Wednesday, 14th May 2025

ರಾಜ್ಯಪಾಲರ ನಡೆ ಪಕ್ಷಪಾತವಷ್ಟೇ ಅಲ್ಲ, ಭ್ರಷ್ಟಾಚಾರಕ್ಕೆ ಸಮ !

ರಾಜ್ಯಪಾಲರ ನೇಮಕದ ಪ್ರಶ್ನೆ ಬಂದಾಗ, ಕೇಂದ್ರ ಸರಕಾರ ತನಗೆ ಬೇಕಾದವರನ್ನು ಅಥವಾ ತನ್ನ ಏಜೆಂಟರನ್ನು ಕಳಿಸಿ, ರಾಜ್ಯ ಸರಕಾರವನ್ನು ಅಸ್ಥಿರ
ಗೊಳಿಸಬಹುದಲ್ಲವೇ, ಅವರು ಪಕ್ಷಪಾತತನದಿಂದ ವರ್ತಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಸಂವಿಧಾನ ಬರೆದ  ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕೇಳಿದಾಗ, ‘ಈ ಪ್ರಶ್ನೆ ಸಂವಿಧಾನ ರಚಿಸುವಾಗ ನಮ್ಮಲ್ಲಿ ಚರ್ಚೆಗೆ ಬಂದಿತು. ಆದರೆ ರಾಜ್ಯಪಾಲರು ಪಕ್ಷಪಾತಿಯಾಗದೇ ಇರಲು ಸಾಧ್ಯವಿಲ್ಲ.

ಕಾರಣ ಅವರು ಒಂದು ಪಕ್ಷದಿಂದ ನೇಮಕವಾಗಿರುತ್ತಾರೆ. ಆದರೆ ಅವರ ನಡೆ ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರ ನಿಷ್ಪಕ್ಷಪಾತವಾಗಿರಬೇಕು. ತಮ್ಮ ನಿರ್ಧಾರದಿಂದಲೇ ಅವರು ತಾವು ಪಕ್ಷಪಾತಿ ಅಲ್ಲ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು, ಜನರ ಕಣ್ಣಲ್ಲಿ ಅವರು ಸಂದೇಹಕ್ಕೆ ತುತ್ತಾಗಬಾರದು’ ಎಂದು ಹೇಳಿದ್ದರು. ಈ ಮಾತು ಸ್ಪೀಕರ್ ನಡೆ-ನುಡಿಗೂ ಅನ್ವಯ. ರಾಜ್ಯಪಾಲರಾಗಿರಲಿ, ಸ್ಪೀಕರ್ ಆಗಿರಲಿ, ಆಯಾ ಹುದ್ದೆಗಳನ್ನು ಅಲಂಕರಿಸಿದ ಬಳಿಕ, ತಮ್ಮ ಹುದ್ದೆಗೆ ರಾಜಕೀಯ ಸೋಂಕದಂತೆ, ಪಕ್ಷಪಾತಿ ಎಂಬ ಕಳಂಕ ತಟ್ಟದಂತೆ ನೋಡಿಕೊಳ್ಳಬೇಕು. ಅಂಥ ಗುಣ ಗ್ರಾಹಿಗಳನ್ನು ಎಚ್ಚರಿಕೆಯಿಂದ ಆಯಾ ಹುದ್ದೆಗೆ ನೇಮಿಸಬೇಕು ಎಂದು ಸಂವಿಧಾನ ರಚಿಸಿದವರು ಆಶಿಸಿದ್ದರು.

ಆದರೆ ಈಗ ಆಗುತ್ತಿರುವುದೇನು? ಎಂಥವರಿಗಾದರೂ ಗೊತ್ತಾಗುತ್ತದೆ ಕರ್ನಾಟಕದ ಹಾಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ನಡೆ ಸರಿ ಯಾದುದಲ್ಲವೆಂದು, ಅವರು ಪಕ್ಷಪಾತ ಮಾಡುತ್ತಿದ್ದಾರೆ ಮತ್ತು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆಂದು. ಅವರು ರಾಜ್ಯಪಾಲ ಹುದ್ದೆಯ ಘನತೆಗೆ ಮಸಿ ಬಳಿದಿದ್ದಾರೆ. ತಾವು ಯಾರದ್ದೇ ಏಜೆಂಟ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಆ ಹುದ್ದೆಯ ಮರ್ಯಾದೆಯನ್ನು ಕಳೆದಿದ್ದಾರೆ. ಉನ್ನತ ಹುದ್ದೆಯಲ್ಲಿದ್ದವರು ಈ ರೀತಿ ಚಿಲ್ಲರೆಯಾಗಿ ನಡೆದುಕೊಂಡರೆ ನಮ್ಮ ವ್ಯವಸ್ಥೆ ಮೇಲೆ ಜನರಿಗೆ ವಿಶ್ವಾಸ ಹೊರಟುಹೋಗುತ್ತದೆ.

ಮುಖ್ಯಮಂತ್ರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರು ಸಲ್ಲಿಸಿದ ದಿನವೇ ರಾಜ್ಯಪಾಲರು ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡುತ್ತಾರೆ. ಅಬ್ರಹಾಂ ನೀಡಿದ ಇಪ್ಪತ್ತೆರಡು ಪುಟಗಳ ದೂರನ್ನು ಓದಲು ಮತ್ತು ಮನನ ಮಾಡಿಕೊಳ್ಳಲು ಮತ್ತು ಕಾನೂನು ತಜ್ಞರೊಂದಿಗೆ
ಚರ್ಚಿಸಲು ಕನಿಷ್ಠ ಒಂದೆರಡು ದಿನಗಳಾದರೂ ಬೇಕು. ನಂತರ ಒಂದು ನಿರ್ಧಾರಕ್ಕೆ ಬರಬೇಕು. ಶೋಕಾಸ್ ನೋಟಿಸ್ ನೀಡುವ ಹೊತ್ತಿಗೆ ಏನಿಲ್ಲ ವೆಂದರೂ ನಾಲ್ಕು ದಿನಗಳಾದರೂ ಬೇಕು.

ಆದರೆ ರಾಜ್ಯಪಾಲರು ದೂರು ಸ್ವೀಕರಿಸಿದ ಎರಡು ಗಂಟೆಯೊಳಗೆ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡುತ್ತಾರೆ. ಮುಖ್ಯಮಂತ್ರಿಗಳು ರಾಜ್ಯಪಾಲರು ಎತ್ತಿದ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಮತ್ತು mಟಜ್ಞಿಠಿಛಿb Zoಡಿಛ್ಟಿo ನೀಡಿದರೂ ಸಂತೃಪ್ತರಾಗದೇ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆ. ದೂರು ಸ್ವೀಕರಿಸಿದ ಒಂದೆರಡು ಗಂಟೆಗಳಲ್ಲಿ, ಛ್ಝಿಛ್ಚಿಠ್ಟಿಜ್ಛಿqsಜ್ಞಿಜ omಛಿಛಿb ನಲ್ಲಿ ಶೋಕಾಸ್ ನೋಟಿಸ್ ನೀಡಿರುವ ಉದಾಹರಣೆಯೇ ಇಲ್ಲ. ಅದೇ ರಾಜ್ಯಪಾಲರು, ಲೋಕಾಯುಕ್ತ ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಎಸ್‌ಐಟಿ ಸುಮಾರು ಹತ್ತು ತಿಂಗಳ ಹಿಂದೆಯೇ ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಮನವಿ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ. ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜ್ಯ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡರೂ ರಾಜ್ಯಪಾಲರು ದಿವ್ಯಮೌನಕ್ಕೆ ಶರಣಾಗುತ್ತಾರೆ ಹಾಗೂ ಮುಗುಮ್ಮಾಗಿ ಕುಳಿತುಬಿಡುತ್ತಾರೆ. ರಾಜ್ಯಪಾಲರ ನಡೆ ಸರ್ವಥಾ ಸರಿ ಅಲ್ಲ ಎಂಬುದು ಎಂಥವರಿಗಾದರೂ ಬೆಳಕಿನಷ್ಟೇ ವೇದ್ಯವಾಗುತ್ತದೆ.

ಕುಮಾರಸ್ವಾಮಿಯವರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮನವಿ ಸಲ್ಲಿಸಿದವರು ಖಾಸಗಿ ವ್ಯಕ್ತಿಯಲ್ಲ, ಬದಲು ಲೋಕಾಯುಕ್ತ ಎಸ್‌ಐಟಿ ಎಂಬುದು ಗಮನಾರ್ಹ. ಸಿದ್ದರಾಮಯ್ಯನವರ ವಿಷಯದಲ್ಲಿ ಮಿಂಚಿನ ವೇಗದಲ್ಲಿ ನಿರ್ಧಾರ ತೆಗೆದುಕೊಳ್ಳುವ ರಾಜ್ಯಪಾಲರು, ಕುಮಾರ ಸ್ವಾಮಿ ವಿಷಯದಲ್ಲಿ ಚಾದರ ಹೊದ್ದು ಬೆಚ್ಚಗೆ ಮಲಗಿಬಿಡಲು ಏನು ಕಾರಣ? ಒಂದು ವೇಳೆ, ಕುಮಾರಸ್ವಾಮಿಯವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳದಿದ್ದರೆ, ಮೋದಿ ಸಂಪುಟದಲ್ಲಿ ಸಚಿವರಾಗದೇ ಇದ್ದಿದ್ದರೆ, ಇದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರಾ? ರಾಜ್ಯಪಾಲರ ನಡೆ ಮತ್ತೊಮ್ಮೆ ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ.

ಮಾಜಿ ಸಚಿವೆ ಶಶಿಕಲಾ ಜೊ, ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತು ಹಾಲಿ ಶಾಸಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂ ಷನ್‌ಗೆ ಅನುಮತಿ ಕೋರಿ ವರ್ಷದ ಹಿಂದೆಯೇ ಮನವಿ ಸಲ್ಲಿಸಿದರೂ, ರಾಜ್ಯಪಾಲರು ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೇ ಸುಮ್ಮನೆ ಕುಳಿತು ಬಿಡುತ್ತಾರೆ. ರಾಜಭವನದ ಸುತ್ತ ಇನ್ನೊಮ್ಮೆ ಸಂದೇಹದ ಹುತ್ತ ಕಟ್ಟಿಕೊಳ್ಳುತ್ತದೆ. ತಮ್ಮ ನಡೆಯನ್ನು ರಾಜ್ಯದ ಜನತೆ ಗಮನಿಸದಷ್ಟು ಮೂರ್ಖರು ಎಂದು ರಾಜ್ಯಪಾಲರು ಭಾವಿಸಿದ್ದಾರಾ? ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತ ಅವರಿಗೆ ತಮ್ಮ ಸ್ಥಾನಮಾನದ ಘನತೆ, ಮಹತ್ವದ ಅರಿವಿಲ್ಲವಾ? ರಾಜ್ಯಪಾಲರು ತಾವು ಕಾನೂನಿಗಿಂತ, ಜನರಿಗಿಂತ ಉನ್ನತ ಸ್ಥಾನದಲ್ಲಿ ಇರುವವರು ಎಂದೇನಾದರೂ ಭಾವಿಸಿದ್ದಾರಾ? ಅವರೂ ಜನರಿಗೆ ಉತ್ತರದಾಯಿ ಗಳು. ಅವರು ತಮ್ಮ ಈ ನಡೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ‘ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ’ ನೀತಿಯನ್ನು ಅನುಸರಿಸುತ್ತಿರುವ ರಾಜ್ಯಪಾಲರ ನಡೆ ಸಂದೇಹಾಸ್ಪದ ಮತ್ತು ದೋಷಪೂರ್ಣ ವಾಗಿರುವುದು ನಿರ್ವಿವಾದ.

‘ಇಡೀ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸುವುದಿದ್ದರೆ ಅದು ಬೇರೆಯವರನ್ನಲ್ಲ, ರಾಜ್ಯಪಾಲರನ್ನು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರು. ಅದು ರಾಜಕೀಯ ಹೇಳಿಕೆಯಲ್ಲ, ಬದಲಿಗೆ ವಸ್ತುಸ್ಥಿತಿ. ರಾಜ್ಯಪಾಲರ ನಡೆ ಪಕ್ಷಪಾತವಷ್ಟೇ ಅಲ್ಲ, ಅದೂ ಒಂದು ರೀತಿಯ ಭ್ರಷ್ಟಾಚಾರಕ್ಕೆ
ಸಮನಾದುದು ಎಂದು ಅರ್ಥೈಸಬೇಕಾಗುತ್ತದೆ. ಗಾಳಿ ಬಂದಾಗ ತೂರಿಕೊಳ್ಳುವುದು ಬೇರೆ, ಆದರೆ ನಿಯಮಗಳನ್ನು ಗಾಳಿಗೆ ತೂರುವುದು ಬೇರೆ. ರಾಜ್ಯಪಾಲರು ಎರಡನೆಯದಕ್ಕೆ ಮುಂದಾಗಿ ತಮ್ಮ ಸ್ಥಾನದ ಪಾವಿತ್ರ್ಯವನ್ನು ಕುಲಗೆಡಿಸಿದ್ದಾರೆ.

ರಾಜರಿಗಿಂತ ಪ್ರಜೆಯೇ ಪ್ರಸಿದ್ಧ
ಕೆಲ ದಿನಗಳ ಹಿಂದೆ, ನನ್ನ ಹಿರಿಯ ಸ್ನೇಹಿತರೊಬ್ಬರು, ‘ಕೆಲವು ಪ್ರಸಂಗಗಳನ್ನು ಮುಂದಿನ ತಲೆಮಾರಿನವರು ತಿಳಿದಿರಬೇಕೆಂಬ ಕಾರಣದಿಂದ ಆಗಾಗ ನೆನಪು ಮಾಡುತ್ತಿರಬೇಕು. ಅದಕ್ಕಾಗಿ ನಾನು ಒಂದು ಪ್ರಸಂಗವನ್ನು ವಾಟ್ಸಾಪ್ ಮೂಲಕ ಕಳಿಸುತ್ತಿದ್ದೇನೆ. ಅದನ್ನು ನೀವು ನಿಮ್ಮ ಅಂಕಣದಲ್ಲಿ ಹಂಚಿ ಕೊಳ್ಳಿ’ ಎಂದು ಬರೆದಿದ್ದರು. ಅಂದಿನ ಮೈಸೂರು ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಒಮ್ಮೆ ಜರ್ಮನಿಗೆ ಭೇಟಿ
ನೀಡಿದ್ದರು. ಅಲ್ಲಿನ ವಿಶ್ವವಿದ್ಯಾಲಯ ಒಂದರಲ್ಲಿ ಮಹಾರಾಜರನ್ನು ಪರಿಚಯಿಸುತ್ತಾ, ‘ಇವರು ಇಂಡಿಯಾ ದೇಶದಲ್ಲಿನ ಮೈಸೂರು ರಾಜ್ಯದ ಮಹಾ ರಾಜರು’ ಎಂದು ಸಭೆಗೆ ತಿಳಿಸಿದರಂತೆ.

ಆ ಸಂದರ್ಭದಲ್ಲಿ ಒಬ್ಬ ವಿದ್ವಾಂಸರು ಕೌತುಕದಿಂದ ‘ಏನು? ನೀವು ವಿದ್ವಾಂಸರಾದ ಡಾ. ಆರ್.ಶಾಮಾಶಾಸ್ತ್ರಿಗಳ ಊರಾದ ಮೈಸೂರಿನವರೇ?’ ಎಂದು ಕೇಳಿದರು. ಮಹಾರಾಜರ ಪಾಲಿಗೆ ಅಚ್ಚರಿಯೋ ಅಚ್ಚರಿ! ಕಾರಣ, ಅನತಿದೂರದ ದೇಶವೊಂದರಲ್ಲಿ, ತಮಗಿಂತ ತಮ್ಮ ನಾಡಿನಲ್ಲಿರುವ ಪ್ರಜೆಯೊಬ್ಬರು ಹೆಚ್ಚು ಪರಿಚಿತರಿzರಲ್ಲ ಎಂಬ ಸಂಗತಿ. ಆ ದಿನಗಳಲ್ಲಿ ಡಾ. ಆರ್.ಶಾಮಾಶಾಸ್ತ್ರಿಗಳು ವಿಶ್ವವಿಖ್ಯಾತ ವಿದ್ವಾಂಸರಾಗಿ, ಎಡೆ ಪ್ರಸಿದ್ಧಿ ಪಡೆದಿದ್ದರು. ಕಾರಣ, ಶಾಸ್ತ್ರಿಗಳ ಅಪಾರ ಪಾಂಡಿತ್ಯ ಹಾಗೂ ಅದಕ್ಕೆ ವೇದಿಕೆಯಾಗಿದ್ದ ಭಾರತೀಯ ಪ್ರಾಚೀನ ಸಾಹಿತ್ಯವಾದ ‘ಅರ್ಥಶಾಸ’ವೇ ಆಗಿದ್ದಿತು. ಆ ವೇಳೆಗಾಗಲೇ ವಿಶ್ವದಾದ್ಯಂತ ವಿದ್ವಾಂಸರ ನಡುವೆ, ಭಾರತದ ಪ್ರಾಚೀನ ಸಾಹಿತ್ಯವಾದ ‘ಕೌಟಿಲ್ಯನ ಅರ್ಥಶಾಸ’ ತನ್ನಲ್ಲಡಗಿಸಿಕೊಂಡಿದ್ದ ಅಮೂಲ್ಯ ಮಾಹಿತಿಗಾಗಿ ಜನಜನಿತವಾಗಿದ್ದಿತು. ಈ ಕೃತಿಯ ಬಗೆಗೆ ಅಷ್ಟೊಂದು ಕುತೂಹಲ ಮೂಡಲು ಮತ್ತೊಂದು ಕಾರಣ, ಆ ಕೃತಿಯು ಸಂಪೂರ್ಣವಾಗಿ, ಭಾರತವೂ ಸೇರಿದಂತೆ ಎಲ್ಲಿಯೂ ಲಭ್ಯವಿರಲಿಲ್ಲ.

ಅರ್ಥಶಾಸ್ತ್ರದ ಹೆಸರು ಜನಜನಿತವಾಗಿದ್ದರೂ, ಅದರ ಸಂಪೂರ್ಣ ಕೃತಿಯು ಮಾತ್ರ ಎಲ್ಲಿಯೂ ಲಭ್ಯವಿಲ್ಲದ ಸಂಗತಿಯೇ ವಿದ್ವಾಂಸರಲ್ಲಿನ ಕುತೂಹಲಕ್ಕೆ ಕಾರಣವಾಗಿದ್ದಿತು. ಭಾರತದಲ್ಲಿನ ಯಾವುದೋ ಅಟ್ಟದಲ್ಲಿ ಅಡಗಿರಬಹುದಾದ ಈ ಕೃತಿಯ ಬಗೆಗೆ ವಿಶ್ವವೇ ಕಣ್ಣು-ಕಿವಿಗಳನ್ನು ಅಗಲಿಸಿ
ಗಮನಿಸುತ್ತಿತ್ತು. ಇಂಥ ವೇಳೆಯಲ್ಲಿ ಶಾಮಾಶಾಸಿಗಳು ಕೌಟಿಲ್ಯನ ಅರ್ಥಶಾಸದ ಸಂಪೂರ್ಣ ಬರಹವನ್ನು ಬೆಳಕಿಗೆ ತಂದರು. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ (ಇಂದು ಮೈಸೂರು ವಿಶ್ವವಿದ್ಯಾಲಯದ ಒಂದು ಅಂಗಸಂಸ್ಥೆ) ಪ್ರಾಚೀನ ಭಾರತದ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸುವ ಹಾಗೂ ಸಂಶೋಧಿಸುವ ಕೆಲಸಗಳು ಒಂದು ಶತಮಾನದಿಂದಲೂ ನಿರಂತರವಾಗಿ ನಡೆಯುತ್ತಿವೆ. ಈ ಸಂಸ್ಥೆಯಲ್ಲಿ ಒಬ್ಬ ವಿದ್ವಾಂಸರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಶಾಮಾಶಾಸ್ತ್ರಿಗಳು ೧೯೦೫ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಪ್ರಥಮ ಬಾರಿಗೆ ವಿಶ್ವಕ್ಕೆ ಪರಿಚಯಿಸಿದ್ದಲ್ಲದೆ, ಅರ್ಥಶಾಸ್ತ್ರವನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡುವ ಮೂಲಕ ವಿಶ್ವದ ಗಮನವನ್ನು ಮೈಸೂರಿನತ್ತ ಸೆಳೆದರು. ಬೆಳಗಾಗುವುದರಲ್ಲಿ ಮೈಸೂರು ಸಂಸ್ಥಾನದ ಹೆಸರು ವಿಶ್ವದಾದ್ಯಂತ ಕಹಳೆಯ ದನಿಯಂತೆ ಮಾರ್ದನಿಸಿತು!

ಶಾಸ್ತ್ರಿಯವರು ಅನುವಾದಿಸಿದ ‘ಕೌಟಿಲ್ಯನ ಅರ್ಥಶಾಸ್ತ್ರ’ ಕೃತಿಯಲ್ಲಿ ಒಂದೆಡೆ, ಅವರಿಗೆ ಸಂದಿರುವ ಬಿರುದನ್ನೂ ದಾಖಲಿಸಿ ಅವರ ಹೆಸರನ್ನು ಬರೆಯಲಾಗಿದೆ. ಮಹಾಮಹೋಪಾಧ್ಯಾಯ, ಅರ್ಥಶಾಸ್ತ್ರ ವಿಶಾರದ, ವಿದ್ಯಾಲಂಕಾರ, ಪಂಡಿತರಾಜ ಡಾ.ಆರ್. ಶಾಮಾಶಾಸ್ತ್ರಿ, ಬಿಎ, ಪಿಎಚ್.ಡಿ., ಎಂ.ಆರ್.ಎ.ಎಸ್. ಎಂದು ಬರೆಯಲಾಗಿದೆ. ಈ ವೇಳೆಯಲ್ಲಿ ಆಳರಸರಿಗಿಂತಲೂ ನಾಡಿನ ವಿದ್ವಾಂಸ ಮಹೋದಯರೊಬ್ಬರು ವಿಶ್ವವಿಖ್ಯಾತರಾದುದು ವಿದ್ವತ್ತಿನ ಮೌಲ್ಯಕ್ಕೆ ಕೈಗನ್ನಡಿಯಾದ ಪ್ರಸಂಗ (ಈ ಅಂಶವನ್ನು ಪುಷ್ಟೀಕರಿಸಿರುವ ಪ್ರಾಚೀನ ಸುಭಾಷಿತವೊಂದು ‘ಸ್ವದೇಶೇ ಪೂಜ್ಯತೇ ರಾಜಾ,
ವಿದ್ವಾನ್ ಸರ್ವತ್ರ ಪೂಜ್ಯತೇ’ ಎಂದು ಸಾರಿದೆ).

ಮಹಾರಾಜರು ತಮ್ಮ ಪ್ರವಾಸವನ್ನು ಮುಗಿಸಿ ಮೈಸೂರಿಗೆ ಹಿಂದಿರುಗಿದ ನಂತರ ಮಾಡಿದ ಮೊದಲ ಕೆಲಸವೆಂದರೆ, ಡಾ. ಶಾಮಶಾಸ್ತ್ರಿಗಳನ್ನು ಅರಮನೆಗೆ ಕರೆಸಿ ಗೌರವಿಸಿದುದು. ಅಂತೆಯೇ, ಶಾಸ್ತ್ರಿಗಳಿಗೆ ಗಂಡಭೇರುಂಡ ರಾಜ ಲಾಂಛನದೊಂದಿಗೆ ‘ರಾಜಸೇವಾಸಕ್ತ’ ಎಂಬ ರಾಜಗೌರವ ಪ್ರದಾನ ಮಾಡಿದರು. ತಮಗಿಂತ ತಮ್ಮ ರಾಜ್ಯದಲ್ಲಿರುವ ಒಬ್ಬ ವಿದ್ವಾಂಸರು ವಿದೇಶದಲ್ಲಿ ಹೆಸರು ಮಾಡಿದ್ದನ್ನು ಮಹಾರಾಜರು ಮುಕ್ತ ಕಂಠದಿಂದ ಶ್ಲಾಘಿಸಿ ದರು. ವಿದ್ವತ್ತಿಗೆ ಜಗತ್ತಿನೆಡೆ ಗೌರವ ಮತ್ತು ಮನ್ನಣೆ ಇದೆ.

ನರ್ಗಿಸ್-ಖುಷವಂತ್ ಸಂಭಾಷಣೆ
ಖುಷವಂತ್ ಸಿಂಗ್ ಮಹಾಪೋಲಿ. ಹಾಗಂತ ಬೇರೆಯವರು ಅವರನ್ನು ಕರೆದಿಲ್ಲ. ಅವರೇ ತಮ್ಮನ್ನು ಹಾಗೆ ಬಣ್ಣಿಸಿಕೊಂಡಿದ್ದಾರೆ. ಈ ಪ್ರಸಂಗವನ್ನು ಖುಷವಂತ್ ಸಿಂಗ್ ಅವರೇ ಒಂದೆಡೆ ಬರೆದಿದ್ದಾರೆ. ಖುಷವಂತ್ ಸಿಂಗ್‌ಗೆ ನಟಿ ನರ್ಗಿಸ್ ದತ್ ಅಂದ್ರೆ ಬಲು ಇಷ್ಟ. ಅವರ ಅಭಿಮಾನಿಯಾಗಿದ್ದರು ಕೂಡ. ಅವರು ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ’ ಸಂಪಾದಕ ರಾಗಿದ್ದಾಗ ಅವರಿಗೊಂದು ಫೋನ್ ಬಂತು. ಅತ್ತ ಕಡೆಯಿಂದ ನರ್ಗಿಸ್ ಮಾತಾಡುತ್ತಿದ್ದರು. ‘ನಿಮ್ಮನ್ನು ನೋಡಲು ಬರಬಹುದಾ?’ ಎಂದು ನರ್ಗಿಸ್ ಕೇಳಿದರು. ಅದಕ್ಕೆ ಖುಷವಂತ್ ಸಮ್ಮತಿಸಿದರು. ಮುಂದಿನ ಅರ್ಧ ಗಂಟೆಯೊಳಗೆ ನರ್ಗಿಸ್ ಆಗಮಿಸಿದ್ದರು.

ಉಭಯಕುಶಲೋಪರಿ ಬಳಿಕ ನರ್ಗಿಸ್, ‘ನನ್ನ ಮಕ್ಕಳು ಸನವಾರ್‌ನಲ್ಲಿ ಓದುತ್ತಿzರೆ. ನಾನು ಅವರ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದೆ. ಆದರೆ ಅಲ್ಲಿನ ಎಲ್ಲ ಹೋಟೆಲುಗಳು ಬುಕ್ ಆಗಿವೆ ಎಂದು ಗೊತ್ತಾಯಿತು. ಕಸೌಲಿಯಲ್ಲಿ ನಿಮ್ಮ ಮನೆಯಿದೆ ಎಂದು ಯಾರೋ ಹೇಳಿದರು. ನೀವು ಏನೂ ಅಂದುಕೊಳ್ಳದಿದ್ದರೆ, ಒಂದು ರಾತ್ರಿ ನಾನು ನಿಮ್ಮ ಮನೆಯಲ್ಲಿ ತಂಗಬಹುದಾ?’ ಎಂದು ವಿನಮ್ರರಾಗಿ ಕೇಳಿದರು. ಅದಕ್ಕೆ ಖುಷವಂತ್ ಸಿಂಗ್, ‘ಖಂಡಿತವಾಗಿಯೂ ತಂಗಬಹುದು, ಆದರೆ ಒಂದು ಷರತ್ತು..’ ಎಂದರು.

ಒಂದು ಕ್ಷಣ ಇಬ್ಬರ ಮಧ್ಯೆ ಮೌನ. ನಂತರ ನರ್ಗಿಸ್, ‘ಏನದು ಷರತ್ತು?’ ಎಂದು ತುಸು ಅಳುಕಿನಿಂದಲೇ ಕೇಳಿದರು. ‘ಇನ್ನು ಮುಂದೆ ಯಾರಾದರೂ ಕೇಳಿದರೆ, ನರ್ಗಿಸ್ ನನ್ನ ಹಾಸಿಗೆಯಲ್ಲಿ ಒಂದು ರಾತ್ರಿ ಮಲಗಿದ್ದರು ಎಂದು ಹೇಳುತ್ತೇನೆ, ಆಗಬಹುದಾ?’ ಎಂದು ಕೇಳಿದರು. ಆ ಮಾತಿಗೆ ಚಾವಣಿ ಹಾರಿಹೋಗುವಂತೆ ನಕ್ಕ ನರ್ಗಿಸ್, ‘ಅವಶ್ಯವಾಗಿ ಹೇಳಬಹುದು’ ಎಂದರು. ಈ ಘಟನೆಯನ್ನು ಖುಷವಂತ್ ಸಿಂಗ್ ಅವರಿಗಿಂತ ನರ್ಗಿಸ್ ಅವರೇ ಅನೇಕರ ಮುಂದೆ ಹೇಳಿ ನಕ್ಕಿದ್ದರು.

ಸರಿಯಾದ ಉತ್ತರ
ಕೆಲವು ಗಂಡಸರು ಮದುವೆಯಾಗಿ ಹಲವು ವರ್ಷಗಳು ಕಳೆದಿದ್ದರೂ, ಹೆಂಡತಿಯ ಜತೆ ಹೇಗೆ ವರ್ತಿಸಬೇಕು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಹೆಂಡತಿಯಿಂದ ಆಗಾಗ ಬೈಸಿಕೊಳ್ಳುತ್ತಲೇ ಇರುತ್ತಾರೆ. ಉದಾಹರಣೆಗೆ ಈ ಪ್ರಸಂಗವನ್ನು ನೋಡಿ. ನೀವು ನಿಮ್ಮ ಪತ್ನಿಯ ಜತೆ ವಾಕಿಂಗ್ ಹೊರಟಿದ್ದೀರಿ,
ಸುಂದರವಾದ ತರುಣಿಯೊಬ್ಬಳು ಎದುರಿನಿಂದ ಬರುತ್ತಿದ್ದಾಳೆ.. ಆಗ ನಿಮ್ಮ ಪತ್ನಿ, ‘ಅವಳು ಎಷ್ಟು ಸುಂದರವಾಗಿದ್ದಾಳೆ, ಅಲ್ಲವಾ?’ ಎಂದು ಕೇಳುತ್ತಾಳೆ.

‘ಹೌದು’ ಎಂದು ನೀವು ಉತ್ತರಿಸಿದರೆ ಅದು ತಪ್ಪು. ‘ಇಲ್ಲ’ ಎಂದು ಉತ್ತರಿಸಿದರೂ ಅದು ತಪ್ಪು. ಸರಿಯಾದ ಉತ್ತರ- ‘ಯಾರು?’

ಪಟೇಲರ ಗಾಸಿಪ್ ಅಂಕಣ
ಪತ್ರಕರ್ತ ಬಾಬುರಾವ್ ಪಟೇಲರ ಗಾಸಿಪ್ ಅಂಕಣವನ್ನು ಓದಲು ಓದುಗರು ಚಡಪಡಿಸುತ್ತಿದ್ದರು. ಅದರಲ್ಲಿ ಹಿಂದಿ ಚಿತ್ರರಂಗದ ಗುಟ್ಟುಗಳೆ ರಟ್ಟಾಗಿರುತ್ತಿದ್ದವು. ಯಾರಾದರೂ ಅವರನ್ನು ಪ್ರಶ್ನಿಸಿದರೆ, ‘ಗಾಸಿಪ್ಪುಗಳನ್ನೆ ಗಂಭೀರವಾಗಿ ತೆಗೆದುಕೊಳ್ಳಬೇಡಿ’ ಎಂದು ಹೇಳಿ ಸುಮ್ಮನಾಗಿಸುತ್ತಿದ್ದರು.  ಈ ವಿಷಯಗಳೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತವೆ?’ ಎಂದು ಕೇಳಿದರೆ, ‘ಇನ್ಯಾರು ಹೋಗಿ ಬಂದವರೇ ಹೇಳಬೇಕಲ್ಲ?’ ಎಂದು ನಕ್ಕು ಬಿಡುತ್ತಿದ್ದರು. ಅಂಥ ಒಂದೆರಡು ಪ್ರಸಂಗಗಳು ಇಲ್ಲಿವೆ.

? ಅಮಿತಾಭ್ ಬಚ್ಚನ್ ಪತ್ನಿ ಹಾಗೂ ಒಂದು ಮಗುವಿನ ತಾಯಿ ಜಯಾ ಬಾಧುರಿಗೆ ವಯಸ್ಸಿನ ಸ್ನಾಯುಗಳು ಮುಖದ ಮೇಲೆ ಕಾಣಿಸಿಕೊಳ್ಳಲಾ ರಂಭಿಸಿವೆ. ಕೆಲವರು ಆಕೆಗೆ ‘ಬುದ್ದು ಬಾಧುರಿ’ ಎಂದೂ ಕರೆಯಲಾರಂಭಿಸಿzರೆ. ಕರೆಯಲಿ ಬಿಡಿ. ಇತ್ತೀಚೆಗೆ ಆಕೆಯ ಬರ್ಥಡೇ ಪಾರ್ಟಿ ದಿಲ್ಲಿಯಲ್ಲಿ
ನಡೆಯಿತು. ಆ ಪಾರ್ಟಿಗೆ ನಟಿ ನೀತು ಸಿಂಗ್ ಹೋಗಿದ್ದಳು. ‘ಹಾಯ್ ಅಮಿತ್’ ಎಂದು ಆಕೆ ಅಮಿತಾಭ್‌ನನ್ನು ಕರೆದಳು. ಲಂಬೂಗೆ ರೋಮಾಂಚನ. ಹೀಗೆ ಕರೆದಿದ್ದು ಜಯಾಳ ಕಿವಿಗೆ ಬಿತ್ತು. ನೀತುಸಿಂಗ್ ಹತ್ತಿರ ಸರಸರ ಹೋದ ಜಯಾ, ‘ನನ್ನ ಗಂಡನನ್ನು ಏನೆಂದು ಕರೆದೆ?’ ಎಂದು ಏರಿದ ದನಿಯಲ್ಲಿ
ಕೇಳಿದಳು. ನೀತು ಸಿಂಗ್ ಪೆಚ್ಚಾಗಿ ನಿಂತಿದ್ದಳು. ‘ಇನ್ನು ಮುಂದೆ ಹಾಗೆಲ್ಲ ಕರೆಯಬೇಡ. ಅಮಿತಾಭ್ ಎಂದು ಕರೆಯಬೇಕು’ ಎಂದಳು. ನೀತು ಆಯಿತು ಎಂಬಂತೆ ತಲೆ ಅಡಿಸಿದಳು. ಇವನ್ನೆಲ್ಲ ತುಸು ದೂರದಿಂದ ಗಮನಿಸುತ್ತಿದ್ದ ಲಂಬೂ ಕುಬ್ಜನಾಗಿ ಹೋಗಿದ್ದ!

? ಶಶಿಕಪೂರ್ ಉತ್ತಮ ನಟ ಎಂದು ಕೆಲವರು ಹೇಳುತ್ತಾರೆ. ಅವನ ಅಭಿಮಾನಿಗಳ ಕರ್ಮ, ಅವನನ್ನು ಹೊಗಳಲೇಬೇಕು. ಉಳಿದವರಿಗೆ ಆ ದರ್ದು ಇಲ್ಲ. ಆತನ ಜತೆ ನಟಿಸುವ ನಟಿಯರ ತಕರಾರೇನೆಂದರೆ, ಆತ ಮುಖಕ್ಕೆ ಮುಖ ಕೊಡುವುದಿಲ್ಲ, ಮುಖದ ಕೆಳಗೆ ನೋಡುತ್ತಾನೆ. ಅದೇ, ಸಿನಿಮಾದಲ್ಲಿ ಎದೆ ನೋಡುವ ದೃಶ್ಯಗಳಲ್ಲಿ ನಾಚಿ ಮುಖವನ್ನು ನೋಡು ತ್ತಾನೆ. ಮೊನ್ನೆಯ ಪಾರ್ಟಿಯಲ್ಲಿ ಶಶಿಕಪೂರ್ ಕಪ್ಪು ಕನ್ನಡಕ ಧರಿಸಿ ಬಂದಿದ್ದ. ಆತ ಯಾರನ್ನೆಲ್ಲ ಎಲ್ಲಿ ನೋಡಿದನೋ?

ಕಿರಿದಾಗುವ ಅಡ್ಡಹೆಸರು
ಇದನ್ನು ನಾನು ಎಲ್ಲೋ (ಸೋಷಿಯಲ್ ಮೀಡಿಯಾದಲ್ಲಿ?) ಓದಿದ್ದು. ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಮಾಡುವಾಗ ಅಥವಾ ಪಶ್ಚಿಮದಿಂದ ಪೂರ್ವಕ್ಕೆ ಪ್ರಯಾಣಿಸುವಾಗ, ವ್ಯಕ್ತಿಗಳ ಅಡ್ಡ ಹೆಸರು ಅಥವಾ ಸರ್‌ನೇಮ್ ಚಿಕ್ಕದಾಗುತ್ತಾ ಹೋಗುತ್ತದೆಯಂತೆ. ಉದಾಹರಣೆಗೆ, ಸರದೇಶಪಾಂಡೆ ಎಂಬ ಅಡ್ಡಹೆಸರನ್ನೇ ತೆಗೆದುಕೊಳ್ಳಿ. ನೀವು ಮುಂಬೈಯಿಂದ ತುಸು ಮೇಲಕ್ಕೆ ಹೋದರೆ, ಸರದೇಶಪಾಂಡೆ ಸರ್‌ನೇಮ್ ದೇಶಪಾಂಡೆ ಆಗಿರುತ್ತದೆ. ಉತ್ತರ
ಪ್ರದೇಶದ ಕಡೆ ಹೊರಳಿದರೆ, ದೇಶಪಾಂಡೆ ಹೋಗಿ ಪಾಂಡೆ ಆಗಿರುತ್ತದೆ. ಹಾಗೆ ಕೋಲ್ಕತಾಕ್ಕೆ ಹೊರಳಿದರೆ ಪಾಂಡೆ ಹೋಗಿ ಬರೀ ‘ಡೇ’ ಆಗಿರುತ್ತದೆ!

ನಿಜ ತಾನೇ ?

Leave a Reply

Your email address will not be published. Required fields are marked *