Sunday, 11th May 2025

ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾಗೆ ಆಮ್ ಆದ್ಮಿ ಬೆಂಬಲ

ನವದೆಹಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾರನ್ನು ಆಪ್ ಬೆಂಬಲಿಸಲಿದೆ ಎಂದು ಸಂಸದ ಸಂಜಯ ಸಿಂಗ್ ಅವರು ಬುಧವಾರ ತಿಳಿಸಿದರು.

ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಂಸದೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಮೊದಲು ರಾಷ್ಟ್ರಪತಿ ಚುನಾವಣೆಯಲ್ಲಿಯೂ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ ಸಿನ್ಹಾರನ್ನು ಆಪ್ ಬೆಂಬಲಿಸಿತ್ತು.

ಪ.ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ ಧಂಕರ್ ಅವರು ಉಪ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ.  ಹೇಮಂತ ಸೊರೇನ್ ನೇತೃತ್ವದ ಜೆಎಂಎಂ ಮತ್ತು ಶಿವಸೇನೆ ಕೂಡ ಆಳ್ವಾರಿಗೆ ಬೆಂಬಲ ಪ್ರಕಟಿಸಿವೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ್ದ ಬಿಎಸ್‌ಪಿ ಉಪರಾಷ್ಟ್ರಪತಿ ಚುನಾವಣೆಯಲ್ಲಿಯೂ ಅದರ ಅಭ್ಯರ್ಥಿ ಧಂಕರ್‌ಗೆ ಮಣೆ ಹಾಕಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿ ಯಶವಂತ ಸಿನ್ಹಾರನ್ನು ಬೆಂಬಲಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸಿದ್ದ ಟಿಎಂಸಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರವಿರಲು ನಿರ್ಧರಿಸಿದೆ.

77ರ ಹರೆಯದ ಆಳ್ವಾ ಗೋವಾ,ಗುಜರಾತ,ರಾಜಸ್ಥಾನ ಮತ್ತು ಉತ್ತರಾಖಂಡಗಳ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿ ದ್ದಾರೆ. ಐದು ಬಾರಿ ಸಂಸದೆಯಾಗಿದ್ದ ಅವರು ರಾಜೀವ ಗಾಂಧಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಚಿವೆಯಾಗಿದ್ದರು.