Tuesday, 13th May 2025

ಶಿಯಾ ಗುಂಪಿನ ಮೆರವಣಿಗೆ ಮೇಲೆ ದಾಳಿ: 13 ಜನರಿಗೆ ಗಾಯ

ಲಾಹೋರ್‌: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಿಯಾ ಗುಂಪಿನ ಮೆರವಣಿಗೆಯ ಮೇಲೆ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪಿನ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಕನಿಷ್ಠ 13 ಜನರು ಗಾಯಗೊಂಡಿದ್ದಾರೆ.

ಲಾಹೋರ್‌ನಿಂದ ಸುಮಾರು 130 ಕಿಮೀ ದೂರದಲ್ಲಿರುವ ಸಿಯಾಲ್‌ಕೋಟ್‌ ನಲ್ಲಿರುವ ಇಮಾಂಬರ್ಗಾ (ಸಭೆಯ ಸಭಾಂಗಣ) ದತ್ತ ಶಿಯಾ ಗುಂಪಿನ ಮೆರವಣಿಗೆಯು ಹೋಗುತ್ತಿದ್ದಾಗ ಪಿಸ್ತೂಲ್‌ಗಳು, ಕೋಲುಗಳು ಮತ್ತು ಕಲ್ಲು ಗಳಿಂದ ಶಸ್ತ್ರಸಜ್ಜಿತವಾದ ಜನರ ಗುಂಪೊಂದು ಶಿಯಾ ಜನರ ಮೇಲೆ ದಾಳಿ ಮಾಡಿದೆ.

ಚೆಹ್ಲುಮ್ ಎಂಬುದು ಶಿಯಾಗಳ ಧಾರ್ಮಿಕ ಆಚರಣೆಯಾಗಿದ್ದು, ಇದು ಮೊಹರಂ ತಿಂಗಳ 10 ನೇ ದಿನದಂದು ಹುತಾತ್ಮರಾದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಹುತಾತ್ಮತೆಯನ್ನು ಸ್ಮರಿಸುತ್ತದೆ.

ಈ ಮೆರವಣಿಗೆಯ ಮಾರ್ಗದ ಕುರಿತು ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ (ಟಿಎಲ್‌ಪಿ) ಮತ್ತು ಶಿಯಾ ಕಾರ್ಯಕರ್ತರ ನಡುವೆ ಕಳೆದ ಕೆಲವು ದಿನಗಳಿಂದ ಉದ್ವಿಗ್ನತೆ ಉಂಟಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಶಿಯಾ ಸಮುದಾಯಕ್ಕೆ ಸೇರಿದ ಹದಿಮೂರು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ದಂಪತಿಗಳ ಸ್ಥಿತಿ ಗಂಭೀರವಾಗಿದೆ ಏಕೆಂದರೆ ಅವರಿಗೆ ತಲೆಗೆ ಗಾಯಗಳಾಗಿವೆ” ಎಂದು ಅಧಿಕಾರಿ ಹೇಳಿದರು.

ಸಿಯಾಲ್‌ಕೋಟ್‌ ಪೊಲೀಸ್‌ ಮುಖ್ಯಸ್ಥ ಫೈಸಲ್‌ ಕಮ್ರಾನ್‌ ಮಾತನಾಡಿ, ದಾಳಿಕೋರರು ಪರಾರಿಯಾಗುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದಿದ್ದಾರೆ. ಅವರು 30 ಕ್ಕೂ ಅಧಿಕ ಜನರಿದ್ದರು, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.