ಸಂಗತ
ಡಾ.ವಿಜಯ್ ದರಡಾ
ಹಿಂದಿನ ಅವಧಿಯಲ್ಲಿ ಮಾಡದೆ ಉಳಿಸಿದ ಕೆಲಸಗಳನ್ನು ಮಾಡಿ ಮುಗಿಸಲು, ಹೊಸ ಕನಸುಗಳನ್ನು ಸಾಕಾರಗೊಳಿಸಲು ಇನ್ನೊಂದು ಅವಧಿಗೆ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿದ್ದಾರೆ. ಇಡೀ ಮಹಾರಾಷ್ಟ್ರ ರಾಜ್ಯವು ಅವರ ಮೇಲೆ ಬಹಳ ನಿರೀಕ್ಷೆಗಳನ್ನಿಟ್ಟು ಕೊಂಡಿದೆ. ಅವರಿಗೆ ಸಾಮಾನ್ಯ ಜನರ ಅಗತ್ಯಗಳ ಬಗ್ಗೆ ಗೊತ್ತಿದೆ, ಅವನ್ನು ಈಡೇರಿಸುವುದು ಹೇಗೆಂಬುದೂ ತಿಳಿದಿದೆ.
ಈ ಸಲವೂ ಮಹಾರಾಷ್ಟ್ರದಲ್ಲಿ ಖಂಡಿತ ‘ಮಹಾಯುತಿ’ ಮೈತ್ರಿಕೂಟದ ಸರಕಾರವೇ ಅಧಿಕಾರಕ್ಕೆ ಬರುತ್ತದೆ ಎಂಬುದು ರಾಜ್ಯದ ಜನರಿಗೆ ಗೊತ್ತಿತ್ತು. ಆದರೆ, ಮಹಾಯುತಿ ಮೈತ್ರಿಕೂಟ ಇಷ್ಟೊಂದು ದೊಡ್ಡ ಬಹುಮತ ಗಳಿಸಿ ಅಧಿಕಾರಕ್ಕೆ ಮರಳಿ ಬರುತ್ತದೆ ಎಂದು ನುರಿತ ರಾಜಕೀಯ ಪಂಡಿತರೂ ಊಹೆ ಮಾಡಿರಲಿಲ್ಲ. ಅದರಲ್ಲೂ ಈ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಸಾಧನೆಯಿದೆಯಲ್ಲ, ಅದು ಅದ್ಭುತ.
149 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 132 ಸೀಟು ಗಳಿಸುವುದು ಸಾಮಾನ್ಯವೇ? ನಿಸ್ಸಂಶಯವಾಗಿ ಬಿಜೆಪಿಯ ಈ ಜಯದ ಹಿಂದಿರುವ ಸೂತ್ರಧಾರ ದೇವೇಂದ್ರ ಫಡ್ನವೀಸ್. ಸರಳ ಮತ್ತು ವಿನಯವಂತ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂದೆಯವರ ನಾಯಕತ್ವದಲ್ಲಿ ಮಹಾಯುತಿ ಸರಕಾರದ ‘ಲಡ್ಕಿ ಬಹಿನ್ ಯೋಜನೆ’ ಮಹಿಳಾ ಮತದಾರರ ಮೇಲೆ ಮ್ಯಾಜಿಕ್ ಮಾಡಿತು. ಅದು ವಿಪಕ್ಷಗಳಿಗೆ ನೀಡಿದ ಮಾಸ್ಟರ್ ಸ್ಟ್ರೋಕ್ ಆಗಿತ್ತು. ಮಹಾಯುತಿ ಗೆಲುವಿನಲ್ಲಿ ಈ ಯೋಜನೆಯ ಪಾತ್ರ ಬಹಳ ದೊಡ್ಡದಿದೆ. ಈ ಯಶಸ್ಸು ಬಿಜೆಪಿ ಮೈತ್ರಿಕೂಟಕ್ಕೆ ಕೇವಲ ಚುನಾವಣೆಯಲ್ಲಿ ಮಾತ್ರ ಜಯ ತಂದುಕೊಟ್ಟಿಲ್ಲ. ಅದರ ಜತೆಗೇ ದೇವೇಂದ್ರ ಫಡ್ನವೀಸ್ ಗೆ ಹೊಸ ವಿಶೇಷಣವನ್ನೂ ಗಳಿಸಿಕೊಟ್ಟಿದೆ.
ಅದುವೇ- ‘ದೇವ ಭಾವು’. ಮರಾಠಿಯಲ್ಲಿ ‘ದೇವ ಭಾವು’ ಅಂದರೆ ‘ದೇವೇಂದ್ರ ಭಾಯಿ’ ಎಂದು ಅರ್ಥ ಹೇಳಬಹುದು. ಆದರೆ ಕೆಲ ಮಹಿಳೆಯರು ಫಡ್ನವೀಸ್‌ರನ್ನು ‘ದೈವಿಕ ಭಾಯಿ’ ಅಥವಾ ದೇವರಂಥ ಹಿರಿಯಣ್ಣ ಎಂದು ಕರೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದೊಂದು ಅಚ್ಚರಿಯ ಬದಲಾವಣೆ. ಒಬ್ಬ ವ್ಯಕ್ತಿಗೆ ಇಷ್ಟು ದೊಡ್ಡ ಗೌರವ ಮತ್ತು ಪ್ರೀತಿ ಸಿಗತೊಡಗಿದೆ ಅಂದರೆ ಅದರ ಹಿಂದೆ ನಿಸ್ಸಂಶಯವಾಗಿ ಪ್ರಬಲವಾದ
ಕಾರಣವೇ ಇರುತ್ತದೆ. ದೇವ ಭಾವು ಎಂಬುದಕ್ಕೆ ದೇವೇಂದ್ರ ಭಾಯಿ ಎಂದು ಅರ್ಥ ಕಲ್ಪಿಸಿದರೂ ಸರಿ ಅಥವಾ ದೇವರಂಥ ಅಣ್ಣ ಎಂದು ಹೇಳಿದರೂ ಸರಿ, ಅವರೆಡೂ ಬಹಳ ದೊಡ್ಡ ಗೌರವವೇ ಆಗಿವೆ.
ಅಂಥ ಗೌರವ ಯಾರಿಗೂ ಸುಲಭವಾಗಿ ಸಿಗುವುದಿಲ್ಲ, ಅದನ್ನು ಕಷ್ಟಪಟ್ಟು ಗಳಿಸಬೇಕಾಗುತ್ತದೆ. ನಾನು ದೇವೇಂದ್ರ ಫಡ್ನವೀಸ್‌ರನ್ನು ಬಹಳ ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಕಾರ್ಪೊರೇಟರ್ ಆಗಿ, ಮೇಯರ್ ಆಗಿ, ಹಂತಹಂತವಾಗಿ ಮೇಲಕ್ಕೇರಿ, ಕೊನೆಗೆ ಮುಖ್ಯಮಂತ್ರಿ ಯಾಗಿದ್ದಕ್ಕೆ ಸಾಕ್ಷಿಯಾಗಿದ್ದೇನೆ. ಉಪಮುಖ್ಯಮಂತ್ರಿ ಯಾಗಿದ್ದಾಗ ಅವರು ಆಡಳಿತದ ಕಲೆಯನ್ನು ಕರಗತ ಮಾಡಿಕೊಂಡರು. ಕೆಲಸ ಮಾಡಿಸುವುದು ಹೇಗೆ, ಪರಿಣಾಮಕಾರಿಯಾಗಿ ಆಡಳಿತ ನಡೆಸುವುದು ಹೇಗೆ ಹಾಗೂ ಎಲ್ಲರ ನಡುವೆ ಎದ್ದು ಕಾಣಿಸುವಂತೆ ಬೆಳೆಯುವುದು ಹೇಗೆ
ಎಂಬುದನ್ನು ಬಹಳ ಚಾಣಾಕ್ಷತೆಯಿಂದ ಮೈಗೂಡಿಸಿಕೊಂಡರು.
ಈಗ ಮತ್ತೆ ಮುಖ್ಯಮಂತ್ರಿಯಾಗಿ ಬರುತ್ತಿದ್ದಾರೆ. ಹೀಗಾಗಿ ಇಡೀ ಮಹಾರಾಷ್ಟ್ರ ರಾಜ್ಯವು ಅವರ ಮೇಲೆ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡಿದೆ. ನಾನೊಬ್ಬ ಪತ್ರಕರ್ತನಾಗಿ ಮತ್ತು ಸಂಸದೀಯ ರಾಜಕಾರಣದಲ್ಲಿ ಅನುಭವ ಹೊಂದಿರುವ ವ್ಯಕ್ತಿಯಾಗಿ ತುಂಬಾ ಆತ್ಮವಿಶ್ವಾಸದಿಂದ ಹೇಳುವುದಾದರೆ, ದೇವೇಂದ್ರ ಫಡ್ನವೀಸ್ ರಂಥ ನೇರ ನಡೆ-ನುಡಿಯ, ಜನಸಾಮಾನ್ಯರ ಏಳ್ಗೆಗಾಗಿ ಮನಸಾರೆ ಕೆಲಸ ಮಾಡುವ ಹಾಗೂ ಬದ್ಧತೆಯೊಂದಿಗೆ ರಾಜಕಾರಣ ಮಾಡುವ ನಾಯಕರು ತುಂಬಾ ಅಪರೂಪ.
ಅವರಿಗೆ ಸಾಮಾನ್ಯ ಜನರ ಅಗತ್ಯಗಳ ಬಗ್ಗೆ ಗೊತ್ತಿದೆ ಮತ್ತು ಅವುಗಳನ್ನು ಈಡೇರಿಸುವುದು ಹೇಗೆಂಬುದೂ ತಿಳಿದಿದೆ. ಈಗ ಅವರಿಗೆ ಜನರೇ ಮುಂದಾಗಿ ದೇವ ಭಾವು ಎಂಬ ಪದವಿಯನ್ನು ದಯಪಾಲಿಸಿದ್ದಾರೆ. ರಾಜಕೀಯವಾಗಿ ಅವರನ್ನು ತಮ್ಮ ನಾಯಕನೆಂದು ಒಪ್ಪಿಕೊಂಡಿ ದ್ದಾರೆ. ಮಹಾರಾಷ್ಟ್ರವನ್ನು ಇನ್ನೈದು ವರ್ಷ ನೀವೇ ಆಳಬೇಕು ಎಂದು ಆಶೀರ್ವಾದ ಮಾಡಿದ್ದಾರೆ. ಅದಕ್ಕಾಗಿಯೇ ಮಹಾಯುತಿಗೆ ಇಷ್ಟು ದೊಡ್ಡ ಜಯ ನೀಡಿದ್ದಾರೆ. ಇವೆಲ್ಲದರಿಂದ ಸಹಜವಾಗಿಯೇ ದೇವ ಭಾವು ಅವರಿಗೆ ಕೂಡ ಸಂತೋಷವಾಗಿದೆ.
ಜನರು ತಮ್ಮ ಪ್ರೀತಿಯನ್ನು ಅವರ ಮೇಲೆ ಮಳೆಗರೆದಂತೆ ಸುರಿಸಿದ ಮೇಲೆ ಅದನ್ನು ಉಳಿಸಿಕೊಳ್ಳುವುದು ಹಾಗೂ ಅದಕ್ಕೆ ಪ್ರತಿಯಾಗಿ ಜನರಿಗೂ ಒಳಿತು ಮಾಡುವುದು ಈಗ ಅವರ ಜವಾಬ್ದಾರಿಯಾಗಿದೆ. ಜನರ ಪಾಲಿಗೆ ಅವರು ದೇವನೂ ಹೌದು, ಅಣ್ಣನೂ (ಭಾವು) ಹೌದು. ದೇವರಿಗೆ ಅಸಾಧ್ಯವಾದದ್ದು ಏನಿದೆ? ಹಾಗೆಯೇ, ಒಬ್ಬ ಅಣ್ಣ ಮನಸ್ಸು ಮಾಡಿದರೆ ತನ್ನ ತಮ್ಮಂದಿರು ಹಾಗೂ ಅಕ್ಕ-ತಂಗಿಯರಿಗೆ ಏನು ಬೇಕಾದರೂ ಮಾಡಬಲ್ಲ ಅಲ್ಲವೇ? ಅಣ್ಣನ ಪ್ರೀತಿಗೆ ಅಸಾಧ್ಯವಾದದ್ದು ಏನೂ ಇಲ್ಲ. ಅತ್ಯಂತ ಹಿಂದುಳಿದ ಹಾಗೂ ಸಂಕಷ್ಟದಲ್ಲಿರುವ ವಿದರ್ಭ ಪ್ರಾಂತವೂ ಸೇರಿದಂತೆ ಕಷ್ಟಕಾರ್ಪಣ್ಯಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಮತೋಲಿತ ಅಭಿವೃದ್ಧಿಯನ್ನು ಸಾಧಿಸುವುದು ಅವರ
ಆದ್ಯತೆಯಾಗಬೇಕಿದೆ.
ದೇವೇಂದ್ರ ಫಡ್ನವೀಸ್‌ರ ರಾಜಕೀಯ ಪ್ರಯಾಣ ಶುರುವಾಗಿದ್ದೇ ವಿದರ್ಭದಿಂದ. ಆ ಕಾರಣದಿಂದಲೇ ನಾನು ಉದಾಹರಣೆ ನೀಡಲು ಅದೇ ಹೆಸರನ್ನು ಬಳಸಿಕೊಂಡೆ. 2014ರ ಬಳಿಕ ವಿದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಹೀಗಾಗಿ ಅಲ್ಲಿ ಆಗಬೇಕಾದ ಕೆಲಸಗಳು ಈಗ ಮೊದಲಿ ನಷ್ಟಿಲ್ಲ. ಹಾಗಂತ ಹಿಂದುಳಿದ ಹಣೆಪಟ್ಟಿಯಿಂದ ಈಗಲೂ ಆ ಪ್ರದೇಶ ಸಂಪೂರ್ಣ ಹೊರಬಂದಿಲ್ಲ. ವಿದ್ಯುತ್ ಸಂಪರ್ಕ, ನೀರಿನ ಪೂರೈಕೆ, ಉದ್ದಿಮೆಗಳು, ವಸತಿ, ಶಿಕ್ಷಣ ಹಾಗೂ ರಸ್ತೆ ಮೂಲಸೌಕರ್ಯಗಳ ಕೊರತೆ ವಿದರ್ಭದ ಕೆಲ ಪ್ರದೇಶಗಳಲ್ಲಿ ಇವತ್ತಿಗೂ ಇದೆ. ಈ ಸಮಸ್ಯೆಗಳನ್ನು ಬಗೆಹರಿಸಲು ದೇವೇಂದ್ರ ಫಡ್ನವೀಸ್ ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಅವರು ತಮ್ಮ ಪ್ರದೇಶದ ಜನರ ಏಳ್ಗೆಗಾಗಿ ಪ್ರಾಮಾಣಿಕವಾಗಿ ಮಾಡಿದ ಕಾರ್ಯಗಳು ಸಾಕಷ್ಟು ಫಲವನ್ನೂ ನೀಡಿವೆ.
‘ಜಲ ಶಿವರ್’ ಯೋಜನೆಯ ಮೂಲಕ ಮಹಾಯುತಿ ಸರಕಾರ ಸಾವಿರಾರು ಒಣ ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. ಅದರಿಂದಾಗಿ ಅನೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಈಗಲೂ ಕೆಲ ಪ್ರದೇಶಗಳಲ್ಲಿ ಸಮಸ್ಯೆಗಳಿವೆ ಅಂತಾದರೆ ಅದಕ್ಕೆ ಕಾರಣ ಆಡಳಿತಾತ್ಮಕ ನಿಷ್ಕ್ರಿಯತೆಯಷ್ಟೇ.
ಸಮೃದ್ಧಿ ಎಕ್ಸ್‌ಪ್ರೆಸ್ ವೇಯಂಥ ಯೋಜನೆಗಳು ದೇವೇಂದ್ರ ಫಡ್ನವೀಸ್‌ರ ಅದ್ಭುತ ದೂರದೃಷ್ಟಿ ಮತ್ತು ಪಟ್ಟಾಗಿ ಕುಳಿತು ಕೆಲಸ ಮಾಡುವ ಬದ್ಧತೆಯ ಫಲವಾಗಿ ಹೇಗೆ ಮೂಡಿಬಂದವು ಎಂಬುದನ್ನು ನಾನು ಈ ಹಿಂದಿನ ಅಂಕಣಗಳಲ್ಲಿ ಹೇಳಿದ್ದೇನೆ. ಈಗ ಜನರು ಅಂಥದೇ ಇನ್ನಷ್ಟು ಉತ್ತಮ ಯೋಜನೆಗಳನ್ನು ದೇವ ಭಾವುತರಲಿ ಎಂದು ನಿರೀಕ್ಷಿಸುತ್ತಿದ್ದಾರೆ. ಇಡೀ ದೇಶದಲ್ಲೇ ಮಹಾರಾಷ್ಟ್ರದ ಸ್ಥಾನವನ್ನು ಇನ್ನಷ್ಟು
ಎತ್ತರಕ್ಕೇರಿಸುವ ನಿಟ್ಟಿನಲ್ಲಿ ಫಡ್ನವೀಸ್ ಯಶಸ್ವಿಯಾಗಬೇಕು ಎಂದು ಅವರು ಬಯಸುತ್ತಾರೆ.
ನಿಜ, ಸಮೃದ್ಧಿ ಎಕ್ಸ್‌ಪ್ರೆಸ್‌ವೇ ರೀತಿಯ ರಸ್ತೆಯನ್ನು ಎಲ್ಲಾ ಹಳ್ಳಿಗಳಿಗೂ ನಿರ್ಮಿಸಲು ಸಾಧ್ಯವಿಲ್ಲ. ಆದರೆ, ಕೊನೆಯ ಪಕ್ಷ ಹಳ್ಳಿಯ ಜನರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗೆ ಸುಲಭವಾಗಿ ಸಾಗಿಸಲು ಸಾಧ್ಯವಾಗುವಂತೆ ನೆರವಾಗಲು ಸಾಮಾನ್ಯ ಟಾರು ರಸ್ತೆಯನ್ನಾ ದರೂ ನಿರ್ಮಿಸಬಹುದಲ್ಲವೇ? ಸ್ಥಳೀಯ ಮಾರುಕಟ್ಟೆಯಿಂದ ದೊಡ್ಡ ದೊಡ್ಡ ನಗರಗಳ ಮಾರುಕಟ್ಟೆಗೆ ರೈತರ ಉತ್ಪನ್ನಗಳು ತಲುಪಿದರೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಒಳ್ಳೆಯ ದರ ಸಿಗುತ್ತದೆ.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಬರೆದಿರುವ ‘ವಿಷನ್ ೨೦೨೦’ ಕೃತಿಯಲ್ಲಿ ಇಂಥದೇ ಕನಸುಗಳಿವೆ. ನಾವೀಗ 2024ರ ಕೊನೆಯ ತಿಂಗಳಿನಲ್ಲಿದ್ದೇವೆ. ದೇವ ಭಾವು ಅವರು ಡಾ.ಕಲಾಂ ಕಂಡ ಕನಸನ್ನು ಮಹಾರಾಷ್ಟ್ರದಲ್ಲಿ ನಿಜವಾಗಿಸುವ ಅವಕಾಶ ಪಡೆದಿದ್ದಾರೆ.
ಈಗಲೂ ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಬೆಲೆಯಿಲ್ಲ ಎಂಬ ಕಾರಣಕ್ಕೆ ರಸ್ತೆಗೆ ಸುರಿಯುವುದನ್ನು ನೋಡಿದರೆ ಎದೆ ಒಡೆಯುವಂತಾಗುತ್ತದೆ.
ಹೀಗಾಗಿ, ಓ ದೇವಾ, ಈ ಪರಿಸ್ಥಿತಿಯನ್ನು ಬದಲಿಸು! ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಬೇರೆ ಬೇರೆ ಸಿದ್ಧ ಉತ್ಪನ್ನಗಳನ್ನು ತಯಾರಿ ಸಲು ರೈತರಿಗೆ ಅನುಕೂಲ ಒದಗಿಸು. ಫಡ್ನವೀಸ್‌ರಂಥ ದೂರದೃಷ್ಟಿ ಮತ್ತು ಬದ್ಧತೆಯುಳ್ಳ ನಾಯಕನಿಗೆ ಇದಾವುದೂ ಅಸಾಧ್ಯವಲ್ಲ. ಒಂದು ರಾಜ್ಯ ಅಥವಾ ಒಂದು ದೇಶ ಅಭಿವೃದ್ಧಿಯ ದೃಷ್ಟಿಯಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಿದ ಬಳಿಕ ಮಾಡಬೇಕಾದ ಕೆಲಸವೇನು ಗೊತ್ತೇ? ಪ್ರದೇಶವಾರು ಸಮತೋಲಿತ ಅಭಿವೃದ್ಧಿಯನ್ನು ಸಾಽಸುವುದು.
ಒಂದೇ ಪ್ರದೇಶದ ಮೇಲೆ ಅತಿಯಾಗಿ ಗಮನ ಹರಿಸಿದರೆ ಅಸಮತೋಲನ ಉಂಟಾಗುತ್ತದೆ. ಹೇಗೆ ಅತಿಯಾಗಿ ತಿಂದರೆ ಅಜೀರ್ಣ ವಾಗುತ್ತದೆಯೋ ಹಾಗೆ ಅಭಿವೃದ್ಧಿ ಅತಿಯಾದರೂ ಸಮಸ್ಯೆಯಾಗುತ್ತದೆ. ಒಂದೇ ಪ್ರದೇಶದಲ್ಲಿ ಆಧುನಿಕ ವ್ಯವಸ್ಥೆಗಳನ್ನೂ ಮೂಲಸೌಕರ್ಯ ಗಳನ್ನೂ ವಿಪರೀತವಾಗಿ ಬೆಳೆಸಲು ಹೋದರೆ ಪರಿಸರ ಸಂಬಂಧಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ರಾಜ್ಯಾದ್ಯಂತ ಅಭಿವೃದ್ಧಿಯ ಯೋಜನೆಗಳನ್ನು ಹಂಚಿಕೆ ಮಾಡುವುದು ಹಾಗೂ ತನ್ಮೂಲಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ, ಓ ದೇವಾ… ಇದರ ಬಗ್ಗೆ ದಯವಿಟ್ಟು ಗಮನ ನೀಡು!
ಅಭಿವೃದ್ಧಿಯ ಹರಿವು ಹಳ್ಳಿಗಳಿಗೆ ತಲುಪಬೇಕು. ಏಕೆಂದರೆ ಭಾರತದ ವಿಶಿಷ್ಟ ಭೌಗೋಳಿಕ ವ್ಯವಸ್ಥೆಯಲ್ಲಿ ನಗರ ಪ್ರದೇಶಗಳ ಸಮಸ್ಯೆಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಪರಿಹಾರಗಳಿವೆ. ಹಳ್ಳಿಗಳಲ್ಲಿ ಸಣ್ಣ ಸಣ್ಣ ಉದ್ದಿಮೆಗಳು ತಲೆಯೆತ್ತಿದರೆ ಅಲ್ಲಿನ ಯುವಕರು ಏಕೆ ನಗರ ಪ್ರದೇಶಗಳಿಗೆ
ವಲಸೆ ಹೋಗುತ್ತಾರೆ? ಚೀನಾದಲ್ಲಿ ಇದಕ್ಕೆ ಒಳ್ಳೆಯ ಉದಾಹರಣೆಯಿದೆ. ಆ ದೇಶದವರು ಒಂದೊಂದು ಹಳ್ಳಿಯನ್ನು ಒಂದೊಂದು ಸರಕಿನ ಉತ್ಪಾದನಾ ಹಬ್ ಆಗಿ ರೂಪಿಸಿದ್ದಾರೆ. ಭಾರತಕ್ಕೂ ಅಂಥ ಶಕ್ತಿಯಿದೆ. ಇಲ್ಲೂ ಅಂಥ ಎಲ್ಲಾ ಅವಕಾಶಗಳಿವೆ. ಬೇಕಿರುವುದು ಏನೆಂದರೆ ಸಮಗ್ರ
ದೃಷ್ಟಿಕೋನ ಮತ್ತು ಅದನ್ನು ಸಾಽಸಿಯೇ ತೀರುವ ಛಲ.
ಅದು ದೇವೇಂದ್ರ ಫಡ್ನವೀಸ್‌ಗೆ ಇದೆ. ಆದರೆ ಒಂದು ಮಾತು, ಲಡ್ಕಿ ಬಹಿನ್ ಯೋಜನೆಯ ಮೂಲಕ ರಾಜ್ಯದ ಹೆಣ್ಣುಮಕ್ಕಳನ್ನು ಸಬಲೀಕರಣ ಗೊಳಿಸುವಾಗ ಅವರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಳ್ಳಿ, ದೇವ ಭಾವು! ಇಲ್ಲಿ ಏಕನಾಥ್ ಶಿಂದೆಯವರ ವ್ಯಕ್ತಿತ್ವವನ್ನೂ ಮೆಚ್ಚಿಕೊಳ್ಳಬೇಕು. ಅವರು ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಯಾವಾಗಲೂ ಮರಾಠಿಗರ ನೆನಪಿನಲ್ಲಿ ಉಳಿಯಲಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ನಿರಂತರ ವಾಗಿ ಹಣಕಾಸಿನ ಲಭ್ಯತೆ ಇರುವಂತೆ ಅವರು ನೋಡಿಕೊಂಡರು.
ಅವರ ಕೆಲಸದ ಶೈಲಿ ಕೆಲ ಅಧಿಕಾರಿಗಳಿಗೆ ಸರಿ ಕಾಣದೆ ಇದ್ದಿರಬಹುದು, ಆದರೆ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹೆಚ್ಚು ಲಾಭ ಸಿಗು ವಂತೆಯೇ ಸರಕಾರಿ ಯೋಜನೆಗಳನ್ನು ರೂಪಿಸಿದರು ಮತ್ತು ಜಾರಿಗೊಳಿಸಿದರು. ದುರ್ಬಲ ವರ್ಗದವರಿಗಾಗಿ ಅವರು ಮಾಡಿದ ಕೆಲಸಗಳು,
ಅದರಲ್ಲೂ ಬಡವರಿಗಾಗಿ ತಂದ ಆರೋಗ್ಯ ಯೋಜನೆಗಳು ನಿಜಕ್ಕೂ ಅದ್ಭುತವಾಗಿವೆ. ಸರಕಾರವೆಂದರೆ ಯಾವತ್ತೂ ಅದು ಜನಸಾಮಾನ್ಯರನ್ನು ಪ್ರತಿನಿಽಸಬೇಕು ಮತ್ತು ಜನಸಾಮಾನ್ಯರಿಗಾಗಿ ಕೆಲಸ ಮಾಡಬೇಕು!
(ಲೇಖಕರು ಹಿರಿಯ ಪತ್ರಿಕೋದ್ಯಮಿ)
ಇದನ್ನೂ ಓದಿ: Dr Vijay Darda Column: ವಿದೇಶಿ ಸಂಬಂಧದ ಹೊಸ ಸಮೀಕರಣಗಳು