Monday, 12th May 2025

ಮಾಜಿ ಶಾಸಕರಿಗೆ ಇನ್ನು ಒಂದು ಅವಧಿಗೆ ಮಾತ್ರ ಪಿಂಚಣಿ: ಪಂಜಾಬ್ ಸಿಎಂ

ಚಂಡೀಗಢ: ಪಂಜಾಬ್’ನ ಮಾಜಿ ಶಾಸಕರು ಸೇವೆ ಸಲ್ಲಿಸಿದ ಪ್ರತಿ ಅವಧಿಗೆ ಪಿಂಚಣಿ ನೀಡದೆ ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ಹೇಳಿದ್ದಾರೆ.

“ಪಂಜಾಬ್‌ನ ಮಾಜಿ ಶಾಸಕರು, ಐದು ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಇನ್ನುಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುತ್ತಾರೆ” ಎಂದು ಮಾನ್ ತಿಳಿಸಿದ್ದಾರೆ.

ಇದರಿಂದ ಉಳಿತಾಯವಾಗುವ ಹಣವನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸ ಲಾಗುವುದು. ನಮ್ಮ ರಾಜಕೀಯ ನಾಯಕರು, ಶಾಸಕರು ಸೇರಿದಂತೆ, ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ನೀಡಿ ಎಂದು ಕೈ ಜೋಡಿಸಿ ಹೇಳುವ ಮೂಲಕ ನಿಮ್ಮಿಂದ ಮತ ಪಡೆದು ಗೆಲ್ಲುತ್ತಾರೆ. ಆದರೆ ಗೆದ್ದ ಹಲವಾರು ಶಾಸಕರು ಚುನಾವಣೆಯಲ್ಲಿ ಸೋತ ನಂತರ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡುತ್ತಿದೆ ಎಂದು ಮಾನ್ ಹೇಳಿದ್ದಾರೆ.

ಚುನಾವಣೆಯಲ್ಲಿ ಸೋತರೂ ಕೆಲವರು 3.50 ಲಕ್ಷ, ಇನ್ನು ಕೆಲವರು 4.50 ಲಕ್ಷ ರೂಪಾಯಿ ಪಿಂಚಣಿಯಾಗಿ ಪಡೆಯುತ್ತಾರೆ. ಇದು ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಆರ್ಥಿಕ ಹೊರೆಯಾಗುತ್ತಿದೆ ಎಂದು ಮಾನ್ ಹೇಳಿದ್ದಾರೆ.

ಬಹುತೇಕ ಎಲ್ಲ ರಾಜ್ಯಗಳಲ್ಲೂ ಈ ಸಂಪ್ರದಾಯ ಜಾರಿಯಲ್ಲಿದೆ. ಆದರೆ, ಪಂಜಾಬ್​ನಲ್ಲಿ ಸರ್ಕಾರ ಈ ಯೋಜನೆಗೆ ಕಡಿವಾಣ​ ಹಾಕಲು ಮುಂದಾಗಿದೆ. ಇನ್ಮುಂದೆ, ಶಾಸಕರು ಒಂದೇ ಅವಧಿಗೆ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.