ಸಿನಿಮಾಗಾಗಿ ನಾಯಿಗೆ ಕೊಟ್ಟ ತರಬೇತಿಯ ಅನುಭವ ಹಂಚಿಕೊಂಡ ಪ್ರಮೋದ್
ನಾಯಿಗಳೊಂದಿಗಿನ ಭಾವನಾಲೋಕ ತೆರೆದಿಟ್ಟ ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮ
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಮನುಷ್ಯನಿಗಿಂತ ಭಾವನಾತ್ಮಕ ಬೆಸುಗೆಯುಳ್ಳ ಪ್ರಾಣಿಗಳೆಂದರೆ ನಾಯಿಗಳು ಮಾತ್ರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ನಾಯಿಗಳಿಂದ ನಟನೆ ಮಾಡಿಸುವುದು ದೊಡ್ಡ ಸವಾಲು. ಅಂತಹ ಸವಾಲು ಗೆದ್ದಿರುವ ಚಾರ್ಲಿ ಚಿತ್ರತಂಡದ ಸಾಹಸ
ಗಾಥೆ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅನಾವರಣಗೊಂಡಿತು.
ಚಾರ್ಲಿ 777 ಸಿನಿಮಾದ ಸಿದ್ಧತೆ ಮತ್ತು ಅದರಲ್ಲಿ ನಾಯಿಯನ್ನು ಬಳಸಿಕೊಂಡ ಕಾರ್ಯ ದ ಬಗ್ಗೆ ಸಿನಿಮಾದ ಮುಖ್ಯ ಪಾತ್ರಧಾರಿ ಚಾರ್ಲಿಯ ತರಬೇತುದಾರ ಪ್ರಮೋದ್ ಅನೇಕ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು. ಮೂಲತಃ ಎಂಜಿನಿ ಯರ್ ಆಗಿದ್ದ ಅವರು, ನಾಯಿಗಳ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದು ಹೇಗೆ? ನಾಯಿ ಮತ್ತು ಮನುಷ್ಯರ ಸಂಬಂಧ ಎಂತಹದ್ದು, ಚಾರ್ಲಿ ಸಿನಿಮಾದಲ್ಲಿ ನಟನೆ ಮಾಡಿಸಿದ್ದು ಹೇಗೆ? ಎಂಬ ಅಂಶಗಳು ಸೇರಿ ಅನೇಕ ವಿಷಯಗಳನ್ನು ಕೇಳುಗ ರೊಂದಿಗೆ ಹಂಚಿಕೊಂಡರು.
ಅನೇಕ ಸಂದರ್ಭಗಳಲ್ಲಿ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಅವರಿಗೆ ಕ್ಯಾರಾವನ್ ಇರಲಿಲ್ಲ. ಆದರೆ, ಚಾರ್ಲಿಗೆ ಕ್ಯಾರವಾನ್ ಇಲ್ಲದೆ ಇರುತ್ತಿರಲಿಲ್ಲ. ನಮ್ಮ ಅಸಿಸ್ಟೆಂಟ್ ಗಳೆಲ್ಲ ಅದನ್ನು ಎತ್ತಿಕೊಂಡು ಬರುತ್ತಿದ್ದರು. ಅದು ಸ್ವಲ್ಪವೂ ಸುಸ್ತಾಗಲು ಬಿಡುತ್ತಿರ ಲಿಲ್ಲ. ಅದಕ್ಕೆ ಒತ್ತಾಯ ಮಾಡದಿದ್ದರೆ ದಿನದ ಕೊನೆಗೆ ನಮಗೆ ಬೇಕಾಗಿದ್ದನ್ನು ಕೊಡು ತ್ತಿತ್ತು. ಕೊನೆಯ ಸೀನ್‌ನಲ್ಲಿದ್ದ 10 ಆಕ್ಟಿವಿಟಿಯನ್ನು ಒಂದೇ ಕಮಾಂಡ್‌ನಲ್ಲಿ ಮುಗಿಸಿದ್ದಳು. ಹೀಗೆ ನಮ್ಮ ತಂಡದ ಬೇಡಿಕೆಗೆ ತಕ್ಕಂತೆ ಆಕ್ಟಿಂಗ್ ಮಾಡಿದ ಖ್ಯಾತಿ ಚಾರ್ಲಿಯದ್ದು ಎಂದರು.
ಸಿನಿಮಾ ಒಪ್ಪಿಕೊಳ್ಳುವಾಗ ನಿರ್ದೇಶಕ ಕಿರಣ್ ರಾಜ್ ಅವರು ಸಿನಿಮಾದಲ್ಲಿ 150 ಟಾಸ್ಕ್ ಇದೆ ಎಂದಿದ್ದರು. ಎಂಟು ತಿಂಗಳು ಎನ್ನುವ ಕಾರಣಕ್ಕೆ ಒಪ್ಪಿಕೊಂಡಿದ್ದೆ. ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಬೇಕು ಎಂಬ ಕಂಡಿಷನ್ ಇತ್ತು. ಫೋಟೋ
ಶೂಟ್ ಆಗಿತ್ತು, ನಾವು ಅಂದುಕೊಂಡದ್ದಕ್ಕಿಂತ ಹತ್ತು ಪಟ್ಟು ಚೆನ್ನಾಗಿ ಬಂದಿದೆ. ಆದರೆ, ನಾವೇ ಸ್ವಲ್ಪ ಅಪ್ಡೇಟ್ ಆಗಬೇಕು ಎಂದಿದ್ದರು. ಹೀಗಾಗಿ, 150 ಇದ್ದ ಟಾಸ್ಕ್ 300 ದಾಟಿತ್ತು. ಅಲ್ಲಿಂದ ನಾಲ್ಕು ವರ್ಷಗಳ ಕಾಲ ನಮ್ಮ ಶೂಟಿಂಗ್ ನಡೆಯಿತು
ಎಂದು ತಮ್ಮ ಅನುಭವ ಹಂಚಿಕೊಂಡರು.
ಶೂಟಿಂಗ್ ತಯಾರಿ: ಸಿನಿಮಾದಲ್ಲಿ ಮೊದಲ ಶೇ.20ರಷ್ಟು ಭಾಗ ಸಣ್ಣ ಮರಿಗೆ ಮತ್ತುಳಿದ ಭಾಗದಲ್ಲಿ ದೊಡ್ಡ ನಾಯಿಗೆ ಟ್ರೈನಿಂಗ್ ಕೊಡಬೇಕಿತ್ತು. ಒಂದು ವಾರ ಮೊದಲೇ ಹೋಗಿ ಶೂಟಿಂಗ್‌ಗೆ ರೆಡಿಯಾಗುತ್ತಿದ್ದೆವು. ರಕ್ಷಿತ್ ಸರ್ ಜತೆ ಶೂಟ್ ಮಾಡು ವಾಗ ವಾರ ಮೊದಲೇ ಅವರ ಮನೆಗೆ ಹೋಗಿ ತರಬೇತಿ ಕೊಡುತ್ತಿದ್ದೆವು. ಇಡೀ ಸಿನಿಮಾದಲ್ಲಿ ಇದು ಟ್ರೈನಿಂಗ್ ಕೊಟ್ಟ ನಾಯಿ ಎನಿಸಿಕೊಳ್ಳಬಾರದು ಎಂದುಕೊಂಡು ಕೆಲಸ ಮಾಡಿದೆವು. ಈ ಸಿನಿಮಾ ಮನುಷ್ಯ ಮತ್ತು ನಾಯಿ ನಡುವಿನ ಸಂಬಂಧದ ಬಗ್ಗೆ ಬಂದಿರುವ ಅದ್ಭುತ ಸಿನಿಮಾವಾಗಲಿದೆ. ಈ ಚಾರ್ಲಿಗೆ ಎಲ್ಲವೂ ಅರ್ಥ ಆಗುತ್ತದೆ. ಆದರೆ, ಮಾತು ಮಾತ್ರ ಇಲ್ಲವಷ್ಟೆ ಎನ್ನಬ ಹುದು ಎಂಬುದು ಪ್ರಮೋದ್ ಅಭಿಪ್ರಾಯ.
ಚಾರ್ಲಿ ಸಿಕ್ಕಿದ ಕತೆ: ಟೈಟಲ್ ರಿಜಿಸ್ಟರ್ ಆದ ನಂತರ ಫೋಟೋ ಶೂಟ್‌ಗೆ ಒಂದು ನಾಯಿ ಬೇಕಿತ್ತು. ಸ್ನೇಹಿತರಿಗೆ ಅದನ್ನು ತಿಳಿಸಿದ್ದರು. ಒಂದು ಮನೆಯಲ್ಲಿ ನಾಯಿ ತುಂಬಾ ತರ್ಲೆ ಮಾಡುತ್ತಿತ್ತು ಎನ್ನುವ ಕಾರಣಕ್ಕೆ ಅದನ್ನು ಅಡಾಪ್ಟ್ ಮಾಡಲು ತೀರ್ಮಾನಿಸಿದ್ದರು. ಅದನ್ನು ನಿರ್ದೇಶಕರು ನೋಡಿದ ನಂತರ ಮೊದಲ ನೋಟದಲ್ಲೇ ಒಪ್ಪಿಗೆಯಾಗಿ ಕರೆದುಕೊಂಡು ಬಂದು ಎಂಟು ತಿಂಗಳು ತರಬೇತಿ ಕೊಟ್ಟಿದ್ದೇವೆ ಎಂದು ಪ್ರಮೋದ್ ಹೇಳಿದರು. ಇಡೀ ಚಿತ್ರತಂಡದ ಜತೆಗೆ ಹೊಂದಾಣಿಕೆಯಿಂದ ಇದ್ದ
ಚಾರ್ಲಿ ಈಗ ಎಲ್ಲರ ಫೇವರೇಟ್ ಆಗಿದೆ. ಕ್ಲಬ್‌ಹೌಸ್ ಕೇಳುಗರಿಗೂ ಕೂಡ ಕಾರ್ಯಕ್ರಮ ಆರಂಭ ಮತ್ತು ಮುಕ್ತಾಯದ ವೇಳೆ ಯಲ್ಲಿ ವಿಶ್ ಮಾಡುವುದನ್ನು ಚಾರ್ಲಿ ಮರೆಯಲೇ ಇಲ್ಲ .
ಬೀದಿ ನಾಯಿ ಸಾಕುವ ಪ್ರತಿಜ್ಞೆ ಮಾಡಿ
ಐಪಿಎಸ್ ಆಗಬೇಕು ಎಂಬ ಆಸೆಯನ್ನಿಟ್ಟುಕೊಂಡಿದ್ದ ಪ್ರಮೋದ್ ತಾವು ನಾಯಿಗಳಿಗೆ ತರಬೇತಿ ನೀಡುವ ಮೂಲಕ ಸೇನೆ ಮತ್ತು ರಕ್ಷಣಾ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು ಎಂದುಕೊಂಡಿದ್ದಾರೆ. ಈಗಾಗಲೇ ಮೈಸೂರು ಡಾಗ್ ಸ್ಕ್ವಾಡ್‌ಗೆ ಒಂದು ನಾಯಿ ಕೊಟ್ಟಿದ್ದೇನೆ. ನನ್ನ ಆಸೆಯನ್ನು ಅದರ ಮೂಲಕ ಈಡೇರಿಸುವ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರೂ ನಾಯಿಯನ್ನು ಕೊಳ್ಳುವುದಕ್ಕಿಂತ, ಬೀದಿ ನಾಯಿಗಳನ್ನು ತಂದು ಸಾಕುವ ಪ್ರಯತ್ನ ಮಾಡಿ. ಇಡೀ ಬೀದಿಯಲ್ಲಿ ಐದು ನಾಯಿ ಇದೆ ಎಂದರೆ ಆ ಬೀದಿಗೆ ಸೆಕ್ಯೂರಿಟಿಯೇ ಬೇಕಿಲ್ಲ. ನಮ್ಮ ದೇಶಿಯ ನಾಯಿಗಳಷ್ಟು ಬಲಶಾಲಿ, ಬುದ್ಧಿಶಾಲಿ ಮತ್ತು ನಿಯತ್ತಿನ ಪ್ರಾಣಿಗಳು ಮತ್ತೊಂದಿಲ್ಲ. ಹೀಗಾಗಿ, ಬೀದಿ ನಾಯಿಗಳನ್ನು ಸಾಕುವ ಅಥವಾ ಕನಿಷ್ಠ ಅವುಗಳಿಗೆ ಆಹಾರ ನೀಡುವ ಮನಸ್ಸನ್ನು
ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಶ್ವಾನಪ್ರಿಯರಿಗೆ ಸಲಹೆಗಳು
ಬೀದಿ ನಾಯಿಗಳನ್ನು ಅಡಾಪ್ಟ್ ಮಾಡಿಕೊಳ್ಳಿ, ಅವು ಬ್ರಿಲಿಯಂಟ್
ನಾಯಿಯಂತೆ ಟ್ರೀಟ್ ಮಾಡಬೇಡಿ, ನಿಮ್ಮ ಮಗುವಿನಂತೆ ಕಾಣಿ
ನಾಯಿಗಳಿಗೆ ಕಾಟ ಕೊಟ್ಟರೆ ದಾಖಲೆ ಸಹಿತ ದೂರು ಕೊಡಿ.
ಫಾರಿನ್ ನಾಯಿಗಿಂತ, ಬೀದಿನಾಯಿಗಳಿಗೆ ಬದುಕು ಕೊಡಿ
ನಾಯಿಗಳೊಂದಿಗೆ ಬೆರೆತು, ಅವುಗಳ ಭಾಷೆ ಅರಿಯಿರಿ,
ಕಟ್ಟಿ ಹಾಕುವುದು, ಕೂಡಿ ಹಾಕುವುದು ಒಳ್ಳೆಯದಲ್ಲ.
***
ನಾಯಿಯಿಂದ ಇಷ್ಟೊಂದು ಎಮೋಷನ್‌ಗಳನ್ನು ತೆಗೆಯಬಹುದು ಎಂಬುದು ನನಗೆ ಎಂಟು ವರ್ಷದ ಅನುಭವದಲ್ಲಿ ಗೊತ್ತೇ ಇರಲಿಲ್ಲ. ಆದರೆ, ನಮ್ಮ ನಿರ್ದೇಶಕರು ಅದನ್ನೆಲ್ಲ ತೆಗೆಸುತ್ತಿದ್ದರು. ಅವರ ಮೊದಲ ಸಿನಿಮಾ ಇದು ಎಂದು ಹೇಳಲು ಸಾಧ್ಯವೇ ಇಲ್ಲ.
– ಪ್ರಮೋದ್ ಚಾರ್ಲಿ ಶ್ವಾನ ತರಬೇತುದಾರ