Saturday, 10th May 2025

Dr Vijay Darda Column: ಜಗತ್ತಿಗೆ ಅವರ ಎತ್ತರ ಅಂದಾಜಿಸಲು ಆಗಲಿಲ್ಲ

ಸಂಗತ

ಡಾ.ವಿಜಯ್‌ ದರಡಾ

ಮನಮೋಹನ್ ಸಿಂಗ್ ಅಪ್ಪಟ ಅಪರಂಜಿಯಂಥ ವ್ಯಕ್ತಿತ್ವದ ಶುದ್ಧ ಚಾರಿತ್ರ್ಯದ ಮನುಷ್ಯರಾಗಿದ್ದರು ಎಂಬುದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಕಿಲ್ಲ. ಅವರ ಪ್ರಾಮಾಣಿಕತೆ ಮತ್ತು ದೇಶಭಕ್ತಿ ಪ್ರಶ್ನಾ ತೀತವಾಗಿತ್ತು. ಮನಮೋಹನ್ ಸಿಂಗ್ ಆಕಾಶವೇ ಆಗಿದ್ದರು, ಆದರೂ ತಲೆತಗ್ಗಿಸಿ ನಡೆಯುತ್ತಿದ್ದರು.

ಬದುಕಿನಲ್ಲಿ ನಾವು ಅಸಂಖ್ಯ ಜನರನ್ನು ಭೇಟಿಯಾಗುತ್ತೇವೆ. ಅವರ ಜತೆಗೆ ಕೆಲಸ ಮಾಡುತ್ತೇವೆ. ಅವರಲ್ಲಿ ಕೆಲವರ ಜತೆಗೆ ಆಳವಾದ ಸಂಬಂಧ ಹೊಂದಿರುತ್ತೇವೆ. ಆದರೆ ನಿಮ್ಮ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳು ಕೆಲವೇ ಕೆಲವ ರಿರುತ್ತಾರೆ. ಅವರೆಂದರೆ ನಿಮಗೆ ಅಚ್ಚುಮೆಚ್ಚಾಗಿರುತ್ತದೆ. ನನ್ನ ಪಾಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂಥವರಲ್ಲಿ ಒಬ್ಬರು. ಅವರದು ಅಗಾಧ ವ್ಯಕ್ತಿತ್ವ. ಅವರ ಹೆಸರೇ ಹೇಳುವಂತೆ ಮನಮೋಹಕ ವ್ಯಕ್ತಿತ್ವ ಕೂಡ! ಅವರ ನಿಧನದೊಂದಿಗೆ ಇತಿಹಾಸದಲ್ಲಿ ನಿರ್ದಿಷ್ಟ ಯುಗವೊಂದು ಅಂತ್ಯವಾದಂತಾಗಿದೆ.

ಕೆಲವರು ಅವರನ್ನು ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ (ಅಕಸ್ಮಾತ್ ಪ್ರಧಾನಿ) ಎಂದು ಕರೆಯುತ್ತಾರೆ. ಆದರೆ,
ಅವರು ಪ್ರಧಾನಿಯಾಗಿ ಈ ದೇಶದ ಆರ್ಥಿಕತೆಯನ್ನು ಸುಭದ್ರವಾಗಿ ಕಟ್ಟಲು ಮಾಡಿದ ಕೆಲಸವಿದೆಯಲ್ಲ, ಅದು
ಅವರ ಬಗೆಗಿನ ಎಲ್ಲಾ ಟೀಕೆಗಳಿಗೂ ಉತ್ತರದಂತಿದೆ. ದೇಶಕ್ಕೆ ಅವರು ನೀಡಿದ ಕೊಡುಗೆ ಇತಿಹಾಸದಲ್ಲಿ ದಾಖಲಾಗಿದೆ. ಅವರ ಅಗಾಧ ಸಾಧನೆಯನ್ನು ಈ ಭಾರತ ಯಾವತ್ತೂ ಮರೆಯುವುದಿಲ್ಲ.

ಮನಮೋಹನ್ ಸಿಂಗ್ ಯಶಸ್ವಿ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾಗ ನಾನು ರಾಜ್ಯಸಭೆಯ ಸದಸ್ಯನಾಗಿದ್ದೆ.
ಹೀಗಾಗಿ ಆಗಾಗ ಅವರೊಂದಿಗೆ ಬಹಳ ಹತ್ತಿರದಿಂದ ಮಾತನಾಡುವ ಅದೃಷ್ಟ ನನ್ನದಾಗಿತ್ತು. ಆಗೆಲ್ಲಾ ಅವರ
ಕೆಲಸದ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಯಾವುದಕ್ಕೂ ಅವರು ಬಡಿವಾರ ಮಾಡುತ್ತಿರಲಿಲ್ಲ. ತಮ್ಮ
ಸಾಧನೆಯ ಬಗ್ಗೆ ಯಾವತ್ತೂ ಅವರು ಜಂಭ ಕೊಚ್ಚಿಕೊಳ್ಳುತ್ತಿರಲಿಲ್ಲ. ತಾನೇನು ಮಾಡುತ್ತಿದ್ದೇನೆ ಎಂಬುದನ್ನು ಅವರು ಘೋಷಿಸುವುದಕ್ಕಾಗಲೀ ಅಥವಾ ಜನರಿಗೆ ವಿವರಿಸುವುದಕ್ಕಾಗಲೀ ಹೋಗುತ್ತಿರಲಿಲ್ಲ. ಅವರು ಮೌನವಾಗಿ ಕೆಲಸ ಮಾಡುತ್ತಾ ಮುಂದೆ ಹೋಗುತ್ತಿದ್ದರು. ಅವರದು ಮೃದುವಾದ ಧ್ವನಿಯಾಗಿದ್ದರೂ, ಅವರ ಚಿಂತನೆಗಳು ಪ್ರಖರವೂ ಗಟ್ಟಿಯೂ ಆಗಿರುತ್ತಿದ್ದವು. ಬಹಳ ಖಡಕ್ಕಾಗಿ ಅವರು ಯೋಚಿಸುತ್ತಿದ್ದರು.

1991ರಲ್ಲಿ ಭಾರತವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾಗ ಆಗಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ತಮ್ಮ ಸಂಪುಟದಲ್ಲಿ ಮನಮೋಹನ್ ಸಿಂಗ್‌ರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿದರು. ಬಳಿಕ ಅವರಿಬ್ಬರೂ ಸೇರಿ
ದೇಶದ ಆರ್ಥಿಕತೆಯ ಭವಿಷ್ಯಕ್ಕೆ ನೀಲಿನಕ್ಷೆ ಸಿದ್ಧಪಡಿಸಿದರು. ಅದಕ್ಕೂ ಮುನ್ನ ದೇಶವು ಸಮಾಜವಾದದ ದಾರಿಯಲ್ಲಿ ಕುಂಟುತ್ತಾ ಸಾಗುತ್ತಿತ್ತು. ಪಿವಿಎನ್ ಮತ್ತು ಮನಮೋಹನ್ ಜೋಡಿ ಈ ದೇಶದ ಆರ್ಥಿಕತೆಯನ್ನು ಜಗತ್ತಿಗೆ ತೆರೆದಿಟ್ಟಿತು. ನಂತರ ನಡೆದ ಬೆಳವಣಿಗೆಗಳು ಇಂದು ಎಲ್ಲರ ಕಣ್ಮುಂದೆಯೇ ಇವೆ. ಇಂದು ಭಾರತವು ಜಗತ್ತಿನ ಐದನೇ ಅತ್ಯಂತ ಬಲಿಷ್ಠ ಆರ್ಥಿಕತೆಯಾಗಿ ಹೊರಹೊಮ್ಮಿದ್ದರೆ, ಅದಕ್ಕೆ ನರಸಿಂಹ ರಾವ್ ಅವಧಿಯಲ್ಲಿ ಬೀಜ ಬಿತ್ತಿದವರು ಡಾ.ಮನಮೋಹನ್ ಸಿಂಗ್.

ಮನಮೋಹನ್ ಸಿಂಗ್ ಅವರ ಸಾಮರ್ಥ್ಯವನ್ನು ಅರಿತು ಸೋನಿಯಾ ಗಾಂಽಯವರು ಪ್ರಧಾನಿ ಹುದ್ದೆಯಲ್ಲಿ
ಕುಳ್ಳಿರಿಸಿದರು. ಅವರ ನಿರೀಕ್ಷೆಯನ್ನು ಡಾ.ಸಿಂಗ್ ಸುಳ್ಳಾಗಿಸಲಿಲ್ಲ. ಪಟ್ಟು ಹಿಡಿದು ಕೆಲಸ ಮಾಡಿದರು. ಕುಚೋದ್ಯದ ಸಂಗತಿಯೆಂದರೆ ಅವರು ಪ್ರಧಾನಿಯಾಗಿದ್ದಾಗ ಎದುರಿಸಿದ ಸಮಸ್ಯೆಗಳೆಲ್ಲ ಕಾಂಗ್ರೆಸ್ ಪಕ್ಷದೊಳಗಿನ ಹೊಸ
ಹೊಸ ಬಣಗಳಿಂದ ಹುಟ್ಟಿಕೊಂಡ ಸಮಸ್ಯೆಗಳೇ ಆಗಿದ್ದವು. ಮನಮೋಹನ್ ಸಿಂಗ್ ಅಽಕೃತ ಪ್ರವಾಸಕ್ಕೆಂದು ಅಮೆರಿಕಕ್ಕೆ ಹೋಗಿದ್ದಾಗ ಇತ್ತ ರಾಹುಲ್ ಗಾಂಽ ಪತ್ರಿಕಾಗೋಷ್ಠಿ ನಡೆಸಿ ಯುಪಿಎ ಸರಕಾರದ ಸುಗ್ರೀವಾeಯನ್ನು ಸಾರ್ವಜನಿಕವಾಗಿ ಹರಿದು ಹಾಕಿದ್ದರು. ಮನಮೋಹನ್ ಸಿಂಗ್ ವಾಪಸ್ ಬಂದ ಮೇಲೆ ಅವರ ಜತೆಗೆ ಈ ವಿಷಯದ ಬಗ್ಗೆ ಮಾತನಾಡುತ್ತಾ ನಾನು ಸಹಜವಾಗಿ, “ನೀವು ನೇರವಾಗಿ ರಾಷ್ಟ್ರಪತಿ ಭವನಕ್ಕೆ ಹೋಗಿ ರಾಜೀನಾಮೆ ನೀಡುತ್ತೀರಿ ಎಂದುಕೊಂಡಿದ್ದೆ” ಎಂದು ಹೇಳಿದ್ದೆ.

ಅದಕ್ಕೆ ಅವರು, “ಆ ಯೋಚನೆ ನನ್ನ ಮನಸ್ಸಿನಲ್ಲಿ ಎರಡು ಬಾರಿ ಬಂದಿತ್ತು. ಅದರ ಬಗ್ಗೆ ಗುರ್ ಶರಣ್ (ಅವರ ಪತ್ನಿ) ಜತೆ ಚರ್ಚೆ ಕೂಡ ನಡೆಸಿದ್ದೆ. ನಂತರ, ನಾನು ರಾಜೀನಾಮೆ ನೀಡುವುದು ಎಷ್ಟು ಸರಿ ಎಂದು ಯೋಚಿಸಿದೆ. ಹಾಗೆ ಮಾಡಿದರೆ ಸೋನಿಯಾ ಗಾಂಧಿಯವರಿಗೆ ಘಾಸಿಯಾಗುತ್ತದೆ. ಹೀಗಾಗಿ ಪ್ರಧಾನಿಯಾಗಿ ಮುಂದುವರಿಯಲು ನಿರ್ಧರಿಸಿದೆ” ಎಂದಿದ್ದರು.

ವಾಸ್ತವ ಏನೆಂದರೆ, ಮನಮೋಹನ್ ಸಿಂಗ್ ಅವರ ಅವಧಿಯ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಒಂದು ಬಣವು ಸರಕಾರದ ಆಗುಹೋಗುಗಳ ಮೇಲೆ ಸಾಕಷ್ಟು ಪ್ರಭಾವ ಬೀರಲು ಆರಂಭಿಸಿತ್ತು. ಹೀಗಾಗಿ ಕೆಲಸ ಮಾಡು ವುದು ಅಸಾಧ್ಯ ಎಂಬಂಥ ಸ್ಥಿತಿ ಅವರಿಗೆ ನಿರ್ಮಾಣವಾಗಿತ್ತು. ಆಗಲೂ ಅವರು ರಾಜೀನಾಮೆ ನೀಡಲು ಯೋಚಿಸಿ ದ್ದರು. “ನಾನು ರಾಜೀನಾಮೆ ನೀಡುತ್ತೇನೆ, ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಿ” ಎಂದು ಸೋನಿಯಾ ಗಾಂಧಿ ಬಳಿ ಅವರು ಪ್ರಸ್ತಾಪಿಸಿದ್ದರು. ಆದರೆ ರಾಹುಲ್ ಗಾಂಧಿ ಸಿದ್ಧರಿರಲಿಲ್ಲ.

ಪ್ರಧಾನಿ ಹುದ್ದೆ ಹಾಗಿರಲಿ, ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವುದಕ್ಕೂ ಅವರು ಸಿದ್ಧರಿರಲಿಲ್ಲ. ಪಕ್ಷದೊಳಗಿನ ಬಣ ಸಂಘರ್ಷದಿಂದಾಗಿ ಕಾಂಗ್ರೆಸ್ ಅವಸಾನದತ್ತ ಸಾಗುತ್ತಿದೆ ಎಂಬುದನ್ನು ಡಾ.ಸಿಂಗ್ ಆಗಲೇ ಗುರುತಿಸಿದ್ದರು. 2014ರಲ್ಲಿ ಯಾವುದೇ ಕಾರಣಕ್ಕೂ ಯುಪಿಎ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕೂಡ ಅವರಿಗೆ ಗೊತ್ತಿತ್ತು. ಆದರೆ, ಆ ಚುನಾವಣೆಯಲ್ಲಿ ಕನಿಷ್ಠ 100 ಸೀಟುಗಳನ್ನಾದರೂ ಗಳಿಸುತ್ತೇವೆ ಎಂಬ ವಿಶ್ವಾಸ ಅವರಲ್ಲಿತ್ತು.
ಆದರೆ ನಾನು ಅವರ ಬಳಿ “ಅದಕ್ಕಿಂತಲೂ ಕಡಿಮೆ ಸೀಟು ಬರಬಹುದು” ಎಂದು ಹೇಳಿದಾಗ ಅದನ್ನು ಒಪ್ಪಿದ್ದರು.

“100ಕ್ಕಿಂತ ಕಡಿಮೆ ಸೀಟು ಬಂದರೂ ಬರಬಹುದು” ಎಂದು ಬಾಯಿಬಿಟ್ಟೇ ಹೇಳಿದ್ದರು. ಕಾಂಗ್ರೆಸ್ ಪಕ್ಷದ ಇನ್ನಿತರ
ನಾಯಕರಿಗಿಂತ ಡಾ.ಸಿಂಗ್ ವಿಭಿನ್ನವಾಗಿ ನಿಲ್ಲುತ್ತಿದ್ದುದು ಏಕೆಂದರೆ, ಅವರು ತಮಗಿಂತ ಪಕ್ಷ ದೊಡ್ಡದು ಎಂಬ
ಬದ್ಧತೆಯನ್ನು ಕಾಯಾ ವಾಚಾ ಮನಸಾ ಹೊಂದಿದ್ದರು.

ಮನಮೋಹನ್ ಸಿಂಗ್ ಎಷ್ಟು ಬುದ್ಧಿವಂತರೋ ಅಷ್ಟೇ ಅದ್ಭುತ ಮನುಷ್ಯ ಕೂಡ ಆಗಿದ್ದರು. ಅವರಲ್ಲಿನ ವಿನಯ ವಂತಿಕೆ ಅಸಾಧಾರಣವಾಗಿತ್ತು. ನಾನು ಅವರ ಮನೆಗೆ ಹೋದಾಗಲೆಲ್ಲ ತುಂಬಾ ಆತ್ಮೀಯವಾಗಿ ಬರಮಾಡಿ ಕೊಳ್ಳುತ್ತಿದ್ದರು. ಅಲ್ಲಿಂದ ಹೊರಟಾಗ ಗೇಟ್‌ವರೆಗೂ ಬಂದು ಬೀಳ್ಕೊಡುತ್ತಿದ್ದರು. ಅವರ ಹೃದಯದಲ್ಲಿ ಭಾರತೀಯ
ಸಂಸ್ಕೃತಿ ಆಳವಾಗಿ ನೆಲೆಯೂರಿತ್ತು. ಲೋಹ್ರಿಯಂಥ ಹಬ್ಬಗಳನ್ನು ಸಾಂಪ್ರದಾಯಿಕ ಬಾಂಗ್ಡಾ ನೃತ್ಯದೊಂದಿಗೆ
ಸಂಭ್ರಮದಿಂದ ಆಚರಿಸುವುದನ್ನು ಅವರು ಬಹಳ ಇಷ್ಟಪಡುತ್ತಿದ್ದರು. ಮಾಂಟೆಕ್ ಸಿಂಗ್ ಅಹ್ಲುವಾಲಿಯಾ
ಕುಟುಂಬದವರು ಮನಮೋಹನ್ ಸಿಂಗ್‌ರ ಮನೆಗೆ ಹೋಗಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.

2008ರ ಒಂದು ಘಟನೆ ನನಗೆ ನೆನಪಾಗುತ್ತಿದೆ. ಖಾಲ್ಸಾ ಪಂಥದ ೩೦೦ನೇ ವರ್ಷಾಚರಣೆ ನಡೆಯುತ್ತಿತ್ತು. ಗುರುದ್ವಾರ ನಾಂದೇಡ್ ಸಾಹಿಬ್‌ನಲ್ಲಿ ‘ಗುರು ತಾ ಗಡ್ಡಿ’ ಹಬ್ಬ ಆಯೋಜಿಸಲಾಗಿತ್ತು. ಡಾ.ಸಿಂಗ್ ಖುದ್ದಾಗಿ ನನ್ನನ್ನು ತಮ್ಮಲ್ಲಿಗೆ ಆಹ್ವಾನಿಸಿ, ಆ ಹಬ್ಬವನ್ನು ಹೇಗೆ ಅತ್ಯಂತ ಸಂಭ್ರಮದಿಂದ ಆಚರಿಸಬಹುದು, ಏನೇನು ಕಾರ್ಯಕ್ರಮ ಆಯೋಜಿಸ ಬಹುದು ಎಂದು ಚರ್ಚಿಸಿದ್ದರು. ಮನಮೋಹನ್ ಸಿಂಗ್ ಮತ್ತು ಆಗಿನ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಜತೆಗೆ ಇನ್ನಿತರ ಕೆಲ ಉನ್ನತ ಅಧಿಕಾರಿಗಳು ಸಿಖ್ಖರಾಗಿದ್ದರಿಂದ ನಾನು ‘ಗುರು ತಾ ಗಡ್ಡಿ’ ಆಚರಣೆಗೆ ಗರಿಷ್ಠ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿ ಪತ್ರ ಬರೆದಿದ್ದೆ.

ಸರಕಾರ 500 ಕೋಟಿ ರು. ಹಂಚಿಕೆ ಮಾಡಿತ್ತು. ಅಂದಿನ ಗೃಹ ಸಚಿವ ಶಿವರಾಜ್ ಪಾಟೀಲರನ್ನು ಆಯೋಜನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸ್ಥಳೀಯ ಬಣ ಸಂಘರ್ಷಗಳನ್ನು ತಪ್ಪಿಸಲು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಪಸ್ರಿಚಾ ಅವರನ್ನು ಸ್ಥಳೀಯ ಸಮಿತಿಯ ಸಂಚಾಲಕರನ್ನಾಗಿ ಮಾಡಲಾಗಿತ್ತು. ಆ
ಸಮಯದಲ್ಲಿ ಮುಂಬೈ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯ ವಿಷಯದಲ್ಲಿ ಭೂವಿವಾದ ನಡೆಯುತ್ತಿತ್ತು.
ಭೂಮಿಗೆ ಸಂಬಂಧಿಸಿದ ವ್ಯಾಜ್ಯದಿಂದಾಗಿ ರನ್‌ವೇ ವಿಸ್ತರಣೆ ವಿಳಂಬವಾಗುತ್ತಿತ್ತು. ಆಗ ನಾನು ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್‌ರನ್ನು ಭೇಟಿ ಮಾಡಿ ಪರಿಹಾರ ಸೂಚಿಸಿದ್ದೆ. ಅದರಂತೆ ರನ್‌ವೇ ವಿಸ್ತರಣೆ ಆಯಿತು. ಅಷ್ಟೇ ಅಲ್ಲ, ಹೆಚ್ಚುತ್ತಿದ್ದ ಅಂತಾರಾಷ್ಟ್ರೀಯ ವಿಮಾನಗಳ ದಟ್ಟಣೆ ನಿಭಾಯಿಸಲು ಹೊಸ ವಿಮಾನ ನಿಲ್ದಾಣ ವನ್ನೇ ನಿರ್ಮಿಸಲಾಯಿತು.

ಮನಮೋಹನ್ ಸಿಂಗ್‌ರ ರಾಜತಾಂತ್ರಿಕ ಜಾಣ್ಮೆಯನ್ನು ಸ್ಮರಿಸುವಾಗ ಇನ್ನೊಂದು ಘಟನೆ ನೆನಪಾಗುತ್ತದೆ. ಭಾರತ
ಪರಮಾಣು ರಿಯಾಕ್ಟರ್‌ಗಳನ್ನು ಖರೀದಿಸಲು ಪ್ರಯತ್ನಿಸುತ್ತಿತ್ತು. ಮನಮೋಹನ್ ಸಿಂಗ್ ಅವರು ಅಮೆರಿಕದ
ಉದ್ಯಮಿ ಸಂತ ಸಿಂಗ್ ಚತ್ವಾಲ್ ಜತೆ ತಮಗಿದ್ದ ಸಂಬಂಧವನ್ನು ಬಳಸಿ ಅದನ್ನು ಯಶಸ್ವಿಯಾಗಿಸಲು ಯತ್ನಿಸಿದರು. ಚತ್ವಾಲ್‌ಗೆ ಭಾರತದ ಬಗ್ಗೆ ವಿಪರೀತ ಪ್ರೀತಿಯಿತ್ತು, ಮಾತ್ರವಲ್ಲದೆ ಅವರಿಗೆ ಅಮೆರಿಕದ ಅಧ್ಯಕ್ಷರ ಜತೆಗೆ ಸಾಕಷ್ಟು ಸಂಪರ್ಕವಿತ್ತು. ಅದನ್ನು ಬಳಸಿ ಅವರು ಭಾರತಕ್ಕೆ ಅನುಕೂಲವಾಗುವಂತೆ ನೋಡಿಕೊಂಡರು.
ಮನಮೋಹನ್ ಸಿಂಗ್ ಹೇಗೆ ಸಾಮಾಜಿಕವಾಗಿ ಮತ್ತು ಆಡಳಿತಾತ್ಮಕವಾಗಿ ಬಹಳ ಜಾಣತನದಿಂದ ವ್ಯವಹರಿಸು
ತ್ತಿದ್ದರು ಎಂಬುದನ್ನು ತಿಳಿಸಿಕೊಡುವುದಕ್ಕೆ ನಾನು ಈ ದಂತಕತೆಗಳನ್ನು ಹೇಳಬೇಕಾಯಿತು.

ಇವುಗಳನ್ನು ತಿಳಿದುಕೊಂಡರೆ ಡಾ.ಸಿಂಗ್ ಅವರ ಕಾರ್ಯಶೈಲಿಯ ಬಗ್ಗೆ ಒಂದಷ್ಟು ಒಳನೋಟಗಳು ನಿಮಗೆ ಸಿಗಬಹುದು. ಮನಮೋಹನ್ ಸಿಂಗ್ ಅಪ್ಪಟ ಅಪರಂಜಿಯಂಥ ವ್ಯಕ್ತಿತ್ವದ ಶುದ್ಧ ಚಾರಿತ್ರ್ಯದ ಮನುಷ್ಯರಾಗಿದ್ದರು ಎಂಬುದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಕಿಲ್ಲ. ಅವರ ಪ್ರಾಮಾಣಿಕತೆ ಮತ್ತು ದೇಶಭಕ್ತಿ ಪ್ರಶ್ನಾತೀತ ವಾಗಿತ್ತು. ಆದರೂ, ಪ್ರಧಾನಿ ಹುದ್ದೆಯಿಂದ ಇಳಿದ ಮೇಲೆ ಒಂದು ಸಲ ಅವರು ಪೊಲೀಸರಿಂದ ಬಂಧಿತರಾಗುವ ಮಟ್ಟಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗಿಬಿಟ್ಟಿತ್ತು!

ಆ ಘಟನೆ ಅವರನ್ನು ಬಹಳ ಆಳವಾಗಿ ಕಲಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಿ, ಮಾಜಿ ಪ್ರಧಾನಿಯೊಬ್ಬರನ್ನು ಬಂಧಿಸುವಂಥ ವಿಪರೀತ ಕ್ರಮವನ್ನು ಕೈಗೊಂಡರೆ ಅದು ಭವಿಷ್ಯದ ದಿನಗಳಿಗೆ ಅಪಾಯಕಾರಿ ಮೇಲ್ಪಂಕ್ತಿಯೊಂದನ್ನು ಹಾಕಿಕೊಡುತ್ತದೆ. ಮುಂದೆ ಯಾವುದೇ ಪ್ರಧಾನಿಯೂ ಕಠಿಣ ನಿರ್ಧಾರ ಕೈಗೊಳ್ಳುವುದಕ್ಕೆ ಹಿಂಜರಿಯುವಂಥ ಪರಿಸ್ಥಿತಿ ಬರುತ್ತದೆ ಎಂದು ಹೇಳಿ, ಬಂಧನವನ್ನು ತಪ್ಪಿಸಿ ದರು. ಡಾ.ಸಿಂಗ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಹೀಗಾಗಿ ಈ ಅಂಕಣವನ್ನು ಪುಟ್ಟದೊಂದು ತ್ರಿಪದಿಯೊಂದಿಗೆ ಮುಗಿಸುತ್ತೇನೆ…
ಜಗತ್ತಿಗೆ ಅವರ ಎತ್ತರ ಅಂದಾಜಿಸಲು ಆಗಲಿಲ್ಲ, ಏಕೆಂದರೆ ಅವರು ಆಕಾಶವೇ ಆಗಿದ್ದರು, ಆದರೆ ತಲೆತಗ್ಗಿಸಿ ನಡೆಯುತ್ತಿದ್ದರು!

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: Dr Vijay Darda Column: ಈ ಚುನಾವಣೆ ಮತ್ತು ರಾಜಕಾರಣದ ಆ ಯುಗ !