Sunday, 11th May 2025

Harish Kera Column: ರಾಷ್ಟ್ರಕವಿ ಆಯ್ಕೆ ಮಾಡುವ ಧೈರ್ಯ ಇದೆಯಾ?

ಕಾಡುದಾರಿ ಅಂಕಣ

ಹರೀಶ ಕೇರ

ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಮುಂದಿನ ರಾಷ್ಟ್ರಕವಿ ಯಾರೆಂದು ಘೋಷಿಸಲು ಕ್ರಮ ಕೈಗೊಳ್ಳಬೇಕು” ಎಂದು ನಿರ್ಣಯ ತೆಗೆದುಕೊಂಡಿದ್ದೇ ತಡ, ಕೆಲವು ಹಿರಿಯ ಸಾಹಿತಿಗಳು ಗೆಜ್ಜೆ ಕಟ್ಟಿಕೊಳ್ಳುತ್ತ ನಡುಗುವ ಹೆಜ್ಜೆಗಳಲ್ಲಿ ರಂಗವೇರಲು ಕಾತರರಾಗಿದ್ದಾರೆ ಮತ್ತು ತಮ್ಮ ಹಿಂಬಾಲಕರನ್ನು ಹುಯಿಲೆಬ್ಬಿಸಲು ಛೂಬಿಡುತ್ತಿದ್ದಾರೆ ಎಂಬ ಸುದ್ದಿಗಳು ನಂಬಲರ್ಹ ಮೂಲಗಳಿಂದ ವರದಿಯಾಗಿವೆ.

ಸದ್ಯಕ್ಕೆ ರಾಷ್ಟ್ರಕವಿ ಪದವಿ ಎಂಬುದು ಮದುವೆಯಾಗಲು ಅಷ್ಟೇನೂ ಇಷ್ಟವಿಲ್ಲದ ರಾಜಕುಮಾರಿಯಂತೆಯೂ, ಸಾಹಿತಿಗಳು ಆಕೆಯ ಅರಮನೆಯ ಕಿಡಕಿಯ ಮುಂದೆ ನಾನಾ ಚೇಷ್ಟೆಗಳನ್ನು ಮಾಡುತ್ತ ಓಡಾಡುತ್ತಿರುವ ಸ್ವಯಂವರಾಕಾಂಕ್ಷಿ ಪಡ್ಡೆಗಳಂತೆಯೂ ಕಾಣಿಸುತ್ತಿದ್ದಾರೆ ಎಂಬುದು ಕೆಲವರ ಕುಚೋದ್ಯ. ನಮ್ಮ ನಾಡಿನ ಸಾಕ್ಷಿಪ್ರಜ್ಞೆಗಳಾಗಿರುವ ಸಾಹಿತಿಗಳನ್ನು ಹೀಗೆಲ್ಲಾ ಆಡಿಕೊಳ್ಳುವುದು ತರವಲ್ಲ ಎಂದು ಈ ವಿನೋದಾಭಿಲಾಷಿಗಳಿಗೆ ಹೇಳೋಣ.

ಜೋಕುಗಳು ಹಾಗಿರಲಿ. ರಾಷ್ಟ್ರಕವಿ ಎಂದರೇನು ಮತ್ತು ಆ ಬಿರುದನ್ನು ಯಾರಿಗೆ ಕೊಡಲಾಗುತ್ತದೆ ಎಂಬುದನ್ನು ಮೊದಲು ನೋಡೋಣ. ಕನ್ನಡ ನಾಡಿನಲ್ಲಿ ಸದ್ಯ ಮೂವರನ್ನು ಈ ಬಿರುದಿನಿಂದ ಗುರುತಿಸಲಾಗಿದೆ. ಮಂಜೇಶ್ವರ ಗೋವಿಂದ ಪೈ, ಕುವೆಂಪು ಹಾಗೂ ಜಿಎಸ್‌ ಶಿವರುದ್ರಪ್ಪ. 2006ರಲ್ಲಿ ಜಿಎಸ್‌ಎಸ್ ಅವರಿಗೆ ನೀಡಿದ್ದೇ ಕೊನೆ.

ಹದಿನೆಂಟು ವರ್ಷಗಳಿಂದ ಇದನ್ನು ಯಾರಿಗೂ ಕೊಡುವ ಧೈರ್ಯವನ್ನು ಯಾವ ಸರಕಾರವೂ ಮಾಡಿಲ್ಲ. ದೇಶದ ಇತರ ಕಡೆ ಕೂಡ ಇಂಥದೊಂದು ಕೊಂಡಾಟವನ್ನು ನೀಡಿರುವುದು ಕೆಲವೇ ಕೆಲವರಿಗೆ ಮಾತ್ರ- ಹರಿವಂಶರಾಯ್‌ ಬಚ್ಚನ್‌, ಮೈಥಿಲಿ ಶರಣ ಗುಪ್ತ, ರಾಮಧಾರಿ ಸಿಂಗ್‌ ದಿನಕರ್‌, ಕವಿ ಪ್ರದೀಪ್. ರವೀಂದ್ರನಾಥ್ ಟಾಗೋರ್‌ ಅವರನ್ನು ವಿಶ್ವಕವಿ, ಕವಿಗುರು, ಗುರುದೇವ ಎಂದೆಲ್ಲ ಕರೆಯಲಾಗುತ್ತಿತ್ತು ಎಂದೂ, ಹೀಗೆಲ್ಲ ಕರೆದವರು ಸರ್ಕಾರ ಅಲ್ಲವೆಂದೂ ನೆನಪಿಡಬೇಕು. ಮಹಾತ್ಮ ಗಾಂಧಿ ಮೊದಲಿಗೆ ಟಾಗೋರ್‌ ಅವರನ್ನು ಗುರುದೇವ ಎಂದು ಕರೆದರೆಂದು ಹೇಳಲಾಗು ತ್ತದೆ. ನಿಜವಿದ್ದರೂ ಇರಬಹುದು. 1950ರಲ್ಲಿ ಜನಗಣಮನವನ್ನ ರಾಷ್ಟ್ರಗೀತೆ ಎಂದು ಅಂಗೀಕರಿಸಿದ ಬಳಿಕ ಟಾಗೋರ್‌ ಅವರನ್ನು ರಾಷ್ಟ್ರಕವಿ ಎಂದು ಹೆಚ್ಚು ಒಪ್ಪಲಾಯಿತು. ಆದರೆ ಮಂಜೇಶ್ವರ ಗೋವಿಂದ ಪೈ ಅವರಿಗೆ 1949ರಲ್ಲಿಯೇ ಆಗಿನ ಕನ್ನಡನಾಡನ್ನೂ ಒಳಗೊಂಡ ಮದ್ರಾಸ್‌ ಸರಕಾರ ರಾಷ್ಟ್ರಕವಿ ಬಿರುದನ್ನು ಕೊಡಮಾಡಿತ್ತು. ಹೀಗಾಗಿ ʼರಾಷ್ಟ್ರಕವಿʼ ಎಂಬ ಚೋದ್ಯ ಆರಂಭವಾದದ್ದು ಕರ್ನಾಟಕದಿಂದಲೇ ಎನ್ನಬಹುದು.

ರಾಷ್ಟ್ರಕವಿ ಎಂಬುದರ ಮೂಲಕಲ್ಪನೆ ಇಂಗ್ಲೆಂಡಿನಿಂದ ಬಂದಿರಬಹುದು. ಅಲ್ಲಿ ಪೊಯೆಟ್‌ ಲಾರಿಯೇಟ್‌ (Poet laureate) ಎಂಬುದು ಸುಮಾರಾಗಿ ನಮ್ಮ ರಾಷ್ಟ್ರಕವಿಗೆ ಹೊಂದುವ ಪರಿಕಲ್ಪನೆ. ಆದರೆ ಅದೂ ಸರಿಯಲ್ಲ. ʼಆಸ್ಥಾನ ಕವಿʼ ಎಂದರೇ ಹೆಚ್ಚು ಸರಿ. ಇಂಗ್ಲೆಂಡಿನ ಪೊಯೆಟ್‌ ಲಾರಿಯೇಟ್‌ಗಳು ಮಾಡುತ್ತಿದ್ದುದು ಹೆಚ್ಚಾಗಿ ಆಗಿನ ರಾಜ ಪ್ರಭುತ್ವವನ್ನು ಹೊಗಳುವ ಕವಿತೆಗಳನ್ನು ಬರೆಯುವುದು. ರಾಜ ಅಥವಾ ರಾಣಿ ಪಟ್ಟವೇರಿದರೆ, ಅರಮನೆಯಲ್ಲಿ ಮಗು ಜನಿಸಿದರೆ, ಯಾವುದಾದರೂ ಯುದ್ಧದಲ್ಲಿ ರಾಜ ಜಯ ಗಳಿಸಿದರೆ ಆ ಸಂದರ್ಭಕ್ಕೆ ತಕ್ಕಂತೆ ಪ್ರಶಂಸೆಯ ಗೀತೆಗಳನ್ನು ಇವರು ಬರೆಯಬೇಕಿತ್ತು. ಇದನ್ನು ಯಾರಾದರೂ ಮಾಡಬಹುದಾಗಿತ್ತಾದರೂ, ಪೊಯೆಟ್‌ ಲಾರಿಯೇಟ್‌ಗಳು ಮಾಡಿದರೆ ಅದಕ್ಕೆ ಹೆಚ್ಚು ತೂಕವಿರುತ್ತಿತ್ತು. ಇದನ್ನು ಹೊರತುಪಡಿಸಿ ಘನವಾದ ಕಾವ್ಯಗಳನ್ನು ಆತ ಬರೆದಿದ್ದರೆ ಅದು ಆತನ ಪ್ರತಿಭೆಯ ಫಲ ಹಾಗೂ ಜನತೆಯ ಪುಣ್ಯ. ಭಾರತದಲ್ಲೂ ಇಂಥ ಆಸ್ಥಾನ ಕವಿಗಳಿ ದ್ದರು. ಭೋಜರಾಜನ ಆಸ್ಥಾನದಲ್ಲಿ ಕಾಳಿದಾಸ, ಅರಿಕೇಸರಿಯ ಆಸ್ಥಾನದಲ್ಲಿ ಪಂಪ ಆಸ್ಥಾನ ಕವಿಗಳಾಗಿದ್ದರು. ಆದರೆ ಇವರ ಕೃತಿಗಳು ಅದರಿಂದಾಚೆಗೂ ವಿಶ್ವಮಾನ್ಯವಾಗಿವೆ.

ಕನ್ನಡದಲ್ಲಿ ರಾಷ್ಟ್ರಕವಿ ಮಾನ್ಯತೆ ಪಡೆದ ಮೂವರೂ ಇಂಥದೊಂದು ಸ್ಥಾನಕ್ಕೆ ಗೌರವ ತಂದುಕೊಟ್ಟವರೇ. ಆದ್ದರಿಂದಲೇ ಈಗ ಅಂಥ ಇನ್ನೊಬ್ಬರನ್ನು ಹುಡುಕುವುದು ಕಷ್ಟವಾಗಿದೆ. ನಮ್ಮ ರಾಷ್ಟ್ರಕವಿ ಹೇಗಿರಬೇಕು ಎಂದು ಕನ್ನಡ ನಾಡಿನ ಜನತೆ ಅಪೇಕ್ಷಿಸಿದರೆ ಅದನ್ನು ತಪ್ಪು ಎನ್ನಲಾಗದು. ಆದರೆ ನಿಜಕ್ಕೂ ರಾಷ್ಟ್ರಕವಿ ಯಾರು ಎಂಬ ಬಗ್ಗೆ ನಾಡಿನ ಜನತೆ ತಲೆ ಕೆಡಿಸಿಕೊಳ್ಳುತ್ತದೆಯೆ? ಕರ್ನಾಟಕದಲ್ಲಿ ಸಾಹಿತ್ಯವನ್ನು, ಅದರಲ್ಲೂ ಕಾವ್ಯವನ್ನು ಪ್ರೀತಿಯಿಂದ ಓದುವ ಜನಸಂಖ್ಯೆ ಎಷ್ಟಿದ್ದೀತು? ರಾಷ್ಟ್ರಕವಿ ಎಂದು ಯಾರನ್ನಾದರೂ ಕರೆದರೆ ಸ್ವಲ್ಪಮಟ್ಟಿಗೆ ಅವರ ಸಾಹಿತ್ಯವನ್ನು ಹುಡುಕಿ ಓದುವವರ ಸಂಖ್ಯೆ ಹೆಚ್ಚಾದೀತು; ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವರು ಹೆಚ್ಚು ಹೆಚ್ಚು ಬೇಕಾಗಬಹುದು. ಆದರೆ ಹಾಗೆಂದು ರಾಷ್ಟ್ರೀಯ ಮಾನ್ಯತೆ, ಇಂಗ್ಲಿಷ್‌ ಅಥವಾ ಹಿಂದಿಗೆ ಅನುವಾದಗಳು ಹೆಚ್ಚಬಹುದು ಎಂಬ ಖಾತ್ರಿಯಿಲ್ಲ. ಇದಕ್ಕೆ ಜಿಎಸ್ಸೆಸ್‌ ಅವರೇ ಉದಾಹರಣೆ. ಅವರನ್ನು ರಾಷ್ಟ್ರಕವಿ ಎಂದು ಕರೆದು ನಾವು ಖುಷಿಪಟ್ಟುಕೊಂಡೆವು, ಆದರೆ ಅದರಿಂದ ಅವರ ಸಾಹಿತ್ಯಕ್ಕೆ ಹೆಚ್ಚಿನ ಬೇಡಿಕೆ ಬಂದದ್ದೇನೂ ಕಾಣಲಿಲ್ಲ.

ರಾಷ್ಟ್ರಕವಿ ಎಂಬುದರ ಕುರಿತ ಇಂದಿಗೆ ಸರಿಹೊಂದದ ರಾಜಪ್ರಭುತ್ವದ ಪರಿಕಲ್ಪನೆಯನ್ನು ನಾವೀಗ ಕೈಬಿಡೋಣ. ಹಾಗಾದರೆ ಪ್ರಜಾಸತ್ತೆಯ ಈ ಕಾಲದಲ್ಲಿ ಒಬ್ಬ ರಾಷ್ಟ್ರಕವಿ ಹೇಗಿರಬೇಕು? ಇದಕ್ಕೆ ಕುವೆಂಪು ಅವರನ್ನೇ ಮಾನದಂಡ ವಾಗಿ ಇಟ್ಟುಕೊಳ್ಳಬಹುದು. ಅವರು ಪ್ರಾಧ್ಯಾಪಕ, ವಿಶ್ವವಿದ್ಯಾಲಯದ ಕುಲಪತಿ ಎಲ್ಲ ಆಗಿದ್ದರು ನಿಜ; ಆದರೆ ಎಂದೂ ಸರ್ಕಾರದ ಅಥವಾ ಮಂತ್ರಿಗಳ ಮುಂದೆ ತಲೆಬಾಗಲಿಲ್ಲ. ಒಂದೊಮ್ಮೆ, ಮೈಸೂರು ಅರಮನೆಗೆ ಬಂದು ಯುವರಾಜರಿಗೆ ಮನೆಪಾಠ ಮಾಡುವಂತೆ ಅವರಿಗೆ ಆಫರ್‌ ಮಾಡಲಾಗಿತ್ತಂತೆ. ಆದರೆ ಅವರು ಅದನ್ನು ಧಿಕ್ಕರಿಸಿ ದರು ಮಾತ್ರ ಅಲ್ಲ, ಯುವರಾಜರಿಗೆ ಕಲಿಕೆ ಬೇಕಿದ್ದರೆ ಕಾಲೇಜಿಗೇ ಬರಲಿ ಎಂದು ಹೇಳಿದರಂತೆ. ಇನ್ನೊಂದು ಕುತೂಹಲಕಾರಿ ಘಟನೆ 1949ರಲ್ಲಿ ಕೆಸಿ ರೆಡ್ಡಿ ಅವರ ಸಿಎಂಗಿರಿಯ ಕಾಲದಲ್ಲಿ ನಡೆದದ್ದು. ಆಗ ಅಖಂಡ ಕರ್ನಾಟಕದ ಏಕೀಕರಣದ ಹೋರಾಟ ನಡೆದಿತ್ತು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲಾ ಒಂದುಗೂಡಬೇಕು ಅನ್ನುವ ಬೇಡಿಕೆ ಚಳವಳಿಯಾಗಿತ್ತು. ಅದಕ್ಕೆ ಕುವೆಂಪು ಒತ್ತಾಸೆಯಾಗಿದ್ದರು. ಏಕೀಕರಣಕ್ಕೆ ಕೆ. ಚೆಂಗಲರಾಯ ರೆಡ್ಡಿಯವರ ಸರಕಾರದ ಸಹಮತವಿರಲಿಲ್ಲ. ಇದರಿಂದ ಕಿರಿಕಿರಿಯಾದ ಸರ್ಕಾರದ ಸಚಿವರೊಬ್ಬರು, ಸರ್ಕಾರಿ ಕೆಲಸದಲ್ಲಿದ್ದ ಕುವೆಂಪುಗೆ ನೋಟೀಸ್‌ ನೀಡಿದ್ದರು. ಆ ನೋಟೀಸ್‌ಗೆ ಉತ್ತರಿಸದೆ ಬದಿಗಿಟ್ಟ ಪುಟ್ಟಪ್ಪನವರು ಒಂದು ಕವಿತೆ ಬರೆದರು:

“ಅಖಂಡ ಕರ್ನಾಟಕ ಅಲ್ತೋ/ ನಮ್ಮ ಬೂಟಾಟದ ರಾಜಕೀಯ ನಾಟಕ/ ಇಂದು ಬಂದು ನಾಳೆ ಸಂದು ಹೋವ/ ಸಚಿವ ಮಂಡಲ/ ರಚಿಸುವೊಂದು ಕೃತಕವಲ್ತೋ/ ಸಿರಿಗನ್ನಡ ಸರಸ್ವತಿಯ/ ವಜ್ರಕುಂಡಲ” ಹೀಗೆ ಪ್ರಾರಂಭ ವಾಗುತ್ತದೆ ಕವಿತೆ. “ನೃಪತುಂಗನೆ ಚಕ್ರವರ್ತಿ/ ಪಂಪನಿಲ್ಲಿ ಮುಖ್ಯಮಂತ್ರಿ/ ರನ್ನ ಜನ್ನ ನಾಗವರ್ಮ/ ರಾಘವಾಂಕ ಹರಿಹರ/ ಬಸವೇಶ್ವರ ನಾರಣಪ್ಪ/ ಸರ್ವಜ್ಞ ಷಡಕ್ಷರ/ ಸರಸ್ವತಿಯೆ ರಚಿಸಿದೊಂದು/ ನಿತ್ಯ ಸಚಿವ ಮಂಡಲ/ ತನಗೆ ರುಚಿರ ಕುಂಡಲ” ಎಂದು ಮುಂದುವರಯುತ್ತದೆ. ಅಂದರೆ ಸರ್ಕಾರ ತನಗೆ ಆಜ್ಞೆ ಮಾಡುವ ಸ್ಥಾನದಲ್ಲಿದೆ ಎಂದು ಕುವೆಂಪು ಎಂದೂ ಭಾವಿಸಿರಲೇ ಇಲ್ಲ. ಅವರ ಭಾವಕೋಶದ ಸರಕಾರವೇ ಬೇರೆಯಾಗಿತ್ತು. ಅಲ್ಲಿ ನೃಪತುಂಗನೇ ಚರ್ಕವರ್ತಿಯಾಗಿದ್ದ. ಪಂಪ ಮುಖ್ಯಮಂತ್ರಿಯಾಗಿದ್ದ. ರನ್ನ ಜನ್ನರೆಲ್ಲ ಸಚಿವ ಸಂಪುಟದಲ್ಲಿದ್ದರು. ಅದು ವಾಗ್ದೇವಿಯೇ ರಚಿಸಿದ ಸಂಪುಟವಾಗಿತ್ತು. ರಾಜಗೀಜರೋ ಮಂತ್ರಿಗಳೋ ಕೊಡಬಹುದಾದ ಪದವಿಗಿರಿಗಳಿಗಿಂತ ಅದೇ ಅವರಿಗೆ ಹೆಚ್ಚಾಗಿತ್ತು. ರಾಷ್ಟ್ರಕವಿ ಪದವಿಗೆ ಕುವೆಂಪು ತಮ್ಮದೇ ಆದ ಘನತೆಯ ಮೆರುಗನ್ನು ಸೇರಿಸಿದ್ದರು.

ಇದರಿಂದ ಕಲಿಯಬಹುದಾದ ಮುಖ್ಯ ಸಂಗತಿ ಎಂದರೆ, ರಾಷ್ಟ್ರಕವಿ ಸ್ವತಂತ್ರ ಚಿಂತನೆ ಹೊಂದಿರಬೇಕು. ಸರಕಾರದ ಚಮಚಾಗಿರಿ ಮಾಡಲು ನಿರಾಕರಿಸಬೇಕು. ಬದಲಾಗಿ ಜನಸಮುದಾಯದ ಧ್ವನಿಯನ್ನು ಸರಕಾರದ ಮುಂದೆ ಮಂಡಿಸುವವನಾಗಿರಬೇಕು. ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಎಂಬ ಇಬ್ಬಾಯಿ ಕತ್ತಿ ತಳಸಮುದಾಯ ಗಳನ್ನು ಹೋಗುತ್ತಲೂ ಬರುತ್ತಲೂ ಕೊಯ್ಯುತ್ತ ಇರುತ್ತದೆ. ಇದಕ್ಕೆ ಶೋಷಕ ಜಾತಿ- ವರ್ಗಗಳು ಸಾಥ್‌ ಕೊಡುತ್ತವೆ. ಈ ಸತ್ಯವನ್ನು ರಾಷ್ಟ್ರಕವಿಯಾಗಬಯಸುವವನು ಕಟುವಾಗಿ ಹೇಳಬಲ್ಲವನಾಗಿರಬೇಕು. ಆದರೆ ಇದರ ಪರಿಣಾಮ ದಿಂದ ಆತ ಅನೇಕರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ ತನ್ನವರ ವಿರೋಧವನ್ನೇ ಎದುರಿಸಬೇಕಾಗುತ್ತದೆ. ಕುವೆಂಪು ಅವರ ಈ ಮಾತುಗಳನ್ನು ಗಮನಿಸಿ: “ಪುರೋಹಿತಶಾಹಿ ಹುಲಿಯಿದ್ದಂತೆ. ಇದಕ್ಕೆ ಸಣ್ಣಪುಟ್ಟ ಕಲ್ಲುಗಳನ್ನು ಜೇಬಲ್ಲಿಟ್ಟುಕೊಂಡು ಹೋಗಿ ಹೊಡೆಯುತ್ತೇನೆ ಎಂದರೆ ಹುಡುಗಾಟವಲ್ಲ. ಅದನ್ನು ಹೊಡೆಯಬೇಕಾದರೆ ಮೊದಲು ಮದ್ದುಗುಂಡುಗಳನ್ನು ತಯಾರು ಮಾಡಬೇಕು. ನಾವು ಹೇಳುವ ಮದ್ದುಗುಂಡು ಗಳು ರೂಪಕವಾದುದು ಎಂದು ಇಟ್ಟುಕೊಳ್ಳೋಣ. ವಾಚ್ಯವಾಗಿಯೇ ಹೊಡೆಯಬೇಕೆಂದಲ್ಲ. ಈ ವಿಚಿತ್ರ ಬೇಟೆಯಲ್ಲಿ ಮೊದಲ ಗುಂಡು ತಗಲಬೇಕಾಗಿರುವುದು ಹುಲಿಯ ತಲೆಗಲ್ಲ..ನಿಮ್ಮ ತಲೆಗೇ….ತಲೆ..ತಲೆ. ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್‌ ಮಾಡಬೇಕು. ಆ ಪುರೋಹಿತ ವರ್ಗದ್ದಲ್ಲ, ನಿಮ್ಮ ತಲೆ.” ಹೀಗೆ ಮಾತಾಡುವ ಕವಿ ಮಹಾತ್ಮನಾಗಲು ಇಲ್ಲವೇ ಹುತಾತ್ಮನಾಗಲು ಸಿದ್ಧವಿರಬೇಕಾಗುತ್ತದೆ.

ಇಷ್ಟೆಲ್ಲ ಆದಾಗ, ಹಾಗಿದ್ದರೆ ರಾಷ್ಟ್ರಕವಿಯಾಗಲು ಕವಿತ್ವದ ಪ್ರತಿಭೆ ಏನೂ ಬೇಡವೇ ಎಂಬ ಪ್ರಶ್ನೆ ರೊಂಯ್ಯನೆ ಬಂದೆರಗಬಹುದು. ಅದು ಮುಖ್ಯವಾದುದು. ಕವಿತ್ವವನ್ನು ಆಚೆಗಿಟ್ಟು ರಾಷ್ಟ್ರಕವಿಯನ್ನು ಯಾರೂ ಆಯ್ಕೆ ಮಾಡಲು ಸಾಧ್ಯವಿಲ್ಲ. ವರ್ತಮಾನದ ಉತ್ತಮ ಕವಿಯೇ ಆ ಬಿರುದಿಗೆ ಪಾತ್ರವಾಗುವುದು ಚೆನ್ನಾಗಿರುತ್ತದೆ. ಆದರ ಕವಿತ್ವ ಎಂಬುದನ್ನು ನಾವು ʼಪದ್ಯ/ಕಾವ್ಯ ಬರೆಯುವುದುʼ ಎಂಬುದಕ್ಕೆ ಸೀಮಿತಗೊಳಿಸಿಕೊಂಡರೆ ಸಮಸ್ಯೆ ಶುರುವಾಗುತ್ತದೆ. ವರ್ತಮಾನದ ಕವಿತ್ವ ಬರೀ ಕಾವ್ಯ ರಚಿಸುವುದಕ್ಕೆ ಸೀಮಿತವಲ್ಲ. ಅದು ಇನ್ನೂ ಎಷ್ಟೆಷ್ಟೋ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರಿಸುತ್ತ ಹೋಗಬೇಕಾಗುತ್ತದೆ. ಕೊನೇ ಪಕ್ಷ ಪ್ರಶ್ನೆಗಳನ್ನಾದರೂ ಪ್ರಭುತ್ವದ ಹಾಗೂ ಜನತೆಯ ಮುಂದೆ ಇಡಬೇಕಾಗುತ್ತದೆ. ಅದನ್ನು ಗದ್ಯದಲ್ಲೂ, ನಾಟಕದಲ್ಲೂ ಮಾಡಬಹುದು. ಶೇಕ್ಸ್‌ಪಿ ಯರ್‌ ಕಾಲದಲ್ಲಿ ಪೊಯೆಟ್‌ ಲಾರಿಯೇಟ್‌ ಆಗಲು ಆತನಿಗಿಂತ ಅರ್ಹರು ಯಾರಿದ್ದರು? ಅದರೆ ಅವನು ನಾಟಕಕಾರನಾಗಿಯೇ ಪ್ರಸಿದ್ಧ. ಅವನ ನಾಟಕಗಳು ಉತ್ತಮ ಕಾವ್ಯ ಅಲ್ಲವೆಂದು ಹೇಳಬಹುದಾ? ಹೀಗೆ ಕವಿತ್ವದ ಪ್ರಶ್ನೆ ಜಟಿಲವಾದುದು.

ಈಗೇನೋ ರಾಷ್ಟ್ರಕವಿ ಹೆಸರು ಘೋಷಿಸುತ್ತೇವೆ ಎಂದು ಸರ್ಕಾರ ಮುಂದೆ ಬಂದರೆ, ಹಲವು ಸಾಹಿತಿಗಳು ಲಾಬಿಗೆ ಮುಂದಾಗಬಹುದು. ಅಂಥವರು ಬೇಕಾದರೆ ಹಾಗೆ ಕರೆಸಿಕೊಳ್ಳಲಿ. ಅದನ್ನು ನಾವೂ ಯಾವ ರೀತಿಯಲ್ಲಿ ನೋಡಬೇಕೋ ಹಾಗೆ ನೋಡೋಣ. ಆದರೆ ಸರಕಾರಕ್ಕೆ ನಿಜಕ್ಕೂ ಧೈರ್ಯವಿದ್ದರೆ, ತನ್ನನ್ನು ಸಕಾರಣವಾಗಿ ಟೀಕಿಸುವವನಿಗೆ ಈ ಬಿರುದು ನೀಡಬೇಕಾಗುತ್ತದೆ. ಯಾವ ಸರಕಾರವೂ ಹಾಗೆ ಮಾಡದು; ಇದು ಕೇಂದ್ರವನ್ನೂ ಸೇರಿಸಿ ಹೇಳುತ್ತಿರುವ ಮಾತು. ಸರಕಾರಗಳಿಗೆ ಆ ಧೈರ್ಯ ಇದೆಯಾ?

ಇದನ್ನೂ ಓದಿ: Harish Kera Column: ಇದು ಬರೀ ಬಾಳೆಹಣ್ಣಲ್ಲವೋ ಅಣ್ಣ!