Saturday, 10th May 2025

ನೀನಿಲ್ಲದೇ ಒಂದು ವರ್ಷ !

ತೇಜಸ್ವಿನಿ ಸಿ. ಶಾಸ್ತ್ರೀ

ಈ ಒಂದು ವರ್ಷದಲ್ಲಿ ನಾನು ಜೀವನದ ಹಲವು ಮಜಲುಗಳ ಕಂಡೆ. ನೀ ನನ್ನ ಜೊತೆ ಇದ್ದಾಗ ನನಗೆ ಮಾರ್ಗದರ್ಶಿಯಾಗಿದ್ದೆ. ನೀನು ಹೋದ ನಂತರ ಜೀವನವೇ ಮಾರ್ಗದರ್ಶಿಯಾಯಿತು. ಈ ಒಂದು ವರ್ಷ ನಾ ಕಲಿತ ಪಾಠಗಳೆಷ್ಟೋ. ಒಂದು ವರ್ಷದ
ಹಿಂದೆ ಇದ್ದ ನಾನು ಈಗಿಲ್ಲ. ನೀ ತೊರೆದ ಮರುಗಳಿಗೆ ನಾನು ಶವವಾಗಿದ್ದೆ.

ಈಗ ನನಗೆ ಮರುಹುಟ್ಟು. ಅ… ಮರುಹುಟ್ಟು ಪಡೆಯಲು ಈಗಿರುವ ನಾನು ಮುಂಚಿ ನವಳಲ್ಲ. ಈ ನನ್ನ ಬದಲಾವಣೆಗೆ ನೀ ಕಾರಣವೋ..? ಅಥವಾ ನಾನೋ ತಿಳಿಯುತ್ತಿಲ್ಲ. ಈ ಬದಲಾವಣೆಗೆ ಹೆಸರೇ ನೀಡಲಿ ಅದೂ ತಿಳಿಯುತ್ತಿಲ್ಲ. ಅದೇನೇ ಆದರೂ ನಾನು ನಾನಾಗಿಲ್ಲ. ಅಥವಾ ಈಗಿರುವುದೇ ನನ್ನ ನಿಜಸ್ವರೂಪವೋ..? ಅದೂ ತಿಳಿಯುತ್ತಿಲ್ಲ. ನನ್ನಲ್ಲಿ ಯಾವ ಪ್ರಶ್ನೆಗೂ ಉತ್ತರವಿಲ್ಲ.

ಉತ್ತರಿಸಲು ನೀನೂ ಇಲ್ಲ. ಒಟ್ಟಿನಲ್ಲಿ ಮುಂಚಿನಂತೆ ಯಾವುದೂ ಇಲ್ಲ. ನಾನು ಇಲ್ಲ. ನಿನಗೆ ಗೊತ್ತಾ ನಾನು ಈಗ ಮುಂಚಿನಂತೆ ಹೆಚ್ಚು ಮಾತನಾಡುವುದಿಲ್ಲ. ನಗುವುದಿಲ್ಲ. ಯಾರೊಂದಿಗೂ ಬೆರೆಯುವುದಿಲ್ಲ. ನನ್ನೆಷ್ಟೋ ಗೆಳೆಯರು ನನ್ನ ಈ ನಡವಳಿಕೆ
ನೋಡಿ ನನ್ನ ಅಹಂಕಾರಿ ಎಂದರು. ಅವರಿಗೇನು ಗೊತ್ತು ನನ್ನ ನೋವು. ಆದರೂ ನಾನು ಆ ನೋವು ಅವರಿಗೆ ಹೇಳಲಿಲ್ಲ. ಸುಮ್ಮನಾದೆ. ಕೆಲವೊಮ್ಮೆ ನಿನ್ನ ನೆನಪು ಹೇಗೆ ಹಿಂಸಿಸಿತ್ತೆಂದರೆ ಈ ಬದುಕೇ ವ್ಯರ್ಥವೆನ್ನುವಷ್ಟು.

ನೀ ನನ್ನ ತೊರೆದು ಹೋದದ್ದೇ ತಡ, ನಾನೂ ಎಲ್ಲವನ್ನೂ ತೊರೆದೆ. ಕೊನೆಗೆ ನನ್ನನ್ನೇ ತೊರೆದರು ಎಲ್ಲ. ನನ್ನ ಹೆತ್ತವರನ್ನೂ
ಸೇರಿ… ಈಗ ನನಗಾಗಿ ಮರುಗಲು, ತವಕಿಸಲು, ನೆನೆಯಲು ಯಾರೂ ಇಲ್ಲ. ನೀನೂ ಇಲ್ಲ. ಈಗ ನಾನು ಯಾರಿಗಾಗಿ ಬದುಕಲಿ. ನನಗೂ ಈ ಪ್ರಪಂಚಕ್ಕೂ ಯಾವುದೇ ಬಂಧವಿಲ್ಲವೆಂದು ಅನಿಸುತಿದೆ. ಈ ಯಾತನೆಗೆ ಕೊನೆಯೆಂದು.

ನನ್ನ ಈ ಯಾತನೆಗೆ ದೂಡಿ ನೀನೇಗೆ ಸಂತಸದಿಂದಿರುವೆ..? ಏನೋ ನನಗೆ ಏನೂ ತೋಚುತ್ತಿಲ್ಲ. ನಾನು ಯಾಂತ್ರಿಕವಾಗಿ
ಬದುಕಿದ್ದೇನೆ. ನೀನಿಲ್ಲದೇ ಒಂದು ವರ್ಷ ಕಳೆದಿದ್ದೇನೆ.. ಯುಗದಂತೆ. ಇನ್ನೂ ಬದುಕುತ್ತೇನೆ. ನನ್ನಲ್ಲಿರುವ ಶಕ್ತಿ, ತಾಳ್ಮೆ ತೀರುವ ವರೆಗೆ.