Thursday, 15th May 2025

ನ್ಯಾಯಾಧೀಶರ ಮೃತದೇಹ ಪ್ರಕರಣಕ್ಕೆ ಹೊಸ ತಿರುವು..!

ಭುವನೇಶ್ವರ: ಒಡಿಶಾದ ಕಟಕ್‍ನಲ್ಲಿ ಪೋಕ್ಸೊ ಕೋರ್ಟ್ ನ್ಯಾಯಾಧೀಶರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಕುರಿತಂತೆ ಪತ್ನಿ ಹಾಗೂ ಭಾವ ಈ ಕೃತ್ಯ ಎಸಗಿದ್ದಾರೆ ಎಂದು ನ್ಯಾಯಾ ಧೀಶರ ತಾಯಿ ಆರೋಪ ಮಾಡಿದ್ದಾರೆ.

“ಮಗನನ್ನು ನಮ್ಮ ಮನೆಗೆ ಬರಲು ಅವರು ಬಿಡುತ್ತಿರಲಿಲ್ಲ. ನಮ್ಮ ಕುಟುಂಬದ ಜತೆ ಮಾತನಾಡಲು ಕೂಡಾ ಅವಕಾಶ ನೀಡುತ್ತಿರಲಿಲ್ಲ” ಎಂದು ಮರ್ಕಟನಗರ ಠಾಣೆಯಲ್ಲಿ ನೀಡಿರುವ ಲಿಖಿತ ದೂರಿನಲ್ಲಿ ಆಪಾದಿಸಿದ್ದಾರೆ.

“ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಅವರು ಮಗನ ಶವವನ್ನು ಕೂಡಾ ನನಗೆ ತೋರಿಸಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

49 ವರ್ಷ ವಯಸ್ಸಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶ್ರೇಣಿಯ ನ್ಯಾಯಾಂಗ ಅಧಿಕಾರಿಯ ಶವ ಅವರ ಅಧಿಕೃತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿತ್ತು. ಕತ್ತಿನ ಸುತ್ತ ಗಾಯದ ಗುರುತುಗಳು ಇದ್ದವು. ಎರಡು ದಿನಗಳ ಕಾಲ ರಜೆಯಲ್ಲಿದ್ದ ನ್ಯಾಯಾಧೀಶರು ಶುಕ್ರವಾರ ರಜೆಯನ್ನು ಮತ್ತೆ ಒಂದು ದಿನ ವಿಸ್ತರಿಸಿದ್ದರು.