಗಿದ್ದರು ಕುಮಾರಸ್ವಾಮಿ.

ಆದರೆ ಈ ವಿಷಯದಲ್ಲಿ ಒಂದು ತೀರ್ಮಾನ ತೆಗೆದುಕೊಳ್ಳುವ ಮುನ್ನವೇ ಕರ್ನಾಟಕದಲ್ಲಿ ಅವರ ನೇತೃತ್ವದ ಸರಕಾರ ಉರುಳಿ ಬಿತ್ತು. ಮುಂದೆ ೨೦೧೯ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೂ ನರೇಂದ್ರ ಮೋದಿ ಮತ್ತು ಅಮಿತ್ ಶಾ
ಜೋಡಿಗೆ ಯಡಿಯೂರಪ್ಪ ವಿಷಯದಲ್ಲಿ ವಿಶ್ವಾಸ ಉಳಿಯಲಿಲ್ಲ. ಈ ಸಂದರ್ಭದಲ್ಲಿ ಪುನಃ ಕುಮಾರಸ್ವಾಮಿ ಅವರನ್ನು
ದಿಲ್ಲಿಗೆ ಆಹ್ವಾನಿಸಿದ್ದ ಪ್ರಧಾನಿ ನರೇಂದ್ರ ಮೋದಿ, ‘ನಿಮ್ಮ ಪಕ್ಷ ಬಿಜೆಪಿಯಲ್ಲಿ ವಿಲೀನವಾದರೆ ಒಳ್ಳೆಯದು, ನಿಮ್ಮ ಹಿತ
ಕಾಯುವ ವಿಷಯದಲ್ಲಿ ಯಾವ ಅನುಮಾನವೂ ಬೇಡ.

ಎಲ್ಲಕ್ಕಿಂತ ಮುಖ್ಯವಾಗಿ ನೀವು ಕೇಂದ್ರದಲ್ಲಿ ಮಂತ್ರಿಯಾಗುತ್ತೀರಿ’ ಎಂದರು. ಆದರೆ ಮೋದಿ ಮುಂದಿಟ್ಟ ಪ್ರಪೋಸಲ್ಲು
ಕುಮಾರಸ್ವಾಮಿ ಅವರಿಗೆ ಇಷ್ಟವಾದರೂ, ಮಾಜಿ ಪ್ರಧಾನಿ ದೇವೇಗೌಡರಿಗೆ ಒಪ್ಪಿಗೆಯಾಗಲಿಲ್ಲ. ಕಾರಣ? ಒಂದು ಸಲ
ತಾವು ಬಿಜೆಪಿಯಲ್ಲಿ ವಿಲೀನವಾದರೆ ಪ್ರತಿಯೊಂದಕ್ಕೂ ಬಡಿದಾಡುವ ಸ್ಥಿತಿ ಬರುತ್ತದೆ. ಆದರೆ ತಮ್ಮ ಪಕ್ಷವನ್ನು ಉಳಿಸಿ
ಕೊಂಡರೆ ಜಗ್ಗಾಡಲು ಅವಕಾಶವಾದರೂ ಇರುತ್ತದೆ ಎಂಬುದು.

ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಒಂದು ಹಂತಕ್ಕೆ ಹೋಗಿ ಜಗ್ಗಾಡಬೇಕು ಎಂದರೆ ಜೆಡಿಎಸ್ ಪಕ್ಷಕ್ಕೀಗ ಶಕ್ತಿ ಇಲ್ಲ. ಹೀಗಾಗಿ ಬಿಜೆಪಿ ಜತೆ ಕೈಜೋಡಿಸುವುದೇ ಬೆಸ್ಟು ಅಂತ ಅದು ಯೋಚಿಸತೊಡಗಿದೆ. ಕುಮಾರಸ್ವಾಮಿ ಅವರ ಇತ್ತೀಚಿನ ದಿಲ್ಲಿ ಭೇಟಿಯ ನಂತರ ಈ ವಿಷಯದಲ್ಲಿ ಅದು ಮತ್ತಷ್ಟು ಸ್ಪಷ್ಟವಾಗತೊಡಗಿದೆ. ಮುಂದೇನೋ?