Thursday, 15th May 2025

ದಕ್ಷಿಣ ಇರಾನ್‍ನಲ್ಲಿ ಪ್ರಬಲ ಭೂಕಂಪ: 6.3 ತೀವ್ರತೆ

ಟೆಹರಾನ್: ದಕ್ಷಿಣ ಇರಾನ್‍ನಲ್ಲಿ ಶನಿವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟಿತ್ತು ಎಂದು ಯೂರೋಪಿಯನ್ ಮೆಡಿಟರೇನಿಯನ್ ಭೂಕಂಪ ಮಾಪನ ಕೇಂದ್ರ ಹೇಳಿದೆ.

ಭೂಕಂಪದಿಂದ ವ್ಯಾಪಕ ಹಾನಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಕಂಪನ ಸುಮಾರು 10 ಕಿಲೋಮೀಟರ್ (6.21 ಮೈಲು) ಆಳದಲ್ಲಿ ಸಂಭವಿಸಿದೆ ಎಂದು ಇಎಂಎಸ್‍ಸಿ ಅಂದಾಜಿಸಿದೆ. ಇರಾನ್‍ನಲ್ಲಿ ಭೂಕಂಪ ಸಂಭವಿಸಿದ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲೂ ಕಂಪನದ ಅನುಭವವಾಗಿದೆ.

ದಕ್ಷಿಣ ಇರಾನ್‍ನಲ್ಲಿ ಮಧ್ಯರಾತ್ರಿ ಬಳಿಕ 1.32ರ ಸುಮಾರಿಗೆ ಭೂಕಂಪ ಸಂಭವಿಸಿತು. 6.3 ತೀವ್ರತೆಯ ಭೂಕಂಪ ಸೇರಿದಂತೆ ಎರಡು ಭೂಕಂಪಗಳು ಅನುಭವಕ್ಕೆ ಬಂದಿವೆ ಎಂದು ಗಲ್ಫ್‍ನ್ಯೂಸ್ ಹೇಳಿದೆ. ಎರಡನೇ ಭೂಕಂಪ 3.24ಕ್ಕೆ ಸಂಭವಿಸಿದೆ.

ಎರಡು ಭೂಕಂಪಗಳ ನಡುವೆ 4.6 ಮತ್ತು 4.4 ತೀವ್ರತೆಯ ಕಂಪನಗಳು 2.43 ಮತ್ತು 3.13ಕ್ಕೆ ಅನುಭವಕ್ಕೆ ಬಂದಿವೆ ಎಂದು ತಿಳಿಸಿದೆ.