Saturday, 17th May 2025

Dr Raghu Bharadwaj Column: ಮನೆಯ ಹಿತ್ತಲನ್ನು ನಾವೇ ಕಾಯಬೇಕು

ದೃಷ್ಟಿಕೋನ

ಡಾ.ರಘು ಭಾರದ್ವಾಜ

ನಮ್ಮ ರಾಜ್ಯವು ನಮ್ಮ ಮನೆಯ ‘ಅಂಗಳ’ ಅಥವಾ ‘ಹಿತ್ತಲು’ ಇದ್ದಂತೆ. ನಮ್ಮ ಮನೆಯ ಅಂಗಳ-ಹಿತ್ತಲನ್ನು ನಮ್ಮವರೇ ಚೆನ್ನಾಗಿ ನೋಡಿಕೊಳ್ಳಬಲ್ಲರು, ಹೊರಗಿನವರಿಂದ ಇದನ್ನು ನಿರೀಕ್ಷಿಸಲಾಗದು.

ಕಾವೇರಿ ನದಿನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದೇ ಇರಲಿ, ಬೆಳಗಾವಿಗೆ ಸಂಬಂಧಿಸಿ ದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಆಗಾಗ ತಲೆದೋರುವ ಗಡಿಸಮಸ್ಯೆಯೇ ಇರಲಿ ಅಥವಾ ಜಿಎಸ್ಟಿ ತೆರಿಗೆ ಸಂಗ್ರಹದ ಅನ್ವಯ ರಾಜ್ಯಕ್ಕೆ ಕೇಂದ್ರದ ಕಡೆಯಿಂದ ನ್ಯಾಯಯುತವಾಗಿ ಸಿಗಬೇಕಾದ ದುಡ್ಡುಕಾಸು ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ ಎನ್ನುವ ಬಾಬತ್ತೇ ಇರಲಿ, ಒಟ್ಟಿನಲ್ಲಿ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎನಿಸಿದಾಗಲೆ “ಛೇ, ನಮ್ಮಲ್ಲೂ ಒಂದು ಪ್ರಬಲವಾದ ಪ್ರಾದೇಶಿಕ ಪಕ್ಷ ಇರಬೇಕಿತ್ತು” ಎನಿಸುವುದು ಖರೆ.

ನೆರೆಯ ತಮಿಳುನಾಡು ರಾಜ್ಯವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಈ ಗ್ರಹಿಕೆಗೆ ಒಂದಷ್ಟು ಪುಷ್ಟಿ
ಸಿಗುತ್ತದೆ. ಬಹುತೇಕರಿಗೆ ಗೊತ್ತಿರುವಂತೆ ತಮಿಳುನಾಡಿನಲ್ಲಿ ದಶಕಗಳಿಂದಲೂ ಪ್ರಾದೇಶಿಕ ಪಕ್ಷಗಳದ್ದೇ ಪಾರಮ್ಯ. ಅದು ಡಿಎಂಕೆ ಇರಬಹುದು ಅಥವಾ ಎಐಎಡಿಎಂಕೆಯೇ ಇರಬಹುದು, ಈ ಪಕ್ಷಗಳು ಸರದಿ ಬದಲಿಸಿ ಅಧಿಕಾರದ ಗದ್ದುಗೆಯನ್ನು ಅಲಂಕರಿಸುತ್ತಿವೆಯೇ ವಿನಾ ರಾಷ್ಟ್ರೀಯ ಪಕ್ಷಗಳು ತೂರಿಕೊಳ್ಳುವುದಕ್ಕೆ ಇವು ಬಿಡುತ್ತಿಲ್ಲ. ಅಷ್ಟೇಕೆ, ಲೋಕಸಭಾ ಚುನಾವಣೆಯ ವಿಷಯ ಬಂದಾಗಲೂ, “ಹೇಳಿ ಕೇಳಿ ಇದು ರಾಷ್ಟ್ರದ ವಿಷಯವಲ್ಲವೇ..” ಎಂಬ ಗ್ರಹಿಕೆಯ ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಓಗೊಡದೆ ಅಲ್ಲಿನ ಜನರು ಈ ಎರಡರ ಪೈಕಿ ಒಂದು ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸಿ ಕಳಿಸುತ್ತಿರುವುದನ್ನು ಇತಿಹಾಸವೇ ಹೇಳುತ್ತದೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರದ ಹೊರತಾಗಿಯೂ ಡಿಎಂಕೆ ಪಕ್ಷದ ಸಂಸದರು ಗಣನೀಯ ಸಂಖ್ಯೆಯಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದೇ ಇದಕ್ಕೆ ಸಾಕ್ಷಿ. ಬೇರೆ ಮೈತ್ರಿಕೂಟಕ್ಕೆ ಸೇರಿದವರಾದ ಕಾರಣ ಈ ಬಾರಿಯ ಕೇಂದ್ರ ಸರಕಾರದಲ್ಲಿ ಡಿಎಂಕೆಯ ಪ್ರಭಾವ ಏನೂ ನಡೆಯದಿರಬಹುದು; ಆದರೆ ಕೇಂದ್ರದಲ್ಲಿ ಆ ಬಗೆಯ
ಅವಕಾಶ ಸಿಕ್ಕಾಗಲೆ ಡಿಎಂಕೆ ಅಥವಾ ಎಐಎಡಿಎಂಕೆ ಪಕ್ಷಗಳು ತಮ್ಮ ಪ್ರಭಾವವನ್ನು ಚೆನ್ನಾಗೇ ಬೀರಿ (ಕೆಲವೊಮ್ಮೆ ಸರಕಾರವನ್ನು ಅಸ್ಥಿರಗೊಳಿಸುವ ಭಯವನ್ನೂ ಮೂಡಿಸಿ), ತಮ್ಮ ರಾಜ್ಯಕ್ಕೆ ಬೇಕಾಗುವ ಕೆಲಸಗಳನ್ನು ಮಾಡಿಸಿ ಕೊಂಡಿದ್ದಿದೆ. ರಾಜ್ಯಮಟ್ಟದಲ್ಲಿ ಪ್ರಾದೇಶಿಕ ಪಕ್ಷವೊಂದು ಸದೃಢವಾಗಿಯೂ ಪ್ರಭಾವಿಯಾಗಿಯೂ ಇದ್ದರೆ ಕೇಂದ್ರ ಸರಕಾರವನ್ನೂ ತನಗೆ ಬೇಕಾದಂತೆ ಆಡಿಸಬಹುದು, ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂಬುದಕ್ಕೆ ಇದು ಕೇವಲ ಒಂದು ಉದಾಹರಣೆಯಷ್ಟೇ.

ಅಷ್ಟಕ್ಕೂ, ನಮ್ಮ ರಾಜ್ಯ ಎಂಬುದು ನಮ್ಮ ಮನೆಯ ‘ಅಂಗಳ’ ಅಥವಾ ‘ಹಿತ್ತಲು’ ಇದ್ದಂತೆ. ನಮ್ಮ ಮನೆಯ
ಅಂಗಳ-ಹಿತ್ತಲನ್ನು ನಮ್ಮವರೇ ಚೆನ್ನಾಗಿ ನೋಡಿಕೊಳ್ಳಬಲ್ಲರೇ ವಿನಾ, ಹೊರಗಿನವರಿಂದ ಇದನ್ನು ನಿರೀಕ್ಷಿಸ
ಲಾಗದು. ಮತ್ತೆ ತಮಿಳುನಾಡಿನ ವಿಷಯಕ್ಕೇ ಬರುವುದಾದರೆ, ಅಲ್ಲಿ ಭಾಷೆಯ ವಿಷಯ ಅಥವಾ ನದೀನೀರು
ಹಂಚಿಕೆಗೆ ಸಂಬಂಽಸಿ ಏನಾದರೂ ಹುಯಿಲು/ ವಿವಾದ ಎzಗಲೆ ಅಲ್ಲಿನ ಪ್ರಾದೇಶಿಕ ಪಕ್ಷಗಳ ಶಾಸಕರು ಮತ್ತು ಸಂಸದರು ತಂತಮ್ಮ ಪಕ್ಷಭೇದವನ್ನು ಮರೆತು, ತಮಿಳುನಾಡನ್ನು ಒಂದು ಸಮಷ್ಟಿ ಗುರಿಯಾಗಿ ಪರಿಗಣಿಸುವುದಿದೆ,

ರಾಜ್ಯದ ಪರವಾಗಿ ದನಿಯೆತ್ತಿ ಕೆಲಸವನ್ನು ಸಾಧಿಸಿಕೊಳ್ಳುವುದಿದೆ. ಮಹಾರಾಷ್ಟ್ರದಲ್ಲಿ ಈಗಿನದು ಭಿನ್ನ ಪರಿಸ್ಥಿತಿಯೇ ಇರಬಹುದು, ಆದರೆ ಬಾಳಾ ಠಾಕ್ರೆಯವರು ಇದ್ದ ಕಾಲಘಟ್ಟದಲ್ಲಿ ಮತ್ತು ತರುವಾಯದ ಕೆಲ
ವರ್ಷಗಳವರೆಗೆ ಅಲ್ಲಿನ ಪ್ರಾದೇಶಿಕ ಪಕ್ಷವಾದ ಶಿವಸೇನೆ ಯಾವ ಮಟ್ಟಿಗಿನ ಪ್ರಭಾವ ಹೊಂದಿತ್ತು ಎಂಬುದನ್ನು
ಬಿಡಿಸಿ ಹೇಳಬೇಕಿಲ್ಲ. ಶರದ್ ಪವಾರ್ ಅವರು ಹುಟ್ಟುಹಾಕಿದ ‘ನ್ಯಾಷನಲಿ ಕಾಂಗ್ರೆಸ್ ಪಾರ್ಟಿ’ಗೂ ಅನ್ವಯವಾಗುವ ಮಾತಿದು.

ಇನ್ನು ಜಾರ್ಖಂಡ್ ವಿಷಯಕ್ಕೆ ಬಂದರೆ, ಅಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸಹಭಾಗಿ ಪಕ್ಷವೆನಿಸಿಕೊಂಡು ಇತ್ತೀಚೆಗೆ ಅಽಕಾರಕ್ಕೆ ಬಂದ ‘ಜಾರ್ಖಂಡ್ ಮುಕ್ತಿ ಮೋರ್ಚಾ’ದ ತಾಜಾ ಉದಾಹರಣೆಯೇ ಇದೆ. ಪಶ್ಚಿಮ ಬಂಗಾಳದಲ್ಲೂ ಬಹಳ ಕಾಲದವರೆಗೆ ಗದ್ದುಗೆಯಲ್ಲಿದ್ದ ಕಮ್ಯುನಿಸ್ಟರನ್ನು ಮತ್ತೊಂದು ಪ್ರಾದೇಶಿಕ ಪಕ್ಷವಾದ ತೃಣ ಮೂಲ ಕಾಂಗ್ರೆಸ್ ಪಲ್ಲಟಗೊಳಿಸಿದ್ದು, ಅದರ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ
ರಾಷ್ಟ್ರೀಯ ರಾಜಕಾರಣದ ಮೇಲೂ ಪರಿಣಾಮ ಬೀರಬಲ್ಲಷ್ಟು ಚರಿಷ್ಮಾ ಹೊಂದಿರುವುದು ಗೊತ್ತೇ ಇದೆ.

ಜಮ್ಮು-ಕಾಶ್ಮೀರದ ವಿಷಯಕ್ಕೆ ಬರೋಣ. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಗದ್ದುಗೆ ಅಲಂಕರಿ ಸುವ ಹವಣಿಕೆಯಲ್ಲಿ ಬಿಜೆಪಿ ಇದ್ದಿದ್ದು ಹೌದಾದರೂ, ಅಲ್ಲಿನ ಮತದಾರರು ಓಗೊಟ್ಟಿದ್ದು ಜಮ್ಮು- ಕಾಶ್ಮೀರ ನ್ಯಾಷನಲ್ ಕಾನರೆ ಎಂಬ ಪ್ರಾದೇಶಿಕ ಪಕ್ಷಕ್ಕೆ. ಆಂಧ್ರಪ್ರದೇಶದಲ್ಲೂ ತೆಲುಗುದೇಶಂ ಪಕ್ಷ ಮತ್ತೊಮ್ಮೆ ತನ್ನ ಪಾರಮ್ಯವನ್ನು ಸಾಧಿಸಿದೆ.

ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೂ, ಕೆ.ಸಿ.ಚಂದ್ರಶೇಖರ ರಾವ್ ಅವರ ‘ಭಾರತ ರಾಷ್ಟ್ರ
ಸಮಿತಿ’ ಪಕ್ಷವು ಇದಕ್ಕೂ ಮುನ್ನ ದರ್ಬಾರು ಮಾಡಿದ್ದನ್ನು ಮರೆಯಲಾಗದು. ಒಡಿಶಾದಲ್ಲಿ ಈಗ ಬಿಜೆಪಿ ಅಧಿಕಾರಕ್ಕೆ ಬಂದಿರಬಹುದು, ಆದರೆ ಸಾಕಷ್ಟು ವರ್ಷಗಳವರೆಗೆ ಅಲ್ಲಿ ಸಿಂಹಾಸನದಲ್ಲಿದ್ದುದು ಬಿಜು ಜನತಾದಳ ಪಕ್ಷ ಎಂಬುದು ನಿಮ್ಮ ನೆನಪಲ್ಲಿರಲಿ. ಹೇಳುತ್ತ ಹೋದರೆ ಇಂಥ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಕರ್ನಾಟಕದ ನೆಲೆಯಲ್ಲಿ ಹೇಳುವುದಾದರೆ, ನಮಗೊಂದು ಸದೃಢ ಮತ್ತು ಪ್ರಭಾವಿ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಕಾವೇರಿ ನದಿನೀರು ಹಂಚಿಕೆ ವಿಷಯದಲ್ಲಿ ರಾಜ್ಯದೆಡೆಗೆ ದಶಕಗಳಿಂದ ವ್ಯಕ್ತವಾಗುತ್ತಿರುವ ಮಲತಾಯಿ ಧೋರಣೆ,
ಕೇಂದ್ರ ಸರಕಾರಿ ಹುzಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಪ್ರಶ್ನೆಪತ್ರಿಕೆಗಳಿಗೆ ವ್ಯವಸ್ಥೆ ಮಾಡುವಿಕೆ ಹಾಗೂ ಉದ್ಯೋಗಾವಕಾಶಗಳಲ್ಲಿ ಕನ್ನಡದವರಿಗೆ ಅವಕಾಶ ಸಿಗುವಂತಾಗುವಿಕೆ, ಜಿಎಸ್ಟಿ ಸಂಗ್ರಹ ಮತ್ತು ಪಾವತಿಯ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದರೂ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅಸಮ ತೋಲನ, ಗಡಿ ಸಮಸ್ಯೆ ಈ ಎಲ್ಲದರ ಕುರಿತಂತೆ ದನಿಯೆತ್ತಿ ಹಕ್ಕು ಸಾಧಿಸಿ, ನಮಗೆ ದಕ್ಕಬೇಕಾದುದನ್ನು ದಕ್ಕಿಸಿ ಕೊಳ್ಳಲು ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದ್ದೇ ಇದೆ.

ಹಾಗಾದಾಗ ಮಾತ್ರವೇ, ನೆರೆಯ ತಮಿಳುನಾಡಿನಂತೆ ಕರ್ನಾಟಕವೂ ನಿರ್ಣಾಯಕ ವಿಷಯಗಳಲ್ಲಿ ಮಹತ್ತರ ಪಾತ್ರ ವನ್ನು ವಹಿಸಲು, ಕೇಂದ್ರದ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ, ರಾಜ್ಯಕ್ಕೊಂದು ತೂಕವೂ ಬರುತ್ತದೆ.

(ಲೇಖಕರು ಉಪನ್ಯಾಸಕರು)

ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ