Sunday, 11th May 2025

ಜೇನುನೊಣಗಳು ನಾಶವಾದರೆ ಮನುಷ್ಯನ ಸಂತತಿಗೆ ಕುತ್ತು

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವನ್ಯಜೀವಿ ಛಾಯಾಗ್ರಾಹಕ ಶಶಿಧರಸ್ವಾಮಿ ಹಿರೇಮಠ ಅವರಿಂದ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು: ಜೇನು ನೊಣ ಎಂದರೆ ಎಲ್ಲರಿಗೂ ನೆನಪಾಗುವುದು ಸಿಹಿಯಾದ ಜೇನು. ಆದರೆ, ಆ ಜೇನುಹುಳುಗಳು ಪರಾಗ ಸ್ಪರ್ಶದ ಮೂಲಕ ಸಸ್ಯ ಸಂಕುಲವನ್ನೇ ಅಭಿವೃದ್ಧಿ ಮಾಡುತ್ತದೆ.

ಭೂಮಿ ಉಗಮವಾದಾಗಿ ನಿಂದ ಈ ಜೇನುನೊಣಗಳ ಅಸ್ತಿತ್ವವಿದೆ. ಹೂವಿನಿಂದ ಹೂವಿಗೆ ಹಾರಿ ಮಧು ಶೇಕರಣೆ ಮಾಡಿ ಕಷ್ಟಪಡುವ ಜೀವಗಳಲ್ಲಿ ಇದು ಒಂದಾಗಿದೆ. ಜೇನುನೊಣಗಳು ಇಲ್ಲದೇ ಇದ್ದರೆ ಪರಿಸರ ಮಾತ್ರವಲ್ಲ, ಮನುಷ್ಯ ಸಂತತಿಗೇ ಕುತ್ತು ಬರುವ ಸಾಧ್ಯತೆಗಲಿವೆ ಎಂದು ವನ್ಯಜೀವಿ ಛಾಯಾಗ್ರಾಹಕ ಶಶಿಧರ ಸ್ವಾಮಿ ಹಿರೇಮಠ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಜೇನು ನೊಣ ಮನುಷ್ಯನ ಅನ್ನದಾತ’ ಕಾರ್ಯಕ್ರಮದಲ್ಲಿ ಅವರು ಅರಿವಿನ ಉಪನ್ಯಾಸ ನೀಡಿದರು. ಜೇನುನೊಣ ಗಳಿಗೂ ಒಂದು ದಿನವಿದೆ. ಆಧುನಿಕ ಜೇನು ಸಾಕಾಣಿಕೆಯ ಪ್ರವರ್ತಕ ಎನಿಸಿಕೊಂಡಿರುವ ಸೊವೇನಿಯಾದ ಅಂಟಿನ್ ಜಾಂಸಾ ಅವರ ಜನ್ಮದಿನವಾದ ಮೇ ೨೦ನ್ನು ವಿಶ್ವ ಜೇನುನೊಣಗಳ ದಿನವಾಗಿ ಆಚರಣೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಆದರೆ, ಜನರಿಗೆ ಜೇನುನೊಣಗಳ ಮಹತ್ವದ ಕುರಿತು ಇನ್ನೂ ಅರಿವು ಮೂಡಿಲ್ಲ. ಇವುಗಳ ಸೇವೆ ಹೆಚ್ಚು ಪ್ರಚಲಿತಗೊಂಡಿಲ್ಲ. ಜೇನು  ನೊಣಗಳಿಗೆ ಹೆಚ್ಚು ಒತ್ತು ನೀಡಿ ಅದರಿಂದ ಇತರೇ ಪರಾಗಸ್ಪರ್ಶ ಪ್ರಕ್ರಿಯೆ ರಕ್ಷಿಸಲು ಜೇನ ನೊಣ ದಿನ ಆಚರಿಸಲಾಗುತ್ತದೆ ಎಂದರು.

ಪರಾಗಸ್ಪರ್ಶ ಇಲ್ಲದೆ ಯಾವುದೇ ಸಸ್ಯ ತನ್ನ ಸಂತತಿ ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಪರಿಸರದಲ್ಲಿ ಪರಾಗಸ್ಪರ್ಶ ಪ್ರಕ್ರಿಯೆಯ ಪಾತ್ರ ದೊಡ್ಡದಿದೆ. ಈ ಪ್ರಕ್ರಿಯೆ ನಡೆಯುವುದೇ ಜೇನು ನೊಣಗಳಿಂದ. ವೇದಗಳ ಕಾಲದಿಂದಲೂ ಜೇನು ನೋಣಗಳ ಬಗ್ಗೆ ಅರಿವಿತ್ತು ಎಂಬುದು ಅಥರ್ವ ವೇದದ ಮುಧುಸೂಕ್ತದಲ್ಲಿ ಕಾಣಿಸುತ್ತದೆ. ಕಾಲಕ್ರಮೇಣ ನಾಗರಿಕತೆ ಬೆಳೆದಂತೆ, ವಿಜ್ಞಾನ ಬೆಳೆದು ಜೇನುನೊಣಗಳ ಪಾಲನೆ, ಅಧ್ಯಯನ, ಆವಿಷ್ಕಾರಗಳು ನಡೆದವು. ಕೀಟ ವಿಜ್ಞಾನಿಗಳ ಪ್ರಕಾರ, ಜೇನು ಬೇರೆ ದುಂಬಿಗಳೇ ಬೇರೆ. ಜೇನುನೊಣಹಳನ್ನು ಇರುವೆ, ಗೊದ್ಧ, ಕಣಜಮುಂತಾದ ಕೀಟ ವರ್ಗಕ್ಕೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜೇನುನೊಣಗಳದ್ದು ಅವಿಭಕ್ತ ಕುಟುಂಬ. ಇದರಲ್ಲಿ ರಾಣಿ ಜೇನು ಮುಖ್ಯವಾಗಿರುತ್ತದೆ. ಒಂದು ಗುಂಪಿನಲ್ಲಿ (ಜೇನಗೂಡು) ೨೦,೦೦೦ದಿಂದ ೭೫೦೦೦
ಜೇನುನೊಣಗಳಿರುತ್ತವೆ. ಕೇವಲ ಮೊಟ್ಟೆ ಇಡುವುದು ರಾಣಿ ಜೇನಿನ ಕೆಲಸ. ಇಡೀ ಗೂಡನ್ನು ನಿಯಂತ್ರಣ ಮಾಡುತ್ತದೆ. ಕೆಲಸಗಾರ ಜೇನುನೋಣಗಳ ನಿಯಂತ್ರಣ ಇದಕ್ಕೆ ಇರುತ್ತದೆ. ರಾಣಿ ಜೇನನ್ನು ಗೂಡಿನಿಂದ ಹೊರ ತಗೆದರೆ ಗೂಡಿನ ನಿಯಂತ್ರಣ ತಪ್ಪಿ, ಗೂಡೆ ನಾಶವಾಗುವ ಸಾಧ್ಯತೆ ಇರುತ್ತದೆ. ರಾಣಿ ಜೇನು ೫ ವರ್ಷ ಬದುಕುತ್ತದೆ.

ಅದು ಮರಣ ಸ್ಥಿತಿಗೆ ಬಂದಾಗ ಗೂಡಿನಲ್ಲಿರುವ ಕೆಲಸಗಾರ ಜೇನುನೊಣ ವಿಶೇಷ ಪೋಶಕಾಂಶ ‘ರಾಯಲ್ ಜೆಲ್ಲಿ’ ಪಡೆದು ರಾಣಿ ಜೇನಿನ ಸ್ಥಾನಕ್ಕೆ
ಬರುತ್ತದೆ ಎಂದು ತಿಳಿಸಿದರು.

ಹೂವಿನ ಮಧು ಹೀರಿ ತರುವುದು, ಗೂಡು ಕಟ್ಟುವುದು, ಗೂಡಲ್ಲಿ ಮೊಟ್ಟೆಗಳ ಸಂರಕ್ಷಣೆ ಮಾಡುವುದು ಕೆಲಸಗಾರ ಜೇನುನೊಣಗಳ ಕೆಲಸ. ರಾಣಿ
ಜೇನು ಒಂದು ದಿನದಲ್ಲಿ ೨೦೦೦ದಿಂದ ೩೦೦೦ ಮೊಟ್ಟೆ ಇಡುತ್ತದೆ. ಒಂದು ಋತುವಿಲ್ಲಿ ೧.೫೦ ಲಕ್ಷ ಮೊಟ್ಟೆ ಇಡುತ್ತದೆ. ಹೀಗೆ ಒಟ್ಟಾರೆ ತನ್ನ ಜೀವಿತಾ ವಧಿಯಲ್ಲಿ ರಾಣಿ ಜೇನು ಸುಮಾರು ೧೦ ಲಕ್ಷ ಮೊಟ್ಟೆ ಇಡುತ್ತದೆ.

ಗಂಡು ಜೇನುನೊಣಗಳಿಗೆ ವಂಶಾಭಿವೃದ್ಧಿ ಮಾಡುವುದೇ ಕೆಲಸ. ರಾಣಿ ಜೇನು ಗೂಡಿನಿಂದ ಹೊರಗೆ ಹರಿದಾಗ ಹಿಂದೆಯೇ ಸುಮಾರು ೧೦೦-೨೦೦
ಗಂಡು ಜೇನುನೊಣಗಳು ಹಾರುತ್ತವೆ. ಜಗಳದಲ್ಲಿ ಗೆದ್ದ ಗಂಡು, ರಾಣಿ ಜೇನಿನೊಂದಿಗೆ ಮಿಲನ ಹೊಂದುತ್ತದೆ ಎಂದು ತಿಳಿಸಿದರು.

ಸಸ್ಯಗಳ ಪರಾಗಸ್ಪರ್ಶದಲ್ಲಿ ಜೇನುನೊಣ ಮುಖ್ಯ ಪಾತ್ರ ವಹಿಸುತ್ತದೆ. ಜೇನು ನೊಣದ ಜತೆ ಚಿಟ್ಟೆ, ಪತಂಗ, ಜೇಂಕಾರ ಪತಂಗಗಳು, ದುಂಬಿ ಸೇರಿದಂತೆ
ಹಲವು ಪ್ರಕಾರಗಳು ಸಸ್ಯಗಳ ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತದೆ. ಆದರೆ, ಮನುಷ್ಯರು ಪರಾಗಸ್ಪರ್ಶಕಗಳ ಮೇಲೆ ದಬ್ಬಾಳಿಕೆ ಮಡುತ್ತಿದ್ದೇವೆ.
ಇದರ ಮೇಲೆ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಆಹಾರಕ್ಕೆ ನಾವೇ ಕುತ್ತು ತಂದು ಕೊಳ್ಳುತ್ತಿದ್ದೇವೆ. ಸಸ್ಯಗಳಲ್ಲಿ ಪರಾಗಸ್ಪರ್ಶವಾಗದ ಆಹಾರದಲ್ಲಿ ಪೌಷ್ಟಿಕತೆ – ಪೋಷಕಾಂಶ ಕೊರತೆ ಆಗುತ್ತಿದೆ. ಜೇನುನೊಣಗಳ ನೆಪದಲ್ಲಾದರೂ ಇತರೆ ಪರಾಗಸ್ಪರ್ಶಕಗಳನ್ನು ರಕ್ಷಣೆ ಮಾಡಬೇಕಿದೆ ಎಂದರು.

ಬಾದಾಮಿ ಬೆಳೆಗೆ ಜೇನುನೊಣ ಅಗತ್ಯ
ಅಂಕಣಕಾರರಾದ ಶಿಶಿರ್ ಹೆಗಡೆ ಮಾತನಾಡಿ, ೭-೮ವರ್ಷದ ಹಿಂದೆ ಕೆಲವು ಸ್ನೇಹಿತರು ನೆವಾಡದಿಂದ ಕ್ಯಾಲಿಫೋರ್ನಿಯಾಗೆ ಹೊರಟಿದ್ದೆವು. ಅಲ್ಲಿ ನೆವಾಡ ಲಾಸ್‌ವೆಗಾಸ್ ಎಂಬ ಮರುಭೂಮಿ ಇದೆ. ಅಲ್ಲಿನ ಡೆತ್ ವ್ಯಾಲಿಯಲ್ಲಿ ತಾಪಮಾನ ೫೦-೫೫ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅಲ್ಲಿ ೨೦-೩೦ ಟ್ರಕ್‌ ಗಳು ಕಾಣಿಸಿಕೊಂಡವು. ವಿಚಾರಿಸಿದಾಗ ಒಂದು ಟ್ರಕ್‌ನಲ್ಲಿ ಸುಮಾರು ೪೦೦-೫೦೦ ಜೇನುಗೂಡುಗಳಿದ್ದವು. ಒಟ್ಟಾರೆ ೨.೫೦ ಕೋಟಿ ಜೇನುನೊಣ ಗಳನ್ನು ಒಂದು ಟ್ರಕ್‌ನಲ್ಲಿ ಸಗಾಣೆ ಮಾಡಲಾಗುತ್ತಿತ್ತು. ಕ್ಯಾಲಿಫೋರ್ನಿಯದಲ್ಲಿ ಬಾದಾಮಿ ಬೆಳೆಯುವ ಜಾಗ ಹೆಚ್ಚು. ಬಾದಾಮಿ ಬೆಳೆಯಲು ನೀರು, ಮಣ್ಣಿನ ಜತೆಗೆ ಜೇನುನೊಣ ಬೇಕಾಗುತ್ತದೆ. ಅಲ್ಲಿ ಜೇನುನೊಣಗಳೇ ಇಲ್ಲದ ಕಾರಣ, ಪರಾಗಸ್ಪರ್ಷಕ್ಕಾಗಿ ಈ ಜೇನುನೊಣಗಳನ್ನು ಸಾಗಾಣೆ ಮಾಡ ಲಾಗುತ್ತಿತ್ತು ಎಂಬುದು ಗೊತ್ತಾಯಿತು ಎಂದು ತಮ್ಮ ಅನುಭವ ಹೇಳಿಕೊಂಡರು.

***

? ಜೇನುನೊಣಗಳು ತೀರಾ ಸೂಕ್ಷ್ಮ ಜೀವಿಗಳು.
ಸಾವಿಗೆ ಕಾರಣ ತಿಳಿಯುವಷ್ಟರಲ್ಲೇ ಸಾವನ್ನಪ್ಪಿರುತ್ತವೆ.
? ಕೆಲಸಗಾರ ಜೇನು ನೊಣ ಕೇವಲ ೧೨೦ರಿಂದ ೧೫೦ದಿನ ಬದುಕುತ್ತದೆ.
? ಅಪಾಯ ಎದುರಾದಾಗ ಜೇನುನೊಣಗಳು ತ್ರಿಕೋನಾಕಾರದಲ್ಲಿ ಹಾರಿ ಇತರೆ ಜೇನುನೊಣಗಳಿಗೆ ಸೂಚನೆ ನೀಡುತ್ತವೆ

?ಕೃಷಿಗೆ ಜೇನುನೊಣ ಅತ್ಯವಶ್ಯಕ
?ಇದರ ಪರಾಗಸ್ಪರ್ಶದಿಂದ ಬೆಳೆಯಲ್ಲಿ ೧೦೦ಕ್ಕೆ ಶೇ. ೯೦ ಇಳುವರಿ ಬರುತ್ತದೆ.
?ಜೇನುನೊಣ ನಾಶವಾದರೆ ಮನುಷ್ಯನ ಸಂತತಿ ನಾಶವಾಗುವುದು ಖಂಡಿತ.
?ಬಾದಾಮಿ ಇಳುವರಿಗೆ ಜೇನುನೊಣಗಳ ಪರಾಗಸ್ಪರ್ಶ ಮುಖ್ಯವಾಗುತ್ತದೆ.

? ಕೆಲಸಗಾರ ಜೇನುನೊಣಗಳು ಸೆಕೆಂಡ್‌ಗೆ ೨೦೦ಬಾರಿ ರೆಕ್ಕೆ ಬಡಿಯುತ್ತವೆ.
? ಕೆಲಸಗಾರ ಜೇನುನೊಣಗಳು ಮಧು ಶೇಖರಣೆ ಮಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
? ಕೆಲಸಗಾರ ಹೆಣ್ಣು ಜೇನುನೊಣಗಳಿಗೆ ವಂಶಾಭಿವೃದ್ಧಿ ಮಾಡುವ ಶಕ್ತಿ ಇರುವುದಿಲ್ಲ.

?ಪ್ರಪಂಚದಾದ್ಯಂತ ಜೇನುನೊಣಗಳ ಗಣದಲ್ಲಿ ಸುಮಾರು ೯೦ ಕುಟುಂಬಗಳ ೧.೫೦ ಲಕ್ಷ ಹೆಮೆನೋಸ್ಪೆರಗಳಿವೆ. ಭಾರತದಲ್ಲಿ ೫೭ ಕುಟುಂಬಗಳ ೮ ಪ್ರಬೇದಗಳು ದಾಖಲಾಗಿದೆ. ಇದರಲ್ಲಿ ೧೬,೦೦೦ಕ್ಕೂ ಹೆಚ್ಚು ಜೇನು ನೊಣಗಳನ್ನು ಗುರುತಿಸಲಾಗಿದೆ.

**

?೫ ವಿವಿಧ ಜೇನುನೊಣ ಕಾಣುತ್ತೇವೆ. ಆದರೆ ಅದರಲ್ಲಿ ಸಾಕಣಿಕೆ ಮಾಡುವುದು ೨-೩ ಪ್ರಭೇದಗಳನ್ನು ಮಾತ್ರ. ತುಡುಮೆ ಜೇನು, ಯುರೋಪಿಯನ್ ಜೇನು, ಕೋಲ್ಜೇನು, ಮಿಸ್ರಿ ಜೇನು ಮತ್ತು ಹೆಜ್ಜೇನುಗಳನ್ನು ಪೆಟ್ಟಿಗೆಯಲ್ಲಿ ಸಾಕಲಾಗುತ್ತದೆ.

?ಹೂವಿನಲ್ಲಿ ಅಡಗಿರುವ ಜೇಡಗಳು (ಕ್ಯ್ರಾಬ್ ಸ್ಪೈಡರ್, ಚಿಟ್ಟೆ, ಇರುವೆ, ಭೀಮರಾಜ ಪಕ್ಷಿ, ಕಳ್ಳಿಪೀರ ಮತ್ತು ಕರಡಿಗೆ) ಇವುಗಳಿಂದಲೂ
ಜೇನುನೊಣಗಳಿಗೆ ಕಾಟ ಇರುತ್ತದೆ.