ವಿತ್ತಲೋಕ
ಡಾ.ಜೆ.ಎನ್.ಜಗನ್ನಾಥ್
ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) 11ನೇ ಬಾರಿಗೆ, ರೆಪೋ ದರವನ್ನು ಶೇ.6.5ರ ಮಟ್ಟದಲ್ಲೇ ಮುಂದು ವರಿಸುವ ನಿರ್ಧಾರವನ್ನು ಕೈಗೊಂಡಿದೆ. ರೆಪೋ ದರವು ಭಾರತದಲ್ಲಿ ಬ್ಯಾಂಕುಗಳ ಬಡ್ಡಿದರದ ಮಾರ್ಗದರ್ಶಿ. ಬ್ಯಾಂಕುಗಳು ತಮ್ಮ ಹೂಡಿಕೆಗಳನ್ನು ಆರ್ ಬಿಐನಲ್ಲಿ ಒತ್ತೆಯಿಟ್ಟು ಅವಶ್ಯಕತೆಯಿದ್ದಾಗ ಸಾಲ ಪಡೆಯಬಹುದು. ಆಗ ರೆಪೋ ದರವು, ರಿವರ್ಸ್ ರೆಪೋ ದರದ ಬಡ್ಡಿಯನ್ನು ನಿರ್ಧರಿಸುತ್ತದೆ.
ಅಮೆರಿಕದಲ್ಲಿ ಫೆಡ್ ರಿಸರ್ವ್ ದರವು ಎಲ್ಲ ಬಡ್ಡಿದರಗಳಿಗೆ ಮಾರ್ಗಸೂಚಿಯಾಗಿರುತ್ತದೆ. ಇಂಗ್ಲೆಂಡ್ನಲ್ಲಿ ಬ್ಯಾಂಕ್ ದರವು ಮಾರ್ಗದರ್ಶಿಯಾಗಿರುತ್ತದೆ. ಈ ಬಾರಿ ಆರ್ಬಿಐ ಕೇವಲ ಬಡ್ಡಿದರದ ಬಗ್ಗೆ ಯೋಚಿಸುತ್ತಿಲ್ಲ. ಭಾರತದಲ್ಲಿ, ಆರ್ಬಿಐ ‘ಮಾನಿಟರಿ ಪಾಲಿಸಿ’, ಕೇಂದ್ರ ಸರಕಾರದ ಫೈನಾನ್ಷಿಯಲ್ ಪಾಲಿಸಿ (ಬಜೆಟ್) ಇವು ಹಣದುಬ್ಬರವನ್ನು ಹಿಡಿತದಲ್ಲಿ ಇಡಲಾಗಿಲ್ಲ. ಆರ್ಬಿಐಗೆ ತಲ್ಲಣ ತಂದಿರುವ ಎರಡನೆಯ ಕಾರಣವೆಂದರೆ, ಮಾರುಕಟ್ಟೆಯಲ್ಲಿ ದ್ರವ್ಯತ್ವದ (ಲಿಕ್ವಿಡಿಟಿ) ತೊಂದರೆಯಾಗಿದೆ.
ಸುಮಾರು ಒಂದು ಲಕ್ಷ ಕೋಟಿ ರುಪಾಯಿ ನಗದು, ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಕಡಿಮೆ ಇದೆ. ವಿದೇಶಿಯರು, ವಿದೇಶಿ ಸಂಸ್ಥೆಗಳು ಮಾರುಕಟ್ಟೆಯಿಂದ ಷೇರುಗಳನ್ನು ಮಾರಿ ಹಣವನ್ನು ತಮ್ಮ ದೇಶಕ್ಕೆ ವರ್ಗಾಯಿಸಿರುವುದೂ ಇದಕ್ಕೆ ಒಂದು ಕಾರಣವಾಗಿದೆ.
ಆರ್ಬಿಐ ನಮ್ಮ ದೇಶದ ಬ್ಯಾಂಕುಗಳಿಗೆ ಅನ್ವಯಿಸುವ ಪ್ರಮುಖ ಕಟ್ಟುಪಾಡುಗಳನ್ನು ರೂಪಿಸುತ್ತದೆ. ಬ್ಯಾಂಕುಗಳು ಶೇಕಡ ಕೆಲವಂಶವನ್ನು ನಗದು ರೂಪದಲ್ಲಿ ಮೀಸಲಾಗಿ ಇಟ್ಟಿರಬೇಕಾಗುತ್ತದೆ. ಇದನ್ನು ‘ನಗದು ಮೀಸಲು
ಅನುಪಾತ’ (ಕ್ಯಾಷ್ ರಿಸರ್ವ್ ರೇಷಿಯೊ- ಸಿಆರ್ಆರ್) ಎಂದು ಕರೆಯಲಾಗುತ್ತದೆ.
ನಗದು ರೂಪದಲ್ಲಿ ಬ್ಯಾಂಕುಗಳು ಹಣ ಇಟ್ಟುಕೊಳ್ಳುವುದರಿಂದ, ಬ್ಯಾಂಕುಗಳು ಸಾಲ ನೀಡುವ ಮೊತ್ತವು ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ. ದೇಶದಲ್ಲಿ ಹಣದ ಕೊರತೆಯಾದರೆ ಆರ್ಬಿಐ, ಬ್ಯಾಂಕುಗಳು ಕಡ್ಡಾಯವಾಗಿ ನಗದು ರೂಪದಲ್ಲಿ ಇಡಬೇಕಾದ ಹಣವನ್ನು ಕಡಿಮೆ ಮಾಡಿದರೆ, ಆಗ ಬ್ಯಾಂಕುಗಳು ಹೆಚ್ಚು ಹೆಚ್ಚು ಸಾಲವನ್ನು ನೀಡ ಬಹುದು.
90 ವರ್ಷಗಳಷ್ಟು ಹಳೆಯ ಆರ್ಬಿಐ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಗವರ್ನರ್ ಆಗಿ ಸೇವೆ ಸಲ್ಲಿಸಿ ದವರಲ್ಲಿ ಶಕ್ತಿಕಾಂತ್ ದಾಸ್ ಒಬ್ಬರು. ಶಕ್ತಿಕಾಂತ್ ದಾಸ್ ಮತ್ತು ಇತರ ಐದು ಮಂದಿ ಸದಸ್ಯರನ್ನೊಳಗೊಂಡ ವಿತ್ತೀಯ ಸಮಿತಿಯು, 2024ರ ಡಿಸೆಂಬರ್ 6ರಂದು, ಬ್ಯಾಂಕುಗಳು ಹೊಂದಿರಬೇಕಾದ ನಗದು ಪ್ರಮಾಣವನ್ನು ಶೇ.4.5ರಿಂದ ಶೇ.4ಕ್ಕೆ ಇಳಿಸಿದೆ.
ಇದರಿಂದಾಗಿ, ಬ್ಯಾಂಕುಗಳು ಸುಮಾರು 1 ಲಕ್ಷ ಕೋಟಿ ರು.ನಷ್ಟು ಹೆಚ್ಚು ಸಾಲ ನೀಡಬಹುದು. ಬ್ಯಾಂಕುಗಳು ಹೆಚ್ಚು ಸಾಲ ನೀಡಿದರೆ ಜನರ ಬಳಿ ಹೆಚ್ಚು ಹಣವಿರುತ್ತದೆ ಮತ್ತು ಮಾರುಕಟ್ಟೆಯಲ್ಲಿನ ಆರ್ಥಿಕತೆಯ ಬಿಕ್ಕಟ್ಟು ಕಡಿಮೆ ಯಾಗುತ್ತದೆ. ಇನ್ನು ಸುಮಾರು ನಾಲ್ಕು ತಿಂಗಳಿನಲ್ಲಿ ಹಣದುಬ್ಬರ ಕಡಿಮೆಯಾಗಿ, ಹೊರದೇಶದಿಂದ ಹೆಚ್ಚಿನ ಹಣ ಭಾರತಕ್ಕೆ ಬಂಡವಾಳವಾಗಿ ಅಥವಾ ಹೂಡಿಕೆಯಾಗಿ ಹರಿದು ಬಂದರೆ, ಈ ವರ್ಷದ ಅರ್ಥಸ್ಥಿತಿಯಲ್ಲಿ ನೆಮ್ಮದಿ ಯನ್ನು ಕಾಣಬಹುದು.
(ಲೇಖಕರು ಆರ್ಥಿಕ ತಜ್ಞರು)
ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ