Wednesday, 14th May 2025

ಅಮರನಾಥ ಯಾತ್ರೆ ಪುನರಾರಂಭ

ಶ್ರೀನಗರ: ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ನಿಂತಿದ್ದ ಅಮರನಾಥ ಯಾತ್ರೆ ಗುರುವಾರದಿಂದ ಮತ್ತೆ ಪ್ರಾರಂಭವಾಗಿದೆ. ಸುಮಾರು 2,750 ಯಾತ್ರಿಕರ ಬ್ಯಾಚ್ ಯಾತ್ರೆ ಆರಂಭಿಸಿದ್ದಾರೆ.

ಅನಂತನಾಗ್ ಜಿಲ್ಲೆಯ ಪಹಲ್ಗಾಮ್‍ನಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್‍ನಲ್ಲಿ ಜಿಲ್ಲಾಧಿ ಕಾರಿ ಪಿಯೂಷ್ ಸಿಂಗ್ಲಾ ಯಾತ್ರೆಗೆ ಚಾಲನೆ ನೀಡಿದರು. ಪ್ರಯಾಣವು ಕಾಲ್ನಡಿಗೆಯಲ್ಲೇ ಇರಲಿದ್ದು, ಮಾರ್ಗದುದ್ದಕ್ಕೂ ಶೀಷ್‍ನಾಗ್ ಮತ್ತು ಪಂಚತಾರ್ಣಿಯಲ್ಲಿ ರಾತ್ರಿ ವ್ಯವಸ್ಥೆ ಮಾಡಲಾಗಿದೆ. 43 ದಿನಗಳ ಯಾತ್ರೆಯನ್ನು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆ ಗಳನ್ನು ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮು ಬೇಸ್ ಕ್ಯಾಂಪ್‍ನಿಂದ 4,890 ಯಾತ್ರಾರ್ಥಿ ಗಳ ಮೊದಲ ಬ್ಯಾಚ್‍ಗೆ ಚಾಲನೆ ನೀಡಿದರು.

ಅಮರನಾಥ ದೇಗುಲ ಮಂಡಳಿಯು ನೈಸರ್ಗಿಕವಾಗಿ ರೂಪುಗೊಂಡ ಮಂಜು ಗಡ್ಡೆಯ ಆನ್‍ಲೈನ್ ದರ್ಶನಕ್ಕೆ ಅವಕಾಶ ಕಲ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.