Sunday, 11th May 2025

ಕೊನೆಗೂ ತನುಜಾ ಪರೀಕ್ಷೆ ಬರೆದಳು, ನಾನು ಧನ್ಯ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಮೊನ್ನೆ ರಾತ್ರಿ ಹತ್ತು ಗಂಟೆಗೆ ಅರ್ನಾಬ್ ಗೋಸ್ವಾಮಿ ಅವರ ‘ರಿಪಬ್ಲಿಕ್ ಟಿವಿ’ಯಲ್ಲಿ ಪ್ಯಾನಲ್ ಡಿಸ್ಕಷನ್‌ನಲ್ಲಿ ಕುಳಿತಿದ್ದಾಗ, ನನ್ನ ಮೊಬೈಲ್‌ಗೆ ಒಂದೇ ಸಮನೆ ಕರೆ ಬರುತ್ತಿತ್ತು. ನಾನು ನೇರ ಪ್ರಸಾರದಲ್ಲಿದ್ದುದರಿಂದ ಆ ಕರೆಯನ್ನು ಸ್ವೀಕರಿಸುವಂತಿರಲಿಲ್ಲ. ರಾತ್ರಿ ಹನ್ನೊಂದಕ್ಕೆ ಕಾರ್ಯ ಕ್ರಮ ಮುಗಿಯುವ ಹೊತ್ತಿಗೆ ಅದೊಂದೇ ನಂಬರಿನಿಂದ ಅನೇಕ ಮಿಸ್ಡ್ ಕಾಲ್‌ಗಳು ಬಂದಿದ್ದವು. ನಾನು ವಾಪಸ್ ಫೋನ್ ಮಾಡಿದೆ. ಆ ಕಡೆಯಿಂದ ಹೆಣ್ಣು ದನಿ.

‘ಸಾರ್, ನಾನು ಶಿವಮೊಗ್ಗ ಜಿ ಶಿಕಾರಿಪುರದಿಂದ ಐವತ್ತು ಕಿಮಿ ದೂರದಲ್ಲಿರುವ ಮನಹಳ್ಳಿ ಗ್ರಾಮದವಳು. ನನ್ನ ಮಗಳು ಹಿಂದಿನ ತಿಂಗಳು ನೀಟ್ ಪರೀಕ್ಷೆ ಬರೆಯಬೇಕಿತ್ತು. ಕೋವಿಡ್‌ ನಿಂದಾಗಿ ಸಾಧ್ಯವಾಗಲಿಲ್ಲ. ನಾಳೆ ನೀಟ್ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶವಿದೆ. ಆದರೆ ಅವಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಏನು ಮಾಡುವುದೋ ಗೊತ್ತಾಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ.’ ಎಂದು ಕೇಳಿಕೊಂಡರು. ನನಗೆ ಏನು ಮಾಡುವು ದೆಂದು ತಲೆಬುಡ ಗೊತ್ತಾಗಲಿಲ್ಲ.

ಪತ್ರಿಕಾ ಸಂಪಾದಕರಾದವರಿಗೆ ಸರಹೊತ್ತಿನಲ್ಲಿ ಫೋನ್ ಕರೆಗಳು ಬರುವುದು ಹೊಸತೇನಲ್ಲ. ನಾಳೆ ಮಧ್ಯಾಹ್ನ ಎರಡು ಗಂಟೆಗೆ ಪರೀಕ್ಷೆ ಬರೆಯಬೇಕು, ಈ ರಾತ್ರಿ ಅವರ ಮಗಳು ಇನ್ನೂ ಮನಹಳ್ಳಿಯ ಇದ್ದಾಳೆ. ನೀಟ್ ಪರೀಕ್ಷೆಯನ್ನು ಏರ್ಪಡಿಸುವುದು ಕೇಂದ್ರ ಸರಕಾರ. ಇಲ್ಲಿ ಯಾರಿಗೆ ಹೇಳುವುದು? ಇನ್ನು ಹದಿನಾಲ್ಕು ತಾಸಿದೆ. ಅಷ್ಟರೊಳಗೆ ಅವಳು ಸುಮಾರು ಮುನ್ನೂರು ಕಿಮಿ
ಪ್ರಯಾಣ ಮಾಡಿ, ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯಬೇಕು. ಇದು ಸಾಧ್ಯವಾ? ಏನು ಮಾಡುವುದು? ಈ ಸಲ ಪರೀಕ್ಷೆ ತಪ್ಪಿ ಹೋದರೆ, ಆಕೆಯ ಮಗಳ ಒಂದು ವರ್ಷ ವ್ಯರ್ಥವಾಗುತ್ತದೆ. ಅಲ್ಲಿ ತನಕ ಪಟ್ಟ ಪರಿಶ್ರಮವೆ ನೀರಿನಲ್ಲಿ ಹೋಮ ಮಾಡಿದಂತಾ ಗುತ್ತದೆ. ನೋಡೋಣ ನಾಳೆ ಬೆಳಗ್ಗೆ ಏನಾದರೂ ಮಾಡಲೇಬೇಕು ಎಂದು ಚಾದರ ಎಳೆದುಕೊಂಡು ನಿದ್ದೆ ಹೋಗ ಬೇಕೆನ್ನುವಷ್ಟ ರಲ್ಲಿ ನನ್ನ ಆತ್ಮೀಯ ಮತ್ತು ನೀಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಕೋಚಿಂಗ್ ಕ್ಲಾಸ್ ನಡೆಸುವ ಉತ್ಸಾಹಿ ಯುವಕ ಪ್ರದೀಪ ಈಶ್ವರ ಅವರ ಫೋನ್ ಬಂತು.

ಪ್ರದೀಪ್ ಧಾವಂತದಲ್ಲಿದ್ದರು. ‘ಸಾರ್, ನಿಮ್ಮ ಜತೆ ಈಗ ತಾನೇ ತಾಯಿಯೊಬ್ಬಳು ಮಾತಾಡಿರಬೇಕಲ್ಲ, ಅವಳ ಮಗಳು ತನುಜಾ ಳಿಗೆ ಪರೀಕ್ಷೆ ಬರೆಯಲು ಹೇಗಾದರೂ ಸಹಾಯ ಮಾಡಿ. ತುಂಬಾ ಬುದ್ಧಿವಂತೆ. ಕಷ್ಟಪಟು ಓದಿದ್ದಾಳೆ, ತಂದೆ-ತಾಯಿ ಅನಕ್ಷರ ಸ್ಥರು. ಬಹಳ ನಿರೀಕ್ಷೆ ಇಟ್ಟುಕೊಂಡು ಮಗಳನ್ನು ಓದಿಸಿದ್ದಾರೆ. ಹೇಗಾದರೂ ಮಾಡಿ ಈ ವಿಷಯವನ್ನು ಮುಖ್ಯಮಂತ್ರಿ ಗಳ ಕಿವಿಗೆ ಹಾಕಿ. ಪ್ರಯೋಜನವಾದೀತು’ ಎಂದರು. ‘ಈ ರಾತ್ರಿ ಅವರನ್ನು ಸಂಪರ್ಕಿಸುವುದು ಅಸಾಧ್ಯ. ನಾಳೆ ಬೆಳಗ್ಗೆ ಏಳು ಗಂಟೆಗೆ ಅವರನ್ನು ಸಂಪರ್ಕಿಸುವೆ. ಯಾವುದಕ್ಕೂ ತನುಜಾ, ಬೆಳಗ್ಗೆಯೇ ಬೆಂಗಳೂರಿಗೆ ಹೊರಟು ಬರಲಿ. ಏನೋ ಒಂದು ಉಪಾಯ ಮಾಡೋಣ. ದೇವರಿದ್ದಾನೆ ಪ್ರದೀಪ್’ ಎಂದೆ.

ಬೆಳಗ್ಗೆ ಆರು ಗಂಟೆಗೆ ಸರಿಯಾಗಿ ಪ್ರದೀಪ್ ಫೋನ್ ಬಂತು. ‘ಸರ್, ಮುಖ್ಯಮಂತ್ರಿಗಳಿಗೆ ಫೋನ್ ಮಾಡಿ’ ಎಂದರು. ಅಲ್ಲಿ ತನಕ ನಾನು ತನುಜಾ ಬಗ್ಗೆ ಏನೂ ಕೇಳಿರಲಿಲ್ಲ. ಅಲ್ಲದೇ ಅವಳ ಸಮಸ್ಯೆಯೇನು ಎಂಬುದನ್ನು ವಿವರವಾಗಿ ತಿಳಿದಿರಲಿಲ್ಲ. ಮುಖ್ಯ ಮಂತ್ರಿಗಳ ಜತೆ ಮಾತಾಡುವ ಮುನ್ನ ವಿವರಗಳನ್ನು ತಿಳಿದುಕೊಳ್ಳಬೇಕಿತ್ತು. ಆಗ ಪ್ರದೀಪ್ ವಿವರಿಸಿದರು. ಶಿವಮೊಗ್ಗದ ಗಾಜನೂರಿನಲ್ಲಿ ನವೋದಯ ವಿದ್ಯಾಲಯವಿದೆ. ತನುಜಾ ಅಲ್ಲಿ ಓದಿದವಳು. ಹತ್ತನೇ ತರಗತಿಯಲ್ಲಿ ಶೇ.೯೭ (ಸಿಬಿಎಸ್ಸಿ) ರಷ್ಟು ಅಂಕ ಗಳಿಸಿ ಉತ್ತೀರ್ಣಳಾದವಳು. ಪಿಯುಸಿ ಎರಡನೇ ವರ್ಷದಲ್ಲಿ ಶೇ.೮೮ ರಷ್ಟು ಅಂಕ ತೆಗೆದವಳು. ಅವಳಿಗೆ ಜೀವನದಲ್ಲಿ
ಡಾಕ್ಟರ್ ಆಗಬೇಕು ಎಂಬ ಅದಮ್ಯ ಆಕಾಂಕ್ಷೆ . ಮೊದಲ ಪ್ರಯತ್ನದಲ್ಲಿ ಅವಳಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ. ತೀವ್ರ ನಿರಾಸೆ ಯಾಯಿತು. ಆದರೆ ತನುಜಾ ಛಲ ಬಿಡಲಿಲ್ಲ.

ನವೋದಯ ವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳಿಗಾಗಿ ಪುಣೆಯ ದಕ್ಷಿಣ ಫೌಂಡೇಶನ್ ಎಂಬ ಸಂಸ್ಥೆ ಉಚಿತ ಕೋಚಿಂಗ್ ಕ್ಲಾಸ್ ಏರ್ಪಡಿಸುತ್ತದೆ. ಅಲ್ಲಿ ಆಯ್ಕೆಯಾಗುವುದು ಸಹ ಸುಲಭವಲ್ಲ. ದೇಶದಲ್ಲಿರುವ ೫೫೦ ನವೋದಯ ವಿದ್ಯಾಲಯಗಳಿಂದ ೩೭೫ ವಿದ್ಯಾರ್ಥಿಗಳನ್ನು ಆರಿಸುತ್ತಾರೆ. ಹಾಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ನೀಟ್ ಪರೀಕ್ಷೆಗೆ ಅಣಿಗೊಳಿಸುತ್ತಾರೆ. ತನುಜಾಗೆ ದಕ್ಷಿಣ -ಂಡೇಶನ್‌ನಲ್ಲಿ ಕೋಚಿಂಗ್ ಪಡೆಯಲು ಸೀಟು ಸಿಕ್ಕಿತು. ಆಕೆ ಒಂದು ವರ್ಷ ಪುಣೆಗೆ ಹೋದಳು. ಹಿಂದಿನ ತಿಂಗಳ ಹದಿ ಮೂರನೇ ತಾರೀಖಿನಂದು ನೀಟ್ ಪರೀಕ್ಷೆ ಇತ್ತು. ಅದಕ್ಕಿಂತ ಎರಡು ವಾರ ಮೊದಲು ಪುಣೆಯಿಂದ ವಾಪಸ್ ಬಂದು, ಪರೀಕ್ಷೆಗೆ
ಸನ್ನದ್ಧಳಾಗಿದ್ದಳು. ಇದೇ ವೇಳೆ, ತನುಜಾ ವಾಸಿಸುವ ಮನೆಯ ಸುತ್ತಮುತ್ತಲ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಯಿತು. ಮನೆಯಿಂದ ಹೊರಹೋಗುವಂತಿರಲಿಲ್ಲ. ಅಲ್ಲದೇ, ತನುಜಾಗೆ ತೀವ್ರ ಜ್ವರ ಬಂದು ಪರೀಕ್ಷೆ ಬರೆಯಲು ಆಗಲಿಲ್ಲ. ತನುಜಾ ಆಸೆ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು.

ಈ ಮಧ್ಯೆ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿತು. ಕಂಟೇನ್ಮೆಂಟ್ ವಲಯದಲ್ಲಿದ್ದವರು ಮತ್ತು ಕೋವಿಡ್ ಪಾಸಿಟಿವ್ ಆದವರಿಗೆ ಮತ್ತೊಮ್ಮೆ ಪರೀಕ್ಷೆ ಏರ್ಪಡಿಸುವಂತೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ (ಎನ್.ಟಿ.ಎ) ನಿರ್ದೇಶನ ನೀಡಿತು. ಆದರೆ ಪರೀಕ್ಷೆಗೆ ಮತ್ತೊಮ್ಮೆ ಕುಳಿತುಕೊಳ್ಳಲು ಕೋವಿಡ್, ಕಂಟೆನ್ಮೆಂಟ್ ವಲಯ ಘೋಷಣೆಗೆ ಸಂಬಂಧಿಸಿದ ಕೆಲವು ದಾಖಲೆ ಗಳನ್ನು ತನುಜಾ ಎನ್.ಟಿ.ಎ.ಗೆ ಇಮೇಲ್ ಮೂಲಕ ಕಳುಹಿಸಿಕೊಡಬೇಕಿತ್ತು. ಕಂಟೇನ್ಮೆಂಟ್ ವಲಯ ಘೋಷಣೆ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಯಲು ವಿಳಂಬವಾಯಿತು. ಅಲ್ಲದೇ ಅವಳಿದ್ದ ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕ ಇರಲಿಲ್ಲ.

ಹೀಗಾಗಿ ಅವಳಿಗೆ ಎನ್.ಟಿ.ಎ.ಗೆ ಇಮೇಲ್ ಮೂಲಕ ದಾಖಲೆಗಳನ್ನು ಕಳಿಸಲು ಸಾಧ್ಯವಾಗದೇ ಹೋಯಿತು. ನಿಗದಿತ ದಿನಾಂಕ ದೊಳಗೆ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವುದಾಗಿ ದಿಲ್ಲಿಯಲ್ಲಿರುವ ಎನ್.ಟಿ.ಎ. ತಿಳಿಸಿತು. ಇದರಿಂದಾಗಿ ಪರೀಕ್ಷೆ ಬರೆಯಲು ಸಿಕ್ಕ ಮತ್ತೊಂದು ಅವಕಾಶ ಸಹ ಕೈತಪ್ಪಿ ಹೋಯಿತು. ತನುಜಾಳಿಗೆ ಪರೀಕ್ಷೆ ಬರೆಯಲಾಗಲಿಕ್ಕಿಲ್ಲವೆಂಬ ಸುದ್ದಿ ದಕ್ಷಿಣ -ಂಡೇಶನ್‌ನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಗೊತ್ತಾಗಿ, ಕಾಳ್ಗಿಚ್ಚಿನಂತೆ ಹರಡಿತು. ಅವರೆಲ್ಲ ಟ್ವೀಟ್ ಮಾಡಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ.

ತನುಜಾ ಚಿಂತಾಕ್ರಾಂತಳಾಗಿದ್ದು ಆಗ. ಬೇರೆ ಮಾರ್ಗವೇ ಇರಲಿಲ್ಲ. ಆಗ ತನುಜಾ, ಪ್ರದೀಪ್ ಅವರನ್ನು ಸಂಪರ್ಕಿಸಿದ್ದು. ಆದರೆ ದಿಲ್ಲಿಯಲ್ಲಿರುವ ಎನ್.ಟಿ.ಎ. ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ಮನವೊಲಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು ಆಗದ ಮಾತಾಗಿತ್ತು. ಅಷ್ಟಕ್ಕೂ ಸಮಯವೂ ಇರಲಿಲ್ಲ. ಪ್ರದೀಪ್ ಈ ಎ ವೃತ್ತಾಂತಗಳನ್ನು ಹೇಳಿದಾಗ ಬೆಳಗಿನ ಆರೂವರೆ. ಮಧ್ಯಾಹ್ನ ಎರಡು ಗಂಟೆಗೆ ಪರೀಕ್ಷೆ. ತನುಜಾ ಇನ್ನೂ ಮನಹಳ್ಳಿಯ ಇದ್ದಳು. ತನುಜಾ ಅಲ್ಲಿಂದ ಹೊರಡಲಿ, ಬೆಂಗಳೂರು ತಲುಪುವುದರೊಳಗೆ, ಅವಳಿಗೆ ಪರೀಕ್ಷೆ ಬರೆಯುವ ಏರ್ಪಾಟು ಮಾಡೋಣ ಎಂದು ನಿರ್ಧರಿಸಿದೆವು. ನಾನು ಮುಖ್ಯಮಂತ್ರಿ ಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರ ಖಾಸಗಿ ನಂಬರ್ ಸಂಪರ್ಕಕ್ಕೆ ಸಿಗಲಿಲ್ಲ. ಸಿಎಂ ಗನ್ ಮನ್ ಸಿಕ್ಕ. ‘ಅರ್ಜೆಂಟಾಗಿ
ಸಿಎಂ ಅವರ ಜತೆ ಮಾತಾಡಬೇಕಿತ್ತು’ ಎಂದೆ. ಅದಕ್ಕೆ ಆತ, ‘ನಾನು ಅರ್ಧ ಗಂಟೆಯ ನಂತರ, ಸಿಎಂ ಸಾಹೇಬ್ರ ಮನೆ ತಲುಪು ತ್ತೇನೆ. ಅಲ್ಲಿಗೆ ಹೋಗಿ ಫೋನ್ ಮಾಡಿಸುತ್ತೇನೆ’ ಎಂದ. ಕ್ಷಣಕ್ಷಣವೂ ಮುಖ್ಯವಾಗಿತ್ತು. ಬೇರೆ ಏನು ಮಾಡುವುದು ಎಂದು ಯೋಚಿಸಿದೆ. ನನಗೆ ದಿಲ್ಲಿಯ ಎನ್ .ಟಿ.ಎ.ಯಲ್ಲಿ ಯಾರ ಪರಿಚಯವೂ ಇರಲಿಲ್ಲ.

ಸ್ಥಳೀಯ ಅಧಿಕಾರಿಗಳು ಯಾರಿದ್ದಾರೆ ಎಂಬುದು ಗೊತ್ತಿರಲಿಲ್ಲ. ಬೇರೆ ದಾರಿ ಕಾಣದೇ, ಏನೋ ಒಳ್ಳೆಯದಾಗಬಹುದು ಎಂಬ
ಆಶಯ ದಿಂದ, ತನುಜಾಳ ಸಮಸ್ಯೆಯನ್ನು ಎರಡು ಸಾಲಿನಲ್ಲಿ ಬರೆದು, ‘ಸಿಎಂ ಅವರೇ, ತಕ್ಷಣ ಮಧ್ಯಪ್ರವೇಶಿಸಿ, ಸಹಾಯ ಮಾಡಿ’ ಎಂದು ಕೋರಿ, ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದೆ. ಟ್ವೀಟ್ ಸ್ಕ್ರೀನ್ ಶಾಟ್ ತೆಗೆದು, ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ವಾಟ್ಸಪ್ಪ್ ಮಾಡಿ, ‘ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಆ ಹುಡುಗಿಗೆ ಸಹಾಯ ಮಾಡಿ’ ಎಂದು ಮೆಸೇಜ್ ಹಾಕಿದೆ.

ಇದಾಗಿ ಒಂದು ತಾಸು ಕಳೆದಿರಬಹುದು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಸುಧಾಕರ ಅವರ ಮಾಧ್ಯಮ ಸಲಹೆಗಾರ ಎಲ.ಪ್ರಕಾಶ್ ಫೋನ್ ಮಾಡಿದರು. ಪ್ರಕಾಶ್ ನನ್ನೊಂದಿಗೆ ‘ವಿಜಯ ಕರ್ನಾಟಕ’ದಲ್ಲಿ ಹತ್ತು ವರ್ಷ ಕೆಲಸ ಮಾಡಿ ದವರು. ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು ಅವರ ಸ್ವಭಾವ. ‘ಸರ್, ನೀವು ಮಾಡಿದ ಟ್ವೀಟ್‌ನ್ನು ಸಚಿವರು
ನೋಡಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ದಿಲ್ಲಿಯ ಎನ್.ಟಿ.ಎ. ಅಧಿಕಾರಿಗಳೊಂದಿಗೆ ಮಾತಾಡಿದ್ದಾರೆ. ಅವರು ಕೇಳಿದ ವಿವರ, ಪತ್ರಗಳನ್ನು ಕೊಡುವುದಾಗಿ ಸಚಿವರು ಹೇಳಿದ್ದಾರೆ.

ತನುಜಾಗೆ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ ನೀಡಲೇಬೇಕು ಎಂದು ಹೇಳಿದ್ದಾರೆ. ಅದಾದ ಬಳಿಕ, ಬೆಂಗಳೂರಿನಲ್ಲಿರುವ ಅಧಿಕಾರಿಗಳಿಗೂ ಮಾತಾಡಿದ್ದಾರೆ. ಅವಳಿಗೆ ಅನುಮತಿ ಸಿಗುತ್ತದೆ. ಕಳೆದ ಒಂದೂವರೆ ಗಂಟೆಯಿಂದ ಇದೇ ಕೆಲಸದಲ್ಲಿ ನಿರತ ರಾಗಿದ್ದಾರೆ’ ಎಂದು ಪ್ರಕಾಶ್ ಹೇಳಿದರು. ತಕ್ಷಣ ನಾನು ಪ್ರದೀಪ್ ಸಂಪರ್ಕಿಸಿ, ‘ತನುಜಾ ಎಲ್ಲಿದ್ದಾಳೆ’ ಎಂದು ಕೇಳಿದೆ. ಅವಳನ್ನು
ಆಂಬುಲೆನ್ಸ್‌ನಲ್ಲಿ ಕರೆತರಲು ಪ್ರದೀಪ್ ಪ್ಲಾನ್ ಮಾಡಿದ್ದರು. ಆದರೆ ಅನುಮತಿ, ಹಾಳುಮೂಳೆಂದು ಅದೇಕೋ ಸಾಧ್ಯವಾಗಲಿಲ್ಲ. ಅವಳು ಬಾಡಿಗೆ ಕಾರಿನಲ್ಲಿ ಆಗಲೇ ಹೊರಟಿರುವುದು ತಿಳಿಯಿತು. ಎರಡು ಗಂಟೆಯೊಳಗೆ ತಲುಪಬಹುದು ಎಂದರು.

ಪ್ರಕಾಶ್ ಫೋನ್ ಇಡುತ್ತಿರುವಂತೆ, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಡಾ.ಕಾರ್ತಿಕ್ ಫೋನ್ ಬಂತು. ‘ಮುಖ್ಯಮಂತ್ರಿಗಳು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಗೆ ಫೋನ್ ಮಾಡಿ, ಆ ಹುಡುಗಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲೇಬೇಕು ಎಂದು
ಮೌಖಿಕವಾಗಿ ಆದೇಶಿಸಿದ್ದಾರೆ. ಈ ಸಂಬಂಧವಾಗಿ ಅವರು ಬರೆದ ಪತ್ರವನ್ನೂ ಅಧಿಕಾರಿಗಳಿಗೆ ತಲುಪಿಸುತ್ತಿದ್ದೇವೆ. ತನುಜಾ ಪರೀಕ್ಷೆ ಬರೆಯಲು ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಅಂಥ ಸನ್ನಿವೇಶ ಬಂದರೆ ನನ್ನನ್ನು ತಕ್ಷಣ ಸಂಪರ್ಕಿಸಿ’ ಎಂದರು. ಅರ್ಧದ್ಧ ಗಂಟೆಗೆ ಪ್ರದೀಪ್, ತನುಜಾಳ ಬಗ್ಗೆ ವಿವರ ನೀಡುತ್ತಿದ್ದರು. ಪಾಪ, ಆ ಹುಡುಗಿ ಮುನ್ನೂರು ಕಿಮಿ ಪ್ರಯಾಣ ಮಾಡಿ, ಊಟ ಸಹ ಮಾಡದೇ ಹೇಗೆ ಪರೀಕ್ಷೆ ಬರೆಯುತ್ತಾಳೋ ಏನೋ? ಹನ್ನೆರಡೂವರೆಯೊಳಗೆ ನೆಲಮಂಗಲ ಕ್ರಾಸ್ ತಲುಪ ದಿದ್ದರೆ, ಎರಡು ಗಂಟೆಗೆ ನ್ಯಾಷನಲ್ ಕಾಲೇಜ್ ತಲುಪುವುದು ಕಷ್ಟ. ಇಷ್ಟೆ ಶ್ರಮ ಹಾಕಿದು ವ್ಯರ್ಥವಾಗುತ್ತದೆ ಎಂದು ಅವರು ಚಡಪಡಿಸುತ್ತಿದ್ದರು.

ತನುಜಾ ಅವಳ ಇರುವಿಕೆಯ ಲೈವ್ ಕಾಮೆಂಟರಿ ಕೊಡುತ್ತಿದ್ದರು. ಅದಲ್ಲದೇ ಪ್ರಕಾಶ್ ಮತ್ತು ಡಾ.ಕಾರ್ತಿಕ್ ಕೂಡ ಫೋನ್ ಮಾಡಿ ವಿಚಾರಿಸುತ್ತಿದ್ದರು. ನೆಲಮಂಗಲ ಕ್ರಾಸ್ ದಾಟಿದಾಗ ಒಂದು ಗಂಟೆಯಾಗಿದ್ದರಿಂದ, ಸಿಟಿಯೊಳಗೆ ಎಷ್ಟೇ ವೇಗವಾಗಿ
ಬಂದರೂ, ನಿಗದಿತ ಸಮಯಕ್ಕೆ ಪರೀಕ್ಷಾ ಹಾಲ್‌ಗೆ ಹೋಗಲಾಗುವುದಿಲ್ಲ ಎಂಬುದು ಸ್ಪಷ್ಟವಾದಾಗ, ಪ್ರದೀಪ್ ಒಂದು ಉಪಾಯ ಮಾಡಿದರು. ನಾಗಸಂದ್ರ ಮೆಟ್ರೋ ನಿಲ್ದಾಣ ಬರುತ್ತಿದ್ದಂತೆ, ಕಾರನ್ನು ಅಲ್ಲಿಯೇ ಬಿಟ್ಟು, ಎಲಚೇನಹಳ್ಳಿಗೆ ಹೋಗುವ ಮೆಟ್ರೋ ರೈಲಿನಲ್ಲಿ ಬರುವಂತೆ ತನುಜಾಗೆ ಹೇಳಿದರು. ಅದು clinching! ಕಾರಣ ಆ ಮೆಟ್ರೋ ರೈಲು ನ್ಯಾಷನಲ್ ಕಾಲೇಜು ಮಾರ್ಗವಾಗಿ ಪಯಣಿಸುವುದರಿಂದ, ರೈಲನ್ನು ಬದಲಿಸುವ ಪ್ರಸಂಗ ಬರಲಿಲ್ಲ. ಮುಂದೆ, ಸಿನಿಮಾದಲ್ಲಿನ ಚೇಸಿಂಗ್ ದೃಶ್ಯಗಳಂತೆ
ಎಲ್ಲವೂ ನಡೆದು ಹೋದವು.

ಅವಳು ಸರಿಯಾದ ಸಮಯಕ್ಕೆ ತಲುಪುವುದು ಸಾಧ್ಯ ಆಗಲಿಕ್ಕಿಲ್ಲ, ಏನು ಮಾಡುವುದೋ ಗೊತ್ತಾಗುತ್ತಿಲ್ಲ ಎಂದು ಪ್ರದೀಪ್ ಕನವರಿಸುತ್ತಿದ್ದರು. ‘ಒಂದು ವೇಳೆ ಅವಳು ತಲುಪುವುದು ಅರ್ಧ ಗಂಟೆ ತಡವಾದರೆ ಏನು ಮಾಡುವುದು ಸಾರ್? ಇಷ್ಟೆ ಮಾಡಿದ್ದು ನಿರರ್ಥಕವಾಗಿ ಹೋಗುತ್ತದಲ್ಲ, ಅವಳ ಮತ್ತೊಂದು ವರ್ಷ ಹಾಳಾಗಿ ಹೋಗುತ್ತದಲ್ಲ’ ಎಂದು ಅವರು ಬಡಬಡಿಸು ತ್ತಿದ್ದರು. ‘ನನ್ನ ಒಳಮನಸ್ಸು ಹೇಳುತ್ತಿದೆ ಎ ಸರಿ ಹೋಗುತ್ತೆ ಅಂತ. ಕೂಲ್ ಪ್ರದೀಪ್’ ಎಂದು ಹೇಳಿದರೂ ಅವರ ಚಡಪಡಿಕೆ
ನಿಂತಿರಲಿಲ್ಲ. ಅವರ ಫೋನ್ ಬಂದರೆ ಸಾಕು, ಟೆನ್ಶನ್ ಆಗುತ್ತಿತ್ತು.

ಕ್ಲೆ ಮ್ಯಾಕ್ಸ್ ಏನು ಗೊತ್ತಾ? ತನುಜಾ ಪರೀಕ್ಷಾ ಕೊಠಡಿಯ ಮುಂದೆ ನಿಂತು ನಿಟ್ಟುಸಿರು ಬಿಟ್ಟಾಗ, ಇನ್ನೂ ಎರಡು ನಿಮಿಷ ಬಾಕಿ ಇತ್ತು ! ಎಲ್ಲವೂ ಪವಾಡದಂತೆ ನಡೆದು ಹೋಯಿತು. ” Sir, she did it’  ಎಂದು ಪ್ರದೀಪ್ ಪುಟ್ಟ ಹುಡುಗನಂತೆ ಸಂತಸಪಟ್ಟರು.
ಮೂರು ತಾಸು ಪರೀಕ್ಷೆ ಬರೆದು ಹೊರ ಬಂದ ತನುಜಾ ಭಾರ ಕೆಳಗಿಟ್ಟು ನಿರಾಳವಾಗಿದ್ದಳು. ‘ಸಾರ್, ನನಗೆ ಮೆಡಿಕಲ್ ಸೀಟು ಸಿಗಬಹುದೆಂಬ ವಿಶ್ವಾಸವಿದೆ. ಚೆನ್ನಾಗಿ ಬರೆದಿದ್ದೇನೆ’ ಎಂದಳು. ನನಗೆ ಮಾತಾಡಲು ಆಗಲೇ ಇಲ್ಲ. ಗಂಟಲು ಉಮ್ಮಳಿಸಿ ಬಂತು.
ಧನ್ಯೋಸ್ಮಿ !

ಇಡೀ ಘಟನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ, ಡಾ ಕಾರ್ತಿಕ್, ಡಾ.ಸುಧಾಕರ, ಎಲ.ಪ್ರಕಾಶ್ ತೋರಿದ ಕಾಳಜಿ, ಬದ್ಧತೆ ನಿಜಕ್ಕೂ ಶ್ಲಾಘನೀಯ. ನಾನು ದಿನಾ ಹತ್ತಾರು ಟ್ವೀಟ್ ಮಾಡುತ್ತಿರುತ್ತೇನೆ. ಟ್ವಿಟರ್ ಎಂಬುದು ಗಂಗಾ ನದಿಯಂತೆ. ಅಲ್ಲಿ ದಿನ ಕೋಟ್ಯಂತರ ಟ್ವೀಟ್‌ಗಳು ಹರಿದುಹೋಗುತ್ತಲೇ ಇರುತ್ತವೆ. ಒಂದು ಟ್ವೀಟ್ ನೋಡಿ, ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಸ್ಪಂದಿಸಿದ್ದು ಸಣ್ಣ ಮಾತಲ್ಲ. ಅದು ಅವರ ಸೂಕ್ಷ್ಮ ಸಂವೇದನೆಗೆ ಸಾಕ್ಷಿ. ಇದರಿಂದ ಒಬ್ಬ ಬಡ ವಿದ್ಯಾರ್ಥಿನಿ ಬದುಕು ಬದಲಾಗಬಹುದು. ಅವಳಿಂದ ಮುಂದೆ ಸಮಾಜಕ್ಕೆ ಮಹತ್ತರವಾದ ಉಪಕಾರವಾಗಬಹುದು. ಒಂದು ವೇಳೆ ಅವಳಿಗೆ ಪರೀಕ್ಷೆ ಬರೆಯಲಾಗದಿದ್ದರೆ, ಅವಳ ಭವಿಷ್ಯವೇ ಕಮರಿಹೋಗುತ್ತಿತ್ತು. ಸರಕಾರದಲ್ಲಿ ದೊಡ್ಡ ಹುzಯಲ್ಲಿರು
ವವರು ಮಾನವೀಯ ಗುಣಗಳಿಂದ ಅಧಿಕಾರ ನಡೆಸಿದರೆ, ಎಂಥ ಅದ್ಭುತಗಳನ್ನು ಮಾಡಬಹುದು ಎಂಬುದಕ್ಕೆ ಇದೊಂದು
ನಿದರ್ಶನ. ಸಚಿವರ ಒಂದು ಮಾತು, ಒಂದು ಫೋನ್ ಕರೆ, ಒಂದು ಪತ್ರ ಯಾರದೋ ಜೀವನವನ್ನು ಪಾವನ ಮಾಡಬಹುದು.

ತನುಜಾ ಪರವಾಗಿ, ನಾನು ಯಡಿಯೂರಪ್ಪ ಮತ್ತು ಡಾ.ಸುಧಾಕರ್‌ಗೆ ಅಭಿನಂದನೆಗಳನ್ನು ಹೇಳುತ್ತೇನೆ. ಯಡಿಯೂರಪ್ಪ ಮತ್ತು ಡಾ.ಸುಧಾಕರ ತೋರಿದ ಸೂಕ್ಷ್ಮತೆ, ತಮ್ಮ ಬಿಡುವಿಲ್ಲದ ದಿನಚರಿ ಮತ್ತು ಮಹತ್ವದ ಜವಾಬ್ದಾರಿಗಳ ನಡುವೆಯೂ, ಶ್ರೀಸಾಮಾನ್ಯನ ದನಿಗೆ ಓಗುಡುವ ಪ್ರಧಾನಿ ಮೋದಿ ಅವರ ಕಾರ್ಯಶೈಲಿಯನ್ನು ನೆನಪಿಸಿತು.

Leave a Reply

Your email address will not be published. Required fields are marked *