Saturday, 10th May 2025

Barkha Dutt Column: ವಿಪಕ್ಷಗಳು ಇನ್ನಾದರೂ ತಮ್ಮ ಪ್ರಲಾಪವನ್ನು ನಿಲ್ಲಿಸಲಿ

ವಿಶ್ಲೇಷಣೆ

ಬರ್ಖಾ ದತ್

ರಾಹುಲ್ ಗಾಂಧಿಯವರು ಮತ್ತು ಅವರು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷವು, ಸುದ್ದಿ ಮಾಧ್ಯಮಗಳ ಪ್ರಪಂಚದಿಂದ ಪ್ರಾಯಶಃ ಒಂದು ವಿಮರ್ಶಾತ್ಮಕ/ನಿರ್ಣಾಯಕ ಪಾಠವನ್ನು ಕಲಿಯಬೇಕಾಗಿ ಬರಬಹುದು. ಲೋಕಸಭಾ ಚುನಾ ವಣೆಯ ಸಂದರ್ಭದಲ್ಲಿ ಚೇತರಿಕೆ ದಕ್ಕಿತು ಅಂದುಕೊಳ್ಳುವಷ್ಟರಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆ ಗಳಲ್ಲಿ ಸಾಲು ಸಾಲು ಸೋಲುಗಳು ಮತ್ತು ಮುಜುಗರದ ಕ್ಷಣಗಳನ್ನು ಎದುರಿಸಿದ ಕಾಂಗ್ರೆಸ್ ಪಕ್ಷವು, ನಿಗೂಢ ಕದನಗಳ ಸುಳಿಯಲ್ಲಿ ಹೆಚ್ಚೆಚ್ಚು ಸಿಲುಕಿಕೊಳ್ಳುತ್ತಿದೆ. ಪಕ್ಷದ ಸಾಮಾಜಿಕ ಮಾಧ್ಯಮಗಳ ‘ಹಿಮ್ಮಾಹಿತಿ ಕೊಠಡಿ ಗಳಲ್ಲಿ’ ಇದಕ್ಕೆ ಒಳ್ಳೆಯ ಸ್ಪಂದನೆಗಳು ಸಿಕ್ಕರೂ, ಅವು ಯಾವುದೇ ಹೊಸ ಮತದಾರರನ್ನು ತಮ್ಮತ್ತ ಸೆಳೆಯುವುದು ದುಸ್ತರವೆನ್ನ ಬೇಕು.

ಕಾಂಗ್ರೆಸ್ ಪಕ್ಷದಲ್ಲಿ ಪ್ರಸ್ತುತ ಕಾಣಬರುತ್ತಿರುವ ಪರಿಸ್ಥಿತಿಗಳು ಅಥವಾ ಚಟುವಟಿಕೆಗಳನ್ನೇ ಒಮ್ಮೆ ನೋಡಿ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಸಂಸತ್ತಿನಲ್ಲಿ ನೀಡಿದರೆನ್ನಲಾದ
ಹೇಳಿಕೆಯನ್ನಿಟ್ಟುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ಶುರುವಾಗಿದೆ. ಈ ಹೋರಾಟವು ತಾರಕಕ್ಕೆ ಏರಿರುವಾಗಲೇ, ಇದರ ಮುಂದುವರಿದ ಭಾಗವಾಗಿ ಕೈ ಕೈ ಮಿಲಾಯಿಸುವ ಮಟ್ಟಿಗಿನ ಸೆಣಸಾಟ ಕಂಡುಬಂದಿರುವಾಗಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಉದ್ಯಮಿ ಅದಾನಿ ಕುರಿತಾದ ವಿವಾದಿತ ಚರ್ಚಾವಿಷಯವನ್ನು ಹಠಾತ್ತನೆ ಪ್ರಸ್ತಾಪಿಸಿಬಿಟ್ಟರು.

ಬಿಜೆಪಿಯು ಆರೋಪಿಸಿರುವಂತೆ ರಾಹುಲರು ಸಂಸದರೊಬ್ಬರನ್ನು ಜೋರಾಗಿ ತಳ್ಳಿ ಬೀಳಿಸಿ ಗಾಯಗೊಳ್ಳುವಂತೆ
ಮಾಡಿದರೇ ಎಂಬುದರ ಕುರಿತಾದ ಒಂದಿಡೀ ಗದ್ದಲವು, ಈಗಿನ ಕೇಂದ್ರ ಸರಕಾರದೊಂದಿಗೆ ಉದ್ಯಮಿ ಅದಾನಿ ಹೊಂದಿದ್ದಾರೆನ್ನಲಾದ ಸಂಬಂಧವನ್ನು ಸುತ್ತುವರಿದಿರುವ ಭಾರಿ ಚರ್ಚೆಯ ದಿಕ್ಕುತಪ್ಪಿಸಲು ಮಾಡಿದ ಯತ್ನ ಎಂಬುದು ರಾಹುಲರ ಆರೋಪ.

ಇಲ್ಲಿ ಒಂದು ಅಂಶವನ್ನು ಸ್ಪಷ್ಟಪಡಿಸುತ್ತೇನೆ. ಅದೆಂದರೆ, ಅದಾನಿ ವಿವಾದದ ಕುರಿತಾಗಿ ಮುನ್ನೆಲೆಗೆ ಬಂದಿರುವ
ಯಾವುದೇ ಸಾಂಸ್ಥಿಕ ಚರ್ಚಾವಿಷಯಗಳನ್ನು, ಅಂದರೆ ಅಮೆರಿಕದಲ್ಲಿ ಹೊಮ್ಮಿರುವ ಆರೋಪಗಳು, ‘ಸೆಬಿ’ಯ
ಪಾತ್ರ, ಮತ್ತು ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶ ಇಂಥವುಗಳನ್ನು, ಸದರಿ ಚರ್ಚಾವಿಷಯಗಳಿಂದ ಆಗಿರುವ ರಾಜಕೀಯ ಪ್ರಭಾವದಿಂದ ಪ್ರತ್ಯೇಕಿಸಲು ನಾನು ಬಯಸುತ್ತೇನೆ. ಏಕೆಂದರೆ, ೨೦೧೯ರಲ್ಲಿ ರಫೆಲ್ ಯುದ್ಧ
ವಿಮಾನವನ್ನು ಸುತ್ತುವರಿದಿದ್ದ ಹುಯಿಲು ಹೇಗೋ, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಅದಾನಿ ಸಮೂಹವನ್ನು
ಸುತ್ತುವರಿದಿರುವ ಕೋಲಾಹಲವೂ ಆಗಿದೆ ಎಂಬುದು ಸುಸ್ಪಷ್ಟ. ಜತೆಗೆ, 2019ರಲ್ಲಿ ಕೂಡ ರಫೆಲ್ ವಿವಾದವನ್ನು
ಮುನ್ನೆಲೆಗೆ ತಂದ ಕಾಂಗ್ರೆಸ್ ಪಕ್ಷವು, ಲಭ್ಯವಿರುವ ಪ್ರತಿಯೊಂದು ಅವಕಾಶವನ್ನೂ ಅದಕ್ಕಾಗಿ ಬಳಸಿಕೊಂಡಿತಾ ದರೂ, ಆಗ ಕೂಡ ಪಕ್ಷಕ್ಕೆ ಅದರಿಂದ ಯಾವುದೇ ಚುನಾವಣಾ ಲಾಭವು ದಕ್ಕಲಿಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಉದ್ಯಮಿ ಅದಾನಿಯವರನ್ನೇ ಗುರಿಯಾಗಿಸಿಕೊಂಡು ರಾಹುಲ್ ಗಾಂಧಿಯವರು ಮಾಡುತ್ತಾ ಬಂದಿರುವ ‘ಏಕಂಶದ’ ಆರೋಪವು ಕೂಡ ವಿರೋಧಾಭಾಸಗಳಲ್ಲೇ ಮುಳುಗಿ ಬಿಟ್ಟಿತು.

ವಿಪಕ್ಷಗಳ ಮೈತ್ರಿಕೂಟದ ಬೇರಾವ ಪಕ್ಷಗಳೂ ಈ ಸಂಬಂಧವಾಗಿ ದನಿಗೂಡಿಸಿಲ್ಲ ಎಂಬುದು ಸುಸ್ಪಷ್ಟ. ಈ ಉದ್ಯಮಿಯೊಂದಿಗೆ ಶರದ್ ಪವಾರರಿಗೆ ಇರುವ ಆಪ್ತತೆಯೂ ಬಹಿರಂಗ ಗುಟ್ಟೇ. ಮತ್ತೊಂದೆಡೆ, ಮೈತ್ರಿಕೂಟದ ಮತ್ತೊಬ್ಬ ಸಹಭಾಗಿಯಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿಯವರು ಕೂಡ ಕಾಂಗ್ರೆಸ್‌ನ ಪ್ರತಿಭಟನೆಗಳಿಗೆ ಎಂದಿಗೂ ದನಿಗೂಡಿಸಿಲ್ಲ. ಇಷ್ಟು ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮುಖ್ಯಮಂತ್ರಿಗಳು ಕೂಡ ಅದಾನಿ ಸಮೂಹದ ವಿರುದ್ಧ ತೊಡೆ ತಟ್ಟುವುದಿಲ್ಲ. ‘ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗೂ ಅದಾನಿ ಸಮೂಹಕ್ಕೂ ಇನ್ನಿಲ್ಲದ ಆಪ್ತತೆಯಿದೆ’ ಎಂಬುದಾಗಿ ಸದರಿ ಮುಖ್ಯಮಂತ್ರಿಗಳ ಎದುರಾಳಿಗಳು ಆರೋಪಿಸಿದ್ದು ಈ ವಿಪರ್ಯಾಸದ ಸ್ಥಿತಿಗೆ ಪುಷ್ಟಿನೀಡುತ್ತದೆ.

ಆದರೆ ರಾಹುಲ್ ಗಾಂಧಿಯವರು ಮಾತ್ರ ದೆಹಲಿಯಲ್ಲಿ ಕೂತು, ‘ಅದಾನಿಗೂ ಮೋದಿ ಸರಕಾರಕ್ಕೂ ಹಿತಾಸಕ್ತಿಯ
ನಂಟುಗಳಿವೆ’ ಎಂದೇ ಆರೋಪಿಸುವುದಕ್ಕೆ ಏನನ್ನುವುದು? ಅಷ್ಟಕ್ಕೂ, ಅದಾನಿಯವರನ್ನು ಸುತ್ತುವರಿದಿರುವ
ವಿವಾದಿತ ಚರ್ಚಾವಿಷಯವನ್ನು ಪ್ರಸ್ತಾವಿಸಬೇಕೆಂಬ ಹುಕಿಗೆ ಬಿದ್ದು, ಅಂಬೇಡ್ಕರ್ ಕುರಿತಾಗಿ ಅದಾಗಲೇ ರೂಪು ಗೊಂಡಿದ್ದ ಭಾವನಾತ್ಮಕ ಮತ್ತು ಆವೇಶಭರಿತ ಚರ್ಚೆಯನ್ನು ಕಾಂಗ್ರೆಸ್ ದುರ್ಬಲಗೊಳಿಸಿದ್ದೇಕೆ? ದೇಶದ ಬಹು ಪಾಲು ನಾಗರಿಕರಿಗೆ ‘ಪರಕೀಯ’ ಅಥವಾ ‘ವ್ಯಾಪ್ತಿ ಪ್ರದೇಶದ ಆಚೆಯದ್ದು’ ಎನಿಸಿರುವ, ಸಂಕೀರ್ಣ ಕಾರ್ಪೊ ರೇಟ್ ಚರ್ಚಾವಿಷಯಗಳು/ವಿವಾದಗಳು ಕಾಂಗ್ರೆಸ್ ಪಕ್ಷವನ್ನು ಅಮರಿಕೊಂಡಿರುವಂತೆ ಭಾಸವಾಗುತ್ತಿದೆ ಅಥವಾ ರಾಜಕೀಯ ಧ್ರುವೀಕರಣ ಸಂಬಂಧಿತ ಸೈದ್ಧಾಂತಿಕ ಚರ್ಚೆಗಳ ಒಳಕ್ಕೆ ಅವನ್ನು ಎಳೆತರಲಾಗುತ್ತಿದೆ ಎನಿಸುತ್ತಿದೆ.

ನೂತನ ಸಂಸದೆ ಪ್ರಿಯಾಂಕಾ ಗಾಂಽಯವರು ‘ಪ್ಯಾಲೆಸ್ತೀನ್’ ಎಂಬ ಹೆಸರನ್ನು ಮುದ್ರಿಸಿಕೊಂಡಿರುವ ಚೀಲವನ್ನು ಹೆಗಲಿಗೆ ನೇತುಹಾಕಿಕೊಂಡಿದ್ದ ನಿದರ್ಶನವನ್ನೇ ಉದಾಹರಣೆಯಾಗಿ ಪರಿಗಣಿಸೋಣ. ‘ನನಗಿಷ್ಟವಾದುದನ್ನು
ಧರಿಸಲು/ಒಯ್ಯಲು ನಾನು ಸ್ವತಂತ್ರಳಿದ್ದೇನೆ’ ಎಂಬ ಆಕೆಯ ಮಾತು ಸಹಜವಾಗಿ ಸರಿಯೇ ಇರಬಹುದು. ಆದರೆ, ಸಂಸತ್ತಿನಲ್ಲಿನ ಪ್ರಮುಖ ವಿಪಕ್ಷವೊಂದರ ನಾಯಕಿಯಾಗಿ, ರಾಜಕೀಯ ಹೇಳಿಕೆಯೊಂದನ್ನು ನೀಡಲೆಂದೇ ಅವರು ಆ ಚೀಲವನ್ನು ಹೆಗಲಿಗೆ ನೇತುಹಾಕಿಕೊಂಡಿದ್ದರು ಎಂಬುದು ಸ್ಪಷ್ಟ. ನಮ್ಮ-ನಿಮ್ಮ ದೃಷ್ಟಿಕೋನವನ್ನು ಅವಲಂಬಿಸಿ ಹೇಳುವುದಾದರೆ,

ಪ್ರಿಯಾಂಕಾರ ಆ ವರ್ತನೆ/ಧೋರಣೆಯು ಒಂದೋ ಆಕೆ ಧೈರ್ಯವಾಗಿ ತೋರಿದ ಸಹಾನುಭೂತಿಯಾಗಿದ್ದಿರಬೇಕು
ಅಥವಾ ಬೇಕಿಲ್ಲದ ನಿಷ್ಕಪಟತನದ ಪ್ರದರ್ಶನವಾಗಿರಬೇಕು. ಇಷ್ಟಕ್ಕೇ ಸುಮ್ಮನಾಗದ ಅವರು, ‘ಪ್ಯಾಲೆಸ್ತೀನ್’ ಹೆಸರುಳ್ಳ ಚೀಲವನ್ನು ಸಂಸತ್ತಿಗೆ ಕೊಂಡೊಯ್ದ ದಿನವೇ ಬಾಂಗ್ಲಾದೇಶದ ಹಿಂದೂಗಳ ಸಮಸ್ಯೆಯನ್ನೂ
ಪ್ರಸ್ತಾಪಿಸಿದರು ಹಾಗೂ ಮರುದಿನವೇ ‘ಬಾಂಗ್ಲಾದೇಶ’ ಎಂಬ ಹೆಸರಿದ್ದ ಚೀಲವನ್ನೂ ಸಂಸತ್ತಿಗೆ ಒಯ್ದು, ಎಲ್ಲರ
ಮಾತಿಗೆ ಗ್ರಾಸವಾದರು. ಆದರೆ, ಒಬ್ಬನೇ ಒಬ್ಬ ಮತದಾರನನ್ನೂ ಹೊಸದಾಗಿ ಸೆಳೆಯಲು ಅಸಮರ್ಥವಾಗಿರುವ ಮತ್ತು ಭಾರತದ ತಾಯ್ನೆಲದಲ್ಲಿರುವ ಭಾರತೀಯರ ಬದುಕುಗಳನ್ನು ತಕ್ಷಣಕ್ಕೆ ಪ್ರಭಾವಿಸದ ಇಂಥ ಚರ್ಚಾ ವಿಷಯಗಳ ಮೇಲೆ ‘ರಾಜಕೀಯ ಬಂಡವಾಳ’ವನ್ನು ವಿನಿಯೋಗಿಸುವುದು ಯೋಗ್ಯವೇ? ‘ಇದು ವಾಕ್ಚಾತುರ್ಯ’ ಎಂದೇ ತಾನು ಪರಿಭಾವಿಸಿರುವ, ತನ್ನದೇ ಆದ ಗೊಡ್ಡು ಭಾಷಣಗಳ ಗೋಜಲಿನಲ್ಲಿ ಸಿಲುಕಿಬಿಟ್ಟಿರುವ ಕಾಂಗ್ರೆಸ್ ಪಕ್ಷವು ತನ್ನ ನೈಜ ಸಮಸ್ಯೆಗಳನ್ನು ಮತ್ತು ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲಾಗದೆ ಒದ್ದಾಡುತ್ತಿದೆ; ಹೀಗಿರುವಾಗ ಆ ಪಕ್ಷದ ಸಾಂಸ್ಥಿಕ ರಚನೆ ಸರಿಯಾಗುವುದಾದರೂ ಹೇಗೆ? ಕಾಲಾನುಕಾಲಕ್ಕೆ ಒದಗುವ ಚುನಾವಣೆಗಳನ್ನು ಪಕ್ಷವು ಪರಿಣಾಮಕಾರಿಯಾಗಿ ನಿರ್ವಹಿಸುವುದಾದರೂ ಹೇಗೆ? ಕಾಂಗ್ರೆಸ್‌ನ ಕೆಲ ನಾಯಕ-ನಾಯಕಿಯರು ಆಡುತ್ತಿರುವ ಇಂಥ ‘ನವರಂಗಿ ನಾಟಕಗಳು’ ಪಕ್ಷದ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಉಂಟುಮಾಡಿರಬಹುದು, ನೂರಾರು ಸಾವಿರದಷ್ಟು ‘ಲೈಕುಗಳನ್ನು’ ದಕ್ಕಿಸಿಕೊಂಡಿರಬಹುದು. ಆದರೆ, ‘ಅಖಾಡದಲ್ಲಿ ಹೆಚ್ಚಿನ ಮತ ಗಳಿಸಿ ದವನೇ ಜನಪ್ರತಿನಿಧಿ’ ಎನಿಸಿಕೊಳ್ಳುವ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಇಂಥ ನಡೆಗಳಿಂದ ಏನೂ ಗಿಟ್ಟುವು ದಿಲ್ಲ. ಇಂಥ ಆಟಗಳು ಅವುಗಳನ್ನಾಡಿದವರಿಗೆ ಆತ್ಮತೃಪ್ತಿ ತಂದುಕೊಡಬಹುದೇ ಹೊರತು, ಮತಗಳಾಗಿ ಪರಿವರ್ತನೆ ಗೊಳ್ಳುವುದಿಲ್ಲ ಎಂಬುದು ಅಪ್ರಿಯ ಸತ್ಯ.

ಅದೇನೇ ಇರಲಿ, ಈ ಬಾರಿಯ ಸಂಸತ್ ಅಧಿವೇಶನವಂತೂ ‘ಸಂಪೂರ್ಣ ವಾಷ್-ಔಟ್’ ಎಂಬ ಹಣೆಪಟ್ಟಿ
ಯನ್ನು ದಕ್ಕಿಸಿಕೊಂಡು ಬಿಟ್ಟಿದೆ. ಕೋಟ್ಯಂತರ ಜನರನ್ನು ಕಾಡುತ್ತಿರುವ ಹೊಟ್ಟೆಪಾಡಿನ ಸಮಸ್ಯೆಗಳನ್ನು ಅಥವಾ
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಇಟ್ಟುಕೊಂಡು ಪ್ರಶ್ನೆ ಕೇಳುವ ಮೂಲಕ ವಿಪಕ್ಷಗಳು ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬಹುದಿತ್ತು, ಛೀಮಾರಿ ಹಾಕಬಹುದಿತ್ತು. ಅಂಥದೊಂದು ಅವಕಾಶವನ್ನು ಅವು ಕಳೆದುಕೊಂಡವು ಅಷ್ಟೇ. ಮತ್ತೊಂದೆಡೆ, ಮಮತಾ ಬ್ಯಾನರ್ಜಿಯವರು ‘ಇಂಡಿಯ’ ಮೈತ್ರಿಕೂಟದ ನಾಯಕತ್ವವನ್ನು ವಹಿಸಿಕೊಳ್ಳಬೇಕು ಹಾಗೂ ತನ್ಮೂಲಕ ಒಗ್ಗಟ್ಟನ್ನು ಮೂಡಿಸಬೇಕು ಎಂಬ ಕೂಗುಗಳು ಈ ಮೈತ್ರಿಕೂಟದ ವಿಭಿನ್ನ ಪಕ್ಷಗಳಿಂದಲೇ ಕೇಳಿಬರುತ್ತಿವೆ; ಈ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಅಥವಾ ಒಂದೇ ಸಮನಾಗಿಲ್ಲ ಎಂಬ ಗ್ರಹಿಕೆಗೆ ಈ ಕೂಗುಗಳು ಪುಷ್ಟಿನೀಡುವಂತಿವೆ.

ಒಟ್ಟಾರೆ ಹೇಳುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ ಜಾರ್ಜ್ ಸೊರೋಸ್ ಮತ್ತು ಅದಾನಿ
ಎಂಬಿಬ್ಬರು ವ್ಯಕ್ತಿಗಳ ಮೇಲೆ ಆರೋಪಗಳನ್ನು ಹೊರಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆಯೇ ವಿನಾ, ಗಗನಕ್ಕೇರಿರುವ ಈರುಳ್ಳಿಯ ಬೆಲೆಯನ್ನು ತಹಬಂದಿಗೆ ತರುವ ಕುರಿತಾಗಲೀ ಅಥವಾ ತಂತಮ್ಮ ಮತಕ್ಷೇತ್ರ ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಎಂಬುದರ ಬಗೆಗಾಗಲೀ ತಲೆಕೆಡಿಸಿಕೊಂಡಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ ವಿಪಕ್ಷಗಳು ಮತ್ತದೇ ‘ಚರ್ವಿತ-ಚರ್ವಣ’ ಕಥೆ ಹೇಳುವುದನ್ನು ಬಿಟ್ಟು, ವಿಭಿನ್ನ ಚರ್ಚಾ ವಿಷಯಗಳೆಡೆಗೆ ಗಮನಹರಿಸಬೇಕಿದೆ ಅಥವಾ ಅದೇ ಕಥನವನ್ನೇ ಸಮರ್ಥವಾಗಿ-ಸ್ವಾರಸ್ಯಕರವಾಗಿ ಪ್ರಸ್ತಾಪಿಸ ಬೇಕಿದೆ.

(ಲೇಖಕಿ ಹಿರಿಯ ಪತ್ರಕರ್ತೆ)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ