Tuesday, 13th May 2025

ಗೌರಿ ಹಬ್ಬದಲ್ಲಿ ನೆನಪಾಗಿ ಕಾಡಿದ ಗೌರಿ ಹತ್ಯೆ!

ಯಶೋ ಬೆಳಗು

yashomathy@gmail.com

ತನ್ನದೇ ನಿಲುವು, ಸಿದ್ಧಾಂತ ಹಾಗೂ ಓದುಗರ ಬಳಗವನ್ನು ಸೃಷ್ಟಿಸಿಕೊಂಡು ಯಶಸ್ಸಿನ ಶಿಖರದಲ್ಲಿ ಬೀಗುತ್ತಿದ್ದ ‘ಲಂಕೇಶ್ ಪತ್ರಿಕೆ’ಗೆ ‘ಹಾಯ್’ ಯಶಸ್ಸು ನುಂಗಲಾಗದ ಬಿಸಿ ತುಪ್ಪವಾಯ್ತು. ಹೇಗಾದರೂ ಮಾಡಿ ಹಣಿಯಬೇಕೆಂಬ ಜಿದ್ದಿಗೆ ಬಿದ್ದು, 1997ರಲ್ಲಿ ರವಿಯ ವೈಯಕ್ತಿಕ ತೇಜೋವಧೆ ಮಾಡುವ ಭರದಲ್ಲಿ ಅವರ ತಾಯಿಯ ಹೆಸರನ್ನೂ ಅದರಡಿಯಲ್ಲಿ ಎಳೆದು ತಂದಿತ್ತು. 

1996 ಸೆಪ್ಟಂಬರ್ 25ಕ್ಕೆ ‘ಹಾಯ್ ಬೆಂಗಳೂರ್!’ ಎಂಬ ಕಪ್ಪು ಸುಂದರಿಗೆ ವರ್ಷ ತುಂಬಿದ ಸಂಭ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿತ್ತು. ರವಿಯ ಪರಮಗುರುವಾದ ಖುಷ್ವಂತ್ ಸಿಂಗ್ ದೆಹಲಿಯಿಂದ ಬಂದಿದ್ದರು. ಪರೋಕ್ಷ ವಾಗಿ ‘ಹಾಯ್’ ಸೃಷ್ಟಿಗೆ ಕಾರಣಕರ್ತರಾದ ಮತ್ತೋರ್ವ ಗುರು ಕೆ. ಶ್ಯಾಮರಾವ್ ಅವರೂ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಶುಭ ಕೋರಿದ್ದರು.

ಹಾಗೆಯೇ ಡಾ. ಯು.ಆರ್. ಅನಂತಮೂರ್ತಿಯವರೂ ಆಗಮಿಸಿದ ಗಣ್ಯರಲ್ಲಿ ಒಬ್ಬರಾಗಿ ಸಂಭ್ರಮದ ಕಳೆಯನ್ನು ಇಮ್ಮಡಿ ಗೊಳಿಸಿದ್ದರು. ರವೀಂದ್ರ ಕಲಾಕ್ಷೇತ್ರ ಕಿಕ್ಕಿರಿದು ತುಂಬಿತ್ತು. ಎಲ್ಲವನ್ನೂ ಸಂಭ್ರಮಿಸುತ್ತಲೇ ವೇದಿಕೆಯ ಮೇಲೆ ಮಾತಿನ ನಡುವೆ ಗದ್ಗದಿತರಾಗಿದ್ದರು ರವಿ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನಪ್ರಿಯವಾಗುತ್ತ ನಾಗಾಲೋಟದಿಂದ ಊರೂರಿನ ಗಲ್ಲಿಗಲ್ಲಿಗಳನ್ನು ತಲುಪುತ್ತಿತ್ತು ‘ಹಾಯ!’.

ಆದರೆ ಆ ಕಾಲಕ್ಕೆ ತನ್ನದೇ ನಿಲುವು, ಸಿದ್ಧಾಂತ ಹಾಗೂ ಓದುಗರ ಬಳಗವನ್ನು ಸೃಷ್ಟಿಸಿಕೊಂಡು ಯಶಸ್ಸಿನ ಶಿಖರದಲ್ಲಿ
ಕಮ್ಮಗೆ ಬೀಗುತ್ತಿದ್ದ ‘ಲಂಕೇಶ್ ಪತ್ರಿಕೆ’ಗೆ ಇದು ನುಂಗಲಾಗದ ಬಿಸಿ ತುಪ್ಪವಾಯ್ತು. ಹೇಗಾದರೂ ಮಾಡಿ ಹಣಿಯಬೇಕೆಂಬ
ಜಿದ್ದಿಗೆ ಬಿದ್ದು, ೧೯೯೭ರಲ್ಲಿ ರವಿಯ ವೈಯಕ್ತಿಕ ತೇಜೋವಧೆ ಮಾಡುವ ಭರದಲ್ಲಿ ಅವರ ತಾಯಿಯ ಹೆಸರನ್ನೂ ಅದರಡಿಯಲ್ಲಿ ಎಳೆದು ತಂದಿತ್ತು. ಇದರಿಂದ ಬಹಳ ಘಾಸಿಗೊಂಡಿದ್ದರು ರವಿ. ನನ್ನ ಬಗ್ಗೆ ಏನು ಬೇಕಾದರೂ ಹೇಳಲಿ, ಅದಕ್ಕೆ ಉತ್ತರ ಕೊಡಲು ಸಿದ್ಧನಿದ್ದೇನೆ. ಆದರೆ ಬದುಕಿರದ ನನ್ನಮ್ಮನ ಬಗ್ಗೆ ಹೀನಾಯವಾಗಿ ಮಾತನಾಡಿದರೆ ಅವಳು ಬಂದು ಅದನ್ನು ಹೇಗೆ ಸಮರ್ಥಿಸಿಕೊಂಡಾಳು? ಎಂದು ಬಹಳ ನೊಂದುಕೊಂಡಿದ್ದರು.

ಹಣಿಯುವವರು ಯಾವಾಗಲೂ ನಮ್ಮ strength ಹಾಗೂ weakness ಗಳನ್ನು ಚೆನ್ನಾಗಿ ಗಮನಿಸಿರುತ್ತಾರೆ. ಯಾವು ದರೆಡೆಗೆ ನಾವು ಹೆಚ್ಚು attached ಆಗಿರುತ್ತೇವೆಯೋ ಅದರ ಮೂಲಕ ನಮ್ಮನ್ನು ಹಣಿದು ಶಕ್ತಿಯೆಲ್ಲ ಇಂಗಿಹೋಗು ವಂತೆ ಮಾಡುತ್ತಾರೆ. ಲಂಕೇಶರೂ ಅದನ್ನು ಚೆನ್ನಾಗಿ ಬಳಸಿಕೊಂಡರು. ಆದರೆ ಎಲ್ಲವನ್ನೂ ಅಕ್ಷರ ಬಿಡದೆ ಓದಿದ ರವಿ ಯಾರೊಡ ನೆಯೂ ಹೆಚ್ಚು ಮಾತನಾಡದೆ ಒಂದು ಸುದೀರ್ಘ ನಿದ್ರೆ ಮಾಡಿ ಎದ್ದವರು ಲಂಕೇಶರಿಗೆ ಒಂದು ದೀರ್ಘವಾದ ಪತ್ರ ಬರೆಯುವುದರ ಮೂಲಕ ಸರಿಯಾಗೇ ಉತ್ತರ ಕೊಟ್ಟಿದ್ದರು.

ಇದೆಲ್ಲದರ ನಡುವೆಯೂ ಅವರಿಗೆ ಲಂಕೇಶರ ಬಗ್ಗೆ ಅಪಾರವಾದ ಮೆಚ್ಚುಗೆಯಿತ್ತು. ಅವರ ‘ಅವ್ವ’ ಕವಿತೆಯನ್ನು ಸಾಕಷ್ಟು ಮೆಚ್ಚಿ ಮಾತನಾಡುತ್ತಿದ್ದರು. ಅವರ ಮಕ್ಕಳಾದ ಗೌರಿ ಹಾಗೂ ಕವಿತಾರೊಂದಿಗೆ ಉತ್ತಮ ಒಡನಾಟವಿತ್ತು. 2009ರಲ್ಲಿ ನಮ್ಮ ಮಗನಾದ ಹಿಮವಂತನ ಮೊದಲ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿ ತಾಂಬೂಲದ ಕವರಿನ ಮೇಲೆ ಅವನ ಮುzದ -ಟೋದೊಂದಿಗೆ Thanks for being a part of our happiness- Yashu & Ravi ಎಂದು ಮುದ್ರಿಸಿದ ಅವನ ಫೋಟೋವನ್ನು ಹಾಕಿ ಅನೇಕ ಪತ್ರಿಕೆಗಳು ಸುದ್ದಿ ಮಾಡಿದವು. ಆದರೆ ಗೌರಿ ಲಂಕೇಶ್ ಮಾತ್ರ, “ಯಾಕೆ ನಮ್ಮ ಜನ ಹೀಗೆ? ಎಷ್ಟು ಮುದ್ದಾಗಿದೆ ಮಗು.

ಅದನ್ನು ಮೆಚ್ಚುವ ಬದಲು ಯಾಕೆ ಹೀಗೆ ಮತ್ಸರದ ಮಾತುಗಳನ್ನಾಡುತ್ತಾರೆ?” ಎಂದು ಬೇಸರ ಮಾಡಿಕೊಂಡಿದ್ದರು. ಕೆಲವೊಮ್ಮೆ ‘ಹಾಯ್’ ಕಚೇರಿಗೆ ಬರುತ್ತಿದ್ದ ಅವರನ್ನು ಭೇಟಿ ಮಾಡಿದ ಪರಿಚಯವಿತ್ತೇ ಹೊರತು ಅವರೊಂದಿಗೆ ನನಗೆ ಯಾವುದೇ ರೀತಿಯ ಆಪ್ತತೆ ಇರಲಿಲ್ಲ. ಮಗುವಿಗೆ ಎರಡೂವರೆ ವರುಷ ತುಂಬುವ ಹೊತ್ತಿಗೆ ಅವನ ಶಾಲಾ ದಿನಗಳು ಆರಂಭಗೊಂಡು ಬದುಕು ಮತ್ತೊಂದು ಮಗ್ಗುಲು ಬದಲಿಸಿತ್ತು.

“ನಿಮಗೇನು ಯೋಚನೆಯಿಲ್ಲ ಬಿಡಿ. ಹೇಗಿದ್ದರೂ ನಿಮ್ಮದೇ ಶಾಲೆ ಇದೆಯ?” ಅನ್ನುತ್ತಿದ್ದರು ಜನ. ಆದರೆ ರವಿಗೆ ಮಾತ್ರ
ಅದು ಸುತರಾಂ ಇಷ್ಟವಿರಲಿಲ್ಲ. ಸೆಕ್ರೆಟರಿಯ ಮಗ ಅನ್ನುವ ಭಯ ಎಲ್ಲ ಶಿಕ್ಷಕ-ಶಿಕ್ಷಕಿಯರಲ್ಲೂ ಮೂಡಿ ಅವನು ತಪ್ಪು ಮಾಡಿದಾಗ ಯಾವುದೇ ರೀತಿಯ ಶಿಕ್ಷೆ ಕೊಡಲು ಹಿಂಜರಿಯಬಹುದು. ಇದರಿಂದ ಮಗು ಅದನ್ನು advantage ಆಗಿ ತೆಗೆದುಕೊಂಡು ಹಾಳಾಗುವ ಸಂಭವವೇ ಹೆಚ್ಚೆಂದು ತಿಳಿಸಿ, ಅವನು ಶಿಸ್ತಿನಿಂದ ಕೂಡಿದ ಬೇರೆ ಶಾಲೆಯಲ್ಲಿಯೇ ಕಲಿಯಲಿ ಎಂದು ಹೇಳಿದರು. ಅವರು ಹೇಳಿದ್ದೂ ಸರಿಯೇ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಸಣ್ಣದರ ಕಷ್ಟ-ಸುಖ ಅರಿತು ಬೆಳೆದರೆ ಗಟ್ಟಿತನ  ಮೈಗೂಡುತ್ತದೆ. ಇಲ್ಲದಿದ್ದರೆ ಎಲ್ಲಕ್ಕೂ ನಮ್ಮ ಮೇಲೆಯೇ ಅವಲಂಬಿತನಾಗುತ್ತಾ ಬೆಳೆದರೆ ಅವನಿಗೆ ಲೋಕದ ರೀತಿ-ನೀತಿಗಳು ತಿಳಿಯುವುದು ಹೇಗೆ? ಎಂದುಕೊಳ್ಳುತ್ತಾ ಮನೆಗೆ ಸಮೀಪವಿರುವ ಶಾಲೆಗಳ ಕುರಿತು ವಿಚಾರಿಸಲಾರಂಭಿಸಿದೆ. ಅದೇ ಸಮಯದಲ್ಲಿ, ಬೆಳೆಯುತ್ತಿದ್ದ ಮಗನ ತುಂಟತನವೂ ಹೆಚ್ಚಾಗಿ ಕಣ್ಣೆದುರಿಗೆ ಆಡುತ್ತಿದ್ದವನು ಅದ್ಯಾವ ಮಾಯದ ಕಣ್ತಪ್ಪಿಸಿ ರಸ್ತೆ ದಾಟಿ ಗೆಳೆಯರೊಂದಿಗೆ
ಅಪ್ಪನ ಅಫೀಸಿನವರೆಗೂ ಹೋಗಿಬಿಡುತ್ತಿದ್ದ.

ಮನೆಯೆ ದುರಿಗಿನ ರಸ್ತೆಯಲ್ಲಿ ನಿರಂತರವಾಗಿ ಹರಿದಾಡುತ್ತಿದ್ದ ವಾಹನಗಳ ನಡುವೆ ಏನಾದರೂ ಹೆಚ್ಚೂಕಮ್ಮಿಯಾದರೆ? ಅನ್ನುವ ಆತಂಕ ನನಗೆ. “ನಮ್ಮಮ್ಮ ನನ್ನ ಕಾಲಿಗೆ ಜಾಲಿಮೊದ್ದು ಹಾಕಿ ಕಟ್ಟಿಹಾಕಿರುತ್ತಿದ್ದಳು ಎಲ್ಲೂ ಹೋಗದಿರಲಿ ಅಂತ. ನನ್ನ ಮಗ ಅಂದ್ಮೇಲೆ ಅವನೇನು ಕಮ್ಮೀನಾ? ನಿನ್ನೊಬ್ಬಳ ಕೈಯಿಂದ ಅವನನ್ನು ನಿಭಾಯಿಸುವುದು ಸಾಧ್ಯವಿಲ್ಲ” ಎಂದು ಹೇಳಿ
ಅವನನ್ನು ನೋಡಿಕೊಳ್ಳಲು ಪಳನಿಯಮ್ಮ ಎಂಬ ಸಹಾಯಕಿಯನ್ನು ಕಳಿಸಿದರು ರವಿ. ಬಹಳ ಪ್ರೀತಿ ಹಾಗೂ ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದ ಪಳನಿಯಮ್ಮನಿಗೆ ಮಗುವನ್ನೊಪ್ಪಿಸಿ ನಾನು ನಿರಾತಂಕವಾಗಿ ನನ್ನ ಕೆಲಸಗಳಲ್ಲಿ ತೊಡಗಿಕೊಳ್ಳು ವಂತಾಯ್ತು. ಆದರೆ ಬೆಳೆಯುತ್ತಿರುವ ಮಗುವನ್ನು ಸ್ವತಂತ್ರವಾಗಿ ಆಡಲು ಬಿಡದೆ ಸದಾ ಮಂಗನ ಮರಿಯಂತೆ ಕಂಕುಳಲ್ಲಿ ಎತ್ತಿಕೊಂಡು ಓಡಾಡಿದರೆ ಏನು ಚೆಂದ? ಅವನು ಖುಷಿಯಾಗಿ ಮನೆತುಂಬ ಓಡಬೇಕು, ಅಷ್ಟು ದೊಡ್ಡ ಮನೆ ಕಟ್ಟಬೇಕು.

ಯಾವುದರಲ್ಲೂ ಅವನಿಗೆ ಕೊರತೆಯಾಗಬಾರದು ಎಂದು ಬಯಸಿ ಒಂದು ಸ್ವಂತ ಮನೆ ಕಟ್ಟುವ ಯೋಜನೆ ಹಾಕಿಕೊಂಡೆವು.
ಅದಕ್ಕಾಗಿ ಹೆಚ್ಚು ಜನಸಂಚಾರವಿಲ್ಲದ, ಶಾಲೆಗೆ ಹತ್ತಿರವಿರುವಂಥ ಜಾಗವನ್ನು ಹುಡುಕಾಡಿ ಕೊನೆಗೆ ರಾಜರಾಜೇಶ್ವರಿ
ನಗರ ದಂದು ಸೈಟನ್ನು ಖರೀದಿಸಿ ನಮ್ಮ ಅಗತ್ಯಕ್ಕೆ ತಕ್ಕಂತೆ ಮನೆ ನಿರ್ಮಣ ಮಾಡುವ ಕನಸಿನ ಜತೆಜತೆಗೆ ಮಗುವೂ
ಬೆಳೆಯಲಾರಂಭಿಸಿತು. ‘ನೋಡು, ಮನೆಯಲ್ಲಿ ಹೆಚ್ಚಾಗಿ ಇರುವವಳು ನೀನು.

ನಿನಗೆ ಹೇಗೆ ಬೇಕೋ ಹಾಗೆ ಅದನ್ನು ರೂಪಿಸಿಕೋ. ಅದಕ್ಕೆ ಬೇಕಾದ ವಸ್ತುಗಳನ್ನು ಒದಗಿಸುವ ಜವಾಬ್ದಾರಿ ನನ್ನದು’ ಎಂದು ಹೇಳಿ ಪ್ರಾರ್ಥನಾ ಶಾಲೆಯ ಮೊದಲ ಕಟ್ಟಡವನ್ನು ಕಟ್ಟಿದ ಅವರ ಗೆಳೆಯರಾದ ಲಿಂಗಮೂರ್ತಿಯವರ ಪರಿಚಯ ಮಾಡಿ ಕೊಟ್ಟರು. ‘ಆಡಂಬರಕ್ಕಿಂತ ಹೆಚ್ಚಾಗಿ ವಿಶಾಲವಾದ, ಗಾಳಿ-ಬೆಳಕಿನಿಂದ ಕೂಡಿದ ಮನೆ ಇರಲಿ. ಅದರ ನಡುವೆಯೇ ಪುಸ್ತಕದ ಒಂದು ಪುಟ್ಟ ಲೈಬ್ರರಿ ಇರುವಂತಿರಲಿ’ ಎಂದು ತಿಳಿಸಿದೆ.

ನಮ್ಮ ಕಲ್ಪನೆಗೂ ಮೀರಿದ ಚೆಂದದ ಮನೆ ನೋಡನೋಡುತ್ತ ಆಕಾರ ಪಡೆದುಕೊಳ್ಳುತ್ತಿದ್ದರೆ ಮೆಲ್ಲಗೆ ಸಾಡೇಸಾತಿಯ ನೆರಳು
ಆವರಿಸಿಕೊಳ್ಳುತ್ತಿರುವುದು ಅನುಭವಕ್ಕೆ ಬರಲಾರಂಭಿಸಿತು.

ಸಾಲದೆಂಬಂತೆ ರಾಹುದೆಸೆ!
ಮೊದಲ ಎರಡೂವರೆ ವರ್ಷಗಳಲ್ಲಿ ಅಪ್ಪ, ತಮ್ಮ, ಇದ್ದ ಮನೆ, ಪುಸ್ತಕದಂಗಡಿ, ಕನಸಿನ ಮನೆ ಎಲ್ಲವೂ ದೂರಾಗಿ ಬಟಾ ಬಯಲಲ್ಲಿ ಮಗುವಿನೊಂದಿಗೆ ಏಕಾಂಗಿಯಾಗಿ ನಿಲ್ಲಿಸಿಬಿಟ್ಟವು. ಏನು ಮಾತಾಡಿದರೂ ಅದು ತಪ್ಪಾಗಿಯೇ ಬಿಂಬಿತವಾಗುತ್ತಾ ಮಾತಿನ ಘರ್ಷಣೆಗಳುಂಟಾದಾಗ ಬೇಸತ್ತು ನಾನು ಮೌನವಾಗಿ ‘ಬಂಜಾರಾ ಅಕಾಡೆಮಿ’ಯಲ್ಲಿ ಕೌನ್ಸಿಲಿಂಗ್ ಕೋರ್ಸ್ ಮೂಲಕ ‘ವ್ಯಗ್ರಗೊಂಡ ಮನಸನ್ನು ತಿಳಿಗೊಳಿಸುವುದು ಹೇಗೆ?’ ಅನ್ನುವುದನ್ನು ಕಲಿತೆ.

ಆಗ ರವಿ ಮಾತ್ರವಲ್ಲ. ಸಾಕಷ್ಟು ಮನಸುಗಳ ನಡತೆಗಳನ್ನು ಅಭ್ಯಸಿಸಿದೆ. ಆಗ ರವಿ ಮೊದಲಿಗಿಂತ ಹೆಚ್ಚು ಅರ್ಥವಾಗ ತೊಡಗಿದರು. ಇನ್ನಷ್ಟು ಪ್ರೀತಿ ಹೆಚ್ಚಾಯ್ತು. ಅವರನ್ನು ಆರೈಕೆ ಮಾಡುವ ಹಂಬಲವೂ ಹೆಚ್ಚಾಯ್ತು. ಎಲ್ಲಕ್ಕಿಂತ ಹೆಚ್ಚಾಗಿ ಬೇರೆಯವರ ವಿಷಯಗಳ ಕುರಿತು Non-judgmental ಆಗಿರುವುದು ರೂಢಿಸಿಕೊಂಡೆ.

ಅಕ್ಟೋಬರ್ 2, 2016ರಂದು ನಾವು ಎಲ್ಲ ಮುನಿಸುಗಳನ್ನು ಮರೆತು ನಮ್ಮ ಕನಸಿನ ಮನೆಗೆ ಪದಾರ್ಪಣೆ ಮಾಡಿದೆವು. ಹಿಮವಂತನಿಗೆ ಖುಷಿಯೋ ಖುಷಿ. ಮತ್ತೆ ಸಂತಸದ ದಿನಗಳು ಮರಳಿ ಬಂದವು. ದೀಪಾವಳಿ ಹಬ್ಬವನ್ನು ಖುಷಿಯಿಂದ ಆಚರಿಸಿದೆವು. ಮತ್ತೆ ಹಿಮನ ಹುಟ್ಟುಹಬ್ಬ ವಿಜೃಂಭಿಸಿತು. ಹೊಸಮನೆಗೆ ಬಂದ ನಂತರ 2017ರಲ್ಲಿ ಬಂದ ಮೊದಲ ಭಾದ್ರಪದ ಮಾಸದ ಗೌರಿ ಹಬ್ಬ ವನ್ನೂ ಬಹಳ ಸಂಭ್ರಮದಿಂದಲೇ ಆಚರಿಸಿ ಖುಷಿ ಪಟ್ಟೆವು.

ಸೆಪ್ಟಂಬರ್ 4 ರವಿಯ ಅಮ್ಮನ ದಿನ. ಮಾರನೆಯ ದಿನ ನನ್ನ ತಂಗಿಯ ಮದುವೆಯ ಆನಿವರ್ಸರಿ. ಅವರಿಗೊಂದು ಪುಟ್ಟ ಗಿ- ತರಲು ಸಂಜೆ ಬಸವನಗುಡಿಗೆ ಹೋದವಳು, ದಾರಿಯಲ್ಲಿ ‘ಲಂಕೇಶ್ ಪತ್ರಿಕೆ’ಯ ಕಚೇರಿ ಮುಂದೆ ಹಾದು ಬರುವಾಗ ವಿನಾ ಕಾರಣ ಗೌರಿ ನೆನಪಾದರು. ಮನೆಗೆ ಬಂದು ದಣಿವಾರಿಸಿಕೊಳ್ಳುವಷ್ಟರ ಆಘಾತಕರವಾದ ಸುದ್ದಿ ದು ಸಿಡಿಲಿನಂತೆ ಬಡಿದಿತ್ತು. 2017 ಸೆಪ್ಟಂಬರ್ 5ರಂದು ಗೌರಿ ಲಂಕೇಶರನ್ನು ಕಚೇರಿಯಿಂದ ಮನೆ ತನಕ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಎರಡೇ ನಿಮಿಷದಲ್ಲಿ ಜೀವ ತೆಗೆದು ಪರಾರಿಯಾಗಿದ್ದರು. ವಿಷಯ ತಿಳಿದು ದಿಗ್ಭ್ರಮೆ ಯಾಗಿತ್ತು. ಈಗಷ್ಟೇ ನಾನೂ ಅದೇ ದಾರಿಯ ಬಂದೆ ನ? ಎಂದುಕೊಳ್ಳುತ್ತಾ, ಅವರು ನನ್ನ ಮಗುವಿನ ಬಗ್ಗೆ ಹೇಳಿದ್ದ ಮಾತುಗಳನ್ನು ನೆನಪು ಮಾಡಿಕೊಂಡು ಫೇಸ್ ಬುಕ್ಕಿನಲ್ಲಿ ಸಂತಾಪ ಸೂಚಿಸಿದ್ದೆ.

ಆದರೆ ಆ ಕೊಲೆಯ ಜಾಡು ನನ್ನ ಮನೆಯವರೆಗೂ ನಡೆದುಬರುತ್ತದೆಂಬ ಯಾವ ಸಣ್ಣ ಅನುಮಾನವೂ ಇರಲಿಲ್ಲ.
ಅವಕಾಶಕ್ಕಾಗಿ ಕಾಯುತ್ತಿದ್ದವರೆಲ್ಲ ಒಂದೊಂದು ಕುಣಿಕೆ ರೆಡಿಯಾಗಿಟ್ಟುಕೊಂಡು ಬಲೆ ಬೀಸಿದ್ದರು. ನನಗೆ ಗೌರಿಯವರೊಂದಿಗೆ ಗಾಢ ಸಂಪರ್ಕವಿದೆ ಎಂಬಂತೆ ಬಿಂಬಿಸಲಾಯಿತು. ನವೆಂಬರ್ 2017ರಲ್ಲಿ ಮಗನ ಮತ್ತೊಂದು ಬರ್ತ್ ಡೇ. ಅದಾದ ಕೆಲವೇ ದಿನಗಳಿಗೆ ರವಿಯನ್ನು ಸಿಸಿಬಿ ಯವರು ತಮ್ಮ ವಶಕ್ಕೆ ತೆಗೆದುಕೊಂಡರು. ಕಾಣದ ಅಧಿಕಾರಯುತ ಕೈಗಳ ನಡುವೆ ವಿಜೃಂಭಿಸಿದ್ದು ಸುನಿಲ್ ಹೆಗ್ಗರವಳ್ಳಿ!

ನಾಳೆ ಮತ್ತೆ ಗೌರಿ ಹಬ್ಬ. ಬಾಗಿನ, ಚಿಗಳಿ-ತಂಬಿಟ್ಟು, ಸೀಬೆ, ಬ್ಯಾಲದ ಹಣ್ಣು, ಹುಳೀ ಕೊಬ್ಬರಿ ಹಣ್ಣುಗಳೊಂದಿಗೆ ಕೈತುಂಬ ಹಸಿರುಬಳೆ ತೊಟ್ಟು, ಜರಿಲಂಗ, ಕುಚ್ಚಿನ  ಜಡೆಯೊಂದಿಗೆ ಓಡಾಡುವ ಮುದ್ದುಗೌರಿಯರ ಸಡಗರದ ಹಬ್ಬದ ನಡುವೆ ಯಾಕೋ ಇದೆಲ್ಲ ನೆನಪಾಯ್ತು.