ಮೂರ್ತಿ ಪೂಜೆ
ಕಳೆದ ವಾರ ದಿಲ್ಲಿಗೆ ಹೋದ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಆಗ,
ಕರ್ನಾಟಕದ ರಾಜಕಾರಣದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ನಾಯಕರ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಅಂದ ಹಾಗೆ, ಪಕ್ಷಕ್ಕಾಗಿ ಇಲ್ಲಿ ಮತ್ತು ದೆಹಲಿಯಲ್ಲಿ ಸತತವಾಗಿ ದುಡಿದಿರುವ ಹರಿಪ್ರಸಾದ್ ಅವರ ಬಗ್ಗೆ ಸೋನಿಯಾ ಗಾಂಧಿಯವರಿಗೆ ತುಂಬು ವಿಶ್ವಾಸವಿರುವುದು ಸಹಜ. ಹೀಗಾಗಿಯೇ ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡ ಸೋನಿಯಾ ಅರೆಕ್ಷಣ ಮೌನವಾಗಿದ್ದರಂತೆ.
ಹೊಸತಾಗಿ ಅಸ್ತಿತ್ವಕ್ಕೆ ಬಂದ ಸರಕಾರದಲ್ಲಿ ತಮ್ಮನ್ನು ಮಂತ್ರಿ ಮಾಡದೆ ಇರುವುದು, ಉದ್ದೇಶ ಪೂರ್ವಕವಾಗಿ ತಮ್ಮನ್ನು ನಿರ್ಲಕ್ಷಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಹರಿಪ್ರಸಾದ್ ಹೇಳಿದ್ದನ್ನು ಕೇಳಿಸಿ ಕೊಂಡು ಮೌನವಾಗಿದ್ದ ಅವರು ತದನಂತರ ತಮ್ಮ ಪರಿಸ್ಥಿತಿ ಯನ್ನು ವಿವರಿಸಿದ್ದಾರೆ. ‘ಇವತ್ತು ನಾನು ಪಕ್ಷದ ಅಧ್ಯಕ್ಷೆ ಅಲ್ಲ. ಹೀಗಾಗಿ ಇಂಥ ವಿಷಯಗಳಲ್ಲಿ ನಾನು ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಇಷ್ಟಾದರೂ ನಿಮಗೆ ಒಂದು ಮಾತು ಹೇಳುತ್ತೇನೆ. ಸದ್ಯದ ಸ್ಥಿತಿಯಲ್ಲಿ ಮೌನವಾಗಿರಿ. ಉಳಿದಂತೆ ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ’ ಅಂತ ಅವರು ಹೇಳಿ ದಾಗ ಹರಿಪ್ರಸಾದ್ ಮೌನವಾಗಿ ತಲೆಯಾಡಿಸಿ ಹೊರ ಬಂದಿದ್ದಾರೆ.
ಹೀಗೆ ಹೊರಬಂದ ನಂತರ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಸಿಟ್ಟು ಬಂದಿದೆ ಯಂತೆ. ತಮ್ಮನ್ನು ಮಂತ್ರಿ ಮಾಡದಿರಲು ಕೆಲ ನಾಯಕರು ಸೇರಿ ರಚಿಸಿದ ಚಕ್ರವ್ಯೂಹದಲ್ಲಿ ಖರ್ಗೆಯವರೂ ಸೇರಿ ಕೊಂಡಿದ್ದಾರೆ ಎಂಬುದು ಅವರ ಸಿಟ್ಟಿಗೆ ಕಾರಣ. ಅಂದ ಹಾಗೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿದ ಮಲ್ಲಿಕಾರ್ಜುನ ಖರ್ಗೆ ಸೋತರಲ್ಲ? ಹೀಗೆ ಸೋತ ಅವರನ್ನು ಅಕಾಮಡೇಟ್ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿದಾಗ ತಲೆದಂಡ ಕೊಟ್ಟವರು ಹರಿ ಪ್ರಸಾದ್. ಅವತ್ತು ಕರ್ನಾಟಕದಿಂದ ರಾಜ್ಯಸಭೆಗೆ ಚುನಾವಣೆ ಘೋಷಣೆಯಾದಾಗ ಹರಿಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿಯಾಗ ಬೇಕಿತ್ತು. ಆದರೆ ಯಾವಾಗ ಖರ್ಗೆ ಅವರಿಗೆ ಅಕಾಮಡೇಟ್ ಮಾಡುವ ತೀರ್ಮಾನವಾಯಿತೋ, ಹರಿ ಪ್ರಸಾದ್ ಅವರಿಗೆ ಸಿಗಬೇಕಿದ್ದ ಸೀಟು ಖರ್ಗೆಯವರ ಪಾಲಾಯಿತು.
ಈ ಸಲ ಕರ್ನಾಟಕದಲ್ಲಿ ಪಕ್ಷ ಸರಕಾರ ರಚಿಸಿದಾಗ, ಹರಿಪ್ರಸಾದ್ ಕ್ಯಾಬಿನೆಟ್ಟಿನಲ್ಲಿರಲಿ ಅಂತ ಖರ್ಗೆಯವರು ಹೇಳಿದ್ದರೆ ತಮ್ಮ ಹಳೆಯ ತ್ಯಾಗಕ್ಕೆ ನ್ಯಾಯ ಸಿಕ್ಕಂತಾಗುತ್ತಿತ್ತು. ಆದರೆ ಅವರು ಇದನ್ನು ಮಾಡಲಿಲ್ಲ ಎಂಬುದು ಹರಿಪ್ರಸಾದ್ ಸಿಟ್ಟು. ಅಂದ ಹಾಗೆ, ಹರಿಪ್ರಸಾದ್ ಅವರಿಗೆ ಮಂತ್ರಿಗಿರಿ ತಪ್ಪಲು ತಾವು ಕಾರಣ ಅಂತ ಈ ಕ್ಷಣದವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪುತ್ತಿಲ್ಲ. ಕೇಳಿದರೆ, ‘ಅರೇ, ಅವರು ಹೈಕಮಾಂಡ್‌ಗೆ ಕ್ಲೋಸಾಗಿದ್ದರೆ ಸೋನಿಯಾ ಮೇಡಮ್ಮೋ,
ರಾಹುಲ್ ಗಾಂಽಯವರೋ, ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಸುರ್ಜೇವಾಲರೋ ಅವರ ಹೆಸರು ಹೇಳಬಹುದಿತ್ತಲ್ಲ? ಅವರೇ ಹೇಳದೆ ಇರುವಾಗ ನನ್ನ ಮೇಲೆ ದೋಷ ಹೊರಿಸಿದರೆ ಹೇಗೆ?’ ಅಂತ ಅವರು ಹೇಳುತ್ತಿರುವುದರಿಂದ ಮಲ್ಲಿಕಾರ್ಜುನ ಖರ್ಗೆಯವರ ವಿಷಯದಲ್ಲಿ ಹರಿಪ್ರಸಾದ್ ಇನ್ನಷ್ಟು ಬೇಸರ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಹರಿಪ್ರಸಾದ್ ಅವರಿಗೆ ಸಿಕ್ಕಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ನಿಮ್ಮನ್ನು ಕ್ಯಾಬಿನೆಟ್ಟಿಗೆ ಸೇರಿಸಲು ಸಾಧ್ಯವಾಗದೆ ಇರುವುದರಿಂದ ನನಗೆ ಮುಜುಗರವಾಗಿದೆ. ಈ ಬಗ್ಗೆ ಏನು ಹೇಳಬೇಕೋ ತಿಳೀತಿಲ್ಲ’ ಅಂತ ಪೇಚಾಡಿದರಂತೆ. ಇನ್ನು ಸಮಾರಂಭವೊಂದರಲ್ಲಿ, ‘ನನಗೆ ಸಿಎಂ ಮಾಡುವುದೂ ಗೊತ್ತು, ಇಳಿಸುವುದೂ ಗೊತ್ತು’ ಅಂತ ಹರಿಪ್ರಸಾದ್ ಹೇಳಿದರಲ್ಲ? ಇದಾದ ನಂತರ ಅವರನ್ನು ಭೇಟಿ ಮಾಡಿದ ಗೃಹ ಸಚಿವ ಪರಮೇಶ್ವರ್, ‘ಸ್ವಲ್ಪ ದಿನ ಸುಮ್ಮನಿದ್ದು ಬಿಡಿ, ಏನಾಗುತ್ತದೋ ನೋಡೋಣ. ಅದೇ ರೀತಿ ಅಧಿಕಾರ ಹಂಚಿಕೆಯ ಸೂತ್ರ ಜಾರಿಯಾಗುವ ಕಾಲ ಬೇರೆ ಬರುತ್ತದೆ.
ಎಲ್ಲವೂ ಒಳ್ಳೆಯದೇ ಆಗುತ್ತದೆ’ ಎಂದಿದ್ದಾರೆ.
ಅರ್ಥಾತ್, ಹರಿಪ್ರಸಾದ್ ಅವರ ನೋವನ್ನು ಪರಿಹರಿಸುವ ಮುಲಾಮು ಯಾರ ಬಳಿಯೂ ಇದ್ದಂತಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಬಗೆಗಿನ ಲೇಟೆಸ್ಟು ಅಸಮಾಧಾನವನ್ನು ನುಂಗಿ ಕೊಂಡು ಹರಿಪ್ರಸಾದ್ ಮೌನವಾಗಿದ್ದಾರೆ. ಮುಂದೇನಾಗುತ್ತದೋ ನೋಡಬೇಕು.
ಮಂತ್ರಿಗಳ ಮೇಲೆ ಮಿಂಚಿನ ದಾಳಿ
ಈ ಮಧ್ಯೆ, ಮೊನ್ನಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂತ್ರಿಗಳ ಮೇಲೆ ಶಾಸಕರು ಮಿಂಚಿನ ದಾಳಿ ನಡೆಸಿದರಲ್ಲ? ಈ ಬೆಳವಣಿಗೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.
ತುರ್ತು ಶಾಸಕಾಂಗ ಸಭೆ ನಡೆಸಿ ಅಂತ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಶಾಸಕರ ಪಡೆ, ಸಭೆ ಕರೆಯುತ್ತಿದ್ದಂತೆಯೇ ಕೆಲ ಮಂತ್ರಿಗಳ ವಿರುದ್ಧ ಅಬ್ಬರಿಸಿದೆ. ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಮತ್ತು ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದುದ್ದಲ್ ಅವರು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ವಿರುದ್ಧ ಕೂಗಾಡಿ ರಂಪ ಮಾಡಿದ್ದಾರೆ. ‘ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ನಮ್ಮನ್ನು ಸೋಲಿಸಲು ಪ್ರಯತ್ನಿಸಿದ ಭೋಸರಾಜು ಅವರು
ಚುನಾವಣೆಯಲ್ಲಿ ಗೆಲ್ಲದೆಯೇ ಮಂತ್ರಿಯಾದ ರಹಸ್ಯ ಏನು?’ ಅಂತ ಈ ಇಬ್ಬರು ಅಬ್ಬರಿಸಿದಾಗ ಸಭೆ ಮೂಕವಿಸ್ಮಿತ ವಾಗಿತ್ತಂತೆ.
‘ಅಲ್ರೀ, ನಾನು ಐದು ಬಾರಿ ಶಾಸಕನಾಗಿದ್ದೇನೆ. ಆದರೆ ಜಿಲ್ಲೆಯಿಂದ ನನ್ನನ್ನು ಬಿಟ್ಟು ಇವರನ್ನು ಕರೆತಂದು ಮಂತ್ರಿಗಿರಿ ಕೊಡಲಾಗಿದೆಯಲ್ಲ? ಯಾವ ಕಮಿಟ್‌ಮೆಂಟಿನ ಆಧಾರದ ಮೇಲೆ ಈ ಜಾಗ ಕೊಡಲಾಗಿದೆ?’ ಅಂತ ಬಾದರ್ಲಿ ಗುಡುಗಿದಾಗ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಮಧ್ಯೆ ಪ್ರವೇಶಿಸಿ, ‘ಕಮಿಟ್‌ಮೆಂಟಿನ ಬಗ್ಗೆ ಇಲ್ಲಿ ಮಾತು ಬೇಡ. ಅದು ಇನ್ನೆಲ್ಲಿಗೋ ಹೋಗಿ ತಲುಪುತ್ತದೆ’ ಅಂದರಂತೆ. ಇದೇ ರೀತಿ ಶಾಸಕ ಗಣೇಶ್ ಅವರು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ‘ನನ್ನ ಕ್ಷೇತ್ರದಲ್ಲಿ ವಿದ್ಯುತ್ ಕಂಬಗಳನ್ನು ಹಾಕುವ ೧೨ ಲಕ್ಷ ರೂಪಾಯಿಗಳ ಸ್ಕೀಮಿನ ಬಗ್ಗೆ ಹೇಳಿದರೆ
ಇವರು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದಿದ್ದಾರೆ.
ಇದಕ್ಕೆ ಜಾರ್ಜ್ ಅವರು ಏನೋ ಸಬೂಬು ಹೇಳಲು ಹೋದರೆ, ‘ನಾವೂ ಕೋಟಿಗಟ್ಟಲೆ ಹಣ ಸುರಿದು ಎಲೆಕ್ಷನ್ನಿನಲ್ಲಿ ಗೆದ್ದು ಬಂದಿದ್ದೇವೆ ಸ್ವಾಮಿ, ಇಂಥ ಕೆಲಸಗಳೂ ಆಗುವುದಿಲ್ಲ ಎಂದರೆ ನಾವು ಶಾಸಕರಾಗಿ ಹೇಗೆ ಕೆಲಸ ಮಾಡಬೇಕು?’ ಎಂದಾಗ ಬೇಸತ್ತ ಜಾರ್ಜ್ ತಿಂಡಿ ತಿನ್ನದೆ ಸಭೆಯಿಂದ ಎದ್ದೇ ಹೋದರಂತೆ.
ಇನ್ನು ಹಿರಿಯ ನಾಯಕ ಬಿ.ಆರ್.ಪಾಟೀಲ್ ಮತ್ತಿತರರು ಗ್ರಾಮೀಣಾಭಿವೃದ್ಧಿ ಮಂತ್ರಿ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ. ‘ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡಿ ಎಂದರೆ ಗ್ರ್ಯಾಂಟ್ ಇಲ್ಲ ಅನ್ನುತ್ತಾರೆ. ಆದರೆ ಹಲವು ಕಡೆ ಇವರು ಗ್ರ್ಯಾಂಟ್ ರಿಲೀಸ್ ಮಾಡಿದ್ದಾರೆ.
ನಮಗಿಲ್ಲದ ಗ್ರ್ಯಾಂಟು ಬೇರೆ ಕಡೆ ರಿಲೀಸ್ ಆಗುತ್ತದೆ ಎಂದರೆ ಅದರ ದಿನ ರಹಸ್ಯ ಏನು?’ ಅಂತ ಕೇಳಿದ್ದಾರೆ. ಇನ್ನು ಹುನಗುಂದದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು, ‘ಅಲ್ಲ ಸರ್, ನನಗೆ ಅರ್ಥ ಆಗದೆ ಇರೋದು ಅಂದ್ರೆ ನನ್ನ ಕ್ಷೇತ್ರದ ಅಧಿಕಾರಿಗಳ ವರ್ಗಾವಣೆಗೆ ಸಿಎಂ ಶಿಫಾರಸು ಪತ್ರ ಯಾಕೆ ಬರುತ್ತಿದೆ ಅನ್ನೋದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ನಾನು ಹೇಳಿದವರನ್ನು ಹಾಕಬೇಕು. ಆದರೆ ಇಲ್ಲೂ ಸಿಎಂ ಶಿ-ರಸು ಕೆಲಸ ಮಾಡಿದರೆ ನಾನೇನು ಮಾಡಬೇಕು?’ ಅಂತ ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗೆ ಶಾಸಕಾಂಗ ಸಭೆಯಲ್ಲಿ ಶಾಸಕರ ಆಕ್ರೋಶ ವ್ಯಕ್ತ ವಾದ ಪರಿಯನ್ನು ನೋಡಿ ಸಿಎಂ ಸಿದ್ದರಾಮಯ್ಯ, ‘ಇನ್ನು ಮುಂದೆ ಹೀಗಾಗಬಾರದು ಕಣ್ರೀ’ ಅಂತ ಮಂತ್ರಿಗಳಿಗೆ ಹೇಳಿದ್ದಾರಾದರೂ ಮುಂದಿನ ದಿನಗಳಲ್ಲಿ ಇಂಥ ಆಕ್ರೋಶದ ಕಾವು ಹೆಚ್ಚಾಗುವುದು ಗ್ಯಾರಂಟಿ. ಕಾರಣ? ಹಿಂದಿನ ಬಿಜೆಪಿ ಸರಕಾರ ಮಿತಿಮೀರಿ ಯೋಜನೆಗಳಿಗೆ ಅಂಗೀಕಾರ ನೀಡಿರುವುದರಿಂದ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲ.
ಇರುವ ಮತ್ತು ಬರುವ ಹಣ ಗ್ಯಾರಂಟಿ ಯೋಜನೆಗಳಿಗೆ ಮತ್ತು ಬಿಜೆಪಿ ಅವಧಿಯ ಯೋಜನೆಗಳಿಗೆ ಹೋಗುವುದರಿಂದ ಸರಕಾರದ ಮಟ್ಟದಲ್ಲಿ ಆರ್ಥಿಕ ಪರದಾಟ ಆರಂಭವಾಗಿದೆ. ಇಂಥ ಪರದಾಟದ ಕಾರಣಕ್ಕಾಗಿ ಮಂತ್ರಿಗಳು ದುಡ್ಡು ಕೊಡುವ ವಿಷಯದಲ್ಲಿ ಚೂಸಿಯಾಗುವುದರಿಂದ ಬಹುತೇಕ ಶಾಸಕರು ಲಾಟರಿ ಹೊಡೆಯುವ ಪರಿಸ್ಥಿತಿ ಬರುತ್ತದೆ. ಮತ್ತು ಇಂಥ ಸ್ಥಿತಿಯೇ ಅವರ ಸಿಟ್ಟಿಗೆ ಕಾರಣವಾಗಿ ಸರಕಾರಕ್ಕೆ ಕಿರಿಕಿರಿ ಮಾಡುತ್ತದೆ.
ಹನಿಟ್ಯಾಪ್ ನಡೆಯಲಿದೆ, ಹುಷಾರ್!
ಸರಕಾರದ ಹಣಕಾಸಿನ ಪರಿಸ್ಥಿತಿ ಮುಂದೆ ಯಾವ ಸಂಕಷ್ಟ ಗಳಿಗೆ ಕಾರಣವಾಗಬಹುದು ಎಂಬುದು ಫೈನಾನ್ಸ್ ಸ್ಪೆಷಲಿಸ್ಟ್ ಆಗಿರುವ ಸಿದ್ದರಾಮಯ್ಯ ಅವರಿಗೆ ಗೊತ್ತು. ಅದರೆ ಅದೇ ಕಾಲಕ್ಕೆ ಸರಕಾರವನ್ನು ಅಸ್ಥಿರಗೊಳಿಸಲು ಸಂಚು ನಡೆಯುತ್ತಿದೆ ಎಂಬ ಅನುಮಾನವೂ ಅವರಿಗೆ ಶುರುವಾಗಿದೆ. ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದ ಕಾಲದಲ್ಲಿ ಒಮ್ಮೆ ಶಾಸಕಾಂಗ ಸಭೆ ನಡೆಯಿತಲ್ಲ? ಈ ಸಭೆಯಲ್ಲೇ ಸಿದ್ದರಾಮಯ್ಯ ತಮ್ಮ ಅನುಮಾನ ಬಿಚ್ಚಿಟ್ಟು ಸಚಿವರು, ಶಾಸಕ
ರಿಗೆ ಎಚ್ಚರಿಕೆ ನೀಡಿದ್ದಾರೆ. ಅವರ ಪ್ರಕಾರ, ತಮ್ಮ ಸಂಪುಟ ದಲ್ಲಿರುವ ಮಂತ್ರಿಗಳು ಮತ್ತು ಪಕ್ಷದ ಶಾಸಕರನ್ನು ಹನಿಟ್ರ್ಯಾಪ್ ಬಲೆಗೆ, ಸ್ಟಿಂಗ್ ಆಪರೇಷನ್ ಸುಳಿಗೆ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ.
ಹಾಗಂತಲೇ ಈ ಕುರಿತು ಸಚಿವರು ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ, ‘ಈ ವಿಷಯದಲ್ಲಿ ಎಲ್ಲರೂ ಹುಷಾರಾಗಿರಿ. ಒಂದು ವೇಳೆ ಯಾರಾದರೂ ಎಚ್ಚರ ತಪ್ಪಿ ಹನಿಟ್ರ್ಯಾಪ್‌ಗೋ, ಸ್ಟಿಂಗ್ ಆಪರೇಷನ್‌ಗೋ ಸಿಲುಕಿಕೊಂಡರೆ ಯಾವ ಕಾರಣಕ್ಕೂ ನಾನು ನಿಮ್ಮ ರಕ್ಷಣೆಗೆ ಬರುವುದಿಲ್ಲ’ ಅಂತ ಎಚ್ಚರಿಸಿದ್ದಾರೆ.
ವಿಜಯೇಂದ ‘ಪಟ್ಟ’ ಸದ್ಯಕ್ಕಿಲ್ಲ ಈ ಮಧ್ಯೆ ಕರ್ನಾಟಕದ ರಾಜಕಾರಣದಲ್ಲಿ ತಲೆ ಎತ್ತಲು ಪರ ದಾಡುತ್ತಿರುವ ರಾಜ್ಯ ಬಿಜೆಪಿ ಪಾಳಯದಲ್ಲಿ ಹೊಸ ಸುದ್ದಿ ಹರಡಿದೆ. ಪಕ್ಷದ ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಪ್ರಯತ್ನ ನಡೆಸಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ನಿರಾಸೆ ಯಾಗಿದೆ ಎಂಬುದು ಈ ಸುದ್ದಿ. ಪಕ್ಷದಲ್ಲಿ ಯಡಿಯೂರಪ್ಪ
ಅವರಿಗೆ ಪ್ರಾಮಿನೆನ್ಸು ನೀಡಲು ವರಿಷ್ಠರು ಮನಸ್ಸು ಮಾಡಿರುವುದೇನೋ ನಿಜ.
ಆದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ತರಲು ವರಿಷ್ಠರು ನಕಾರ ಸೂಚಿಸಿದ್ದಾರೆ. ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಲು ಇದು ಸಕಾಲವಲ್ಲ. ಆದ್ದರಿಂದ ಮುಂದಿನ ಅಸೆಂಬ್ಲಿ ಎಲೆಕ್ಷನ್ನು ಹತ್ತಿರ ಬರುತ್ತಿದ್ದಂತೆ ಅವರಿಗೆ ಪಟ್ಟ ಕಟ್ಟೋಣ ಅಂತ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹೇಳಿದ್ದಾರಂತೆ. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಸದ್ಯಕ್ಕೆ ಸಿ.ಟಿ. ರವಿ ಮತ್ತು ಶೋಭಾ ಕರಂದ್ಲಾಜೆ ಹೆಸರುಗಳು ಉಳಿದುಕೊಂಡಿವೆ ಮತ್ತು ಓಡುತ್ತಿವೆ. ಯಡಿಯೂರಪ್ಪ ಅವರೇನೋ ಶೋಭಾ ಅಧ್ಯಕ್ಷ ರಾದರೆ ಒಳ್ಳೆಯದು ಅಂತ ವರಿಷ್ಠರಿಗೆ ಹೇಳಿದ್ದಾರೆ. ಆದರೆ ಸಿ.ಟಿ.ರವಿ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ
ಆಶೀರ್ವಾದ ಪಡೆದ ಎಪಿಸೋಡು ‘ಸೂರ್ಯೋದಯದ ಲಕ್ಷಣ’ ಎಂಬುದು ಕೆಲವರ ಮಾತು.