Monday, 12th May 2025

ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಭಾವನೆಗೆ ತಕ್ಕಂತೆ ಆರಂಭವಾಗುತ್ತದೆ ಸಚಿವ ಶಿವರಾಂ ಹೆಬ್ಬಾರ್

ಮಂಡ್ಯ:

ಮೈಷುಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಹೋಗಬಾರದು ಇದು ಮಂಡ್ಯದ ಸಾಂಪ್ರದಾಯಕ ಮತ್ತು ನಗರದ ಹಿರಿಮೆಯನ್ನು ಎತ್ತರಕ್ಕೆ ಕೊಂಡು ಹೋಗುವಂತದ್ದು ಮತ್ತು ಮೈಷುಗರ್ ಕಾರ್ಖಾನೆ ಮಂಡ್ಯದ ಜನರ ಭಾವನೆಗೆ ತಕ್ಕಂತೆ ಆರಂಭವಾಗುತ್ತದೆ ಎಂದು ಸಕ್ಕರೆ ಸಚಿವರಾದ ಶಿವರಾಂ ಹೆಬ್ಬಾರ್ ಹೇಳಿದರು.

ನಗರದ ಮೈಷುಗರ್ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದ ಅವರು ಮುಖ್ಯ ಮಂತ್ರಿಗಳು ಸಹ ಇದೇ ಜಿಲ್ಲೆಯವರು. ಜಿಲ್ಲೆಯ ರೈತರ ಹಿತಶಕ್ತಿಯನ್ನು ಉಳ್ಳವರು ಹಾಗೂ ಜಿಲ್ಲೆಯ ಜನರ ಭಾವನೆಗಳಿಗೆ ಗೌರವಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರ್ಖಾನೆಯಲ್ಲಿ ಕಬ್ಬು ಹರೆಯುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆಯಾಗಬಾರದು ಮತ್ತು ಮೈಷುಗರ್ ನಮ್ಮೆಲ್ಲರ ಆಸ್ತಿ, ಇದರ ರಕ್ಷಣೆ ಮತ್ತು ಜವಾಬ್ದಾರಿ ನಮ್ಮೆಲ್ಲರ ಹೊಣೆ ಎಂದರು.

ಜಿಲ್ಲೆಯ ಅನ್ನ ಕೊಡುವ ಅನ್ನದಾತ, ಮತ್ತು ಚಿಕ್ಕ ಕಬ್ಬು ಬೆಳೆಗಾರರ ಭಾವನೆಗಳಿಗೆ ಬೆಲೆ ಕೊಡಿ, ಕಾರ್ಖಾನೆಯನ್ನು ಪುನರ್‍ಜೀವನಗೊಳಿಸಲು ತಾವೆಲ್ಲರು ಸಹಕಾರವನ್ನು ನೀಡಿ ಎಂದು ಜಿಲ್ಲೆಯ ಕಾರ್ಖಾನೆಯ ಸಂಘಟನೆಗಳಿಗೆ ಮನವಿ ಮಾಡಿದರು.

ಈ ಕಾರ್ಖಾನೆಗೆ ಸರಕಾರದ ವತಿಯಿಂದ ಸುಮಾರು 22 ಕೋಟಿ ರು. ಬಿಡುಗಡೆಯಾಗಿದ್ದು, ರೈತರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಲಾಗುವುದು ಎಂದ ಅವರು ವೈಯಂಡಮ್ ಆದರೂ ಮಾಡಿ ಕಾರ್ಖಾನೆಯನ್ನು ಅತೀ ಶೀಘ್ರದಲ್ಲೆ ಪ್ರಾರಂಭಿಸಿ, ಕಾರ್ಖಾನೆಯ ಒಟ್ಟು ಆಸ್ತಿಯನ್ನು ಗುರುತಿಸಿ ತಿಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮೈಷುಗರ್ ಕಾರ್ಖಾನೆಯನ್ನು ಈ ಹಿಂದೆ 40 ವರ್ಷ ಖಾಸಗಿಕರಣ ಮಾಡಬೇಕೆಂದುಕೊಂಡಾಗ ಎಲ್ಲರ ಮನವಿ ಮೇರೆಗೆ ಅದನ್ನು ಕೈ ಬಿಟ್ಟು ಸರಕಾರವೆ ನಡೆಸಲು ಮುಂದಾಗಿದೆ. ಹಾಗೂ ಸಕ್ಕರೆ ಸಚಿವರಿಗೆ ಮುಖ್ಯಮಂತ್ರಿಗಳು ಸರ್ಕಾರದಿಂದ 25 ಕೋಟಿ ರು. ಹಾಗೂ 50 ಕೋಟಿ ರು. ಲೋನ್ ತೆಗೆದುಕೊಂಡು ಶೀಘ್ರದಲ್ಲೆ ಪ್ರಾರಂಭಿಸಬೇಕೆಂದು ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ನಾರಾಯಣಗೌಡ ಅವರು ಹೇಳಿದರು.

ಮುಖ್ಯಮಂತ್ರಿಗಳ ಧೃಡ ನಿರ್ಧಾರದಂತೆ ಸರಿಯಾದ ಸಮಯಕ್ಕೆ ಕಬ್ಬು ಕಟಾವಾಗಿ ಕಬ್ಬು ಹರೆಯಬೇಕು ಹಾಗೂ ಯಾವುದೇ ತೊಂದರೆಯಾಗದೆ ಮತ್ತು ತಡವಾಗದೆ ಪ್ರಾರಂಭಿಸಬೇಕು ಎಂದು ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಷ್ ಅವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್, ಶಾಸಕರಾದ ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *