ಸಂಗತ
ಡಾ.ವಿಜಯ್ ದರಡಾ
!ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗುತ್ತಿದ್ದಂತೆ ಎಲ್ಲರೂ ಈ ಆಯ್ಕೆಯ ಪರಿಣಾಮಗಳನ್ನು ಲೆಕ್ಕಹಾಕಲು ಆರಂಭಿಸಿದ್ದಾರೆ. ಹೇಳಿಕೇಳಿ ಜಗತ್ತಿಗೆ ತಾನೇ ದೊಡ್ಡಣ್ಣ ಎಂದು ಬಿಂಬಿಸಿಕೊಳ್ಳುವ ದೇಶ ಅಮೆರಿಕ. ಅಲ್ಲಿ ನಡೆದ ಈ ಚುನಾವಣೆಯ ಫಲಿತಾಂಶ ನಿಸ್ಸಂಶಯವಾಗಿ ಜಗತ್ತಿನ ಇತರ ದೇಶಗಳ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಟ್ರಂಪ್ ಆಳ್ವಿಕೆಯ ಬಗ್ಗೆ ಎಲ್ಲರಿಗೂ ಕುತೂಹಲಗಳಿವೆ. ಅಮೆರಿಕವು ಒಂದಲ್ಲಾ ಒಂದು ರೀತಿಯಲ್ಲಿ ಜಗತ್ತಿನ ಎಲ್ಲಾ ದೇಶಗಳ ಮೇಲೂ ನಿರಂತರವಾಗಿ ಪ್ರಭಾವ ಬೀರುತ್ತಿರುತ್ತದೆ.
ಆದ್ದರಿಂದ ಅಲ್ಲಿನ ಚುನಾವಣೆಯ ಫಲಿತಾಂಶವನ್ನು ನಾನಾ ದೇಶಗಳ ರಾಜಕೀಯ ವಲಯದಲ್ಲಿ ನಾನಾ ರೀತಿಯಲ್ಲಿ ವಿಶ್ಲೇಷಿಸುವುದು ಸಹಜವೇ ಆಗಿದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಭಾರತದ ಜತೆಗೆ ಅಮೆರಿಕದ ಸಂಬಂಧ ಚೆನ್ನಾಗಿತ್ತು. ಈ ಸಲದ ಕತೆಯೇನು ಎಂಬುದನ್ನು
ಮುಂಬರುವ ದಿನಗಳೇ ಹೇಳಬೇಕು. ಅದು ಹಾಗಿರಲಿ, ಒಂದು ಪ್ರಶ್ನೆಗೆ ಉತ್ತರ ನನಗೆ ಇನ್ನೂ ಸಿಕ್ಕಿಲ್ಲ. ಏಕೆ ಅಮೆರಿಕದ ಚುನಾವಣೆಯ ಮೇಲೆ ರಷ್ಯಾ ಪ್ರಭಾವ ಬೀರುತ್ತದೆ ಎಂದು ಪದೇಪದೆ ಆರೋಪಗಳು ಬರುತ್ತವೆ? ನವೆಂಬರ್ ೫ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯುತ್ತಿತ್ತು. ಆಗ ಮಿಶಿಗನ್, ಅರಿಜೋನಾ, ಜಾರ್ಜಿಯಾ, ವಿಸ್ಕಾನ್ಸಿನ್ ಸೇರಿದಂತೆ ಅನೇಕ ರಾಜ್ಯಗಳ ಮತಗಟ್ಟೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಗಳು ಬಂದಿದ್ದವು. ಆ ಇ-ಮೇಲ್ಗಳೆಲ್ಲ ರಷ್ಯಾದಿಂದಲೇ ಬಂದಿದ್ದರಿಂದ ರಷ್ಯಾ ಮೇಲೆ ಸಹಜವಾಗಿಯೇ ಅನುಮಾನ ಬರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಆದರೆ, ಅಂಥ ಬೆದರಿಕೆಗಳು ಮತದಾರರ ಮೇಲೆ ಪರಿಣಾಮ ಬೀರುತ್ತವೆಯೇ? ಇದು ಸ್ಪಷ್ಟವಿಲ್ಲ. ಎರಡು ತಿಂಗಳ ಹಿಂದೆ ಮೈಕ್ರೋಸಾಫ್ಟ್ ಕಂಪನಿ ಕೂಡ ರಷ್ಯಾದಿಂದ ಯಾರೋ ಕಮಲಾ ಹ್ಯಾರಿಸ್ ಬಗ್ಗೆ ಫೇಕ್ ವಿಡಿಯೋಗಳನ್ನು ಹರಿಬಿಟ್ಟು ಅಪಪ್ರಚಾರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿತ್ತು. ೨೦೧೧ರಲ್ಲಿ ಕಮಲಾ ಹ್ಯಾರಿಸ್ ಕಾರು ಅಪಘಾತ ಮಾಡಿ ಸಣ್ಣ ಹುಡುಗಿಯೊಬ್ಬಳು ಶಾಶ್ವತ ವಿಕಲಚೇತನಳಾಗು ವಂತೆ ಮಾಡಿದ್ದಾರೆ ಎಂದು ಆರೋಪಿಸುವ ಕೆಲ ವಿಡಿಯೋಗಳು ಇಂಟರ್ನೆಟ್ನಲ್ಲಿ ಪ್ರತ್ಯಕ್ಷವಾಗಿದ್ದವು. ಮೂಲ ಕೆದಕಿ ನೋಡಿದರೆ, ಅಂಥದೊಂದು ಅಪಘಾತವೇ ನಡೆದಿರಲಿಲ್ಲ. ಇನ್ನು, ಈ ವರ್ಷದ ಸೆಪ್ಟೆಂಬರ್ ೪ರಂದು ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಗಾರ್ಲಂಡ್ ಅವರು ರಷ್ಯಾದ ಸರಕಾರಿ ಮಾಧ್ಯಮ ಸಂಸ್ಥೆಯಾದ ಆರ್ಟಿ ಮೂಲಕ ಅಮೆರಿಕದ ಸಂಸ್ಥೆಯೊಂದಕ್ಕೆ ಲಂಚ ಪಾವತಿಸಿ ರಷ್ಯಾದ ಅಜೆಂಡಾವನ್ನು ಅಮೆರಿಕದಲ್ಲಿ ಹರಡುವಂತೆ ಸುಪಾರಿ ನೀಡಲಾಗಿದೆ ಎಂದು ಆರೋಪಿಸಿದ್ದರು. ರಷ್ಯಾ ಅದನ್ನು ಅಲ್ಲಗಳೆದಿತ್ತು. ಅಮೆರಿಕದ ಚುನಾವಣೆಯಲ್ಲಿ ರಷ್ಯಾ ಕೈಯಾಡಿಸುವುದು ಇದೇ ಮೊದಲಲ್ಲ. ೨೦೧೬ರಲ್ಲೂ ಅಂದಿನ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಅಪಪ್ರಚಾರ ಮಾಡಲು ‘ಲಖ್ತಾ’ ಎಂಬ ಕಾರ್ಯಾಚರಣೆಯನ್ನು ರಷ್ಯಾ ನಡೆಸಿದ ಆರೋಪ ಕೇಳಿಬಂದಿತ್ತು. ಆ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ಗೆ ಸಹಾಯ ಮಾಡುವಂತೆ ನೇರವಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೇ ಆದೇಶ ನೀಡಿದ್ದಾರೆ ಎಂದು ಹೇಳಲಾಗಿತ್ತು.
ಅದರ ಬಗ್ಗೆ ಅಮೆರಿಕದಲ್ಲಿ ಪೂರ್ಣ ಪ್ರಮಾಣದ ತನಿಖೆ ನಡೆದು, ೨೦೧೯ರಲ್ಲಿ ೪೫೦ ಪುಟಗಳ ಬೃಹತ್ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಅದರಲ್ಲಿ ಟ್ರಂಪ್ ಟೀಂ ಮತ್ತು ರಷ್ಯಾದ ಅಽಕಾರಿಗಳ ನಡುವೆ ನಡೆದ ೨೦೦ಕ್ಕೂ ಹೆಚ್ಚು ಸಂಭಾಷಣೆಗಳ ವಿವರವನ್ನು ದಾಖಲಿಸಲಾಗಿತ್ತು. ಆದರೆ, ರಷ್ಯನ್ ಸಂಚಿನ ಬಗ್ಗೆ ಮತ್ತು ಟ್ರಂಪ್ ಅದರಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಕಾನೂನುಬದ್ಧವಾದ ಸಾಕ್ಷ್ಯಗಳನ್ನು
ಒದಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅದು ಅಲ್ಲಿಗೇ ಮುಗಿಯಿತು.
ಇಷ್ಟಕ್ಕೂ ಅಮೆರಿಕದಲ್ಲಿ ಟ್ರಂಪ್ ಗೆದ್ದರೆ ರಷ್ಯಾದಲ್ಲಿ ಪುಟಿನ್ ಪಾಳಯಕ್ಕೆ ಏನು ಲಾಭ? ಬನ್ನಿ ನೋಡೋಣ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ಕಾರಣಕ್ಕೆರಷ್ಯಾ ಮೇಲೆ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಕಠಿಣ ನಿರ್ಬಂಧಗಳನ್ನು ವಿಽಸಿದ್ದಾರೆ. ಅಲ್ಲದೆ, ಉಕ್ರೇನ್ಗೆ ಬರೋಬ್ಬರಿ ೬೦ ಬಿಲಿಯನ್ ಡಾಲರ್ಗಳಷ್ಟು ನೆರವನ್ನು ಅಮೆರಿಕದಿಂದ ಒದಗಿಸಿದ್ದಾರೆ. ತಾವು ಯುದ್ಧ ನಡೆಸುತ್ತಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಝೆಲೆನ್ಸ್ಕಿಯ ಎಡವಟ್ಟುಗಳೇ ಕಾರಣ ಎಂದು ಪುಟಿನ್ ಪದೇಪದೆ ಹೇಳಿದ್ದಾರೆ. ಈ ಬಾರಿಯ ಚುನಾವಣೆಯ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಉಕ್ರೇನ್ಗೆ ಅಮೆರಿಕದಿಂದ ನೀಡುತ್ತಿರುವ ಎಲ್ಲಾ ಆರ್ಥಿಕ ಮತ್ತು ಮಿಲಿಟರಿ ನೆರವನ್ನು ಬಂದ್ ಮಾಡುವುದಾಗಿ ಒತ್ತಿ ಹೇಳಿದ್ದರು. ಝೆಲೆನ್ಸ್ಕಿ ಈ ಜಗತ್ತಿನ ಅತಿದೊಡ್ಡ ಸೇಲ್ಸ್ಮ್ಯಾನ್ ಎಂದೂ ದೂಷಿಸಿದ್ದರು. ಟ್ರಂಪ್ ಅವರ ಈ ನಿಲುವಿನಿಂದ ಖಂಡಿತ ರಷ್ಯಾಕ್ಕೆ ಲಾಭವಿದೆ. ಇದೇ ವೇಳೆ, ಪುಟಿನ್ ಮತ್ತು ಟ್ರಂಪ್ ನಡುವೆ ಪರಸ್ಪರ ಅಪಾರ ಗೌರವವಿದೆ ಎಂದು ಜಾಗತಿಕ ರಾಜಕೀಯ ವಲಯದಲ್ಲಿ ಅಭಿಪ್ರಾಯಗಳಿವೆ. ಆದರೂ, ಮಾಜಿ ಗುಪ್ತಚರ ಪುಟಿನ್ ನಿಜವಾಗಿಯೂ ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ರಿರುವುದು ನಿಜವೇ? ಈ ಪ್ರಶ್ನೆಗೆ ಉತ್ತರ ಈಗಲೂ ಸ್ಪಷ್ಟವಾಗುವುದಿಲ್ಲ. ಏಕೆಂದರೆ ಅಮೆರಿಕದಂಥ ಕಠಿಣ ಸೈಬರ್ ಭದ್ರತೆಯ ಹಾಗೂ ಅತ್ಯಾಧುನಿಕ ತನಿಖಾ ವ್ಯವಸ್ಥೆಗಳನ್ನೂ, ಗುಪ್ತಚರ ವಿಭಾಗಗಳನ್ನೂ ಹೊಂದಿರುವ ದೇಶದ ಆಂತರಿಕ ವ್ಯವಹಾರಗಳಲ್ಲಿ ಇನ್ನೊಂದು ದೇಶವು ಅಷ್ಟು ಸುಲಭಕ್ಕೆ ಕೈಯಾಡಿಸುವುದು ಅಶಕ್ಯ.
ಈಗ ಭಾರತದ ವಿಚಾರಕ್ಕೆ ಬರೋಣ. ಟ್ರಂಪ್ ಆಯ್ಕೆಯಿಂದ ಭಾರತದ ಮೇಲೆ ನೆಗೆಟಿವ್ ಪರಿಣಾಮಗಳು ಉಂಟಾಗುವ ಸಾಧ್ಯತೆ ಕಡಿಮೆ. ಟ್ರಂಪ್ ‘ಅಮೆರಿಕ ಮೊದಲು’ ಎಂಬ ನೀತಿಯನ್ನು ಪ್ರತಿಪಾದಿಸುತ್ತಿದ್ದರೂ ಅದರಿಂದ ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ
ಸಂಬಂಧಕ್ಕೆ ಧಕ್ಕೆಯೇನೂ ಆಗಲಾರದು. ಏಕೆಂದರೆ, ಭಾರತಕ್ಕೆ ಅಮೆರಿಕದ ಅಗತ್ಯವಿರುವುದು ನಿಜವೇ ಆದರೂ, ಅದಕ್ಕಿಂತ
ಹೆಚ್ಚಾಗಿ ಅಮೆರಿಕಕ್ಕೆ ಭಾರತದ ಅಗತ್ಯವಿದೆ. ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಚೀನಾವನ್ನು ಮಟ್ಟಹಾಕಲು ತಮ್ಮಿಂದಾದ ಎಲ್ಲಾ ಕ್ರಮಗಳನ್ನೂ ಕೈಗೊಂಡಿದ್ದರು. ಏಕೆಂದರೆ, ಜಗತ್ತಿನ ಮೇಲೆ ಅಮೆರಿಕ ಹೊಂದಿರುವ ಪ್ರಭಾವವನ್ನು ಕುಗ್ಗಿಸಲು ಡ್ರಾ ಗನ್ ದೇಶ ಯತ್ನಿಸುತ್ತಿತ್ತು.
ಹೀಗಾಗಿ ಯಾವತ್ತಿದ್ದರೂ ಚೀನಾ ತನಗೆ ಸವಾಲೆಸೆಯುವ ಶತ್ರುರಾಷ್ಟ್ರವೇ ಸರಿ ಎಂದು ಟ್ರಂಪ್ ಪರಿಗಣಿಸಿದ್ದರು.
ಅಮೆರಿಕ ಇಂದು ಅಲಂಕರಿಸಿರುವ ‘ಜಗತ್ತಿನ ಸೂಪರ್ಪವರ್ ದೇಶ’ ಎಂಬ ಪಟ್ಟವನ್ನು ಕಬಳಿಸಲು ಚೀನಾ ಯತ್ನಿಸುತ್ತಿರುವುದು ರಹಸ್ಯವೇನಲ್ಲ. ಹೀಗಾಗಿ ಚೀನಾವನ್ನು ಮಟ್ಟಹಾಕಲು ಅಮೆರಿಕಕ್ಕೆ ಭಾರತ ಬಹಳ ಒಳ್ಳೆಯ ಸಂಗಾತಿಯಾಗಲಿದೆ. ಈ ವಿಷಯದಲ್ಲಿ ಭಾರತದ ಪ್ರಧಾನಿ
ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಇರುವ ಸ್ನೇಹ ಕೂಡ ಸಾಕಷ್ಟು ಪ್ರಭಾವ ಬೀರಲಿದೆ. ಇನ್ನು, ಟ್ರಂಪ್ ಮತ್ತು ಮೋದಿ ನಡುವೆ ಒಳ್ಳೆಯ ಹೊಂದಾಣಿಕೆಯಿದೆ. ಇದೇ ವೇಳೆ, ರಷ್ಯಾ ಜತೆಗೆ ಭಾರತಕ್ಕೆ ಐತಿಹಾಸಿಕ ಹಾಗೂ ಸುದೀರ್ಘ ಅವಽಯ ಸ್ನೇಹ ಸಂಬಂಧವಿದೆ. ಹೀಗಾಗಿ ರಷ್ಯಾ
ವಿಷಯದಲ್ಲೂ ಅಮೆರಿಕಕ್ಕೆ ಭಾರತದ ನೆರವು ಬೇಕಾಗುತ್ತದೆ. ಟ್ರಂಪ್ಗೆ ಅಭಿನಂದನೆ ಹೇಳಲು ಮೊದಲಿಗೆ ಮೀನ-ಮೇಷ ಎಣಿಸಿದ್ದ ಪುಟಿನ್, ಕೊನೆಗೂ ಅಭಿನಂದನೆ ಸಲ್ಲಿಸಿದ್ದಾರೆ. ತನ್ಮೂಲಕ ಅಮೆರಿಕದ ಜತೆಗೆ ಸ್ನೇಹಶೀಲ ಸಂಬಂಧವನ್ನೇ ಇರಿಸಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೂ ಅದೇ ಸಮಯದಲ್ಲಿ ‘ಭಾರತಕ್ಕೆ ಜಾಗತಿಕ ಸೂಪರ್ಪವರ್ ಸ್ಥಾನ ಅಲಂಕರಿಸುವ ಯೋಗ್ಯತೆಯಿದೆ’ ಎಂದು ಹೊಗಳುವ ಮೂಲಕ ಅಮೆರಿಕಕ್ಕೆ ಪರೋಕ್ಷ ಸಂದೇಶವನ್ನೂ ಪುಟಿನ್ ನೀಡಿದ್ದಾರೆ. ಇದರರ್ಥ ಇಷ್ಟೆ, ಡೊನಾಲ್ಡ್ ಟ್ರಂಪ್ ಅವರ ಮಾತುಗಳಿಗೆ ಪುಟಿನ್ ನೇರವಾಗಿ ಕಿವಿಗೊಡದಿದ್ದರೂ, ಅಮೆರಿಕದ ಪರವಾಗಿ ಮೋದಿ ಏನಾದರೂ ಹೇಳಿದರೆ ಅದನ್ನು ಕೇಳಲಿದ್ದಾರೆ.
ಇದು ರಷ್ಯಾ ಮತ್ತು ಅಮೆರಿಕದ ನಡುವೆ ಇರುವ ವೈಮನಸ್ಯವನ್ನು ಶಮನಗೊಳಿಸಲು ನೆರವಾಗಬಹುದು. ಚೀನಾವನ್ನು ಹದ್ದುಬಸ್ತಿನಲ್ಲಿಡಲು
ಅಮೆರಿಕ, ರಷ್ಯಾ ಮತ್ತು ಭಾರತ ಈ ಮೂರೂ ದೇಶಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವ ಅಗತ್ಯವಿದೆ. ಭಾರತದ ಜತೆಗಿನ ನೇರವಾದ ಸಂಬಂಧದ ವಿಷಯಕ್ಕೆ ಬಂದರೆ, ಟ್ರಂಪ್ ಯಾವಾಗಲೂ ಭಾರತಕ್ಕೆ ಬೆಂಬಲವನ್ನೇ ನೀಡಿದ್ದಾರೆ. ಭಾರತದ ಆಂತರಿಕ ವಿಷಯಗಳಲ್ಲಿ ಅಮೆರಿಕ ಮೂಗು ತೂರಿಸಬಾರದು ಎಂದೇ ಹೇಳಿದ್ದಾರೆ. ಭಾರತದ ಬಗ್ಗೆ ಯಾವತ್ತೂ ಕಟುವಾದ ರಾಜಕೀಯ ಟೀಕೆಗಳನ್ನು ಮಾಡಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಭಾರತ ಖಂಡಿಸಿದಾಗ, ಟ್ರಂಪ್ ಕೂಡ ಭಾರತದ ನಿಲುವನ್ನು ಬೆಂಬಲಿಸಿ ಮಾತನಾಡಿದ್ದಾರೆ. ಆದರೆ, ಭಾರತದ ಜತೆಗೆ ಒಂದು ವಿಷಯದಲ್ಲಿ ಅವರಿಗೆ ಭಿನ್ನಾಭಿಪ್ರಾಯವಿದೆ. ಅಮೆರಿಕದ ಸರಕುಗಳಿಗೆ ಭಾರತದಲ್ಲಿ ದುಬಾರಿ ತೆರಿಗೆ ವಿಽಸಲಾಗುತ್ತದೆ ಎಂದು ಈ ಹಿಂದೆ ಅವರು ಆಕ್ಷೇಪಿಸಿದ್ದರು.
ಇನ್ನು, ಅಮೆರಿಕದಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದ ಯಶಸ್ಸನ್ನು ಟ್ರಂಪ್ ಯಾವತ್ತೂ ಮರೆಯುವುದಿಲ್ಲ. ಹೀಗಾಗಿ ಟ್ರಂಪ್ ನಾಯಕತ್ವದಲ್ಲಿ ಅಮೆರಿಕ ಇನ್ನಷ್ಟು ಅಭಿವೃದ್ಧಿಯ ಹಾದಿಯಲ್ಲೇ ಸಾಗಲಿದೆ ಎಂದು ಆಶಿಸೋಣ. ಭಾರತದಂತೆ ಅಮೆರಿಕ ಕೂಡ ‘ವಸುಧೈವ ಕುಟುಂಬಕಂ’ ನೀತಿಯನ್ನು ಅಪ್ಪಿಕೊಳ್ಳಲಿ ಎಂದು ಹಾರೈಸೋಣ. ಇದೇ ವೇಳೆ, ನಾವು ಅಮೆರಿಕದ ಜನಪ್ರತಿನಿಧಿ ಸಭೆಗೆ ಪುನರಾಯ್ಕೆಯಾದ ಭಾರತೀಯ ಮೂಲದ ಆಮಿ ಬೆರಾ, ಪ್ರಮಿಳಾ ಜಯಪಾಲ್, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಹಾಗೂ ಶ್ರೀ ಥಾಣೇದಾರ್ ಅವರಿಗೂ ಅಭಿನಂದನೆ ಸಲ್ಲಿಸಬೇಕು. ವರ್ಜೀನಿಯಾದಿಂದ ಗೆದ್ದು ಇಡೀ ಈಸ್ಟ್ ಕೋಸ್ಟ್ನಲ್ಲಿ ಇತಿಹಾಸ ಸೃಷ್ಟಿಸಿದ ಸುಹಾಸ್ ಸುಬ್ರಮಣ್ಯನ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಹೇಳಬೇಕು. ಈ ಸಾಧನೆ ಮಾಡಿದ ಮೊದಲ ಭಾರತೀಯ ಅಮೆರಿಕನ್ ಸುಹಾಸ್.
ಆದರೆ, ಈಗಲೂ ಉತ್ತರ ಸಿಗದೆ ಉಳಿಯುವ ಮಿಲಿಯನ್ ಡಾಲರ್ ಪ್ರಶ್ನೆಯೊಂದಿದೆ. ಅಮೆರಿಕದಲ್ಲಿ ಮೊದಲ ಅಧ್ಯಕ್ಷೀಯ ಚುನಾವಣೆ ನಡೆದಿದ್ದು ೧೭೮೮-೮೯ರಲ್ಲಿ. ಅಂದಿನಿಂದ ಈವರೆಗೆ ೨೩೫ ವರ್ಷಗಳು, ಅಂದರೆ ಎರಡೂಕಾಲು ಶತಮಾನ ಕಳೆದಿದೆ. ಆದರೆ ಏಕೆ ಒಂದೇ ಒಂದು ಅವಧಿಗೂ ಒಬ್ಬ ಅಧ್ಯಕ್ಷೆ ಅಮೆರಿಕದಲ್ಲಿ ಆಯ್ಕೆಯಾಗಲು ಸಾಧ್ಯವಾಗಿಲ್ಲ? ವಿಕ್ಟೋರಿಯಾ ವುಡ್ಹಲ್ ರಿಂದ ಹಿಡಿದು ಮಾರ್ಗರೆಟ್ ಸ್ಮಿತ್ವರೆಗೆ, ಹಿಲರಿ ಕ್ಲಿಂಟನ್ ರಿಂದ ಹಿಡಿದು ಕಮಲಾ ಹ್ಯಾರಿಸ್ವರೆಗೆ ಸಾಕಷ್ಟು ಮಹಿಳೆಯರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದರೆ ಯಾರೊಬ್ಬರೂ ಗೆದ್ದಿಲ್ಲ. ಸಾಧನೆ ಹಾಗೂ ಯೋಗ್ಯತೆಯಲ್ಲಿ ಇವರು ಯಾರಿಗಿಂತ ಕಮ್ಮಿಯಿದ್ದಾರೆ? ಅಮೆರಿಕದ ಮತದಾರರೇ ಈ ಪ್ರಶ್ನೆಗೆ ಉತ್ತರಿಸಬೇಕು.
(ಲೇಖಕರು ಹಿರಿಯ ಪತ್ರಿಕೋದ್ಯಮಿ)