Wednesday, 14th May 2025

ಯಡಿಯೂರಪ್ಪ ಏಕೆ ಬೆಚ್ಚಿ ಬಿದ್ದರು ?

ಮೂರ್ತಿಪೂಜೆ

ಕಳೆದ ವಾರ ದೆಹಲಿಗೆ ಹೋದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಅವರೊಂದಿಗೆ ಮಾತನಾಡುತ್ತಾ, ‘ಸರ್, ಪಾರ್ಲಿಮೆಂಟ್ ಚುನಾವಣೆ ಹತ್ತಿರದಲ್ಲಿದೆ. ಹೀಗಾಗಿ ರಾಜ್ಯ ಘಟಕದ ಅಧ್ಯಕ್ಷರು ಮತ್ತು ವಿಧಾನಸಭೆಯಲ್ಲಿ ಪಕ್ಷದ ಶಾಸಕಾಂಗ ನಾಯಕರು ಯಾರಾಗಬೇಕು ಅಂತ ಬೇಗ ನಿರ್ಧರಿಸಬೇಕು’ ಎಂದರು. ಇದಕ್ಕೆ ನಡ್ಡಾ ಅವರು, ‘ನಿಜ, ನಾನೂ ಅದನ್ನೊಪ್ಪುತ್ತೇನೆ. ಈಗಿರುವ ರಾಜ್ಯಾಧ್ಯಕ್ಷರನ್ನು ಬದಲಿಸಿ ಬೇರೊಬ್ಬರನ್ನು ತರುವ ಮತ್ತು ಶಾಸಕಾಂಗ ನಾಯಕರ ಆಯ್ಕೆ ಮಾಡುವ ವಿಷಯದಲ್ಲಿ ವಿಳಂಬವಾಗಿರುವುದರಿಂದ ನಿಮಗೆಲ್ಲ ಮುಜುಗರವಾಗಿದೆ.

ಹೀಗಾಗಿ ಹೈಕಮಾಂಡ್ ಕೂಡ ಈ ಕುರಿತು ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದೆ’ ಎಂದರಂತೆ. ನಡ್ಡಾರ ಮಾತಿಗೆ ಖುಷಿಯಾದ ಯಡಿಯೂರಪ್ಪ, ‘ಈ ಕೆಲಸ ಎಷ್ಟು ಬೇಗ ಆಗುತ್ತದೋ ಅಷ್ಟರ ಮಟ್ಟಿಗೆ ನಮಗೆ ಅನುಕೂಲವಾಗುತ್ತದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಗ್ಗೂಡಿ ಕೆಲಸ ಮಾಡಲು ಅನುಕೂಲವಾಗುತ್ತದೆ’ ಎಂದರು. ಈ ವೇಳೆ ಪುನಃ ಮಾತನಾಡಿದ ನಡ್ಡಾ, ‘ಯಡ್ಯೂರಪ್ಪಾಜಿ, ಕರ್ನಾಟಕದಲ್ಲಿ ನಿಮ್ಮ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ರನ್ನಾಗಿ ಮಾಡಿ ಅಶೋಕ್ ಇಲ್ಲವೇ ಅಶ್ವತ್ಥನಾರಾಯಣ ಅವರನ್ನು ಶಾಸಕಾಂಗ ನಾಯಕರನ್ನಾಗಿ ಮಾಡಲು ಒಂದು ಮಟ್ಟದಲ್ಲಿ ಸಹಮತ ವ್ಯಕ್ತವಾಗಿದೆ’ ಎಂದಾಗ ಯಡಿಯೂರಪ್ಪ ಬೆಚ್ಚಿಬಿದ್ದರಂತೆ.

ಯಾಕೆಂದರೆ ಕಳೆದ ೪ ತಿಂಗಳಿನಿಂದ ಪದೇ ಪದೆ ದಿಲ್ಲಿಗೆ ಬಂದು ತಮ್ಮ ಪುತ್ರ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅಂತ ಅವರು ಹೇಳಿದ್ದರು. ಹೀಗಾಗಿ ನಡ್ಡಾರ ಈ ಮಾತಿನಿಂದ ಅರೆಕ್ಷಣ ವಿಸ್ಮಿತರಾದರೂ ಸಾವರಿಸಿಕೊಂಡ ಅವರು, ‘ಸರ್, ಈ ಹಿಂದಿನಿಂದ ನಾನು ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ತನ್ನಿ ಎಂದಿದ್ದು ಪುತ್ರ ವ್ಯಾಮೋಹದಿಂದಲ್ಲ. ಅದೇ ಮುಖ್ಯವಾಗಿದ್ದರೆ ವಿಜಯೇಂದ್ರ ಆದರೇನು? ರಾಘವೇಂದ್ರ ಆದರೇನು? ಅಂತ ಸುಮ್ಮನಿರುತ್ತಿದ್ದೆ. ಆದರೆ ಇದು ಪಕ್ಷ ಕಟ್ಟುವ ಕೆಲಸ. ಈ ಕೆಲಸಕ್ಕೆ ರಾಘವೇಂದ್ರರಿಗಿಂತ ವಿಜಯೇಂದ್ರರೇ ಬೆಸ್ಟು. ಎಷ್ಟಾದರೂ ರಾಘವೇಂದ್ರ ಪಾರ್ಲಿಮೆಂಟ್ ಮೆಂಬರು, ಅವರೇನಿದ್ದರೂ ಸ್ವಕ್ಷೇತ್ರ ಶಿವಮೊಗ್ಗ ಮತ್ತು ದಿಲ್ಲಿ ರಾಜಕಾರಣದ ಮೇಲೆ ಕಾನ್‌ಸೆಂಟ್ರೇಟ್ ಮಾಡಿದ್ದಾರೆ. ಆದರೆ ವಿಜಯೇಂದ್ರ ಇಡೀ ರಾಜ್ಯವನ್ನು ೩ ಬಾರಿ ಸುತ್ತಿ ತಮ್ಮದೇ ನೆಟ್‌ವರ್ಕ್ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಲಿಂಗಾಯತ ಕಾರ್ಡಿನ ಜತೆ ಅವರ ಸಂಘಟನಾಶಕ್ತಿ ಸೇರಿ ಪಕ್ಷ ಕಟ್ಟಲು ನೆರವಾಗುತ್ತದೆ’ ಎಂದರಂತೆ.

ಯಡಿಯೂರಪ್ಪರ ಈ ಮಾತಿಗೆ ನಡ್ಡಾ ಅವರು, ‘ಯಡ್ಯೂರಪ್ಪಾಜೀ, ನಿಮ್ಮ ಮಾತು ನನಗೆ ಅರ್ಥವಾಗುತ್ತದೆ. ಆದರೆ ಕರ್ನಾಟಕದಿಂದ ಬರುತ್ತಿರುವ ಬಹುತೇಕ ಸಂದೇಶಗಳು, ಇಲ್ಲಿ ಪಕ್ಷ ಕಟ್ಟಲು ಡೈನಮಿಕ್ ಲೀಡರ್ ಬೇಕಿಲ್ಲ. ಬದಲಿಗೆ ಎಲ್ಲರನ್ನೂ ವಿಶ್ವಾಸದಿಂದ ಕರೆದೊಯ್ಯುವವರು ಬೇಕು ಎನ್ನುತ್ತಿವೆ’ ಎಂದರು. ವಿಷಯ ಯಾಕೋ ವಿಕೋಪಕ್ಕೆ ಹೋಗುತ್ತಿದೆ ಎಂಬುದನ್ನರಿತ ಯಡಿಯೂರಪ್ಪ ಆಗಲೂ ಪಟ್ಟು ಬಿಡದೆ, ‘ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ವಿಷಯದಲ್ಲೂ ವಿಜಯೇಂದ್ರ ದಿ ಬೆಸ್ಟು ಸರ್, ದಯವಿಟ್ಟು ನನ್ನ ಮಾತು ಕೇಳಿ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ, ನಂತರ ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ
ಯಾವ ಪವಾಡ ಆಗುತ್ತದೆ ನೋಡಿ’ ಎಂದಿದ್ದಾರೆ.

ಆದರೆ ಯಡಿಯೂರಪ್ಪ ಏನೇ ಹೇಳಿದರೂ ಒಪ್ಪದ ನಡ್ಡಾ, ‘ಈ ವಿಷಯದಲ್ಲಿ ಪಕ್ಷದ ಸದ್ಯದ ತೀರ್ಮಾನ ಇದು. ಯೋಚಿಸಿ ನೋಡಿ ಯಡ್ಯೂರಪ್ಪಾಜಿ. ಇದರಲ್ಲಿ ಏನೇ ಬದಲಾವಣೆ ಯಿದ್ದರೂ ನಿಮಗೆ ತಿಳಿಸುತ್ತೇವೆ’ ಎಂದು ಬೀಳ್ಕೊಟ್ಟರಂತೆ.

ಕಟ್ಟಾ ಮನೆಯಲ್ಲಿ ಬೆಟ್ಟ ಬಿತ್ತು
ಯಡಿಯೂರಪ್ಪ ಅವರ ದಿಲ್ಲಿಯಾತ್ರೆಯ ನಂತರ ಅಕ್ಟೋಬರ್ ೧೧ರಂದು ಹಿರಿಯ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಸದಾಶಿವನಗರದ ಮನೆಯಲ್ಲಿ
ರಾಜ್ಯ ಬಿಜೆಪಿ ನಾಯಕರ ಮಹತ್ವದ ಸಭೆ ನಡೆದಿದೆ. ಯಡಿಯೂರಪ್ಪ, ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ, ರಾಮಮೂರ್ತಿ, ರವಿ ಸುಬ್ರಹ್ಮಣ್ಯ ಸೇರಿದಂತೆ ೨೫ಕ್ಕೂ ಹೆಚ್ಚು ಮಂದಿ ಇದ್ದ ಈ ಸಭೆಯಲ್ಲಿ ನಡ್ಡಾ ಆಡಿದ ಮಾತು ಬಹಿರಂಗವಾಗಿದೆ.

ರಾಘವೇಂದ್ರರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ, ತಮ್ಮನ್ನು ಇಲ್ಲವೇ ಅಶ್ವತ್ಥನಾರಾಯಣರನ್ನು ಶಾಸಕಾಂಗ ನಾಯಕರನ್ನಾಗಿ ಮಾಡುವ ಹೈಕಮಾಂಡ್ ಪ್ರಸ್ತಾಪದಿಂದ ಆರ್.ಅಶೋಕ್ ಬೇಸತ್ತಿದ್ದಾರೆ. ಹಾಗಂತಲೇ, ‘ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಕೆಲಸ ಮಾಡಬಹುದಿತ್ತು. ನಾನೂ ಡಿಸಿಎಂ ಹುದ್ದೆಯಿಂದ ಹಿಡಿದು ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದವನು, ೪ ದಶಕಗಳಿಂದ ಪಕ್ಷಕ್ಕಾಗಿ ದುಡಿದವನು, ಇವತ್ತು ನನಗೂ ರಾಜ್ಯ ಗೊತ್ತಿದೆ. ಹೀಗಾಗಿ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಬೇಕು ಅನ್ನುವುದು ನನ್ನಾಸೆ. ಆದರೆ ಆ ಹುದ್ದೆ ಬೇಡ, ಶಾಸಕಾಂಗ ನಾಯಕ ಆಗುವುದಕ್ಕೂ ನನಗೆ ಒಪ್ಪಿಗೆಯಿಲ್ಲ’ ಅಂತ ನೇರವಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲ, ‘ಇವತ್ತು ಕರ್ನಾಟಕದಲ್ಲಿ ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಿದ್ದಾಗ ಸಹಜವಾಗಿಯೇ ವಿಧಾನಸಭೆಯಲ್ಲಿ ಜೆಡಿಎಸ್ ನಾಯಕ
ರಾಗಿ ಒಕ್ಕಲಿಗ ಸಮುದಾಯದ ಎಚ್.ಡಿ.ಕುಮಾರಸ್ವಾಮಿ ಕುಳಿತಿರುತ್ತಾರೆ. ಅವರ ಪಕ್ಕ ಅದೇ ಸಮುದಾಯದ ನಾನು ಪ್ರತಿಪಕ್ಷ ನಾಯಕರಾಗಿ ಕುಳಿತರೆ ಅದರಿಂದ ರಾಜ್ಯದ ಜನರಿಗೆ ರವಾನೆಯಾಗುವ ಸಂದೇಶವೇನು?’ ಅಂತ ಮುನಿಸು ತೋರಿಸಿದ್ದಾರೆ.

ಯಾವಾಗ ಅಶೋಕ್ ಈ ಮಾತು ಹೇಳಿದರೋ, ಸಭೆಯಲ್ಲಿ ಒಂದರ ಹಿಂದೊಂದು ವಿಷಯಗಳು ಪ್ರಸ್ತಾಪ ವಾಗತೊಡಗಿವೆ. ರಾಘವೇಂದ್ರ ಪಕ್ಷದ ರಾಜ್ಯಾಧ್ಯಕ್ಷ ರಾಗುವ ಪ್ರಪೋಸಲ್ಲನ್ನು ಅರಗಿಸಿಕೊಳ್ಳುವುದು ಹೇಗೆ? ಅಂತ ಬಹುತೇಕರು ಗುನುಗುನಿಸುತ್ತಿರುವಾಗ, ಇದ್ದಕ್ಕಿದ್ದಂತೆ ಜೆಡಿಎಸ್ ಜತೆಗಿನ ಮೈತ್ರಿಯ ವಿಷಯ ಪ್ರಸ್ತಾಪವಾಗಿದೆ. ಪಾರ್ಲಿಮೆಂಟ್ ಚುನಾವಣೆ ದೃಷ್ಟಿಯಿಂದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ವರಿಷ್ಠರ ಪ್ರಸ್ತಾಪವೇನೋ ಸರಿ, ಆದರೆ ತಳಮಟ್ಟದಲ್ಲಿ ಇದು ವರ್ಕ್‌ಔಟ್ ಆಗುತ್ತದಾ? ಎಂಬ ಬಗ್ಗೆ ವರಿಷ್ಠರು ರಾಜ್ಯದ ನಾಯಕರ ಜತೆ ಮಾತನಾಡಬೇಕಿತ್ತು.

ಹಾಗೆ ಮಾಡದಿರುವುದರಿಂದ ಎಲ್ಲ ಕಡೆ ಒಂದು ಬಗೆಯ ಅಸಮಾಧಾನ ಕೇಳಿಬರುತ್ತಿದೆ. ಉದಾಹರಣೆಗೆ ತುಮಕೂರು ಲೋಕಸಭಾ ಕ್ಷೇತ್ರವನ್ನೇ ತೆಗೆದುಕೊಳ್ಳಿ. ನಾಳೆ ಈ ಕ್ಷೇತ್ರ ತಮಗೆ ಬೇಕು ಅಂತ ಜೆಡಿಎಸ್ ನಾಯಕರು ಪಟ್ಟುಹಿಡಿಯುತ್ತಾರೆ. ಯಾಕೆಂದರೆ ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ದೇವೇಗೌಡರು ಕಡಿಮೆ ಅಂತರದಿಂದ ಸೋಲು ಅನುಭವಿಸಿದ ಕ್ಷೇತ್ರವಿದು. ಈ ಸಲ ಮೈತ್ರಿಯ ಕಾರಣದಿಂದ ನಾವು ನಿರಾಯಾಸವಾಗಿ ಗೆಲ್ಲುತ್ತೇವೆ ಅಂತ ಅವರು ಹೇಳುತ್ತಾರೆ. ಅವರು ಪಟ್ಟುಹಿಡಿದಾಗ ವರಿಷ್ಠರು ಅದನ್ನು ನಿರಾಕರಿಸುವುದಿಲ್ಲ. ಹೀಗಾಗಿ ಕಳೆದ ಬಾರಿ ಆ ಕ್ಷೇತ್ರದಿಂದ ನಮ್ಮ ಕ್ಯಾಂಡಿಡೇಟ್ ಗೆದ್ದಿದ್ದರಾದರೂ ಈ ಸಲ ಜೆಡಿಎಸ್ ಅಭ್ಯರ್ಥಿಗೆ ಬಿಟ್ಟುಕೊಡುವ ಪರಿಸ್ಥಿತಿ ಎದುರಾಗುತ್ತದೆ.

ಇದರ ಬದಲು ನಮ್ಮ ಪಕ್ಷದಿಂದ ಮುದ್ದಹನುಮೇಗೌಡರನ್ನು ಅಭ್ಯರ್ಥಿ ಮಾಡಿದರೆ ನಾವು ಸುಲಭವಾಗಿ ಗೆಲ್ಲುತ್ತೇವೆ. ಇದೇ ರೀತಿ ಹಾಸನ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಹಲವರಿಗೆ ಜೆಡಿಎಸ್ ಜತೆಗಿನ ಮೈತ್ರಿಯ ಬಗ್ಗೆ ಒಲವಿಲ್ಲ. ಇಷ್ಟಾದರೂ ನಾವು ಬಲವಂತವಾಗಿ ಒಪ್ಪಿಸಲು ಹೋದರೆ ಪಕ್ಷದ ಹಲವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬಹುದು. ಹೀಗೆ ಒಂದರ ಹಿಂದೊಂದು ಕ್ಷೇತ್ರದಲ್ಲಿ ಅಸಮಾಧಾನ ಶುರುವಾದರೆ ಪಾರ್ಲಿಮೆಂಟ್ ಚುನಾವಣೆ
ಯಲ್ಲಿ ನಾವು ೨೦ ಸೀಟು ಗೆಲ್ಲುವುದಿರಲಿ, ೧೦ನ್ನು ಗೆಲ್ಲು ವುದೂ ಕಷ್ಟವಾಗುತ್ತದೆ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಗಿದೆ.

ಯಡಿಯೂರಪ್ಪ ಪವರ್ ಇಲ್ಲದಿದ್ರೆ ಕಷ್ಟ ಸಭೆಯ ನಂತರ ಎಲ್ಲರೂ ಊಟಕ್ಕೆ ಕುಳಿತಾಗ ಅಲ್ಲಿದ್ದ ನಾಯಕರ ಮಧ್ಯೆ ಪುನಃ ಹಲವು ವಿಷಯಗಳು ಅನೌಪಚಾರಿಕ ವಾಗಿ ಚರ್ಚೆಗೆ ಬಂದಿವೆ. ಈ ಪೈಕಿ ಹಿರಿಯ ನಾಯಕರೊಬ್ಬರು ಮತ್ತಿಬ್ಬರು ನಾಯಕರ ಬಳಿ, ‘ನೋಡಿ, ಕಳೆದ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ವರಿಷ್ಠರು ಯಡಿಯೂರಪ್ಪ ಅವರ ಮೇಲೆ ಭಾರ ಹಾಕಿ ಸುಮ್ಮನಿದಿದ್ದರೂ ಸಾಕಿತ್ತು. ಕನಿಷ್ಠ ೧೦೦ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುತ್ತಿತ್ತು. ಆದರೆ ಸುಖಾಸುಮ್ಮನೆ ಯಡಿಯೂರಪ್ಪ ಅವರ ಮೇಲೆ
ಗೂಬೆ ಕೂರಿಸಿದ ರಾಜ್ಯದ ಕೆಲ ನಾಯಕರ ಮಾತನ್ನು ನಂಬಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಾವೇ ಕರ್ನಾಟಕದ ಚುನಾವಣೆಯ
ಭಾರ ಹೊತ್ತರು.

ಹೀಗೆ ಅವರು ಭಾರ ಹೊತ್ತು ಎಲ್ಲ ಕಡೆ ತಿರುಗಿದ್ದಕ್ಕೆ ರಾಜ್ಯದ ಜನರಿಗೆ ಏನು ಮೆಸೇಜು ಹೋಯಿತು? ಕರ್ನಾಟಕದಲ್ಲಿ ಪಕ್ಷವನ್ನು ಪದೇ ಪದೆ ಅಧಿಕಾರಕ್ಕೆ ತಂದ ಯಡಿಯೂರಪ್ಪರನ್ನು ನಿರ್ಲಕ್ಷಿಸಲಾಗಿದೆ. ಹೀಗಾಗಿ ನಾಳೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಅವರಿಗೆ ಪ್ರಾಮಿನೆನ್ಸು ಸಿಗುವುದಿಲ್ಲ ಅಂತ ಸಹಜವಾಗಿಯೇ ಅನ್ನಿಸಿದೆ. ಪರಿಣಾಮ? ನಾವು ನಿರಾಯಾಸವಾಗಿ ಅಧಿಕಾರ ಕಳೆದು ಕೊಂಡಿದ್ದೇವೆ. ಈಗಲೂ ವರಿಷ್ಠರು ಯೋಚಿಸಲಿ, ಯಡಿಯೂರಪ್ಪರನ್ನು ಪುನಃ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗಲಿ; ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷದ ೨೦ ಅಭ್ಯರ್ಥಿಗಳನ್ನು ಗೆಲ್ಲಿಸುವ ಶಕ್ತಿ ಯಡಿಯೂರಪ್ಪ ಅವರಿಗಿದೆ’ ಅಂತ ಹೇಳಿದಾಗ, ಉಳಿದಿಬ್ಬರು ನಾಯಕರು ಹೌದು ಅಂತ ತಲೆ ಅಲ್ಲಾಡಿಸಿ ಲೊಚಗುಟ್ಟಿದರಂತೆ.

ದಿಲ್ಲಿಗೆ ಧಾವಿಸಲಿದೆ ಯಡಿಯೂರಪ್ಪ ಗ್ಯಾಂಗು ಅಂದ ಹಾಗೆ, ಯಡಿಯೂರಪ್ಪ ಅವರ ದೆಹಲಿ ಪ್ರವಾಸ ನಿರೀಕ್ಷಿಸಿದ ಫಲ ನೀಡದಿರುವುದರಿಂದ ಅವರ ಬೆಂಬಲಿಗರ
ಪಡೆ ತಾನೇ ಎದ್ದು ನಿಲ್ಲಲು ಮುಂದಾಗಿದೆ. ಅರ್ಥಾತ್, ಕರ್ನಾಟಕದಲ್ಲಿ ಪಕ್ಷ ಕಟ್ಟಲು ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ದೊಡ್ಡ ಯಶಸ್ಸು ಕಾಣಲು ಏನು
ಮಾಡಬೇಕು ಅಂತ ವರಿಷ್ಠರಿಗೆ ಹೇಳಲು ರಾಜ್ಯದ ೨೦ಕ್ಕೂ ಹೆಚ್ಚು ನಾಯಕರು ದಿಲ್ಲಿಗೆ ದೌಡಾಯಿಸಲು ನಿರ್ಧರಿಸಿದ್ದಾರೆ. ಅಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಸದ್ಯದ ಪರಿಸ್ಥಿತಿ ವಿವರಿಸುವುದು ಮತ್ತು ಯಡಿಯೂರಪ್ಪ ಅವರಿಗೆ ಪ್ರಾಮಿನೆನ್ಸು ನೀಡಿದರೆ ಆಗುವ ಅನುಕೂಲವನ್ನು ಅಂಕಿ-ಅಂಶಗಳ ಸಮೇತ ಮನವರಿಕೆ ಮಾಡಿಕೊಡುವುದು ಈ ಗುಂಪಿನ ಉದ್ದೇಶ. ಆದರೆ ೫ ರಾಜ್ಯಗಳ ಚುನಾವಣೆಯ ಮೇಲೆ ಗಮನ ನೆಟ್ಟು ಕುಳಿತಿರುವ ಕಮಲ ಪಾಳಯದ ವರಿಷ್ಠರು ಈ ನಿಯೋಗದ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿದ್ದಾರಾ? ಎಂಬುದಷ್ಟೇ ಸದ್ಯದ ಅನುಮಾನ.

ಅದೇನೇ ಇರಲಿ, ವರಿಷ್ಠರು ದಿಢೀರನೆ ಒಂದು ತೀರ್ಮಾನ ಕೈಗೊಳ್ಳುವ ಮುನ್ನ ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಿ ಬಂದುಬಿಡಬೇಕು ಎಂಬುದು ಯಡಿಯೂರಪ್ಪ ಗ್ಯಾಂಗಿನ ಲೆಕ್ಕಾಚಾರ. ಮುಂದೇನೋ?

Leave a Reply

Your email address will not be published. Required fields are marked *