ಮೂರ್ತಿ ಪೂಜೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಂಗಾಯತ ಕೋಟೆಯ ಹೆಬ್ಬಾಗಿಲು ತಲುಪಿದ್ದಾರೆ. ಈ ಹೆಬ್ಬಾಗಿಲು ದಾಟಿ ಮುಂದಿನ ಹದಿನೈದು ದಿನಗಳಲ್ಲಿ ಲಿಂಗಾಯತ ಸಮುದಾಯದ ಮನ ಒಲಿಸುವುದು ಅವರ ಜವಾಬ್ದಾರಿ. ಹಾಗಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೊಮ್ಮಾಯಿ ಅವರಿಗೆ ಹೇಳಿದ್ದಾರೆ.
ಅಂದ ಹಾಗೆ ಅವರ ಮೂಲಕ ಬೊಮ್ಮಾಯಿ ಅವರಿಗೆ ಈ ಜವಾಬ್ದಾರಿ ಹೊರಿಸಿ ದವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಬಿ.ಎಲ್. ಸಂತೋಷ್. ನಾವು ಚುನಾವಣೆಯಲ್ಲಿ ಗೆಲ್ಲಲು ಮಾಡಬೇಕಾದ್ದನ್ನೆಲ್ಲ ಮಾಡಿದ್ದೇವೆ. ಏಪ್ರಿಲ್ ಏಳರ ತನಕ ರಾಜ್ಯಾದ್ಯಂತ ಅಗ್ರೆಸಿವ್ ಆಗಿ ಪ್ರಚಾರ ಕಾರ್ಯ ನಡೆಸುತ್ತೇವೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ ಎಂದರೆ ಪಶ್ಚಿಮ ಬಂಗಾಳದಲ್ಲಿ ಏನು ಮಾಡಿದೆವೋ? ಅದೇ ರೀತಿಯಲ್ಲಿ ಇಲ್ಲೂ ಹೋರಾಡು ತ್ತೇವೆ. ಆ ಮೂಲಕ ಮಿನಿಮಮ್ ನಲವತ್ತು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಗಳನ್ನು ಮೇಲೆತ್ತುತ್ತೇವೆ.
ಈಗ ಗೆದ್ದೇ ಗೆಲ್ಲಲಿರುವ ತೊಂಬತ್ತು ಅಭ್ಯರ್ಥಿಗಳ ಜತೆ ಇನ್ನೂ ನಲವತ್ತು ಸೀಟು ಪ್ಲಸ್ ಆಗಲಿದೆಯಲ್ಲದೆ ಆ ಮೂಲಕ ನಾವು ಸ್ವಯಂಬಲದ ಮೇಲೆ ಸರ್ಕಾರ ರಚಿಸುತ್ತೇವೆ. ಇದಕ್ಕೆ ಪೂರಕವಾಗಿ ಲಿಂಗಾಯತ ಮತಬ್ಯಾಂಕ್‌ನ ಒಲಿಸುವುದು ಬೊಮ್ಮಾಯಿ ಅವರ ಕೆಲಸ. ಉಳಿದಂತೆ ಅವರೇನೂ ಮಾಡು ವುದು ಬೇಡ ಅಂತ ಸಂತೋಷ್ ಹೇಳಿದ್ದಾರಂತೆ.
ಯಾವಾಗ ಸಂತೋಷ್ ಅವರ ಸೂಚನೆ ಹಲವು ಕಡೆಗಳಿಂದ ಬಂದು ಹಣೆಗೆ ಬಡಿಯಿತೋ? ಆಗ ಬೊಮ್ಮಾಯಿ ಮೇಲೆದ್ದಿ ದ್ದಾರೆ. ಮುಂದಿನ ಹದಿನೈದು ದಿನಗಳ ಕಾಲ ಲಿಂಗಾಯತ ಕೋಟೆಯೊಳಗೆ ತಿರುಗಾಡಿ ಅದರ ಮನ ಒಲಿಸುವ ಕೆಲಸ ಮಾಡಲಿದ್ದಾರೆ. ಹೀಗೆ ಲಿಂಗಾಯತರ ಮನ ಒಲಿಸಲು ಹೊರಟಿರುವ ಬೊಮ್ಮಾಯಿ ಇದಕ್ಕೆ ಪೂರಕವಾಗಿ ಏನಾದರೂ ಹೇಳಬೇಕಲ್ಲ? ಬಿಜೆಪಿ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎಂಬುದಕ್ಕಿಂತ ಈಗ ಮಾಡಿರುವ ಕೆಲಸಕ್ಕೆ ಉತ್ತರ ನೀಡಬೇಕಲ್ಲ? ಹಾಗಂತಲೇ ಬೊಮ್ಮಾಯಿ ಅವರ ತಲೆಗೆ ಮೂರು ಪ್ರಮುಖ ಪಠ್ಯಗಳನ್ನು ತುಂಬಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ನೀಡಲಾಗಿದೆ. ಇದೇ ರೀತಿ ಪಕ್ಷ ತೊರೆ ದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧಿಕಾರದ ಆಸೆಗೆ ಹೊರಹೋಗಿದ್ದಾರೆಯೇ ಹೊರತು ಪಕ್ಷ ಅವರಿಗೆ ಅನ್ಯಾಯ ಮಾಡಿಲ್ಲ.
ಇದೇ ರೀತಿ ಯಡಿಯೂರಪ್ಪ ಅವರು ವಯಸ್ಸಿನ ಕಾರಣದಿಂದ ತಾವಾಗಿಯೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದಾಗ ಲಿಂಗಾಯತ ಸಮುದಾಯದವರಿಗೇ ಆ ಸೀಟು ಕೊಟ್ಟಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಪಕ್ಷ ಅನ್ಯಾಯ ಮಾಡಿಲ್ಲ ಎಂಬುದೇ ಬೊಮ್ಮಾಯಿ ತಲೆಗೆ ಬಿದ್ದಿರುವ ಪಾಠ. ಬೊಮ್ಮಾಯಿ ಅವರೇನೋ ಈ ಪಠ್ಯವನ್ನು ಚೆನ್ನಾಗಿ ಉರುಹೊಡೆದಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೆ ಅಂತ ಅವರಿಗೇ ಅನುಮಾನವಿದೆ.
ಯಡಿಯೂರಪ್ಪ ಕೂಗಾಡಿದ್ದು ಏಕೆ? ಬೊಮ್ಮಾಯಿ ಅವರ ಅನುಮಾನಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಯಡಿಯೂರಪ್ಪ ಅವರು ತಮ್ಮ ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿರಲಿಲ್ಲ. ಹಾಗೆ ನೋಡಿದರೆ 1990 ರಲ್ಲಿ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಎಷ್ಟು ಕಟು ಹೃದಯದಿಂದ ಸಿಎಂ ಹುದ್ದೆಯಿಂದ ಕೆಳಗಿಳಿಸಿತ್ತೋ? ಅದಕ್ಕಿಂತ ನಿರ್ದಯಿ ಯಾಗಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಿತ್ತು. 1989 ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ 178 ಸೀಟುಗಳನ್ನು ಗೆದ್ದಿತ್ತಾದರೂ ಅದಕ್ಕೆ ವೀರೇಂದ್ರ ಪಾಟೀಲರೊಬ್ಬರೇ ಕಾರಣರಾಗಿರಲಿಲ್ಲ.
ಆದರೆ 2019 ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮುಖ್ಯ ಕಾರಣರಾದವರೇ ಯಡಿಯೂರಪ್ಪ. ಇನ್ನು ವೀರೇಂದ್ರ ಪಾಟೀಲರನ್ನು ಕೆಳಗಿಳಿಸಲು ಅಷ್ಟೊತ್ತಿಗಾಗಲೇ ಅವರಿಗೆ ಆರೋಗ್ಯ ಹದಗೆಟ್ಟಿದ್ದೂ ಕಾರಣ. ಅಂತಹ ಸ್ಥಿತಿಯಲ್ಲಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸುವ ಶಕ್ತಿ ಇರಲಿಲ್ಲ. ಆದರೆ 2021 ರ ಪದಚ್ಯುತಿ ಪ್ರಹಸನಕ್ಕೆ ಬಿಜೆಪಿ ವರಿಷ್ಠರು ತೀರ್ಮಾನಿಸಿದಾಗ ಯಡಿಯೂರಪ್ಪ ಅವರೇನೂ ಹಾಸಿಗೆ ಹಿಡಿದಿರಲಿಲ್ಲ.
ಬದಲಿಗೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗಿಂತ ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನಿಳಿಸಲು
ಕೊಟ್ಟ ವಯಸ್ಸಿನ ಕಾರಣ ನೆಪವಾಗಿತ್ತೇ ಹೊರತು ಬೇರೇನೂ ಆಗಿರಲಿಲ್ಲ. ಹೀಗಾಗಿ ಇವತ್ತು ಲಿಂಗಾಯತರ ಮನ ಒಲಿಸಲು ಹೊರಟಾಗ ಯಡಿಯೂರಪ್ಪ ಅವರಿಗೆ ಅನ್ಯಾಯವಾಗಿಲ್ಲ ಎಂದು ಲಿಂಗಾಯ ತರನ್ನು ಕನ್ವಿನ್ಸ್ ಮಾಡುವುದು ಕಷ್ಟ ಎಂಬುದು ಬೊಮ್ಮಾಯಿ ಅವರಿಗೆ ಗೊತ್ತು. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಯಡಿಯೂರಪ್ಪ ಬಿಜೆಪಿಯಲ್ಲಿ ಉಳಿದಿದ್ದರೆ ಅದಕ್ಕೆ ಬಿಜೆಪಿ ವರಿಷ್ಠರು ಹಾಕಿರುವ ಇಕ್ಕಳ ಕಾರಣ.
ಹೋಗಲಿ, ಈ ಚುನಾವಣೆಯಲ್ಲಿ ಯಡಿಯೂರಪ್ಪ ಬಯಸಿದವರೆಲ್ಲರಿಗೆ ಟಿಕೆಟ್ ಸಿಕ್ಕಿದೆಯಾ ಎಂದರೆ ಅದೂ ಇಲ್ಲ. ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲೂ ನಲವತ್ತೆರಡು ಮಂದಿಗೆ ಟಿಕೆಟ್ ನೀಡಬೇಕು ಅಂತ ಯಡಿಯೂರಪ್ಪ ಕೇಳಿದ್ದರಂತೆ. ಆದರೆ ಅಮಿತ್ ಶಾ ಇದಕ್ಕೆ ಉಪ್ಪು, ಸೊಪ್ಪು ಹಾಕದ ಕಾರಣ ಸಿಟ್ಟಿಗೆದ್ದ ಯಡಿಯೂರಪ್ಪ ಸೀದಾ ಎದ್ದು ಬೆಂಗಳೂರಿಗೆ ಬಂದಿದ್ದರು. ಹೀಗೆ ಬಂದವರು ಜೆ.ಪಿ. ನಡ್ಡಾ ಅವರಿಗೆ ಫೋನು ಮಾಡಿ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ನಾನು ಕಾರಣ, ನನ್ನ ಪ್ರಯತ್ನ ಇಲ್ಲವಾಗಿದ್ದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ.
ಹೀಗಿದ್ದರೂ ನಾನು ಹೇಳಿದವರಿಗೆ ನೀವು ಟಿಕೆಟ್ ಕೊಡುತ್ತಿಲ್ಲ. ಹೀಗಾಗಿ ನಾನು ಚುನಾವಣಾ ಪ್ರಚಾರಕ್ಕೆ ಇಳಿಯುವುದಿಲ್ಲ ಅಂತ ಕೂಗಾಡಿದರಂತೆ. ಯಾವಾಗ ಯಡಿಯೂರಪ್ಪ ಕೂಗಾಡಿದರೋ? ಇದಾದ ನಂತರ ನಡ್ಡಾ ಅವರು ಅಮಿತ್ ಶಾ ಜತೆ ಚರ್ಚಿಸಿ 13 ಸೀಟುಗಳನ್ನು ಕೊಡಿಸಿದರಂತೆ. ಹಾಗಂತ ಈ ಬೆಳವಣಿಗೆಯಿಂದ ಯಡಿಯೂರಪ್ಪ ಅವರೇನೂ ತೃಪ್ತರಾಗಿಲ್ಲ. ಬದಲಿಗೆ ಶಾಸ್ತ್ರಕ್ಕೆ ಫೀಲ್ಡಿನಲ್ಲಿರುವಂತೆ ಫೋಸು ಕೊಡುತ್ತಿದ್ದಾರೆ.
ಅವರು ಇಂತಹ ಪೋಸಿನಲ್ಲಿರುವುದು ಬೊಮ್ಮಾಯಿ ಅವರಿಗೆ ಗೊತ್ತು. ಹೀಗಾಗಿ ಅವರು ತಮಗೆ ಕೊಟ್ಟ ಕುದುರೆ ಹತ್ತಿ ಲಿಂಗಾ ಯತ ಕೋಟೆಯ ಹೆಬ್ಬಾಗಿಲ ಬಳಿ ಬಂದಿದ್ದಾರೆ. ಲಿಂಗಾಯತ ಶಾಸಕರಿಗೆ ಪವರ್ ಇರುವುದಿಲ್ಲ ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಲಿಂಗಾಯತ ಸಮುದಾಯದವರಿಗೆ ಹೆಚ್ಚಿನ ಟಿಕೆಟ್ ನೀಡಲಾಗಿದೆ ಅಂತ ಸಮರ್ಥಿಸಿಕೊಳ್ಳುವುದು ಬೊಮ್ಮಾಯಿ ಯವರಿಗೆ ಕಷ್ಟವಾಗಲಿದೆ. ಯಾಕೆಂದರೆ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಗೆದ್ದು ಎಷ್ಟು ಲಿಂಗಾಯತರು ಶಾಸಕರಾಗುತ್ತಾರೆ ಎಂಬುದು ಲೆಕ್ಕವಲ್ಲ. ಬದಲಿಗೆ, ಮುಖ್ಯಮಂತ್ರಿ ಯಾರು ಎಂಬುದು ಮುಖ್ಯ.
ಇದುವರೆಗೆ ಯಡಿಯೂರಪ್ಪ ಅವರ ಕಣ್ಣಳತೆಯಲ್ಲಿದ್ದ ಲಿಂಗಾಯತ ಶಾಸಕರಿಗೆ ಅದಾಗಲೇ ಪವರ್ ಕಡಿಮೆಯಾಗಿದೆ. ಇವತ್ತಿನ ಮಟ್ಟಿಗೇನೋ ತಾವು ಸಿಎಂ. ಆದರೆ ಚುನಾ ವಣೆಯ ನಂತರ ಸಿಎಂ ಹುದ್ದೆಯ ಮೇಲೆ ಬಂದು ಕೂರುವವರು ಯಾರು? ನಾಳೆ ಬಿಜೆಪಿ ಅಧಿಕಾರಕ್ಕೆ ಬಂದು ಯಾರೇ ಸಿಎಂ ಹುದ್ದೆಯಲ್ಲಿ ಕೂರಲಿ, ಅವರು ಸಂಘಪರಿವಾರದ ಕಣ್ಣಳತೆಯಲ್ಲಿರುತ್ತಾರೆ. ಮತ್ತು ಅವರ ಸೂಚನೆಯ ಆಜ್ಞಾನುವರ್ತಿಗಳು ಮಾತ್ರ ಬಚಾವಾಗುತ್ತಾರೆ.
ಹೀಗೆ ತಮಗೆ ತಾವು ಬಚಾವಾಗುವ ಅನಿವಾರ್ಯತೆಗೆ ಸಿಲುಕಿಕೊಳ್ಳುವ ಶಾಸಕರು ತಮ್ಮ ಸಮುದಾಯದವರೇ ಆದರೂ ಅದರಿಂದ ಫಲವೇನು? ಅಂತ ಲಿಂಗಾಯತ ಮತ ಬ್ಯಾಂಕ್ ಯೋಚಿಸುತ್ತದೆ. ಹೀಗೆ ಯೋಚಿಸುವ ಮತ ಬ್ಯಾಂಕಿನ ಷೇರು ಗಳನ್ನು ಗೆಬರಿಕೊಳ್ಳುವುದು ಹೇಗೆ? ಎಂಬುದು ಬೊಮ್ಮಾಯಿ ಯೋಚನೆ. ಇದೇ ರೀತಿ ಶೆಟ್ಟರ್, ಸವದಿ ಅವರೆಲ್ಲ ಸ್ವಾರ್ಥಕ್ಕಾಗಿ ಹೊರಹೋಗಿದ್ದಾರೆ ಎಂಬುದೇನೋ ನಿಜ. ಆದರೆ ಇಲ್ಲುಳಿದವರು ದೇಶಸೇವೆಯೇ ಈಶ ಸೇವೆ ಕೇಡರಿನವ ರಲ್ಲವಲ್ಲ? ಅಧಿಕಾರ ರಾಜಕಾರಣದಲ್ಲಿ ಎಲ್ಲರೂ ಲಾಭಕ್ಕಾಗಿಯೇ ಇರುವವರು.
ಇದಕ್ಕೆ ಕೆಲವು ಅಪವಾದಗಳನ್ನು ತೋರಿಸಬಹುದಾದದರೂ ಅಂತವರು ಇನ್ಯಾರದೋ ಕೈಗೊಂಬೆಗಳು ಅಂತ ಯಾರಾ ದರೂ ಹೇಳಿದರೆ ಪ್ರತಿಯುತ್ತರಿಸುವ ಸ್ಥಿತಿಯಲ್ಲಿ ಬೊಮ್ಮಾಯಿ ಅವರಿಲ್ಲ. ಇಶ್ಟಾದರೂ ಅವರು ಪಕ್ಷ ತಮಗೆ ಕೊಟ್ಟ ಕುದುರೆ ಏರಿ ಲಿಂಗಾಯತ ಕೋಟೆಯ ಬಳಿ ಬಂದಿದ್ದಾರೆ. ಅದು ಎಷ್ಟು ವೇಗದಲ್ಲಿ ಕೋಟೆಯೊಳಗೆ ನುಗ್ಗಿ ಕಲರವ ಎಬ್ಬಿಸುತ್ತದೋ ಕಾದು ನೋಡಬೇಕು ಸಂತೋಷ್ ಅವರಿಗೆ ಮೋದಿ ಚಿಂತೆ ಅಂದ ಹಾಗೆ ಬೊಮ್ಮಾಯಿ ತಮ್ಮ ಚಿಂತೆ ಯಲ್ಲಿದ್ದರೆ ಸಂತೋಷ್ ಅವರಿಗೆ ಪ್ರಧಾನಿ ಮೋದಿಯವರದೇ ಚಿಂತೆಯಂತೆ.
ಯಾಕೆಂದರೆ, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯದೆ ಹೋದರೆ 2024 ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅದರ ಗಳಿಕೆ ಕಡಿಮೆಯಾಗಲಿದೆ. ಕಳೆದ ಬಾರಿ ಕರ್ನಾಟಕದಿಂದ ಇಪ್ಪತ್ತೈದು ಮಂದಿ ಗೆದ್ದು ಲೋಕಸಭೆಗೆ ಹೋಗಿದ್ದರು. ಈ ಸಲ ಬಿಜೆಪಿ ಸರ್ಕಾರ ಬರದೆ ಹೋದರೆ ಈ ಗಳಿಕೆ ಹದಿನೈದಕ್ಕೆ ಕುಸಿಯಲಿದೆ.
ಹಾಗೇನಾದರೂ ಆದರೆ ಮುಂದೆ ಎದುರಾಗಲಿರುವ ಛತ್ತೀಸ್‌ಘಡ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಕಿರಿಕಿರಿಯಾಗಲಿದೆ. ಯಾಕೆಂದರೆ, ಬಿಜೆಪಿ ವಿರುದ್ಧ ಒಂದುಗೂಡಲು ಹವಣಿಸುತ್ತಿರುವ ಶಕ್ತಿಗಳಿಗೆ ಇದು ಮತ್ತಷ್ಟು ಶಕ್ತಿ ತುಂಬಲಿದೆಯಲ್ಲದೆ ಪಾರ್ಲಿಮೆಂಟ್ ಚುನಾವಣೆಯಲ್ಲೂ ಹಿನ್ನಡೆಯಾಗಲಿದೆ. ಹಾಗೇನಾದರೂ ಆದರೆ ದಿಲ್ಲಿ ಲೆವೆಲ್ಲಿನಲ್ಲಿ ಮೋದಿ ಯವರ ಪವರ್ ಕಡಿಮೆಯಾಗುತ್ತದೆ. ಹಾಗಾಗಬಾರದು ಎಂಬುದು ಸಂತೋಷ್ ಯೋಚನೆ. ಹಾಗಂತಲೇ ಈ ಸಲ ಅವರು ಪಕ್ಷದ ವಾರ್ ರೂಮಿನಿಂದ ಹೊರಬಂದು, ವಾರ್ ಫೀಲ್ಡಿಗೆ ನುಗ್ಗಿದ್ದಾರೆ.
ಬೆಳಗಾಂ, ಮೈಸೂರು ಸೇರಿದಂತೆ ಯಾವ್ಯಾವ ಜಿಲ್ಲೆಗಳಲ್ಲಿ ಪಕ್ಷದ ಕ್ಯಾಂಡಿಡೇಟುಗಳಿಗೆ ಇನ್ನಷ್ಟು ಬಲ ಬೇಕು ಅನ್ನಿಸಿದೆಯೋ?
ಅಲ್ಲಿಗೆಲ್ಲ ನುಗ್ಗಿರುವ ಸಂತೋಷ್ ಇನ್ನಷ್ಟು ಅಗ್ರೆಸಿವ್ ಆಗುವ ಲಕ್ಷಣ ತೋರಿಸಿದ್ದಾರೆ. ಸಪ್ತರ್ಷಿ ಮಂಡಲದ ಮಧ್ಯೆ ವಿಜಯೇಂದ್ರ ಈ ಮಧ್ಯೆ ಬಿಜೆಪಿ ಪಾಳಯದಲ್ಲಿ ಇದ್ದಕ್ಕಿದ್ದಂತೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಖದರು ಹೆಚ್ಚಿದೆಯಂತೆ. ಇವತ್ತು ಪಕ್ಷದಲ್ಲಿ ಯಡಿಯೂರಪ್ಪ ಅವರ ಶಕ್ತಿ ದಿನಕಳೆದಂತೆ ಕಡಿಮೆಯಾಗುತ್ತಿರುವುದೇನೋ ನಿಜ.
ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಬಿಜೆಪಿಗೆ ಯಾವ ಕ್ಷೇತ್ರಗಳು ಟಫ್ ಅನ್ನಿಸುತ್ತಿವೆಯೋ? ಅಲ್ಲೆಲ್ಲ ಪ್ರಚಾರಕ್ಕೆ ಹೋಗುವಂತೆ ಪಕ್ಷ ಅವರಿಗೆ ಸೂಚಿಸಿದೆ. ಮತ್ತು ವಿಜಯೇಂದ್ರ ಕೂಡಾ ಹಿಂಜರಿಯದೆ ಎಲ್ಲ ಕಡೆ ನುಗ್ಗತೊಡಗಿದ್ದಾರೆ. ರಾಜ್ಯದ ಬಹುತೇಕ ಕಡೆ ಅವರ ಅಭಿಮಾನಿ ಬಳಗ ಬೆಳೆಯುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಹೀಗೆ ಪಕ್ಷದಲ್ಲಿ ಶಕ್ತಿ ಬೆಳೆಸಿಕೊಳ್ಳುತ್ತಿರುವ ವಿಜಯೇಂದ್ರ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಪವರ್ ಪುಲ್ ಆಗುವುದು ಕಷ್ಟವೇನಲ್ಲ ಎಂಬುದು ಬಿಜೆಪಿ ಮೂಲಗಳ ಮಾತು.
ಅಂದ ಹಾಗೆ ವಿಜಯೇಂದ್ರ ಅವರ ಪವರ್ ಹೆಚ್ಚಾಗಲು ಅವರ ಸುತ್ತ ಆವರಿಸಿರುವ ಸಪ್ತರ್ಷಿ ಮಂಡಲ ಕಾರಣವಂತೆ. ಈ
ಮಂಡಲದಲ್ಲಿ ಮಹರ್ಷಿ ಆದಿತ್ಯ ಭೂಪಾಲ, ಮಹರ್ಷಿ ಮರಿಸ್ವಾಮಿ, ಮಹರ್ಷಿ ಅರವಿಂದ, ಮಹರ್ಷಿ ಮುನಿರಾಜು, ಮಹರ್ಷಿ ತಮ್ಮೇಶ್ ಗೌಡ, ಮಹರ್ಷಿ ರುದ್ರೇಶ್ ಇದ್ದಾರಂತೆ. ಬೆಂಕಿ, ನೀರಿನ ಕಂಟಕದಿಂದ ಹಿಡಿದು ಭೂ ಮಾರ್ಗ ಸೇರಿದಂತೆ ಯಾವುದೇ ದಿಕ್ಕಿನಿಂದ ಎದುರಾಗುವ ಅಪಾಯವನ್ನು ಈ ಸಪ್ತರ್ಷಿಗಳು ಗ್ರಹಿಸಬಲ್ಲರಂತೆ.
ಅದೇನೇ ಇರಲಿ, ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಎಲ್ಲ ಪ್ರತಿಕೂಲ ವಿದ್ಯಮಾನಗಳ ಮಧ್ಯೆ ವಿಜಯೇಂದ್ರ ಅವರ ಪವರ್ ಬೆಳೆಯುತ್ತಿರುವ ರೀತಿ ಹಲವರ ಕುತೂಹಲಕ್ಕೆ ಕಾರಣವಾಗಿರುವುದು ಮಾತ್ರ ನಿಜ.