Monday, 12th May 2025

ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಶಿಂಧೆ ವಜಾ

ನವದೆಹಲಿ: ಶಿಂಧೆ ಮತ್ತು ಅವರ ಪಕ್ಷದ ಕೆಲವು ಶಾಸಕರು ಸೂರತ್ ನಲ್ಲಿ ಠಿಕಾಣಿ ಹೂಡಿರುವ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸಲು ಶಿವಸೇನೆ ನಿರ್ಧರಿಸಿದೆ.

ಸೆವ್ರಿ ಶಾಸಕ ಅಜಯ್ ಚೌಧರಿ ಅವರು ಶಿವಸೇನೆಯ ನೂತನ ಶಾಸಕಾಂಗ ಪಕ್ಷದ ನಾಯಕ ರಾಗಲಿದ್ದಾರೆ.

ಶಿಂಧೆ ಅವರು ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸದ ಕಾರಣ, ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳೊಂದಿಗೆ ತಮ್ಮ ಪಕ್ಷದ ಯಾವುದೇ ಸಂಬಂಧವನ್ನು ತಳ್ಳಿಹಾಕಿದರು. ಆದರೆ ಸರ್ಕಾರ ರಚಿಸಲು ಶಿಂಧೆ ಅವರಿಂದ ಬಂದ ಪ್ರಸ್ತಾಪವನ್ನು ಬಿಜೆಪಿ ‘ಖಂಡಿತವಾಗಿಯೂ ಪರಿಗಣಿಸುತ್ತದೆ’ ಎಂದು ಹೇಳಿದರು.

ದೆಹಲಿಯಲ್ಲಿ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಯುತ್ತಿದೆ, ಅದು ಮೂರನೇ ಬಾರಿಗೆ ನಡೆಯುತ್ತಿದೆ ಎಂದು ಹೇಳಿದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 55, ಎನ್ಸಿಪಿ 53, ಕಾಂಗ್ರೆಸ್ 44, ಬಹುಜನ ವಿಕಾಸ್ ಅಗಡಿ 3, ಸಮಾಜವಾದಿ ಪಕ್ಷ, ಎಐಎಂಐಎಂ ಮತ್ತು ಪ್ರಹಾರ್ ಜನಶಕ್ತಿ ಪಕ್ಷ ತಲಾ 2 ಶಾಸಕರನ್ನು ಹೊಂದಿವೆ. ಎಂಎನ್‌ಎಸ್, ಸಿಪಿಐ-ಎಂ, ಪಿಡಬ್ಲ್ಯೂಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಕ್ಷ, ಜನಸುರಾಜ್ಯ ಶಕ್ತಿ ಪಕ್ಷ ಮತ್ತು ಕ್ರಾಂತಿಕಾರಿ ಶೇತ್ಕರಿ ಪಕ್ಷ ತಲಾ ಒಬ್ಬ ಶಾಸಕರನ್ನು ಹೊಂದಿವೆ.