ನೂರೆಂಟು ವಿಶ್ವ
‘ಆಕಾಶದಲ್ಲಿ ಹಾರುವ ವಿಮಾನವನ್ನು ನೋಡುವುದೆಂದರೆ ನನಗೆ ಇಷ್ಟ. ಅಷ್ಟೊಂದು ಮಂದಿ ಎಲ್ಲಿಗೆ ಹೋಗುತ್ತಾರೆ, ಅಲ್ಲಿ ಏನು ಮಾಡುತ್ತಿ
ದ್ದಿರಬಹುದು ಎಂದು ಯೋಚಿಸುತ್ತೇನೆ. ಆ ವಿಮಾನದಲ್ಲಿ ನಾನೂ ಒಬ್ಬನಾಗಬಾರದಿತ್ತೇ ಎಂದು ಯೋಚಿಸಿ, ನಕ್ಕು ಸುಮ್ಮನಾಗುತ್ತೇನೆ’ -ಅನಾಮಿಕ.
ವಿಮಾನ ಪ್ರಯಾಣದ ಕುರಿತು ಅದರಲ್ಲೂ ಹತ್ತು ಗಂಟೆಗೂ ಹೆಚ್ಚು ಕಾಲದ ವಿಮಾನ ಪ್ರಯಾಣದ ಕುರಿತು ಅನೇಕರಿಗೆ ಅವರದ್ದೇ ಆದ ತಕರಾರು, ಕಿರಿಕಿರಿಗಳಿವೆ. ‘ಅಷ್ಟು ದೂರ ವಿಮಾನದಲ್ಲಿ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ.
ಅದು ನನ್ನಿಂದ ಆಗದ ಕೆಲಸ’ ಎಂದು ಅನೇಕರು ಅಂಥ ವಿಮಾನ ಪ್ರಯಾಣ ಅವಕಾಶವನ್ನು ನಿರಾಕರಿಸಿದ್ದಿದೆ. ಕೆಲವು ವರ್ಷಗಳ ಹಿಂದೆ, ನಾನು ಟೊರಾಂಟೋದಿಂದ ದುಬೈಗೆ ೧೩ ತಾಸು ವಿಮಾನದಲ್ಲಿ ಬರುವಾಗ, ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ, ‘ಈ ವಿಮಾನವನ್ನು ಅದ್ಯಾವ ಮನೆಹಾಳ ಡಿಸೈನ್ ಮಾಡಿದನೋ ಏನೋ? ಮನುಷ್ಯರಿಗೆ ಕಾಲುಗಳಿರುತ್ತವೆ ಎಂಬುದನ್ನು ಮರೆತೇ ಬಿಟ್ಟಿದ್ದಾನೆ’ ಎಂದು ಅಲವತ್ತು ಕೊಂಡಿದ್ದು ನೆನಪಾಗುತ್ತದೆ. ಹತ್ತಾರು ಸಲ ಸುದೀರ್ಘ ಅಂತರದ ವಿದೇಶ ಪ್ರಯಾಣ ಮಾಡಿದವರು, ವಿಮಾನದ ಬಗ್ಗೆ ಒಳಗಿಂದೊಳಗೆ ದ್ವೇಷಭಾವನೆ ಬೆಳೆಸಿಕೊಳ್ಳಲಾ ರಂಭಿಸುತ್ತಾರೆ.
ಹಣ ಖರ್ಚಾಗುತ್ತದೆ ಎಂಬುದಕ್ಕಿಂತ, ಹತ್ತಕ್ಕಿಂತ ಹೆಚ್ಚು ಗಂಟೆ ಕಾಲ ವಿಮಾನದಲ್ಲಿ ಕುಳಿತುಕೊಳ್ಳುವುದೇ ಯಾತನಾಮಯ ಎಂಬ ನಿರ್ಧಾರಕ್ಕೆ ಬಂದಿರು ತ್ತಾರೆ. ಇಂಥವರು ಈ ಕಾರಣಕ್ಕೆ ಒಳ್ಳೊಳ್ಳೆಯ ಅವಕಾಶಗಳನ್ನು ತಪ್ಪಿಸಿಕೊಳ್ಳುತ್ತಾರೆ. ಇಂಥವರು ವಿಮಾನ ಪ್ರಯಾಣವನ್ನು ಹೇಗೆ ಅನುಭವಿಸ ಬೇಕು, ಅದರ ಆನಂದ ಸವಿಯುವುದು ಹೇಗೆ ಎಂಬುದನ್ನು ಅರಿಯದವರು. ಅಷ್ಟೇ ಅಲ್ಲ, ಇವರು ಜೀವನ ಪರ್ಯಂತ ಇಕಾನಮಿ ಕ್ಲಾಸಿನಲ್ಲಿಯೇ ಪ್ರಯಾಣ ಮಾಡುವವರು.
ಅಸಲಿಗೆ, ಬಹುತೇಕ ಮಂದಿ ಅಂದುಕೊಂಡಂತೆ, ವಿಮಾನ ಪ್ರಯಾಣ ಯಾತನಾಮಯವಲ್ಲ. ಯಾವ ಏರ್‌ಲೈನ್ಸ್ ಕೂಡ ಪ್ರಯಾಣಿಕರಿಗೆ ತೊಂದರೆ ಯಾಗಲಿ ಎಂಬ ಕಾರಣಕ್ಕೆ ವಿಮಾನ ವನ್ನು ಡಿಸೈನ್ ಮಾಡಿರುವುದಿಲ್ಲ. ಪ್ರಯಾಣಿಕರಿಗೆ ಗರಿಷ್ಠ ಸೌಲಭ್ಯ ನೀಡಿ ಅವರ ಪ್ರಯಾಣವನ್ನು ಸುಖಕರ ಮಾಡುವುದು ಹೇಗೆ ಎಂದು ಆಲೋಚಿಸಿರುತ್ತವೆ ಮತ್ತು ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ತಮ್ಮ ಸೇವೆಯನ್ನು ಉತ್ತಮಪಡಿಸಲು ಹೆಣಗುತ್ತಿರುತ್ತವೆ. ಕಳೆದ ೧೮ ವರ್ಷಗಳಿಂದ ಟ್ರಾವೆಲ್ ಸಂಸ್ಥೆ ನಡೆಸುತ್ತಿರುವ ನನ್ನ ಸ್ನೇಹಿತರೊಬ್ಬರು ತಮ್ಮ ಆಫೀಸಿನಲ್ಲಿ ಹಾಕಿರುವ Good things come to those who book
flight ಎಂದು ಬರೆದಿರುವ ಫಲಕವನ್ನು ನೋಡಿ ದಾಗ, ವಿಮಾನ ಪ್ರಯಾಣದ ಸುಂದರ ಚಿತ್ರಣ ಕಣ್ಮುಂದೆ ಬಂದಂತಾಗುತ್ತದೆ (ಆ ಫಲಕವನ್ನು ನೋಡಿ ದಾಗಲೆಲ್ಲ ಅವರು, ನಾನು ಆಗಾಗ ಹೇಳುವ You can’t buy happiness but you can buy a plane ticket and that’s kind of the same thing ಎಂಬ ವಾಕ್ಯವನ್ನೂ ನೆನಪಿಸಿಕೊಳ್ಳುತ್ತಾರಂತೆ).
ಬಹಳ ಜನ ಆಗಾಗ sky is the limit ಎಂದು ಹೇಳುತ್ತಿರುತ್ತಾರೆ. ಆದರೆ ವಿಮಾನವನ್ನು ಇಷ್ಟಪಡುವವರಿಗೆ Sky is Home. ನೀವು ಮದುವೆಯಾಗುವು ದಕ್ಕಿಂತ ಮುಂಚೆ ಸಿಂಗಲ್ ಆಗಿದ್ದಾಗ ಸಂತೋಷವಾಗಿರದಿದ್ದರೆ, ಮದುವೆಯಾದ ನಂತರ ಸಂತೋಷದಿಂದ ಇರುತ್ತೀರಿ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಸಂತೋಷ ಎಂಬುದು ಪ್ರಯಾಣದಿಂದ ಸಿಗುವಂಥದ್ದು. ಅದಕ್ಕೆ ವಿಮಾನವನ್ನು ದೂಷಿಸಿ ಫಲವಿಲ್ಲ. ಹೀಗಾಗಿ ವಿಮಾನ ಯಾನವನ್ನು ಹೆಚ್ಚು ಹೆಚ್ಚು ಇಷ್ಟಪಡುವುದು ಹೇಗೆ, ಅದನ್ನು ಇನ್ನಷ್ಟು ಸಹ್ಯವಾಗಿಸಿಕೊಳ್ಳುವುದು ಹೇಗೆ, ವಿಮಾನ ಪ್ರಯಾಣದಿಂದ ಗರಿಷ್ಠ ಪ್ರಯೋಜನ ಪಡೆಯುವುದು ಹೇಗೆ ಎಂದು ಯೋಚಿಸಬೇಕೇ ಹೊರತು, ವಿಮಾನಯಾನವನ್ನು ಹಳಿಯುವುದಲ್ಲ.
ಇದು ಒಂಥರಾ ಹಣ ಕೊಟ್ಟು ಬೇಸರ ತರಿಸಿಕೊಂಡ ಹಾಗೆ. ಸ್ಮರಣೀಯವಾಗುವ ಒಂದು ನೆನಪನ್ನು, ಅನುಭವ ವನ್ನು ಕೈಯಾರ ಕಹಿಯಾಗಿಸಿ ಕೊಂಡಂತೆ. ಕೆಲವು ದಿನಗಳ ಹಿಂದೆ, ನನ್ನ ಪರಿಚಿತರೊಬ್ಬರು ನ್ಯೂಯಾರ್ಕಿನಿಂದ ಸಿಂಗಾಪುರಕ್ಕೆ ೧೯ ಗಂಟೆ ಪ್ರಯಾಣ ಮಾಡಿ, ನಂತರ ಸಿಂಗಾಪುರ ದಿಂದ ಬೆಂಗಳೂರಿಗೆ ಇಕಾನಮಿ ಕ್ಲಾಸಿನಲ್ಲಿ ನಾಲ್ಕೂವರೆ ಗಂಟೆ ಪ್ರಯಾಣ ಮಾಡಿ ಆಗಮಿಸಿದ್ದರು. ಅವರನ್ನು ಭೇಟಿಯಾಗುತ್ತಿದ್ದಂತೆ, ತಮ್ಮ ವಿಮಾನಯಾನದ ಯಾತನೆಯ ಬಗ್ಗೆ ಸುಮಾರು ೧೫ ನಿಮಿಷ ಬಣ್ಣಿಸಿದರು.
‘ಇನ್ನು ಜನ್ಮದಲ್ಲಿ ವಿಮಾನಯಾನ ಮಾಡುವುದಿಲ್ಲ. ವಿಮಾನ ಪ್ರಯಾಣ ಅಂದ್ರೆ ಘೋರಶಿಕ್ಷೆ’ ಎಂದು ಹಲುಬಿದರು. ಏರ್‌ಲೈನ್ಸ್‌ನ್ನು ಕೆಟ್ಟದಾಗಿ
ಹಳಿದರು. ಅಲ್ಲಿ ಕೊಟ್ಟ ಆಹಾರ ಅದೆಷ್ಟು ಕೆಟ್ಟದಾಗಿತ್ತು ಎಂಬುದನ್ನು ತಮ್ಮದೇ ರೀತಿಯಲ್ಲಿ ವರ್ಣಿಸಿದರು. ಒಟ್ಟಾರೆ ಅವರಿಗೆ ತಮ್ಮ ವಿಮಾನ ಪ್ರಯಾಣದ ಹಿತಾನುಭವವನ್ನು ಹೇಳಲು ಯಾವ ಒಳ್ಳೆಯ ಅಂಶಗಳೂ ಇರಲಿಲ್ಲ. ಹಾಗಂತ ಅವರೇನು frequent flyer ಅಲ್ಲ. ವರ್ಷದಲ್ಲಿ ೨-೩ ಸಲ ವಿದೇಶಗಳಿಗೆ ಹೋಗುವವರು. ನಾನು ಅವರ ‘ಪ್ರವರ’ವನ್ನು ಕೇಳುವಷ್ಟು ಕೇಳಿದೆ. ನಂತರ ಪೂರ್ಣವಿರಾಮ ಹಾಕುವ ಮುನ್ನ, ‘ನೀವು ಆ ೨೪ ಗಂಟೆ ಪ್ರಯಾಣದಲ್ಲಿ ಯಾವ ಡ್ರೆಸ್ ಧರಿಸಿ ದ್ದಿರಿ?’ ಎಂದು ಸಹಜವಾಗಿ ಕೇಳಿದೆ.
ಅದಕ್ಕೆ ಅವರು ತಾವು ಜೀನ್ಸ್ ಪ್ಯಾಂಟ್, ಜರ್ಕಿನ್ ಧರಿಸಿದ್ದಾಗಿ ತಿಳಿಸಿದರು. ‘ನಿಮ್ಮ ಪ್ರಯಾಣ ಅಸಹನೀಯವಾಗಲು ಅಷ್ಟೇ ಸಾಕು’ ಎಂದೆ. ಅದಕ್ಕೆ ಅವರು, ‘ನೀವು ಹೇಳುವುದೇನು? ನನಗೆ ಅರ್ಥವಾಗಲಿಲ್ಲ’ ಎಂದರು. ‘ವಿಮಾನ ಪ್ರಯಾಣ ನಾಲ್ಕು ಗಂಟೆಗಿಂತ ಹೆಚ್ಚು ಅವಧಿಯದ್ದಾಗಿದ್ದರೆ, ಯಾವತ್ತೂ ಜೀನ್ಸ್ ಪ್ಯಾಂಟ್ ಧರಿಸಲೇಬಾರದು. ಅದರ ಬದಲು ಸಾಧ್ಯವಾದಷ್ಟು ತೆಳುವಾದ, ದೊಗಳೆ ಪ್ಯಾಂಟ್, ಪೈಜಾಮ, ಟ್ರ್ಯಾಕ್‌ಸೂಟ್, ಲೆಗಿಂಗ್ಸ್, ಕಾಟನ್
ಟಿ-ಶರ್ಟ್, ಲೈಟ್ ವೇಟ್ ಸ್ವೇಟರ್, ಬರ್ಮುಡಗಳನ್ನು ಧರಿಸಬಹುದು. ಈ ಮಾತು ಮಹಿಳೆಯರಿಗೂ ಅನ್ವಯ. ವಿಮಾನದಲ್ಲಿ ನೀವು ಯಾವ ಡ್ರೆಸ್ ಧರಿಸಿದ್ದೀರಿ ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ನೀವು ಅದೆಷ್ಟೇ ಗಣ್ಯವ್ಯಕ್ತಿ ಯಾಗಿರಲಿ, ವಿಮಾನದಲ್ಲಿ ಇಂಥದೇ ಡ್ರೆಸ್ ಧರಿಸಬೇಕು ಎಂಬ ನಿಯಮವಿಲ್ಲ, ಡ್ರೆಸ್‌ಕೋಡ್ ಇಲ್ಲ. ನೀವು ಏನನ್ನು
ಧರಿಸುತ್ತೀರೋ ಅದೇ ಫ್ಯಾಷನ್. ಅನೇಕರಿಗೆ ಜೀನ್ಸ್ ಪ್ಯಾಂಟ್ ಬಗ್ಗೆ ಮೋಹ. ಆದರೆ ಆ ಮೋಹವನ್ನು ವಿಮಾನದಲ್ಲೂ ಮುಂದುವರಿಸಿ, ತಮಗೆ ತಾವೇ ಅನ್ಯಾಯ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಏಳೆಂಟು ಗಂಟೆ ವಿಮಾನ ಪ್ರಯಾಣ ದಲ್ಲಿ ಕೋಟು, ಟೈ ಧರಿಸಿ ಬೋರ್ಡ್ ಮೀಟಿಂಗಿಗೆ ಬರುವ ರೀತಿಯಲ್ಲಿ ಟಿಪ್‌ಟಾಪ್ ಆಗಿ ಬಂದಿರುತ್ತಾರೆ. ಅಂಥವರನ್ನು ಕಂಡಾಗ, ಮೈಸೂರು ಪೇಟಾ ಒಂದು ಕಮ್ಮಿಯಿತ್ತು ಅನಿಸುತ್ತದೆ. ಯಾವತ್ತೂ ನೀಟಾಗಿ ಇರುವುದು ಕೆಲವರ ಜಾಯಮಾನ. ಅಂಥವರು ವಿಮಾನದಲ್ಲೂ ಹಾಗೆ ಇದ್ದು ತಮಗೆ ಕಷ್ಟ ತಂದುಕೊಳ್ಳುತ್ತಾರೆ. ನೀವೂ ಎಲ್ಲರೂ ಮಾಡುವ ತಪ್ಪನ್ನೇ
ಮಾಡಿದ್ದೀರಿ’ ಎಂದು ಹೇಳಿದೆ.
ವಿಮಾನ ಪ್ರಯಾಣದಲ್ಲಿ ಎಲ್ಲರೂ ಮಾಡುವ ಇನ್ನೊಂದು ತಪ್ಪು ಅಂದ್ರೆ ಹೊಸ ಚಪ್ಪಲಿ ಅಥವಾ ಹೊಸ ಷೂ ಹಾಕಿಕೊಂಡು ಹೋಗುವುದು. ಇದರಂಥ ವೇದನೆ ಮತ್ತೊಂದಿಲ್ಲ. ವಿಮಾನ ನಿಲ್ದಾಣದಲ್ಲಿ ಎಷ್ಟು ನಡೆಯಬೇಕಾಗುತ್ತದೆ ಎಂಬ ಕಲ್ಪನೆ ಅನೇಕರಿಗೆ ಇರುವುದಿಲ್ಲ. ಕೆಲವು ಸಲ ಮೂರ್ನಾಲ್ಕು ಕಿ.ಮೀ. ನಡೆಯಬೇಕಾಗುತ್ತದೆ. ಸಮತಟ್ಟಾದ, ಆ ಗಟ್ಟಿನೆಲದ ಮೇಲೆ ಅರ್ಧ ಕಿ.ಮೀ. ನಡೆದರೆ ಸಾಕು, ಕಾಲು ಕಿರುಚಲಾರಂಭಿಸುತ್ತದೆ. ಹೀಗಿರುವಾಗ ಹೊಸ ಷೂ ಧರಿಸಿ ಹೋದರೆ ಮುಗಿದೇ ಹೋಯಿತು ಕಥೆ! ಅದರಲ್ಲೂ ಲೇಸ್ ಇರುವ ಷೂ ಪ್ರಯಾಣಕ್ಕೆ ಯೋಗ್ಯವಲ್ಲ. ಇದು ತೀರಾ ಸಣ್ಣ ಸಂಗತಿ
ಯೆಂದು ಅನಿಸಬಹುದು. ಪ್ರಯಾಣದ ಸುಖವನ್ನು ಗಾಳು ಮೇಳು ಮಾಡಲು ಇಂಥ ಸಂಗತಿಗಳೇ ಸಾಕು.
ಇನ್ನು ಕೆಲವರು ಸ್ಪೋರ್ಟ್ಸ್ ಷೂ ಧರಿಸಿ ಬಂದಿರುತ್ತಾರೆ ಮತ್ತು ಪ್ರಯಾಣದಲ್ಲಿ ಅವನ್ನು ಬಿಚ್ಚಿಡುವುದಿಲ್ಲ. ಬಿಚ್ಚಿದರೆ ಕಟ್ಟಿಕೊಳ್ಳುವುದು ಕಷ್ಟವೆಂದು ಪ್ರಯಾಣದುದ್ದಕ್ಕೂ ಧರಿಸಿಯೇ ಇರುತ್ತಾರೆ. ೧೦-೧೨ ಗಂಟೆ ಷೂ ಕಟ್ಟಿಯೇ ಇದ್ದರೆ, ಅದರಂಥ ಅಹಿತಕರ ಅನುಭವ ಮತ್ತೊಂದಿಲ್ಲ. ಹೀಗಾಗಿ ವಿಮಾನದಲ್ಲಿ ನಾವು ಹೇಗಿರುತ್ತೇವೆ, ಏನು ಧರಿಸಬೇಕು ಎಂಬುದು ಬಹಳ ಮುಖ್ಯ. ವಿಮಾನದಲ್ಲಿ ನೈಟ್ ಡ್ರೆಸ್‌ನಂಥ ಪ್ರಶಸ್ತವಾದ ದಿರಿಸು ಮತ್ತೊಂದಿಲ್ಲ. ಆದರೆ ಕೆಲವರಿಗೆ ಅದನ್ನು ಧರಿಸಲು ಸಂಕೋಚ. ಹೀಗಾಗಿ ಮದುವೆ ಗಂಡಿನಂತೆ ಬಂದಿರುತ್ತಾರೆ.
೧೦-೧೨ ಗಂಟೆ ಅಥವಾ ಅದಕ್ಕಿಂತ ದೀರ್ಘ ಪ್ರಯಾಣದಲ್ಲಿ ವಿಮಾನವನ್ನು ನಮ್ಮ ಮನೆಯೆಂದು ಭಾವಿಸಬೇಕು. ಯಾವುದಕ್ಕೂ ಸಂಕೋಚ ಮಾಡಿ ಕೊಳ್ಳಬಾರದು. ಈ ಮಾತು ಇಕಾನಮಿ ಕ್ಲಾಸಿನ ಪ್ರಯಾಣಿಕರಿಗೂ ಅನ್ವಯ. ನಿಮಗೆ ನೀಡಿದ ಆಸನ ಹಿತಕರವಾಗಿಲ್ಲದಿದ್ದರೆ, ವಿಮಾನದಲ್ಲಿ ಆಸನ
ಖಾಲಿ ಇದ್ದರೆ, ಆಸನವನ್ನು ಬದಲಿಸಿಕೊಡುವಂತೆ ಗಗನಸಖಿ ಯರಿಗೆ, ಪರಿಚಾರಕರಿಗೆ ಹೇಳಬಹುದು. ಕೊನೆಕ್ಷಣದಲ್ಲಿ ಅನೇಕರು ತಮ್ಮ ಪ್ರಯಾಣವನ್ನು ರದ್ದುಪಡಿಸುವುದರಿಂದ ಆಸನಗಳಿರುತ್ತವೆ. ಆದರೆ ಅನೇಕರು ಸಂಕೋಚದಿಂದ ಆಸನ ಬದಲಿಸಲು ಕೇಳುವುದಿಲ್ಲ. ನೀವು ಹೇಗೆ ಮಾತಾಡುತ್ತೀರಿ,
ವಿನಂತಿಸಿಕೊಳ್ಳುತ್ತೀರಿ ಎಂಬುದಷ್ಟೇ ಮುಖ್ಯ. ಕೆಲವು ಸಲ ಮಧ್ಯದಲ್ಲಿ ಯಾರೂ ಕುಳಿತುಕೊಳ್ಳದ ಕೊನೆಯ (Aisle) ಸೀಟು ಸಿಗಬಹುದು. ಆಗ ಎರಡು ಸೀಟುಗಳನ್ನು ಆಕ್ರಮಿಸಿ ಕೊಳ್ಳಬಹುದು.
ಮೊದಲು ನಿಮಗೆ ನೀಡಿದ ಸೀಟಿನಲ್ಲಿ ಪವಡಿಸಿಯೇ ಪ್ರಯಾಣ ಮಾಡಬೇಕು ಎಂಬ ನಿಯಮವೇನಿಲ್ಲ. ಆದರೂ ದೀರ್ಘ ಪ್ರಯಾಣದಲ್ಲಿ ನಾವು ಕುಳಿತುಕೊಳ್ಳುವ ಸೀಟನ್ನು ಕಾಳಜಿಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳುವುದು ಜಾಣತನ. ಇದಕ್ಕಾಗಿ SeatGuru ಸೇರಿದಂತೆ ಹಲವು ವೆಬ್‌ಸೈಟ್
ಗಳಿವೆ. ಅಲ್ಲಿ ಸೀಟನ್ನು ಕಾಯ್ದಿರಿಸಿಕೊಳ್ಳಬಹುದು. ಅನೇಕರು ಅಂಡು ಊರುವ ಜಾಗದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಕಾಲನ್ನು ಚಾಚಿಕೊಳ್ಳಲು ಸಾಕಷ್ಟು ಜಾಗವಿರುವ ಆಸನಗಳನ್ನು ಕಾಯ್ದಿರಿಸಿಕೊಳ್ಳುವುದೂ ಅಷ್ಟೇ ಮುಖ್ಯ. ದೀರ್ಘ ಪ್ರಯಾಣದಲ್ಲಿ ಕಿಟಕಿ ಅಥವಾ ಕೊನೆಯ ಸೀಟ್ (Aisle) ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಯಾವ ಕಾರಣಕ್ಕೂ ‘ಮಧ್ಯ’ಸ್ಥರಾಗಲೇಬಾರದು. ಕಿಟಕಿಯ ಪಕ್ಕ ಕುಳಿತರೆ, ಅದಕ್ಕೆ ಒರಗಿ ನಿದ್ರಿಸಬಹುದು. aisle seat ಅಂದ್ರೆ ಕಾರ್ನರ್ ಸೈಟ್ ಇದ್ದ ಹಾಗೆ!
ನೀವು ಆಗಾಗ ವಿದೇಶ ಪ್ರಯಾಣ ಮಾಡುವವರಾಗಿದ್ದರೆ TSA PreCheck ಸದಸ್ಯತ್ವ ಪಡೆಯಬಹುದು. ಇದರಿಂದ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್‌ನಲ್ಲಿ ಅನುಭವಿಸುವ ಕಿರಿಕಿರಿಗಳಿಂದ ಪಾಸಾಗಬಹುದು. ಈ ಸದಸ್ಯತ್ವ ಹೊಂದಿದ್ದರೆ ನೀವು ಸೆಕ್ಯೂರಿಟಿಯಲ್ಲಿ ಪಾಸಾಗುವಾಗ ನಿಮ್ಮ ಬೂಟು, ಬೆಲ್ಟ್, ಜಾಕೆಟ್, ಕೋಟ್, ವಾಚ್ ಬಿಚ್ಚಬೇಕಿಲ್ಲ. ಲ್ಯಾಪ್‌ಟಾಪ್, ಐಪ್ಯಾಡ್ ಬ್ಯಾಗಿನಿಂದ ತೆಗೆದಿಡಬೇಕಿಲ್ಲ. ಅತ್ತರು, ನೀರಿನ ಬಾಟಲಿಯನ್ನು ಬಿಸಾಡಬೇಕಿಲ್ಲ. ಸೆಕ್ಯೂರಿಟಿ ಚೆಕ್‌ನಲ್ಲಿನ ಉದ್ದದ ಕ್ಯೂನಲ್ಲಿ ನಿಲ್ಲಬೇಕಿಲ್ಲ. ಭದ್ರತಾ ಸಿಬ್ಬಂದಿ ನಿಮ್ಮನ್ನು ಗುರಾಯಿಸುವುದಿಲ್ಲ. ೫ ವರ್ಷಕ್ಕೆ ೧೦೦ ಅಮೆರಿಕನ್ ಡಾಲರ್ ಕೊಟ್ಟು ಸದಸ್ಯರಾದರೆ, ಸೆಕ್ಯೂರಿಟಿ ಚೆಕ್ ಎಂಬ ‘ಗಾಜಾಪಟ್ಟಿ’ ನಿರಾತಂಕ!
ನಿಮ್ಮ ವಿಮಾನ ಪ್ರಯಾಣವನ್ನು ಆಹ್ಲಾದಕರವಾಗಿಸುವಲ್ಲಿ TSA PreCheck ವ್ಯವಸ್ಥೆ ಗಣನೀಯ ಕೊಡುಗೆ ನೀಡಬಲ್ಲುದು. ವಿಮಾನವೇರುವುದ
ಕ್ಕಿಂತ ಮುಂಚೆಯೇ ಮೂಡ್ ಔಟ್ ಆಗುವುದೇ ಇಲ್ಲಿ. ಇತ್ತೀಚಿನ ದಿನಗಳಲ್ಲಿ TSA PreCheck ವ್ಯವಸ್ಥೆಯಿರುವ ವಿಮಾನ ನಿಲ್ದಾಣಗಳು ಹೆಚ್ಚಾಗುತ್ತಿವೆ. ಅಮೆರಿಕದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಮಾನದಲ್ಲಿನ ಆಹಾರ ಎಲ್ಲರಿಗೂ ಸೇರುವುದಿಲ್ಲ. ಅಲ್ಲಿ ನಿಮ್ಮ ಅಮ್ಮನೋ, ಪತ್ನಿಯೋ ಅಡುಗೆ ಮಾಡಿ ಬಡಿಸುವುದಿಲ್ಲ. ವಿದೇಶ ಪ್ರಯಾಣಕ್ಕೆಂದು ತಯಾರಿಸುವ ಆಹಾರಗಳು ಸಹ ಭದ್ರತಾ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದ್ದರಿಂದ, ಅದರ ಪಾಲನೆಗೆ ಸಾಕಷ್ಟು ಸಮಯ ಹಿಡಿಯುತ್ತದೆ.
ಹೀಗಾಗಿ ವಿಮಾನ ಹಾರುವುದಕ್ಕಿಂತ ಕನಿಷ್ಠ ೨ ದಿನಗಳ ಮುನ್ನ ಅವನ್ನು ಸಿದ್ಧಪಡಿಸಿರುತ್ತಾರೆ. ವಿಮಾನದಲ್ಲಿ ಅವನ್ನು ಬಿಸಿ ಮಾಡಿಕೊಡುತ್ತಾರೆ. ಹೀಗಾಗಿ ನಾವು ಸೇವಿಸುವ ಆಹಾರ ತಾಜಾ ಆಗಿರುವುದಿಲ್ಲ. ಹಾಗಂತ ಅಲ್ಲಿ ನೀಡುವ ಆಹಾರ ಅಪಾಯಕಾರಿ ಎಂದಲ್ಲ. ೧೫ ಗಂಟೆ ವಿಮಾನ ಪ್ರಯಾಣದಲ್ಲಿ
ನಾಲ್ಕೈದು ಬಾರಿ ಊಟ-ತಿಂಡಿ ನೀಡುತ್ತಾರೆ. ಆ ಆಹಾರ ವನ್ನು ಮನೆಯಲ್ಲಿ ನೀಡಿದ್ದರೆ ಅನೇಕರು ತಮ್ಮ ಪತ್ನಿಗೆ ಡೈವೋರ್ಸ್ ನೀಡಿರುತ್ತಿದ್ದರು. ಕೆಲವೊಮ್ಮೆ ಸುಖಪ್ರಯಾಣಕ್ಕೆ ಸಂಚಕಾರ ಅಲ್ಲಿನ ಆಹಾರಗಳೇ. ಕೆಲವೊಮ್ಮೆ ವಿಮಾನದಲ್ಲಿ ನೀಡುವ ಆಹಾರ ಸಾಕಾಗುವುದಿಲ್ಲ. ನೀವು ಬಯಸಿದ್ದು
ಸಿಗುವುದೇ ಇಲ್ಲ. ಅಂಥ ಪ್ರಸಂಗದಲ್ಲಿ ಕತ್ತರಿಸಿದ ಹಣ್ಣುಗಳನ್ನುಆರ್ಡರ್ ಮಾಡಿ ತರಿಸಿಕೊಳ್ಳಬಹುದು. ನೀವು ಆಹಾರದ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳು ವವರಾದರೆ, ವಿಮಾನ ನಿಲ್ದಾಣದಲ್ಲಿ ನಿಮಗೆ ಬೇಕಾದ ಆಹಾರಗಳನ್ನು ಸೇವಿಸುವುದು ಅಥವಾ ಪೊಟ್ಟಣ ಕಟ್ಟಿಸಿಕೊಳ್ಳುವುದು ಒಳ್ಳೆಯದು.
ಕೆಲವರು ಮನೆಯಿಂದಲೇ ಪುಳಿಯೋಗರೆ, ಮೊಸರನ್ನ ಕಟ್ಟಿಸಿಕೊಂಡು ಬರುತ್ತಾರೆ. ಒಮ್ಮೊಮ್ಮೆ ತಲೆಕೆಟ್ಟ ಸೆಕ್ಯುರಿಟಿಯವರು ಅದನ್ನು ಕಸದ ಬುಟ್ಟಿಗೆ ಎಸೆಯುವುದುಂಟು. ವಿಮಾನ ಪ್ರಯಾಣವನ್ನು ಎಂಜಾಯ್ ಮಾಡಬೇಕು ಅಂದ್ರೆ ನಿಮ್ಮ ಮೊಬೈಲ್, ಲ್ಯಾಪ್‌ಟಾಪ್, ಐಪ್ಯಾಡ್, ಕಿಂಡಲ್ ಅಥವಾ ಇಲೆಕ್ಟ್ರಾನಿಕ್ ಸಾಧನಗಳು ಫುಲ್ ಚಾರ್ಜ್ ಆಗಿರ ಬೇಕು. ಈಗ ಸಾಮಾನ್ಯವಾಗಿ ಎಲ್ಲ ವಿಮಾನದಲ್ಲೂ ಸೀಟಿನ ಮುಂಭಾಗದಲ್ಲಿಯೇ ಚಾಜಿಂಗ್ ಪಾಯಿಂಟುಗಳಿರುತ್ತವೆ. ಆದರೆ ಬಹುತೇಕ ವಿಮಾನಗಳಲ್ಲಿ ಅವು ಕೆಲಸ ಮಾಡುವುದಿಲ್ಲ. ಹೀಗಾಗಿ ನೀವು ಇಟ್ಟುಕೊಳ್ಳುವ ಪವರ್ ಬ್ಯಾಂಕ್ ನಿಮ್ಮ
ಪ್ರಯಾಣದ ಮಜಾವನ್ನು ನಿರ್ಧರಿಸಬಹುದು. ಹೊರಗಿನ ಗದ್ದಲದ ತೀವ್ರತೆ ಕುಗ್ಗಿಸುವ (Noise Cancelling) ಹೆಡ್ ಫೋನ್ ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಖದಾಯಕವಾಗಿಸಬಹುದು. ನೂರಾರು ಪುಸ್ತಕಗಳಿರುವ ಕಿಂಡಲ್, ವಿಮಾನದಲ್ಲಿ ನಿಮಗೊಂದು ಖಾಸಗಿ ಗ್ರಂಥಾಲಯವನ್ನು ತೆರೆದಿಡ ಬಹುದು.
ಇನ್ನು ವಿಮಾನದಲ್ಲಿ ಕನಿಷ್ಠ ನೂರು ಸಿನಿಮಾ ಗಳಿರುವ ಮನರಂಜನಾ ವ್ಯವಸ್ಥೆಯಿರುತ್ತದೆ. ನಮಗೆ ಬೇಕಾದ ಸಿನಿಮಾ ನೋಡಬಹುದು. ಆದರೂ ಯಾವುದಕ್ಕೂ ಇರಲೆಂದು ನಮಗೆ ಬೇಕಾದ ಸಿನಿಮಾಗಳನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು. ವಿಮಾನದಲ್ಲಿ ಇರುವುದು pressurized air. ಇದರಿಂದ ನಮ್ಮ ಚರ್ಮ ಬಹಳ ಬೇಗ ಒಣಗುತ್ತದೆ, ತುಟಿ ಒಡೆಯುತ್ತದೆ. ದೀರ್ಘ ಪ್ರಯಾಣದ ನಂತರ ನಿಮ್ಮ ಮುಖ ನೋಡಿ ಕೊಂಡರೆ ಸ್ಯಾಂಡ್ ಪೇಪರಿನಲ್ಲಿ ಮುಖ ಒರೆಸಿಕೊಂಡ ಹಾಗೆ ಕಾಣುತ್ತದೆ. ಈ ಕಾರಣದಿಂದ skin moisturizer ಮತ್ತು Lip balm ಅನ್ನು ಇಟ್ಟುಕೊಳ್ಳ ಬೇಕು. ಅದರಲ್ಲೂ ಹೆಂಗಸರು ಯಾವುದೇ ಮೇಕಪ್ ಮಾಡಿಕೊಳ್ಳದಿದ್ದರೆ ಒಳ್ಳೆಯದು.
ಒಂದು ವೇಳೆ ಮಾಡಿಕೊಂಡರೆ, ಬರಪೀಡಿತ ಪ್ರದೇಶ ದಲ್ಲಿನ ಭೂಮಿಯಂತೆ ಹೆಂಗಸರ ಮುಖ ಕಾಣಿಸಬಹುದು. ಮೇಲ್ನೋಟಕ್ಕೆ ವಿಮಾನ ಸುಂದರವಾಗಿ ಕಾಣಬಹುದು. ಆದರೆ ಅದರಲ್ಲಿ ಆಗಲೇ ಲಕ್ಷಾಂತರ ಜನ ಪ್ರಯಾಣಿಸಿರುತ್ತಾರೆ. ಎಲ್ಲ ಪ್ರಯಾಣದ ಕೊನೆಯಲ್ಲಿ ವಿಮಾನದ ಆಸನಗಳನ್ನೆಲ್ಲ ಸ್ವಚ್ಛ ಗೊಳಿಸುತ್ತಾರೆಂದೇನೂ ಇಲ್ಲ. ಹೀಗಾಗಿ ಮೊದಲು ಕುಳಿತ ವನ ಬೆವರು ನಿಮಗೂ ಅಂಟಿಕೊಳ್ಳಬಹುದು. ಹೋಟೆಲಿನ ತಲೆದಿಂಬನ್ನು ತೊಳೆದಿರುತ್ತಾರೆ. ಆದರೆ ವಿಮಾನದ ಆಸನ ಗಳನ್ನು ಯಾರು ತೊಳೆಯುತ್ತಾರೆ? ಹೀಗಾಗಿ ವಿಮಾನ ಲ್ಯಾಂಡ್ ಆಗುವುದಕ್ಕೆ ಕೆಲ ಸಮಯ ಮೊದಲು, ಟಾಯ್ಲೆಟ್‌ಗೆ ಹೋಗಿ ಶರ್ಟ್ ಬದಲಿಸಿಕೊಳ್ಳುವುದು ಒಳ್ಳೆಯದು.
ಆಗಲೇ ಹಲ್ಲುಜ್ಜಿ ಬಂದರೆ ಇನ್ನೂ ಫ್ರೆಶ್ ಆಗಬಹುದು. ಇವೆಲ್ಲ ಸಣ್ಣ ಸಣ್ಣ ಸಂಗತಿಗಳೆಂದು ಅನಿಸಬಹುದು. ಆದರೆ ಅನೇಕರು ಇವನ್ನೂ ಮಾಡುವು ದಿಲ್ಲ. ಈ ಸಣ್ಣ ಸಂಗತಿಗಳೇ ನಮ್ಮ ಪ್ರಯಾಣದ ಮಜಾವನ್ನು ಹೆಚ್ಚಿಸುವ ಅಂಶಗಳಾಗಿರುತ್ತವೆ ಎಂಬುದು ಸುಳ್ಳಲ್ಲ. ಅನೇಕರು ೧೦-೧೫ ಗಂಟೆ ವಿಮಾನ ದಲ್ಲಿ ನರಕದ ವಾತಾವರಣ ಅನುಭವಿಸುತ್ತಾರೆ. ಪರಪ್ಪನ ಅಗ್ರಹಾರ ದಲ್ಲಿರುವವರು ಇನ್ನೂ ಆರಾಮಾಗಿರುತ್ತಾರೆ. ಲಕ್ಷಾಂತರ ಹಣ ಕೊಟ್ಟು ಆ ಗೋಳನ್ನು ಅನುಭವಿಸಲು ತಲೆ ಕೆಟ್ಟಿದೆಯಾ? ವಿಮಾನ ಪ್ರಯಾಣದಂಥ ಸುಖ ಇನ್ನೊಂದಿಲ್ಲ. ಅದು ತೆರೆದಿಡುವ ಅವಕಾಶಗಳು ಅಪರಿಮಿತ. ೪೦,೦೦೦ ಅಡಿ ಎತ್ತರದಲ್ಲಿ ಹಾರುವುದೇ ಒಂದು ಅಮೋಘ ಅನುಭವ.
ಪ್ರತಿ ಪ್ರಯಾಣವೂ ಒಂದು ಸಾಹಸಕ್ಕೆ ಸಮಾನ. ಅದನ್ನು ನಮ್ಮದಾಗಿಸಿಕೊಳ್ಳುವ ಜಾಣತನ ನಮಗಿರಬೇಕು, ಅಷ್ಟೇ. ವಿಮಾನ ಪ್ರಯಾಣ ನರಕಸದೃಶ ವಾಗಿದ್ದಿದ್ದರೆ, ಪೈಲಟ್ ಮತ್ತು ಗಗನ ಸಖಿಯರು ಅದರಲ್ಲಿ ಪ್ರಯಾಣವನ್ನೇ ಮಾಡುತ್ತಿರಲಿಲ್ಲ.