ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ನಾನು ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಉಳಿದುಕೊಂಡಾಗ, ಒಂದು ದಿನ ರಾತ್ರಿ ಹನ್ನೊಂದೂವರೆ ಹೊತ್ತಿಗೆ ಹೋಟೆಲ್ ಹೊರಗೆ ಬಂದು ಅಲ್ಲಿಂದ ಸುಮಾರು ಒಂದೂವರೆ-ಎರಡು ಕಿ.ಮೀ. ಸ್ನೇಹಿತನೊಂದಿಗೆ ವಾಕಿಂಗ್ಗೆ ಹೋಗಿದ್ದೆ. ಅಂದು ರಸ್ತೆಗಳು ಬಿಕೋ ಎನ್ನುವಷ್ಟು ಖಾಲಿಯಾಗಿದ್ದವು. ದೃಷ್ಟಿ ಹಾಯುವ ತನಕ ನರಪಿಳ್ಳೆಯೂ ಕಾಣುತ್ತಿರಲಿಲ್ಲ. ಆಗಾಗ ವಾಹನಗಳು ಹಾದುಹೋಗುತ್ತಿದ್ದವು. ನಾವು ಮುಖ್ಯರಸ್ತೆಯಿಂದ ಒಳರಸ್ತೆಯಲ್ಲಿ ಹೆಜ್ಜೆ ಹಾಕಿದೆವು. ಅಲ್ಲಿ ಸುಮಾರು ಅರ್ಧ ಕಿ.ಮೀ. ನಡೆದ ಬಳಿಕ ಮತ್ತೊಂದು ಮುಖ್ಯರಸ್ತೆ
ಕಾಣಿಸಿತು. ಅಲ್ಲಿಯೂ ಜನಸಂಚಾರ ಇರಲೇ ಇಲ್ಲ.

ವಾಹನಗಳ ತಿರುಗಾಟವೂ ಇರಲಿಲ್ಲ. ಅಬ್ಬ ವ್ಯಕ್ತಿ ಫುಟ್ಪಾತ್ ಮೇಲೆ ನಿಂತು ಏನನ್ನೋ ದಿಟ್ಟಿಸುತ್ತಿರುವುದು ಕಾಣಿಸಿತು. ಆತ ಏನನ್ನು ನೋಡುತ್ತಿದ್ದಾನೆ ಎಂಬುದು ನಮಗೆ ಸೋಜಿಗವಾಯಿತು. ಆತ ಟ್ರಾಫಿಕ್ ಲೈಟನ್ನು ನೋಡುತ್ತಾ ನಿಂತಿದ್ದ. ಆತ ಟ್ರಾಫಿಕ್ ಲೈಟ್ ಹಸಿರು ಬಣ್ಣಕ್ಕೆ ತಿರುಗುವುದಕ್ಕಾಗಿ ಕಾಯುತ್ತಿದ್ದ. ಅದು ಹೇಳಿ-ಕೇಳಿ
ಖಾಲಿ ನಿರ್ಜನ ರಸ್ತೆ. ವಾಹನಗಳ ಸಂಚಾರವೂ ಇರಲಿಲ್ಲ. ಆತ ಸರಾಗವಾಗಿ ರಸ್ತೆ ದಾಟಬಹುದಿತ್ತು. ಆದರೆ ಆ
ಮಧ್ಯರಾತ್ರಿಯಲ್ಲೂ ಆತ ಸಿಗ್ನಲ್ ದೀಪ ಹಸಿರು ಬಣ್ಣಕ್ಕೆ ತಿರುಗುವುದಕ್ಕಾಗಿ ಕಾಯುತ್ತಿದ್ದ. ಆತ ಆ ಸಮಯದಲ್ಲಿ ತನ್ನ ಪಾಡಿಗೆ ರಸ್ತೆ ದಾಟಿದ್ದರೆ, ಏನೂ ಆಗುತ್ತಿರಲಿಲ್ಲ. ಆದರೆ ಆತ ರಸ್ತೆ ನಿಯಮವನ್ನು ಉಲ್ಲಂಸಲು ಸಿದ್ಧನಿರಲಿಲ್ಲ.
ಈ ರೀತಿಯ ಶಿಸ್ತು ಜಪಾನಿನಲ್ಲಿ ಸಾಮಾನ್ಯ. ಇಂಥ ನಿಯಮವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
ನಮಗೆ ಪವಾಡವೆನ್ನುವಂತೆ ತೋರುವುದು ಅವರಿಗೆ ಸಾಮಾನ್ಯ ಅಥವಾ ಸಹಜ. ಅದರಲ್ಲೂ ಸಾರ್ವಜನಿಕ
ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸುವುದರಲ್ಲಿ ಅವರು ಎತ್ತಿದ ಕೈ. 2011ರಲ್ಲಿ ಸಂಭವಿಸಿದ ಭೂಕಂಪ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ನಾನು ಒಂದು ವರದಿಯನ್ನು ಓದಿದ್ದೆ. ಭೂಕಂಪ ಪೀಡಿತ ಪ್ರದೇಶದ ಸಮೀಪ ಸಾವಿರಾರು ಮಂದಿ ತಾತ್ಕಾಲಿಕ ಆಶ್ರಯತಾಣದಲ್ಲಿ ತಂಗಿದ್ದರು. ಆಗ ಚಳಿಗಾಲ. ಅವರಿಗೆ ಆಹಾರ ಪೂರೈಕೆ ನಿಯತವಾಗಿ ಇರಲಿಲ್ಲ. ಎಷ್ಟೋ ಹೊತ್ತಿಗೆ ಆಹಾರವನ್ನು ನೀಡುತ್ತಿದ್ದರು. ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ವುಂಟಾಗಿತ್ತು. ಆದರೆ ಯಾರೂ ದೂರು ನೀಡಲಿಲ್ಲ, ಬೇಸರಿಸಿಕೊಳ್ಳಲೂ ಇಲ್ಲ. ಅವರು ಮಾನಸಿಕವಾಗಿ ನೊಂದಿದ್ದರೂ, ಮುಖದಲ್ಲಿ ಯಾವ ಅಸಹನೆಯೂ ಇರಲಿಲ್ಲ.
ಅವರೆಲ್ಲ ಮೂರೂ ಹೊತ್ತು ಆಹಾರಕ್ಕಾಗಿ ಸರತಿ ಸಾಲಿನಲ್ಲಿ ಅತ್ಯಂತ ಸಹನೆಯಿಂದ ನಿಲ್ಲುತ್ತಿದ್ದರು. ಅದು ನಿಜಕ್ಕೂ ಮನ ಕಲಕುವ ದೃಶ್ಯ. ಸರತಿ ಸಾಲು ಅನುಸರಿಸುವ ವಿಷಯದಲ್ಲಿ ಜಗತ್ತಿನಲ್ಲಿಯೇ ಜಪಾನಿಯರನ್ನು ಮೀರಿಸು ವವರು ಇಲ್ಲ. ಕೆಲವು ಕಡೆ ರಸ್ತೆ ದಾಟುವಾಗಲೂ ಅವರು ಸಾಲು ಹಿಡಿದು ಸಾಗುತ್ತಾರೆ. ಒಂದು ವೇಳೆ ಸಣ್ಣ ಪ್ರಮಾಣದಲ್ಲಿ ಭೂಮಿ ಅದುರಿದರೂ ಜನ ದಿಕ್ಕಾಪಾಲಾಗಿ, ಕಂಗೆಟ್ಟು ಕೂಗುತ್ತಾ, ಕಿರುಚುತ್ತಾ ಓಡುವುದಿಲ್ಲ. ಬೇರೆಯವರನ್ನು ಗಾಬರಿಪಡಿಸುವುದಿಲ್ಲ.
ಅಲ್ಲಿಯೇ ಸುತ್ತಮುತ್ತ ಪ್ರದೇಶದಲ್ಲಿರುವ ಬಯಲು ಪ್ರದೇಶದಲ್ಲಿ ಹೋಗಿ ನಿಲ್ಲುತ್ತಾರೆ. ಇಂಥ ಸಂದರ್ಭದಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ ಶಾಂತಿ ಅಥವಾ ಮೌನವನ್ನು ಕಾಪಾಡಲು ಬಯಸುತ್ತಾರೆ. ಯಾರಾದರೂ ಒಬ್ಬರು ಕಂಗಾಲಾಗಿ ಓಡಿದರೆ ಅದು ಉಳಿದವರಲ್ಲಿ ದಿಗಿಲು ಹುಟ್ಟಿಸುವುದರಿಂದ, ಅಂಥ ವರ್ತನೆಯ ಬಗ್ಗೆ ಅವರು ಎಚ್ಚರವಹಿಸುತ್ತಾರೆ.
ಮೆಟ್ರೋ, ಮಾಲ್, ಸಿಗ್ನಲ್ ಗಳು, ಎಸ್ಕಲೇಟರ್ಗಳು ಅಥವಾ ಯಾವುದೇ ತಾಣವಾಗಿರಬಹುದು, ಎಡೆಗಳಲ್ಲೂ ಸರತಿ ಸಾಲುಗಳನ್ನು ಕಾಣಬಹುದು. ಕ್ಯೂ ನಿರ್ವಹಿಸುವುದು ಅವರ ರಕ್ತದ ಕಣದಲ್ಲಿಯೇ ಅಂತರ್ಗತವಾಗಿದೆ. ಈ ವಿಷಯ ದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಹೇಳಿ ಕೇಳಿ ಟೋಕಿಯೋ ಅವಸರದ ನಗರ. ಎಲ್ಲರೂ ಧಾವಂತದಲ್ಲಿರುವು ದನ್ನು ಕಾಣಬಹುದು. ಹೀಗಾಗಿ ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸಲು ಎಸ್ಕಲೇಟರ್ನ ಎಡಭಾಗದಲ್ಲಿ ಮಾತ್ರ ನಿಂತು ತರಾತುರಿಯಲ್ಲಿರುವವರಿಗೆ ದಾರಿ ಮಾಡಿಕೊಡುತ್ತಾರೆ. ಅವರು ಇದನ್ನು ನಿಯಮ ಮಾಡಿ ಜಾರಿಗೊಳಿಸಿಲ್ಲ, ಇದು ಸ್ವಾಭಾವಿಕವಾಗಿ, ತೀರಾ ಸಹಜವಾಗಿ ನಡೆಯುತ್ತಿರುತ್ತದೆ. ಒಂದು ವಾರ ಕಾಲ ನಮ್ಮೊಂದಿಗಿದ್ದ ಗೈಡ್ ಮೀನಾ ತನಗಾದ ಒಂದು ಪ್ರಸಂಗವನ್ನು ಹೇಳಿದ್ದನ್ನು ಪ್ರಸ್ತಾಪಿಸಬಹುದು. ಅನಾರೋಗ್ಯಪೀಡಿತಳಾದ ಆಕೆಯ ಪರಿಚಯ ದವರೊಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಮೀನಾ ಕೂಡ ಜತೆಯಲ್ಲಿದ್ದರು.
ಟೋಕಿಯೋದಲ್ಲಿ ಸಾಮಾನ್ಯವಾಗಿ ಎಲ್ಲ ಆಸ್ಪತ್ರೆಗಳಲ್ಲೂ ಅತ್ಯುತ್ತಮವಾದ ಆರೋಗ್ಯ ಸೇವೆಗಳಿವೆ. ಆಕೆಯ ಪರಿಚಿತಳನ್ನು ಸೇರಿಸಿದ ಆಸ್ಪತ್ರೆಯೂ ಹೆಸರುವಾಸಿಯಾದುದೇ. ಆಗ ರಕ್ತದ ಮಾದರಿ ಯನ್ನು ತೆಗೆದುಕೊಳ್ಳುವಾಗ, ನರ್ಸ್ ಸಣ್ಣ ಪ್ರಮಾದ ಮಾಡಿ ಬಿಟ್ಟಳು. ಯಾವ ಜಾಗದಿಂದ ರಕ್ತದ ಸ್ಯಾಂಪಲ್ ತೆಗೆದುಕೊಳ್ಳಬೇಕಿತ್ತೋ, ಅದಕ್ಕಿಂತ ತುಸು ಕೆಳಭಾಗದಿಂದ ರಕ್ತ ತೆಗೆದಳು.
ತಕ್ಷಣ ನರ್ಸ್ಗೆ ತನ್ನ ತಪ್ಪಿನ ಅರಿವಾಯಿತು. ಹಾಗಂತ ಅದರಿಂದ ಮಹಾ ಅಪರಾಧವೇನೂ ಆಗಿರಲಿಲ್ಲ. ಆದರೆ ಆ
ಘಟನೆ ಬಳಿಕ ನರ್ಸ್ ಕನಿಷ್ಠ ನೂರು ಸಲ ಕ್ಷಮೆಯಾಚಿಸಿದಳಂತೆ. ಆಕೆಯ ಸ್ನೇಹಿತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ
ಹೋಗುವ ತನಕವೂ ಕಂಡಾಗಲೆಲ್ಲ ಕ್ಷಮೆಯಾಚಿಸುತ್ತಿದ್ದಳಂತೆ. ನಂತರ ಹೋಗುವಾಗ, ಒಂದು ಹೂಗುಚ್ಛವನ್ನು ನೀಡಿ, ಒಂದು ಪತ್ರವನ್ನು ಕೊಟ್ಟಳಂತೆ. ಅದರಲ್ಲಿ ‘ಕ್ಷಮೆ ಇರಲಿ, ನಿಮಗೆ ದೇವರು ಒಳ್ಳೆಯದನ್ನು ಮಾಡಲಿ’ ಎಂದು
ಬರೆದಿದ್ದಳಂತೆ. ಟೋಕಿಯೋದಲ್ಲಿ ಇದ್ದಾಗ ನನಗೆ ಮನವರಿಕೆಯಾದ ಒಂದು ಸಂಗತಿಯೆಂದರೆ, ನಾವು ಅಲ್ಲಿದ್ದಾಗ
ಕಳೆದುಹೋಗಲು ಸಾಧ್ಯವೇ ಇಲ್ಲ.
ಭಾಷೆ ಗೊತ್ತಾಗದಿದ್ದರೂ ಪರವಾಗಿಲ್ಲ, ನೀವು ಹೋಗಬೇಕಾದ ಸ್ಥಳದ ಹೆಸರನ್ನು ಹೇಳಿದರೆ, ಅದೆಷ್ಟೇ ಅಡಚಣೆ ಯಾದರೂ ಸರಿಯೇ, ಅಲ್ಲಿನ ಜನ ನೀವು ಸೇರಬೇಕಾದ ತಾಣವನ್ನು ತಲುಪಲು ಸಹಕರಿಸಿಯೇ ಹೋಗುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನೀವು ದಾರಿ ಅಥವಾ ವಿಳಾಸ ಕೇಳಿದರೆ, ಅವರು ಅವಸರದಲ್ಲಿದ್ದರೂ ನಿಂತು, ನಿಮ್ಮ ಮಾತುಗಳನ್ನು ಕೇಳಿ ಸರಿಯಾದ ಮಾರ್ಗವನ್ನು ಹೇಳುತ್ತಾರೆ. ಒಂದು ವೇಳೆ ನೀವು ಹೋಗಬೇಕಾದ ಜಾಗ ಅಥವಾ ವಿಳಾಸ ಗೊತ್ತಿಲ್ಲದಿದ್ದರೆ, ನಡು ಬಗ್ಗಿಸಿ ವಿಷಾದ ವ್ಯಕ್ತಪಡಿಸಿ ಅಥವಾ ಕ್ಷಮೆ ಕೇಳಿ ಮುನ್ನಡೆಯುತ್ತಾರೆ. ಒಂದು ವೇಳೆ ಗೊತ್ತಿದ್ದರೆ, ಅವರೇ ನಿಮ್ಮೊಂದಿಗೆ ಸಾಗುತ್ತಾ ನೀವು ಸೇರಬೇಕಾದ ಸ್ಥಳದ ತನಕ ಜತೆಗೆ ಬರುತ್ತಾರೆ. ಈ ಅನುಭವ ಎರಡು ಸಲ ನನಗೂ ಆಗಿದೆ. ಭಾಷಾ ಅಡಚಣೆಯ ನಡುವೆಯೂ ಅವರು ನಿಮಗೆ ಸಹಾಯ ಮಾಡದೇ ಗುವುದಿಲ್ಲ. ಹೀಗಾಗಿ ನೀವು ಜಪಾನಿನಲ್ಲಿದ್ದಾಗ ಕಳೆದುಹೋಗಲು ಸಾಧ್ಯವೇ ಇಲ್ಲ. ಒಂದು ವೇಳೆ ನೀವು ಹಾದಿ ತಪ್ಪಿದರೂ, ಅವರು ನಿಮ್ಮನ್ನು ಸರಿದಾರಿಗೆ ತರುತ್ತಾರೆ!
ಜಪಾನಿನಲ್ಲಿ For Nihonjins, rules are God ಎಂಬ ಮಾತಿದೆ. ‘ನಿಹೋಂಜಿನ್’ ಅಂದರೆ ಜಪಾನಿ ಭಾಷೆಯಲ್ಲಿ ಜಪಾನಿಯರು ಎಂದರ್ಥ. ಅವರು ನಿಯಮಗಳನ್ನು ದೇವವಾಕ್ಯ ಎಂದು ಪರಿಗಣಿಸುತ್ತಾರೆ. ಸಾರ್ವಜನಿಕ
ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಕಂಡರೆ ಅದನ್ನು ತಪ್ಪದೇ ಪಾಲಿಸುತ್ತಾರೆ. ನಿಯಮಗಳನ್ನು ಒಂದು ರೀತಿಯ ನೈತಿಕ ಬಾಧ್ಯತೆಯಾಗಿ, ದೇವರ ಆದೇಶದಂತೆ ಪಾಲಿಸುತ್ತಾರೆ. ನಿಯಮವನ್ನು ನೂರಕ್ಕೆ ನೂರು ಪಾಲಿಸಬೇಕು ಎಂಬಂತೆ, ಯಾವ ಕಾರಣಕ್ಕೂ ನಿಯಮವನ್ನು ಉಲಂಘಿಸಬಾರದು ಎಂಬ ಎಚ್ಚರ ಅವರನ್ನು ಹೆಚ್ಚು ಜಾಗೃತ ರನ್ನಾಗಿ ಇಟ್ಟಿದೆಯೇನೋ ಎನಿಸುತ್ತದೆ.
ಸುತ್ತು ಹಾಕಿ ರಸ್ತೆ ದಾಟುವ ಬದಲು, ನಿಯಮ ಉಲ್ಲಂಘಿಸಿ ಹತ್ತಿರದ ಮಾರ್ಗ ಕಂಡುಕೊಳ್ಳಬೇಕು ಎಂದು ಅವರು ಯೋಚಿಸುವುದಿಲ್ಲ. ‘ಸುತ್ತಾದರೂ ಸುರಳೀತ’ ಎಂದು ನಿಯಮವನ್ನು ಪಾಲಿಸುವುದನ್ನೇ ಆಯ್ದುಕೊಳ್ಳುತ್ತಾರೆ.
ಇದು ವಾಹನ ಚಾಲಕರಿಗಷ್ಟೇ ಅಲ್ಲ, ಪಾದಚಾರಿಗಳಿಗೂ ಅನ್ವಯ. ‘ಕ್ಯೂ ಪ್ಲೀಸ್’ ಎಂದು ಬರೆದ ಬೋರ್ಡಿನ ಮುಂದೆ ಇಬ್ಬರೇ ಇದ್ದರೂ ಒಬ್ಬರ ಹಿಂದೆ ಮತ್ತೊಬ್ಬರು ನಿಲ್ಲುತ್ತಾರೆಯೇ ಹೊರತು ಇಬ್ಬರೂ ಏಕಕಾಲಕ್ಕೆ ನುಗ್ಗುವುದಿಲ್ಲ.
ಜಪಾನಿಯರ ಜೀವನದಲ್ಲಿ ನಿಯಮಗಳು ಉಲ್ಲಂಘಿಸಲೇಬಾರದ ದೇವಲಿಖಿತ ಸಾಲುಗಳು. ಅವರ ದೈನಂದಿನ ಚಟುವಟಿಕೆಗಳಲ್ಲಿ, ನಿಯಮ ಪಾಲನೆಯನ್ನು ಅತ್ಯಂತ ಶಿಸ್ತಿನಿಂದ ನೆರವೇರಿಸುತ್ತಾರೆ. ಇದು ಅವರ ವ್ಯಕ್ತಿತ್ವ ಮತ್ತು ಸಂಸ್ಕೃತಿಯ ಒಂದು ಪ್ರಮುಖ ಅಂಶ. ನಿಯಮಗಳು ಇವರಿಗೆ ಶಿಸ್ತಿನ ಜೀವನವನ್ನು ನಡೆಸಲು ನೆರವಾಗುವ ತೋರುದೀಪ. ಈ ಕಾರಣದಿಂದ ಅವರು ನಿಯಮಗಳನ್ನು ದೇವವಾಕ್ಯದಂತೆ ಮನ್ನಿಸುತ್ತಾರೆ. ಈ ನಿಯಮಪಾಲನೆ ದೇಶದ ಅಭಿವೃದ್ಧಿಗೆ ಮತ್ತು ಶ್ರದ್ಧೆಯ ಜೀವನಶೈಲಿಗೆ ಸಹಾಯಕವಾಗಿದೆ ಎಂಬುದು ಸಹ ಅಷ್ಟೇ ಸತ್ಯ.
ಜಪಾನಿಯರ ಬಹುದೊಡ್ಡ ಜೀವನದರ್ಶನ ಯಾವುದು ಎಂದು ನಾನು ನಮ್ಮ ಗೈಡ್ಗೆ ಕೇಳಿದಾಗ ಆಕೆ ಹೇಳಿದ್ದು-
ಸಾರ್ವಜನಿಕ ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ. ಜಪಾನಿಯರು ಯಾವ ಸಂದರ್ಭದಲ್ಲೂ ನಿಮಗೆ ಮೋಸ
ಮಾಡುವುದಿಲ್ಲ, ಟೋಪಿ ಹಾಕುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ. ಹೇಳುವುದೊಂದು, ಮಾಡುವುದು
ಇನ್ನೊಂದು ಎಂಬ ಮನೋಭಾವ ಅವರದ್ದಲ್ಲ. ತಮ್ಮಿಂದ ಸಣ್ಣ ತಪ್ಪಾದರೂ ತಾವು ತಪ್ಪಿತಸ್ಥ ಎಂಬ ಅಪರಾಧ ಭಾವ ಅವರನ್ನು ಕಾಡುತ್ತದೆ. ನೀವು ರೈಲು ಬೋಗಿ, ನಿಲ್ದಾಣ ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಏನನ್ನೇ
ಮರೆತುಹೋದರೂ, ಯಾರೂ ಅದನ್ನು ಮುಟ್ಟುವುದಿಲ್ಲ. ಅದನ್ನು ಪೊಲೀಸರು ತಮ್ಮ ಸುಪರ್ದಿಯಲ್ಲಿಟ್ಟು ಕೊಳ್ಳುತ್ತಾರೆ.
ಎರಡು ವಾರಗಳಾದರೂ ಯಾರೂ ಬರದಿದ್ದರೆ, ಸಂಬಂಧಪಟ್ಟವರಿಗೆ ತಮ್ಮ ಖರ್ಚಿನಲ್ಲಿಯೇ ಸುರಕ್ಷಿತವಾಗಿ
ತಲುಪಿಸುತ್ತಾರೆ. ನಿಮಗೆ ರಸ್ತೆ ಅಥವಾ ಮಾರ್ಗ ಗೊತ್ತಿಲ್ಲವೆಂದು ಟ್ಯಾಕ್ಸಿ ಡ್ರೈವರ್ ಸುತ್ತು ಹೊಡೆಸಿ, ಹೆಚ್ಚಿನ
ಹಣ ಪೀಕುವುದಿಲ್ಲ. ಒಂದು ವೇಳೆ ಆತನ ತಪ್ಪಿನಿಂದ ಸುತ್ತು ಹೊಡೆಸಿದರೆ, ಅನುಮಾನ ಬೇಡ, ಡ್ರೈವರ್ ಹೆಚ್ಚುವರಿ
ಹಣವನ್ನು ಹಿಂತಿರುಗಿಸುತ್ತಾನೆ. ಕೆಲವು ವರ್ಷಗಳ ಹಿಂದೆ, ಜಪಾನಿಗೆ ಬಂದ ಆರಂಭದಲ್ಲಿ ನನ್ನ ಸ್ನೇಹಿತರೊಬ್ಬರು ಹತ್ತು ಸಾವಿರ ಯೆನ್ ಕೊಟ್ಟು ರೈಲು ಪಾಸನ್ನು ಖರೀದಿಸಿದ್ದರು. ಅದೇ ದಿನ ಆಕಸ್ಮಿಕವಾಗಿ ಅದನ್ನು ಕಳೆದು ಕೊಂಡು ಬಿಟ್ಟರು. ಅದನ್ನು ಯಾರಾದರೂ ಬಳಸಬಹುದಿತ್ತು. ಆದರೆ ಅದನ್ನು ಯಾರೋ ರೈಲ್ವೆ ಸಿಬ್ಬಂದಿಗೆ ಹಿಂದಿರುಗಿಸಿದ್ದರು. ಮರುದಿನ ನನ್ನ ಸ್ನೇಹಿತ ಹೋಗಿ ವಿಚಾರಿಸಿದಾಗ, ರೈಲು ಅಧಿಕಾರಿಗಳು ಅದನ್ನು ಕೊಟ್ಟರು. ಇನ್ನೊಂದು ಪ್ರಸಂಗ. ಒಮ್ಮೆ ನನ್ನ ಸ್ನೇಹಿತರು ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಟ್ರೇನಿನಲ್ಲಿ ಹೋಗುತ್ತಿದ್ದಾಗ, ಯುವತಿಯೊಬ್ಬಳು ಹಠಾತ್ತನೆ ವಾಂತಿ ಮಾಡಿಬಿಟ್ಟಳು. ಬೋಗಿಯಲ್ಲಿ ಹೆಚ್ಚು ಪ್ರಯಾಣಿಕ ರಿರಲಿಲ್ಲ. ಆಕೆ ವಾಂತಿ ಮಾಡಿ ಹೋಗಿದ್ದರೆ ಯಾರೂ ಆಕೆಯನ್ನು ಪ್ರಶ್ನಿಸುತ್ತಿರಲಿಲ್ಲ ಮತ್ತು ಆಕ್ಷೇಪಿಸುತ್ತಿರಲಿಲ್ಲ. ಆದರೆ ಆಕೆ ತನ್ನ ಬ್ಯಾಗಿನಿಂದ ಶಾಲನ್ನು ತೆಗೆದು ವಾಂತಿಯನ್ನು ಬಳಿದು, ನಂತರ ಕಾಗದ ತೆಗೆದುಕೊಂಡು ಅದನ್ನು ಒz ಮಾಡಿ, ಆ ಜಾಗವನ್ನು ಒರೆಸಿ, ಅಲ್ಲಿರುವವರಿಗೆ ಕ್ಷಮೆಯಾಚಿಸಿ ಹೋದಳು!
ಸಾರ್ವಜನಿಕ ಸೇವೆ ವಿಷಯ ಬಂದಾಗ ಜಪಾನಿಯರ ಮನೋಭಾವ ನನಗೆ ನಿಜಕ್ಕೂ ಅಚ್ಚರಿ ಹುಟ್ಟಿಸಿದೆ. ಉದಾಹರಣೆಗೆ, ಟ್ಯಾಕ್ಸಿ ಒಳಗಿನ ಗಾಳಿಯ ಗುಣಮಟ್ಟ. ಪ್ರತಿ ಟ್ಯಾಕ್ಸಿಯಲ್ಲೂ, ಅದರ ಒಳಗಿನ ಗಾಳಿಯ ಶುದ್ಧತೆಯ ಪ್ರಮಾಣ ತೋರಿಸುವ ಒಂದು ಮೀಟರ್ ಅಳವಡಿಸಿರುತ್ತಾರೆ. ಅದು ಎಲ್ಲ ಸಂದರ್ಭಗಳಲ್ಲೂ ಒಳಗಿನ ಗಾಳಿ ನೂರಕ್ಕೆ ನೂರು ಪರಿಶುದ್ಧವಾಗಿರಬೇಕೆಂದು ಸೂಚಿಸುತ್ತದೆ. ಶೇ.೯೫ಕ್ಕಿಂತ ಕಮ್ಮಿಯಿದ್ದರೆ, ಡ್ರೈವರ್ಗೆ ದೂರು ನೀಡಬಹುದು. ತಕ್ಷಣ ಡ್ರೈವರ್ ಕಿಟಕಿಗಳ ಗಾಜನ್ನು ಇಳಿಸಿ, ಕಲುಷಿತ ಅಥವಾ ದುರ್ವಾಸನೆ ಬೀರುವ ಗಾಳಿಯನ್ನು ಅಥವಾ ಪದಾರ್ಥಗಳನ್ನು ಹೊರಹಾಕಿ, ಸುವಾಸನಾಯುಕ್ತ ದ್ರವ ಸಿಂಪಡಿಸಿ ಗಾಳಿಯ ಗುಣಮಟ್ಟವನ್ನು ಹೆಚ್ಚಿಸು ತ್ತಾನೆ.
ಆಗಲೂ ಗಾಳಿಯ ಗುಣಮಟ್ಟ ನೂರಕ್ಕೆ ನೂರು ಇಲ್ಲದಿದ್ದರೆ, ಕ್ಷಮೆಯಾಚಿಸಿ ಮೀಟರಿಗಿಂತ ಕಮ್ಮಿ ಹಣ ತೆಗೆದು ಕೊಳ್ಳುತ್ತಾನೆ. ನನಗೆ ಟೋಕಿಯೋ ನಗರದ ಬಗ್ಗೆ ಸಕಾರಾತ್ಮಕ ಚಿತ್ರಣ ಮೂಡಿಸಿದ ಇನ್ನೊಂದು ಸಂಗತಿಯೆಂದರೆ, ನಗರ ಜೀವನದ ಸುರಕ್ಷತೆ ಬಗ್ಗೆ. ನೀವು ಅಲ್ಲಿದ್ದಷ್ಟು ಹೊತ್ತು ಸುರಕ್ಷಿತವಾಗಿ ಇರಬಹುದು. ಭೂಕಂಪ, ಸುನಾಮಿ ಯಂಥ ನೈಸರ್ಗಿಕ ಪ್ರಕೋಪಗಳ ಹೊರತಾಗಿ, ಮನುಷ್ಯ ಪ್ರೇರಿತ ಯಾವ ಅವಘಡಗಳೂ ಸಂಭವಿಸುವುದಿಲ್ಲ. ಮಧ್ಯರಾತ್ರಿ ಒಂದು ಗಂಟೆ ಹೊತ್ತಿನಲ್ಲೂ ಹೆಂಗಸರು ಯಾವ ಭಯವಿಲ್ಲದೇ ಒಬ್ಬಂಟಿಯಾಗಿ ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸಬಹುದು, ನಿರ್ಜನ ಬೀದಿಗಳಲ್ಲಿ ಏಕಾಂಗಿಯಾಗಿ ತಿರುಗಾಡಬಹುದು.
ಕಳ್ಳತನ, ಸುಲಿಗೆ, ದರೋಡೆ, ಹಲ್ಲೆ, ಅತ್ಯಾಚಾರ… ಕೇಳಲೇಬೇಡಿ. ನಗರ ಜೀವನ ತನ್ನ ಒಡಲಲ್ಲಿ ಸಾಕಿಕೊಂಡಿರುವ ಯಾವ ಅಪರಾಧಗಳನ್ನೂ ಅಲ್ಲಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಜಪಾನನ್ನು one of the safest countries in the world ಎಂದು ಹೇಳುವುದುಂಟು. ಜಪಾನಿಗೆ ‘ಪ್ರವಾಸಿಗರು ಅತಿ ಹೆಚ್ಚು ಸ್ವಾತಂತ್ರ ಪಡೆಯುವ ದೇಶ’ ಎಂದೂ ಕರೆಯುವುದುಂಟು.
ಜಪಾನಿನ ಬಗ್ಗೆ ನನಗೆ ಸಮಾಧಾನ ನೀಡಿದ ಒನ್ನೊಂದು ಅಂಶವೆಂದರೆ ಅದು ತಾಂತ್ರಿಕವಾಗಿ ಅಷ್ಟು ಮುಂದು ವರಿದ ರಾಷ್ಟ್ರವಾಗಿದ್ದರೂ, ತನ್ನ ಸಾಂಪ್ರದಾಯಿಕ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಯಶಸ್ವಿ ಯಾಗಿರುವುದು. ಧರ್ಮ, ಸಂಪ್ರದಾಯ, ಆಚರಣೆ, ಹಬ್ಬಗಳು, ವಾಸ್ತುಶಿಲ್ಪ, ಚಹಾ ಸಮಾರಂಭಗಳು, ಕ್ಯಾಲಿಗ್ರಫಿ ಸೇರಿದಂತೆ ತಮ್ಮ ಸಂಸ್ಕೃತಿಯ ಮೂಲಬೇರುಗಳನ್ನು ಅವರು ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ ಮತ್ತು ಆಧುನಿಕತೆ ಇವುಗಳ ಮೇಲೆ ಸವಾರಿ ಮಾಡದಂತೆ ನೋಡಿಕೊಂಡಿದ್ದಾರೆ. ಆಧುನಿಕತೆ ಮತ್ತು ಸಂಪ್ರದಾಯ ಎರಡೂ ಜತೆಜತೆಗೆ ಹೆಜ್ಜೆ ಹಾಕುವುದನ್ನು ಸೂಕ್ಷ್ಮವಾಗಿ ಕಾಣಬಹುದು. ಇವೆರಡರ ಸಹಬಾಳ್ವೆ ಮತ್ತು ಮಿಳಿತ ಅಲ್ಲಿನ ಜನಜೀವನದಲ್ಲೂ ಹಾಸುಹೊಕ್ಕಾಗಿರುವುದನ್ನು ಅನುಭವಿಸಬಹುದು. ಜಪಾನಿನಲ್ಲಿ ಇರುವಷ್ಟು ಹೊತ್ತು ಪ್ರತಿ ಕ್ಷಣವೂ ಇಂಥ ಸಣ್ಣ ಸಣ್ಣ ಅಚ್ಚರಿ- ‘ಆಘಾತ’ಗಳನ್ನು ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.
ಇದನ್ನೂ ಓದಿ: vishweshwarbhatcolumn