Saturday, 17th May 2025

Ganesh Bhat Varanasi Colomn: ವಿದೇಶಗಳಲ್ಲಿ ಭಾರತೀಯರ ಸಾಧನೆ: ಸಂತಸ ಹಾಗೂ ಬೇಸರ

ಎಲಾನ್ ಮಸ್ಕ್ ಮಾಲೀಕತ್ವದ ‘ಸ್ಪೇಸ್-ಎಕ್ಸ್’ ಬಾಹ್ಯಾಕಾಶ ಉಡ್ಡಯನ ಸಂಸ್ಥೆ ಈಚೀಚೆಗೆ ಬಹಳ ಹೆಸರು ಮಾಡುತ್ತಿದೆ. ಅತಿವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ‘ಸ್ಟಾರ್‌ಲಿಂಕ್’ ಯೋಜನೆಯಡಿ ಈ ಸಂಸ್ಥೆಯು ಇದುವರೆಗೆ 6,764 ಕೃತಕ ಉಪಗ್ರಹಗಳನ್ನು ಉಡ್ಡಯನ ಮಾಡಿ ಬಾಹ್ಯಕಾಶ ಕಕ್ಷೆಯಲ್ಲಿರಿಸಿದೆ. ಇಂಥ ಉಪಗ್ರಹಗಳ ಸಂಖ್ಯೆಯನ್ನು 34400ಕ್ಕೆ ಹೆಚ್ಚಿಸುವ ಉದ್ದೇಶವನ್ನು ‘ಸ್ಪೇಸ್-ಎಕ್ಸ್’ ಹೊಂದಿದೆ. ಮರುಬಳಕೆಯ ಉಡಾವಣಾ ರಾಕೆಟ್/ವಾಹಕವನ್ನು ‘ಸ್ಪೇಸ್-ಎಕ್ಸ್’ ಸಂಸ್ಥೆ ಅಭಿವೃದ್ಧಿಪಡಿಸಿರುವುದು ಬಾಹ್ಯಾಕಾಶ ಉಡ್ಡಯನ ಕ್ಷೇತ್ರದಲ್ಲಾ ಗಿರುವ ಕ್ರಾಂತಿಕಾರಿ ಬೆಳವಣಿಗೆಯಾಗಿದೆ.

ಮಾಮೂಲಿಯಾಗಿ ಆಕಾಶಕ್ಕೆ ಹಾರಿ ಬಿಡಲಾಗುವ ರಾಕೆಟ್, ತನ್ನ ಕೆಲಸ ಮುಗಿಯುತ್ತಿದ್ದಂತೆ ಸಮುದ್ರಕ್ಕೆ ಅಥವಾ ನಿರ್ಜನ ಪ್ರದೇಶಕ್ಕೆ ಬಿದ್ದು ನಾಶವಾಗುತ್ತದೆ. ಆದರೆ, ‘ಸ್ಪೇಸ್-ಎಕ್ಸ್’ ಅಭಿವೃದ್ಧಿಪಡಿಸಿರುವ ‘ಫಾಲ್ಕನ್-9 ರಾಕೆಟ್ ಬೂಸ್ಟರ್’ ನಭಕ್ಕೆ ಜಿಗಿದು, ಉಪಗ್ರಹಗಳನ್ನು ಕಕ್ಷೆಯಲ್ಲಿ ಕೂರಿಸಿ, ಭೂಮಿಗೆ ಮರಳಿ ತನ್ನ ಲಾಂಚಿಂಗ್ ಪ್ಯಾಡ್‌ನಲ್ಲೇ
ಲ್ಯಾಂಡ್ ಆಗುತ್ತದೆ. ರಾಕೆಟ್‌ನ ಮರುಬಳಕೆಯಿಂದಾಗಿ ಉಡ್ಡಯನದ ಖರ್ಚು ಮಾತ್ರವಲ್ಲದೆ, ಅಂತರಿಕ್ಷದಲ್ಲಿ
ರಾಕೆಟ್‌ಗಳ ಬಿಡಿಭಾಗಗಳು ತುಂಬಿಕೊಳ್ಳುವುದೂ ತಗ್ಗುತ್ತದೆ.

ರಾಕೆಟ್‌ನ ಮರುಬಳಕೆಯ ಈ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಕೆಲಸ ಮಾಡಿರುವವರು ಸಂಜೀವ್ ಶರ್ಮಾ. ‘ಸ್ಪೇಸ್-ಎಕ್ಸ್’ನ ಸ್ಟಾರ್‌ಶಿಪ್ ಡೈನಮಿಕ್ಸ್‌ನ ಪ್ರಿನ್ಸಿಪಲ್ ಎಂಜಿನಿಯರ್ ಆಗಿರುವ ಇವರು, ಐಐಟಿ ರೂರ್ಕಿಯ ವಿದ್ಯಾರ್ಥಿ. ಇವರು ಭಾರತೀಯ ರೇಲ್ವೆಯಲ್ಲಿ ಕೆಲಕಾಲ ಕೆಲಸ ಮಾಡಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ, ನಂತರ ಅಲ್ಲೇ ನೆಲೆ ನಿಂತು, 2013ರಲ್ಲಿ ‘ಸ್ಪೇಸ್ -ಎಕ್ಸ್’ ಸೇರಿ, ಸದರಿ ಮರುಬಳಕೆಯ ರಾಕೆಟ್ ಅನ್ನು ರೂಪಿಸುವಲ್ಲಿ ಪ್ರಧಾನಪಾತ್ರ ವಹಿಸಿದವರು.

ಜಾಗತಿಕ ಮಟ್ಟದ ಉದ್ಯಮಗಳ ಆಯಕಟ್ಟಿನ ಸ್ಥಾನಗಳಲ್ಲಿ ಭಾರತೀಯ ಸಂಜಾತರು/ಮೂಲದವರು ಸಾಕಷ್ಟಿ
ದ್ದಾರೆ. ಗೂಗಲ್‌ನ ಮುಖ್ಯಸ್ಥ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ ನ ಸಿಇಒ ಸತ್ಯಾ ನಾಡೆಲ್ಲಾ, ಯುಟ್ಯೂಬ್‌ನ ಸಿಇಒ
ನೀಲ್ ಮೋಹನ್, ಅಡೋಬ್‌ನ ಪ್ರಧಾನ ನಿರ್ವಹಣಾಧಿಕಾರಿ ಶಂತನು ನಾರಾಯಣ್, ಸಿಟಿ ಬ್ಯಾಂಕ್ ಸಿಇಒ ಸುನಿಲ್ ಗರ್ಗ್, ವರ್ಲ್ಡ್ ಬ್ಯಾಂಕ್ ಗ್ರೂಪ್‌ನ ಪ್ರಮುಖ ಸಂಜಯ್ ಬಾಂಗ್, ಐಬಿಎಂನ ಮುಖ್ಯಸ್ಥ ಅರವಿಂದ್ ಕೃಷ್ಣ, ಕಾಗ್ನಿ ಸೆಂಟ್‌ನ ಸಿಇಒ ರವಿಕುಮಾರ್, ಹನಿವೆಲ್‌ನ ಸಿಇಒ ವಿಮಲ್ ಕುಮಾರ್, ನೊವಾರ್ಟಿಸ್‌ನ ವಸಂತ್ ನರಸಿಂಹನ್, ಮೈಕ್ರಾನ್ ಟೆಕ್ನಾಲಜಿಯ ಸಂಜಯ್ ಮೆಹ್ರೋತ್ರಾ ಹೀಗೆ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯರ ಸಂಖ್ಯೆ ಸಾಕಷ್ಟಿದೆ.

ಜಾಗತಿಕವಾಗಿ ಮುಂಚೂಣಿಯಲ್ಲಿರುವ ಪ್ರತಿ ಐದು ಕಂಪನಿಗಳಲ್ಲಿ ಮೂರನ್ನು ಮುನ್ನಡೆಸುತ್ತಿರುವವರು ಭಾರತೀಯ ಮೂಲದವರು ಎಂದು ವರದಿ ಮಾಡಿರುವ ‘ಮಿಂಟ್’ ಪತ್ರಿಕೆ, “ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್,
ನಾಸ್‌ಡಾಕ್, ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಮೊದಲಾದ ಷೇರು ಮಾರುಕಟ್ಟೆಗಳಲ್ಲಿ ಲಿಸ್ಟೆಡ್ ಆಗಿರುವ 300ಕ್ಕೂ ಹೆಚ್ಚು ಕಂಪನಿಗಳಲ್ಲಿ ಶೇ.61ರಷ್ಟರ ನೇತೃತ್ವ ವಹಿಸಿದವರು ಭಾರತೀಯ ಮೂಲದವರು” ಎಂದಿದೆ.

ಭಾರತದ ಐಐಟಿಗಳು ಮತ್ತು ವಿಶ್ವವಿದ್ಯಾಲಯಗಳ ಪದವೀಧರರು ವಿದೇಶಗಳಿಗೆ (ಬಹುತೇಕ ಅಮೆರಿಕಕ್ಕೆ) ತೆರಳಿ ಅಲ್ಲಿ ಸ್ಥಾಪಿಸಿರುವ ನವೋದ್ಯಮಗಳಲ್ಲಿ (ಸ್ಟಾರ್ಟಪ್) ನೂರಕ್ಕೂ ಹೆಚ್ಚಿನವು ಶತಕೋಟಿ ಡಾಲರ್ ಮೌಲ್ಯದ ನವೋದ್ಯಮಗಳಾಗಿ (ಯುನಿಕಾರ್ನ್ ಸ್ಟಾರ್ಟಪ್) ಬದಲಾಗಿವೆ. ಡೆಲ್ಲಿ ಐಐಟಿಯಿಂದ 16 ಮಂದಿ, ಐಐಟಿ ಬಾಂಬೆ ಯಿಂದ 14, ಐಐಟಿ ಕಾನ್ಪುರ್‌ನಿಂದ 12, ಐಐಟಿ ಮದ್ರಾಸ್‌ನಿಂದ 11, ಬಿಟ್ಸ್ ಪಿಲಾನಿಯಿಂದ 10, ಐಐಟಿ ಖರಗ್‌ ಪುರ್‌ನಿಂದ 6 ಹೀಗೆ ಭಾರತದ ಐಐಟಿಗಳು ಮತ್ತು ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ಅಮೆರಿಕಕ್ಕೆ ತೆರಳಿ, ನವೋದ್ಯಮಗಳನ್ನು ಆರಂಭಿಸಿ ಅವನ್ನು ಯುನಿಕಾರ್ನ್ಗಳಾಗಿ ಅಭಿವೃದ್ಧಿಪಡಿಸಿದವರ ಸಂಖ್ಯೆ 105.

ಅಮೆರಿಕದಲ್ಲಿ ಸುಮಾರು 700 ಯುನಿಕಾರ್ನ್ ಸ್ಟಾರ್ಟಪ್‌ಗಳಿವೆ. ಇವುಗಳಲ್ಲಿ ಶೇ.14ರಷ್ಟರ ಸ್ಥಾಪಕರು ಭಾರತದ ವಿದ್ಯಾಸಂಸ್ಥೆಗಳಲ್ಲಿ ಕಲಿತವರು ಅಥವಾ ಅಮೆರಿಕ ಸಂಜಾತ ಭಾರತೀಯರು.

ಫಾರ್ಮಾಸ್ಯುಟಿಕಲ್ಸ್ ಕ್ಷೇತ್ರದ ‘ರೋಯ್ವಂತ್ ಸೈನ್ಸಸ್ ಲಿಮಿಟೆಡ್’ ಹೆಸರಿನ ಯುನಿಕಾರ್ನ್ ಅನ್ನು 2014ರಲ್ಲಿ ಸ್ಥಾಪಿಸಿದವರು ಅಮೆರಿಕದ ರಿಪಬ್ಲಿಕನ್ ಪಕ್ಷದಲ್ಲಿ ಪ್ರಭಾವಿ ಸ್ಥಾನದಲ್ಲಿರುವ ವಿವೇಕ್ ಗಣಪತಿ ರಾಮಸ್ವಾಮಿ. ಪ್ರಸ್ತುತ ಇದರ ಮಾರುಕಟ್ಟೆ ಮೌಲ್ಯ 8.82 ಬಿಲಿಯನ್ ಡಾಲರ್. ಅದೇ ರೀತಿ 2021ರಲ್ಲಿ, ‘ಬಿಲ್ಟ್ ರಿವಾರ್ಡ್ಸ್’ ಹೆಸರಿನ ವಿನೂತನ ನವೋದ್ಯಮವನ್ನು ಆರಂಭಿಸಿ ಅದನ್ನು 3.8 ಬಿಲಿಯನ್ ಡಾಲರ್ ಮೌಲ್ಯದ ಯುನಿಕಾರ್ನ್ ಸ್ಟಾರ್ಟಪ್ ಆಗಿ ಬೆಳೆಸಿದವರು ಅಂಕುರ್ ಜೈನ್. ಬೈಜು ಭಟ್, ರೋಹನ್ ಸೇಟ್, ಅಪೂರ್ವಾ ಮೆಹ್ತಾ, ಧೀರಜ್ ಪಾಂಡೆ, ಅರುಣ್ ಮೂರ್ತಿ, ಸುರೇಶ್ ಶ್ರೀನಿವಾಸ, ಆಯುಷ್ ಫುಂಬ್ರಾ, ಮೋಹಿತ್ ಆರನ್, ಆಶುತೋಷ್ ಗರ್ಗ್, ಅಜಿತ್ ಸಿಂಗ್, ಜ್ಯೋತಿ ಬನ್ಸಲ್ ಮೊದಲಾದವರು ಅಮೆರಿಕದಲ್ಲಿ ಯುನಿಕಾರ್ನ್ ಸ್ಟಾರ್ಟಪ್ ಗಳನ್ನು ಸ್ಥಾಪಿಸಿದ ಭಾರತೀಯ ಮೂಲ ದವರು.

‘ಭಾರತೀಯರು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತದಲ್ಲಿ ಪರಿಣತರಾಗಿದ್ದು ಹುದ್ದೆಗೆ
ಬೇಕಾದ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುತ್ತಾರೆ; ಯಾವುದೇ ದೇಶಗಳಿಗೆ ಹೋದರೂ ಅಲ್ಲಿನ ಭಾಷೆ- ಸಂಸ್ಕೃತಿ ಗಳಿಗೆ ಒಗ್ಗಿಕೊಳ್ಳುತ್ತಾರೆ. ಅಲ್ಪಾವಧಿ ಲಾಭಕ್ಕಿಂತಲೂ ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿರುತ್ತಾರೆ’ ಎಂಬ ಕಾರಣಕ್ಕೆ ಬಹುರಾಷ್ಟ್ರೀಯ ಕಂಪನಿಗಳ ಆಯಕಟ್ಟಿನ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಭಾರತೀಯರಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುತ್ತಿದೆ.

ವಿದೇಶಗಳಲ್ಲಿರುವ ಭಾರತೀಯರು ಭಾರತದ ರಾಯಭಾರಿಗಳಂತೆ ವರ್ತಿಸುತ್ತಾರೆ. ಹೀಗಾಗಿ ಭಾರತದ ಪ್ರಧಾನಿ ಯಾವುದೇ ದೇಶಕ್ಕೆ ಭೇಟಿಯಿತ್ತರೂ, ಅಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಸಂವಹನ ನಡೆಸಿಯೇ ನಡೆಸುತ್ತಾರೆ. ಜಾಗತಿಕ ಉದ್ಯಮಗಳ ಪ್ರಮುಖ ಸ್ಥಾನಗಳಲ್ಲಿರುವ ಭಾರತೀಯ ಮೂಲದವರ ಜತೆಗೂ ಭಾರತದ ಪ್ರಧಾನಿ, ವಿದೇಶಾಂಗ ಸಚಿವರು ಮತ್ತು ವಾಣಿಜ್ಯ ಸಚಿವರು ಸಂಪರ್ಕದಲ್ಲಿರುತ್ತಾರೆ. ಭಾರತೀಯ ಮೂಲದ ಸಿಇಒಗಳು ಸಹಜವಾಗಿಯೇ ಭಾರತದ ಬಗ್ಗೆ ಒಂದಿಷ್ಟು ಪ್ರೀತಿಯನ್ನು ಹೊಂದಿದ್ದು, ತಾವು ನೇತೃತ್ವ ವಹಿಸಿರುವ ಸಂಸ್ಥೆಗಳ ಮೂಲಕ ಭಾರತದಲ್ಲಿ ಹೂಡಿಕೆ ಯಾಗುವಂತಾಗುವಲ್ಲಿ ಆಸಕ್ತಿ ತೋರುತ್ತಾರೆ.

ಭಾರತದ ‘ಡಿಜಿಟಲ್ ಇಂಡಿಯಾ’ ಕನಸಿನ ಸಾಕಾರಕ್ಕೆ ಗೂಗಲ್‌ನ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ ನ ಸತ್ಯಾ ನಾಡೆಲ್ಲಾ ಮೊದಲಾದವರು ಕೈಜೋಡಿಸಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಇಮೇಜನ್ನು ಹೆಚ್ಚಿಸಿದ್ದಾರೆ. ಎಲಾನ್ ಮಸ್ಕ್ ಕೂಡ, “ಭಾರತೀಯ ಮೂಲದ ಸಿಇಒಗಳು ಅತ್ಯಂತ ಪ್ರಭಾವಶಾಲಿಗಳಾಗಿರುತ್ತಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಜಾಗತಿಕ ಉದ್ಯಮಗಳಲ್ಲಿ ಭಾರತೀಯ ಮುಖ್ಯಸ್ಥರ ಸಂಖ್ಯೆ ಹೆಚ್ಚುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯೇ, ಪ್ರಧಾನಿ ಮೋದಿಯವರು ಹೇಳಿದಂತೆ ಇದೊಂದು ರೀತಿಯ ‘ಬ್ರೈನ್ ಗೈನ್’ ಕೂಡ ಹೌದು. ಆದರೆ, ಭಾರತದ
ಪ್ರತಿಭೆಗಳು ಈ ಪರಿಯಲ್ಲಿ ವಿದೇಶಗಳಿಗೆ ವಲಸೆ ಹೋದರೆ ಭಾರತದ ಅಭಿವೃದ್ಧಿಯ ಕಥೆಯೇನು? ಎಂಬ ಪ್ರಶ್ನೆಯೂ
ನಮ್ಮ ಮುಂದಿದೆ. ಭಾರತದ ಐಐಟಿಗಳ ಪದವೀಧರರಲ್ಲಿ ಶೇ.30ರಷ್ಟು ಮಂದಿ ವಿದೇಶಗಳಿಗೆ, ಅದರಲ್ಲೂ ಅಮೆರಿಕಕ್ಕೆ ಹೋಗಿ ನೆಲೆ ನಿಲ್ಲುತ್ತಾರೆ. ಅಲ್ಲಿ ಸಿಗುವ ಉತ್ತಮ ವೇತನ, ಸಂಶೋಧನಾ ಅವಕಾಶ ಮತ್ತು ಪ್ರತಿಭೆಗೆ ತಕ್ಕ ಮನ್ನಣೆ ಇವು ಇಂಥದೊಂದು ವಲಸೆಗಾರಿಕೆಗೆ ಕಾರಣವಾಗಿದೆ.

ಭಾರತದಲ್ಲಿ ಉನ್ನತ ಸಂಶೋಧನೆಗಳಿಗೆ ಪೂರಕವಾದ ವಾತಾವರಣವಿನ್ನೂ ನಿರ್ಮಾಣವಾಗಿಲ್ಲ, ಪ್ರತಿಭೆಗಳಿಗೆ ಸಿಗಬೇಕಾದ ಅವಕಾಶ ಮತ್ತು ಗೌರವಗಳು ಸಿಗುತ್ತಿಲ್ಲ. ವಿಶ್ವವಿದ್ಯಾಲಯಗಳಂತೂ ‘ಸರಕಾರಿ ಬಾಬು’ಗಳ ನಿಯಂತ್ರಣ ದಲ್ಲಿ ನಲುಗುತ್ತಿವೆ. ಇದರ ಪರಿಣಾಮವಾಗಿ ಪ್ರತಿಭಾವಂತರ ವಲಸೆಯಾಗುತ್ತಿರುವುದರಿಂದ ದೇಶದ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ, ಆರ್ಥಿಕತೆಗೂ ಅದು ಮಾರಕವಾಗುತ್ತಿದೆ. ಪ್ರಸ್ತುತ ಭಾರತದಲ್ಲಿ 116 ಯುನಿಕಾರ್ನ್ ಸ್ಟಾರ್ಟಪ್‌ ಗಳಿದ್ದರೆ, ಅಮೆರಿಕದಲ್ಲಿ ಭಾರತೀಯ ಮೂಲದವರು 100ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇವನ್ನು ಆರಂಭಿಸಿದ್ದಾರೆ.

ಒಂದೊಮ್ಮೆ ಅವರೆಲ್ಲಾ ಭಾರತದಲ್ಲಿದ್ದಿದ್ದರೆ, ಈ ಸ್ಟಾರ್ಟಪ್‌ಗಳ ಸಂಖ್ಯೆ 200ನ್ನು ದಾಟುತ್ತಿತ್ತು. ಸುಂದರ್ ಪಿಚೈ, ಸತ್ಯಾ ನಾಡೆಲ್ಲಾ, ಶಂತನು ನಾರಾಯಣ್‌ರಂಥವರು ಭಾರತದಲ್ಲೇ ಉಳಿದುಕೊಂಡಿದ್ದಿದ್ದರೆ ಭಾರತೀಯ ಕಂಪನಿಗಳ ಮೌಲ್ಯ/ಗುಣಮಟ್ಟ ಹೆಚ್ಚುತ್ತಿತ್ತು, ಭಾರತದ ಆರ್ಥಿಕತೆ ಇನ್ನೂ ಪ್ರಬಲವಾಗುತ್ತಿತ್ತು. ಆದರೆ ಇಂದು ಇವರೆಲ್ಲರ ಸಾಮರ್ಥ್ಯ ಯಾವುದೋ ಬಹುರಾಷ್ಟ್ರೀಯ ಕಂಪನಿಗಳ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ಭಾರತದ ಪಾಲಿಗೆ ಇದೊಂದು ದೊಡ್ಡ ಮಟ್ಟದ ಮಾನವಸಂಪನ್ಮೂಲದ ನಷ್ಟ.

ನಮ್ಮ ಕೇಂದ್ರ ಸರಕಾರದ ವಿವಿಧ ಮಂತ್ರಾಲಯಗಳಲ್ಲಿರುವ ಅಧಿಕಾರಿ ವರ್ಗದಲ್ಲಿ, ನಾವೀನ್ಯವನ್ನು ತರಬಲ್ಲ ಪ್ರತಿಭಾವಂತರ ಕೊರತೆಯಿದೆ. ಹೀಗಾಗಿ ಅವು ನಿರೀಕ್ಷಿತ ಸಾಧನೆಯನ್ನು ಮಾಡುತ್ತಿಲ್ಲ. ಈ ಸಮಸ್ಯೆಯನ್ನು
ಪರಿಹರಿಸಲು ಸರಕಾರವು ಖಾಸಗಿ ವಲಯಗಳಲ್ಲಿನ ಪ್ರತಿಭಾವಂತರನ್ನು ಗುರುತಿಸಿ 24 ಮಂತ್ರಾಲಯಗಳಿಗೆ
ನೇಮಕ ಮಾಡಿಕೊಳ್ಳಲು ಆಲೋಚಿಸಿತು, 45 ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಸಹಾಯಕ
ಕಾರ್ಯದರ್ಶಿಗಳನ್ನು ‘ಸಮಾನಾಂತರ ಪ್ರವೇಶ’ದ (ಲ್ಯಾಟರಲ್ ಎಂಟ್ರಿ) ಮೂಲಕ ಕರೆತರಲು ನಿರ್ಧರಿಸಿತು.

ಆದರೆ ಈ ನಿರ್ಧಾರಕ್ಕೆ ವಿಪಕ್ಷಗಳು ಮತ್ತು ಎನ್‌ಡಿಎ ಒಕ್ಕೂಟದ ಕೆಲ ಅಂಗಪಕ್ಷಗಳು ಆಕ್ಷೇಪಿಸಿ, ‘ಕೇಂದ್ರದ ಈ
ನಡೆಯು ಮೀಸಲಾತಿಗೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ’ ಎಂದು ವಿರೋಧ ವ್ಯಕ್ತಪಡಿಸಿದವು.
ಹೀಗಾಗಿ ಸರಕಾರವು ‘ಸಮಾನಾಂತರ ಪ್ರವೇಶ’ದ ಪ್ರಸ್ತಾಪವನ್ನು ಕೈಬಿಡಬೇಕಾಯಿತು. ಮಂತ್ರಾಲಯಗಳಿಗೆ
ನವಶಕ್ತಿ ಮತ್ತು ಗತಿಯನ್ನು ತುಂಬುವ ಕೆಲಸ ಅಲ್ಲಿಗೇ ನಿಂತಿತು. ಸರಕಾರಿ ನೇಮಕಾತಿ ಮತ್ತು ಪದೋನ್ನತಿಯ
ವಿಷಯದಲ್ಲಿ ಪ್ರತಿಭೆಗಿಂತಲೂ ಜಾತಿ ಆಧರಿತ ಮೀಸಲಾತಿ ವ್ಯವಸ್ಥೆಯೇ ಮುಖ್ಯವಾಗುವುದರಿಂದ ನಿಜಪ್ರತಿಭೆಗಳು
ತಮ್ಮ ಕೌಶಲಕ್ಕೆ ತಕ್ಕ ಪ್ರತಿಫಲ ಸಿಗುವೆಡೆಗೆ ವಲಸೆ ಹೋಗುತ್ತವೆ.

ಆದರೆ, ಭಾರತದಲ್ಲಿ ಒಂದು ಆಶಾದಾಯಕ ಬೆಳವಣಿಗೆಯೂ ಆಗುತ್ತಿದ್ದು, ಹೂಡಿಕೆ ಮತ್ತು ನವೋದ್ಯಮಗಳ ಅಭಿವೃದ್ಧಿಗೆ ಪೂರಕ ವಾತಾವರಣವೂ ನಿರ್ಮಾಣವಾಗುತ್ತಿದೆ. ಹೀಗಾಗಿ ವಿದೇಶಗಳಿಗೆ ವಲಸೆ ಹೋಗಿದ್ದ ಪ್ರತಿಭಾ ವಂತರು ಭಾರತಕ್ಕೆ ಮರಳಿ ಇಲ್ಲಿ ನವೋದ್ಯಮಗಳನ್ನು ಆರಂಭಿಸುತ್ತಿದ್ದಾರೆ. ಭಾರತದಲ್ಲಿರುವ ಶೇ.25ರಷ್ಟು ಸ್ಟಾರ್ಟಪ್‌ಗಳನ್ನು ಸ್ಥಾಪಿಸಿರುವವರು ವಿದೇಶವಾಸಿ ಭಾರತೀಯರು. ಈ ಬೆಳವಣಿಗೆಯನ್ನು ‘ರಿವರ್ಸ್ ಬ್ರೈನ್ ಡ್ರೈನ್’ ಎಂದು ಗುರುತಿಸಲಾಗಿದೆ. ‘ಕ್ಲೌಡ್ ತಂತ್ರಜ್ಞಾನ’ ಆಧರಿತ ವಹಿವಾಟುಗಳಿಗೆ ಬೆಂಬಲ ನೀಡುವ ಖ್ಯಾತ ‘ಝೋಹೋ ಕಂಪನಿ’ಯ ಶ್ರೀಧರ್ ವೆಂಬು ಅವರು ಅಮೆರಿಕದಿಂದ ಭಾರತಕ್ಕೆ ಮರಳಿ ಇಲ್ಲಿಂದಲೇ ಕಂಪನಿಯನ್ನು ನಡೆಸು ತ್ತಿದ್ದಾರೆ. ತಮಿಳುನಾಡಿನ ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ಕೊಟ್ಟು ತಮ್ಮ ಸಂಸ್ಥೆಯಲ್ಲಿ ಉದ್ಯೋಗವನ್ನು ಕಲ್ಪಿಸಿ ಕೊಡುತ್ತಿದ್ದಾರೆ. ಇಂಥ ಬೆಳವಣಿಗೆಗಳು ಭಾರತದ ಪಾಲಿಗೆ ಭರವಸೆದಾಯಕವಾಗಿ ಕಾಣುತ್ತಿವೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)