Wednesday, 14th May 2025

ಜೋಧ್ ಪುರದಲ್ಲಿ ಕೋಮು ಸಂಘರ್ಷ: ಬಂಧಿತರ ಸಂಖ್ಯೆ 211

ಜೈಪುರ: ಈದ್ ಗೂ ಮುನ್ನ ಜೋಧ್ ಪುರದಲ್ಲಿ ನಡೆದ ಕೋಮು ಸಂಘರ್ಷಕ್ಕೆ ಸಂಬಂಧಿಸಿ ಇಲ್ಲಿಯ ವರೆಗೂ 211 ಜನರನ್ನು ಬಂಧಿಸಲಾಗಿದೆ.

ಗುರುವಾರ ಕೂಡ ಹಿಂಸಾಚಾರ ಮುಂದುವರೆದಿದ್ದರಿಂದ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಾರಾದರೂ ಸುಳ್ಳು ವದಂತಿ ಹರಡುವವರ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಶಾಂತಿ ಮತ್ತು ಸೌಹಾರ್ದತೆ ಕೆಡಿಸಿದ್ದಕ್ಕಾಗಿ ಇಲ್ಲಿಯವರೆಗೂ 211 ಜನರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಎಂಎಲ್ ಲಾಥರ್ ತಿಳಿಸಿದ್ದಾರೆ.

ಪೊಲೀಸರು ನಾಲ್ಕು ಎಫ್ ಐಆರ್ ದಾಖಲಿಸಿದ್ದು, ಜನರ ದೂರುಗಳ ಆಧಾರದ ಮೇಲೆ 15 ಎಫ್ ಐಆರ್ ದಾಖಲಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೇಳಿದ್ದಾರೆ.

ಈದ್ ಉಲ್ ಫಿತ್ರಾ ಮುನ್ನಾ ಸೋಮವಾರ ಮತ್ತು ಮಂಗಳವಾರ ರಾತ್ರಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸ್ವಕ್ಷೇತ್ರ ಜೋಧ್ ಪುರದಲ್ಲಿ ಕೋಮು ಸಂಘರ್ಷ ಭುಗಿಲೆದ್ದಿತ್ತು. ಅಂಗಡಿಗಳು, ವಾಹನಗಳು ಮತ್ತು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ನಗರದ 10 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.