ಕ್ರಿಯಾಲೋಪ
ಡಿ.ಎಸ್.ಅರುಣ್
ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆದದ್ದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ. ಜತೆಗೆ, ಸದರಿ ಅಧಿವೇಶನದ ಕೊನೆಯ ದಿನವಾದ 2024ರ ಡಿಸೆಂಬರ್ 19ರಂದು, ಕಲಾಪದ ನಂತರ ನಡೆದ ಘಟನೆಗಳೂ ರಾಜ್ಯದ ಜನತೆಯ ಮುಂದಿವೆ.
ಸದನದ ಒಳಗಡೆ ನಡೆದ ಘಟನೆಗಳ ಕುರಿತಂತೆ ಪರಿಷತ್ತಿನ ಅಧಿಕೃತ ಕಡತಗಳು, ದಾಖಲೆಗಳು ಹಾಗೂ ವಿಡಿಯೋ ಗಳನ್ನು ವೀಕ್ಷಿಸಿದ ನಂತರ ವಿಧಾನ ಪರಿಷತ್ತಿನ ಗೌರವಾನ್ವಿತ ಸಭಾಪತಿಗಳು, “ಪರಿಷತ್ತಿನ ಸದಸ್ಯರಾದ ಸಿ.ಟಿ.ರವಿ ಅವರು ಬಳಸಿರಬಹುದಾದ ಪದಕ್ಕೆ ದಾಖಲೆಗಳು ಇಲ್ಲದ ಕಾರಣ, ಎರಡು ಪಕ್ಷಗಳ ನಡುವಿನ ಪದಗಳ ವಿನಿಮಯದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು” ಎಂದು ತಮ್ಮ ನಿರ್ಧಾರವನ್ನು ಸದನದಲ್ಲಿ ತಿಳಿಸಿದ ನಂತರ ಅನಿರ್ದಿಷ್ಠಾ ವಧಿವರೆಗೆ ಸದನವನ್ನು ಮುಂದೂಡಿದರು.
ಅವರು ಹೀಗೆ ತಮ್ಮ ನಿರ್ಧಾರವನ್ನು ತಿಳಿಸಿದ ನಂತರ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ವಿಧಾನ
ಪರಿಷತ್ತಿನ ಮಾರ್ಷಲ್‌ರನ್ನು ಕರೆದು, ಸಿ.ಟಿ.ರವಿಯವರು ಬೆಂಗಳೂರು ಅಥವಾ ಚಿಕ್ಕಮಗಳೂರನ್ನು ತಲುಪುವ ವರೆಗೂ ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುವಂತೆ ಮೌಖಿಕವಾಗಿ ಸೂಚಿಸಿದರು.
ಪ್ರಜಾಪ್ರಭುತ್ವದ ದೇಗುಲವೆನಿಸಿರುವ ಸುವರ್ಣಸೌಧದಲ್ಲಿ ಗೂಂಡಾಗಳು ಸಿ.ಟಿ.ರವಿಯವರ ಮೇಲೆ ಹಾಗೂ ನಮ್ಮ ಬಿಜೆಪಿ ಶಾಸಕರ ಮೇಲೆ ಹಲ್ಲೆ ನಡೆಸಲು ಎರಡು ಬಾರಿ ಯತ್ನಿಸಿದ ವಿಷಯದ ಬಗ್ಗೆ ಹಾಗೂ ಈ ದುಷ್ಕೃತ್ಯ ನಡೆಸಲು ಅವಕಾಶ ಕಲ್ಪಿಸಿದ ರಾಜ್ಯ ಕಾಂಗ್ರೆಸ್ ಸರಕಾರದ ನಡೆಯ ವಿರುದ್ಧ ಬಿಜೆಪಿಯ ಶಾಸಕರೆಲ್ಲ ಕೂಡಿ ಸುವರ್ಣಸೌಧದ ಒಳಗಿನ ಮುಖ್ಯದ್ವಾರದ ಬಳಿ ಧರಣಿ ನಡೆಸತೊಡಗಿದರು. ಆಗ ಸಿ.ಟಿ.ರವಿ ಅವರನ್ನು ಏಕಾಏಕಿ ಬಂಧಿಸಲು ಪೊಲೀಸರು ಮುಂದಾದಾಗ, ‘ಸದನದ ಒಳಗೆ ನಡೆದ ಘಟನೆಯ ಕುರಿತು ಗೌರವಾನ್ವಿತ ಸಭಾಪತಿಯವರ ಅನುಮತಿ
ಪಡೆದು ಪ್ರಕ್ರಿಯೆ ನಡೆಸುತ್ತಿರುವಿರೇ?’ ಎಂಬ ನಮ್ಮ ಪ್ರಶ್ನೆಗೆ ಕಿಂಚಿತ್ತೂ ಬೆಲೆ ಕೊಡದೆ, ನೋಟಿಸ್ ಕೂಡ ಜಾರಿ ಮಾಡದೆ ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸಿದರು.
ಮಾನ್ಯ ಸಭಾಪತಿಗಳ ರೂಲಿಂಗ್ ಬಳಿಕವೂ ನೋಟಿಸ್ ನೀಡದೆ, ಸಭಾಪತಿಗಳ ಗಮನಕ್ಕೆ ತಾರದೆ ಪೊಲೀಸ್ ಇಲಾಖೆ ಒತ್ತಡಕ್ಕೆ ಮಣಿದು ನಡೆಸಿದ ಈ ಕೃತ್ಯವು ವಿಧಾನ ಪರಿಷತ್ತಿನ ಸದಸ್ಯರ ಹಕ್ಕುಚ್ಯುತಿಯಾಗಿದೆ ಹಾಗೂ ಸಭಾಪತಿಗಳ ಆದೇಶಕ್ಕೂ ಬೆಲೆಕೊಡದೆ ಹಕ್ಕುಚ್ಯುತಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ವಿಧಾನ ಮಂಡಲದ ಘನತೆ ಹಾಗೂ ಅದರ ಸಾಂವಿಧಾನಿಕ ಶಕ್ತಿಯನ್ನು ಮಣ್ಣುಪಾಲು ಮಾಡಲು ಇಂದಿನ ರಾಜ್ಯ ಸರಕಾರ ಹೊರಟಿದೆ ಎನಿಸು ತ್ತದೆ.
ರಾಜಕೀಯ ಷಡ್ಯಂತ್ರ ನಡೆಸಿ, ಅನುಭವಿ ರಾಜಕಾರಣಿ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಟಿ.ರವಿ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿ, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ರವಿಯವರಿಗೆ ರಾತ್ರಿಯಿಡೀ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುವ ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆಯ ಕುರಿತು ಯೋಚಿಸಿದರೆ, ರಾಜ್ಯದಲ್ಲಿನ ಜನಸಾಮಾನ್ಯರ ಗತಿ ಏನು? ಎಂಬ ಯಕ್ಷಪ್ರಶ್ನೆ ಮೂಡದೇ ಇರಲಾರದು.
(ಲೇಖಕರು ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ)
ಇದನ್ನೂ ಓದಿ: Shankaranarayana Bhat Column: ಕಠಿಣ ನಿರ್ಣಯದ ಅಗತ್ಯವಿದೆ