Tuesday, 13th May 2025

ನಿಯಮ ಮೀರಿ ಡಿ.ಜೆ ಬಳಕೆ: ವಾಹನಗಳೊಂದಿಗೆ ಡಿ.ಜೆ. ವಶ

ಹೊಸಪೇಟೆ: ಗಣೇಶನ ಮೂರ್ತಿಗಳ ವಿಸರ್ಜನೆ ಸಂದರ್ಭ ನಿಯಮ ಮೀರಿ ಡಿ.ಜೆ ಬಳಸಿದ್ದಕ್ಕೆ ಜಿಲ್ಲೆಯ ಆರು ಗಣೇಶನ ಮಂಡಳಿಗಳ ವಿರುದ್ಧ ಶನಿವಾರ ಪೊಲೀಸರು ಪ್ರಕರಣ ದಾಖಲಿಸಿ, ವಾಹನಗಳೊಂದಿಗೆ ಡಿ.ಜೆ. ವಶಪಡಿಸಿಕೊಂಡಿದ್ದಾರೆ.

ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು, ಗ್ರಾಮೀಣ ಠಾಣೆ, ಬಡಾವಣೆ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಶುಕ್ರವಾರ ತಡರಾತ್ರಿ ನಿಯಮ ಮೀರಿ ಡಿ.ಜೆಯೊಂದಿಗೆ ಗಣಪನ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಐದನೇ ದಿನದ ವಿಸರ್ಜನೆ ವೇಳೆಯೂ ನಿಯಮ ಉಲ್ಲಂಘಿಸಬಾರದು. ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದರು.